ಹೊಸ ಅಂಕಣ ‘ಮುದ್ರಕನ ಡೈರಿ’ ಆರಂಭ: ಅಬ್ದುಲ್ ಕಲಾಂ ಕೊಟ್ಟ ಶಹಭಾಷಗಿರಿ

ಭಾರತ ರತ್ನ ಎ.ಪಿ.ಜೆ. ಅಬ್ದುಲ್ ಕಲಾಂ ಅವರೊಂದಿಗೆ

ಒಂದು ರಸ ನಿಮಿಷ 

ಖ್ಯಾತ ವಿಜ್ಞಾನಿ,ಭಾರತದ ಕ್ಷಿಪಣಿ ಮಾನವ, ಜಗತ್ತಿನ ಹಲವು ವಿಶ್ವವಿದ್ಯಾಲಯಗಳಿಂದ 48 ಗೌರವ ಡಾಕ್ಟರೇಟ್ ಪದವಿ ಪಡೆದ, ಜನಸಾಮಾನ್ಯರ ರಾಷ್ಟ್ರಪತಿ ಎಂದೇ ಹೆಸರಾಗಿದ್ದ ಡಾ॥ ಎ.ಪಿ.ಜೆ .ಅಬ್ದುಲ್ ಕಲಾಂ ಅವರೊಂದಿಗೆ ಕಳೆದ ಒಂದು ನಿಮಿಷ ನನ್ನ ಜೀವನದ ಅನನ್ಯ, ಅದ್ಭುತ ಅನುಭವ.

ಬಾಲ್ಯದ ದಿನಗಳಲ್ಲಿ ಮನೆ ಮನೆಗೆ ದಿನಪತ್ರಿಕೆ ಹಾಕಿ ವಿದ್ಯಾಭ್ಯಾಸ ಮಾಡಿ ಮುಂದೆ ದೊಡ್ಡ ವಿಜ್ಞಾನಿ, ರಾಷ್ಟ್ರಪತಿ… ಹೀಗೆ ಅನೇಕ ಹುದ್ದೆಗಳನ್ನು ಅಲಂಕರಿಸಿ ತಮ್ಮ ಜೀವನದ ಉದ್ದಕ್ಕೂ ಒಂದು ಸೆಕೆಂಡನ್ನೂ ವ್ಯರ್ಥ ಮಾಡದೆ ದೇಶ ಮತ್ತು ದೇಶಬಾಂಧವರ ಉದ್ದಾರದ ಬಗ್ಗೆ ಚಿಂತನೆ ನಡೆಸಿದ ಮಹಾನ್ ವ್ಯಕ್ತಿಯ ಜೀವನದ ಒಂದು ನಿಮಿಷ ನನಗಾಗಿ ಇತ್ತು ಎಂಬುದೇ ನನ್ನ ಭಾಗ್ಯ…

ಈ ಕನಸು ಸಾಕಾರಗೊಳ್ಳಲು ನನ್ನ ಜೊತೆಯಲ್ಲಿ ನಿಂತ ಅನೇಕ ಮಹನೀಯರೊಂದಿಗೆ ನಡೆದ ಒಂದು ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದೇನೆ…

 

ಒಂದು ದಿನ ಹಿರಿಯ ಸಾಹಿತಿ, ಜಾನಪದ ತಜ್ಞ ಗೊ.ರು. ಚನ್ನಬಸಪ್ಪನವರು ಕರೆ ಮಾಡಿ ಅವರ ಕಛೇರಿಗೆ ಕರೆಸಿ , K B R ಡ್ರಾಮಾ ಕಂಪನಿಗೆ 75 ವರ್ಷ ತುಂಬಿದೆ, ಅದರ ಪ್ರಯುಕ್ತ ಒಂದು ದೊಡ್ಡ ಹಾಗೂ ವಿಶಿಷ್ಟವಾದ ಕಾರ್ಯಕ್ರಮ ಮಾಡುತ್ತಿದ್ದೇವೆ. ಅದಕ್ಕೆ ಸಂಬಂಧಿಸಿದ Letterhead, Envelope cover, K B R ಕಂಪನಿಯ ಕಿರು ಪರಿಚಯ ಪುಸ್ತಕ, ನಂತರ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಹಾಗೂ ಸ್ಮರಣ ಸಂಚಿಕೆ… ಹೀಗೆ ಕಾರ್ಯಕ್ರಮದ ಎಲ್ಲಾ ಮುದ್ರಣ ಕೆಲಸವನ್ನು ಅಚ್ಚುಕಟ್ಟಾಗಿ ನೀವು ಮಾಡಿಕೊಡಬೇಕು ಎಂದರು .

ಕಾರ್ಯಕ್ರಮದ ಸಿದ್ಧತೆಗಾಗಿ ನಡೆಯುತ್ತಿದ್ದ ಒಂದು ಪೂರ್ವಭಾವಿ ಸಭೆಯಲ್ಲಿ ಗೊ.ರು.ಚ.ಅವರು K B R ಡ್ರಾಮಾ ಕಂಪನಿಯ ಮಾಲೀಕರು ಹಾಗೂ ರಂಗಭೂಮಿಯ ಖ್ಯಾತ ಅಭಿನೇತ್ರಿ ಚಿಂದೋಡಿ ಲೀಲಾ ಅವರಿಗೆ ಪರಿಚಯಿಸಿ , ಇವರಿಗೆ ಮುದ್ರಣ ಜವಾಬ್ದಾರಿಯನ್ನು ಕೊಡೋಣ, ಎಂದಾಗ ಲೀಲಮ್ಮ ಅವರು ನನ್ನನ್ನು ನೋಡಿ, ಇಷ್ಟು ದೊಡ್ಡ ಕಾರ್ಯಕ್ರಮದ ಮುದ್ರಣ ಕೆಲಸ ಈ ಹುಡುಗನ ಕೈಲಿ ಆಗುತ್ತಾ (ನಾನು ಪ್ರೆಸ್ ಶುರು ಮಾಡಿದ ಮೊದಲ ವರ್ಷ ಅದು) ಎಂದು ಅನುಮಾನ ವ್ಯಕ್ತಪಡಿಸಿದರು.

ಗೊ.ರು.ಚ. ಅವರು “ಇಲ್ಲ ಇವನು ನಮ್ಮ ಹುಡುಗ ನನ್ನ ಹಾಗೂ ಪರಿಷತ್ತಿನ ಅನೇಕ ಕೆಲಸಗಳನ್ನು ಈತನೇ ಮಾಡಿದ್ದಾನೆ. ಇವರದು ರೇಟ್ ತುಸು ಜಾಸ್ತಿ, ಆದರೆ ಕ್ವಾಲಿಟಿ ಚೆನ್ನಾಗಿರುತ್ತದೆ” ಎಂದು ಅವರಿಗೆ ಮನವರಿಕೆ ಮಾಡಿ ಮುದ್ರಣ ಕೆಲಸವನ್ನು ನಮಗೆ ಕೊಡಿಸಿದರು.

ಮುಂದೆ ಕಾರ್ಯಕ್ರಮದ ಮುದ್ರಣ ಸಂಬಂಧ ಚಿಂದೋಡಿ ಲೀಲಾ ಅವರು ನಮ್ಮ ಕಛೇರಿಗೆ ದಿನಾ ಭೇಟಿ ಕೊಡುತ್ತಲೇ ಇದ್ದರು.. ನಾನು ಅವರ ಊರಿನ ಕಡೆ ಹುಡುಗ ಎಂದು ಗೊತ್ತಾದ ಮೇಲಂತೂ ನನ್ನ ಮೇಲೆ ಬಹಳ ಪ್ರೀತಿ ವಾತ್ಸಲ್ಯ ತೋರಿಸುತ್ತಿದ್ದರು… ಪ್ರತಿ ಭೇಟಿಯಲ್ಲೂ, ” ನೋಡಪ್ಪಾ, ಮುದ್ರಣ ಕೆಲಸ ಎಲ್ಲಾ ಚೆನ್ನಾಗಿ ಆಗಬೇಕು. ಹಣ ಎಷ್ಟಾದರೂ ಪರವಾಗಿಲ್ಲ, ಕಾರ್ಯಕ್ರಮಕ್ಕೆ ಡಾ॥ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಬರುತ್ತಿದ್ದಾರೆ… ಅವರಿಂದ ನಿಮಗೆ ಸನ್ಮಾನ ಮಾಡಿಸುತ್ತೇನೆ ಎಂದು ಹೇಳುತ್ತಲೇ ಇದ್ದರು…

ಅವರ ಮನದಿಚ್ಛೆಯಂತೆ ಮುದ್ರಣ ಕಾರ್ಯ ಎಲ್ಲಾ ಮುಗಿದು ಕಾರ್ಯಕ್ರಮದ ದಿನ ಬಂದೇಬಿಟ್ಟಿತು.. ನಾನು ಬಹಳ ಆಸೆಯಿಂದ ಅಂದು ಬಿಡುಗಡೆಯ ಸ್ಮರಣ ಸಂಚಿಕೆ ತೆಗೆದುಕೊಂಡು ವೇದಿಕೆ ಬಳಿ ಹೋದೆ. ಅಲ್ಲಿ ಬಿಗಿ ಬಂದೋಬಸ್ತು. ನನ್ನನ್ನು ಒಳಗೆ ಬಿಡಲೇ ಇಲ್ಲ…. ಡಾ॥ಅಬ್ದುಲ್ ಕಲಾಂ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಬಿಗಿ ಬಂದೋಬಸ್ತು. ಯಾರನ್ನೂ ವೇದಿಕೆ ಮೇಲೆ ಬಿಡುತ್ತಿಲ್ಲ, ಮುಂಚಿತವಾಗಿ ಕಾರ್ಯಕ್ರಮದ ವ್ಯವಸ್ಥಾಪಕರು ವೇದಿಕೆ ಮೇಲೆ ಮತ್ತು ಹಿಂದೆ ಯಾರು ಯಾರು ಇರಬೇಕು ಎಂದು ಪಟ್ಟಿ ಮಾಡಿ ಪೊಲೀಸರಿಗೆ ಕೊಡಬೇಕಂತೆ. ಅದರಂತೆಯೇ ಅವರು ಪಟ್ಟಿಯಲ್ಲಿ ಹೆಸರು ಇರುವವರನ್ನು ಮೈಯೆಲ್ಲ ತಪಾಸಣೆ ಮಾಡಿ ಬಿಡುತ್ತಿದ್ದರು..

ನನ್ನ ಹೆಸರು ಪಟ್ಟಿಯಲ್ಲಿ ಹೇಗೋ ಕಣ್ತಪ್ಪಿ ಬಿಟ್ಟು ಹೋಗಿತ್ತು… ಸನ್ಮಾನ ಕಾರ್ಯಕ್ರಮದ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲ ಎಂದು ತಿಳಿದ ಕೂಡಲೇ ಲೀಲಮ್ಮ ಅವರು ಗಾಬರಿಯಾಗಿ….,ಇರು ಏನಾದರು ವ್ಯವಸ್ಥೆ ಮಾಡಬಹುದಾ ಎಂದು ಗೊ.ರು. ಚ.ಅವರ ಬಳಿ ಚರ್ಚೆ ಮಾಡಿ, ಆಗ ಪೋಲಿಸ್ ಕಮಿಷನರ್ ಆಗಿದ್ದ ಶಂಕರ್ ಬಿದರಿ ಮತ್ತು ಕಲಾಂ ಅವರ ರಕ್ಷಣಾ ಉಸ್ತುವಾರಿ ಅಧಿಕಾರಿಯೊಂದಿಗೆ ಮಾತನಾಡಿದಾಗ.. ಅವರು ಇಲ್ಲ ಈ ಕೊನೇ ಕ್ಷಣದಲ್ಲಿ ಕಾರ್ಯಕ್ರಮದ ಪಟ್ಟಿ ಬದಲಾವಣೆ ಮಾಡಲು ಆಗುವುದಿಲ್ಲ ಎಂದರು….

ಕೊನೆಗೆ ಶಂಕರ್ ಬಿದರಿ ಅವರು: “ಒಂದು ಕೆಲಸ ಮಾಡಿ, ಸ್ಮರಣ ಸಂಚಿಕೆ ಬಿಡುಗಡೆ ಸಮಯಕ್ಕೆ ಈ ಹುಡುಗ ಬಿಡುಗಡೆ ಪುಸ್ತಕದ ಟ್ರೇ ಹಿಡಿದು ಬರಲಿ.. ಆಗ ಒಂದು ಫೋಟೋ ತೆಗೆಸಿಕೊಳ್ಳಲಿ “ಎಂದು, ಒಂದು ಉಪಾಯವನ್ನು ಸೂಚಿಸಿದರು… ಅದರಂತೆ ಬಿಡುಗಡೆ ಸಮಯಕ್ಕೆ ಸರಿಯಾಗಿ ನಾನು ವೇದಿಕೆ ಮೇಲೆ ಹೋದೆ. ಹೋಗಿ ಪುಸ್ತಕದ ಪ್ಯಾಕ್ ಕೊಟ್ಟ ಕೂಡಲೇ, ಪ್ರೆಸ್ ಫೋಟೋಗ್ರಾಫರ್ ಗಳೆಲ್ಲಾ.. ನೀವು ಬೇಗ ಈ ಕಡೆ ಬರ್ರೀ ಎಂದು ಗದರಲು ಶುರು ಮಾಡಿದರು. ನಾನು ಗಾಬರಿಯಾಗಿ ಪುಸ್ತಕ ಕೊಟ್ಟು ಪಕ್ಕಕ್ಕೆ ಬಂದೆ… ಪುಸ್ತಕ ಬಿಡುಗಡೆ ಆಯ್ತು.

ಎಲ್ಲಾ ಗೌರವಾನ್ವಿತ ಅತಿಥಿಗಳು ಅವರವರ ಕುರ್ಚಿಗಳಲ್ಲಿ ಕೂತರು. ನಾನು ಅಬ್ದುಲ್ ಕಲಾಂ ಅವರನ್ನು ದೂರದಿಂದ ನೋಡುತ್ತಲೇ ಇದ್ದೆ. ಆಗ ಒಂದು ಅನಿರೀಕ್ಷಿತ ಪ್ರಸಂಗ ಜರುಗಿತು… ಕಲಾಂ ಅವರ ಪಕ್ಕದಲ್ಲಿ ಕುಳಿತಿದ್ದ ಶ್ರೀ ಸುತ್ತೂರು ಸ್ವಾಮೀಜಿ ಅವರು ನನ್ನನ್ನು ಕಣ್ಸನ್ನೆಯಲ್ಲಿ ಹತ್ತಿರಕ್ಕೆ ಕರೆದರು. ನಾನು ತಕ್ಷಣ ಹೋಗಿ ಕಲಾಂ ಅವರಿಗೆ ಮೂರಡಿ ದೂರದಲ್ಲಿ ನಿಂತೆ. ಕಲಾಂ ಅವರಿಗೆ ಕಿವಿಯಲ್ಲಿ..” ಇವನು ಕಾರ್ಯಕ್ರಮದ ಆಹ್ವಾನ ಪತ್ರಿಕೆ, ಸ್ಮರಣ ಸಂಚಿಕೆ ಮುದ್ರಕ” ಎಂದು ಪರಿಚಯಿಸಿದರು.

ಕೂಡಲೇ ಕಲಾಂ ಅವರು ಕಿರುನಗೆಯೊಂದಿಗೆ ಕೈ ಸನ್ನೆಯಲ್ಲಿ ಇನ್ನಷ್ಟು ಹತ್ತಿರಕ್ಕೆ ಕರೆದರು. ಆಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ರೋಮಾಂಚನದಿಂದ ಕೈಕಾಲುಗಳು ಕಂಪಿಸತೊಡಗಿದವು… ಹೃದಯ ಬಡಿತ ಹೆಚ್ಚಾಯ್ತು.. ತಕ್ಷಣ ನಾನು ಅವರ ಬಳಿ ಹೋಗಿ ಪಾದ ಮುಟ್ಟಿ ನಮಸ್ಕರಿಸಿದೆ. ಕಲಾಂ ಅವರು “No No” ಎಂದು ನನ್ನ ಕೈ ಹಿಡಿದು ಕುಲುಕುತ್ತಾ … “Excellent printing, all the best, keep it up’ ಎಂದು ಹರಸಿದರು….

ನಮ್ಮ ದೇಶದ ಅತ್ಯಂತ ದೊಡ್ಡ ಹುದ್ದೆಗಳನ್ನು ಅಲಂಕರಿಸಿದರೂ ಸ್ವಲ್ಪವೂ ಅಹಂಕಾರ, ಪ್ರತಿಷ್ಟೆ, ದಿಮಾಕು, ಸಿಟ್ಟು ಸೆಡವುಗಳು ಇಲ್ಲದಿರುವುದನ್ನು ಕಂಡು ದೊಡ್ಡವರು ಹೀಗೂ ಇರುತ್ತಾರೆಯೇ..!!! ಎಂದು ಆಶ್ಚರ್ಯವಾಯಿತು.

ನನ್ನಂತಹ ಸಾಮಾನ್ಯನತ್ತ ದೂರದಿಂದಲೇ ಒಂದು ಕಿರು ನಗೆ ಬೀರಿ ಸುಮ್ಮನಾಗಬಹುದಿತ್ತು. ಹಾಗೆ ಮಾಡದೆ ನನ್ನನ್ನು ಹತ್ತಿರಕ್ಕೆ ಕರೆದು ಕೈ ಕುಲುಕಿ ಎರಡು ಪ್ರೋತ್ಸಾಹದಾಯಕ ಮಾತುಗಳನ್ನು ಹೇಳಿದ್ದು ನೆನಪಿಗೆ ಬಂದಾಗಲೆಲ್ಲಾ ಒಂದೆರಡು ಕ್ಷಣ ಅಂಥದೊಂದು ಘಟನೆ ನನ್ನ ಬದುಕಿನಲ್ಲಿ ನಡೆದುದು ನಿಜವೇ ಎಂದು ಮೈಮರೆಯುತ್ತೇನೆ . ಗಾಂಧೀಜಿಯವರ ನಂತರದಲ್ಲಿ ನಮ್ಮ ದೇಶದಲ್ಲಿ ಮಹಾತ್ಮ ಎನಿಸಿಕೊಳ್ಳಬಲ್ಲ ಗುಣಗಳಿರುವುದು ಇವರಿಗೇ ಎಂದು ನನಗೆ ಖಾತ್ರಿಯಾಯಿತು ….

ಕಾರ್ಯಕ್ರಮದ ವೇದಿಕೆ ಮೇಲೆಯೇ ಲೀಲಮ್ಮಅವರು ನನ್ನ ಬಳಿ ಬಂದು, ನಿನ್ನನ್ನು ಸನ್ಮಾನಿಸಲು ಆಗಲಿಲ್ಲ ದಯವಿಟ್ಟು ಬೇಜಾರು ಮಾಡ್ಕೋಬೇಡ.. ಮುಂದೆ ದಾವಣಗೆರೆಯಲ್ಲಿ ಇದೇ ರೀತಿ ದೊಡ್ಡ ಕಾರ್ಯಕ್ರಮ ಮಾಡುತ್ತೇವೆ, ಅಲ್ಲಿ ನಿನಗೆ ಅದ್ದೂರಿಯಾಗಿ ಸನ್ಮಾನ ಮಾಡುತ್ತೇವೆ ಎಂದು ಹೇಳಿದರು.

ಅದರಂತೆ ದಾವಣಗೆರೆ ಕಾರ್ಯಕ್ರಮಕ್ಕೆ ನನ್ನನ್ನು ಬೆಂಗಳೂರಿನಿಂದ ಅವರ ಕಾರ್ ನಲ್ಲೇ ಕರೆದೊಯ್ದು, ನನಗಾಗಿಯೇ ಒಂದು ವಿಶೇಷ ಮೊಮೆಂಟೋ ಮಾಡಿಸಿ ವೇದಿಕೆ ಮೇಲೆ ಜಿಲ್ಲಾ ಮಂತ್ರಿ ಹಾಗು ಕೇಂದ್ರ ಸಚಿವರ ಕೈಯಲ್ಲಿ ಸನ್ಮಾನ ಮಾಡಿಸಿದರು.

ಎಲ್ಲಾ ಅತಿಥಿಗಳ ಸಮ್ಮುಖದಲ್ಲಿ “ಈ ಹುಡುಗನಿಗೆ ಬೆಂಗಳೂರಿನಲ್ಲೇ ಸನ್ಮಾನ ಮಾಡಬೇಕಿತ್ತು, miss ಆಗಿಬಿಟ್ಟಿತ್ತು.. ಆದ್ದರಿಂದ ಇಲ್ಲಿ ಸನ್ಮಾನ ಮಾಡಿದೆವು. ಈಗ ನನಗೆ ಸಮಾಧಾನವಾಯ್ತು ಎಂದು ಹೇಳಿದರು…… ನಂತರದಲ್ಲೂ ನಮ್ಮೊಂದಿಗೆ ಅವರ ಬಾಂಧವ್ಯ ಮುಂದುವರೆಯಿತು. ಬಿಡುವು ಇದ್ದಾಗಲೆಲ್ಲಾ ಲೀಲಮ್ಮ ನಮ್ಮ ಮುದ್ರಣಾಲಯಕ್ಕೆ ಬಂದು ಹೋಗುತ್ತಿದ್ದರು…

‍ಲೇಖಕರು avadhi

March 30, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

6 ಪ್ರತಿಕ್ರಿಯೆಗಳು

  1. prakash kodaganur

    ಮುದ್ರಕನ ಡೈರಿ ವಿಶಿಷ್ಟ ಬಗೆಯ ಅಂಕಣ. ಹೃದಯಂಗಮವಾಗಿದೆ. ಪ್ರಕಾಶ್ ಕೊಡಗನೂರ್.

    ಪ್ರತಿಕ್ರಿಯೆ
  2. Jayalaxmi Patil

    ತುಂಬಾ ಆಪ್ತ ಬರಹ. ಮೊದಲಿಗೆ ಆಗಿರಬಹುದಾದ ನಿರಾಸೆ, ನಂತರದ ಧನ್ಯತೆ ಎರಡೂ ಲೇಖನಿಯ ಮೂಲಕ ಅನುಭವಕ್ಕೆ ದಕ್ಕುತ್ತವೆ. ನಿಜ ನೀವಂದಂತೆ ಗಾಂಧಿಜೀ ನಂತರದ ಮಹಾತ್ಮ ಕಲಾಂ ಸರ್ಏ ಸರಿ.

    ಪ್ರತಿಕ್ರಿಯೆ
  3. Satish Chapparike

    ಕೃಷ್ಣ ಅವರೇ ಬಹಳ ಆಪ್ತ ಬರಹ. ನಿಮ್ಮ ಸಂಗ್ರಹದಲ್ಲಿ ಇಂತಹ ನೂರಾರು ಅನುಭವಗಳು ಖಂಡಿತ ಇವೆ. ಆ ಪೈಕಿ ಹಲವು ರೋಮಾಂಚಕ ಅನುಭವಗಳು ಕೂಡ. ಇದೇ ರೀತಿಯಲ್ಲಿ ಆ ಎಲ್ಲ ರೋಮಾಂಚಕ ಕಥನಗಳನ್ನು ದಾಖಲಿಸಿ. ಇನ್ನೊಂದು ವರುಷದಲ್ಲಿ ನಿಮ್ಮದೇ ಒಂದು ಪುಸ್ತಕ ಹೊರಬರಲಿ. ನಿಮಗಂತೂ ಪ್ರಕಾಶಕರ ಕೊರತೆ ಇಲ್ಲ.

    ಇನ್ನು ಮುದ್ರಣ….ಚಾಮರಾಜಪೇಟೆಯಲ್ಲಿ ’ಸ್ವ್ಯಾನ್ ಮುದ್ರಣಾಲಯ’ ಇದೆ. ಅವರ ಬಳಿ ಹೇಳಿ ಪುಸ್ತಕ ಚೆನ್ನಾಗಿ ಅಚ್ಚು ಮಾಡಿಸೋಣ. ಅವರು ನಿಮ್ಮನ್ನು ಸ್ವಲ್ಪ ಸತಾಯಿಸಬಹುದು. ಆದರೆ, ಬಿಡುಗಡೆ ಕಾರ್ಯಕ್ರಮದ ದಿನ ಬೆಳಿಗ್ಗೆ ಖಂಡಿತ ನಿಮ್ಮ ಪುಸ್ತಕದ ಪ್ರತಿಗಳು ಕೈಗೆ ಸಿಗುತ್ತವೆ. ಅದಕ್ಕೇ ನಾನೇ ಗ್ಯಾರಂಟಿ ಕೊಡುತ್ತೇನೆ!

    ಇರಲಿ ತಮಾಷೆ ಮಾಡಿದೆ!

    ನಿಮ್ಮ ಅಮೂಲ್ಯ ಅನುಭವಗಳನ್ನು ಇದೇ ರೀತಿ ದಾಖಲಿಸಿ, ಒಂದು ಅತ್ಯಮೂಲ್ಯ ಕೃತಿ ಹೊರಬರಲಿ.

    ಪ್ರತಿಕ್ರಿಯೆ
  4. Poorvi

    Sundara Baraha Krishnamurthyyavare . Nimminda mattashtu barahagalannu nireekshisutteve. Heege bareyuttiri.

    ಪ್ರತಿಕ್ರಿಯೆ
  5. R G Halli Nagarsj

    ಸ್ವಾನ್ ಪ್ರಿಂಟರ್ಸ್ ಅಂದರೆ ಸದಾ ನಗುಮೊಗದ ಕೃಷ್ಣಮೂರ್ತಿ ಕಣ್ಣೆದುರು ಬರ್ತಾರೆ. ಅತ್ಯುತ್ತಮ ಮುದ್ರಣಕ್ಕೆ ಅವರು ಹೆಸರುವಾಸಿ. ಕನ್ನಡದ ಬಹುತೇಕ ಉತ್ತಮ ಕೃತಿಗಳ ಮುದ್ರಕರು ಅವರು. ಈ ಕೃತಿಗಳಿಗೆ ಪ್ರಶಸ್ತಿಗಳೂ ಸಂದಿವೆ. ನಮ್ಮ‌ “ಅನ್ವೇಷಣೆ ಪ್ರಕಾಶನ”ದ ಅನೇಕ ಪುಸ್ತಕಗಳನ್ನು ಅವರು ಚೆನ್ನಾಗಿ ಮುದ್ರಿಸಿದ್ದಾರೆ.
    ಸ್ವಾನ್ ಕೃಷ್ಣಮೂರ್ತಿ ಒಬ್ಬ ಸಾಹಸಿ ಮುದ್ರಕರು. ಹೇಳಿದ ಸಮಯಕ್ಕೆ ಎಷ್ಟೇ ಕಷ್ಟವಾದರೂ ಅಚ್ಚುಕಟ್ಟಾಗಿ ಪುಸ್ತಕ ಮುದ್ರಣ ಮಾಡಿಕೊಡುವುದರಿಂದ ರಾಜ್ಯದ ಲೇಖಕರು, ಪ್ರಕಾಶಕರು, ಮಠಾಧೀಶರು ಅವರನ್ನು ಇಷ್ಟಪಡುತ್ತಾರೆ. ಅವರೊಬ್ಬ ಕಾಯಕ ಜೀವಿ.
    ಇಂಥ ಕೃಷ್ಣಮೂರ್ತಿ ಅವರಿಗೆ ಈ ದೇಶ ಗೌರವಿಸಿದ ಪ್ರಥಮಪ್ರಜೆ ರಾಷ್ಟ್ರಪತಿ ಎ.ಪಿ.ಜೆ ಕಲಾಂ ಅವರ ಆಶೀರ್ವಾದ ಆದ ಭೇಟಿಯ ಹಿಂದಿನ ಕತೆ ಕುತೂಹಲಕರವಾಗಿದೆ. ಕಲಾಂ ಅವರಿಂದ ಸನ್ಮಾನ ಭಾಗ್ಯ ತಪ್ಪಿದರೂ, ಅವರ ಮನದೊಳಕ್ಕೆ ಬರುವಂತೆ ಮಾಡಿದ ಸುತ್ತೂರು ಶ್ರೀಗಳ ಪಾತ್ರವೂ‌ ಪ್ರಮುಖ. ಗೊರುಚ, ಚಿಂದೋಡಿ ಲೀಲಾ ಅವರೂ ಸ್ಮರಣೀಯರು.
    ಕೃಷ್ಣಮೂರ್ತಿ ಅವರು ತಮ್ಮ ಮುದ್ರಣದ ಜಗತ್ತಿನ ಅನೇಕ ಸ್ವಾರಸ್ಯಗಳನ್ಮು ಬರೆಯಬಲ್ಲರು. ಮುಂದೆಯೂ ಬರೆಯುತ್ತಾ ಹೋಗಲಿ ಎಂದು ಆಶಿಸುವೆ.
    -ಆರ್ ಜಿ ಹಳ್ಳಿ ನಾಗರಾಜ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: