ಹಸಿರು ಪ್ರಕಾಶನ ಸ್ಥಗಿತವಾಗಿದೆ. ಅದಕ್ಕೆ ನಾನೇ ಕಾರಣ..

 

ಹಸಿರಿಗೆ ಬರ ಬಂದಾಗ..

k puttaswamy

ಕೆ ಪುಟ್ಟಸ್ವಾಮಿ 

ನನ್ನ ತಲಾ ಮೂರು ಪುಸ್ತಕಗಳನ್ನು ಹಾಗು ಹಲವರ ಪುಸ್ತಕಗಳನ್ನು ಪ್ರಕಟಿಸಿದ್ದ, ಹಸಿರು ಪ್ರಕಾಶನ ಮತ್ತು ನಳಂದ ಮಂಟಪ ಪ್ರಕಾಶನ ಸಂಸ್ಥೆಗಳು ವ್ಯವಹಾರವನ್ನು ಸ್ಥಗಿತಗೊಳಿಸಿವೆ.

ಅದಕ್ಕೆ ನಾನೇ ಕಾರಣ. ಅರ್ಥಾತ್ ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಪ್ರಕಟಣೆ ಇವುಗಳಿಂದ ಆಗಿಲ್ಲ. ನಾನೂ ಬರೆದಿಲ್ಲ. ಆಗಾಗ್ಗೆ ಕೆಲವರು ತಮ್ಮ ಪುಸ್ತಕ ಪ್ರಕಟಿಸಲು ಹಸಿರು ಪ್ರಕಾಶನಕ್ಕೆ ಶಿಫಾರಸು ಮಾಡಿ ಎಂದು ಹೇಳುತ್ತಾರೆ. ನನಗೆ ಸಾಧ್ಯವಾಗಿಲ್ಲ. ಈ ಸಮಯದಲ್ಲಿ ಹಸಿರು ಪ್ರಕಾಶನದ ಹಿಂದಿನ ಪ್ರೇರಣೆಯನ್ನು ಹಂಚಿಕೊಳ್ಳಲು ಅರ್ಹವೆಂಬ ಭಾವದಿಂದ ಈ ಬರೆಹ.

Jeev Sankulgal Ugam Bookನಾನು ಚಾರ್ಲ್ಸ್ ಡಾರ್ವಿನ್ ನ “ದಿ ಆರಿಗಿನ್ ಆಫ್ ಸ್ಪೀಶೀಸ್” ಕೃತಿಯನ್ನು ನಾಲ್ಕು ಸುದೀರ್ಘ ವರ್ಷಗಳಲ್ಲಿ ಅನುವಾದ ಮಾಡಿದ ನಂತರ 1988ರಿಂದ ಪ್ರಕಟಣೆಗೆ ಪ್ರಕಾಶಕರಿಗಾಗಿ ಹುಡುಕಾಡುತ್ತಿದ್ದೆ. ಹಿಂದೆ ಈಗಿನ ಹಾಗೆ ಹೆಚ್ಚು ಪ್ರಕಾಶಕರಿರಲಿಲ್ಲ. ಗ್ರಂಥಾಲಯ ಇಲಾಖೆ ಕೂಡ ಈಗಿನಷ್ಟು ಪೊಗದಸ್ತಾಗಿರಲಿಲ್ಲ. ಪ್ರಸಿದ್ಧಿಯಾದವರ, ಬೇಡಿಕೆಯಿದ್ದವರ ಪುಸ್ತಕಗಳಿಗೆ ಪ್ರಕಾಶಕರು ದೊರೆಯುತ್ತಿದ್ದರು. ಅದರಲ್ಲೂ ಹೊಸಬರ ವಿಜ್ಞಾನ ಸಾಹಿತ್ಯವನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಇದ್ದುದರಲ್ಲಿ ನವಕರ್ನಾಟಕ ಪ್ರಕಾಶನ ವಾಸಿಯೆನಿಸಿತ್ತು. ಸಪ್ನ ಪುಸ್ತಕ ಆಗತಾನೆ ಗುಪ್ತ ಮಾರ್ಕೆಟ್ ನಿಂದ ವಿಸ್ತರಣೆಯಾಗುತ್ತಿತ್ತು.

ನವಕರ್ನಾಟಕಕ್ಕೆ ಎಡೆತಾಕಿದಾಗ ಪ್ರೋತ್ಸಾಹದ ಮಾತುಗಳನ್ನಾಡಿದರು ಸಹ ತಮ್ಮ ಅಸಹಾಯಕತೆ ತೋರಿಸಿದರು. ಕೆಲವು ಸ್ನೇಹಿತರು ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ದಾರಿ ತೋರಿಸಿದರು. ಅಲ್ಲಿ ವಿಚಾರಿಸಿದರೆ ಇನ್ನೂ ನಾಲ್ಕು ವರ್ಷಗಳಿಗಾಗುವಷ್ಟು ಪ್ರಕಟಣೆಗೆ ಸಿದ್ಧವಾದ ಪುಸ್ತಕಗಳಿರುವುದಾಗಿ ಹೇಳಿದರು. ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗಕ್ಕೆ ಪತ್ರ ಬರೆದು ಈಥರಕ್ಕೀತರ ಇದೆ ಏನಾದ್ರೂ ಪ್ರಕಟಿಸಬಹುದೇ ಎಂದು ಕೋರಿದೆ. ಉತ್ತರವೂ ಬರಲಿಲ್ಲ. ಸ್ವಂತ ಪ್ರಕಟಣೆಯೇ ಅತ್ಯುತ್ತಮ ಮಾರ್ಗವೆಂಬುದು ಮನವರಿಕೆಯಾಯಿತು. ಅಷ್ಟು ಹಣವಿರಲಿಲ್ಲ.

ನನ್ನ ಅಸಹಾಯಕತೆಯನ್ನು ನೋಡಿದ ಹಿರಿಯ ಗೆಳೆಯ ಮತ್ತು ಕಲಾವಿದ ಕೆ.ಟಿ. ಶಿವಪ್ರಸಾದ್ ನಾನೊಂದು ಹತ್ತು ಸಾವಿರ ಕೊಡುತ್ತೇನೆ ಪ್ರಕಟಣೆಗೆ ಏರ್ಪಾಡು ಮಾಡಿಕೋ ಎಂದರು. ಹಾಗೆಯೇ ಗೆಳೆಯರಾದ ಕೃಪಾಕರ ಸೇನಾನಿ ಹದಿನೈದು ಸಾವಿರ ಕೊಟ್ಟರು. ನನ್ನ ಹೆಂಡತಿ ಒಡವೆ ಅಡವಿಟ್ಟು 15 ಸಾವಿರ ಹೊಂದಿಸಿದಳು. ಪ್ರಕಾಶನವನ್ನು ದೊಡ್ಡ ರೀತಿಯಲ್ಲಿ ಆರಂಭಿಸುವ ಉಮೇದು. ಪ್ರಕಟಣೆಯಲ್ಲಿ ಕೃಪಾಕರ ಜೊತೆಯಾದರು.

ಅವರ ಹೆಸರಿನಲ್ಲಿಯೇ ಬ್ಯಾಂಕ್ ಖಾತೆ ಆರಂಭವಾಯಿತು. ವ್ಯವಹಾರ ಜ್ಞಾನವಿಲ್ಲದ ನಾವು ಎರಡು ಸಾವಿರ ಪ್ರತಿಗಳಿಗೆ ಉತ್ಪಾದನಾ ವೆಚ್ಚ ಕೇಳಿದಾಗ ತಲೆಸುತ್ತು ಬಂತು. ಆಗ ಸಂಪೂರ್ಣ ಪಠ್ಯವಿದ್ದ ಜೀವ ಸಂಕುಲಗಳ ಉಗಮ ಸುಮಾರು 500 ಪುಟಗಳಿಗೂ ಮೀರಿತ್ತು. ಎರಡು ಸಾವಿರ ಪ್ರತಿಗಳಿಗೆ ಒಂದೂವರೆ ಲಕ್ಷ ಮೀರಿದ ಅಂದಾಜು ನೀಡಿದರು. ಆಗ ಹೊಳೆದದ್ದು ಅದನ್ನು ಸಂಕ್ಷಿಪ್ತಗೊಳಿಸುವ ಉಪಾಯ. ಮೂರು ತಿಂಗಳ ನಿರಂತರ ಶ್ರಮದಿಂದ ಕೊನೆಗೆ ಅದು 210 ಪುಟಗಳಿಗೆ ಬಂದು ನಿಂತಿತು.

ಆಗ ಪ್ರಕಾಶನ ಸಂಸ್ಥೆಗೆ ಹೆಸರಿಡುವ ವಿಷಯ ಚರ್ಚೆಗೆ ಬಂತು. ರೈತ ಸಂಘದ ಒಡನಾಟವಿದ್ದ ಕಾಲವದು. ಕೆ. ಟಿ. ಶಿವಪ್ರಸಾದ ಲೇ ಪುಟ್ಟ(ಈಗಲೂ ಹಾಗೆಯೇ ಕರೆಯುವುದು) ಹಸಿರು ಪ್ರಕಾಶನ ಅಂತಿಡು ಎಂದರು. ಹಾಗೆ ನಾಮಕರಣವಾಯಿತು. ಗೆಳೆಯ ಕಲಾವಿದ ರಾ. ಸೂರಿ ರಕ್ಷಾಪುಟ ವಿನ್ಯಾಸ ಮಾಡಿದ.Jeevajal book

ಮುಖಪುಟದ ಚಿತ್ರಕ್ಕೆ ಕೃಪಾಕರ ಸೇನಾನಿ ತಾವು ತೆಗಿದಿದ್ದ ಆಕ್ರಮಣ ಮಾಡುತ್ತಿರುವ ಆನೆಯ ಅಪರೂಪದ ಚಿತ್ರ ಕೊಟ್ಟರು. ಬೆನ್ನು ಪುಟದಲ್ಲಿ ಡಾರ್ವಿನ್ ಜೊತೆ ಅಚ್ಚಾಗಿರುವ ನನ್ನ ಚಿತ್ರವನ್ನು ಸೇನಾನಿಯೇ ತೆಗೆದರು. ಮುದ್ರಕ ನಾರಾಯಣ್ ಪುಸ್ತಕವನ್ನು ಮುತುವರ್ಜಿಯಿಂದ ಮುದ್ರಿಸಿಕೊಟ್ಟರು.

ಆ ಕಾಲಕ್ಕೆ ಮುಖಪುಟ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅದೊಂದು ಆವಂತೆ ಗಾರ್ಡ್ ಶೈಲಿಯ ವಿನ್ಯಾಸ. ಕೃಪಾಕರ ಸೇನಾನಿ ಮತ್ತು ಶಿವಪ್ರಸಾದರ ಒತ್ತಾಯಕ್ಕೆ ಮಣಿದು ಪೂರ್ಣಚಂದ್ರ ತೇಜಸ್ವಿಯವರು ಪುಸ್ತಕ ಬಿಡುಗಡೆಗೆ ಒಪ್ಪಿಕೊಂಡರು, ಒಂದು ಷರತ್ತಿಗೊಳಪಟ್ಟು. ಅದೆಂದರೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಚಿಕ್ಕಮಗಳೂರಿನಲ್ಲಾದರೆ ಮಾತ್ರ ಬರುತ್ತೇನೆಂದು ಹೇಳಿದ್ದರು.

ಈ ಬೆಂಗಳೂರಿನವರಿಗೆ ರಾಜಧಾನಿ ಹೊರತು ಪಡಿಸಿ ಬೇರೆ ಬರುವುದಿಲ್ಲ, ಸಮಾರಂಭಕ್ಕೆ ಹೋಗುವುದು ತಪ್ಪುತ್ತದೆಯೆಂದು ಭಾವಸಿದ್ದರೋ ಎನೋ? ಸರಿ ಒಪ್ಪಿಕೊಂಡಿದ್ದಾಯಿತು. ವರ್ಷಕಾಲ ಚಿಕ್ಕಮಗಳೂರಿನಲ್ಲಿ ಪ್ರಜಾವಾಣಿ ಪತ್ರಿಕೆಯ ವರದಿಗಾರನಾಗಿದ್ದ ನನಗೆ ಅಲ್ಲಿಯೂ ಬಳಗವಿತ್ತು. ಪತ್ರಕರ್ತ ಶ್ರೀ ಗಿರಿಜಾಶಂಕರ್ ಅವರು ತಮ್ಮ ಅರಿವು ವೇದಿಕೆಯಡಿಯಲ್ಲಿ ಸಮಾರಂಭ ಸಂಘಟಿಸಿದರು.

ಬೆಂಗಳೂರಿನಿಂದ ಹಿಂದಿನ ರಾತ್ರಿ ಬರುವ ಅತಿಥಿಗಳಿಗೆ ವಸಂತ ವಿಹಾರದಲ್ಲಿ ವಾಸ್ತವ್ಯಕ್ಕೆ ಏರ್ಪಾಡು ಮಾಡಿದ್ದರು. ತೇಜಸ್ವಿಯವರ ಕೈಯಿಂದ ಬಿಡುಗಡೆಯ ಭಾಗ್ಯ ಕಂಡ ಪುಸ್ತಕವನ್ನು ಮಾರುವ ವಿಷಯಕ್ಕೆ ಬಂದಾಗ ಭಯವಾಯಿತು.

ಪುಸ್ತಕದ ಅಂಗಡಿಗೆ ಹೋದಾಗ ಶೇ. 40ರ ರಿಯಾಯ್ತಿಯಲ್ಲಿ ಎರಡರಿಂದ 5 ಪ್ರತಿ ಕೊಳ್ಳುತ್ತಿದ್ದರು. ಕೆಲವರಂತೂ ಕನ್ನಡ ಲೇಖಕನ ಮುನ್ನೂರು ಪ್ರತಿಗಳನ್ನು ಜನ ಸ್ವಯಿಚ್ಛೆಯಿಂದ ಕೊಂಡು ಓದಿದರೆ ಅದೇ ಬೆಸ್ಟ್ ಸೆಲರ್ ಎಂದರು. ಭೈರಪ್ಪ, ಕಾರಂತ, ಕುವೆಂಪು, ಲಂಕೇಶ್, ತೇಜಸ್ವಿಯವರನ್ನು ಹೊರತುಪಡಿಸಿದರೆ ಯಾರ ಪುಸ್ತಕವೂ ’ಮೂವ್’ ಆಗಲ್ಲ ಎಂದರು.

ಆಗ ವಿಶೇಷ ಯೋಜನೆಯಡಿ ಡಿ.ಎಸ್.ಆರ್.ಟಿ ಸಂಸ್ಥೆ ವಿಜ್ಞಾನದ ಪುಸ್ತಕಗಳನ್ನು ಕೊಳ್ಳುತ್ತದೆ, ಸಂಪರ್ಕಿಸಿ ಎಂದು ಸಲಹೆ ನೀಡಿದರು. ಅದೇ ವೇಳೆ ಡಿ.ಎಸ್.ಆರ್.ಟಿ ಸಂಸ್ಥೆಯ ನಿರ್ದೇಶಕ ಶ್ರೀ ಅಚ್ಚ್ಯುತರಾವ್ ಅವರನ್ನು ಸಂಪರ್ಕಿಸಿದಾಗ ಪುಸ್ತಕದ ಮುಖಪುಟ ಬೆನ್ನಿನ ಮೇಲೆ ಕಣ್ಣಾಡಿಸಿ ಒಂದೆರಡು ಪುಟಗಳ ಒಂದೆರಡು ಪ್ಯಾರ ಓದಿ ತಮ್ಮ ಸಹಾಯಕನ್ನು ಕರೆದು ಪ್ರತಿ ಹೈಸ್ಕೂಲಿಗೆ ಎರಡು ಪ್ರತಿ ಹಾಕಿ ಎಂದು ಸೂಚಿಸಿದರು. ಸುಮಾರು ಎಂಟುನೂರು ಹೈಸ್ಕೂಲು ಮತ್ತು ಜೂನಿಯರ್ ಕಾಲೇಜಿಗೆ ತಲುಪಿಸಬೇಕಿತ್ತು.

Awardಸಾವಿರದ ಏಳುನೂರು ಪ್ರತಿಗಳು ಹಾಗೆಯೇ ವಿತರಣೆಯಾದವು. ಅದೇ ವೇಳೆ ಅದೇನಾಯಿತೋ ಎನೋ ಪ್ರಜಾವಾಣಿಯಲ್ಲಿ ವಿಮರ್ಶೆ ಬಂದ ನಂತರ ಮಾರಾಟಕ್ಕೆ ಚಾಲನೆ ಸಿಕ್ಕಿತು. ಬೇಡಿಕೆ ಮೇಲೆ ಬೇಡಿಕೆ. ಸಪ್ನ ಪುಸ್ತಕ 250 ಪ್ರತಿಗಳನ್ನು ಮಾರಾಟ ಮಾಡಿದರೆ ಅದಕ್ಕಿಂತ ಸ್ವಲ್ಪ ಕಡಿಮೆ ಸಂಖ್ಯೆ ಪ್ರತಿಗಳು ನವಕರ್ನಾಟಕದಲ್ಲಿ ಮಾರಾಟವಾದವು. ಅನೇಕ ಪುಸ್ತಕ ಅಂಗಡಿಗಳು ವಿತರಕರು ಪತ್ರ ಹಾಕಿ ತರಿಸಿಕೊಂಡರು.

1991ರ ಸೆಪ್ಟೆಂಬರ್ ನಲ್ಲಿ ಮೊದಲ ಮುದ್ರಣ ಕಂಡ ಜೀವ ಸಂಕುಲಗಳ ಉಗಮ ಎರಡು ತಿಂಗಳಲ್ಲಿ ಅಂದರೆ ನವೆಂಬರ್ ತಿಂಗಳಲ್ಲಿ ಎರಡನೇ ಮುದ್ರಣ ಕಂಡಿತು. ಮತ್ತೆ ಎರಡು ಸಾವಿರ ಪ್ರತಿಗಳು. 1992ರ ಏಪ್ರಿಲ್ ನಲ್ಲಿ ಮತ್ತೆ ಒಂದು ಸಾವಿರ ಪ್ರತಿಗಳ ಮೂರನೇ ಮುದ್ರಣ ಕಂಡಿತು. ವಿಚಿತ್ರವೆಂದರೆ ಕನ್ನಡದ ಉದ್ಧಾಮ ಸಾಹಿತಿಗಳು ಅಧ್ಯಕ್ಷರು, ಸದಸ್ಯರಾಗಿದ್ದ ಗ್ರಂಥಾಲಯ ಆಯ್ಕೆ ಸಮಿತಿ ಮೊದಲ ಸುತ್ತಿನಲ್ಲಿ ಇದನ್ನು ಆಯ್ಕೆ ಮಾಡಲಿಲ್ಲ.

ಕನ್ನಡ ಸಾಹಿತ್ಯ ಪರಿಷತ್ತು ತನ್ನ ‘ಶತಮಾನದ ನೂರು ಪುಸ್ತಕ’ ಯೋಜನೆಯಡಿ ಮರುಮುದ್ರಣಕ್ಕೆ ತೆಗೆದುಕೊಂಡಿದೆ. ಸಂಭಾವನೆಯನ್ನು ಕೊಟ್ಟಿದೆ. ಮುದ್ರಣ ಭಾಗ್ಯ ಇನ್ನೂ ಸಿಕ್ಕಿಲ್ಲ.! ಹೀಗೆ ಹಸಿರು ಪ್ರಕಾಶನ ಆರಂಭಗೊಂಡರೂ ಮತ್ತೆ 1999ರಲ್ಲಿ ನಾನು ಕೃಪಾಕರ ಸೇನಾನಿಯವರು ಸೇರಿ ಬರೆದ ಜೀವಜಾಲ ಪ್ರಕಟವಾಯಿತು. ಅದು ಸಹ ಎರಡನೇ ಮುದ್ರಣಕ್ಕೆ ಬೇಗನೆ ಬಂತು. 2005ರಲ್ಲಿ ಏಳನೇ ಮುದ್ರಣ ಕಂಡಿದೆ. ಮೊದಲ ಎರಡು ಆವೃತ್ತಿಯನ್ನು ಹಸಿರು ಪ್ರಕಾಶನವೇ ಮುದ್ರಿಸಿದರೆ ಉಳಿದ ಆವೃತ್ತಿಗಳನ್ನು ಅಭಿನವ ಪ್ರಟಿಸಿದೆ.

ಇದು 1999ರ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಮತ್ತು ನನಗೆ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ದೊರೆಯಲು ಕಾರಣವಾಯಿತು. ಇದಲ್ಲದೆ ಗೆಳೆಯ ಆರ್. ರಾಮಮೂರ್ತಿಯವರ ಬೆಳಕ ಬೇಟೆಗಾರ ಕವನ ಸಂಗ್ರಹ, ಎನ್ ಲಿಂಗಯ್ಯ ಅವರ ನಾಗಸಂಪಿಗೆ, ಡಿ.ಎಸ್. ನಾಗಭೂಷಣ್ ಅವರ ಇಲ್ಲಿ ಯಾವುದೂ ಅಮುಖ್ಯವಲ್ಲ, ಕೃತಿಗಳ ಪ್ರಕಟಣೆಯನ್ನೂ ಹಸಿರು ಪ್ರಕಾಶನ ಮಾಡಿದೆ. ಇದರ ಜೊತೆಯಲ್ಲಿ ಡಾ. ಜೆ ಬಾಲಕೃಷ್ಣ ಅವರ ನೀನೆಂಬ ನಾನು, ಡಾ. ಎಂ ಎಸ್ ಶೇಖರ್ ಅವರ ಜನಪದ ಜಾದೂಗಾರ, ಅನಂತನಾಗ್ ಅವರ ನನ್ನ ತಮ್ಮ ಶಂಕರ (ಅಕಾಡೆಮಿ ಪ್ರಶಸ್ತಿ ಲಭಿಸಿದೆ) ಯಲ್ಲಪ್ಪ ರೆಡ್ಡಿಯವರ ಅರಸು ಯುಗದ ಅರಣ್ಯಪರ್ವ ಕೃತಿಗಳೂ ಹೊರಬಂದಿವೆ. 

Book main pageಮತ್ತೆ 2009ರಲ್ಲಿ ಸಿನಿಮಾಯಾನ ಪ್ರಕಟಣೆಯ ಮೂಲಕ ಮುಂಚೂಣಿಗೆ ಬಂತು. ಆ ವೇಳೆಗೆ ಕಾಡಿನ ತಮ್ಮ ಅಲೆದಾಟ, ಚಿತ್ರೀಕರಣ, ವಿದೇಶ ಯಾತ್ರೆಗಳಲ್ಲಿ ಸಕ್ರಿಯರಾಗಿದ್ದ ಕೃಪಾಕರ್ ಅವರ ಬದಲಿಗೆ ನಮ್ಮ ಬಂಧುವೇ ಆದ ಶ್ರೀಮತಿ ಸುಮನ್ ಕೃಷ್ಣಪ್ಪ ಅವರ ಹೆಸರಿಗೆ ವ್ಯವಹಾರ ವರ್ಗಾವಣೆಯಾಯಿತು. ಸಿನೇಮಾಯಾನ ಕೃತಿಯು ರಾಷ್ಟ್ರಪತಿಯವರ ಸ್ವರ್ಣಕಮಲ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ, ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಸೊಗಸು ಪ್ರಥಮ ಬಹುಮಾನ ಪಡೆಯಿತು. ಸಿನೆಮಾಯಾನದ ಎರಡು ಮುದ್ರಣ ಮುಗಿದು ಮೂರನೆಯ ಮುದ್ರಣಕ್ಕೆ ಸಿದ್ಧವಾಗುತ್ತಿರುವಾಗ ಸಂಸ್ಥೆಯನ್ನು ಸ್ಥಗಿತಗೊಳಿಸಿದ್ದೇನೆ.

ಇದು ನನ್ನದೇ ಕೂಸಾದರೂ ತಾಂತ್ರಿಕ ಕಾರಣಗಳಿಗಾಗಿ ಬೇರೆಯವರನ್ನು ಅವಲಂಬಿಸಬೇಕಿದೆ. ಆದಾಯ ತೆರಿಗೆಯ ನಿಯಮಗಳು ಈಗ ಕಠಿಣವಾಗಿವೆ. ಲೆಕ್ಕ ಪತ್ರವನ್ನು ಸರಿಯಾಗಿ ನಿರ್ವಹಿಸುವುದು ಕಷ್ಟವಾದ ಕೆಲಸ. ಯಾರೋ ಪುಣ್ಯಾತ್ಮರು ಈ ಕೃತಿಯ ಪ್ರತಿಗಳನ್ನು ಗ್ರಂಥಾಲಯ ಇಲಾಖೆಗೆ ಸರಬರಾಜು ಮಾಡಿದ ಕಾರಣ ಅವರ ವಿರುದ್ಧ ಹೂಡಿರುವ ಮೊಕದ್ದಮೆಯಲ್ಲಿ ನಮ್ಮ ಬೆಂಬಲಕ್ಕೆ ನಿಂತವರು ಕೋರ್ಟು ಕಛೇರಿ ಅಲೆಯುವ ಸ್ಥಿತಿ ಬಂದಿದೆ. ನಮಗೆ ಬೆಂಬಲ ನೀಡಿರುವವರಿಗೆ ತೊಂದರೆ ನೀಡಬಾರದೆಂದು ಹಸಿರು ಪ್ರಕಾಶನವನ್ನು ಸ್ಥಗಿತಗೊಳಿಸಿದ್ದೇನೆ.

ಈ ಸಂದರ್ಭದಲ್ಲಿ ನನಗೆ ನಿರಂತರ ನೆರವು, ಬೆಂಬಲ, ಮಾರ್ಗದರ್ಶನ ನೀಡಿದ ಕೃಪಾಕರ ಸೇನಾನಿ, ಕೆ. ಟಿ.ಶಿವಪ್ರಸಾದ್, ರಾ. ಸೂರಿ, ರಾಮಾನಾಯಕ್, ತ್ಯಾಗರಾಜು, ಟಿ.ವಿ., ಗಿರಿಜಾಶಂಕರ್, ಡಾ. ರವಿಕಾಂತೇ ಗೌಡ, ಎನ್.ಎಸ್. ಶಂಕರ, ಬಸವರಾಜು, ಸುಮನ್ ಕೃಷ್ಣಪ್ಪ ಮೊದಲಾದವರು ಹಾಗೂ ಓದುಗ ಬಂಧುಗಳನ್ನು ಕೃತಜ್ಞತೆಯಿಂದ ನೆನೆಯುತ್ತೇನೆ.

‍ಲೇಖಕರು admin

July 15, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: