-ವೆಂಕಟೇಶ್ ಚಾಗಿ
ನಿಯಮಗಳ ಮೀರಿ ….
ನಾನು ಹೊರಟಿದ್ದೇನೆ
ಹಲವು ವಿಧವಾದ ಅಡೆತಡೆಗಳ ದಾಟಿ
ಹಲವು ಕೆಟ್ಟ ಮನಸುಗಳ ದಾಟಿ
ಹಲವು ಅಭಿಪ್ರಾಯಗಳ ದಾಟಿ
ಮತ್ತೆ ಮತ್ತೆ
ನಾನೇ ಕಟ್ಟಿಕೊಂಡ ಸುಟ್ಟುಕೊಂಡ
ನಿಯಮಗಳ ದಾಟಿ
ಈಗ ಏನು ಹೇಳಬೇಕಾಗಿದೆ
ಬರೀ ಹೇಳುವುದೇ ಆಗುತ್ತಿದೆ
ಒಂದಿಷ್ಟು ಕೇಳಿ ನೋಡೋಣ
ಕಲ್ಲುಗಳು ಕಥೆ ಹೇಳುತ್ತಿವೆ
ಹೂಗಳು ನಗು ಬೀರುತ್ತವೆ
ಸಮಯವು ಮುಂದೆ
ಹೋಗಿದೆ
ನಿಯಮಗಳ ದಾಟಿ
ಪ್ರಕೃತಿಯು ಎಷ್ಟು ಸುಂದರ
ಅದಕ್ಕೂ ಒಂದು ಇದೆಯೇ
ಸಂವಿಧಾನ
ಯಾರಿಗೆ ಕೇಳಬೇಕು
ಯಾರನ್ನು ಕೇಳಬೇಕು
ನಾನೀಗ ಶುದ್ಧ ಮೂರ್ಖ
ನಿಯಮಗಳನ್ನು ಮೈತುಂಬ
ಸುತ್ತಿಕೊಂಡಿರುವೆ
ಈಗಲೇ ಹೊರಟುಬಿಡುವೆ
ನಿಯಮಗಳ ದಾಟಿ
ಕನಸುಗಳಿಗೂ ಬೇಕೆ ವೇಳಾಪಟ್ಟಿ
ನಿದಿರೆಗೆ ಇಲ್ಲದ ಹೊತ್ತು
ನೋಡುವುದನ್ನು ನೋಡುವೆ
ಕೇಳುವುದನ್ನು ಕೇಳುವೆ
ಹಾರುವೆ ಜಿಗಿಯುವೆ
ಸಮಯದೊಂದಿಗೆ ನಾನು ಹೋಗುವೆ
ಇಲ್ಲೇ ಏಕೆ ನಿಲ್ಲಲಿ
ಮುಂದೆ ಮುಂದೆ ಸಾಗುವೆ
ನಿಯಮಗಳ ದಾಟಿ
ಕತ್ತಲು ಕವಿಯುತ್ತಿದೆ
ಬೆಳಕು ಮರೆಯಾಗುತ್ತಿದೆ
ಸಾಲು ಸಾಲು ಚಿಂತನೆಗಳು
ಮತ್ತೆ ಮತ್ತೆ ಅದೇ ಚಿಂತೆಗಳು
ಎಲ್ಲವನ್ನೂ ತೂರಿ ದೂರ
ಸಾಗಬೇಕಿದೆ
ಎಲ್ಲದಕ್ಕೂ ಕಟ್ಟುಪಾಡು ನನಗೆ
ಈ ಜಗದಲ್ಲಿ
ಎದ್ದು ಬಿಡುವೆ ಗೆಲ್ಲಿಸಿ ಬಿಡುವೆ
ನಿಯಮಗಳ ದಾಟಿ






0 Comments