ಭಾವ ಕೋಶದೊಳಗೆ ಭದ್ರವಾಗಿ ಕೂತಿದೆ..

ಭಾವ ಕೋಶದೊಳಗೆ ಭದ್ರವಾಗಿ ಕೂತ. ಹಸಿರು ಗದ್ದೆ ಬಯಲು

ಶೋಭಾ ಹಿರೇಕೈ ಕಂಡ್ರಾಜಿ.
………………………………………………

ಹೌದು ,. ಈ ವರ್ಷ ತಡವಾಗಿ ಮಳೆ ಬಂದರೂ… ಬಿದ್ದ ಮಳೆ ಒಂದೊಂದು ಕಡೆ ಏನೆಲ್ಲಾ ಅನಾಹುತ ಸೃಷ್ಟಿಸಿ ಪರಾರಿ ಆಗಿದೆ . ಇಲ್ಲಿ ಈಗ ಬಿಸಿಲೋ ಬಿಸಿಲು. ಈ ಮಳೆಯ ಹಗ್ಲ್ಯಾಸ ನೋಡಿದ್ರೆ .ನಮ್ ಕಡೆ ಬೇಕಾ ಬಿಟ್ಟಿ ತಿರುಗೋರಿಗೆ …”.ಮನೆ ಮಠ ಹರಾಸಿಲ್ಲ , ಹೋದ್ ಬದಿಗೆ ಹಾಳಾಗಿ ಹೋದ್ರಾತು ” ಅಂತ ಬೈತಿರ್ತಾರೆ. ಈ ಸಾರಿಯ ಮಳೆ ನೋಡಿದ್ರು ಹಾಗೆ ಅನ್ನಿಸ್ತಿದೆ.. “ಮಳೆಗೇನು ಇಳೆ ಬೆಳೆ ಬಗ್ಗೆ ಹರಾಸಿಲ್ಲೆನೋ.. ಎತ್ಲಾಗೇ ಹೋಯ್ತೋ ಅಂತ.? ನಮ್ ಮಲ್ನಾಡಲ್ಲಿ ಅಗಷ್ಟ ಲ್ಲೇ ಈ ಥರ ಬಿಸಿಲು ಅಂದ್ರೆ ಇನ್ನು ಬಯಲಿನ ಗತಿ! ಇದೆಂತ ಕಲಿಗಾಲನೋ ಆಗ ಹಿಂಗಿರಲಿಲ್ಲ ಅನ್ನೋ ಅವ್ವನ ಮಾತಿಗೆ ,ಈ ಮಳೆಗಾಲದಲ್ಲಿ ಮಳೆಯಲ್ಲಿ ನೆನೆಯದೆಯೂ ಬಾಲ್ಯದ ನೆನಪಿನೊಂದಿಗೆ ನೆನೆಯುತ್ತಿದ್ದೇನೆ ನಾನು.

ನಮ್ಮದು ತೀರಾ ಅಂದರೆ ತೀರಾ ಹಳ್ಳಿ. ಎಷ್ಟಂದರೆ ನಡೆಯಲು ಒಂದು ನೇರವಾದ ಕಾಲು ದಾರಿಯೂ ಇಲ್ಲದಷ್ಟು, ಕಲಿಯಲು ಒಂದೇ ಒಂದು ಕೋಣೆಯ ಸರಕಾರಿ ಶಾಲೆಯೂ ( ಖಾಸಗಿ ಯಂತೂ ಕನಸು ಬಿಡಿ) ಇಲ್ಲದಷ್ಟು ಕಗ್ಗಾಡಿನ ಊರು. ಇಂಥ ಊರಲ್ಲಿ ಮಳೆಗಾಲದ ಆಟ , ಮಲೆನಾಡಿನ ನೋಟ , ಊರನ್ನು ಸುತ್ತು ವರಿದ ಕೆನ್ನೀರಿನ ನದಿಯ ಓಟ ಕೇಳಬೇಕೆ?
ಅಬ್ಬಾ! ಈಗ ನೆನೆದರೂ ರೋಮಾಂಚನ.

ನಮ್ಮಲ್ಲಿ ಮಳೆಗಾಲ ಬಂತೆಂದರೆ ಅದರ ಪೂರ್ವ ತಯಾರಿಯೇ ಮೂರು ತಿಂಗಳಿಂದ, ಕಟ್ಟಿಗೆ ಸರಿಯೋದು,ಅದರಲ್ಲಿ ಹೊಡಸಲಿಗೆಂದೇ ದೊಡ್ಡ ದೊಡ್ಡ ಕುಂಟೆಗಳು ಪ್ರತ್ಯೇಕವಾಗಿ ಕಟ್ಡಿಗೆ ಕಣಿಯಲ್ಲಿ ಸರಿದಿಡಬೇಕು. ಮತ್ತೆ ಉಪ್ಪಗೆ ಕಾಯಿ ಒಣಸಲಿಕ್ಕೆಂದೇ ಒಂದಿಷ್ಟು ರಾಶಿ ಬೇರೇನೆ ಸರಿಬೇಕು.ಕಟ್ಟಿಗೆಮನೆ ,ಬಚ್ಚಲಮನೆ ಹೊಚ್ಚಬೇಕು, ತೋಟದಲ್ಲಿನ ಅಡಿಕೆ ಮರದ ಹಾಳೆಯನ್ನೆಲ್ಲಾ ಒಟ್ಟಾಗಿಸಿ ಒಂದರ ಮೇಲೊಂದು ಅಕ್ಕಿಸಿ ಅಕ್ಕಿಸಿ ತುಂಬಿ ಹೊರೆಕಟ್ಟಿ, ಬೆಂಕಿ ಹೊತ್ತಿಸಲು ಬಚ್ಚಲು ಮನೆಗೆ ಸಾಗಿಸಿ ಸರಿಯಬೇಕು.ಅದರಲ್ಲೇ ಮೆತ್ತಗಿನ ಹಸೀ ಹಾಳೆ ನೋಡಿ ನೆಲ ಸಾರಿಸಲು ಹಾಳೆಕಡಿ ಕೊಯ್ದು ಆಚೀಚೆ ಸ್ವಲ್ಪ ವೂ ಜಾರದಂತೆ ಬಾಳೆಪಟ್ಡಿ ಕಟ್ಟಿ ಸಿಮೆಂಟ್ ಚೀಲದಲ್ಲೋ ಗೋಣಿಚೀಲದಲ್ಲೋ ಕಟ್ಟಿ ,ಸಮಾ ಹೊಗೆ ತಾಗೋ ಒಲೆ ಮೇಲೇ ತೂಗು ಹಾಕಬೇಕು. ಕಬ್ಬಿನ ಆಲೇಮನೆ ಜಾಗಕ್ಕೆ ಹೋಗಿ ಅಲ್ಲಿದ್ಕಕಬ್ಬಿನ ಸಿಪ್ಪೆ ಹೊರೆ ತರಬೇಕು ಬಚ್ಚಲ ಒಲೆಗೆ .. ಮತ್ತೆ ಅದರಲ್ಲೆ ಒಂದಿಷ್ಟು ಉಳಿಸಿಕೊಂಡು ರಾಶಿ ಮಾಡಿ ಅದಕ್ಕೆ ಬೆಂಕಿ ಹಾಕಿ ಸುಟ್ಟಮೇಲೆ ಬಿದ್ದ ಕರಕಲು ರಾಶಿಗೆ ನೀರು ಹೊಯ್ದು ಗುಡ್ಡೆ ಮಾಡಿ ತಂಪಾದ ಮೇಲೆ ಚೀಲ ತುಂಬಿ ತಂದಿಡಬೇಕು ಮಳೆ ಬೀಳದ ಜಾಗದಲ್ಲಿ.ಯಾಕೆಂದರೆ ವರ್ಷ ಪೂರ್ತಿ ಇದೇ ಕಬ್ಬಿನ ಸಿಪ್ಪೆಯ ಕರಿಯೇ ಮಣ್ಣಿನ ನೆಲದ ಮನೆಗೆ ಸಗಣಿ ಜೊತೆಗೆ ಸಾರಿಸುವಾಗ ಮಿರಿಮಿರಿ ಕರಿಕರಿ ಹೊಳಪ ಕೊಡೋದು. ಇದರೊಂದಿಗೆ ಹಾಂ..ಮರ್ತಿದ್ದೆ ಎಲ್ಲಕ್ಕಿಂತ ಮುಖ್ಯ ಸೋಗೆ ಮನೆ ಆದರಂತೂ.. ಒಂದು ಮಳೆಹನಿ ಬೀಳುವ ಮೊದಲೇ ಮನೆ ಕಂಬಳ ಮುಗಿಸಿ ಬಿಡಬೇಕು.ಜೊತೆಗೆ ಮನೆಯ ಹೊರ ಗೋಡೆ ನೆನೆಯದಂತೆ ಮತ್ತೂ ಜಡಿ ಮನೆಯೊಳಕ್ಕೆ ಹೋಗದಂತೆ ಮನೆ ಸುತ್ತಲೂ ಜಡಿ ತಟ್ಟಿ ಕಟ್ಟಿದರೆ ಒಂದ್ಹೊಡ್ತ ಮಳೆಗಾಲದ ಸಿದ್ಧತೆ ಮುಗಿದಂತೆ.

ಮಳೆಗಾಲದ ಸಿದ್ದತೆ ನೋಡಿ ಮಳೆ ಹೊಯ್ಯಲು ಶುರುವಾಯಿತೆನ್ನಿ ..ನನ್ನೂರು ಆಗ ಥೇಟ್ ತೊಯ್ದು ನಡುಗುತ್ತ ಕುಂತ ಪುಟ್ಟ ಹಕ್ಕಿಯಂತೆ. ಸುತ್ತ ನೀರು ತುಂಬಿಕೊಂಡು ಪುಟ್ಟ ದ್ವೀಪ. ಊರಲ್ಲಿ ಒಂದು ಶಾಲೆ ಸಹ ಇಲ್ಲದೆ ಶಾಲೆ ಮಕ್ಕಳ ಪರದಾಟವಂತೂ ಊರ ದೇವರಿಗೆ ಪ್ರೀತಿ. ಗದ್ದೆ ಹಾಳಿಯ ಮೇಲೆ ಅರ್ಲ ಮೆತ್ತಿಕೊಂಡ ಪಾದ, ಪಾದಕ್ಕಂಟಿದ ಚಪ್ಪಲಿ ಕಿತ್ತಿಡುವಾಗ ಮಣಭಾರ. ಜೊತೆಗೆ ತಾನೇನೂ ಕಡಿಮೆ ಇಲ್ಲ ಎಂಬಂತೆ ಹೆಗಲ ಪಾಟಿಚೀಲದ ಭಾರ.. ಕೈಯ್ಯ ಕೊಡೆ ಹಾರಿ ಗಿಡಮರ ಏರದಂತೆ ಜಾಗ್ರತೆ. ಸಂಜೆವರೆಗೂ ಒಂದೆ ಬೆಂಚ್ ಮೇಲೆ ಕುಳಿತುಕೊಳ್ಳುವ ಕರ್ಮಕ್ಕೆ ಯುನಿಫಾರ್ಮ ಒದ್ದೆಯಾಗದಂತೆ ಮಡಿದೆತ್ತಿಕೊಳ್ಳುವ ಅನಿವಾರ್ಯ ತೆ.
ನಡುನಡುವೆ ಕಾಲೊ ..ತೊಡೆಯೋ..ಎಲ್ಲಿ ಬೇಕಂದರಲ್ಲಿ ಒಂಚೂರು ಸುಳಿವ ಕೊಡದೆ ಕಚ್ಚಿ ಬಿಡುವ , ರಕ್ತದೊರತೆ ಚಿಮ್ಮಿಸಿ ಬಿಡುವ ಉಂಬಳ ಕಚ್ಚದಂತೆ ಮೈಕೈ ಜೋಪಾನ ಮಾಡುವ ಹೆಣಗಾಟ.ಇದರೊಂದಿಗೆ ದಾರಿಯೇ ಇಲ್ಲದ ದಟ್ಟಡವಿಯ ನಡುವೆ ಎಲ್ಲಿ ಮರ ತಲೆ ಮೇಲೇ ಬೀಳುತ್ತಾವೋ.. ನದಿಸಂಕದ ಒಂದೇ ಒಂದು ಅಡ್ಡ ಸಳಿ ತಪ್ಪಿದರೂ ಎಲ್ಲಿ ನದಿಪಾಲಾಗುತ್ತೇವೋ… ಎಂದುಕೊಳ್ಳುತ್ತ ,ಈ ಎಲ್ಲ ಭಯಂಕರ ಅನುಭವದಲ್ಲಿ ಮಳೆಗಾಲದ ಶಾಲಾ ದಿನಗಳು ಸಂಜೆ ಹೊಡಸಲಿನ ನಿಗಿನಿಗಿಯ ಬೆಂಕಿಯೊಂದಿಗೆ ತುಂಬಾ ಹಿತವೂ ಆಗಿರುತಿತ್ತು.

ನಡು ಮಳೆಗಾಲದಲ್ಲಿ ನಡೆಯುವ ನಮ್ಮೂರ ಗದ್ದೆ ನೆಟ್ಟಿಯ ಬಗ್ಗೆ ನೆನಪಿಸಿಕೊಳ್ಳದಿದ್ದರೆ ನನ್ನ ಬಾಲ್ಯದ ನೆನಪು ಅಪೂರ್ಣ. ನೆಟ್ಟಿ ಕೆಲಸವೆಂದರೆ ಅದೊಂದು ರೀತಿಯಲ್ಲಿ ಹಳ್ಳಿ ಹಬ್ಬ. ಎಷ್ಟು ಶ್ರದ್ಧೆ ಪ್ರೀತಿ ಯಿಂದ ಗದ್ದೆ ಕೆಲಸಗಳನ್ನು ಮಾಡುತ್ತಿದ್ದರು ಅಪ್ಪ ಅಯ್ಯ ನವರಂತೆ ನಮ್ಮೂರಿನ ಎಲ್ಲ ರೈತರು. ಒಬ್ಬರ ಎತ್ತಿನ ಗಳವನ್ನು ಮತ್ತೊಬ್ಬರು ಕರೆಸಿಕೊಂಡು ನಾಲ್ಲು ದಿನದ ಹೂಟಿ ಕೆಲಸ ಒಂದೇ.. ದಿನದಲ್ಲಿ ನಡೆಯುತಿತ್ತು.ಐದಾರು ಎತ್ತಿನ ಜೋಡಿಯ ಹೂಟಿಯ ಸಾಲು ನೋಡುವುದೇ ಪರಮ ಸುಖ ಕಣ್ಣಿಗೆ. ಅಲ್ಲೇ ಬದಿ ಗದ್ದೆಯಲ್ಲಿ ನಾಟಿ ಮಾಡುವ ನಮ್ಮೂರ ಅವ್ವಂದಿರು ಅಕ್ಕಂದಿರೆಲ್ಲ ಯಾವ್ಯಾವುದೋ ನೆನಪನ್ನು ಹಂಚಿಕೊಂಡು ಗೊಳ್ಳೆಂದು ನಗುವುದು .. ಹತ್ತುಗಂಟೆಯ ಚಹ ತಿಂಡಿಯನ್ನು ಅರ್ಲು ಮೈಕೈಯಲ್ಲೇ ಎಷ್ಟು ಖುಷಿಯಿಂದ ತಿನ್ನುವುದು, ಅಲ್ಲಿನ ಬಿಸಿಬಿಸಿ ಚಹ ಕುಡಿದು ,ಕೆಂಪಡಿಕೆಯ ಕವಳ ಹಾಕಿ ಮತ್ತೆ ಸೀರೆ ನೆಗೆದು ಸೊಂಟಕ್ಕೆ ಬಿಗಿದು , ಕೊಪ್ಪೆ ಕಂಬಳಿ ಬೆನ್ನಿಗೆ ಹಾಕಿ ಗದ್ದೆಗೆ ಇಳಿದು ಹಸನಾದ ಗದ್ದೆಯಲ್ಲಿ ಸಸಿ ಊರುವ ಚಂದ ,ಆ ಸೊಬಗು, ಸಾಲು ತಪ್ಪದಂತೆ ನೇರ ಒಯ್ಯು ವ ಚಾಕಚಕ್ಯತೆ… ತನ್ನ ಸಾಲು ಎಲ್ಲರಿಗಿಂತ ಚಂದಾಗಬೇಕೆನ್ನುವ ಕಾಯಕ ನಿಷ್ಠೆ, ಅಲ್ಲೂ ಒಂದು ಸೌಂದರ್ಯ ಪ್ರಜ್ಞೆ… ಭೂತಾಯಿ ಮೇಲಿನ ಪ್ರೀತಿ, ಭಕ್ತಿ….. ಒಂದೇ ಎರಡೆ. ತಾಯಂದಿರು ಹತ್ತಾರು ಸಸಿ ಹಿಡಿದು ಹಸನಾದ ಗದ್ದೆಗೆ ಊರುವ ಆ ಪರಿ ನೆನಪಾದರೆ ,ಗದ್ದೆ ನೆಟ್ಟಿಯೆಂಬುದುಒಂದೊಂದೇ ತುತ್ತ ಬಾಯಿಗಿಕ್ಕಿ ಭೂತಾಯಿಗೆ ಉಣಿಸಿದಂತೆನೋ ಎಂದು ನನಗನ್ನಿಸುತ್ತದೆ.

ಗದ್ದೆ ನೆಟ್ಟಿಯ ಮತ್ತೊಂದು ವಿಶೇಷವೆನೆಂದರೆ ಯಾರದ್ದೇ ಮನೆಯ ನೆಟ್ಟಿ ಇದ್ದರೂ ಅವರ ಮನೆಯಲ್ಲೆ ವಿಶೇಷ ಅಡುಗೆಯೂಟ .ಕೊನೆಯ ದಿನ ಸಿಹಿ ತಿಂಡಿ ಮಾಡಿ ( ಹೆಚ್ಚಾಗಿ ಎಲ್ಲರ ಮನೇಲೂ ಕಡಲೆ ಮಡ್ಡಿ ) ಊಟ ಬಡಿಸಿ, ಬಂದವರಿಗೆಲ್ಲ ಅರಿಶಿಣ ಕುಂಕುಮ ಹಚ್ಚಿ, ಡೇರೆ ಹೂ ಮುಡಿಸಿ, ಸಂಜೆ ಹೋಗುವಾಗ ಗದ್ದೆ ನೆಟ್ಟಿಯ ಹುಲ್ಕೆಗೆ ಮಾಡಿದ ಸಿಹಿಯ ಪೊಟ್ಟಣವನ್ನೂ ಅವರ ಕೈಗಿಟ್ಟು ಕಳಿಸಿದರೆ ಗದ್ದೆ ನೆಟ್ಟಿ ಹಬ್ಬ ಒಬ್ಬರ ಮನೇದು ಮುಗಿದು ಮತ್ತೊಬ್ಬರ ಮನೆಲಿ ಶುರುವಾಗಿ ‌ಈ ಹಬ್ಬ ತಿಂಗಳುಗಟ್ಟಲೆ ಇದ್ದು …ಚೌತಿ ಇನ್ನೇನು ಎಂಟು ದಿನ ಇರುವಾಗ ಅಂತೂ ನೆಟ್ಟಿ ಮುಗಿತು ಅಂತ ಕಂಬಳಿಯನ್ನು ಸರಿಯಾಗಿ ಹೊಡೆಸಲ ಒಲೆಗೆ ಒಣಸಿ, ಅದರ ಮೇಲೊದಿಕೆ ಎಂಬಂತೆ ಪ್ಲಾಸ್ಟಿಕ್ ಕೊಪ್ಪೆಯನ್ನು ಚಂದ ಮಡಚಿ ಮುಂದಿನ ಮಳೆಗಾಲದ ನೆಟ್ಟಿಗೆ ತೆಗೆದಿಡುತಿದ್ದರು.

ಕಾಲ ಬದಲಾಗಿದೆ, ಮಳೆಗಾಲ ಹೇಗೇ ಹಿದಿನಂತಿಲ್ಲವೋ ಅದೇ ರೀತಿ ಆಗಿನ ಕಂಬಳಿಕೊಪ್ಪೆ,ಬೆಂಕಿ ಹೊಡಸಲು, ಜಡಿತಟ್ಟಿ ಎಲ್ಲ ಮರೆಯಾಗಿದೆ. ಜೊತೆಗೆ ಎಲ್ಲೆಂದರಲ್ಲಿ ಹಸಿರ ಸೂಸುವ ಗದ್ದೆ ಸಾಲುಗಳೀಗ ಮಂಗ ಮಾಯವಾಗಿ ಅಲ್ಲೆಲ್ಲ ಅಡಿಕೆ ತೋಟದ ನೋಟ ಕಣ್ಣಿಗೆ ಕಟ್ಟುತ್ತಿದೆ. ಊಟಕ್ಕಾದರೂ ಒಂದೆರಡು ಹಾಳಿ ಗದ್ದೆ ಬಿಡಬಹುದಿತ್ತು ಅನ್ನುವ ಅಪ್ಪನ ಮಾತನ್ನು ಕೇಳದೆ ಅಣ್ಣ ತಮ್ಮಂದಿರೆಲ್ಲ ಅಡಿಕೆ ಮುಂತಾದ ವಾಣಿಜ್ಯ ಬೆಳೆಯತ್ತ ಮುಖ ಮಾಡಿದ್ದಾರೆ. ಮುಂದೆ ಅನ್ನಕ್ಕಾಗಿ ಪರದಾಡುವ ಕಾಲ ಬರಲಿದೆ ಎಂಬುದನ್ನು ಮರೆತಿದ್ದಾರೆ.

ನಾನೋ ತೋಟದಡಿಗೆ ಹುಗಿದು ಹೋದ ಗದ್ದೆ ಸಾಲಿನಲ್ಲಿ ಕಳೆದುಕೊಂಡ ನನ್ನ ಕಾಲ ಗೆಜ್ಜೆಯ ಸಪ್ಪಳ ಕೇಳಲು ಇನ್ನೂ ಕಾದಿದ್ದೇನೆ.

‍ಲೇಖಕರು avadhi

August 22, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಆನಂದ್ ಋಗ್ವೇದಿ

    ವಿದ್ರಾವಕ ನೆನಪುಗಳ ಭಾವುಕ ಬರಹ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: