ಹಾಡು ತೋರಿದ ಹಾದಿ

ಪಿಚ್ಚಳ್ಳಿ ಶ್ರೀನಿವಾಸ

‘ಸುದ್ದಿ ಸಂಗಾತಿ’ ವಾರಪತ್ರಿಕೆಯಲ್ಲಿ ‘ಕುಸುಮಬಾಲೆ’ ಪ್ರತಿ ವಾರ ಧಾರವಾಹಿಯಾಗಿ ಬರುತ್ತಿದ್ದಾಗಲೇ ಓದಲು ಪ್ರಯತ್ನಿಸುತ್ತಿದ್ದೆ. ಆಗಾಗ ಸಂಗಾತಿ ಪತ್ರಿಕಾ ಕಛೇರಿಗೆ ಹೋದಾಗ ಸಂಗಾತಿ ಪತ್ರಿಕೆಯ ಮುಖ್ಯ ವರದಿಗಾರರಾಗಿದ್ದ ಎನ್.ಎಸ್. ಶಂಕರ್ ಆಯಾ ವಾರ ಬರುವ ಧಾರವಾಹಿಯನ್ನ ಓದುತ್ತಿದ್ದರು. ಹಾಗೆ ಶಂಕರ್ ಸಾರ್ ಓದಿದ್ದನ್ನು ಕೇಳುತ್ತಿದ್ದಾಗಲೇ ಕುಸುಮಬಾಲೆ ನನ್ನು ಆವರಿಸಿಕೊಂಡ್ಡಿತ್ತು.

ಅದಾಗಲೇ ನಾನು ದಲಿತ ಚಳುವಳಿಯ ಭಾಗವಾಗಿದ್ದಿದ್ದರಿಂದ, ದ.ಸಂ.ಸ.ದ ನಾಯಕರೂ ಹೆಸರಾಂತ ಸಾಹಿತಿಯೂ ಆದ ಮಹಾದೇವ ದಲಿತ ಚಳುವಳಿಗಾರರನ್ನು ಕಾದಂಬರಿಯಲ್ಲಿ ಪಾತ್ರಗಳಾಗಿ ತಂದದ್ದರಿಂದ ಪೂರ್ತಿ ಕಾದಂಬರಿ ಓದಲು ಪ್ರಯತ್ನಿಸೋಣವೆಂದು ಸಂಗಾತಿ ಕಛೇರಿಯಿಂದ ಜೆರಾಕ್ಸ್ ಪ್ರತಿಯೊಂದು ತಂದು ಬಹಳ ದಿನ ಹಾಸ್ಟಲ್ ನ ಟೇಬಲ್ ಡ್ರಾಯರ್ ನಲ್ಲಿ ಇಟ್ಟುಕೊಂಡಿದ್ದೆ. ನಂತರ ಮೈಸೂರಿನ ‘ರಂಗಾಯಣ’ಕ್ಕೆ ಸೇರಿಕೊಂಡಿದ್ದರಿಂದ ಅದರ ಬಗ್ಗೆ ಗಮನ ಹರಿಸಲಿಲ್ಲ.

ರಂಗಾಯಣದಲ್ಲಿ ಸಿ.ಬಸವಲಿಂಗಯ್ಯ ಈ ಕುಸುಮಬಾಲೆಯನ್ನೇ ನಾಟಕವಾಗಿ ರಂಗದ ಮೇಲೆ ತರಲು ಯಾವಾಗ ಕೈ ಹಾಕಿದರೋ ರಂಗಾಯಣದಲ್ಲಿ ಅಭ್ಯಾಸಿ ರಂಗ ಕಲಾವಿದನಾಗಿದ್ದ ನನಗೆ ಮತ್ತೆ ಮರೆತೋಗಿದ್ದ ಕುಸುಮಬಾಲೆ ಜತೆಗೂಡಿದಳು. ನಟನಾಗಿ, ನಿರೂಪಕನಾಗಿ, ಗಾಯಕನಾಗಿ ಪ್ರೊಡಕ್ಷನ್ ನಲ್ಲಿ ತೊಡಗಿಸಿಕೊಂಡ ಮೇಲೆ ಓದುತ್ತಿದ್ದಂತೆ, ಕಾದಂಬರಿ ಒಳಗಿನ ಪಾತ್ರವಾಗುತ್ತಿದ್ದಂತೆ ಕಾದಂಬರಿಯಲ್ಲಿ ಬರುವ ಊರು, ಆ ಊರಿನಲ್ಲಿ ಬರುವ ಪಾತ್ರಗಳು, ಆ ಪಾತ್ರಗಳ ನಡವಳಿಕೆಗಳು ಬರೀ ಆ ಊರಿನ ಕಥೆಯಾಗಿರದೆ ಭಾರತ ದೇಶದ ಪ್ರತಿ ಊರಿನ, ಪ್ರತಿ ಕೇರಿಯಲ್ಲೂ ಕುಸುಮಬಾಲೆ, ಚನ್ನ, ಸೋಮಪ್ಪ, ಅಕ್ಕಮಾದೇವಮ್ಮ, ಯಾಡೇಗೌಡ, ತೂರಮ್ಮ, ಕೆಂಪಿ, ಈರಿ, ಕಿಟ್ಟಯ್ಯ, ಅಮಾಸ, ಗಾರ್ಸಿದ್ಮಾವ ಪಾತ್ರಗಳ ಜತೆಗೆ ನಾನೂ ಆ ಪಾತ್ರಗಳಲ್ಲಿ ಒಬ್ಬನಲ್ವ ಎಂದನಿಸತೊಡಗಿತು.

ಮೈಸೂರು ರಂಗಾಯಣದ ಆ ನಾಟಕ ಪ್ರದರ್ಶನ ಹಾಗು ಜನಮನ ತಲುಪುವಲ್ಲಿ ಇತಿಹಾಸವೇ ಆಗಿ ನಾಟಕದ ಕಾಯಕವೇ ಕೈಲಾಸವೆಂದು ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಸಿ.ಬಸವಲಿಂಗಯ್ಯ ಕನ್ನಡ ರಂಗಭೂಮಿ ನಿರ್ದೇಶಕರ ಸಾಲಲ್ಲಿ ಮೊದಲಿಗರಾಗಿಬಿಟ್ಟರು. ಅದಾಗಿ ರಂಗಾಯಣದ ಐದು ವರ್ಷಗಳ ನನ್ನ ಕರಾರು ಮುಗಿಸಿ ಆಚೆ ಬಂದೆ.

ಇಡೀ ರಾಜ್ಯದಲ್ಲಿ ಸಾಕ್ಷರತಾ ಆಂದೋಲನ ಪ್ರಾರಂಭದ ದಿನಗಳವು. ಕೋಲಾರದ ಸಾಕ್ಷರತಾ ಆಂದೋಲನ “ಅಕ್ಷರ ತೆನೆ” ಯಲ್ಲಿ ವಾತಾವರಣ ನಿರ್ಮಾಣ ಸಮಿತಿಯಲ್ಲಿ ಹಾಡು, ಬೀದಿನಾಟಕ, ಕ್ಯಾಸೆಟ್ ಜವಾಬ್ದಾರಿ ವಹಿಸಿಕೊಂಡು ಸಕ್ರಿಯನಾಗಿದ್ದೆ. ಚಿಂತಾಮಣಿ ತಾಲೂಕಿನ ಏನಿಗದೆಲೆಯಲ್ಲಿ ಸಾಕ್ಷರ ಜಾಥಾಗಾಗಿ ಬೀದಿ ನಾಟಕ ಕಲಿಸಲು ಮೈಸೂರಿಂದ ಎಸ್.ಆರ್. ರಮೇಶ್, ಶಿವಾಜಿರಾವ್ ಜಾದವ್ ಬಂದಿದ್ದರು.

ಅಲ್ಲಿದಷ್ಟು ದಿನ ಸಂಜೆಯ ಬೈಠಕ್ ಗಳಲ್ಲಿ ರಮೇಶ್ ಜತೆ ಮಾತಾಡೋವಾಗ “ಕುಸುಮಬಾಲೆ” ಕಾದಂಬರಿಯನ್ನ ಆಡಿಯೋ ಆಗಿ ತಂದ್ರೆ ಹೆಂಗೆ ಅಂತ ಚರ್ಚೆಗಳಾಗಿ, ಆಡಿಯೋಗೆ ಬೇಕಾದಂಗೆ ಕುಸುಮಬಾಲೆ ಪುಸ್ತಕವನ್ನ ರಮೇಶ್ ಎಡಿಟ್ ಮಾಡಿಕೊಟ್ರೆ ಆಡಿಯೋ ಮಾಡಬಹುದು ಎಂದು ತೀರ್ಮಾನಕ್ಕೆ ಬಂದ್ವಿ. ಆದ್ರೆ ಅದು ಬೇರೆ ಬೇರೆ ಕಾರಣಗಳಿಗಾಗಿ ಮುಂದೆ ಹೋಗುತಲಿತ್ತು.

ಹೀಗಿರುವಾಗ ಕುಸುಮಬಾಲೆ ಇಂಗ್ಲಿಷ್ ಗೆ ರೂಪಾಂತರ ಆಗುತ್ತಿದ್ದಳು. ಮಾದೇವ ಒಮ್ಮೆ ಪೋನ್ ಮಾಡಿ “ಪಿಚ್ಚಳ್ಳಿ ಕುಸುಮಬಾಲೇನಾ ಹಾಡ್ತೀಯಲ್ಲ ಅದನ್ನ ಕಂಸಾಳೆ ಶೈಲೀಲಿ ಹಾಡಿ ರೆಕಾರ್ಡ್ ಮಾಡಿಕೊಡಬಹುದಾ’ ಅಂದ್ರು. ಕ್ಷಣ ಆಫ್ ಆಗ್ಬಿಟ್ಟೆ. ಚೇತರಿಸಿಕೊಂಡು ಟ್ರೈ ಮಾಡಬಹುದು ಎಂದೆ. ‘ಇಂಗ್ಲಿಷ್ ಗೆ ಅನುವಾದ ಮಾಡುತ್ತಿದ್ದಾರಲ್ಲ ಅವರು ಹಾಡು, ಕಥನ, ನಿರೂಪಣೆ ಶೈಲೀಲಿ ಕೇಳಿದ್ರೆ ಅವರಿಗೆ ಸಹಾಯ ಆಗಬಹುದು ಅಂದ್ರು, ಜನ್ನಿಗೂ ಹೇಳಿದ್ದೀನಿ’ ಅಂತಂದ್ರು. ಆಯ್ತು ಅಂದೆ. ‘ ಟ್ರೈಮಾಡು” ಅಂದ್ರು.

ಒಂದು ವಾರ ಯೋಚಿಸಿ ಅಣ್ಣಯ್ಯ ಮಂಜುನಾಥ್ ಅವರಿಗೆ ಭೇಟಿಯಾಗಿ ಸಿ.ಡಿ. ವಿಚಾರ ತಿಳಿಸಿದೆ. ಮಾಡಿ ಅಣ್ಣ ಅಂದ. ಸರಿ ಚನ್ನೈನ ನನ್ನ ವಾದ್ಯಸಂಯೋಜಕ ದಕ್ಷಿಣಾಮೂರ್ತಿಗೆ ಪೋನ್ ಮಾಡಿ ಸ್ಟುಡಿಯೋ ಬುಕ್ ಮಾಡಿ, ವಾದ್ಯಗಾರರನ್ನು ಬುಕ್ ಮಾಡಿ 2012 ರಲ್ಲಿ ಬೃಂದಾವನ ರೈಲು ಹತ್ತಿಬಿಟ್ಟೆ. ಮೊದಲಿಗೆ ಚನ್ನೈನಲ್ಲಿ ಕಾದಂಬರಿಯಲ್ಲಿ ನಾನಂದುಕೊಂಡ ಹಾಡಿನ ಭಾಗಗಳನ್ನ ರೆಕಾರ್ಡ್ ಮಾಡಿದೆವು. ನಂತರ ಬೆಂಗಳೂರಿನ ಅರವಿಂದ್ ಸ್ಟುಡಿಯೋದಲ್ಲಿ ನಿರೂಪಣೆ, ವಿವರಣೆ, ಸಂಭಾಷಣೆ ಹೀಗೆ ಇಡೀ ಕಾದಂಬರಿಯನ್ನು ರೆಕಾರ್ಡ್ ಮಾಡಿ ಮಾದೇವ್ಗೆ ಒಂದು ಸಿ.ಡಿ.ಕೊಟ್ಟೆ.

ಮಾದೇವ ಇಂಗ್ಲಿಷ್ ಗೆ ಅನುವಾದ ಮಾಡುತ್ತಿದ್ದವರಿಗೆ ಕೊಟ್ರೋ ಇಲ್ವೋ ಗೊತ್ತಿಲ್ಲ. ಅವರಿಗೆ ಉಪಯೋಗವಾಯ್ತೋ ಇಲ್ವೋ ಗೊತ್ತಿಲ್ಲ ಆದ್ರೆ ಸಿ.ಡಿ.ಕೇಳಿದ ಮಾದೇವ ಸ್ವಲ್ಪ ಎಪರ್ಟ್ ಹಾಕುದ್ರೆ ನಡಿತಾದೋ ಅಂದ್ರು.

ಇನ್ನೊಮ್ಮ ನಾನು ಪೋನ್ ಮಾಡಿದ್ದಾಗ “ಏನೊ ನಮ್ ಮನೇಲೆ ಪಾಲ್ಟಿಕ್ಸ್ ಮಾಡ್ತಿದ್ದೀಯಲ್ಲೊ” ಅಂದು ಕಾಲೆಳೆದರು. ನನಗೆ ಗಾಬರಿಯಾಗಿ “ಏನ್ ಮಾದೇವ್ ಅಂದೆ”. “ಏನು ಇಲ್ಲ ಬಿಡು ತಮಾಷೆಗೆ ಅಂದೆ” ಅಂದ್ರು.

ಆಗಿದಿಷ್ಟು ಸಿ.ಡಿ.ನ ಮಾದೇವ್ಗೆ ಕೊಟ್ಟಂಗೆ ಅವರ ತಮ್ಮ ಬಸವರಾಜು ಅವರಿಗೂ ಕೊಟ್ಟಿದ್ದೆ. ಅವರು ಮನೆಲಿ ಕೇಳ್ತಿರ್ಬೇಕಾದ್ರೆ ಅವರ ಶ್ರೀಮತಿ ಬಸವರಾಜುಗೆ ಏನ್ರಿ ಇದು ಅಂತ ಕೇಳಿದ್ದಾರೆ. ಬಸವರಾಜು ಮಾದೇವಣ್ಣ ಬರೆದಿರೊ ಕಥೆ ಅಂದವರೆ. ಹೌದಾ ನಮ್ ಭಾವ ಇಷ್ಟೊಂದು ಒಳ್ಳೆ ಕಥೆ ಬರೆದವ್ರಾ ಅಂದವರೆ. ಬಸವರಾಜು ಅದನ್ನ ಮಾದೇವ್ಗೆ ಹೇಳಿದ್ದಾರೆ. ಅದ್ಕೆ ಮಾದೇವ ಏನೊ ನನ್ ಮನೇಲೆ ಪಾಲ್ಟಿಕ್ಸ್ ಮಾಡ್ತೀಯಾ ಅಂದದ್ದು ಅಂತ ಬಸವರಾಜು ನನಗೆ ತಿಳಿಸಿದ.

ಅದಿರ್ಲಿ. ಬಸವರಾಜು ಅವರ ಶ್ರೀಮತಿಯವರ ಅಭಿಪ್ರಾಯ ಕೇಳಿ ನಾನಂತೂ ದಂಗು ಬಡಿದೋದೆ, ಧನ್ಯನಾದೆ. ಅಕ್ಷರ ಓದೊಕ್ಕೆ ಬರದೆ ಇರುವವರಿಗು ಕೂಡ ಜಗದ ಕಥೆಯಾದ ಕುಸುಮಬಾಲೆಯ ಆಶಯವನ್ನು ತಲುಪಿಸಬೇಕು ಎಂಬ ನನ್ನ ಆಸೆ ಈಡೆರುತ್ತೆ ಅಂದುಕೊಂಡೆ.

ಶ್ರಮವೂ ಸಾರ್ಥಕವಾಯಿತು ಅನಿಸಿ. ನನ್ನ ನಾದಿನಿಯೊ, ಅತ್ತಿಗೆಯೊ, ಆದ ಕುಸುಮಬಾಲೆ ಗೆ ಆದಷ್ಟು ನ್ಯಾಯ ಸಲ್ಲಿಸಲೇಬೇಕೆಂದು 20 ದಿನ ಸ್ಟುಡಿಯೊದಲ್ಲಿ, ಹಲವಾರ ದಿನಗಳು ಮಾದೇವ, ರಾಮು ಜತೆಯಲ್ಲಿ ಕೂತು ಚರ್ಚೆಮಾಡಿ ಎಂಟುವರ್ಷಗಳು ಕಳೆದಿವೆ. ಕಳೆದು ಕೊನೆಗೂ ನಿಮ್ಮ ಮನಗಳಿಗೆ ತಲುಪಿಸಲು ತಯಾರಾಗಿದ್ದೇವೆ.

‍ಲೇಖಕರು Avadhi

September 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: