ಧರ್ಮದ ಚೌಕಟ್ಟಿನಲ್ಲಿ ಅಗೋಚರ ಕ್ರೌರ್ಯ

ನಾ ದಿವಾಕರ

ಧರ್ಮ ರಕ್ಷಣೆಗಾಗಿ , ಸಮಾಜದಲ್ಲಿ ತಲೆದೋರುವ ಅಧರ್ಮದ ವಿನಾಶಕ್ಕಾಗಿ ಹಿಂಸೆ ಒಂದು ಅನಿವಾರ್ಯ ಮಾರ್ಗವಾದರೆ ಅನುಸರಿಸಲು ಅಡ್ಡಿಯಿಲ್ಲ ಇದು ಬಹುಶಃ ಎಲ್ಲ ಧರ್ಮಗಳಲ್ಲೂ ಕಂಡುಬರುವ ಒಂದು ಪಾರಂಪರಿಕ ಧೋರಣೆ. ಅಧರ್ಮ ತನ್ನೆಲ್ಲಾ ಪೈಶಾಚಿಕ ಬಾಹುಗಳನ್ನು ಎಲ್ಲೆಡೆ ವ್ಯಾಪಿಸಿ ಮಾನವ ಸಮಾಜವನ್ನು ಕಾಡುತ್ತಿರುವ ಸಂದರ್ಭದಲ್ಲಿ ಧರ್ಮ ಸಂಸ್ಥಾಪಕರು ಅವತರಿಸಿ ಶಾಂತಿಯ ನೆಲೆ ಸ್ಥಾಪಿಸಲು ಯತ್ನಿಸುವ ಪುರಾಣ ಕಥನಗಳು ಹಿಂದೂ , ಇಸ್ಲಾಂ, ಕ್ರೈಸ್ತ ಧರ್ಮಗಳ ಪುರಾಣಗಳಲ್ಲಿ ಹೇರಳವಾಗಿ ದೊರೆಯುತ್ತವೆ. ವಿನಾಶಕ್ಕೊಳಗಾಗುವ ಅಧರ್ಮದ ನೆಲೆಗಳು ಅಥವಾ ಧರ್ಮ ವಿರೋಧಿ ನೆಲೆಗಳನ್ನು ನಿರ್ಧರಿಸುವ ಮಾನದಂಡಗಳಾವುವು ಎಂದು ಯೋಚಿಸಿದಾಗ ಸ್ಥಾಪಿತ ವ್ಯವಸ್ಥೆಯ ಸ್ವಯಂ ಕಲ್ಪಿತ ಮೌಲ್ಯಗಳು ಎದುರಾಗುತ್ತವೆ. ಮಾನವ ಸಮಾಜ ಸೃಷ್ಟಿ, ಲಯ ಮತ್ತು ವಿನಾಶದ ರೂವಾರಿಗಳಾಗಿ ಜನಮಾನಸದಲ್ಲಿ ಧರ್ಮ ಸಂರಕ್ಷತೆಯ ಸಂಕೇತಗಳಾಗಿ ನೆಲೆ ಮಾಡಿರುವ ದೈವತ್ವದ ಪರಿಕಲ್ಪನೆಯೂ ಸಹ ಇದೇ ಮಾನದಂಡಗಳ ಮೂಲಕವೇ ನಿರ್ಧರಿಸಲ್ಪಡುತ್ತದೆ. ಹಾಗಾಗಿ ಮಾನವ ಸಮಾಜದಲ್ಲಿ ಸಹಜವಾಗಿ ಕಾಣುವ ಕ್ರೌರ್ಯ ಮತ್ತು ಹಿಂಸಾತ್ಮಕ ಧೋರಣೆಯನ್ನು ದೈವ ನಿಮರ್ಿತ ಧರ್ಮದ ಪರಿಕಲ್ಪನೆಯಲ್ಲಿ ಪರಾಮರ್ಶಿಸಲಾಗುತ್ತದೆ.

ಭಾರತೀಯ ಸಂಸ್ಕೃತಿಯನ್ನು ಧರ್ಮದ ನೆಲೆಗಟ್ಟಿನಲ್ಲಿ ವಿಶ್ಲೇಷಿಸುವಾಗ ಈ ಧೋರಣೆಯನ್ನು ನಮ್ಮ ಪುರಾಣ ಕಥನಗಳಲ್ಲಿ, ಧರ್ಮ ಗ್ರಂಥಗಳಲ್ಲಿ ಮತ್ತು ಆಧ್ಯಾತ್ಮದ ಚೌಕಟ್ಟಿನಲ್ಲಿ ಕಾಣಲು ಸಾಧ್ಯ. ದೈವ ಸೃಷ್ಟಿಯ ನಿಯಮಗಳನ್ನು ಪ್ರಮಾಣೀಕರಿಸಲು ಸೃಷ್ಟಿಸಲಾಗಿರುವ ದಶಾವತಾರಗಳ ಕಥನಗಳಲ್ಲಿ ಈ ಪ್ರಯತ್ನ ಮಾಡಲಾಗಿದೆ. ನರಮಾನವನ ನೆಲೆಯಾದ ಭೂ ಮಂಡಲದಲ್ಲಿ ದೈವೀ ಶಕ್ತಿಯ ಅವತಾರ ಆಗುವುದೇ ಯಾವುದೋ ಒಂದು ದುಷ್ಟ ಶಕ್ತಿಯ ಅಥವಾ ಧರ್ಮ ವಿರೋಧಿ ಶಕ್ತಿಯ ಸಂಹಾರಕ್ಕಾಗಿ ಎಂದು ಪುರಾಣಗಳು ನಿರೂಪಿಸುತ್ತವೆ. ಈ ದುಷ್ಟ ಶಕ್ತಿಗಳು ಸಹಜ ಸಾಮಾಜಿಕ ಪ್ರವೃತ್ತಿಯಾಗಿ ರೂಪುಗೊಳ್ಳದೆ ಒಂದು ನಿದರ್ಿಷ್ಟ ಆಯಾಮದಲ್ಲಿ ಸೃಷ್ಟಿಯಾಗಿ ಅಂತ್ಯಗೊಳ್ಳುತ್ತವೆ. ಅಂದರೆ ಮಾನವ ಸಮಾಜ ಇಂತಹ ಧರ್ಮ ವಿರೋಧಿ ಶಕ್ತಿಗಳನ್ನು ಬಯಸುವುದಿಲ್ಲ ಆದರೆ ಅನಿವಾರ್ಯವಾಗಿ ಸಹಿಸಿಕೊಳ್ಳಬೇಕಾಗುತ್ತದೆ , ಈ ಸಮಸ್ಯೆಯ ನಿವಾರಣೆಗೆ ದೈವೀ ಶಕ್ತಿಗಳ ಅವತಾರವೊಂದೇ ಮಾರ್ಗ ಎನ್ನುವ ಪರಂಪರೆಯನ್ನು ಪುರಾಣ ಕಥನಗಳಲ್ಲಿ ಕಾಣಬಹುದು. ಸ್ಥಾಪಿತ ಧರ್ಮ ಮತ್ತು ಧರ್ಮ ಕೇಂದ್ರಿತ ಅಧಿಪತ್ಯವನ್ನು ಪ್ರತಿರೋಧಿಸುವ ದನಿಗಳು ಸಹಜವಾಗಿಯೇ ದೈವ ವಿರೋಧಿ ನೆಲೆಯಲ್ಲಿ ಬಿಂಬಿಸಲ್ಪಡುತ್ತದೆ.

ಹಿರಣ್ಯ ಕಷಿಪುವಿನ ಪ್ರಭುತ್ವಕ್ಕೆ ಸಂವಾದಿಯಾಗಿ ನಿಂತು ಧಿಕ್ಕರಿಸುವ ಪ್ರಹ್ಲಾದ ತನ್ನ ದೈವೀಕ ಶಕ್ತಿಯಿಂದಲೇ ಜಯ ಗಳಿಸುತ್ತಾನೆ ಸದಾ ಪ್ರಭುತ್ವದ ಮತ್ತು ಸ್ಥಾಪಿತ ವ್ಯವಸ್ಥೆಯ ಸಂರಕ್ಷಣೆಗಾಗಿಯೇ ಟೊಂಕ ಕಟ್ಟಿ ನಿಲ್ಲುವ ಸಮಾಜದಲ್ಲಿ ಪ್ರಹ್ಲಾದ ಧರ್ಮ ರಕ್ಷಕನ ನೆಲೆಯಲ್ಲಿ ವಿಜೃಂಭಿಸುತ್ತಾನೆ. ತನ್ನ ಸ್ಥಾಪಿತ ವ್ಯವಸ್ಥೆಯ ಅಧಿಪತ್ಯವನ್ನು ರಕ್ಷಿಸಲು ಮುಂದಾಗುವ ಹಿರಣ್ಯ ಕಷಿಪು, ದೈವ ವಿರೋಧದ ನೆಲೆಯಲ್ಲಿ ಧರ್ಮ ವಿರೋಧಿಯಾಗಿ ರೂಪುಗೊಂಡು ಸಂಹರಿಸಲ್ಪಡುತ್ತಾನೆ. ಈ ಪುರಾಣ ಕಥನವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಹಿರಣ್ಯಕಷಿಪುವಿನ ಅಧಿಪತ್ಯ ರಕ್ಷಣೆಯ ಮಾರ್ಗಗಳಲ್ಲಿ ಕಾಣುವ ಕ್ರೌರ್ಯವನ್ನು ಹಿಂಸಾತ್ಮಕ ಧರ್ಮ ವಿರೋಧಿ ನೆಲೆಯಲ್ಲಿ ಬಿಂಬಿಸಲಾಗುತ್ತದೆ. ಪ್ರಹ್ಲಾದ ಧರ್ಮ ರಕ್ಷಣೆಯ ರೂಪಕವಾಗಿ ಕಂಡುಬರುತ್ತಾನೆ. ಹಾಗಾಗಿ ಧರ್ಮ ರಕ್ಷಣೆಗಾಗಿ ಹಿರಣ್ಯಕಷಿಪುವನ್ನು ಸಂಹರಿಸುವ ಮಹಾವಿಷ್ಣು ನರಸಿಂಹಾವತಾರದ ಮೂಲಕ ಮಾನವ ಸಮಾಜದಲ್ಲಿರಬಹುದಾದ, ಅಂತರ್ಗತವಾಗಿದ್ದರೂ ಅಗೋಚರವಾಗಿಯೇ ಇರುವ ಕ್ರೌರ್ಯದ ಒಂದು ಆಯಾಮವನ್ನು ಪ್ರದಶರ್ಿಸುತ್ತಾನೆ. ಇಡೀ ಕಥನದಲ್ಲಿ ಒಬ್ಬ ತಾಯಿಯಾಗಿ ತನ್ನ ಮಗುವನ್ನೇ ಹಲವು ಬಾರಿ ಸಾವಿನ ದವಡೆಯಲ್ಲಿ ಕಂಡು ನಲುಗುವ ಕಯಾದು ತನ್ನ ಕಣ್ಣೆದುರಿನಲ್ಲೇ ತನ್ನ ಪತಿಯ ಸಂಹಾರವಾಗುವುದನ್ನು ಸಹಿಸಿಕೊಳ್ಳುವುದನ್ನು ಕ್ರೌರ್ಯ ಎಂದು ಭಾವಿಸಲಾಗುವುದಿಲ್ಲ. ಸಮಕಾಲೀನ ಸಂದರ್ಭದಲ್ಲಿ ನಾವು ಕಾಣುತ್ತಿರುವ ಕೋಮು ಸಂಘರ್ಷ ಮತ್ತು ಮತೀಯ ದ್ವೇಷದ ಚೌಕಟ್ಟಿನಲ್ಲಿ ಇಂತಹ ಕಯಾದುಗಳು ಅನೇಕಾನೇಕ !
ಯಾವುದೇ ಧರ್ಮದಲ್ಲಿನ ಪೌರಾಣಿಕ ಕಥನಗಳನ್ನು ಮತ್ತು ಮಿಥ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕ್ರೌರ್ಯ ಮತ್ತು ಧರ್ಮ ಒಂದೇ ನಾಣ್ಯದ ಎರಡು ಮುಖಗಳಂತೆ ಕಾಣುತ್ತದೆ. ಜಾಣತನ ಎನ್ನುವುದು ನೀಚತನದ ಮತ್ತೊಂದು ಆಯಾಮ ಎಂದು ಹೇಳಲು ಧರ್ಮಸೂಕ್ಷ್ಮಗಳು ಸ್ಪಷ್ಟ ನಿದರ್ಶನ. ದೇವರು ತನ್ನ ಭಕ್ತರನ್ನು ಅತ್ಯಂತ ಕಠಿಣ ಅಗ್ನಿ ಪರೀಕ್ಷೆಗೆ ಒಳಪಡಿಸುವ ಮೂಲಕವೇ ಅವರಿಗೆ ಮೋಕ್ಷ ನೀಡುವ ಒಂದು ಪರಂಪರೆಯನ್ನು ಬಹುತೇಕ ಎಲ್ಲ ಪುರಾಣಗಳಲ್ಲೂ ಕಾಣಬಹುದು. ಇಲ್ಲಿ ದೇವರು ಅಥವಾ ದೈವತ್ವದ ಪರಿಕಲ್ಪನೆಯನ್ನು ಭಾವುಕ ನೆಲೆಯಲ್ಲಿ ಕಾಣುವಾಗ ಈ ಕ್ರೌರ್ಯ ಮತ್ತು ಅಮಾನವೀಯ ಮೌಲ್ಯಗಳು ಭಕ್ತಿಪರವಶತೆಯ ಗುಂಗಿನಲ್ಲಿ ಕಣ್ಮರೆಯಾಗುತ್ತವೆ. ಸಮಾಜದ ನೈತಿಕ ಮೌಲ್ಯಗಳನ್ನು ನಿರ್ಧರಿಸುವ ಪ್ರಭಾವಶಾಲಿ ಶಕ್ತಿಯೇ ಧರ್ಮಸೂಕ್ಷ್ಮಗಳನ್ನೂ ನಿರ್ಧರಿಸುವುದರಿಂದ, ಸ್ಥಾಪಿತ ಅಥವಾ ಸ್ವೀಕೃತ ಎನ್ನಬಹುದಾದ ಮೌಲ್ಯಗಳ ರಕ್ಷಣೆಗಾಗಿ ಹಿಂಸೆ, ಕ್ರೌರ್ಯ ಮತ್ತು ಅಸಹಿಷ್ಣುತೆಯನ್ನು ಸಹಿಸಿಕೊಳ್ಳುವ ವೇದಿಕೆಯನ್ನು ಸೃಷ್ಟಿಸಲಾಗುತ್ತದೆ. ಮೌಲ್ಯ ರಕ್ಷಣೆಗಾಗಿ ತನ್ನ ತಾಯಿಯ ಶಿರಸ್ಸನ್ನೇ ಕಡಿಯುವ ಪರಶುರಾಮ, ತನ್ನ ತಂದೆಯ ಸಂಹಾರವನ್ನೇ ಆಹ್ವಾನಿಸುವ ಪ್ರಹ್ಲಾದ ಇಲ್ಲಿ ನಿದರ್ಶನವಾಗಿ ನಿಲ್ಲುತ್ತಾರೆ.
ಧರ್ಮದ ಪರಿಕಲ್ಪನೆಯೇ ಒಂದು ಪ್ರಭಾವಶಾಲಿ ವ್ಯವಸ್ಥೆಯ ಹಿತರಕ್ಷಣೆಯ ಚೌಕಟ್ಟಿನಲ್ಲಿ ಮೂಡಿದಾಗ ಆ ಧರ್ಮದ ಚೌಕಟ್ಟಿನಲ್ಲಿ ನಿರ್ಧರಿತವಾಗುವ ಮೌಲ್ಯಗಳು ಪ್ರಶ್ನಾರ್ಹವಾಗುತ್ತವೆ. ಮಹಾಭಾರತದ ಪ್ರಸಂಗಗಳನ್ನೇ ಗಮನಿಸಿದಾಗ ಸೂತ ಪುತ್ರನೆಂದು ಅವಹೇಳನಕ್ಕೊಳಗಾಗುವ ಕರ್ಣ ತನ್ನೆಲ್ಲಾ ನಿಷ್ಠೆ, ಶ್ರದ್ಧೆ, ಬದ್ಧತೆ ಮತ್ತು ಶೌರ್ಯದ ನಡುವೆಯೇ ಧರ್ಮ ವಿರೋಧಿ ನೆಲೆಯಲ್ಲಿ ಅಪಮಾನಕ್ಕೊಳಗಾಗುತ್ತಾನೆ. ಮೋಸ, ಕಪಟ ಮಾರ್ಗಗಳಿಂದ ಹತ್ಯೆಗೊಳಗಾಗುತ್ತಾನೆ. ಶ್ರೀಕೃಷ್ಣನ ಸ್ಥಾಪಿತ ಧರ್ಮ ಮತ್ತು ಧಾಮರ್ಿಕ ಮೌಲ್ಯಗಳ ವ್ಯಾಪ್ತಿಯಲ್ಲಿ ಧುಯರ್ೋಧನ ಮತ್ತು ಕರ್ಣ ಇಬ್ಬರೂ ಸಮಾನ ನೆಲೆಯಲ್ಲಿ ನಿಲ್ಲುತ್ತಾರೆ. ಶಿಶುಪಾಲ , ದಂತವಕ್ರ, ಜರಾಸಂಧ ಮುಂತಾದವರೂ ಸ್ಥಾಪಿತ ವ್ಯವಸ್ಥೆಯನ್ನು ಪ್ರತಿರೋಧಿಸಿದ ತಪ್ಪಿಗೆ ಶಿಕ್ಷೆಗೊಳಗಾಗುತ್ತಾರೆ. ಇಲ್ಲಿ ಜನಸಮುದಾಯಗಳ ಅಭಿವ್ಯಕ್ತಿಗೆ ಕಿಂಚಿತ್ತೂ ಬೆಲೆ ಇಲ್ಲದಿರುವುದನ್ನು ಧರ್ಮ ಸೂಕ್ಷ್ಮದ ನೆಲೆಯಲ್ಲಿ ಗ್ರಹಿಸಬೇಕಾಗುತ್ತದೆ. ಹಾಗಾಗಿ ಶ್ರೀ ಕೃಷ್ಣ ಅನುಸರಿಸುವ ಶತ್ರು ಸಂಹಾರ ವಿಧಾನಗಳು ಉನ್ನತ ಮೌಲ್ಯಗಳಾಗುತ್ತವೆ. ಈ ಸಂಹಾರ ಮಾರ್ಗದ ಹಿನ್ನೆಲೆಯಲ್ಲಿರುವ ಕ್ರೌರ್ಯ ಸ್ವೀಕೃತ ಮೌಲ್ಯಗಳಾಗಿಬಿಡುತ್ತವೆ.
ಸಮಕಾಲೀನ ರಾಜಕಾರಣ ಮತ್ತು ಅಧಿಕಾರ ವ್ಯವಸ್ಥೆಯ ಸಂದರ್ಭದಲ್ಲಿ ಈ ಪೌರಾಣಿಕ ಮಿಥ್ಯೆಗಳನ್ನು ಅವಲೋಕಿಸಿದಾಗ ಕ್ರೌರ್ಯ ಎನ್ನುವುದು ಮಾನವ ಸಮಾಜ ತನ್ನ ಅಸ್ತಿತ್ವದ ಉಳಿವಿಗಾಗಿ ನಿರ್ಮಿಸಿಕೊಂಡಿರುವ ಒಂದು ಪ್ರಬಲ ಅಸ್ತ್ರ ಎಂದು ಅರಿವಾಗುತ್ತದೆ. ಹಾಗಾಗಿಯೇ ಎಂತಹ ಮಾನವೀಯ ಸಮಾಜವನ್ನು ಆರಾಧಿಸುವ ಜನಸಮುದಾಯಗಳೂ ಸಹ ಕ್ರೌರ್ಯದ ಪರಾಕಾಷ್ಠೆ ಎನ್ನಬಹುದಾದ ದೈವೀಕ ಶಕ್ತಿಗಳನ್ನು ಸಮಾನ ಭಕ್ತಿಯಿಂದ ಆರಾಧಿಸುತ್ತಾರೆ. ಕಾಳಿ, ಚಾಮುಂಡೇಶ್ವರಿ ಮುಂತಾದ ದೇವೀ ಸ್ವರೂಪಗಳು ಭಕ್ತಿಯ ಕೇಂದ್ರ ಬಿಂದುಗಳಾಗುತ್ತವೆ. ಮರ್ದನಕ್ಕೊಳಗಾದ, ಕ್ರೌರ್ಯಕ್ಕೊಳಗಾದ ಅಸುರ ಶಕ್ತಿಗಳು ಸಮಾಜದ ದೃಷ್ಟಿಯಲ್ಲಿ ಅಪಮೌಲ್ಯಕ್ಕೊಳಗಾಗುತ್ತವೆ. ಭಕ್ತಿ ಮತ್ತು ದೈವ ಶಕ್ತಿ, ದೈವ ನಂಬಿಕೆಗಳನ್ನು ಸ್ಥಾಪಿತ ಧರ್ಮದ ನೆಲೆಯಲ್ಲಿ ಗ್ರಹಿಸುವಾಗ ಇಂತಹ ಅಪಭ್ರಂಶಗಳು ಸಹಜವಾಗಿಯೇ ತಲೆದೋರುತ್ತವೆ. ಇದೇ ನಂಬಿಕೆಗಳನ್ನು ಮಾನವೀಯ ನೆಲೆಯಲ್ಲಿ ವಿಮರ್ಶೆಗೊಳಪಡಿಸಿ ಪರಾಮರ್ಶಿಸುವ ದಾಷ್ಟ್ರ್ಯತೆ ಮತ್ತು ಪ್ರಾಮಾಣಿಕತೆ ನಮ್ಮ ಸಮಾಜಕ್ಕೆ ಇದೆಯೇ ಎನ್ನುವುದು ಮೂರ್ತ ಪ್ರಶ್ನೆ.
 

‍ಲೇಖಕರು G

April 28, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: