ಹಾಗಿದ್ದರೆ ಕನ್ನಡ ಅಂಕೆಗಳನ್ನು ಎಲ್ಲಿ ಉಪಯೋಗಿಸಬೇಕು?

ಕನ್ನಡ ಅಂಕೆಗಳು:  ಎಲ್ಲಿ ಏನು?

ಕೆ.ವಿ. ತಿರುಮಲೇಶ್

 

ಕನ್ನಡ ಅಂಕೆಗಳನ್ನು ನಾವು ಮರೆಯಬಾರದು ನಿಜ, ಎಲ್ಲಿ ಸಾಧ್ಯವೋ ಅಲ್ಲೆಲ್ಲ ಅವುಗಳನ್ನು ಬಳಸಬೇಕು. ಕನ್ನಡ ಸಂಸ್ಕೃತಿಗೆ ಸೇರಿದವು ಅವು. ಅವುಗಳನ್ನು ನಾವು ಬಳಸದಿದ್ದರೆ ಇನ್ನು ಯಾರು ಬಳಸುತ್ತಾರೆ? ಯಾರೂ ಬಳಸದೆ ಇದ್ದಾಗ ಅವು ನಾಶವಾಗುತ್ತವೆ. ಹಾಗಾಗಬಾರದು.

ಆದರೆ ಇಲ್ಲಿ (ಮತ್ತು ಎಲ್ಲ ಕಡೆಯೂ) ನಾವು ಅಭಿಮಾನಿಗಳಾಗಿರುವುದರ ಜೊತೆಗೇ ವಿವೇಕಿಗಳಾಗಿರುವುದು ಒಳ್ಳೆಯದು. ಯಾವ ಅಂಕೆಗಳನ್ನು ಜನ ‘ಇಂಗ್ಲಿಷ್’ ಅಂಕೆಗಳೆಂದು ಕರೆಯುತ್ತಾರೋ—ವಾಸ್ತವದಲ್ಲಿ ಅವು ಇಂಗ್ಲಿಷ್ ಮೂಲದವು ಅಲ್ಲ, ಮೂಲ ಹುಡುಕಲು ಹೋಗಬೇಡಿ!– ಅವು (1, 2, 3 ಇತ್ಯಾದಿ) ಈಗ ನಮ್ಮದೇ ಆಗಿವೆ, ಅಲ್ಲದೆ ಕನ್ನಡದಲ್ಲಷ್ಟೆ ಅಲ್ಲ, ಜಾಗತಿಕವಾಗಿಯೂ ವ್ಯಾಪಕವಾಗಿ ಬಳಕೆಯಾಗುತ್ತಿವೆ.

ಡಿವಿಜಿಯವರು ಒಂದೆಡೆ (ಕನ್ನಡ ಲಿಪಿಯ ಸಂದರ್ಭದಲ್ಲಿ) ಹೇಳುವಂತೆ ರೂಢಿಯಲ್ಲಿ ಅಭ್ಯಾಸದ ಒಂದು ಸೌಲಭ್ಯವಿದೆ; ಅದು ಸಹಜವಾಗಿ ಬರುತ್ತದೆ. ರೂಢಿಯಿಂದ ನಮಗೇನೂ ಹಾನಿಯಿಲ್ಲವೆಂದಾದರೆ, ಅದನ್ನು ಉಳಿಸಿಕೊಳ್ಳುವುದೇ ಜಾಣತನ. ಇದು ಅಂಕೆಗಳ ಮಟ್ಟಿಗೂ ಸರಿ.

ನಮ್ಮ ಗಣಿತದಲ್ಲಿ ಮತ್ತು ವ್ಯಾವಹಾರಿಕ ಲೆಕ್ಕದಲ್ಲಿ ಈಗಿನ ಪದ್ಧತಿಯನ್ನೇ ಮುಂದುವರಿಸಿಕೊಂಡು ಹೋಗೋಣ. ಸರಕಾರಿ ದಫ್ತರಗಳಲ್ಲಾಗಲಿ, ವಾಹನಗಳ ಅಂಕಫಲಕಗಳಲ್ಲಾಗಲಿ ಇದೇ ಪದ್ಧತಿ ಇರಲಿ. ಇದರಿಂದ ಒಂದು ಏಕರೂಪತೆ ಬರುತ್ತದೆ, ಹಾಗೂ ಏಕರೂಪತೆ ವ್ಯಾವಹಾರಿಕವಾಗಿ ಒಳ್ಳೆಯದು. ಹಲವೆಡೆ ನಾವು ಹಲವು ಇಂಗ್ಲಿಷ್ ಹಾಗೂ ದೇಸಿ ಅಳತೆ ಪದ್ಧತಿಗಳನ್ನು ತೊರೆದು ಮೆಟ್ರಿಕ್ ಪದ್ಧತಿಯನ್ನು ಸ್ವೀಕರಿಸಿಕೊಂಡುದು ಇದೇ ಏಕರೂಪತೆಯ (ಮತ್ತು ಸರಳತೆಯ) ಅನುಕೂಲಕ್ಕಾಗಿಯೇ ಅಲ್ಲವೇ?

ಉದಾಹರಣೆಗೆ, ಮೈಲಿನಿಂದ ಕಿಲೋಮೀಟರಿಗೆ, ಪೌಂಡಿನಿಂದ ಕಿಲೋಗ್ರಾಮಿಗೆ. ಕೆಲವು ಕಡೆ, ಮುಖ್ಯವಾಗಿ ಜಾಗತಿಕ ನೆಲೆಯಲ್ಲಿ, ಏಕರೂಪತೆ ಬೇಕೇ ಬೇಕಾಗುತ್ತದೆ (ಉದಾ: ಸಮಯವನ್ನು ಗುರುತಿಸುವ ವಿಧಾನ): ಅದಿಲ್ಲದಾಗ ತೊಂದರೆ ಉಂಟಾಗುತ್ತದೆ.

ಈಗ ಡ್ರೈವಿಂಗಿನಲ್ಲಿ ಎಡ-ಬಲ ಇದ್ದು ಆಗುವ ಅನನುಕೂಲತೆಯನ್ನು ಗಮನಿಸಿದರೆ ನಮಗಿದು ಗೊತ್ತಾಗುತ್ತದೆ. (ಭಾರತದಿಂದ ಯೂಎಸ್ಎಗೆ ಹೋಗುವವರಿಗೆ ಅಥವಾ ಅಲ್ಲಿಂದ ಇಲ್ಲಿಗೆ ಬಂದವರಿಗೆ ಈ ಸಮಸ್ಯೆ ಗಂಭೀರವಾಗಿ ಎದುರಾಗುತ್ತದೆ. ಸದ್ಯ ವಿಮಾನ ಓಡಿಸುವುದರಲ್ಲಿ ಎಡ-ಬಲ ಇಲ್ಲ!)

ರೋಮನರು ಹಲವು ಕಾಲ ಅಕ್ಷರ ಸಂಜ್ಞೆಗಳನ್ನೇ ಅಂಕೆಗೂ ಉಪಯೋಗಿಸುತ್ತಿದ್ದರು. ಅದರಿಂದ ಅವರ ಸಂಖ್ಯಾಗಣಿತ ಮುಂದೆ ಸಾಗಲೇ ಇಲ್ಲ! ಕನ್ನಡದ ಮಟ್ಟಿಗೆ ಈ ಸಮಸ್ಯೆ ಇಲ್ಲ ನಿಜ. ಆದರೆ ರೂಢಿಯಲ್ಲಿರುವ ‘ಇಂಗ್ಲಿಷ್’ ಪದ್ಧತಿಯಿಂದ ಅಚ್ಚಕನ್ನಡಕ್ಕೆ ಬದಲಾಯಿಸುವುದು ಸರಳವಲ್ಲ. ಮುಖ್ಯವಾಗಿ ಜನ ಅದನ್ನು ಒಪ್ಪುವುದಿಲ್ಲ.

ಹಾಗಿದ್ದರೆ ಕನ್ನಡ ಅಂಕೆಗಳನ್ನು ಎಲ್ಲಿ ಉಪಯೋಗಿಸಬೇಕು? ನನಗೆ ಥಟ್ಟನೆ ಮನಸ್ಸಿಗೆ ಬರುವುದೆಂದರೆ ಕನ್ನಡ ಪುಸ್ತಕಗಳಲ್ಲಿ ಪುಟ ಸಂಖ್ಯೆ ನೀಡುವಾಗ ಕನ್ನಡ ಅಂಕೆಗಳನ್ನು ಉಪಯೋಗಿಸಬಹುದು; ಕನ್ನಡ ಓದು ಬರಹ ಬರುವವರಿಗೆ ಹೆಚ್ಚಾಗಿ ಕನ್ನಡದ ಅಂಕೆಗಳೂ ಬರುತ್ತವೆ. ಆದ ಕಾರಣ ಯಾರಿಗೂ ತೊಂದರೆಯಾಗುವುದಿಲ್ಲ; ಕನ್ನಡ ಅಂಕೆಗಳಿಗೂ ಒಂದು ಯೋಗ್ಯವಾದ ಸ್ಥಾನ ದೊರಕುತ್ತದೆ. ಇಂಥದೇ ಇನ್ನಿತರ ಜಾಗಗಳೂ ಇರಬಹುದು—ಆದರೆ ವಾಹನಗಳ ನೋಂದಣಿ ಸಂಖ್ಯೆ ಸರಿಯಾದ ಜಾಗವಲ್ಲ! ಕನ್ನಡ ಪತ್ರಿಕೆಗಳು ಕನ್ನಡ ಅಂಕೆಗಳನ್ನು ಬಳಸುವುದಕ್ಕೆ ತಯಾರಿವೆಯೇ ಯೋಚಿಸಿ ನೋಡಿ! ಹ್ಮ್!

(ರೋಮನ್ ಅಂಕೆ ಕೂಡ ಇಂದು ಬಳಕೆಯಾಗುವುದು ಸೀಮಿತ ಕ್ಷೇತ್ರಗಳಲ್ಲಿ ಮಾತ್ರ. ಪುಸ್ತಕಪ್ರಕಟಣೆಯ ಇಸವಿ, ಕೆಲವು ಗಡಿಯಾರಗಳಲ್ಲಿನ ಅಂಕೆಗಳು) ನನ್ನ ಮಾತಿನ ತಾತ್ಪರ್ಯ ಇಷ್ಟೇ: ನಮ್ಮ ಕನ್ನಡಾಭಿಮಾನದಿಂದ ಸಾರ್ವಜನಿಕರಿಗೆ—ಸ್ವತಃ ನಮಗೂ–ತೊಂದರೆಯಾಗಬಾರದು! ನಾವು ಏನನ್ನು ಕನ್ನಡಕ್ಕೆ ಸ್ವೀಕರಿಸುತ್ತೇವೆಯೋ ಅದನ್ನು ಕನ್ನಡ ಎಂದು ಮಾಡಿಕೊಂಡರೆ ಹಲವಾರು ಸಮಸ್ಯೆಗಳು ತಪ್ಪುತ್ತವೆ. (ಯು. ಆರ್. ಅನಂತಮೂರ್ತಿಯವರು ಹೇಳಿದ ಕನ್ನಡದ ಜೀರ್ಣಾಗ್ನಿಗೆ ಇದನ್ನೂ ಸೇರಿಸೋಣ.)

‍ಲೇಖಕರು avadhi

November 6, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Prabhakar M. Nmbargi

    ನಿಮ್ಮ ಸಲಹೆ ಮತ್ತು ಉದ್ದೇಶಗಳೆರಡೂ ಸಮಯೋಚಿತ ಮತ್ತು ಸೂಕ್ತವಿವೆ. ಆದರೆ, ಕನ್ನಡದವರಿದ್ದೂ ಅಧಿಕಾರಸ್ಥಾನದಲ್ಲಿರುವವರು ಕೂಡ ಕನ್ನಡದ ಅಂಕೆ ಸಂಖ್ಯೆಗಳ ಬದಲಿಗೆ ಇಂಗ್ಲೀಷಿನ ಅಂಕೆಗಳನ್ನು ಉಪಯೋಗಿಸಲು ಒತ್ತಾಯಿಸಿದರೆ ಏನು ಮಾಡುವುದು? ಇಂಗ್ಲೀಷಿನಿಂದ ಕನ್ನಡಕ್ಕೆ ಪುಸ್ತಕವನ್ನು ಅನುವಾದಿಸುವಾಗ ನ್ಯಾಷನಲ್‍ ಬುಕ್‍ ಟ್ರಸ್ಟ್‍ ದಿಲ್ಲಿಯವರು ಕನ್ನಡ ಅಂಕೆಗಳ ಬದಲಿಗೆ ಇಂಗ್ಲೀಷ್‍ ಅಂಕೆಗಳನ್ನೇ ಬಳಸಲು ಒತ್ತಾಯಿಸಿದಾಗ ನನಗೆ ಒಪ್ಪದಿರಲು ಸಾಧ್ಯವಾಗಲಿಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: