ಹಾಡು ಹೆಣೆದ ಶಂಕರ್ ನಾಗ್ ನೆನಪು…

ಗೊರೂರು ಶಿವೇಶ್

ಮಗನನ್ನು ರೈಲ್ವೆ ಸ್ಟೇಷನ್‍ನಿಂದ ಕರೆತರುವಾಗ ಹಳೆಯ ಬಸ್‍ಸ್ಟ್ಯಾಂಡ್ ಕಡೆ ಕಣ್ಣು ಹಾಯಿಸಿದೆ. ಬಸ್‍ಸ್ಟ್ಯಾಂಡ್ ಹೊರಗಿನ ಆಟೋಸ್ಟ್ಯಾಂಡ್ ಸಂಪೂರ್ಣ ಬಣ್ಣಬಣ್ಣದ ಹೂವಿನ ಹಾರಗಳಿಂದ ಅಲಂಕೃತವಾಗಿದೆ. ಹೊರಗೆ ಶಂಕರ್ ನಾಗ್ ಭಾವಚಿತ್ರ ಇಂದು ಶಂಕರ್ ನಾಗ್ ಜನ್ಮ ದಿನವೆಂದು ಸಾರಿತು. ಮನ ಹಿಂದಕ್ಕೆ ಜಾರಿತು.

ನಾನು ದ್ವಿತೀಯ ಪಿ.ಯೂ.ಸಿ. ಮುಗಿಸಿ ಡಿಗ್ರಿಗೆ ಪ್ರವೇಶಿಸಿದ್ದೆ. ಹೊಸ ಕಾಲೇಜು, ತಡವಾಗಿ ಆರಂಭವಾದ ತರಗತಿಗಳು, ಅರ್ಥವಾಗದ ಪಠ್ಯ. ಪರೀಕ್ಷೆ ಸಮೀಪಿಸುತ್ತಿತ್ತು. ಏನ್ನನ್ನು ಓದುವುದು, ಯಾವುದನ್ನು ಬಿಡುವುದು… ಹೀಗೆ ಗೊಂದಲದಲ್ಲಿ ಮನೆಯ ವರಾಂಡದಲ್ಲಿ ಪುಸ್ತಕ ಹಿಡಿದ ಕೆಲ ಕ್ಷಣಕ್ಕೆ ನಿದ್ದೆಗೆ ಕಣ್ಣೆಳೆಯುತ್ತಿತ್ತು. ಇಂಥ ಸಮಯದಲ್ಲಿ ನಮ್ಮ ಮನೆಯ ಬೀದಿಯ ತುದಿಯಲ್ಲಿದ್ದ ಕೆನರಾ ಬ್ಯಾಂಕಿನ ಅಡಿಯಲ್ಲಿ ಕಾಸಗಲ ಜಾಗದಲ್ಲಿದ್ದ ಶಂಕರನ ಬೀಡಾ ಅಂಗಡಿಯಿಂದ ಬರುತ್ತಿದ್ದ ಮಧುರವಾದ ಗೀತೆಯೊಂದು ನನ್ನನ್ನು ಮಂತ್ರಮುಗ್ಧನಾಗಿ ಅತ್ತ ಸೆಳೆಯುವಂತೆ ಮಾಡುತ್ತಿತ್ತು.

ಆಗ ತಾನೆ ರೇಡಿಯೋ ಸ್ಥಾನದಲ್ಲಿ ಟೇಪ್ ರೆಕಾರ್ಡರ್ ಕಾಲಿರಿಸುತ್ತಿದ್ದ ಸಂದರ್ಭ ಕ್ಯಾಸೆಟ್‍ಗಳ ಯುಗಾರಂಭದ ದಿನಗಳು. ಆ ಮೂಲೆ ಅಂಗಡಿಯ ಇಷ್ಟಗಲ ಜಾಗದಲ್ಲಿಯೇ ಬಾಳೆಹಣ್ಣಿನ ಗೊನೆ, ಕೆಳಗೆ ಹತ್ತಾರು ಬಿಸ್ಕಿಟ್, ಪೆಪ್ಪರ್‍ಮೆಂಟ್, ಚಾಕಲೇಟಿನ ಡಬ್ಬಗಳು ಒಟ್ಟಿದ ಸಿಗರೇಟ್ ಪ್ಯಾಕ್ ಗಳು ಮತ್ತು ಬೀಡಿಯ ಬಂಡಲ್ ಅನ್ನು ಮದ್ಯಕ್ಕೆ ಆಪರೇಷನ್ ಮಾಡಿ ಇಟ್ಟಿದ್ದ ಮೂವತ್ತು ಮಾರ್ಕಿನ, ಗಣೇಶ ಬೀಡಿಯ ಕಟ್ಟುಗಳು, ಸನ್‍ರೈಸ್, ವಿಟೂ ಬೆಂಕಿಪೊಟ್ಟಣಗಳ ನಡುವೆ ವಿರಾಜಮಾನನಾಗಿದ್ದ ಶಂಕರ, ಆ ಕಿರಿದಾದ ಜಾಗದಲ್ಲಿಯೇ ಟೇಪ್ ರಿಕಾರ್ಡ್‍ವೊಂದನ್ನು ಇಟ್ಟು ಬಟನ್ ಒತ್ತಿ ಹಾಡುಗಳು ಮುಗಿದೊಡನೆ ಮತ್ತೆ ರಿವೈಂಡ್ ಮಾಡಿ ಹಾಕುತ್ತಿದ್ದ.

ಆ ಹಾಡೆ ‘ಏನೇ ಕೇಳು ಕೊಡುವೆ ನಿನಗೆ ನಾನೀಗ’. ಆ ಹಾಡು ನನ್ನನ್ನು ಸೆಳೆಯಲು ಕಾರಣ ಆ ಹಾಡಿನ ಪ್ರಾರಂಭದಲ್ಲಿ ಬರುತ್ತಿದ್ದ ರೈಲಿನ ಕೂಗು ಹಾಗೂ ಚಲಿಸುವ ಸದ್ದು. ಅದರ ಹಿಂದೆ ನಿಧಾನವಾಗಿ ತೇಲಿ ಬರುವ ಹಾಡು. ಆ ಹಾಡು ಕೇಳಲೆಂದು ಅತ್ತ ಸಾಗುತ್ತಿದ್ದ ನಾನು ಅ ಅಂಗಡಿಯ ಮುಂದೆ ನಿಂತು ಹಾದು ಹೋಗುತ್ತಿದ್ದ ವಾಹನಗಳನ್ನು ನೋಡುತ್ತಾ ಆ ಹಾಡು ಆಸ್ವಾದಿಸುತ್ತಿದ್ದೆ. ಅದಾದ ನಂತರ ಸಂತೋಷಕ್ಕೆ… ಹಾಡು.. ಸಂತೋಷಕ್ಕೆ ನಂತರ ಜೊತೆಯಲಿ.. ಜೊತೆ ಜೊತೆಯಲಿ… ಅದಾದ ನಂತರ ಕೇಳದೆ ನಿಮಗೀಗ ದೂರದಲ್ಲಿ ಯಾರೋ… ಮುಂದಿನ ಅರ್ಧಗಂಟೆಗಳ ಕಾಲ ಆ ಹಾಡುಗಳ ಸಂಭ್ರಮ. ಅದುವರೆಗಿನ ಸಂಗೀತಕ್ಕಿಂತ ವಿಭಿನ್ನವಾದ ರೈಲಿನ ಸದ್ದು. ಷಟಲ್‍ಗಳ ಹಾರಾಟದ… ಸುತ್ತ ಜನರ ಚಪ್ಪಾಳೆಯ ಸದ್ದು ಸಂಗೀತದಲ್ಲಿ ಬೆರೆತು ಮುದ ನೀಡಿದ ಗೀತೆಗಳ ಸರಣಿ ಶಂಕರ್ ನಾಗ್ ನಿರ್ದೇಶಿಸಿ ಅಭಿನಯಿಸಿದ ‘ಗೀತಾ’ ಚಿತ್ರವನ್ನು ನಿರೀಕ್ಷಿಸುವಂತೆ ಮಾಡಿತ್ತು.

ಆದರೆ ಆ ಚಿತ್ರ ಬಿಡುಗಡೆಯಾದ ನಂತರ ನನಗೆ ತಿಳಿದಂತೆ ಯಶಸ್ಸು ಸಾಧಿಸಲಿಲ್ಲ. ಅಂದು ಆ ಚಿತ್ರ ವೈಫಲ್ಯಕಾರಣ ಸಾಧಿಸಲು ಚಿತ್ರದ ಟ್ರಾಜಿಕ್ ಅಂತ್ಯ. ಕ್ಯಾನ್ಸರ್ ರೋಗಿಯ ಕಥಾಹಂದರ ಚಿತ್ರ ಶುಭಾಂತ್ಯದ ನಿರೀಕ್ಷೆಯ ಆ ಕಾಲದ ಪ್ರೇಕ್ಷಕವೃಂದಕ್ಕೆ ಅಷ್ಟಾಗಿ ಹಿಡಿಸದೆ ನಿರಾಶೆ ಮೂಡಿಸಿತು ಎಂಬ ಮಾತು ಕೇಳಿಬಂದಿತ್ತು. ಅದೇ ವರ್ಷ ಶಂಕರ್ ನಾಗ್ ನಿರ್ದೇಶನದ ಜನ್ಮಜನ್ಮದ ಅನುಬಂಧ ಚಿತ್ರ ಬಂದಾಗ.. ಯಾವ ಶಿಲ್ಪಿ ಕಂಡ ಕನಸು ನೀನು ಮತ್ತು ತಂಗಾಳಿಯಲ್ಲಿ ತೇಲಿಹೋದೆ.. ಆಕಾಶದಿಂದ ಜಾರಿ.. ಭೂಮಿಗೆ ಬಂದ ನೋಡಿ ಹಾಡುಗಳು ಅದೇ ಗುಂಗನ್ನು ಹಿಡಿಸಿದ್ದವು. ಚಿತ್ರ ಯಶಸ್ಸಾಗಲೆಂದು ಮನ ಹಾರೈಸಿದರೂ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೋತಿತು. ಕಾರಣ ಅದೇ ರೀತಿಯ ಪುನರ್ಜನ್ಮದ ಕಥಾಹಂದರವುಳ್ಳ ವಿಷ್ಣುವರ್ಧನ ಭಾರತಿ ಅಭಿನಯದ ಚಿತ್ರ ಬಂಗಾರದ ಜಿಂಕೆ ಒಂದೆರಡು ವಾರಗಳ ಅಂತರದಲ್ಲಿ ಬಿಡುಗಡೆಯಾದದ್ದು. ನಾಗಭರಣರು ಕಲಾತ್ಮಕ ಚಿತ್ರಗಳಿಂದ ಹೊರಬಂದು ನಿರ್ದೇಶಿಸಿದ ಚಿತ್ರ ಈ ಚಿತ್ರಕ್ಕಿಂತಲೂ ಹೆಚ್ಚಿನ ಗೆಲುವುಸಾಧಿಸಿತು. ಒಲುಮೆ ಸಿರಿಯ ಕಂಡು ಬಂಗಾರದ ಜಿಂಕೆ ಚಿತ್ರದ ಜನಪ್ರಿಯತೆ ಸಾಧಿಸಿದ ಹಾಡು.

ಆಗ ಇಳಯರಾಜ ದಕ್ಷಿಣ ಭಾರತದ ಸಂಗೀತವನ್ನು ಆಳುತ್ತಿದ್ದ ಸಂದರ್ಭ. ಒಂದಕ್ಕಿಂತ ಒಂದು ಮಧುರವಾದ ಗೀತೆಗಳು ತಮಿಳು, ತೆಲುಗು, ಕನ್ನಡ. ಮಲೆಯಾಳಂನಲ್ಲಿ ಮೂಡಿಬರುತ್ತಿತ್ತು. ಅದು ಕನ್ನಡದಲ್ಲಿ ಯಶಸ್ವಿ ಗೀತೆಗಳಾಗಿ ಪಡಿಮೂಡಿದ್ದು ಶಂಕರ್‍ನಾಗರ ಗೀತಾ, ಜನ್ಮ ಜನ್ಮದ ಅನುಬಂಧ, ಆ್ಯಕ್ಸಿಡೆಂಟ್ ಚಿತ್ರದಲ್ಲಿ. ಅದೇ ಸಂದರ್ಭದಲ್ಲಿ ಶಂಕರನಾಗ್ ಮಿಂಚಿನ ಓಟದಂಥಹ ಥ್ರಿಲ್ಲರ್, ಗೀತಾದಂಥ ಪ್ರೇಮ ದುರಂತ, ಜನ್ಮಜನ್ಮದ ಅನುಬಂಧಂಥ ಪುನರ್ಜನ್ಮ ಕಥೆ, ನೋಡಿಸ್ವಾಮಿ ನಾವಿರೋದು ಹೀಗೆ, ಪರಮೇಶಿ ಪ್ರೇಮಪ್ರಸಂಗದಂಥ ಕಾಮಿಡಿ, ಆ್ಯಕ್ಸಿಡೆಂಟ್ ದಂಥ ರಾಜಕೀಯ ಹಿನ್ನೆಲೆಯ ಮತ್ತೆ ರಾಜ್ ಅಭಿನಯದ ಒಂದು ಮುತ್ತಿನ ಕಥೆ ಶಂಕರ್ ನಾಗ್ ನಿರ್ದೇಶನದಲ್ಲಿ ಮೂಡಿಬಂದವು.

ಆ್ಯಕ್ಸಿಡೆಂಟ್ ಮತ್ತು ನೋಡಿ ಸ್ವಾಮಿ ನಾವಿರೋದು ಹೀಗೆ ಚಿತ್ರಗಳು ಸ್ವಲ್ಪಮಟ್ಟಿಗೆ ಯಶಸಾಧಿಸಿದವು. ಆ್ಯಕ್ಸಿಡೆಂಟ್ ಮತ್ತು ಒಂದುಮುತ್ತಿನಕಥೆ ಚಿತ್ರಗಳು ಕಾಲದ ಓಟದಲ್ಲಿ ತಾಂತ್ರಿಕತೆ ಹಾಗೂ ಚಿತ್ರಕಥೆ ನಿರೂಪಣೆಯಲ್ಲಿ ಮುಂದಿದ್ದ ಚಿತ್ರಗಳು. ಆ್ಯಕ್ಸಿಡೆಂಟ್ ಯಶಸಾಧಿಸಿದರೂ ಒಂದು ಮುತ್ತಿನ ಕಥೆ ರಾಜ್ ಅಭಿನಯದವಿದ್ದರೂ ವೈಫಲ್ಯ ಕಂಡ ಕೆಲವೇ ಕೆಲವು ಚಿತ್ರಗಳಲ್ಲಿ ಒಂದಾಗಿ ಇತಿಹಾಸ ಸೇರಿತು. ನಾನು ಆ ಚಿತ್ರ ಬಿಡುಗಡೆಯಾದ ಎರಡನೇ ದಿನದಲ್ಲಿ ಶಿವಮೊಗ್ಗದಲ್ಲಿ ಆ ಚಿತ್ರ ನೋಡಿದ್ದೆ. ನಾಲ್ಕೈದು ದಿನಗಳನಂತರ ಮತ್ತೆ ನೋಡಲು ಹೋದಾಗ ಅರ್ಧ ತುಂಬಿದ ಥಿಯೇಟರ್ ಚಿತ್ರ ವಿಫಲವಾಗುವ ಲಕ್ಷಣಗಳನ್ನು ತೋರಿತ್ತು.

ಆ ಸಂದರ್ಭದಲ್ಲಿ ಇಂಥ ಚಿತ್ರ ಉತ್ತಮಕಥೆ, ಕಡಲಾಳದ ಚಿತ್ರಣದ ವಿಭಿನ್ನ ಅನುಭವ ಅಕ್ಟೋಪಸ್‍ನ ಜೊತೆಗೆ ಹೋರಾಟವಿದ್ದರೂ ಆ ಚಿತ್ರ ವಿಫಲವಾಗಿತ್ತು. ಬಹುಶಃ ಹೆಚ್ಚಿನ ಹೀರೋ ವೈಭವೀಕರಣವಿಲ್ಲದ, ಮೇಕಪ್ ಇಲ್ಲದ ಪಾತ್ರಧಾರಿಗಳು ಮತ್ತು ಇಂಗ್ಲೀಷ್ ಮಾದರಿಯ ಚಿತ್ರವಾಗಿದ್ದು ವೈಫಲ್ಯತೆಗೆ ಕಾರಣವಾಗಿರಬಹುದೆಂಬುದು ನನ್ನ ಊಹೆ. ಇದರ ಜೊತೆಗೆ ಬಿಡುಗಡೆಯಾದ ನೀನನ್ನ ಗೆಲ್ಲಲಾರೆ, ಗುರಿ ಚಿತ್ರಗಳು ಹೇಳಿಕೊಳ್ಳುವಂಥ ಯಶ ಸಾಧಿಸದಿದ್ದದ್ದು ರಾಜ್‍ರವರ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಹಾಕಿದ್ದಂತೂ ನಿಜ. ಮುತ್ತೊಂದು ತಂದೆ… ಒಂದು.. ಎರಡು… ಮೂರು…ನಾಲ್ಕು ಆಮೇಲೆ ಏನು? ಗೀತೆಗಳು ಆ ಕಾಲಕ್ಕೆ ಆಕಾಶವಾಣಿಯಲ್ಲಿ ಕೇಳುಬರುತ್ತಿದ್ದ ಗೀತೆಗಳು.

ನಿರ್ದೇಶಕನಾಗಬೇಕೆಂದು ಆಸೆಯಿಂದ ಚಿತ್ರರಂಗ ಪ್ರವೇಶಿಸಿದ ಶಂಕರನಾಗ್ ಗಿರೀಶ್ ಕಾರ್ನಾಡರ ಒಂದಾನೊಂದು ಕಾಲದಲ್ಲಿ ಚಿತ್ರದಲ್ಲಿ ಗಂಡುಗಲಿ ಪಾತ್ರಧಾರಿಯಾಗಿ ರಾಷ್ಟ್ರಪ್ರಶಸ್ತಿ ಪಡೆದು ನಂತರ ಅಬ್ಬಯ್ಯನಾಯ್ಡು ರವರ ಸೀತಾರಾಮುವಿನ ಮೂಲಕ ಕಮರ್ಷಿಯಲ್ ಚಿತ್ರಗಳಿಗೆ ಕಾಲಿರಿಸಿದರು. ಮುಂದೆ ಅಬ್ಬಯ್ಯ ನಾಯ್ಡುರವರ ಮೂಗನಸೇಡು, ದ್ವಾರಕೀಶ್ ರವರ ನ್ಯಾಯ ಎಲ್ಲಿದೆ ಮತ್ತು ನಂಜುಂಡಪ್ಪ ನಿರ್ದೇಶನದ ಸಾಂಗ್ಲೀಯಾನ, ಸಿ.ಬಿ.ಐ.ಶಂಕರ್ ಮೂಲಕ ಅವರದೇ ಪ್ರೇಕ್ಷಕವರ್ಗವನ್ನು ಸಂಪಾಧಿಸಿದ್ದರೂ ಅವರ ಚಿತ್ರದ ಯಶಸ್ಸಿನ ರೇಟು ಕಡಿಮೆ ಎನ್ನಬೇಕು.

ಸೋತರೂ ಹಠಬಿಡದೆ ಇತರೆ ನಿರ್ಮಾಪಕ, ನಿರ್ದೇಶಕರ ಜೊತೆಗೆ ಅಭಿನಯಿಸಿ ಹಣ ಗಳಿಸುವ ಅನಂತ ಅವಕಾಶಗಳಿದ್ದರೂ ತಾನೇ ನಿರ್ಮಾಣ, ನಿರ್ದೇಶನಕ್ಕಿಳಿದೂ ಅಲ್ಲಿಂದ ರಂಗಭೂಮಿ, ಸಂಕೇತ್ ಸ್ಟುಡೀಯೋ, ಮಾಲ್ಗುಡಿಡೇಸ್, ಸ್ವಾಮಿ ಅಂಡ್ ಹಿಸ್ ಫ್ರೆಂಡ್ಸ್ ಧಾರವಾಹಿಗಳ ಮೂಲಕ ದೂರದರ್ಶನಕ್ಕೂ ಕಾಲಿರಿಸಿ ತಮ್ಮ ವಿಭಿನ್ನ ಅಭಿರುಚಿಯಿಂದ ಹಲವಾರು ಕ್ಷೇತ್ರಗಳಲ್ಲಿ ಮುನ್ನಡೆದು ಹೆಸರು ಮಾಡಿದ ಶಂಕರ್ ನಾಗ್ ಗೆ ಆಟೋರಾಜ ಚಿತ್ರದ ಅಭಿನಯವೊಂದೆ ಅವರಿಗೆ ಆ ಪಾಟಿ ಆಟೋ ಚಾಲಕರ ಅಭಿಮಾನಿಗಳನ್ನು ಸಂಪಾದಿಸಿಕೊಟ್ಟಿತ್ತು. ಮುಂದೆ ವಿಷ್ಣುವರ್ಧನ್, ದರ್ಶನ್, ಉಪೇಂದ್ರ, ಗಣೇಶ್ ಮುಂತಾದವರು ಆಟೋ ಚಾಲಕನ ಪಾತ್ರದಲ್ಲಿ ಅಭಿನಯಿಸಿದರೂ ಅದೇಕೋ ಆಟೋ ಚಾಲಕರು ಶಂಕರ್ ನಾಗ್ ರಂತೆ ಒಪ್ಪಿ ಅವರನ್ನು ಹರಸಲಿಲ್ಲ. ಅವರ ಮಾಲ್ಗುಡಿ ಡೇಸ್, ಆ್ಯಕ್ಸಿಡೆಂಟ್, ಗೀತಾ, ಮಿಂಚಿನ ಓಟ ಚಿತ್ರಗಳು ಮತ್ತೊಮ್ಮೆ ಬೇರೆ ನಿರ್ದೇಶಕರ ಮೂಸೆಯಲ್ಲಿ ಮೂಡಿಬಂದಿರುವುದು ಅವರ ಕಳೆದುಹೋಗದ ಜನಪ್ರಿಯತೆಗೆ ಸಾಕ್ಷಿ.

ಎಸ್.ಪಿ.ಬಿ ತಮಿಳ್ನಾಡಿನಲ್ಲಿ ನಡೆಸಿದ ಷೋವೊಂದರಲ್ಲಿ ಕರ್ನಾಟಕದಲ್ಲಿ ಕಾರ್ಯಕ್ರಮ ನೀಡುವಾಗ ಜೊತೆಯಲಿ ಜೊತೆ ಜೊತೆಯಲಿ ಹಾಡು ಹಾಡದಿದ್ದರೆ ಕಾರ್ಯಕ್ರಮ ಸಂಪೂರ್ಣವಾಗುವುದಿಲ್ಲ ಎಂದು ಗೀತಾ ಚಿತ್ರದ ಹಾಡನ್ನು ಹಾಡಿದ್ದು ವಿಶೇಷ. ಇಂದು ಕ್ಲಾಸಿಕ್ ಚಿತ್ರಗಳ ಸಾಲಿಗೆ ಸೇರಿಹೋಗಿರುವ ಗೀತಾ, ಆ್ಯಕ್ಸಿಡೆಂಟ್, ಒಂದು ಮುತ್ತಿನ ಕಥೆಯಂಥ ಚಿತ್ರಗಳು ಮತ್ತೆ ಮತ್ತೆ ಟಿ.ವಿಯಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಶಂಕರ್ ನಾಗ್ ಆ ಕಾಲಕ್ಕಿಂತ ಈ ಕಾಲದಲ್ಲಿ ಯುವಜನರನ್ನು ಹೆಚ್ಚು ಜನರನ್ನು ಸೆಳೆದಿದ್ದಾರೆ ಎಂಬುದು ಅತಿಶಯೋಕ್ತಿಯಾಗಲಾರದು. ಅಂತೆಯೇ ಶಂಕರ್ ನಾಗ್ ತೀರಿಕೊಂಡಾಗ ಇನ್ನು ಹುಟ್ಟದಿದ್ದ ಅನೇಕ ಯುವಜನರು ಅವನಿಂದ ಪ್ರೇರಣೇಗೊಂಡಿರುವುದಕ್ಕೆ ಸಾಕ್ಷಿಯಾಗಿ ಇಂದಿಗೂ ಅನೇಕ ಆಟೋ ನಿಲ್ದಾಣಗಳು ಮತ್ತು ಕ್ರಾಸ್‍ಗಳು ಅವರ ಹೆಸರನ್ನೇ ಹೊತ್ತು ನಿಂತಿರುವವು.

‍ಲೇಖಕರು Admin

November 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: