’ಹಳೆಯ ಪ್ರೇಮ ಹುಡುಕಿ ಬರದಿರಲಪ್ಪ ದೇವರೇ!’ – ಬಿ ವಿ ಭಾರತಿ

ಭಾರತಿ ಬಿ ವಿ

ಮಧ್ಯಾಹ್ನ ಗೆಳತಿಯ ಮನೆಗೆ ಹೋಗುವ ಕಾರ್ಯಕ್ರಮವಿತ್ತು. ಹಾಗಾಗಿ ಬೇಗ ಬೇಗ ಕೆಲಸ ಮುಗಿಸಬೇಕೆನ್ನುವ ತರಾತುರಿಯಲ್ಲಿ ಮನೆ ತುಂಬ ಹಾರಾಡುತ್ತಿದ್ದೆ. ಅಷ್ಟರಲ್ಲಿ ಫೋನು ಕಿರುಚಲು ಶುರು ಮಾಡಿತು. ಅಯ್ಯೋ ಥು! ಈ ಕೆಲಸದ ಮಧ್ಯೆ ಇದರದ್ದೊಂದು ಗೋಳು ಅಂತ ಬಯ್ದುಕೊಂಡು ನೋಡಿದರೆ ಅವಳದ್ದೇ ಫೋನು. ಸ್ಕೂಲಿನಲ್ಲಿ ಓದುವ ದಿನಗಳಿಂದ ನೋಡಿದ್ದೇನಲ್ಲ, ಅವಳು ಯಾವತ್ತೂ ಹಾಗೆಲ್ಲ ಅನಾವಶ್ಯಕ ಕಾಲ್ ಮಾಡುವವಳೇ ಅಲ್ಲ. ಅದೂ ಮಧ್ಯಾಹ್ನ ಅವಳದ್ದೇ ಮನೆಗೆ ಹೊರಟಿರುವಾಗ ಯಾಕೆ ಕಾಲ್ ಮಾಡುತ್ತಿದ್ದಾಳೆ ಅಂದುಕೊಳ್ಳುತ್ತಾ ಕಾಲ್ ತೆಗೆದೆ.
ಆ ಕಡೆಯಿಂದ ಪಿಸುದನಿಯಲ್ಲಿ ‘ಈಗಲೇ ಬರ್ತೀಯಾ ನಮ್ಮನೆಗೆ? ಅರ್ಜೆಂಟು ಕಣೇ….’ ಅಂದಳು. ನನಗೆ ಗಾಭರಿಯಾಯಿತು – ಏನಾದರೂ ತೊಂದರೆ ಆಗಿದೆಯಾ? ಅಯ್ಯೋ! ಮನೆಯಲ್ಲಿರುವವರೆಲ್ಲ ಇಷ್ಟು ಹೊತ್ತಿಗೆ ಕೆಲಸ, ಕಾಲೇಜು ಅಂತ ಹೊರಟಿರುತ್ತಾರೆ. ಇವಳೊಬ್ಬಳೇ ಮನೆಯಲ್ಲಿರುತ್ತಾಳೆ! ‘ಏನೇ ಏನಾದರೂ ಸೀರಿಯಸ್ ಪ್ರಾಬ್ಲಮ್ಮಾ? ದೇವರೇ, ಭಯ ಆಗ್ತಿದೆ …’ ಅನ್ನುವಷ್ಟರಲ್ಲಿ ‘ಅಯ್ಯೋ! ಅವೆಲ್ಲ ಏನೂ ಆಗಿಲ್ಲ ಮಾರಾಯ್ತಿ. ಚಂದ್ರ ಬಂದಿದಾನೆ … ಚಂದ್ರ …’ ಅಂದಳು. ಚಂದ್ರನಾ? ಯಾವ ಚಂದ್ರ?! ಜಗತ್ತಿಗೇ ಗೊತ್ತಿರೋ ಒಬಾಮ, ನರೇಂದ್ರ ಮೋದಿ ಬಂದಿರೋ ರೀತಿಯಲ್ಲಿ ಅವಳು ಹೇಳಿದ ರೀತಿಗೆ ನಾನು ನಗುತ್ತಾ ‘ಯಾರೇ ಅದೂ?! … ’ ಅಂತ ತರಲೆ ಮಾಡುವಷ್ಟರಲ್ಲಿ ಅವಳು ಪಿಸು ದನಿಯಲ್ಲಿ ‘ಅಯ್ಯೋ ಕಾಲೇಜಲ್ಲಿ ನನ್ನ ಜೊತೆ ಇದ್ದನಲ್ಲ …. ಆ ಚಂದ್ರ! ಅದೇ ನನ್ನ ಮೇಲೆ ಕವಿತೆ ಬರೀತಿದ್ದ ಅಂತ ಹೇಳಿದ್ದೆನಲ್ಲ ಅವನು ಕಣೇ … ಇದ್ದಕ್ಕಿದ್ದ ಹಾಗೆ ಪ್ರತ್ಯಕ್ಷ ಆಗಿದಾನೆ ಎಲ್ಲಿಂದಲೋ. ನನಗೆ ಎದೆ ಹೊಡ್ಕೊಳ್ತಿದೆ. ಪ್ಲೀಸ್ ಬಾ ಬೇಗ’ ಅಂದಳು. ನಾನು ಅಶ್ಚರ್ಯದಿಂದ ಬಾಯಿ ತೆಗೆದು ನಿಂತೆ. ಇಷ್ಟು ವರ್ಷದ ನಂತರ ಕಾಲೇಜಿನ ದಿನಗಳ ಮೋಹಿತನೊಬ್ಬ ಇದ್ದಕ್ಕಿದ್ದ ಹಾಗೆ ಎಲ್ಲಿಂದ ಧುತ್ತೆಂದು ಅವತರಿಸಿದ?! ಇಂಥ ಪ್ರೇಮ ಜಗತ್ತಿನಲ್ಲಿ ಇದೆಯಾ? ಇಪ್ಪತ್ತು ವರ್ಷಗಳ ಕೆಳಗೆ ಪ್ರೀತಿಸುತ್ತಿದ್ದವನೊಬ್ಬ ಈಗಲೂ ಅದೇ ನೆನಪಿನಲ್ಲಿ ಅವಳನ್ನು ಹುಡುಕಿ ಬಂದನೆಂದರೆ ಎಂಥ ಚೆಂದ! ನನಗ್ಯಾಕೋ ಸಣ್ಣ ರೋಮಾಂಚನ ಶುರುವಾಯಿತು. ‘ಆಹ್! ಬಂದೆ ಈಗಲೇ ಹಾರಿಕೊಂಡು …’ ಅಂತ ಫೋನಿಟ್ಟೆ.
ಅರ್ಧಂಬರ್ಧ ಆಗಿದ್ದ ಅಡಿಗೆಯನ್ನು ಅಲ್ಲಲ್ಲಿಗೇ ಬಿಟ್ಟು ಸರಸರನೇ ರೆಡಿಯಾಗಲು ಹೊರಟೆ. ಸ್ನಾನ ಮಾಡುವಾಗ, ಪೌಡರ್ ಹಚ್ಚುವಾಗ, ಚಪ್ಪಲಿ ಹಾಕುವಾಗ ’ಆ ದೇವರೆ ನುಡಿದಾ ಮೊದಲ ನುಡಿ … ಪ್ರೇಮಾ … ಪ್ರೇಮಾ’ ಅಂತ ಗುನುಗುತ್ತಿದ್ದೆ. ಆ ಹಾಡು ಗೆಳತಿಯ ಪ್ರಿಯವಾದ ಹಾಡು … ಆ ಕಾಲದಲ್ಲಿ … ಅವನೊಡನೆ ಪ್ರೇಮಕ್ಕೆ ಬಿದ್ದ ದಿನಗಳಲ್ಲಿ ಮತ್ತು ಅವನು ಅವಳ ಆರಾಧನೆಗೆ ತೊಡಗಿದ ದಿನಗಳಲ್ಲಿ. ಎಷ್ಟು ಕನಸುಗಣ್ಣಿಂದ ಹಾಡುತ್ತಿದ್ದಳು ಅವಳು ಆ ಹಾಡನ್ನು. ಅವನಂತೂ ಎಂತೆಂಥ ಕವಿತೆ ಕಟ್ಟಿ ಹಾಡುತ್ತಿದ್ದ ಅವಳ ಮೇಲೆ. ‘ನಿನ್ನ ಹೆಜ್ಜೆಯ ಮೇಲೆ ಹೆಜ್ಜೆಯಿಡ ಹೊರಟಾಗಲೇ ತಿಳಿದದ್ದು / ನಾವು ಒಟ್ಟಾಗಿ ನಡೆದಾಗಿದೆಯೆಂದು …’ ಅಂತ ಬರೆದಿದ್ದ ಎಂದು ಅವಳು ಹೇಳಿದ್ದು ಈಗ ಮೊನ್ನೆ ಮೊನ್ನೆಯೇನೋ ಅನ್ನುವ ಹಾಗೆ ನೆನಪಿದೆ. ಥು! ಈ ಪ್ರೇಮ ಅನ್ನುವುದು ಯಾವ ವಯಸ್ಸಿಗೂ ಯಾಕಿಷ್ಟು ಮಧುರ ಅನ್ನಿಸುತ್ತದೋ ಅಂತ ಪುಳಕಗೊಳ್ಳುತ್ತಾ ಆಟೋ ಹತ್ತಿದೆ ….
ಬೆಂಗಳೂರಿನ ಕೆಟ್ಟ ರಸ್ತೆಯಲ್ಲಿ ಹೋಗುತ್ತಿರುವ ಆಟೋ ಕೂಡಾ ಇವತ್ತು ಪುಷ್ಪಕ ವಿಮಾನ ಅನ್ನಿಸಿಬಿಟ್ಟಿತು ನನಗೆ. ಆಹ್! ಇಂಥದ್ದೊಂದು ಮಧುರ ಪ್ರೇಮ ನನ್ನನ್ನು ಹುಡುಕಿ ಬರಲಿ ಅಂತ ನಾನು ಎಷ್ಟು ಸಲ ಅಂದುಕೊಂಡಿಲ್ಲ? ಸ್ಕೂಲಿನಲ್ಲಿರುವಾಗ ನನ್ನನ್ನು ಹಿಂಬಾಲಿಸಿದವನು, ಕಾಲೇಜಿನಲ್ಲಿರುವಾಗ ನಾನು ಹಿಂಬಾಲಿಸಿದವನು ಯಾರಾದರೂ, ಎಂದಾದರೂ ಹಳೆಯ ಪ್ರೇಮದ ಅಮಲಿನಲ್ಲಿ ಒಂದು ದಿನ ನನಗೆದುರಾಗಲಿ ಅಂತ ಹಲುಬಿದ್ದೆಷ್ಟು ಸಲ. ಹಾಗೊಮ್ಮೆ ಬಂದು ನಿಂತದ್ದೇ ಆದರೆ, ಬದುಕು ಈಗಿರುವುದಕ್ಕಿಂತ ಅದೆಷ್ಟು ರಮ್ಯವಾಗಿರುತ್ತದೋ ಅಂತೆಲ್ಲ ಅಂದುಕೊಂಡಿದ್ದೆ ಸಾವಿರಾರು ಸಲ. ನಾನಿ ಸ್ಕೂಲಿನಲ್ಲಿರುವಾಗ ಶನಿವಾರದಿನ ಮಾರ್ನಿಂಗ್ ಕ್ಲಾಸ್ ಇರುತ್ತಿತ್ತು. ದಿನಾ ಸೂರ್ಯ ನಡುನೆತ್ತಿಗೆ ಬಂದಾಗ ಶುರುವಾಗುವ ಸ್ಕೂಲಿಗೆ, ಮಧ್ಯಾಹ್ನದ ಊಟವನ್ನೂ ಮುಗಿಸಿ ಅಲ್ಲಾಡಿಕೊಂಡು ಹೋಗುತ್ತಿದ್ದ ನಮಗೆ ಶನಿವಾರವೆಂದರೆ ಶಿಕ್ಷೆ. ತಡೆಯಲಾಗದ ನಿದ್ದೆಯನ್ನು ಕಷ್ಟಪಟ್ಟು ದೂರತಳ್ಳಿ, ತಡವಾಯಿತೆಂದು ಸ್ನಾನ ಕೂಡ ಮಾಡದೇ ಮುಖ ಗಲಬರಿಸಿ, ಕಾಫಿ ಅರ್ಧಂಬರ್ಧ ಕುಡಿದು ಓಡು ನಡಿಗೆಯಲ್ಲಿ ಹೊರಡುತ್ತಿದ್ದೆವು ನಾನು ಮತ್ತು ನನ್ನ ಗೆಳತಿ ಸುಜಿ.

ಹೀಗೇ ಒಂದು ಶನಿವಾರ ‘ಅವನು’ ಎದುರಾಗಿದ್ದು! ಸಾಧಾರಣ ರೂಪದ ಅವನ ಕಡೆ ಗಮನ ಹರಿದಾಗ, ಧುತ್ತೆಂದು ಗಮನಕ್ಕೆ ಬಂದಿದ್ದು ಅವನ ಕಣ್ಣುಗಳು. ಆಗೆಲ್ಲ ಹೀಗೆಯೇ … ರೆಪ್ಪೆ, ಕೂದಲು, ಕಣ್ಣು ಎಲ್ಲವೂ ಆಕರ್ಷಣೆಯ ಮಾನದಂಡವಾಗಿದ್ದ ಕಾಲ!! ಇಷ್ಟಿಷ್ಟಗಲದ ಕಣ್ಣುಗಳ ಒಡೆಯನನ್ನು ನಾವು ಬಾಯಿ ಬಿಟ್ಟುಕೊಂಡು ಒಂದೆರಡು ಸಲ ನೋಡಿದ ಕೂಡಲೇ ಆ ಹೈದನಿಗೆ ಒಂಥರಾ ಥ್ರಿಲ್ ಆಗಿಹೋಗಿ instant ಪ್ರೇಮ ಹುಟ್ಟೇ ಬಿಟ್ಟಿತ್ತು. ಅವತ್ತಿನಿಂದ ಮೊದಲುಗೊಂಡು, ಸ್ಕೂಲಿನ ಜೀವನ ಮುಗಿಯುವವರೆಗೂ ಅವನು ಆ ತಿರುವಿನಲ್ಲಿ ನಾವು ಬರುವಷ್ಟರಲ್ಲಿ ಜೀವನದ ಆದ್ಯ ಕರ್ತವ್ಯವೇ ಅದೇನೋ ಅನ್ನುವ ಹಾಗೆ ಕಾದು ನಿಂತಿರುತ್ತಿದ್ದ. ನಮ್ಮನ್ನು ಕಂಡ ಕೂಡಲೇ ಕಣ್ಣಲ್ಲೊಂದು ಮಿಂಚು. ಅವನ ಹೆಸರು ತಿಳಿಯದ ನಾವು ಅವನಿಗೆ ‘ದೊಡ್ಡ ಕಣ್ಣು’ ಅಂತಲೇ ಕರೆದುಕೊಂಡೆವು ಕೊನೆಯವರೆಗೂ. ಮಾತಿಲ್ಲ, ಕಥೆಯಿಲ್ಲ, ಬರೀ ರೋಮಾಂಚನ! ನಮ್ಮನ್ನು ಸ್ಕೂಲಿನವರೆಗೆ ಹಿಂಬಾಲಿಸುತ್ತಿದ್ದ. ನಾವು ಅರ್ಧ ಗಾಭರಿಯಲ್ಲಿ, ಅರ್ಧ ಪುಳಕದಲ್ಲಿ ಸ್ಕೂಲು ತಲುಪುತ್ತಿದ್ದೆವು. ಗೇಟಿನ ಒಳಗೆ ಓಡಿ, ಪ್ರೇಯರ್‌ಗೆ ನಿಂತಿರುತ್ತಿದ್ದ ಸಾಲನ್ನು ಸೇರಿ ನಿಂತು, ಮೆಲ್ಲನೊಂದು ಬಾರಿ ಹಿಂದಿರುಗಿದರೆ ಎರಡೇ ಬೆರಳಲ್ಲಿ ಬೈ ಅನ್ನುವ ಸಂಜ್ಞೆ ಮಾಡುತ್ತಾ ಹೊರಡುತ್ತಿದ್ದ. ಆಗ ಹೊರಟವನು ಹನ್ನೆರಡು ಘಂಟೆಗೆ ಸ್ಕೂಲು ಬಿಡುವ ಸಮಯಕ್ಕೆ ಮತ್ತೆ ಹಾಜರ್. ಸುಜಿ ಮತ್ತು ನಾನು ಇಬ್ಬರೂ ಮನೆ ತಲುಪುವವರೆಗೂ ಹಿಂಬಾಲಿಸಿದ ಅವ, ನಂತರವೇ ಹೊರಡುತ್ತಿದ್ದ. ಅವಳು ‘ನಿನಗಾಗಿ ಬರುತ್ತಾನೆ’ ಅನ್ನುತ್ತಲೂ, ನಾನು ‘ಅವಳಿಗಾಗಿ ಬರುತ್ತಾನೆ’ ಅಂತ ಪ್ರಕಟವಾಗಿಯೂ ಹೇಳಿಕೊಳ್ಳುತ್ತಾ ಮತ್ತು “ನನಗಾಗೇ ಬರುತ್ತಾನೆ’ ಅಂತ ಮನಸ್ಸಿನಲ್ಲೇ ಮುದಗೊಳ್ಳುತ್ತಾ, ಗೊಳ್ಳುತ್ತಾ ಸ್ಕೂಲು ಮುಗಿಸಿದೆವು! ಆಮೇಲೇನಾಯ್ತು? ಅನ್ನುವ ಪ್ರಶ್ನೆ ನಿಮ್ಮದು ಅಂತ ನನಗೆ ಗೊತ್ತು. ಏನೂ ಆಗಲಿಲ್ಲ!! ಎರಡು ವರ್ಷ ಹಿಂಬಾಲಿಸಿದ ಅವನು ನಂತರ ಕಣ್ಣಿಗೆ ಬೀಳಲಿಲ್ಲ ಅಷ್ಟೇ. ಕೊನೆಗೂ ಅವನು ನಮ್ಮಿಬ್ಬರಲ್ಲಿ ಯಾರನ್ನು ಮೆಚ್ಚುತ್ತಿದ್ದ ಅನ್ನುವುದೂ ತಿಳಿಯದ ಹಾಗೆ ಈ ಲವ್ ಸ್ಟೋರಿ ಮುಕ್ತಾಯವಾಗಿತ್ತು.
ಯಾವಾಗಲೋ ಎಲ್ಲಾದರೂ ಅಗಲ ಕಣ್ಣುಗಳ ವ್ಯಕ್ತಿಯನ್ನು ನೋಡಿದರೆ ಅವ ನೆನಪಾಗುತ್ತಿದ್ದ. ಛೇ! ಅಮರ ಪ್ರೇಮ ಕಥೆಯೊಂದು ಮುರುಟಿ ಹೋಯಿತಲ್ಲಾ ಅಂತ ಅಂದುಕೊಳ್ಳುವಷ್ಟರಲ್ಲೇ ಕಾಲೇಜಿನಲ್ಲಿ ಮತ್ತೊಬ್ಬ ಎದುರಾದ. ಯಥಾ ಪ್ರಕಾರ ಅವ ನನ್ನನ್ನು ನೋಡಿದ, ನಾನೂ ಅವನನ್ನು ನೋಡಿದೆ. ಉಳಿದ ಕಥೆಯೆಲ್ಲ ಡಿಟ್ಟೋ ಡಿಟ್ಟೋ! ಕಾಲೇಜಿನ ಓದು ಮುಗಿಯುವವರೆಗೂ ಅದೇ ರಾಗ, ಅದೇ ಹಾಡು. ನಮ್ಮ ಕಾಲೇಜಿನಲ್ಲಿ ಹೆಣ್ಣು ಮಕ್ಕಳೆಲ್ಲ ರೈಟಿಸ್ಟ್‌ಗಳು ಮತ್ತು ಗಂಡು ಮಕ್ಕಳು ಲೆಫ್ಟಿಸ್ಟ್‌ಗಳು! ಎಡಬದಿಯ ಮೆಟ್ಟಿಲು ಹುಡುಗರಿಗಾಗಿ, ಬಲಗಡೆಯದ್ದು ನಮಗೆ. ಒಟ್ಟಿಗೇ ಮೆಟ್ಟಿಲು ಹತ್ತಿದರೆ, ಮಕ್ಕಳೇ ಆಗಿಹೋಗುತ್ತವೇನೋ ಅಂತ ನಂಬಿದ್ದರು ನಮ್ಮ ಕಾಲೇಜಿನ ಪ್ರಿನ್ಸಿಪಾಲ್. ಕಾಲೇಜಿನ ಮೆಟ್ಟಿಲು ಹತ್ತುವಾಗ ಬೇರೆ ಬೇರೆಯಾಗೇ ಹತ್ತಿದರೂ, ಒಂದೇ ಕ್ಲಾಸ್ ರೂಮಿನಲ್ಲಂತೂ ಕುಳಿತುಕೊಳ್ಳುತ್ತಿದ್ದೆವು. ಮೆಟ್ಟಿಲು ಹತ್ತಿ ರೂಮಿಗೆ ಬಂದ ನಂತರ ಅನಾಹುತವೇನೂ ಆಗುವುದಿಲ್ಲ ಅಂತ ನಂಬಿಕೆ ಇದ್ದಿರಬೇಕು ನಮ್ಮ ಕಾಲೇಜಿನ ಪೂಜ್ಯ ಗುರುವೃಂದಕ್ಕೆ! ಇಷ್ಟೆಲ್ಲ ಎಚ್ಚರಿಕೆಯ ನಡುವೆಯೂ ಅನೇಕ ಪ್ರೇಮ ಹುಟ್ಟುತ್ತಿತ್ತು, ಸಾಯುತ್ತಿತ್ತು. ನನಗೂ ಕೂಡ ಅವನೊಬ್ಬ ಸಿಕ್ಕಾಪಟ್ಟೆ ಇಷ್ಟವಾದ. ಸ್ಕೂಲಿನಲ್ಲಿ ತುಂಬ ಅಪ್ರಬುದ್ಧಳಾಗಿದ್ದೆ ಮತ್ತು ಈಗ ಸಿಕ್ಕಾಪಟ್ಟೆ ಪ್ರಬುದ್ಧಳಾಗಿ ಹೋಗಿರುವುದರಿಂದ ಇದು ಅಮರ ಪ್ರೇಮವೇ ಅಂತ ನಾನಂತೂ ತೀರ್ಮಾನಿಸಿದ್ದೆ. ‘ನಿನ್ನ ಸಾವಿರ ಭಾವ ಧುಮ್ಮಿಕ್ಕುವ ಕಣ್ಣಲ್ಲಿ ನನ್ನದೊಂದು ನೆನಪಿನ ಹನಿಯಾದರೂ ಇರಲಿ’ ಅಂತ ಕವನ ಕೂಡ ಬರೆದೆ. ಅವನನ್ನು ಹಿಂಬಾಲಿಸಿದ್ದೇ ಹಿಂಬಾಲಿಸಿದ್ದು. ಆಮೇಲೆ …? ಆಮೇಲೇನು!! ಏನೂ ಇಲ್ಲ. ಆಗ ವಿದಾಯ ಹೇಳಿದ ನಾವು ಮತ್ತೆ ಎಂದೂ ಭೇಟಿಯಾಗಲಿಲ್ಲ. ಆಗಾಗ ಮುಂದಲೆ ಉದುರಿದ ಮಧ್ಯ ವಯಸ್ಕನೋ, ಹೊಟ್ಟೆ ಒಂದಿಷ್ಟು ಡುಬ್ಬಾದವನೋ, ಗರುಡ ಮೂಗಿನವನೋ, ಅಗಲ ಕಣ್ಣಿನವನೋ ಎದುರಾದರೆ ಅರೆಕ್ಷಣ ನಿಂತು ಅವರೇ ಇರಬಹುದಾ ಅಂತ ಅಂದುಕೊಳ್ಳುತ್ತಿದ್ದೆ. ಅಂದುಕೊಂಡಿದ್ದೇ ಬಂತು ಅಷ್ಟೇ. ಎಂದೂ, ಆ ಇಬ್ಬರೂ ಎದುರಾಗಲೇ ಇಲ್ಲ. ಆ ರೀತಿಯ ‘ಪ್ರೇಮಿಗಳ’ ಮುಖಾಮುಖಿಯ ಸಂಭವವನ್ನು ಇವತ್ತಿಗೂ ನಾನು ತಳ್ಳಿ ಹಾಕಿಲ್ಲ. ನನ್ನ ಆ ನಂಬಿಕೆ ತೀರಾ ಹುಸಿಯಾದದ್ದಂತೂ ಅಲ್ಲ ಅಂತ ಈಗ ಪ್ರೂವ್ ಆಗಿದೆ ಬೇರೆ! ಅವಳನ್ನು ಹುಡುಕಿ ಅವ ಬಂದಿದ್ದಾನಂತೆ! ಎಂಥ ಚೆಂದ …
ನನ್ನ ಪಕ್ಕದ ಮನೆಯಲ್ಲೇ ಅವಳು ಇದ್ದಿದ್ದು. ಬೇರೆ ಬೇರೆ ಕಾಲೇಜು. ಆದರೆ ದಿನವೂ ಕಾಲೇಜಿನ ಎಲ್ಲ ವಿಷಯಗಳೂ ‘ಲೈವ್ ಟೆಲಿಕಾಸ್ಟ್’ ಆಗುವಷ್ಟು ಗಾಢ ಸ್ನೇಹ ನಮ್ಮದು. ಈ ಚಂದ್ರನ ಬಗ್ಗೆ ಅದೆಷ್ಟು ಕಿವಿ ಕಚ್ಚಿಕೊಂಡಿದ್ದೆವು ಗೊತ್ತೇ? ಇವಳಿಗಿಂತ ಒಂದು ವರ್ಷ ದೊಡ್ಡವನಾಗಿದ್ದ ಅವನು ಕಾಲೇಜಿನಲ್ಲಿ ಇವಳನ್ನು ಕಂಡು ಹುಚ್ಚನಾಗಿದ್ದ. ಅವಳ ಮೇಲೆ ಕವಿತೆ ಬರೆಯುತ್ತಿದ್ದ. ಸಿಕ್ಕಾಪಟ್ಟೆ ಆರಾಧಿಸುತ್ತಿದ್ದ ಅಂತ ಅವಳು ಹೇಳುತ್ತಿದ್ದಳು. ಕಾಲೇಜು ಮುಗಿದ ಮೇಲೆ ಅವನ ಮನೆಯ ವಿರುದ್ದ ದಿಕ್ಕಿನಲ್ಲಿದ್ದ ಇವಳ ಮನೆಯವರೆಗೆ ಜೊತೆಯಲ್ಲೇ ಹೆಜ್ಜೆ ಹಾಕುತ್ತಿದ್ದ. ಹಾಗೆ ನಡೆಯುವಾಗ ಎಲ್ಲೋ ಓದಿದ್ದನ್ನು, ಕಟ್ಟಿದ ಕವಿತೆಯನ್ನು ಮೆಲುದನಿಯಲ್ಲಿ ಹಾಡುತ್ತಿದ್ದನಂತೆ. ನಾಟಕಗಳಲ್ಲೂ ನಟಿಸುತ್ತಿದ್ದ ಅವನು, ಒಂದು ಸಲ ಸ್ಟೇಜಿನ ಮೇಲೆ ನಿಂತಾಗ ಹೀರೋಯಿನ್‌ಗೆ ಹೇಳಬೇಕಾದ ಡೈಲಾಗ್ ಹೇಳುವಾಗ ಅದು ಸ್ಟೇಜ್ ಅನ್ನುವುದನ್ನೂ ಮರೆತು, ಮುಂದಿನ ಸಾಲಿನಲ್ಲೇ ಕೂತಿದ್ದ ಇವಳನ್ನೇ ನೋಡುತ್ತಾ ಹೇಳಿಬಿಟ್ಟಾಗ, ಅವನ ಗೆಳೆಯರು ಮತ್ತು ಇವಳ ಗೆಳತಿಯರು ರೇಗಿಸಿ ಸಾಯಿಸಿ ಬಿಟ್ಟಿದ್ದರಂತೆ! ಅವಳು ತನ್ನ ಈ ಪ್ರೇಮ ಕಥೆಯನ್ನು ಹೇಳಿಕೊಳ್ಳುವಾಗ ನನ್ನ ಅಮರ ಪ್ರೇಮದ ಕಥೆ ಡಲ್ ಅನ್ನಿಸಿ ಬಿಡುತ್ತಿತ್ತು ನನಗೆ.
ಆಮೇಲೆ ಅವನು ಕೊನೆಯ ವರ್ಷದ ಓದು ಮುಗಿಸಿ ಹೊರಟ. ಇವಳೂ ಓದು ಮುಗಿಸಿದಳು. ಅವನು ಒಂದು ಪತ್ರ ಬರೆದು ಮದುವೆಯಾಗೋಣ ಅಂತ ಕೇಳುವಷ್ಟರಲ್ಲಿ ಇವಳಿಗೆ ಮದುವೆ ಆಗಿಹೋಗಿತ್ತು. ಸರಿ, ಅಲ್ಲಿಗೆ ಕಥೆ ಅಂತ್ಯ ಕಂಡಿತ್ತು. ಅಲ್ಲಿಂದ ಮುಂದೆ ನಾನು, ಅವಳು ಆಗೀಗ ಭೇಟಿಯಾದಾಗ ಅವನ ಮಾತು ಬರುತ್ತಿತ್ತು. ಅವಳು ತುಂಬ ಪ್ರೀತಿಯಿಂದ ಆ ಕ್ಷಣಗಳನ್ನು ನೆನೆಯುತ್ತಿದ್ದಳು. ಈಗ ಹೇಗಿದ್ದಾನೋ? ಅವ ಎದುರಾದರೆ?? ಅನ್ನುತ್ತಿದ್ದೆ ನಾನು ಆಗೀಗ. ‘ಎಲ್ಲಿಂದ ಬರುತ್ತಾನೆ! ಸುಮ್ಮನಿರು ಸಧ್ಯ. ಅದೆಲ್ಲ ಆಗ ಹೋಗುವ ಮಾತಲ್ಲ’ ಅನ್ನುವಾಗಲೇ ಎಷ್ಟೋ ವರ್ಷದ ನಂತರವೂ ನೆನಪಿನಲ್ಲಿ ಉಳಿದಿದ್ದ ಅವನ ಕವಿತೆಯ ಸಾಲುಗಳನ್ನು ಹೇಳುತ್ತಿದ್ದಳು. ಅವನು ಹೊರಟುಹೋದ ಇಪ್ಪತ್ತು ವರ್ಷಗಳ ಸುದೀರ್ಘ ಅವಧಿಯಲ್ಲಿ ಅವನ ಮಾತು ತುಂಬ ಸಲ ಬಂದು ಹೋಗಿತ್ತು. ಹೋದ ಬಾರಿ ಭೇಟಿಯಾದಾಗಲೂ ಅವನ ಬಗ್ಗೆ ಮಾತಾಡಿದ್ದೆವು. ಇತ್ತೀಚಿನ ದಿನಗಳಲ್ಲಿ ಅವನ ಬಗ್ಗೆ ಮಾತಾಡುವಾಗ ನಾನು ಬಿಳಿ ಕುದುರೆಯನ್ನೇರಿ ಆ ರಾಜಕುಮಾರ ಬಂದು ಬಿಡುತ್ತಾನೇನೋ ಅಂದಾಗ ಅವಳು ಬಿದ್ದು ಬಿದ್ದು ನಕ್ಕಿದ್ದಳು, ಅದು ಅಸಾಧ್ಯವೆನ್ನುವಂತೆ.
ಈಗ ನೋಡಿದರೆ ನನ್ನ ಕಲ್ಪನೆ ಸತ್ಯವಾಗಿ ಹೋಗಿದೆ! ಅವನು ನಿಜಕ್ಕೂ ಅವಳ ಮನೆಗೆ ಬಂದಿದ್ದಾನಂತೆ … ಈ ಭೇಟಿ ಹೇಗಿರಬಹುದು! ಕಳೆದು ಹೋದ ಪ್ರೇಮ ಎಂದೋ ಎದುರಾಗೇ ಬಿಡಬಹುದೆನ್ನುವ ನನ್ನ ಕಲ್ಪನೆ, ಅವಳ ವಿಷಯದಲ್ಲಿ ನಿಜವಾಗಿತ್ತು! ನೆನಪಿನ ಯಾತ್ರೆಯಲ್ಲಿರುವಾಗಲೇ ಅವಳ ಮನೆ ಬಂದಾಗಿತ್ತು. ಅವರಿಬ್ಬರ ನಡುವಿನಲ್ಲಿ ನನ್ನನ್ನು ಯಾಕೆ ಕರೆದಳು ಅನ್ನುವ ಪ್ರಶ್ನೆ ಆಗ ತಲೆಯಲ್ಲಿ ಹೊಳೆಯಿತು. ನಾನು ನಿಜಕ್ಕೂ ಇಲ್ಲಿ ಬರಬೇಕಿತ್ತಾ? ಯಾತಕ್ಕೆ? ಇಬ್ಬರೇ ಮನೆಯಲ್ಲಿ ಕೂತಿರುತ್ತಾರಲ್ಲ, ಇಬ್ಬರೂ ಸೇರಿ ನಗು, ಸೆಳೆತ, ಪುಳಕ ಎಲ್ಲ ಹೆಕ್ಕುತ್ತ ಕೂತಿರಬಹುದು. ನಾನು ಯಾಕೆ ಇಲ್ಲಿಗೆ ಬಂದೆ, ಈ ಅಮರ ಪ್ರೇಮಿಗಳ ನಡುವೆ? ಅವಳು ಕರೆದ ಕೂಡಲೇ ಓಡಿಬಂದೆನಲ್ಲ ಬುದ್ದಿಗೇಡಿ ಅಂತ ನನ್ನನ್ನು ನಾನು ಬಯ್ದುಕೊಳ್ಳುತ್ತಲೇ ಆ ಮನೆ ತಾಜ್‌ಮಹಲೇನೋ ಅನ್ನುವಷ್ಟು ಪ್ರೀತಿಯಿಂದ ಒಳಹೊಕ್ಕೆ…
ಈ ಬದಿಯ ಸೋಫಾದಲ್ಲಿ ಅವಳು ಮತ್ತು ಅದರ ವಿರುದ್ಧ ದಿಕ್ಕಿನ ಸೋಫಾದಲ್ಲಿ ಅವನು ಕೂತಿದ್ದರು. ತಕ್ಕ ಮಟ್ಟಿಗೆ ಸುಂದರವಾಗಿದ್ದ ಅವನನ್ನು ರೋಮಿಯೋ ಮತ್ತೆ ಹುಟ್ಟಿ ಬಂದಿದ್ದಾನೋ ಅನ್ನುವಂತೆ ಭಕ್ತಿಭಾವದಿಂದ ನೋಡಿದೆ. ನನ್ನನ್ನು ನೋಡುತ್ತಲೇ ಅವಳು ಜೀವ ಸಂಚಾರವಾದವಳ ಹಾಗೆ ಧಿಗ್ಗನೆ ಎದ್ದಳು. ಆತುರದಿಂದ ಇಬ್ಬರನ್ನೂ ಪರಿಚಯಿಸಿದವಳೇ ನಾನು ಬರುವುದನ್ನೇ ಕಾಯುತ್ತಿದ್ದವಳಂತೆ – ಕಾಫಿ ಮಾಡ್ತೀನಿ ಅನ್ನುತ್ತಾ ಒಳಕ್ಕೆ ಓಡಿದಳು. ಅಪರಿಚಿತ ವ್ಯಕ್ತಿಯೊಡನೆ ಆ ಹಾಲಿನಲ್ಲಿ ನಾನೊಬ್ಬಳೇ. ಏನು ಮಾತಾಡಬೇಕು ಅಂತ ತೋಚದೇ ಎರಡು ನಿಮಿಷ ತಿಣುಕಾಡಿದೆ. ಆಮೇಲೆ ಮೌನವಾಗಿ ಕೂತಿರುವುದು ಸೌಜನ್ಯವಲ್ಲ ಅನ್ನಿಸಿ ವಿಷಯಗಳನ್ನು ಕೆದಕಿ ಕೆದಕಿ, ಅವನ ಮನೆ, ಸಂಸಾರ, ಹೆಂಡತಿ, ಮಕ್ಕಳು, ಕೆಲಸ, ಲೋನು, ಇನ್ಷೂರೆನ್ಸು, ಚಿನ್ನದ ರೇಟು, ಬೆಂಗಳೂರಿನ ಮನೆ ಬಾಡಿಗೆ, ಆಫೀಸಿನ ಪ್ರೊಮೋಷನ್, ಬಾಸ್ ಕಾಟ, ಬೆಂಗಳೂರಿನ ಟ್ರಾಫಿಕ್ ಜಾಮ್, ಮೆಟ್ರೋ ಪ್ರಾಜೆಕ್ಟ್, ಬೀದಿ ನಾಯಿ ಕಾಟ, ಮೊಬೈಲ್ ಫೋನು …. ಉಫ಼್! ಜಗತ್ತಿನ ವಿಷಯವನ್ನೆಲ್ಲ ಮಾತಾಡಿ ಮುಗಿಸಿದರೂ ಕಾಫಿ ಮಾಡಲು ಹೋದವಳ ಪತ್ತೆಯಿಲ್ಲ! ನನಗೆ ಮಾತಾಡಿ ಆಡಿ, ಆರ್ಟಿಫಿಷಿಯಲ್ಲಾಗಿ ನಕ್ಕು ನಕ್ಕು ಕಿವಿಯ ಹಿಂದಿನ ಗುಬುಟೆಯೆಲ್ಲ ನೋಯಲು ಶುರುವಾಯಿತು. ಇನ್ನು ಸಾಧ್ಯವೇ ಇಲ್ಲ ಅನ್ನುವ ಸ್ಥಿತಿ ತಲುಪಿದಾಗ ಚಡಪಡಿಕೆ ಶುರುವಾಯಿತು.
ಇವಳೇನು ಚಿಕ್ಕಮಗಳೂರಿಗೋ, ಮಡಿಕೇರಿಗೋ ಕಾಫಿ ತೋಟ ಖರೀದಿಸಲು ಹೋಗಿದ್ದಾಳೇನೋ … ಇನ್ನು ಅದರಲ್ಲಿ ಕಾಫಿ ಬೆಳೆಸಿದ ನಂತರ, ಅದೇ ಬೀಜ ಹುರಿದು, ಪುಡಿ ಮಾಡಿಯೇ ಕಾಫಿ ಮಾಡುತ್ತಾಳೇನೋ ಅಂತ ಮನಸ್ಸಿನಲ್ಲೇ ಅವಳನ್ನು ಬಯ್ದುಕೊಂಡೆ. ಅಳಿದುಳಿದ ಕಾವೇರಿ ನೀರಿನ ಸಮಸ್ಯೆ, ಜಯಲಲಿತಾ, ಕನ್ನಡ ಅನ್ನುವ ಎಲ್ಲ ಲೋಕಲ್ ವಿಷಯಗಳೂ ಮುಗಿದುಹೋಯಿತು! ಇನ್ನು ನನ್ನಿಂದ ಅಲ್ಲಿ ಕೂತಿರಲು ಸಾಧ್ಯವೇ ಆಗಲಿಲ್ಲ. ‘ಬಂದೆ ಇರಿ’ ಅನ್ನುತ್ತಾ ಅವಳನ್ನು ಹುಡುಕಿ ಒಳಗೆ ಹೊರಟೆ. ನಾನಿಲ್ಲಿ ಅಪರಿಚಿತನೊಬ್ಬನೊಡನೆ ಈ ಪಾಡು ಪಡುತ್ತಾ ಕೂತಿದ್ದರೆ, ಅಡಿಗೆ ಮನೆಯಲ್ಲಿ ಆ ಮಹಾಮಾತೆ ಗ್ಯಾಸಿನ ಮೇಲೆ ನೀರಿಟ್ಟು ಬಿಸಿಯಾಗುವುದನ್ನು ಕಾಯುತ್ತಾ ನಿಂತಿದ್ದಾಳೆ. ಗ್ಯಾಸಿನ ಉರಿ ಸಿಮ್‌ನಲ್ಲಿದ್ದಿದ್ದು ನೋಡಿದರೆ ಅವಳಿಗೆ ಕಾಫಿ ಆಗಬೇಕೆನ್ನುವ ಉದ್ದೇಶಕ್ಕಿಂತ‘ಈ ಕಾಫಿ ಅನ್ನುವುದು ಎಂದೂ ಆಗದೇ ಇರಲಿ’ ಅನ್ನುವ ಉದ್ದೇಶವೇ ಹೆಚ್ಚಿದ್ದ ಹಾಗೆ ಕಂಡಿತು ನನಗೆ!
ನಾನು ಒಂದಿಷ್ಟು ಅಸಹನೆ, ಮತ್ತಿಷ್ಟು ಸಣ್ಣ ಸಿಡುಕಿನಲ್ಲಿ – ‘ಅಯ್ಯೋ ತಾಯಿ ಬೇಗ ಮುಗಿಸಿ ಬಂದು ಆಯಪ್ಪನನ್ನು ಮಾತಾಡಿಸುವ ಛಾರ್ಜ್ ತೆಗೆದುಕೊಳ್ಳಮ್ಮಾ’ ಅಂದರೆ, ಬಂದಿರುವಾತ ನನ್ನದೇ ಹಳೆಯ ಪ್ರೇಮಿಯೇನೋ ಅನ್ನುವ ಹಾಗೆ ‘ಹೋಗೇ, ನಾನು ಇಷ್ಟು ಹೊತ್ತೂ ಮಾತಾಡಿಸಲಿಲ್ವಾ, ಇನ್ನೊಂದಿಷ್ಟು ಹೊತ್ತು ನೀನೇ ಮಾತಾಡಿಸ್ತಿರು’ ಅಂದಳು ಗದರು ದನಿಯಲ್ಲಿ! ಇದೊಳ್ಳೆ ಕರ್ಮವಾಯಿತಲ್ಲ, ಆಗಲ್ವೇ .. ನೀನು ಬೇಗ ಬಾ. ನಾನು ಎಷ್ಟಂತ ಮಾತಾಡಿಸಲಿ – ಅಂದರೆ ಕೆಟ್ಟ ಮುಖ ಮಾಡಿಕೊಂಡು ‘ಅಯ್ಯೋ ಮಾತಾಡಕ್ಕೆ ಏನೂ ಹೊಳೀತಿಲ್ವೇ’ ಅಂದಳು. ನಾನೊಳ್ಳೆ ಜಾತ್ರೆಗೆ ಬಲಿಕೊಡಲು ತಂದ ಕುರಿಯಾದೆನಲ್ಲ ಅಂತ ಹಳಹಳಿಸಿದೆ. ‘ನೀನೇ ಹಾಗಂದರೆ ನನ್ನ ಗತಿ ಏನು. ನನಗೆ ಅವರು ಪರಿಚಯವೇ ಇಲ್ಲ. ಇನ್ನೆಷ್ಟು ಮಾತಾಡಿಸಲಿ. ಆಗಲ್ವೇ ಬೇಗ ಬಾ’ ಅಂತ ಪಿಸುಗುಟ್ಟಿದೆ. ಆ ಅಮರಪ್ರೇಮಿಗೆ ನಮ್ಮ ಮಾತು ಕೇಳಿಸಿ ನೊಂದಾನೆಂಬ ಆತಂಕ ಬೇರೆ.
ವಾಪಸ್ ಬಂದು ಕೂತೆ. ಇನ್ನು ಮಾತಾಡಲು ಜಗತ್ತಿನಲ್ಲಿ ಹೊಸ ಘಟನೆಯೊಂದು ಘಟಿಸಬೇಕಿತ್ತು ಅಷ್ಟೇ! ಇದ್ದ ಬದ್ದ ಎಲ್ಲ ಟಾಪಿಕ್ ಮುಗಿದುಹೋಗಿತ್ತು. ಸರಿ ಮೌನವೇ ಇರಲಿ ಅಂತ ತೀರ್ಮಾನಿಸಿ ಮೊಬೈಲ್ ನೋಡುತ್ತಾ ಕೂತೆ. ಯಾವ ಯಾವದೋ ಪರಿಚಿತರಿಗೆಲ್ಲ ಮೆಸೇಜ್ ಮಾಡಿ ಆರೋಗ್ಯ ವಿಚಾರಿಸಿದೆ. ಫ಼ಾರ್ವರ್ಡ್ ಮೆಸೇಜುಗಳನ್ನು ದ್ವೇಷಿಸುವ ನಾನು, ವಾಟ್ಸಪ್ಪಿನಲ್ಲಿ ಬಂದ ಎಲ್ಲ ಮೆಸೇಜುಗಳನ್ನೆಲ್ಲ ಓದಿದ್ದೂ ಆಯ್ತು. ಇನ್ನು ತಾಳ್ಮೆ ಮುಗಿಯಿತು ಅನ್ನುವಷ್ಟರಲ್ಲಿ ಅಂತೂ ಕಾಫಿ ಟ್ರೇ ಜೊತೆ ಪ್ರತ್ಯಕ್ಷಳಾದಳು ಪುಣ್ಯಾತ್ಗಿತ್ತಿ. ಮೂವರೂ ಮೌನವಾಗಿ ಕಾಫಿ ಕುಡಿದೆವು. ಕಾಫಿ ಕುಡಿದೊಡನೆ, ಕಪ್ಪುಗಳನ್ನು ಕೈಯಲ್ಲೇ ಹಿಡಿದು ಘಂಟೆಗಟ್ಟಳೆ ಹರಟುವ ದುರಭ್ಯಾಸಿಗಳು ನಾವು. ಆದರೆ ಇವತ್ತು ಅವಳದ್ದು ಅದೇನು ಚುರುಕು … ಅದೇನು ಶುಭ್ರತೆ … ಕೂಡಲೇ ಕಾಫಿ ಕಪ್ಪುಗಳನ್ನೊಯ್ದು ತೊಳೆದಿಟ್ಟು ಬಂದಳು. ಕಾಲ ಅಲ್ಲೇ ನಿಂತುಹೋಗಿದೆಯೇನೋ ಅನ್ನುವಷ್ಟು ಹತಾಶೆ ಮೂಡಿತು ನನ್ನಲ್ಲಿ.
ಇದ್ದಕ್ಕಿದ್ದ ಹಾಗೆ ಆತ ‘ನಾನು ಇನ್ನು ಹೊರಡುತ್ತೇನೆ’ ಎಂದ!. ನಿಜಕ್ಕೂ ಹೇಳುತ್ತೇನೆ, ಆ ನಿಮಿಷದಲ್ಲಿ ಜಗತ್ತಿನ ಅತೀ ಮಧುರವಾದ ಮೂರು ಪದಗಳು ಅವೇ ಏನೋ ಅನ್ನಿಸಿಬಿಟ್ಟಿತು ನನಗೆ. ಅವಳಂತೂ ಅದಕ್ಕಾಗೇ ಕಾದಿದ್ದವಳ ಹಾಗೆ ‘ಹೌದಾ, ಸರಿ’ ಅಂದಳು. ಮತ್ತೊಂದಿಷ್ಟು ವಿದಾಯದ ಮಾತುಗಳಾದ ಮೇಲೆ ಅಂತೂ ಕೊನೆಗೊಮ್ಮೆ ಆತ ಹೊರಟ. ಬಾಗಿಲವರೆಗೂ ಕಳಿಸಿ ಬರಲು ಅವಳು ಹೊರಟಳು. ನಾನು ನೆಮ್ಮದಿಯಲ್ಲಿ ಕೈ ಹರಡಿ ಸೋಫಾದಲ್ಲಿ ಬಿದ್ದುಕೊಂಡಾಗ ‘ಅಮರ ಪ್ರೇಮವೊಂದು ಮತ್ತೆ ಹುಡುಕಿಬಂದರೆ ಹೀಗಿರುತ್ತದಾ … ಅವಳಿಗೆ ನಿಜಕ್ಕೂ ಏನನ್ನಿಸಿತು ಅಂತ ಕೇಳಬೇಕು ಅಂದುಕೊಳ್ಳುವಷ್ಟರಲ್ಲಿ ತಲೆಯೊಳಗೊಂದು ಮಿಂಚು ಹೊಳೆಯಿತು – ಕೇಳೋದೇನು ಮಣ್ಣಾಂಗಟ್ಟಿ! ಅವಳಿಗೆ ಏನಾದರೂ ಅನ್ನಿಸಿದ್ದಿದ್ದರೆ ಫೋನ್ ಮಾಡಿ ನನ್ನನ್ನು ಯಾಕೆ ಬರಹೇಳುತ್ತಿದ್ದಳು ಎಂದು!!
ದೇವರೇ! ನನ್ನ ಬದುಕಿನಲ್ಲಿ ಯಾವತ್ತೂ ಇಂಥ ಪ್ರೇಮ ಮತ್ತೆ ಹುಡುಕಿ ಬರದಿರಲಪ್ಪಾ ಅಂತ ಕಾರಿಜೆಂಡಮ್ ಸೇರಿಸಿ ಫ಼್ರೆಷ್ ಬೇಡಿಕೆ ಸಲ್ಲಿಸಿದೆ ಗಣೇಶನಿಗೆ …

‍ಲೇಖಕರು G

December 23, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

26 ಪ್ರತಿಕ್ರಿಯೆಗಳು

  1. ಜೋಗಿ

    ಹಳೆಯ ಪ್ರೇಮವೂ ಹಳೆಯ ರೋಗದಂತೆ! ಎಷ್ಟು ಒಗ್ಗಿಕೊಂಡಿರ್ತೀವಿ ಅಂದ್ರೆ ಕಾಯಿಲೆ ಅಂತಾನೇ ಅನ್ನಿಸೋದಿಲ್ಲ. ಏನ್ರೀ ಇಷ್ಟೊಂದು ಕೆಮ್ತಿದ್ದೀರಿ ಅಂದ್ರೆ ಅಯ್ಯೋ ಮಾಮೂಲಿ ಬಿಡ್ರಿ, ಅವರು ಹಂಗೇನೇ ಅಂತ ಮತ್ಯಾರೋ ಹೇಳ್ತಿರ್ತಾರೆ. ಅಂತೂ ಇಜಾಜತ್ ಸಿನಿಮಾನ ಸುಳ್ಳು ಮಾಡಿದ್ರಲ್ರೀ.

    ಪ್ರತಿಕ್ರಿಯೆ
  2. bharathi b v

    ಏನ್ಮಾಡೋದು ಜೋಗಿ … ಎದುರು ನೋಡಕ್ಕೂ ಏನೂ ಇಲ್ಲದ ಹಾಗಾಗೋಯ್ತು ಬದುಕು !

    ಪ್ರತಿಕ್ರಿಯೆ
  3. Geetha b u

    ee haleya premigalu namma manadalliye hudugirali..kandita baruvudhu beda…atyanta handsome aagida, chendaagi maathaadutidha avanu eega bandu pekaru pekuraagi mundhe kootu nenapugalannu haalumaadadirali…..yes. Yes…haleya premi sigadirali…naanu kooda sundara kanasinanteye uliyuvantaagali avana manadalli…

    ಪ್ರತಿಕ್ರಿಯೆ
  4. Rj

    ಓದಿ ಬಿದ್ದು ಬಿದ್ದು ನಗುತ್ತಿದ್ದೇನೆ. ನಿಜ, ದೀಪಾವಳಿ ಅನ್ನುವದು ಯಾವಾಗಲೂ ಹೀಗೇನೇ. ಹಬ್ಬಕ್ಕೆ ಇನ್ನೂ ಮೂರು ದಿನಗಳಿವೆ ಅಂತ ಅನ್ನುತ್ತಿರುವಾಗಲೇ ಮನೆಯಲ್ಲಿರುವ ಧೂಳಿಗೆ ರೋಮಾಂಚನ. ಅಂಗಳದ ಪಾಟೀಕಲ್ಲಿಗೆ ರಂಗೋಲಿಯ ಸಂಭ್ರಮ. ಆದರೆ ಹಬ್ಬದ ದಿನ ಮಾತ್ರ ಹಿಂದಿನ ಮೂರು ದಿನಗಳ ಉರವಣಿಗೆ ಎಲ್ಲೋ ಡೈಲ್ಯೂಟ್ ಆಗಿರುತ್ತದೆ..
    ಎಂದೋ ಕಂಡ ಕನಸು
    ದಿಢೀರಂತ
    ಅಸ್ಪಷ್ಟವಾಗಿ ನೆನಪಾಗಿ
    ತುಟಿಯಂಚಿನಲ್ಲಿ ನಗು.
    ಪಕ್ಕದಲ್ಲಿದ್ದವಳ
    ಮುಖದಲ್ಲಿ ಮೂಡಿದ
    ಪ್ರಶ್ನಾರ್ಥಕ ಚಿನ್ನೆಗೆ
    ಒಂದೇ ಪದದ ಉತ್ತರ:
    ನಥಿಂಗ್!
    -Rj

    ಪ್ರತಿಕ್ರಿಯೆ
  5. ಅಪರ್ಣ ರಾವ್

    ಇನ್ಫ್ಯಾಚುಏಶನ್ ಅನ್ನುವ ಕಾಲ ಘಟ್ಟ ಅಲ್ಲೇ ಸ್ತಗಿತವಾಗಿದ್ದರೆ ಸುಂದರ..ಎನ್ನುವುದನ್ನ ಮತ್ತೆ ಪ್ರೂವ್ ಮಾಡಿದ್ಯಲ್ಲಾ ಭಾರತಿ. ಅದೂ ಇಷ್ಟು ಸುಂದರವಾಗಿ.:)

    ಪ್ರತಿಕ್ರಿಯೆ
  6. mmshaik

    hrdyavellaa bagidu iduttiri shbdagaLlli…adakkende nimma baraha tumbaa atmiya enisutte nanage..!!

    ಪ್ರತಿಕ್ರಿಯೆ
  7. samyuktha

    😀 ಸಧ್ಯ ನಿಮ್ಮ ಆ ಸ್ನೇಹಿತೆಯನ್ನು ಸಮಯಕ್ಕೆ ಸರಿಯಾಗಿ ಸಾಥ್ ನೀಡಿ “ಬಚಾವು” ಮಾಡಿದಿರಲ್ಲ! ಹಳೆಯದು ಹಳೆಯದಾಗಿಯೇ ನೋಡುತ್ತಾ ಆನಂದಿಸುವಂತೆ ಕಪಾಟಿನಲ್ಲಿರಬೇಕು, ಹೊರತೆಗೆದರೆ ಧೂಳು! ಇದೊಳ್ಳೆ ಮಚ್ ಅವೈಟೆಡ್ ಮೂವಿ ನೋಡಿದ ನಂತರ ನಿರಾಸೆ ತರಿಸುವ ಹಾಗೆ! 😀

    ಪ್ರತಿಕ್ರಿಯೆ
  8. kusumabaale

    ಒಟ್ಟಿಗೇ ಮೆಟ್ಟಿಲು ಹತ್ತಿದರೆ ಮಕ್ಕಳಾಗುತ್ತವೇನೋ…. ಹಹ್ಹ ಹ್ಹ…ಇಂತದೆಲ್ಲ ನಿಮಗೇ ಬರಿಯೋಕಾಗೋದು.

    ಪ್ರತಿಕ್ರಿಯೆ
  9. Manju

    But still u would have said what u r friend has felt………….
    Nice writing Bharathi avare…

    ಪ್ರತಿಕ್ರಿಯೆ
  10. ಅಮರದೀಪ್.ಪಿ.ಎಸ್.

    ಮೇಡಂ, ನಾನೂ ಒಂದ್ಸಲಾ ಹಿಂದಕ್ಕೆ ಹಂಗ್ ಹೋಗಿ ಹೀಂಗ್ ಬಂದು ಸೋಫಾ ಮೇಲೆ ಕುಂತಂಗಾತು ಅನುಭವ…

    ಪ್ರತಿಕ್ರಿಯೆ
  11. ಡಾ.ಶಿವಾನಂದ ಕುಬಸದ

    ಎಂಥ ಚೆಂದದ ಬರವಣಿಗೆ ತಮ್ಮದು..!!

    ಪ್ರತಿಕ್ರಿಯೆ
  12. vidyashankar

    ಇದು ಭಯಂಕರ ಮೋಸದ ಕತೆ ಕಣ್ರೀ… ದೇವರು ನಿಮ್ಮನ್ನ ಸುಮ್ನೆ ಬಿಡಲ್ಲ… ನಿಮ್ಮನೆಗೂ ಯಾರಾದ್ರೂ ಒಬ್ಬರು ಬರಲಿ ಅಂತ ನನ್ನ ಪ್ರಾರ್ಥನೆ!

    ಪ್ರತಿಕ್ರಿಯೆ
  13. ಲಕ್ಷ್ಮೀಕಾಂತ ಇಟ್ನಾಳ

    ಮೊದಲ ಪ್ರೇಮವೊ, ಮೆಚ್ಚುಗೆಯೋ, ಅದನ್ನು ಎಂದೂ ಮರೆಯೊಕ್ಕಾಗಲ್ಲ, ಹೊರಗೆ ಮುಚ್ಚಿಡಬಹುದು, ಆತ್ಮವಂಚನೆ ಸಾಧ್ಯವಾಗದು!

    ಪ್ರತಿಕ್ರಿಯೆ
  14. ಅಕ್ಕಿಮಂಗಲ ಮಂಜುನಾಥ

    ಬರಹ ಚೆನ್ನಾಗಿದೆ.

    ಪ್ರತಿಕ್ರಿಯೆ
  15. Bharathi b v

    ಮರೆಯೋದಿಕ್ಕಾಗಲ್ಲ ಅಂತ ನಾನು ಸಹ ಹೇಳಿದ್ದೀನಲ್ಲ ಲಕ್ಷ್ಮಿಕಾಂತ್ ಅವರೇ … ಆದರೆ ಸಂಬಂಧವೊಂದು ಎಳೆ ತಪ್ಪಿದ ಮೇಲೆ ಮತ್ತೆ ಹೊಸೆಯೋದಿಕ್ಕಾಗಲ್ಲ ಅನ್ನೋದು ಕೂಡ ಅಷ್ಟೇ ಸತ್ಯ …

    ಪ್ರತಿಕ್ರಿಯೆ
  16. ಲಕ್ಷ್ಮೀಕಾಂತ ಇಟ್ನಾಳ

    ಹೌದು ಭಾರತಿ ಜಿ, ಪ್ರತಿಯೊಬ್ಬರಿಗೂ ಅವರದೇ ನೆಲೆಯ ಸುಪ್ತ ಮಾನಸಿಕ ಲೋಕವೊಂದಿದ್ದರೂ, ಅದರಲ್ಲಿ ಅವರಿಗೆ ಮಾತ್ರ ಪ್ರವೇಶವಿರುವುದೆಂಬ ನಂಬಿಕೆ ನನ್ನದು. ಆದರೆ ನೀವಂದಂತೆ ಅದೂ ಕೂಡ ಸರಿ. ಒಮ್ಮೆ ಹಳಿ ತಪ್ಪಿದರೆ ಮುಗಿಯಿತು, ಎಂದೂ ಮರೆಯದ ಹಾಡಾಗಿ ತನ್ನ ನೆಲೆಯಲ್ಲೇ ಉಳಿದುಬಿಡುತ್ತದೆ. ಇದಕ್ಕೆ ಯಾವ ಅಪಾರ್ಥವನ್ನು ಕಲ್ಪಿಸಲೂ ಕೂಡದು. ಅದು ಜಸ್ಟ್ ಹ್ಯುಮನ್ ಅಷ್ಟೆ. ಐ ಅಗ್ರೀ ವಿಥ್ ಯೂ ಆಲ್ಸೋ, ಅದು ಅನಿವಾರ್ಯ ಕೂಡ ಹೌದು. ಮನುಷ್ಯ ನೂರು ಸಂಕೋಲೆಗಳ ಬಂಧಿ. ಸುಂದರ ಚಿತ್ರಣ ನೀಡುತ್ತ, ಕೂತೂಹಲ ಸೃಷ್ಟಿಸುತ್ತ, ಕಣ್ಣಮುಂದೆ ನಡೆದಂತೆ ಬರಹ ಸಾಗುವ ಪರಿ ಮೆಚ್ಚುಗೆಯಾಯಿತು ಮೇಡಂ.

    ಪ್ರತಿಕ್ರಿಯೆ
  17. Anil Talikoti

    ಎವರಿಥಿಂಗ ಅಬೌಟ್ ನಥಿಂಗ ಅಂದ್ರೆ ಇದೆ ಏನೋ?ಪಾಪ ಅವನಿಗದೆಷ್ಟು ಬೋರ್ ಆಗಿರಬೇಕು.
    -ಅನಿಲ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: