-ಮಾರುತಿ ಗೋಪಿಕುಂಟೆ
ಕೊಂಡಿ ಕಳಚಿದ ಮೇಲೂ…
ಕಳಚಿಕೊಂಡ ಬಂಧಕ್ಕೆ
ಏನೆಂದು ಹೆಸರಿಡಲಿ
ಕೈಹಿಡಿದು ನಡೆದ ದಾರಿಗೆ
ಅಲ್ಲಲ್ಲಿ ನಿಂತ ಪಿಸುದನಿಗೆ
ಗಂಟಲಲ್ಲೆ ನಿಂತ ನಿಟ್ಟುಸಿರಿಗೆ
ಕಣ್ಣಲ್ಲಿ ಕಟ್ಟಿದ ಕನಸಿಗೆ
ಹೆಸರೆ ಇಲ್ಲದೆ ಹುಟ್ಟಿದ ಪ್ರೀತಿಗೆ
ಬದುಕಿಡಿ ನಡೆದು ಸವೆದ
ನುಣುಪಾದ ಪಾದದ
ಹೆಜ್ಜೆಯ ಗುರುತು ಅಳಿಯದೆ
ಹಾಗೆ ಉಳಿದಿವೆ ನೆನಪಾಗಿ
ಹೆಸರಿಲ್ಲದೆ..! ಬಂಧವ ಕಳಚಿದ
ಮೇಲೂ..
ಉಳಿದ ಬದುಕಿನ ಭಾವಕ್ಕೆ
ನೆನಪಿನ ಬಂಧವೊಂದೆ ಸಾಕು
ಬದುಕಿನ ದಾರಿಗೆ, ನೀ ಬಿಟ್ಟು
ಹೋದ ಬಿಕ್ಕಳಿಕೆಯ ನಿಟ್ಟುಸಿರು
ನನ್ನ ಉಸಿರಿನ ಮುದುರಿನಲಿ
ಆಗಾಗ ಉಬ್ಬಿ ತಿದಿ ಒತ್ತುವಾಗ
ನಿನ್ನುಸಿರೆ ನೆನಪಾಗಿ ಮೈಮನಗಳಲ್ಲಿ
ಕಾಡುವಾಗಲೂ…
ಹೆಸರಿಡದ ಈ ಬಂಧದ ಕೊಂಡಿ
ಕಳಚಿದ ಮೇಲೂ ಬಸಿರಾಗಿ
ನನ್ನೆದೆಯ ಗೂಡಿನಲಿ ಗೂಡಕಟ್ಟಿ
ರೆಕ್ಕೆ ಬಿಚ್ಚಿ ಹಕ್ಕಿಯನೊಂದು ಕರೆದಿದೆ
ನೊಂದ ಮನಸ್ಸುಗಳೀಗ
ನಗೆಯ ಚೆಲ್ಲಿ ಹೆಸರನೊಂದು
ಹುಡುಕುತಿವೆ ರೆಕ್ಕೆ ಬಡಿದು ಹಾರಲು
ತಿಳಿ ನೀಲ ಗಗನವ ಸೇರಲು
ಬಂಧವ ನಿಬಂಧಗೊಳಿಸಿ.






0 Comments