ಹಾಡ್ಲಳ್ಳಿ ನಾಗರಾಜು- ಚಲಂ ಎಂಬ  ತಂದೆ ಮಕ್ಕಳ ಅನುಬಂಧ

ಗೊರೂರು ಶಿವೇಶ್

ವೃತ್ತಿ ಮತ್ತು ಪ್ರವೃತ್ತಿ ಒಂದೇ ಆದ ಹಾಗೂ ತಂದೆಯ ವೃತ್ತಿಯ ಜೊತೆಗೆ ಪ್ರವೃತ್ತಿಯನ್ನು ಮಕ್ಕಳು ಅನುಸರಿಸಿರದ ಸಾಕಷ್ಟು ಉದಾಹರಣೆಗಳು ಉಂಟು. ವೈದ್ಯರು, ವಕೀಲರು ,ಆಡಿಟರ್, ಇಂಜಿನಿಯರ್ಗಳು, ವ್ಯಾಪಾರ, ಕಾಂಟ್ರಾಕ್ಟರ್ಸ್, ಟೆನ್ನಿಸ್, ಬ್ಯಾಡ್ಮಿಂಟನ್, ಕ್ರಿಕೆಟರ್ಸ್, ಸ್ಪೋರ್ಟ್ಸ್ ಪರ್ಸನಾಲಿಟಿಸ್, ಡ್ರಾಮಾ, ಚಲನಚಿತ್ರ , ಚಿತ್ರ ಕಲಾವಿದರು… ಮುಂದುವರೆಸುತ್ತಾ ಹೋಗಬಹುದು . ಆದರೆ ಇದು ಸಾಹಿತ್ಯ ಕ್ಷೇತ್ರಕ್ಕೆ ಭಿನ್ನ.

ಇಡೀ ಕನ್ನಡ ಸಾಹಿತ್ಯ ಕ್ಷೇತ್ರವನ್ನು ತಡಕಾಡಿದರೆ ಇಂಥ ಏಳೆಂಟು ಉದಾರಣೆಗಳು ಸಿಗಬಹುದು. ಕುವೆಂಪು- ತೇಜಸ್ವಿ, ಡಿವಿಜಿ_ ಬಿ ಜಿ ಎಲ್ ಸ್ವಾಮಿ ,ಗೌರೀಶ ಕಾಯ್ಕಿಣಿ _ಜಯಂತ ಕಾಯ್ಕಿಣಿ, ದ ರಾ ಬೇಂದ್ರೆ- ವಾಮನ ಬೇಂದ್ರೆ ಈಗ ತಕ್ಷಣಕ್ಕೆ ನೆನಪಿಗೆ ಬರುತ್ತಿರುವ ಕೆಲವು ಹೆಸರುಗಳು.

ಇನ್ನು  ತಂದೆ ಮಕ್ಕಳು ಜೊತೆಯಲ್ಲೇ ಇದ್ದರಾ ಎಂದರೆ ದ.ರಾ ಬೇಂದ್ರೆ -ವಾಮನ ಬೇಂದ್ರೆ ಹೊರತುಪಡಿಸಿ ತೇಜಸ್ವಿಯವರ ವಿಷಯಕ್ಕೆ ಬಂದರೆ ಕುವೆಂಪು ಮೈಸೂರಿನಲ್ಲಿ ಉಳಿದರೆ ತೇಜಸ್ವಿ ಮೂಡಿಗೆರೆಯಲ್ಲಿ,  ಡಿವಿಜಿ ಬೆಂಗಳೂರಿನಲ್ಲಿದ್ದರೆ ಬಿಜಿಎಲ್ ಸ್ವಾಮಿ ಈಗಿನ ಚೆನ್ನೈ ಆಗಿನ ಮದ್ರಾಸ್ನಲ್ಲಿ ಗೌರೀಶ ಕಾಯ್ಕಿಣಿ ಗೋಕರ್ಣದಲ್ಲಿದ್ದರೆ ಜಯಂತ್ ಕಾಯ್ಕಿಣಿ ಮುಂಬೈನಲ್ಲಿ. ಬಿಜಿ ಎಲ್ ಸ್ವಾಮಿ ಬರೆಯಲು ಹೊರಟಾಗ ಸಾಹಿತ್ಯ ಕ್ಷೇತ್ರದಲ್ಲಿ ನಾನೊಬ್ಬನಿದ್ದೀನಲ್ಲ ಸಾಕು ಎಂದಿದ್ದಾರಂತೆ ಡಿವಿಜಿ. ಸಾಹಿತ್ಯ ಕ್ಷೇತ್ರಕ್ಕೆ ಬರುವವರನ್ನು ಕೂಡ ನೀರೆರೆದು ಪೋಷಿಸುವ  ಪೋಷಕರ ಸಂಖ್ಯೆ ತೀರ ಕಡಿಮೆ. ಕಾರಣಗಳನ್ನು ಹುಡುಕುತ್ತಾ ಹೊರಟರೆ ಸಿಗುವ ಒಂದು ಕಾರಣ ಎಂದರೆ ಆಧುನಿಕ ಜಗತ್ತಿನಲ್ಲಿ , ಸಾಹಿತ್ಯ ಕುರಿತಾಗಿ  ಮಮತೆ,  ಅಭಿಮಾನ ಹೊಂದಿದವರ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. 

ಹೈಸ್ಕೂಲ್ನಲ್ಲಿ ಪಟ ಪಟ ಕವಿ ಕಾವ್ಯ ಪರಿಚಯ ಒಪ್ಪಿಸುವ ಮಕ್ಕಳು ಆ ಲೇಖಕರನ್ನು  ಮತ್ತು ಅವರ ಕಥೆಗಳು ಕವಿತೆಗಳು ಪ್ರಬಂಧಗಳನ್ನು ಡಿಗ್ರಿ ಗೆ ಹೋಗುವಷ್ಟರಲ್ಲಿ ಮರೆತು ಹೋಗಿರುತ್ತಾರೆ. ದಾರಿಯಲಿ ಯುವಕ- ಯುವತಿಯನ್ನು ತಟ್ಟನೆ ಹಿಡಿದು ನಿಲ್ಲಿಸಿ, ಪರಿಚಯದ ಕೆಲವು ಲೇಖಕರ ಹೆಸರನ್ನು ಹೇಳಿ ಎಂದರೆ ಕುವೆಂಪು ದ.ರಾ.ಬೇಂದ್ರೆ… ಮುಂದಕ್ಕೆ ತಡವರಿಸುತ್ತಾರೆ. ತೀರಾ ಕಷ್ಟ ಪಟ್ಟರೆ ಜ್ಞಾನಪೀಠ ವಿಜೇತರ ಹೆಸರುಗಳನ್ನು ಅಷ್ಟೇ ಹೇಳಬಹುದು .ಇಂಥದ್ದರ ನಡುವೆಯೂ ಸಾಹಿತ್ಯ ಕಲೆ ನಾಟಕ ಇವುಗಳನ್ನು ಆಸ್ವಾದಿಸುವ ಒಂದು ಸಣ್ಣ ಗುಂಪು ಎಲ್ಲಾ ನಗರಗಳಲ್ಲಿ ಇರುತ್ತದೆ. 

ಹಾಸನ ಜಿಲ್ಲೆಗೆ ಬಂದರೆ ಜಹೋನಾ- ಜ ನಾ ತೇಜ ಶ್ರೀ ತಟ್ಟನೆ ನೆನಪಿಗೆ ಬರುವ ಹೆಸರು .ಪ್ರಬಂಧಗಾರ್ತಿ ಪ್ರಭಾಮಣಿ ನಾಗರಾಜರವರ ಮಗಳು ಸುಷ್ಮಾ ಸಿಂಧು ಮನೋವೈಜ್ಞಾನಿಕ ಹಿನ್ನೆಲೆಯ ಸಾಕಷ್ಟು ಲೇಖನ ಪ್ರಬಂಧಗಳನ್ನು ಬರೆದಿದ್ದಾರೆ .  ಈ ನಿಟ್ಟಿನಲ್ಲಿ   ಎದ್ದು ಕಾಣುವ ಹೆಸರುಗಳೆಂದರೆ ಅದು  ಹಾಡ್ಳಹಳ್ಳಿ ನಾಗರಾಜ್ ಮತ್ತು ಚಲಂ ರವರದು.

 ನಾಗರಾಜ್ ಉದ್ಯೋಗಾರ್ತಿಯಾಗಿ ಹಾಸನ ಮತ್ತು ಮಡಿಕೇರಿಯಲ್ಲಿ ಬಹಳಷ್ಟು ವರ್ಷಗಳನ್ನು ಕಳೆದವರು. ಅವರು ಸಾಹಿತ್ಯಕವಾಗಿ 80ರ ದಶಕದಿಂದಲೂ ಸಾಕಷ್ಟು ಕಾದಂಬರಿಗಳನ್ನು ,ಕಥೆಗಳನ್ನು ಬರೆದಿದ್ದಾರೆ. ಸಕಲೇಶಪುರ ಹಾಗೂ ಮಡಿಕೇರಿಯ ಅವರ  ದಟ್ಟ ರಸವತ್ತಾದ ಅನುಭವಗಳ ಅನೇಕ ಕಥೆಗಳನ್ನು ಓದಿದಾಗ ನನಗೆ ಒಮ್ಮೆ ಮಡಿಕೇರಿಯ ಮತ್ತೊಬ್ಬ ಕಥೆಗಾರ ಕಾದಂಬರಿಕಾರ ಭಾರತೀಯ ಸುತರ ರನ್ನು ನೆನಪಿಸಿದರೆ  ಮಲೆನಾಡಿನ ಪರಿಸರದ ಹಿನ್ನೆಲೆಯ ಕಥೆಗಳು ಪೂರ್ಣಚಂದ್ರ ತೇಜಸ್ವಿ ಅವರನ್ನು ನೆನಪಿಸುತ್ತದೆ.  ಒಂದು ಆಂಗಲ್ ನಲ್ಲಿ ತೇಜಸ್ವಿಯವರಂತೆ ಕಾಣಿಸುವ ಹಾಡ್ಲಳ್ಳಿ ನಾಗರಾಜ್  ತೇಜಸ್ವಿ ಅವರಂತೆ ಮಾತು ಕಡಿಮೆ. ಅವರ ಜೊತೆ ಮಾತನಾಡಿದರೂ ಕೂಡಾ ಅವರಲ್ಲಿ ಇಂಥ ಒಬ್ಬ ಅದ್ಭುತ ಲೇಖಕನಿದ್ದಾನೆ ಎಂಬುದು ನಿಮ್ಮ ಅರಿವಿಗೆ ಬರುವುದು ಕಷ್ಟ. 

ದಾಟು- ಹಲಗೆ  ಅವಧಿಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ  ಜನ ಮೆಚ್ಚುಗೆಗಳಿಸಿದ ಕೃತಿ .  ತಾವು ಓದಿದ ಸಿದ್ದಗಂಗಾಶ್ರಮದ ಹಾಗೂ ತುಮಕೂರಿನ ತಮ್ಮ ಓದಿನ ದಿನಗಳನ್ನು ಅದರಲ್ಲಿ  ಅವರು ಹಿಡಿದಿಟ್ಟಿದ್ದಾರೆ. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಇತ್ತೀಚೆಗೆ ಯಶಸ್ಸನ್ನು ಸಾಧಿಸಿದ ಸಿನಿಮಾ. ಲಕ್ಷಾಂತರ ರು ಹಾಸ್ಟೆಲ್ ಫೀಸ್ ಕಟ್ಟಿ ಮೋಜು ಮಸ್ತಿಗೆ ದಿನಕ್ಕೊಂದು ತಿಂಡಿ ವೈವಿಧ್ಯಮಯವಾದ ಊಟದ ಮೆನು ,ವಾರಕ್ಕೆರಡು ಬಾರಿ ನಾನ್ ವೆಜ್ ಊಟ, ಕದ್ದು ಮುಚ್ಚಿ ಎಣ್ಣೆ ಸ್ಮೋಕಿಂಗ್ ಜೋನ್ ನ ಈ ಬದುಕು ಒಂದು ಬಗೆದಾದರೆ ಪೋಷಕರಿಗೆ ಮಕ್ಕಳನ್ನು ಓದಿಸಲು ಕಷ್ಟವಿದ್ದಾಗ ಸಿದ್ದಗಂಗೆ  ಮಠದಲ್ಲಿ ಅಲ್ಲಿನ ಶಿಸ್ತಿನ ಜೀವನ, ಮುದ್ದೆ ಊಟದ ಬದುಕು ಮತ್ತೊಂದು ಬಗೆಯದು. ಅಲ್ಲಿನ ಜೀವನವನ್ನು ತಮ್ಮದೇ ರೀತಿಯ ವಿಶಿಷ್ಟ ಹಾಸ್ಯಮಯ ನಿರೂಪಣೆಯೊಂದಿಗೆ ಕುತೂಹಲಕಾರಿಯಾಗಿ ಮೂಡಿ ಬಂದಿರುವ ಕೃತಿ ಅವರ ಮಾಸ್ಟರ್ ಪೀಸ್ ಕೂಡ ಹೌದು.

ಕಾಡು ಹಕ್ಕಿಯ ಹಾದಿ ನೋಟ ,ಮಳೆ ಎಂಬ ಮಾಯಾಂಗನೆ, ನಿಲುವಂಗಿಯ ಕನಸು, ಅಜ್ಜನ ಕಮೋಡು ಇತ್ತೀಚಿಗೆ  ಓದಿದ  ಅವರ ಕೆಲವು ಕೃತಿಗಳು.  ವಾರಂತ್ಯದಲ್ಲಿ ಮಲೆನಾಡಿನ ಅನುಭವಗಳಿಗಾಗಿ ನುಗ್ಗಿ ಬರುವ ಪಟ್ಟಣಗರಿಗೆ ಅದು ರಮ್ಯ ಸುಂದರ  ತಾಣವಾಗಿ ಕಂಡರೆ ಅಲ್ಲಿಯ ಬದುಕು ಕಟ್ಟಿಕೊಂಡವರಿಗೆ ಅದು ರುದ್ರ ಭಯಂಕರವು ಹೌದು. ಮಲೆನಾಡಿನ ಬದುಕಿನ ಜೊತೆ ಜೊತೆಗೆ ಕೃಷಿ ಲೋಕದ ಬಿಕ್ಕಟ್ಟುಗಳನ್ನು ಅಲ್ಲಿನ ರೈತ ಸಮುದಾಯದ ಛಲ ,ಧೈರ್ಯ, ಜೀವನ ಪ್ರೀತಿ, ಬೇರೆ ಬೇರೆ ಕಾರಣಗಳಿಂದಾಗಿ ಹುಟ್ಟಿ ಬೆಳೆದ ಪರಿಸರವನ್ನು ಬಿಟ್ಟು ಬಂದವರಿಗೆ ಅಲ್ಲಿನ ಸೆಳೆತ, ಅಲ್ಲಿನ ಮಳೆಯ ಪ್ರಪಂಚ ವನ್ನು,  ಮಳೆಯು ತರುವ ಪ್ರಕೃತಿಯ ಬದಲಾವಣೆಗಳನ್ನು ಅದು ಹುಟ್ಟಿಸುವ ರೋಮಾಂಚನ ರೇಜಿಗೆ ಗಳನ್ನು ಅಲ್ಲಿಯದೇ ನುಡಿಗಟ್ಟುಗಳ ಮೂಲಕ, ಅಲ್ಲಿನ ಜನರ ಜೀವನಕ್ರಮವನ್ನು, ಜನಜೀವನದ ಹಿಂದಿನ ಹುಂಬತನ ಪೋಲಿತನವನ್ನು ಹಿಡಿದಿರುವ ರೀತಿ ಅನುಭವಗಳ ವರ್ಣನೆಯು  ಓದಿದಾಗ ಮಂದಹಾಸವನ್ನು ಕೆಲವೊಮ್ಮೆ  ನೆನೆದಾಗಲೆಲ್ಲ ನಗುವನ್ನು ಹೊಮ್ಮಿಸುತ್ತದೆ. 

ಲಂಕೇಶ್ ಪತ್ರಿಕೆ ಮೂಡಿ ಬರುತ್ತಿದ್ದ ಸಂದರ್ಭದಲ್ಲಿಯೇ ಅದಕ್ಕೆ ಪರ್ಯಾಯವಾಗಿ ಮೂಡಿ ಬಂದ ಅಗ್ನಿಪತ್ರಿಕೆಯ ವರದಿಗಾರರಾಗಿದ್ದವರು  ಹಾ ನಾ ಪ್ರಸನ್ನ ಕುಮಾರ್. ಆ ಹೆಸರು ಹಿನ್ನೆಲೆಗೆ ಸೆರೆದು ಚಲಂ ಎಂಬ ಕಾವ್ಯ-ಲೇಖನ ನಾಮದಿಂದಲೇ ಪರಿಚಿತರು. ಕೆಲವು ವರ್ಷಗಳ ಹಿಂದೆ  ಹಾಡ್ಲಹಳ್ಳಿ ಪಬ್ಲಿಕೇಶನ್ ಮೂಲಕ ಪುಸ್ತಕ ಹೊರ ತರುವುದರ ಜೊತೆಗೆ ಅನೇಕ  ಸಾಹಿತ್ಯಕ ಸಂವಾದಗಳನ್ನು ಪುಸ್ತಕ ಮಳಿಗೆಯಲ್ಲಿ ನಿರಂತರವಾಗಿ ಏರ್ಪಡಿಸಿದ್ದರು. ಪುಸ್ತಕ ಬಿಡುಗಡೆಯ ಜೊತೆ ಜೊತೆಗೆ   ನಾದ ಮಣಿ  ನಾಲ್ಕೂರು ರವರ ಸುಂದರ ಸಂಗೀತ ಸಂಜೆಗಳನ್ನು ಏರ್ಪಡಿಸಿದ್ದರು. ಅಂದು ಅವರು ಹಾಡಿದ ಏಕಾಂಗಿಯಾಗಿ ಹೊರಡು ಯಾರಾದರೂ ಸಿಕ್ಕಾರು ..ಹಾಡು ಇಂದಿಗೂ ಕಿವಿಯಲ್ಲಿ ಹಾಗೆಯೇ ಉಳಿದಿದೆ. ಸಾಹಿತ್ಯ,,ಸಂಸ್ಕೃತಿ, ಕಲೆ ,ವಿಜ್ಞಾನ ,ರಾಜಕೀಯ ಹೀಗೆ ವಿಶಾಲ  ಅನುಭವ ಓದಿನ ಹರಿವನ್ನು ಓದುಗರಿಗೆ ಸಮರ್ಥವಾಗಿ ದಾಟಿಸುವರು. ತಮ್ಮದೇ ಕಥೆ ಕವನ ಸಂಕಲನಗಳನ್ನು ಹೊರ ತಂದಿದ್ದಾರೆ

ಅವರು ತಮ್ಮ ತಂದೆಯ ಕೃತಿಗಳನ್ನು ಜನಸಾಮಾನ್ಯರಿಗೆ ವಿದ್ಯಾರ್ಥಿಗಳಿಗೆ ತಲುಪಿಸಲು ಕೈಗೊಳ್ಳುತ್ತಿರುವ ಪ್ರಯತ್ನಗಳ ಬಗೆಗಂತೂ ನನಗೆ ಮೆಚ್ಚುಗೆ ಇದೆ. ಅನೇಕ ಶಾಲೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ  ನಾಗರಾಜರವರ ಕೃತಿಗಳನ್ನು ಓದಲು ನೀಡಿ ನಂತರ ವಿದ್ಯಾರ್ಥಿಗಳ ಕೃತಿಗಳನ್ನು ಕುರಿತು ಮಾತನಾಡುವಂತೆ ಪ್ರೇರೇಪಿಸುವುದು ಜೊತೆಗೆ ಅವರ ಕೃತಿಗಳ ಕುರಿತ ಸಂವಾದ ಒಂದೆಡೆಯಾದರೆ ಅವರ ನಿಲುವಂಗಿಯ ಕನಸು ಕಾದಂಬರಿಯನ್ನು ನಾಟಕವನ್ನಾಗಿಸಿ ಅದನ್ನು ಎಲ್ಲೆಡೆ ಪ್ರದರ್ಶಿಸುತ್ತಿರುವುದು ಮತ್ತು ಅದು ನಾಟಕವಾಗಿ ಹೆಚ್ಚು ಜನರನ್ನು ಸೆಳೆದಿರುವುದು ಒಂದು ಗಮನಾರ್ಹ ಸಂಗತಿ. ನಿಲುವಂಗಿಯ ಕನಸು ಬದಲಿಗೆ ಒಂದು ನೈಟಿಯ ಕನಸು ಎಂದಾಗಬಹುದಿತ್ತು ಎಂದು ಅನಿಸಿದೆ.” ಎಮ್ಮೆ ಗುಂಡಿಯಲ್ಲೊಂದು ದಿನ ಚಾರಣ”ವನ್ನು ಏರ್ಪಡಿಸಿ ಅಲ್ಲಿಯೂ ಕೂಡ ದಟ್ಟ ಅರಣ್ಯದ ನಡುವೆ ನಾಟಕವನ್ನು ಏರ್ಪಡಿಸಿ ನೋಡುಗರಿಗೆ ವಿಭಿನ್ನ ಅನುಭವವನ್ನು ನೀಡಿದ್ದಾರೆ. ಪ್ರಸಾದ್ ರಕ್ಷಿದಿಯವರ ರಂಗ ರೂಪ ಹುಲಿವಾಲ ಮೋಹನ್ ಕುಮಾರ್ ರವರ ನಿರ್ದೇಶನದೊಂದಿಗೆ ನಾಟಕ  ಈಗಾಗಲೇ ಹಲವು ಪ್ರದರ್ಶನಗಳನ್ನು  ಕಂಡಿದ್ದು ಬೆಂಗಳೂರಿನಲ್ಲೂ ಪ್ರದರ್ಶನಗೊಳ್ಳಲು ಸಜ್ಜಾಗುತ್ತಿದೆ. ಕಡವೆ ಬೇಟೆ ಇತ್ತೀಚೆಗೆ ಕಲಾಭವನದಲ್ಲಿ ಪ್ರದರ್ಶನ ಕೊಂಡ ಹಾಡ್ಲಳ್ಳಿ ನಾಗರಾಜರವರ 90ರ ದಶಕದ ಕಥೆಯನ್ನಾಧರಿಸಿದ ನಾಟಕ. ಅಂದು ಕೂಡ ಕಲಾಭವನ ತುಂಬಲು ಚಲಂ ರವರ  ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಮಾಡಿದ ಪ್ರಚಾರ ತಂತ್ರವೂ ಕಾರಣ. 

ಒಂದು ವಯಸ್ಸಿನ ನಂತರ ತಂದೆ ಮಕ್ಕಳ ನಡುವೆ ಒಂದು ಸಣ್ಣ ತೆರೆ ಏರ್ಪಡುವುದು ಸಹಜ. ಆದರೆ ಇಬ್ಬರು ನಡುವಿನ ಓಡಾಟ, ಒಡನಾಟ ಮನಕ್ಕೆ ಮುದ ನೀಡುತ್ತದೆ  ತಂದೆಯ ಕೃತಿಗಳನ್ನು ಮಗನೊಬ್ಬ ವಿಭಿನ್ನ ಕ್ಯಾನ್ವಾಸ್ ಗಳಲ್ಲಿ ಪ್ರಚಾರ ಮಾಡುತ್ತ  ಓದುಗ, ನೋಡುಗ ವಲಯಕ್ಕೆ ಅವರ ಕೃತಿಗಳನ್ನು ಹೆಚ್ಚು ಹೆಚ್ಚು ತಲುಪಿಸಲು ಮಾಡುತ್ತಿರುವ ಚಲಂ ರವರ ಪ್ರಯತ್ನ  ನಿಜಕ್ಕೂ ಶ್ಲಾಘನೀಯವಾದದ್ದು. 

‍ಲೇಖಕರು avadhi

August 22, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಉದಯ ಶಂಕರ

    ಸತ್ಯವಾದ ಮಾತು ಹೇಳಿದಿರಿ. ಒಂದು ವಯಸ್ಸಿನ ನಂತರ ತಂದೆ ಮಕ್ಕಳ ನಡುವೆ ಒಂದು ಸಣ್ಣ ತೆರೆ ಏರ್ಪಡುವುದು ಸಹಜ. ನೀವೇ ಹೇಳಿದಂತೆ ಕವಿ ಕಾವ್ಯ ಹಾಗೂ ಸಮಾಜದ ನಡುವೆಯೂ ಅಂಕದ ಪರದೆ ಹರಡಿ ಅವುಗಳನ್ನು ಮರೆಯೋದೂ ಸಾಮಾನ್ಯ. ಇಂತಹ ಸನ್ನಿವೇಶಗಳಲ್ಲಿ ಈ ಲೇಖನ ಅಂಕದ ಪರದೆಯನ್ನು ಸರಿಸಿ ನಮಗೆ ಸಾಹಿತ್ಯ,ಸಾಹಿತಿ,ತಂದೆ ಮಕ್ಕಳ ಅನುಬಂಧ ಮನ ನಾಟುವಂತೆ ಬರೆದಿದ್ದೀರಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: