ಹಳೆಮನೆ ಇಲ್ಲದೆ ಜರ್ಮನಿ ಮೂಕ

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ

ಗೆಳೆಯ ಲಿಂಗದೇವರು ಹಳೆಮನೆ ಇನ್ನಿಲ್ಲ ಎಂಬ ಸುದ್ದಿಯನ್ನು ಈದಿನ ‘ಅವಧಿ’ಯಲ್ಲಿ ಓದಿದಾಗ ನಂಬುವುದು ಕಷ್ಟ ಆಯಿತು, ಗ್ರಹಿಸಿಕೊಳ್ಳಲು ಸಂಕಷ್ಟ ಆಯಿತು.ಇನ್ನುಮೂರು ವಾರಗಳಲ್ಲಿ ಅವರು ಇಲ್ಲಿಗೆ -ಜರ್ಮನಿಯ ವ್ಯೂರ್ತ್ಸ್ ಬುರ್ಗ್ ಗೆ ಬರುವವರಿದ್ದರು. ಜುಲೈ ಒಂದರಿಂದ ಹತ್ತರವರೆಗೆ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾಲಯದಲ್ಲಿ ,ಇಲ್ಲಿ ಹಿಂದೆ ಬಂದು ಅಧ್ಯಾಪನ ಮಾಡಿದ ಬೇರೆ ಬೇರೆ ದೇಶಗಳ ಪ್ರಾಧ್ಯಾಪಕ/ತಜ್ಞರ ಸಮಾವೇಶ ಏರ್ಪಾಡಾಗಿತ್ತು. ಈ ವಿದ್ವಾಂಸರಲ್ಲಿ ಹಳೆಮನೆಯವರ ಹೆಸರು ಇತ್ತು. ಅಲುಮಿನಿ ,ಅಂದರೆ -ಹಿಂದಿನ ಟ್ಯೂಟಾರ್ ಗಳ ಸಮಾವೇಶ ಮಾಡಿಸುವ ಸಂಸ್ಥೆ-ಇದರ ಸಂಚಾಲಕರಾದ ತಿಯೇಲ್ ಅವರು ಹಳೆಮನೆಯವರನ್ನು ಸಂಪರ್ಕಿಸಿದ್ದರು. ನಾನು ಈ ಬಾರಿ ಕರ್ನಾಟಕ ಕ್ಕೆ ಮಾರ್ಚ್ ನಲ್ಲಿ ಬಂದಿದ್ದಾಗ , ಹಳೆಮನೆ ನನಗೆ ಫೋನ್ ಮಾಡಿ ಈ ಬಗ್ಗೆ ವಿಚಾರಿಸಿದ್ದರು. ನಾನು ಬರಲು ಒತ್ತಾಯ ಮಾಡಿದೆ.. ಆ ವೇಳೆಗೆ ನಾನೂ ಅಲ್ಲಿ ಇರುತ್ತೇನೆ , ನಾಟಕ, ಒಪೆರ ನೋಡಬಹುದು ಎಂದು ಅವರನ್ನು ಹುರಿದುಂಬಿಸಿದ್ದೆ. ಕೊನೆಗೆ ಅವರು ಬರುವುದು ಖಚಿತ ಆಯಿತು. ನಡುವೆ ಫೋನ್ , ಇಮೈಲ್ ನಲ್ಲಿ ನಾವು ಅವರ ವೀಸ, ವಸತಿ ಇತ್ಯಾದಿ ಬಗ್ಗೆ ವಿನಿಮಯ ಮಾಡಿಕೊಂಡೆವು.

ಹಳೆಮನೆ ೨೦೦೬ರಲ್ಲಿ ಇಲ್ಲಿಗೆ ಬಂದು , ಇಂಡಾಲಜಿ ವಿಭಾಗದಲ್ಲಿ ಸುಮಾರು ಮೂರು ತಿಂಗಳ ಕಾಲ ಇದ್ದರು. ಜರ್ಮನ್ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಿದರು. ಈಗಲೂ ಆ ವಿದ್ಯಾರ್ಥಿಗಳು ಹಳೆಮನೆಯವರ ತರಗತಿಗಳನ್ನು ನೆನಪಿಸಿಕೊಳ್ಳುತ್ತಾರೆ. ಪ್ರೊ. ಹೈದ್ರೂನ್ ಬ್ರೂಕ್ನರ್ ಅವರಂತೂ ಹಳೆಮನೆಯವರ ಕನ್ನಡ ಪಾಠ , ರಂಗಾಸಕ್ತಿ ಬಗ್ಗೆ ಸದಾ ಹೇಳುತ್ತಿರುತ್ತಾರೆ. ಇಲ್ಲಿನ ಇಂಡಾಲಜಿ ವಿಭಾಗದಲ್ಲಿ ಜರ್ಮನ್ ವಿದ್ಯಾರ್ಥಿಗಳಿಗೆ ಯಾರೇ ಕನ್ನಡ ಪಾಠ ಮಾಡಿದರೂ ಹಳೆಮನೆಯವರ ಪುಸ್ತಕ ‘An Intensive Course in Kannada’ ಒಂದು ಪ್ರಮಾಣ ಗ್ರಂಥವಾಗಿ ಪ್ರತೀ ದಿನ ಜೀವಂತ ಆಗಿ ಇರುತ್ತದೆ. ನನ್ನ ಕನ್ನಡ ಸಾಹಿತ್ಯದ ಇಲ್ಲಿನ ತರಗತಿಗಳಲ್ಲಿ , ಹಳೆಮನೆಯವರು ಮೈಸೂರಿನ ಕೇಂದ್ರೀಯ ಭಾಷಾ ಸಂಸ್ಥಾನದಲ್ಲಿ ‘ಭಾಷಾ ಮಂದಾಕಿನಿ’ಯೋಜನೆಯಲ್ಲಿ ಸಿದ್ಧಪಡಿಸಿದ ಡಿವಿಡಿಗಳು ಪ್ರದರ್ಶನ ಗೊಳ್ಳುತ್ತಾ ಬಂದಿವೆ. ಜರ್ಮನರಿಗೆ ಕುವೆಂಪು, ಬೇಂದ್ರೆ, ಮಾಸ್ತಿ, ಕಾರಂತ ಮತ್ತು ಕರ್ನಾಟಕ ಕಾಣಿಸಿಕೊಳ್ಳುವುದು -ಹಳೆಮನೆ ಮಾಡಿದ ಡಿವಿಡಿ ಗಳಿಂದ .

ಈದಿನ ಸುದ್ದಿ ತಿಳಿದೊಡನೆಯೇ ಪ್ರೊ.ಬ್ರೂಕ್ನರ್ ಅವರಿಗೆ ಇಮೈಲ್ ಮಾಡಿ ತಿಳಿಸಿದೆ.ಅವರ ದುಃಖ ಹೇಳತೀರದು. ತಮ್ಮ ಸಹೋದ್ಯೋಗಿಗಳಿಗೆ , ಹಳೆಯ ವಿದ್ಯಾರ್ಥಿಗಳಿಗೆ ಶೋಕ ಸಂದೇಶವನ್ನು ಅವರು ಕಳುಹಿಸಿದ್ದಾರೆ. ನಾನು ಈ ದಿನ ವಿಭಾಗದಲ್ಲಿ ವಿದ್ಯಾರ್ಥಿ ಮಿಗುವೆಲ್ ಜೊತೆ ಚರ್ಚಿಸುತ್ತಿದ್ದೆ. ನಮ್ಮ ಇಂಡಾಲಜಿ ವಿಭಾಗದಲ್ಲಿ ಹಿಂದಿ ಪ್ರಾಧ್ಯಾಪಕಿ ಆಗಿರುವ ಡಾ.ಬಾರ್ಬರಾ ಲೋತ್ಜ್ ನನ್ನ ಕೊಟಡಿಗೆ ಬಂದರು . ಅವರು ಕಣ್ಣೀರು ಹಾಕುತ್ತಿದ್ದರು. ಬ್ರೂಕ್ನರ್ ಅವರಿಂದ ಇವರಿಗೆ ಸುದ್ದಿ ತಿಳಿಯಿತಂತೆ. ಬಾರ್ಬರಾ ಅವರ ಗಂಡ ಪ್ರೊ.ರೈನೆರ್ ಲೋತ್ಜ್ ಅವರು ಮೈಸೂರಿನಲ್ಲಿ ಹಳೆಮನೆ ಅವರನ್ನು ಭೇಟಿ ಆಗಿ , ಅವರ ಸಂದರ್ಶನವನ್ನು ವಿಡಿಯೋ ದಾಖಲೆ ಮಾಡಿದ್ದರಂತೆ. ಅದನ್ನು ನಿನ್ನೆ ತಾನೇ ಅವರ ಮನೆಯಲ್ಲಿ ಎಡಿಟ್ ಮಾಡುತ್ತಿದ್ದರಂತೆ. ಹಾಗಾಗಿ ಬಾರ್ಬರಾ ಅವರಿಗೆ ಈ ಸುದ್ದಿ ತುಂಬಾ ನೋವಿನದ್ದು ಆಗಿತ್ತು.

ಹಳೆಮನೆ ಅವರು ವ್ಯೂರ್ತ್ಸ್ ಬುರ್ಗ್ ವಿವಿಯ ಜುಲೈ ಸಮಾವೇಶಕ್ಕೆ ಮೊದಲು ಇಲ್ಲಿಂದ ಲಿಖಿತವಾಗಿ ಕೇಳಿದ ಪ್ರಶ್ನೆಗಳಿಗೆ , ಪಿ ಡಿ ಎಫ್ ನಲ್ಲಿ ಕಳುಹಿಸಿದ ಉತ್ತರಗಳನ್ನು ಇಲ್ಲಿ ಕೊಟ್ಟಿದ್ದೇನೆ. ಅವರ ಹೆಸರಿನ ಲಿಂಕ್ ಮೇಲೆ ಕ್ಲಿಕ್ ಮಾಡಿರಿ. ಇದನ್ನು ಇಲ್ಲಿ- ವ್ಯೂರ್ತ್ಸ್ ಬುರ್ಗ್ ನಲ್ಲಿ ಹೇಳಲು ಹಳೆಮನೆ ಇರುವುದಿಲ್ಲ . ಆದರೆ ಇದು ಕೇವಲ ಅವರ ನೆನಪು ಮಾತ್ರ ಅಲ್ಲ. ಕನ್ನಡ , ರಂಗಭೂಮಿ, ಸಾಹಿತ್ಯ, ಜನಪರ ಚಿಂತನೆ , ಸಂಘಟನೆ -ಎಲ್ಲವನ್ನೂ ಹಳೆಮನೆ ನಮಗೆ ಬಿಟ್ಟು ಹೋಗಿದ್ದಾರೆ. ಅವರು ನಮ್ಮೊಡನಿದ್ದಾರೆ.

 

‍ಲೇಖಕರು G

June 8, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: