ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಾಡುತ್ತಾಳವಳು ಯಾರಿಗೂ ಕೇಳಬಾರದೆಂದೇ… – ಮಂಜುಳಾ ಹುಲಿಕುಂಟೆ

ಮಂಜುಳಾ ಹುಲಿಕುಂಟೆ

ಬದುಕು ಬಾಯಿ ಕಟ್ಟಿತ್ತು
ಬಾಗಿಲಾಚೆಯಷ್ಟೇ ಬೆಳಕಿತ್ತು
ಅವಳು ಮೂಲೆ ಮೂಲೆಯ ಕತ್ತಲ ಹುಡುಕಿ ಅಳುತ್ತಾ ಕೂರುವ ಹುಡುಗಿ
 
ನೋವಿಷ್ಟೇ, ಹೆಣ್ಣು ಹೆಣ್ಣಾಗಬಾರದು
ಎದೆಯ ಏರಿಳಿತಗಳೂ ಯಾರ ಕಣ್ಣಿಗೂ ಕಾಣಬಾರದು
ಬೇಟೆಕಣ್ಣುಗಳು ಭೋಗಿಸಿ ಬೀಗುವುದಕ್ಕೆ ಬೆಚ್ಚುವ ಹುಡುಗಿ
ನೋವಿತ್ತು ಒಡಲೊಳಗೆ
ಹೆಣ್ಣೆಂಬ ಕಿಚ್ಚು ಅವಳನ್ನೇ ಸುಟ್ಟಿ ಸುಖಿಸುತ್ತಿತ್ತು

ಅರೆ ಹಾಡುತ್ತಾಳವಳು
ಯಾರಿಗೂ ಕೇಳಬಾರದೆಂದೇ
ಸುತ್ತಿಕೊಂಡ ಸಂಬಂಧಗಳ
ಕಿತ್ತು ಹೊರಬರಲಾಗದೇ ಅಲ್ಲೇ ಕೊರಗುತ್ತಾಳೆ
ಬಾಳ ಚೆಂದದ ಹುಡುಗಿ
ಬಿಡುತ್ತಾರೆಯೇ ಹಸಿ ಮಾಂಸಕ್ಕೆ ಹಪಹಪಿಸುವ ಹದ್ದುಗಳು
 
ನೋವಿಷ್ಟೇ ಹೆಣ್ಣಾಗಬಾರದಿತ್ತು
ಅಪ್ಪ-ಅಮ್ಮ ಅಕ್ಕ-ತಮ್ಮಂದಿರ ಮಡಿವಂತಿಕೆಗೆ
ಇವಳು ಜೀವಂತ ಮಣ್ಣಾಗಿದ್ದಳು
ಬದುಕಿತ್ತು ಬರೀ ಬೆದರಿಕೆಗೆಂದಷ್ಟೇ
ಇಲ್ಲಿ ತನ್ನೆಲ್ಲಾ ಅಸ್ಮಿತೆಗಳ ಕಳೆದುಕೊಳ್ಳಲು ಹವಣಿಸುತ್ತಾಳೆ
ಅವಳು ಹೇಳುವುದಿಷ್ಟೇ
ನಾನೆಂದೂ ಕಥೆಯಾಗಬಾರದು
ನಾನೂ ಹೆಣ್ಣು ..
ಕೈ ನಡುಗುವಾಗ ಲೇಖನಿ ಹಿಡಿದು ನಡೆದವಳು
ಅವಳ ಕಥೆಯಲ್ಲಿ ಕಟ್ಟಿಡಲು
ಬಯಸುವುದಿಲ್ಲ ಆದರೂ
ಹಗಲು-ರಾತ್ರಿ ಅವಳ ಕರಾಳ ಬದುಕು ನನ್ನ ಕಾಡುತ್ತದೆ
ನೋವಿಷ್ಟೇ ಹೆಣ್ಣು ಹೆಣ್ಣಾಗಬಾರದು.
 

‍ಲೇಖಕರು G

28 April, 2015

3 Comments

  1. mavi

    ನಿಮ್ಮ ಮಾತುಗಳಲ್ಲಿ ಕೂಡಿರುವ ಜೀವನದಲ್ಲಿ ಅತಿತ ಆತಂಕಗಳ
    ಕೊಯ್ಯುವ ದುಃಕದ ದಿನಗಳ ಕಹಿ ಅನುಭವಗಳನ್ನು
    ಅತ್ಯಂತ ಅರ್ಥಗರ್ಭಿತವಾಗಿ ವರ್ಣಿಸಿರುವ ವಾಕ್ಯಮೇಳ
    ಅಮಿತ ಗಮನಾರ್ಹವಾಗಿ ವರ್ಸಿರುವ ಲೇಖನ. ಸ್ವೀಕರಿಸಿ ಶುಭಾಶಯಗಳನ್ನು.

  2. nataraj n

    You are deserve to be a writer please continue to do so, by the way it is a excellent poem.

  3. sahyadri nagaraj

    ಮಂಜುಳಾ, ಇಷ್ಟು ಚಂದ ಪದ್ಯ ಬರೀತೀರಿ ಅಂತ ಗೊತ್ತಿರಲಿಲ್ಲ. ಗುಡ್ 🙂 ಆದರೆ ಪದ್ಯದ ಕೊನೆಯ ನಾಲ್ಕನೇ ಸಾಲುಂಟಲ್ಲ (ಅವಳ ಕಥೆಯಲ್ಲಿ ಕಟ್ಟಿಡಲು), ಅದರಲ್ಲಿ ‘ಕಥೆಯನ್ನು’ ಅಂತಾಗಬೇಕಿತ್ತೇನೋ ಅಲ್ಲವಾ? ಅಥವಾ ನನಗೆ ಸರೀಗೆ ಅರ್ಥ ಆಗಿಲ್ಲವೋ ಎಂತೋ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading