ಚಿಕ್ ಚಿಕ್ ಸಂಗತಿ: ಆ 80 ರೂಪಾಯಿ..

ಜಿ ಎನ್ ಮೋಹನ್ 

ಎಲ್ಲಾ ಸರಿಯಾಗಿಯೇ ಇತ್ತು
ಎಲ್ಲ ಅಂದರೆ ಎಲ್ಲವೂ..
ಹಕ್ಕಿಗಳು ಸರಿಯಾದ ದಿಕ್ಕಿನಲ್ಲಿಯೇ ರೆಕ್ಕೆ ಬೀಸುತ್ತಾ ಹಾರುತ್ತಿದ್ದವು, ಹಿಮ ಪರ್ವತಗಳು ಎಷ್ಟು ಮಂಜು ಹೊತ್ತು ನಿಲ್ಲಬೇಕೋ ಅಷ್ಟೇ ಮಂಜು ಹೊದ್ದುಕೊಂಡಿದ್ದವು 

ಹೊದ್ದಿದ್ದ ಶಾಲಿನಲ್ಲಿ ಎಷ್ಟಿರಬೇಕೋ ಅಷ್ಟೇ ಕುಸುರಿ ಕೆಲಸವಿತ್ತು
ತೊಟ್ಟಿದ್ದ ಸ್ವೆಟರ್ ಯಾವ ಭಾಗಗಳನ್ನು ಬೆಚ್ಚಗಿಡಬೇಕೋ ಅಷ್ಟನ್ನೇ ಬೆಚ್ಚಗಿಟ್ಟಿದ್ದವು
ಸನಿಹದ ಕೊಳ ಎಷ್ಟು ಬೇಕೋ ಅಷ್ಟೇ ಜುಳು ಜುಳು ಸದ್ದು ಮಾಡುತ್ತಿತ್ತು

sweetiಆಗಲೇ ಆಕೆಯ ಕಣ್ಣಿನಲ್ಲಿ ನೀರು ಜಿನುಗಿದ್ದು
ದುಪಟ್ಟಾದಲ್ಲಿ ತಕ್ಷಣವೇ ಆಕೆ ಕಣ್ಣು ಒತ್ತಿಕೊಂಡಳು
ಸ್ವಲ್ಪ ಹೊತ್ತು ಅಷ್ಟೇ ಭಿಕ್ಕಲು ಶುರು ಮಾಡಿದಳು
ಉಹುಂ ಅಲ್ಲಿಗೆ ನಿಲ್ಲಲಿಲ್ಲ
ಜೋರಾಗಿ ದನಿ ತೆಗೆದು ಅಳಲು ಶುರು ಮಾಡಿದಳು

ಅದು ಹೇಳಿ ಕೇಳಿ ನಾಲ್ಕು ಜನ ಕೂಡುವ ರಸ್ತೆ
ಏನಾಯಿತೋ ಎಂದು ಎಲ್ಲರೂ ಓಡೋಡಿ ಬಂದರು
ಬಸ್ ನಲ್ಲಿದ್ದ ಪ್ರಯಾಣಿಕರು, ಆಗ ತಾನೇ ಮೆಟಡಾರ್ ಹತ್ತುತ್ತಿದ್ದ ಕುಟುಂಬ, ರೈಟ್ ಅಂದು ಸೀಟಿ ಊದಿದ್ದ ಕಂಡಕ್ಟರ್, ಇನ್ನೇನು ಸ್ಟೀರಿಂಗ್ ತಿರುಗಿಸಲು ಸಜ್ಜಾಗಿದ್ದ ಹುಡುಗ…
ಎಲ್ಲರೂ ಎಲ್ಲವನ್ನೂ ಅಲ್ಲಲ್ಲೇ ಬಿಟ್ಟು ಓಡೋಡಿ ಬಂದರು
ಬಂದದ್ದಷ್ಟೇ
ಏನಾಗುತ್ತಿದೆ ಎನ್ನುವುದೇ ಗೊತ್ತಾಗದಂತೆ ತಬ್ಬಿಬ್ಬಾಗಿ ನಿಂತರು

ಅಲ್ಲಿದ್ದದ್ದು ಒಂದು ಹಣ್ಣು ಹಣ್ಣು ವಯಸ್ಸಾದ ಜೋಡಿ, ಜೊತೆಗೆ ಆ ಹುಡುಗಿ, ಬದಿಯಲ್ಲಿ ಆಕೆಯ ಗಂಡ
ಆ ಹುಡುಗಿ ಯಾವ ಕಾರಣಕ್ಕೂ ನಿಲ್ಲಿಸಲು ಸಾಧ್ಯವೇ ಇಲ್ಲ ಎನ್ನುವಂತೆ ಜೋರು ಅಳುತ್ತಲೇ ಇದ್ದಳು
ಆ ಅಳು ಸುತ್ತಲ ಆ ಪರ್ವತ ಶ್ರೇಣಿಗಳಿಗೆ ಡಿಕ್ಕಿ ಹೊಡೆದ ಇನ್ನೂ ಹತ್ತಾಗಿ ಮಾರ್ದನಿಸುತ್ತಿತ್ತು

ಆಗಿದ್ದು ಇಷ್ಟೇ ಆ ಹುಡುಗಿ ಕಾಶ್ಮೀರದ — ಹುಡುಗಿ
ಕಣ್ಣೆದುರೇ ಮನೆಯ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದನ್ನು ನೋಡಿದವಳು
ಇಡೀ ರಾತ್ರಿ ಅಪ್ಪ ಅಮ್ಮ ತಮ್ಮ ಹೆಣ್ಣು ಮಕ್ಕಳನ್ನು ಬಟ್ಟೆಯಲ್ಲಿ ಸುತ್ತಿಕೊಂಡು ತಲೆಯ ಮೇಲೆ ಹೊತ್ತುಕೊಂಡು
ಕಾಡು ಕಣಿವೆ ಬೆಟ್ಟ ಗುಡ್ಡ ಎನ್ನುವುದನ್ನು ನೋಡದೆ ಓಡೋಡಿ ಬಂದಿದ್ದರು
ಆ ಕಾರಣಕ್ಕಾಗಿಯೇ ಅವರ ಜೀವ ಉಳಿದಿತ್ತು

ಆ ನಂತರ ಗಂಗೆ ಎಷ್ಟು ಮಲಿನವಾದಳೋ ಅಷ್ಟೇ ಜೀಲಂ ಸಹಾ ರಕ್ತ ತೊಳೆದುಕೊಂಡಿತು

ಆಕೆ ದೆಹಲಿಗೆ ಹೋಗಿ, ಅಲ್ಲಿಂದ ಹೈದ್ರಾಬಾದ್ ಗೆ ಹೋಗಿ, ಮಗ ಪುಣೆಗೆ ಹೋಗಿ …
ಎಲ್ಲವೂ ಆಗಿ ಹೋಗಿತ್ತು, ದಶಕಳು ಉರುಳಿ ಹೋಯ್ತು
ಆದರೆ ಆ ಹುಡುಗಿಗೆ ಒಂದು ಆಸೆ. ಆ ಕತ್ತಲ ರಾತ್ರಿಯಲ್ಲಿ ತಾನು ಕಳೆದುಕೊಂಡ ಆ ಕೊಂಡಿಯನ್ನು ತಡಕಿ ನೋಡಬೇಕು ಎಂದು.

”ನಾನು ಬಿದ್ದು ಎದ್ದ ಮನೆ
ಮೊದಲು ಬೆಳಕು ಕಂಡ ಮನೆ
ತಿಪ್ಪ ತಿಪ್ಪ ಹೆಜ್ಜೆಯಿಟ್ಟು
ಬಿಸಿಲ ಕೋಲ ಹಿಡಿದುಬಿಟ್ಟು
ತಂಗಿ ತಮ್ಮರೊಡನೆ ಹಿಟ್ಟು
ತಿಂದು ಬೆಳೆದ ನನ್ನ ಮನೆ
ಮನೆ ಮನೆ ಮುದ್ದುಮನೆ ....ನೋಡಬೇಕು ಎಂದು

sweeti2ಗಂಡ ಹೆಂಡತಿ ಇಬ್ಬರೂ ಮನೆಯ ಗುರುತು ಹುಡುಕುತ್ತಾ ಅಲ್ಲಿಗೆ ಬಂದರು
ದೂರದಲ್ಲಿ ಒಂದು ಕುಸಿದ ಮನೆ ಇತ್ತು
ಆ ಹುಡುಗಿ ಮನಸ್ಸು ಗಟ್ಟಿ ಮಾಡಿಕೊಂಡು ಅದರತ್ತ ಹೆಜ್ಜೆ ಹಾಕುತ್ತ ಹೋಗುತ್ತಿದ್ದಳು
ಆಗ ಹಿಂದಿನಿಂದ ಗಂಡ ಕೂಗಿದ -ಅದಲ್ಲ ಅದಲ್ಲ
ಆಕೆ ಮತ್ತೆ ಯಾವುದು ಎಂದು ದೂರದಿಂದಲೇ ಕೈ ಆಡಿಸಿ ಕೇಳಿದಳು
ಆತ ಕೈ ಕೆಳಗೆ ಮಾಡಿ ತೋರಿಸಿದ ಆಕೆ ಆತ ಹೇಳಿದ್ದೇನು ಎನ್ನುವಂತೆ ಒಂದು ಕ್ಷಣ ಗಂಭೀರಳಾದಳು

ಒಂದು ಕ್ಷಣ ಅಷ್ಟೇ ಅವಳಿಗೆ ಅರ್ಥವಾಗಿ ಹೋಯಿತು ತಾನು ನಿಂತಿರುವ ನೆಲವೇ ನನ್ನ ಮನೆ ಇದ್ದ ಜಾಗ
ಅವಳಿಗೊಂದು ನಂಬಿಕೆಯಿತ್ತು- ನನ್ನ ಮನೆ ಕುಸಿದಿರಬಹುದು, ಆದರೆ ಇರುತ್ತದೆ ಎಂದು
ಆ ಒಂದು ಕ್ಷಣದಲ್ಲಿ ಆ ಪುಟ್ಟ ಕನಸೂ ನಿರ್ನಾಮವಾಗಿ ಹೋಯಿತು
ತಾನು ಯಾವುದೋ ಆತ್ಮದ ಮೇಲೆ ಕಾಲಿಟ್ಟು ನಿಂತಿದ್ದೆನೋ ಎಂದು ಗಾಬರಿಯಾಗಿ ಈ ಕಡೆಗೆ ಜಿಗಿದಳು

ಆಗಲೇ ಅಳು ಒತ್ತರಿಸಿ ಬಂದಿದ್ದು

”ತಾಯಿ ಮುತ್ತು ಕೊಟ್ಟ ಮನೆ
ತಂದೆ ಎತ್ತಿಕೊಂಡ ಮನೆ
ಮನೆಗೆ ಬಂದ ನೆಂಟರಲ್ಲ
ಕೂಗಿ ಕರೆದು ಕೊಬರಿ ಬೆಲ್ಲ
ಗಳನು ಕೊಟ್ಟು ಸವಿಯ ಸೊಲ್ಲ
ನಾಡುತಿದ್ದ ನನ್ನ ಮನೆ..”

ಎಲ್ಲವೂ ಒಂದು ಬಟಾಬಯಲಾಗಿ ಹೋಗಿತ್ತು, ಆಕೆಯ ಕನಸಿನಂತೆ

ಧುಮ್ಮಿಕ್ಕುತ್ತಿದ್ದ ಕಣ್ಣೀರನ್ನು ಆಕೆ ಹಾಗೂ ಹೀಗೂ ತಡೆಯುತ್ತಲೇ ಇದ್ದಳು

ಆಗ ಎಲ್ಲಿದ್ದರೋ ಆ ದಂಪತಿ
ಕಣ್ಣು ಸಾಕಷ್ಟು ಬೆಳಕು ಹಿಂಗಿಸಿಕೊಂಡಿದ್ದರೂ ಅಲ್ಲಿ ಬಂದವರು ಯಾರು ಎಂಬ ಗುರುತು ಅವರಿಗೆ ಸಿಕ್ಕಿ ಹೋಗಿತ್ತು
ಮನೆಯ ಸಾಸಿವೆ ಡಬ್ಬ ಒಂದಿಷ್ಟು ಸದ್ದು ಮಾಡಿತು
ಇಬ್ಬರೂ ಆ ಹುಡುಗಿಯತ್ತ ಬಂದರು

ಆಕೆಗೆ ಇವರ ಗುರುತಿಲ್ಲ ‘ಬಾಬಾ’ ಎಂದು ಒಂದಿಷ್ಟು ಭಿಕ್ಕಿದಳು
ಆದರೆ ಒಂದು ಕ್ಷಣದಲ್ಲಿಯೇ ಅದು ಕಟ್ಟೆಯೊಡೆದು ಜೋರು ದನಿಯಾಗಿ ಗುಡ್ಡಗಳಿಗೆ ಡಿಕ್ಕಿ ಹೊಡೆಯಲಾರಂಭಿಸಿದ್ದು

rajesh raina sweetiಆದದ್ದು ಇಷ್ಟೇ
ಹಾಗೆ ಅವಳನ್ನು ನೋಡಿದ ಕೂಡಲೇ ಬಂದ ಆ ಹಣ್ಣು ಹಣ್ಣು ದಂಪತಿ ಅವಳ ಕೈ ಸೆಳೆದು ಅದರಲ್ಲಿ ಏನೋ ತುರುಕಿದರು
ಅವರ ಮೈ ಮೇಲೆ ಬಡತನ ಇನ್ನೂ ಉಸಿರಾಡುತ್ತಿತ್ತು. ಆಕೆ ಏನು ಎಂದು ನೋಡಿದರೆ- ೮೦ ರೂಪಾಯಿ
ಇಷ್ಟು ಬಡತನವಿದ್ದರೂ ನನಗೇಕೆ ಕಾಣಿಕೆ ಎಂದವಳೇ ಆಕೆ ಅದನ್ನು ಹಿಂದಿರುಗಿಸಲು ಹೋಗಿದ್ದಾಳೆ
ಅವರು ಇದು ಕಾಣಿಕೆಯಲ್ಲಮ್ಮ ಸಾಲ ವಾಪಸ್ ಮಾಡುತ್ತಿದ್ದೇವೆ ಎಂದಿದ್ದಾರೆ

ಆಕೆಗೆ ತಲೆಬುಡ ಅರ್ಥವಾಗಿಲ್ಲ
ನೀನಿನ್ನೂ ಪುಟ್ಟ ಹುಡುಗಿ. ನಿನ್ನ ಮನೆಯ ಮೇಲೆ ಧಾಳಿ ನಡೆದ ಒಂದು ದಿನ ಮೊದಲಷ್ಟೇ ನಾನು ನಿನ್ನ ಅಪ್ಪನಿಂದ ೮೦ ರೂ ಸಾಲ ಪಡೆದಿದ್ದೆ
ಬೆಳಗಾಗುವಷ್ಟರಲ್ಲಿ ಯಾರೂ ಇಲ್ಲ
ಆ ದಿನದಿಂದ ನಾನು ನಿಮ್ಮ ಮನೆ ಕಡೆ ನೋಡುವುದೇ ಆಯಿತು
ಮನೆ ಹೋಯಿತು, ಸಂಬಂಧವೂ ಹೋಯಿತು ಎಂದುಕೊಂಡೆ

ಆದರೆ ನಮ್ಮ ಮನೆಯ ಸಾಸಿವೆ ಡಬ್ಬಿಗೆ ಗ್ಯಾರಂಟಿಯಿತ್ತಮ್ಮ
ಹಾಗಾಗಿ ಆ ದಿನದಿಂದ ಆ ೮೦ ರೂಪಾಯಿ ಅಲ್ಲಿಯೇ ಇತ್ತು ಇದು ನಾನು ಮಾಡಿದ್ದ ಸಾಲ ತಗೋ ಎಂದಿದ್ದಾರೆ

ಎದೆ ಎದೆಗಳ ನಡುವೆ ಇರುವ
ಸೇತುವೆಗಳು ಕುಸಿದಿವೆ
ಭಯ ಕಂಪನ ತಲ್ಲಣಗಳ
ವಾದ್ಯವೃಂದ ಮೊಳಗಿದೆ
ಯಾವುದೀ ಪ್ರವಾಹವು…
ಎನ್ನುವ ಸಾಲುಗಳು ಅರ್ಥವಾಗಬೇಕಿದ್ದರೆ ನಾನು ನೀವೆಲ್ಲಾ ಆ ದಿನ ಅವರ ಮುಂದಿರಬೇಕಾಗಿತ್ತೇನೋ

ಆಗಲೇ ಅವಳಿಗೆ ಇನ್ನು ಸಾಧ್ಯವಿಲ್ಲ ಎನಿಸಿದ್ದು
ಸುತ್ತ ತುಂಬಿಕೊಂಡವರಿಗೆಲ್ಲಾ ವಿಷಯ ಗೊತ್ತಾಯಿತು ಪ್ರತಿಯೊಬ್ಬರೂ ಕನ್ನ ಒರೆಸಿಕೊಳ್ಳುತ್ತಿದ್ದವರೇ

ಅದು ಕಾಶ್ಮೀರ ಅದು ಕಾಶ್ಮೀರಿಯತ್
ಅಲ್ಲಿ ಸೇತುವೆಗಳು ಕುಸಿದದ್ದು ಧರ್ಮ ರಾಕ್ಷಸರ ನಡುವೆ ಅಷ್ಟೇ, ಎದೆ ಎದೆಯ ನಡುವಿನ ಸೇತುವೆಯಲ್ಲ
ಎಂದು ನನ್ನ ಮುಂದೆ ಇದೆಲ್ಲಾ ಹೇಳುತ್ತಾ ಕುಳಿತವರು ರಾಜೇಶ್ ರೈನಾ
ಈಟಿವಿ ಯ ಅಷ್ಟೂ ಚಾನಲ್ ಗಳ ಪ್ರಧಾನ ಸಂಪಾದಕ
ಕಾಶ್ಮೀರಿ ಪಂಡಿತರಾದ ರಾಜೇಶ್ ರೈನಾ ಕಣಿವೆಯ ತಲ್ಲಣಗಳನ್ನು ನನ್ನೆಡೆಗೆ ದಾಟಿಸುತ್ತಿದ್ದರು
ಹಾಗೆ ರಾಜೇಶ್ ಹೈದ್ರಾಬಾದ್ ನ ತನ್ನ ಮನೆಯ ಬಾಲ್ಕನಿಯಲ್ಲಿ ಈ ಎಲ್ಲವನ್ನೂ ಹೇಳುತ್ತಿದ್ದಾಗ ಆಕೆ ನಮ್ಮ ಪಕ್ಕದಲ್ಲಿಯೇ ನಿಂತಿದ್ದರು

ಆಕೆಯ ಹೆಸರೇ ಸ್ವೀಟಿ
ನಾನು ಆಕೆಯತ್ತ ತಿರುಗಿ ಪರಿಸ್ಥಿತಿಯನ್ನು ಒಂದಿಷ್ಟು ತಿಳಿ ಮಾಡಬೇಕು ಎಂದು ಬಾಯ್ತೆರೆಯಲು ಹೊರಟೆ
ಆಕೆ ಆಕಾಶದತ್ತ ಕೈ ತೋರಿಸಿದರು
ಅಲ್ಲಿ ಒಂದು ನಕ್ಷತ್ರ

ಒಂದಿಷ್ಟೂ ಅಲುಗದ ದನಿಯಲ್ಲಿ ಆಕೆ ಹೇಳಿದರು-
ನನಗೀಗ ಆ ನಕ್ಷತ್ರವೇ ಸೇತುವೆ. ಇಲ್ಲೂ, ಕಾಶ್ಮೀರದಲ್ಲೂ ಕಾಣುವುದು ಒಂದೇ ನಕ್ಷತ್ರ ಅಲ್ಲವೇ ಎಂದರು

ಕಣ್ಣಂಚು ಒರೆಸಿಕೊಳ್ಳುವ ಸರದಿ ಆಗ ನನ್ನದಾಗಿತ್ತುrajesh raina sweeti2

‍ಲೇಖಕರು Admin

July 15, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. s.p.vijayalakshmi

    ಈ ದಿನ ಮತ್ತೆ ಫ್ರಾನ್ಸಿನಲ್ಲಿ ಭಯೋತ್ಪಾದಕ ಕೃತ್ಯ ನಡೆದಿದೆ . ಆದರೆ…ಹೌದು, ಆದರೂ ನಾವು, ‘ಸಾಸಿವೆ ಡಬ್ಬಿಯಲ್ಲಿ ‘ ಇನ್ನೂ ಜಗ ತನ್ನ ಹಸಿರು, ಆರ್ದ್ರ ಗುಣವನ್ನು ನಂಬಿಕೆಯ ರೂಪದಲ್ಲಿ ಉಳಿಸಿಕೊಂಡಿದೆ , ಉಳಿಸಿಕೊಳ್ಳುತ್ತದೆ ಎಂದೇ ಕಟ್ಟಾಗಿ ನಂಬಿದ್ದೇವೆ. ಬಹಳ ಆರ್ದ್ರಗುಣದ ಸುಂದರ ಬರಹ . ಈ ಚಿಕ್ಕಚಿಕ್ಕ ಸಂಗತಿಗಳು ಕೊಡುವ ಖುಷಿ ಅತಿ ದೊಡ್ಡದು .

    ಪ್ರತಿಕ್ರಿಯೆ
  2. Shama, Nandibetta

    ಯಾದ್ ವಶೇಮ್…

    ನೆನಪಿನ ಸುರುಳಿಗಳಿಗೆಷ್ಟು ಸುತ್ತು
    ಲೆಕ್ಕ ಇಡುವುದಾಗದು
    ಅನುಭವಿಸಿದವರಿಗೆ ಮಾತ್ರ ಗೊತ್ತು

    ಪ್ರತಿಕ್ರಿಯೆ
  3. lakshmikanth itnal

    very touching sir, ಅಲ್ಲಿ ಸೇತುವೆಗಳು ಕುಸಿದದ್ದು ಧರ್ಮ ರಾಕ್ಷಸರ ನಡುವೆ ಅಷ್ಟೇ, ಎದೆ ಎದೆಯ ನಡುವಿನ ಸೇತುವೆಯಲ್ಲ…ನನಗೀಗ ಆ ನಕ್ಷತ್ರವೇ ಸೇತುವೆ. ಇಲ್ಲೂ, ಕಾಶ್ಮೀರದಲ್ಲೂ ಕಾಣುವುದು ಒಂದೇ ನಕ್ಷತ್ರ ಅಲ್ಲವೇ ..ultimate words one can say.

    ಪ್ರತಿಕ್ರಿಯೆ
  4. ಗವಿಸಿದ್ಧ ಹೊಸಮನಿ

    ತುಂಬಾ ಚೆನ್ನಾಗಿದೆ

    ಪ್ರತಿಕ್ರಿಯೆ
  5. Utham Danihalli

    ವಾವ್ ಅದ್ಭುತವಾದ ಬರಹ ಅದೆಷ್ಟೇ ದಾಳಿಗಳದರು ಮನುಷ್ಯತ್ವ ಮಾನವೀಯತೆ ಗಳನ್ನು ನಾಶ ಮಾಡಲು ಆಗಲ್ಲ

    ಪ್ರತಿಕ್ರಿಯೆ
  6. Mallappa S Paregaun

    ಬರಹ ಮನಸ್ಸಿಿಗೆ ತಾಗುವಂತಿದೆ. ಜೀವನದ ಘಟನೆ ಯಥಾವತ್ತಾಾಗಿ ಕಣ್ಣು ಮುಂದೆ ಕಟ್ಟಿಿದಂತಿದೆ. ಇದಕ್ಕಿಿಂತ ಇನ್ನೇನು ಹೇಳಬಹುದು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: