ಹಳೆ ಬೇರು, ಹೊಸ ಚಿಗುರಿನ ಕತೆಗಳು

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ದಿಲ್ಲಿಯಲ್ಲಿರುವ ನನ್ನ ಬಹುತೇಕ ಆಪ್ತಮಿತ್ರರು ನನಗಿಂತ ಬರೋಬ್ಬರಿ ಎರಡು ಪಟ್ಟು ವಯಸ್ಸಿನವರು. ಇಪ್ಪತ್ತೊಂದರ ಪ್ರಾಯದಲ್ಲಿ ಉದ್ಯೋಗಕ್ಕೆಂದು ದಿಲ್ಲಿಗೆ ವಲಸೆ ಬಂದ ನಾನು ಹಲವು ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡಿದ್ದು ನಿವೃತ್ತ ಅಧಿಕಾರಿಗಳೊಂದಿಗೆ. ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ನಂತರವೂ, ಸಂಸ್ಥೆಯೊಂದರಲ್ಲಿ ಸಲಹಾಕಾರರಾಗಿ ಸೇವೆ ಸಲ್ಲಿಸುತ್ತಾ ಸಕ್ರಿಯರಾಗಿದ್ದ ಹಲವು ಹಿರಿಯ, ಅನುಭವಿ ಅಧಿಕಾರಿಗಳು ದೀರ್ಘಕಾಲ ನನ್ನ ಸಹೋದ್ಯೋಗಿಗಳಾಗಿದ್ದರು.

ಈ ಬಳಗದ ಇನ್ನೊಂದು ವಿಶೇಷವೆಂದರೆ ಇಲ್ಲಿದ್ದ ಬಹುತೇಕರು ಪಶ್ಚಿಮಬಂಗಾಳ ಮೂಲದವರು. ಬೆಂಗಾಲಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕಲೆ-ಸಾಹಿತ್ಯ-ಸಂಗೀತದ ಒಲವು, ಪ್ರಗತಿಪರ ವಿಚಾರಧಾರೆ-ಜೀವನಶೈಲಿಗಳು ನನ್ನನ್ನು ಇವರತ್ತ ಸೆಳೆದಿರಬಹುದೇನೋ!
ಇಲ್ಲಿರುವ ಕೆಲ ಕಥೆಗಳು ಆ ದಿನಗಳದ್ದೇ.

ಆ ಒಂದು ಕರೆಯು ಮಜುಂದಾರ್ ಸಾಹೇಬರನ್ನು ಕೀನ್ಯಾದಿಂದ ದಿಲ್ಲಿಯವರೆಗೂ ಕರೆದುತಂದಿತ್ತು. ‘ಮಜುಂದಾರ್ ಸಾಬ್’ ಎಂದೇ ನಮ್ಮ ಬಳಗದಲ್ಲಿ ಖ್ಯಾತರಾಗಿದ್ದ ಪಿ.ಕೆ. ಮಜುಂದಾರ್ ನನ್ನ ಅತ್ಯಾಪ್ತ ಹಿರಿಯ ಮಿತ್ರರಲ್ಲೊಬ್ಬರು. ಕೇಂದ್ರ ಜಲ ಆಯೋಗದಲ್ಲಿ ಉನ್ನತ ಮಟ್ಟದ ಅಧಿಕಾರಿಯಾಗಿದ್ದ ಮಜುಂದಾರ್ ವಿಪರೀತ ಎಂಬಷ್ಟು ಸಜ್ಜನ ವ್ಯಕ್ತಿ. ಅವರ ಸೌಮ್ಯ ಮಾತುಗಳು ಮತ್ತು ನಗುಮುಖ ಎಲ್ಲರನ್ನೂ ಅವರತ್ತ ಸೆಳೆಯುತ್ತಿದ್ದಿದ್ದಲ್ಲದೆ, ಅದೆಷ್ಟೋ ಯುವ ಎಂಜಿನಿಯರ್ ಗಳಿಗೆ ಮಜುಂದಾರ್ ತನ್ನ ಸೇವಾ ಅವಧಿಯಲ್ಲಿ ಮಾರ್ಗದರ್ಶಕರಾಗಿಯೂ
ದಾರಿದೀಪವಾದವರು. ಒಟ್ಟಿನಲ್ಲಿ ಮಜುಂದಾರ್ ಸಾಬ್ ಎಂದರೆ ಎಲ್ಲರಿಗೂ ಪ್ರಿಯವಾದ ವ್ಯಕ್ತಿ. ಅಜಾತಶತ್ರು.

ಆ ಒಂದು ಮರೆಯಲಾರದ ಕರೆ ಬಂದಾಗ ಮಜುಂದಾರ್ ಇದ್ದಿದ್ದು ಕೀನ್ಯಾ ದೇಶದ ಕಿಸುಮು ಪ್ರದೇಶದಲ್ಲಿ. ದಿಲ್ಲಿಯ ಪ್ರತಿಷ್ಠಿತ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವರ ವಿವಾಹಿತ ಮಗಳ ಆರೋಗ್ಯವು ಕ್ಷೀಣಿಸುತ್ತಿದೆಯೆಂಬ ಸುದ್ದಿಯನ್ನು ಕೇಳಿ ಗಾಬರಿಯಾದ ಮಜುಂದಾರ್, ಭಯಂಕರ ಗಡಿಬಿಡಿಯಲ್ಲೇ ದಿಲ್ಲಿಗೆ ಧಾವಿಸಿದ್ದರು. ಕಣ್ಣಿನ ಸಮಸ್ಯೆಯೆಂದು ಆರಂಭಿಕ ಹಂತದಲ್ಲಿ ಕಂಡುಬಂದ ಈ ಸಮಸ್ಯೆಯು ಮುಂದೆ ಉಸಿರಾಟಕ್ಕೂ ಕುತ್ತಾಗಿ ಏಕಾಏಕಿ ವಿಚಿತ್ರ ರೂಪವನ್ನು ತಾಳತೊಡಗಿತ್ತು.

ದಿಲ್ಲಿಯಲ್ಲಿ ಮಗಳ ಚಿಕಿತ್ಸೆಗಾಗಿ ಮಜುಂದಾರ್ ಕುಟುಂಬವು ಸಂಪರ್ಕಿಸದ ವೈದ್ಯರಿರಲಿಕ್ಕಿಲ್ಲ. ಯಾವುದೋ ಬಗೆಯ ಸೋಂಕು ಎಂದು ಒಬ್ಬ ವೈದ್ಯ ರೋಗ ಪತ್ತೆಯನ್ನು ಮಾಡಿದರೆ, ಮತ್ತೋರ್ವ ವೈದ್ಯ ಅದು ಕ್ಯಾನ್ಸರ್ ಇರಬಹುದೇನೋ ಎಂದು ಕಣಿ ಹೇಳುತ್ತಿದ್ದ. ವಿವಿಧ ವೈದ್ಯರ ಆಯಾ ರೋಗಪತ್ತೆಗಳಿಗೆ ತಕ್ಕಂತೆ ತರಹೇವಾರಿ ವೈದ್ಯಕೀಯ ಪರೀಕ್ಷೆಗಳು ಮುಂದುವರಿದವೇ ಹೊರತು ಆರೋಗ್ಯ ಸುಧಾರಿಸಲಿಲ್ಲ. ಇತ್ತ ಹಿಡಿದ ಕೆಲಸವನ್ನು ಅರ್ಧದಲ್ಲೇ ಬಿಟ್ಟು ಬಂದಿದ್ದ ಮಜುಂದಾರ್ ಭಾರತಕ್ಕೆ ಬಂದಿಳಿದು ಒಂದೂವರೆ ವರ್ಷವೇ ಕಳೆದಿತ್ತು. ಕೊನೆಗೂ ಮಜುಂದಾರರ ಮಗಳು ಪವಾಡಸದೃಶ ರೀತಿಯಲ್ಲಿ ಅದ್ಹೇಗೋ ಚೇತರಿಸಿಕೊಂಡರು. ಆಕೆಗೆ ನಿಜಕ್ಕೂ ಏನಾಗಿತ್ತು ಎಂಬುದು ಅಂದಿಗೂ, ಇಂದಿಗೂ ಮಜುಂದಾರ್ ಕುಟುಂಬವೂ ಸೇರಿದಂತೆ ಎಲ್ಲರಿಗೂ ನಿಗೂಢವೇ.

ಪತ್ನಿ ಮತ್ತು ತುಂಬು ಕುಟುಂಬವನ್ನು ಹೊಂದಿರುವ ಮಕ್ಕಳ ಒತ್ತಾಯದ ಮೇರೆಗೆ ಮಜುಂದಾರ್ ಸಾಬ್ ಸಲಹಾಕಾರನ ಪಾತ್ರಕ್ಕೂ ಕೃಷ್ಣಾರ್ಪಣ ಬಿಟ್ಟು, ದಿಲ್ಲಿಯ ವಿಕಾಸಪುರಿಯಲ್ಲಿರುವ ತಮ್ಮ ನಿವಾಸದಲ್ಲಿ ನೆಮ್ಮದಿಯಾಗಿದ್ದಾರೆ. ಲೌಕಿಕದ ನಡುವಿನಲ್ಲಿದ್ದೂ ಸಂತನಂತಿದ್ದ ಅವರು ಆಧ್ಯಾತ್ಮವನ್ನೀಗ ಹೊಸ ಒಳನೋಟಗಳೊಂದಿಗೆ ಕಾಣಲು ಪ್ರಯತ್ನಿಸುತ್ತಿದ್ದಾರೆ. ಉಳಿದಂತೆ ಓದು ಮತ್ತು ನಾಯಿಯ ಜೊತೆಗೊಂದು
ಸಂಜೆಯ ವಾಕಿಂಗ್. ಮಜುಂದಾರ್ ಮತ್ತು ಅವರ ಕಾಲೋನಿಯಲ್ಲಿರುವ ಬೌದ್ಧ ಅನುಯಾಯಿಗಳ ಪುಟ್ಟ ಗುಂಪೊಂದು ವಾರಕ್ಕೆ ಒಂದೆರಡು ಬಾರಿ ಸೇರಿ, ಯಾರಾದರೂ ಕಷ್ಟದಲ್ಲಿದ್ದರೆ ಅವರ ಏಳಿಗೆಗಾಗಿ ಪ್ರಾರ್ಥನೆಯನ್ನು ಮಾಡುತ್ತದೆ. ಚಿಕ್ಕಪುಟ್ಟ ನೆರವನ್ನು ತಮ್ಮ ಕೈಲಾದಷ್ಟು ನೀಡುತ್ತದೆ. ಹಿರಿ-ಕಿರಿ ಜೀವಗಳ ಈ ನಿಷ್ಕಲ್ಮಶ ಮನದ ಸೇವೆಗಳಿಗೆ ಶತ್ರು-ಮಿತ್ರರೆಂಬ ಭೇದವಿಲ್ಲ. ಸರ್ವೇ ಜನಾ ಸುಖಿನೋ ಭವಂತು!

ಅವರು ಎಲ್ಲಿ ಹೋದರೂ ಅದೊಂದು ಚಿತ್ರ ಮಾತ್ರ ಎಂದೆಂದಿಗೂ ಅವರ ಜೊತೆಯಲ್ಲಿರುತ್ತಿತ್ತು. ಸುಮಾರು ಹತ್ತರಿಂದ ಹನ್ನೆರಡು ವರ್ಷ ಪ್ರಾಯದ ಬಾಲಕಿಯ ಛಾಯಾಚಿತ್ರವಾಗಿತ್ತದು. ದಪ್ಪನೆಯ ಫ್ರೇಮ್ ಹಾಕಿದ್ದ ಆ ಪುಟ್ಟ ಚಿತ್ರದ ಬೆನ್ನಿಗೊಂದು ಆಧಾರವೂ ಇದ್ದಿದ್ದರಿಂದ ಅದನ್ನು ಮೇಜಿನ ಮೇಲೆಯೋ, ಇನ್ನೆಲ್ಲೋ ಬೇಕೆಂದ ಕಡೆ ಸುಲಭವಾಗಿ ಇರಿಸಬಹುದಾಗಿತ್ತು. ಕಳೆದ ಒಂದೆರಡು ದಶಕಗಳಲ್ಲಿ ಆ ಪುಟ್ಟ ಚಿತ್ರವು ಅವರೊಂದಿಗೆ
ಅದೆಷ್ಟು ಸಾವಿರ ಮೈಲುಗಳನ್ನು ಕ್ರಮಿಸಿರಬಹುದೋ ಎಂದು ನಾನು ಸಾಕಷ್ಟು ಯೋಚಿಸಿದ್ದಿದೆ.

ಅಂದು ನನ್ನ ಜೊತೆಗಿದ್ದಿದ್ದು ಪಿ.ಪಿ. ನಿಯೋಗಿ. ನಿಯೋಗಿ ಸಾಹೇಬರೂ ಕೂಡ ಬೆಂಗಾಲಿ ಮೂಲದವರು ಮತ್ತು ಕೇಂದ್ರ ಜಲ ಆಯೋಗದಲ್ಲಿ ಉನ್ನತ ಹುದ್ದೆಯೊಂದನ್ನು ಅಲಂಕರಿಸಿ ನಿವೃತ್ತರಾದವರು. ಅಂದು ದಿಲ್ಲಿಯಿಂದ ಕೇರಳಕ್ಕೆ ಹೊರಟಿದ್ದ ನಾನು ನಿಯೋಗಿಯವರೊಂದಿಗೆ ಕೇರಳದ ಹಲವು ಪ್ರದೇಶಗಳಲ್ಲಿ ಸ್ಥಳ ಪರಿಶೀಲನೆಯ ಕಾರ್ಯವನ್ನು ನಿರ್ವಹಿಸುತ್ತಿದ್ದೆ.

ಹಲವು ದಿನಗಳ ಕಾಲ ವಿಮಾನ, ರೈಲು, ಕಾರೆನ್ನುತ್ತಾ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪ್ರಯಾಣಿಸುತ್ತಿದ್ದ ನಾವು ನಿರೀಕ್ಷೆಗೂ ಮೀರಿ ಹೈರಾಣಾಗಿದ್ದೆವು. ನೆಟ್ಟಗೆ ಮೂರು ತಾಸಿನ ನಿದ್ದೆ ಸಿಕ್ಕರೂ ಅದೃಷ್ಟ ಎಂಬಂತಾಗಿತ್ತು ನಮ್ಮ ಪರಿಸ್ಥಿತಿ. ಅಷ್ಟಿದ್ದರೂ ಪ್ರಯಾಣದ ವಿಶಿಷ್ಟ ಅನುಭವಗಳು ನಮ್ಮಲ್ಲಿ ಹೊಸ ಚೈತನ್ಯವನ್ನು ತುಂಬುತ್ತಿದ್ದಿದ್ದು ಸತ್ಯ. ಈ ಫೋಟೋ ಯಾರದ್ದು ಎಂಬ ನನ್ನ ಕುತೂಹಲದ ಪ್ರಶ್ನೆಗೆ ನಿಯೋಗಿ ಸಾಹೇಬರು ಅಂದು ಉತ್ತರಿಸಿದ್ದರು. ಆ ಚಿತ್ರವು ಅವರ ಮಗಳದ್ದಾಗಿತ್ತು. ಹತ್ತು-ಹನ್ನೊಂದರ ಹರೆಯದಲ್ಲೇ ಮಾರಣಾಂತಿಕ ಖಾಯಿಲೆಯೊಂದಕ್ಕೆ ಬಲಿಯಾಗಿದ್ದಳು ಪುಟ್ಟ ಬಾಲೆ. ಇತ್ತ ಮಗಳ ಸಾವಿನೊಂದಿಗೆ ನಿಯೋಗಿ ಸಾಹೇಬರ ಬದುಕಿನ ಒಂದು ಭಾಗವೂ ಶಾಶ್ವತವಾಗಿ ಸತ್ತು ಹೋಯಿತು.

ಈ ಬಾರಿ ದೇವರೆಂಬ ಕಾಣದ ಶಕ್ತಿಯೊಂದಿಗೆ ನಿಯೋಗಿ ಸಾಕ್ಷಾತ್ ಯುದ್ಧಕ್ಕಿಳಿದಿದ್ದರು. ಮನೆಯಲ್ಲಿದ್ದ ಅಷ್ಟೂ ದೇವರ ಚಿತ್ರಗಳು, ಮೂರ್ತಿಗಳು ತಿಪ್ಪೆ ಸೇರಿದವು. ತನ್ನ ಬದುಕಿನಲ್ಲಿ ಘಟಿಸಿದ್ದ ಆಘಾತಕಾರಿ ಘಟನೆಯೊಂದು ನಿಯೋಗಿ ಸಾಬ್ ರನ್ನು ನಾಸ್ತಿಕನನ್ನಾಗಿಸಿತ್ತು. ಮಗಳು ಇಹಲೋಕವನ್ನು ತ್ಯಜಿಸಿ ಇಂದಿಗೆ ಇಪ್ಪತ್ತಕ್ಕೂ ಹೆಚ್ಚು ವರ್ಷಗಳು ಸಂದಿವೆ. ಅಷ್ಟೂ ವರ್ಷಗಳಿಂದ ಅವರು ಹೋದಲ್ಲೆಲ್ಲಾ ಈ ಚಿತ್ರ ಕೂಡ ಜೊತೆಯಲ್ಲೇ ಸಾಗುತ್ತದೆ.

ಸೃಷ್ಟಿಕರ್ತ ದೇವನ ಮೇಲೆ ನಿಯೋಗಿ ಸಾಹೇಬರಿಗಿರುವ ಸಿಟ್ಟು ಇನ್ನೂ ಕಮ್ಮಿಯಾಗಿಲ್ಲ. ಚಿತ್ರದತ್ತ ಸುಮ್ಮನೆ ನೋಡುವ ಅವರ ವೃದ್ಧ ಕಣ್ಣುಗಳು ಮಾತಿನ ಹಂಗಿಲ್ಲದೆ ಬಹಳಷ್ಟನ್ನು ಹೇಳುವಂತೆ ಭಾಸವಾಗುತ್ತದೆ. ಪ್ರಾಯಶಃ ಕತ್ತಲ ಮರೆಯಲ್ಲಿ ಅವುಗಳು ಇಂದಿಗೂ ಆಗಾಗ ಮಂಜಾಗುತ್ತಾ, ಮನಸ್ಸಿನ ಭಾವನೆಗಳೊಂದಿಗೆ ಸೆಣಸಾಡುತ್ತಾ ಮುದ್ದಿನ ಮಗಳ ಅಸಂಖ್ಯಾತ ನೆನಪುಗಳನ್ನು ಜೋಪಾನವಾಗಿ ಕಾಪಿಡುತ್ತಿವೆ. ನಿಯೋಗಿಯವರ ದಶಕಗಳ ಈ ನೋವಿಗೆ ಮುಕ್ತಿಯೆಂದು? ಬಹುಷಃ ಅವರು ತನ್ನನ್ನೂ, ದೇವರನ್ನೂ ಕ್ಷಮಿಸಿದ ದಿನವೋ ಏನೋ!

ತಾನು ಸಂಸತ್ ಅಧಿವೇಶನದ ಚರ್ಚೆಯಲ್ಲಿ ಭಾಗವಹಿಸುತ್ತಿರುವ ಪುಢಾರಿಯೇನೋ ಎಂಬಂತೆ ಅವರು ಮೇಜು ಕುಟ್ಟಿದರು. ನಾನು ಸಣ್ಣಗೆ ಬೆಚ್ಚಿ, ಮನದಲ್ಲೇ ಗೊಣಗಿಕೊಂಡೆ. ಅಂದು ನನ್ನ ಜೊತೆಗಿದ್ದಿದ್ದು ಆರ್. ಎನ್. ಸೇನ್. ದಿಲ್ಲಿಯ ಸರಕಾರಿ ಸಂಸ್ಥೆಯೊಂದರಲ್ಲಿ ಚೀಫ್ ಎಂಜಿನಿಯರ್ ಆಗಿ
ನಿವೃತ್ತರಾಗಿದ್ದವರು. ಸೇನ್ ರವರದ್ದು ತೆಳ್ಳನೆಯ, ಕುಳ್ಳನೆಯ ದೇಹಪ್ರಕೃತಿ. ಕೈಬರಹದಲ್ಲಿ ಕ್ಯಾಲಿಗ್ರಫಿಯ ಚೆಲುವು. ಇನ್ನು ಅವರಿಗೆ ಮೈಸೂರು ಪೇಟವೊಂದನ್ನು ತೊಡಿಸಿದರಂತೂ ನೋಡಲು ಥೇಟು ಸರ್ ಎಮ್. ವಿಶ್ವೇಶ್ವರಯ್ಯನವರೇ. ಸೇನ್ ತಮ್ಮ ಸೇವಾ ಅವಧಿಯಲ್ಲಿ ಬಲು ಶಿಸ್ತಿನ ಅಧಿಕಾರಿಯೆಂದು ಹೆಸರು ಮಾಡಿದ್ದರಂತೆ. ಅಂತೆಯೇ ಮಹಾ ಸಿಡುಕಿನ ಮನುಷ್ಯ ಕೂಡ. ಕೋಪ ನೆತ್ತಿಗೇರಿತೆಂದರೆ ಸೇನ್ ರವರ ಕೈಯಲ್ಲಿದ್ದ ಕಡತಗಳು ಎದುರಿಗಿದ್ದ ಕಿರಿಯ ಅಧಿಕಾರಿಗಳ ಮೂಗಿಗಪ್ಪಳಿಸುತ್ತಿದ್ದವು. ಇವೆಲ್ಲಾ ಅಂಶಗಳು ಸೇನ್ ರವರ ಬಗ್ಗೆ ಇತರೆ ಅಧಿಕಾರಿಗಳಲ್ಲಿ ಒಂದು
ಬಗೆಯ ಭಯವನ್ನೂ, ಹೇವರಿಕೆಯನ್ನೂ ಕಾಲಾಂತರದಲ್ಲಿ ಹುಟ್ಟಿಸಿದ್ದವು.

ಬಹುಷಃ ಸೇನ್ ರವರ ದುರಾದೃಷ್ಟವೇನೋ. ಸೇವೆಯಿಂದ ನಿವೃತ್ತರಾದ ಬಳಿಕ ತಾನು ಚೀಫ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ ಸಂಸ್ಥೆಯಲ್ಲೇ ಸಲಹಾಕಾರರಾಗಿ ಮುಂದುವರಿಯಲು ಅವರು ಒಪ್ಪಿದ್ದರು. ಆದರೆ ನಿವೃತ್ತಿಯ ತರುವಾಯ ತನ್ನ ಹಳೆಯ ಚೀಫ್ ಎಂಜಿನಿಯರ್ ಹುದ್ದೆಯ ಖದರ್ರು ಇನ್ನು ನಡೆಯುವುದಿಲ್ಲವೆಂಬ ಕಟುಸತ್ಯವನ್ನು ಅರಿತುಕೊಳ್ಳಲು ಮಾತ್ರ ಅವರಿಗೆ ವರ್ಷಗಳೇ ಹಿಡಿದವು. ಅವರ ಸಿಡುಕಿನ ಸ್ವಭಾವವು ಕಿರಿಯ ಅಧಿಕಾರಿಗಳಿಗೆ ಈಗ ಭಯ ಹುಟ್ಟಿಸುವುದರ ಬದಲಾಗಿ, ಹರಟೆಯ-ಹಾಸ್ಯದ ವಸ್ತುವಾಗಿತ್ತು. ಕ್ರಮೇಣ ತನ್ನದೇ ಆಫೀಸಿನಲ್ಲೇ ಸೇನ್
ಯಾರಿಗೂ ಬೇಡವಾಗುತ್ತಾ ಹೋದರು.

ಇಂತಿಪ್ಪ ಸೇನ್ ಯಾವುದೋ ಒಂದು ಚಿಕ್ಕ ಸೈಟಿನ ವಿಚಾರಕ್ಕೆ ಸಂಬಂಧಪಟ್ಟಂತೆ ವರ್ಷಗಟ್ಟಲೆ ನ್ಯಾಯಾಲಯಗಳಲ್ಲಿ ಅಲೆಯುತ್ತಿದ್ದರು. ಕೋರ್ಟು-ಕಚೇರಿಗಳ ಅಲೆದಾಟದಲ್ಲಿ ಹೈರಾಣಾಗುತ್ತಿದ್ದ ಅವರ ಅಸಮಾಧಾನವನ್ನು ಅವರ ತಮ್ಮಷ್ಟಕ್ಕೇ ಬುಸುಗುಡುವ ಶೈಲಿಯಲ್ಲಿ ಯಾರಾದರೂ ಗುರುತಿಸಬಹುದಿತ್ತು. ಕೆಲವು ಸಂದರ್ಭಗಳಲ್ಲಂತೂ ತಲೆಯೆಲ್ಲಾ ಹಂಡೆಯಂತೆ ಬಿಸಿಯಾಗಿ, ಕಿವಿಗಳಿಂದ ಹೊಗೆ ಬಿಡುತ್ತಿರುವವರಂತೆ ಸೇನ್ ವಿನಾಕಾರಣ ಸಿಡುಕುತ್ತಿದ್ದರು.

ಬಿರುಗಾಳಿಯಂತೆ ಕೋಣೆಯ ಒಳಕ್ಕೂ, ಹೊರಕ್ಕೂ ಶತಪಥ ತಿರುಗುತ್ತಿದ್ದರು. ‘ಇನ್ನಾದರೂ ಸಾಕು ಮಾಡಿ. ಅದೆಷ್ಟು ಅಂತ ಅಲೆಯುತ್ತೀರಿ. ಒಂದೆರಡು ಲಕ್ಷ ನಷ್ಟವಾದರೂ ಅಡ್ಡಿಯಿಲ್ಲ. ವಕೀಲರಿಗೆ ಕೊಡುವ ಫೀಸಿನಲ್ಲೇ ನೀವೊಂದು ಕಟ್ಟಡ ಕಟ್ಟಬಹುದು. ಈ ಜಂಜಾಟಕ್ಕೊಂದು ಮಂಗಳ ಹಾಡಿ ಮಾರಾಯ್ರೇ’, ಎಂದು ನ್ಯೂಜಿಲ್ಯಾಂಡಿನಲ್ಲಿ ನೆಲೆಸಿದ್ದ ಮಗ ಸೇನ್ ರವರಿಗೆ ಹಲವು ಬಾರಿ ಹೇಳಿದ್ದನಂತೆ. ಆದರೆ ಸೇನ್ ಸಾಹೇಬ್ ಯಾರ ಮಾತೂ ಕೇಳುವವರಲ್ಲ. ಹೀಗಾಗಿ ಅವರ ಜಂಜಾಟಗಳಿಗೂ ಕೊನೆಯಿಲ್ಲ.

ದಿಲ್ಲಿಯಲ್ಲಿ ಆಗ ಮಳೆಗಾಲ. ಸಮಯವು ರಾತ್ರಿಯ ಹನ್ನೊಂದೂ ಮುಕ್ಕಾಲು ದಾಟಿತ್ತು. ದಿಲ್ಲಿಯಲ್ಲಿರುವ ‘ಮಿನಿ ಟಿಬೆಟ್’ ಪ್ರದೇಶವಾದ ಅರುಣಾ
ನಗರದಲ್ಲಿ ಏಕಾಂಗಿಯಾಗಿ ದಿನವಿಡೀ ಅಲೆದಿದ್ದ ನಾನು, ಅಲ್ಲೇ ಲಾಡ್ಜೊಂದರಲ್ಲಿ ಹೈರಾಣಾಗಿ ಮೈಚೆಲ್ಲಿಕೊಂಡಿದ್ದೆ. ಗೋಡೆಯ ಮೇಲಿದ್ದ ಹಸನ್ಮುಖಿ ಟಿಬೆಟನ್ ಧರ್ಮಗುರು ದಲಾಯಿಲಾಮಾರ ದೊಡ್ಡ ಪೋಸ್ಟರ್ ಅಂದಿನ ಆಯಾಸ ಮತ್ತು ಹಸಿವಿನಲ್ಲೂ ಏನೋ ಒಂದು ರೀತಿಯ ಸಮಾಧಾನವನ್ನು ನೀಡುತ್ತಿತ್ತು. ಅಷ್ಟಕ್ಕೂ ಅಪರಾತ್ರಿಯ ಹಸಿವಿಗೆ ಪರಿಹಾರವೆಲ್ಲಿ? ಕೊನೆಗೆ ವಿಧಿಯಿಲ್ಲವೆಂಬಂತೆ ಆನ್ಲೈನ್ ಫುಡ್ ಡೆಲಿವರಿ
ಸೌಲಭ್ಯವೊಂದರ ಆಪ್ ಗೆ ತೆರಳಿ ಬರ್ಗರ್ ಆರ್ಡರ್ ಮಾಡಿದೆ.

ಸುಮಾರು ಅರ್ಧತಾಸಿನ ನಂತರ ಬರ್ಗರಿನ ಪುಟ್ಟ ಪ್ಯಾಕೆಟ್ ಒಂದನ್ನು ಹಿಡಿದು ವೃದ್ಧರೊಬ್ಬರು ಹೋಟೇಲಿಗೆ ಬಂದಿದ್ದರು. ಮಳೆಯಲ್ಲಿ ನೆನೆಯುತ್ತಾ, ಬೈಕ್ ಓಡಿಸುತ್ತಾ, ಅಪರಾತ್ರಿಯ ಹೊತ್ತಿನಲ್ಲಿ ಜುಜುಬಿ ಬರ್ಗರ್ ಒಂದನ್ನು ತಂದ ಆ ವೃದ್ಧರನ್ನು ನೋಡಿ ಇದ್ದ ಒಂದಷ್ಟು ಹಸಿವೆಯೂ ಸತ್ತುಹೋಯಿತು. ಇ-ಕಾಮರ್ಸ್ ಸೇವೆಗಳನ್ನೂ ಸೇರಿದಂತೆ ಫುಡ್ ಡೆಲಿವರಿ ಹುಡುಗರ ಮೇಲೆ ನಡೆಯುತ್ತಿದ್ದ ಲೂಟಿ, ದಾಳಿ,
ದೌರ್ಜನ್ಯಗಳು ಆಗಲೇ ಸಾಕಷ್ಟು ಸುದ್ದಿ ಮಾಡಿದ್ದವು.

ದಿಲ್ಲಿ, ನೋಯ್ಡಾಗಳಂತಹ ಮಹಾನಗರಿಗಳಲ್ಲಿ ಇಂತಹ ಪ್ರಕರಣಗಳ ಸಂಖ್ಯೆಯು ಸಾಕಷ್ಟಿತ್ತು. ಸಾಲದ್ದೆಂಬಂತೆ ಆಫೀಸು, ಅಪಾರ್ಟ್‍ಮೆಂಟ್ ನಂತಹ ಸ್ಥಳಗಳಲ್ಲಿ ವಿದ್ಯಾವಂತರೇ ಈ ಅಮಾಯಕ ಡೆಲಿವರಿ ಹುಡುಗರನ್ನು ಕಾಡುತ್ತಿದ್ದರು ಎಂಬುದು ಗಮನಾರ್ಹ ಅಂಶ. ಪರಿಸ್ಥಿತಿಗಳು ಹಾಗಿದ್ದಾಗ ಜಗತ್ತಿಡೀ ವಿಶ್ರಾಂತಿ ತೆಗೆದುಕೊಳ್ಳುವ ವಯಸ್ಸು ಮತ್ತು ಸಮಯದಲ್ಲಿ ಅವರೇಕೆ ದುಡಿಯುತ್ತಿದ್ದರು? ಅಂಥಾ ಅನಿವಾರ್ಯತೆಗಳು ಅವರಿಗೇನಿರಬಹುದು? ಹೀಗೆ ಪ್ರಶ್ನೆಗಳೇನೋ ನನ್ನಲ್ಲಿ ಸಾಕಷ್ಟಿದ್ದವು. ಆದರೆ ಉತ್ತರವನ್ನು ಸಾವಧಾನವಾಗಿ ಕೇಳಿ ತಿಳಿಯುವ ಸಮಯವು ಅದಾಗಿರಲಿಲ್ಲವಲ್ಲಾ! ಮಳೆಯ ಕೆಲ ಹನಿಗಳನ್ನು ಸೋಕಿದ ಆ ಪುಟ್ಟ ಬರ್ಗರ್ ಪ್ಯಾಕೆಟ್ಟೂ, ಮನಸ್ಸೂ ಒದ್ದೆ ಒದ್ದೆ.

ಇಂಥದ್ದೇ ಘಟನೆಯೊಂದು ಮತ್ತೆ ನೆನಪಾಗಿದ್ದು ಕಡಲೆಕಾಯಿ ಮಾರುತ್ತಿದ್ದ ವೃದ್ಧರೊಬ್ಬರನ್ನು ಭೇಟಿಯಾದಾಗ. ಕೊರೋನಾ ಕಾಲದಲ್ಲಿ ಕಷ್ಟದಿಂದ ದಿನಕ್ಕೆ ನೂರೋ, ನೂರೈವತ್ತೋ ಸಂಪಾದಿಸುತ್ತಿದ್ದ ವೃದ್ಧರೊಬ್ಬರು ನಿತ್ಯ ತಮ್ಮ ಕೈಗಾಡಿಯನ್ನು ಎಳೆದುಕೊಂಡೇ ಸಾಗುತ್ತಿದ್ದರು. ಮುಂಜಾನೆ ಮನೆಯಿಂದ ಮಾರುಕಟ್ಟೆಗೆ ಮೂರು ಕಿಲೋಮೀಟರು ಮತ್ತು ಸಂಜೆ ಮನೆಗೆ ಮರಳಲು ಮತ್ತೊಮ್ಮೆ ಮೂರು ಕಿಲೋಮೀಟರು. ತೀರಾ ಸಣಕಲನಾಗಿದ್ದ ಆತ ತನ್ನ ದೇಹಕ್ಕಿಂತ ನಾಲ್ಕು ಪಟ್ಟು ಹೆಚ್ಚು ಅಗಲ ಮತ್ತು ತೂಕವಿದ್ದ ಕೈಗಾಡಿಯನ್ನು ಏಕಾಂಗಿಯಾಗಿ ತಳ್ಳುತ್ತಾ
ಸಂಪಾದನೆಯ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದ.

ದಿಲ್ಲಿಯ ಕೊಲ್ಲುವ ರಣಬಿಸಿಲಿನಲ್ಲಿ ಹೆಗಲ ಮೇಲೆ ಹಾಕಿದ್ದ ಹಳೆಯ ಬೈರಾಸೊಂದರಿಂದ ಲೆಕ್ಕವಿಲ್ಲದಷ್ಟು ಬಾರಿ ಮುಖವೊರೆಸುತ್ತಾ, ತನ್ನ ವಯೋಮಾನದ ಶಕ್ತಿಗೆ ಮೀರಿದ ಭಾರವನ್ನು ಹೊತ್ತ ಸೈಕಲ್ ರಿಕ್ಷಾವನ್ನು ಮೈಲುಗಟ್ಟಲೆ ಎಳೆಯುತ್ತಾ, ಪ್ರಯಾಣಿಕರನ್ನು ದಡಸೇರಿಸುವ ವೃದ್ಧರದ್ದೂ ಇದೇ ಪಾಡು. ಎಲ್ಲಾ ಹೊಟ್ಟೆಪಾಡಿಗಾಗಿ! ಈ ಅಂಕಣ ಬರಹವು ಸಿದ್ಧವಾಗುವ ಹೊತ್ತಿಗೆ ದಿಲ್ಲಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ರೈತ ಚಳುವಳಿಯು ಭರ್ತಿ ನೂರು ದಿನಗಳನ್ನು ದಾಟಿದೆ.

ಮಕ್ಕಳು, ಹೆಂಗಸರು, ವೃದ್ಧರೆಂಬ ಭೇದವಿಲ್ಲದೆ ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ದೇಶದ ಇತಿಹಾಸವನ್ನು ಬರೆಯುತ್ತಿದ್ದಾರೆ. ಎಪ್ಪತ್ತರ ದಶಕದ ಖ್ಯಾತ ಗೀತರಚನಾಕಾರ ಸಂತೋಷ್ ಆನಂದ್ ಶೋ ಒಂದರಲ್ಲಿ ಗದ್ಗದಿತರಾಗಿ ಮಾತನಾಡುತ್ತಾ ಹೀಗೆ ಹೇಳುತ್ತಾರೆ: ‘ಕೊನೆಗೂ ಜಯ ಸಿಗುವುದು ಧೈರ್ಯಕ್ಕೇ ಹೊರತು ಆಯುಧಕ್ಕಲ್ಲ’, ಎಂದು. ಲೋಕಾನುಭವದಿಂದ ಮಾಗಿದವರ ಮಾತುಗಳಲ್ಲಿ ಅದೆಷ್ಟು ಸತ್ಯ, ಅದೆಷ್ಟು ಸತ್ವ!

‍ಲೇಖಕರು Avadhi

March 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: