ಕೊರೋನಾ ರಕ್ಕಸನ ತಾಂಡವ ಕಂಡು…
ಕಳೆವುದೆಂದು ಈ ಸೂತಕ….?
ಎಸ್. ಪಿ. ವಿಜಯಲಕ್ಷ್ಮಿ
ನೀ ಹಾಡಿದರೇ ಸಾಕು,
ನನ್ನೆದೆಯೊಳಗೆ ಧುಮ್ಮಿಕ್ಕಿ ಹರಿಯುತ್ತಿತ್ತು
ಭಾವನೆಗಳ ದಬದಬನ ಜಲಪಾತ,
ನೋಟಕ್ಕೇ ಬೀಳದ ನಾಚುತನದಲ್ಲಿ ಎಲ್ಲಡಗಿ ಮನುಕುಲದ
ಆಟಗಳ ಚೂಪುನೋಟದಲಿ ಅಳೆಯುತಿದ್ದೆಯೆ ಹೇಳು
ಹಾಡುವುದನ್ನೂ ಮರೆತು ಇಷ್ಟು ದಿನ … ?
ಕಾಡುಗಳ ಕರಗಿಸುತ ನಾಡುಗಳ ಏರಿಸುತ
ಹಣದ ಥೈಲಿಯನು ತಕಪಕನೆ ಕುಣಿಸುತ್ತ
ದೊಂಬರಾಟದ ಡಂಬದೇಳಿಗೆಯ ಹತ್ತಿ ಮೆರೆಯುತ್ತ
ಇಂದ್ರ ಚಂದ್ರರ ತಡಕಿ ಮೀಸೆ ತಿರುವುತ್ತ
ಬಡಬಡಿಸುವೀ ಮನುಕುಲದ
ಅಟ್ಟುತಟ್ಟಾಟಗಳ ಕಾಣುತ್ತ ಕುಳಿತಿದ್ದೆಯೇನೇ…?
ಮುಗಿಲ ನುಂಗುತ್ತ, ಇಳೆಯ ನರಳಿಸುತ
ನೀರ ಕಬಳಿಸುತ, ಹಸಿರ ನಲುಗಿಸುತ, ನೆಲವ ಬಗಿಯುತ್ತ, ಖಗ ಕಂಠವನೆ ಹಿಸುಕುತ್ತ
ಗಾಳಿಗೂ ಉಸಿರಾಡದಂತೆ ಕರಿಹೊಗೆಯ ತುಂಬಿಸುತ,
ಋತುಮಾನಗಳ ಸತ್ಯವನೆ ಅಳಿಸುತ್ತ
ಕತ್ತಿ, ಲೇಖನಿಗಳಲಿ ಕೆಂಪನ್ನೆ ಕಕ್ಕುತ್ತ
ಸೊಕ್ಕಿದಟ್ಟಹಾಸಗಳ ಕಂಡು ಮುದುಡಿದ್ದೆಯೇನೇ?

ಹೇಳೇ,
ಇಂದು ಬಿಚ್ಚಿದ ನಿನ್ನ ಕುಹುವಲ್ಲಿ ‘ನಿನ್ನಂತೆ’ ಅಡಗಿಹುದು ಸಂಕಟದ ಎಳೆಯೊಂದು,
ಛಾಯೆ ನಡುಗಿಸಿದೆ ನನ್ನೆದೆಯ,
‘ಮುಂದೇನು’ ಪ್ರಶ್ನೆಯಲಿ ?
ಮೇಳ ನಡೆಸಿದಿರೇನೇ?
ನಿಸರ್ಗ ಕೆರಳಿಹುದೇನೇ
ಆದಿಶೇಷ ಸೆಟೆದಿಹನೇನೇ,
ದಿಕ್ಕುಗಳು ಮುನಿದಿಹವೇನೇ
ಮನುಕುಲದ ಅಹಮನ್ನು ಮೆಟ್ಟೆ ಹೊರಟಿಹಿರಾ ?
ಮುಗಿಲ ಮುಟ್ಟಿದವನ ಕಟ್ಟಿ ಕೆಡಹಬೇಕೆಂದಿಹಿರಾ ?
ದಾಹದಲಿ ಬಾಚಿ ಬಾಚಿ ಮೆರೆದವನ ಚುಚ್ಚಲಿಹಿರಾ ?
ನಿಸರ್ಗವನೆ ತುಳಿದವನ ಅಟ್ಟಿ ಅಟಕಾಯಿಸೆ ಹೊರಟಿಹಿರಾ ?
ಅಥವಾ… ಅಥವಾ…
ಕನಿಷ್ಠದಲಿ ಬಾಳುವುದ ಕಲಿಸಬೇಕೆಂದಿಹಿರಾ’ ?
ಹೇಳೇ, ಯಾವ ಹುನ್ನಾರದಲಿ
ಕವಿದಿಹುದು ಈ ಸೂತಕದ ಕರಿನೆರಳು… ?
ಬೇವುಬೆಲ್ಲವ ಉಣಿಸೆ ಯುಗದಾದಿ ಬಂದಿತ್ತು
ರಾಗವರಳಿಸೊ ನಿನ್ನ ಕುಹೂ ದನಿಯೂ ಕೇಳಿತ್ತು
ಆ ದನಿಗೆ ಮನವರಳಿ ರಾಗಗಳ ನವಿಲಾಗಿತ್ತು
ಪ್ರೀತಿ ಪ್ರೇಮದಲಿ ಮೈ ಮರೆಯುವುದಷ್ಟೆ ಉಳಿದಿತ್ತು
ಥಟ್ಟನಿಂದು ಮುಂಜಾನೆ ಒರಲಿಟ್ಟೆಯಲ್ಲೇ
ರಾಗಋಷಿ ಕುಹುವಲ್ಲಿ ಒಡಕು ಬೆರೆಸಿದೆಯಲ್ಲೇ
ಅಲ್ಲಿಲ್ಲಿ ಸುತ್ತಿ ಸುಳಿವವಳು ನೀನು
ಪಂಚಭೂತಗಳ ಸಂಚು ತಿಳಿದಿರುವೆ ಏನು
ಮನುಕುಲದ ಮೇಲೆ ಕತ್ತಿ ಹಿಡಿದಿಹರೇನು
ಏನು… ಏನು… ?
ಏನಾಗಿದೆ ಹೇಳೇ ಕಂಗೆಟ್ಟಿಹೆ ನಾನು,
ಏನ ಮಾಡಿದರಿಳೆಗೆ ಉಳಿವಿಹುದು ಹೇಳು
ಕಳೆವುದೆಂದಿಗೆ ಗೆಳತಿ, ಈ ಸೂತಕದ ನೆರಳು,
ಕೇಳಲಾರೆನೆ ಉರುಳುರುಳಿ ಬೀಳುವಾ ಜೀವಗಳ ಒರಲು
ಕಾದಿಹೆನು ಕೇಳೆ ಒಡಕಿರದ ನಿನ್ನ ಕೊರಳು…
ಹೇಳೇ ,
ಯಾರ ಶಾಪವು ನಮಗೆ ಈ ಪರಿಯ ಉರುಳು ?






0 Comments