
ಸೋ ನಳಿನಾ ಪ್ರಸಾದ್
ಮತ್ತದೇ ಸಂಜೆ ಬರುವುದಿಲ್ಲ..
ಮೌನ ಮೀರಿದ ಮಾತುಗಳು
ಕಣ್ಣುಸುರಿದ
ನಿನ್ನ ಪಿಸುಮಾತು ಇನ್ನೂ
ಝಳಪಿಸುತ್ತಿದೆ..
ಆ ಘಳಿಗೆಗಳಿಗೇಕೆ
ಸರಿ ತಪ್ಪುಗಳ ಸೋಗು..
ಅದನ್ನು ಅಲುಗಿಸಿ.. ನಲುಗಿಸಿ..
ಕಲಕಿ ಕದಡುವುದು ಬೇಡ
ಅದು ಹಾಗೆಯೇ ಇರಲಿ.
ಹದವಾಗಿ ಕಾದ ಕೆನೆಹಾಲಿನ ಹಾಗೆ.
ಕೆನೆ ಕಟ್ಟಲಿ.. ಅದ ಒಪ್ಪಾಗಿಸಿದ ಮೇಲೆ
ಸಿಗುವುದಲ್ಲ ನವನೀತ..!
ನನ್ನ ಶುದ್ಧತೆ, ನಿನ್ನ ಶುಭ್ರತೆ
ಇವೆರಡು ಸಾಕು ಅದ ರಕ್ಷಿಸಲು..

ನಿನ್ನ ಪುಟ್ಟ ಕಣ್ಣಿನ
ಆಳದರಿವುಂಟು ನನಗೀಗ..
ನಿರೀಕ್ಷೆಗಳಿಗೆ ಒರಗಿನಿಲ್ಲುವ
ನಿಶ್ಯಕ್ತಿ ನನದಲ್ಲ..
ನಿನ್ನ ಬಂಧಿಸುವ ಬಯಕೆಯೂ
ನನಗಿಲ್ಲ..
ನೀನೊಂದು ಶಕ್ತಿ ಕಾರಂಜಿ..
ಹಾಗೆಯೇ ಇದ್ದುಬಿಡು
ಮುಗ್ಧ ನಗುವಿನೊಡೆಯ
ಮತ್ತದೇ ಸಂಜೆಯ ನಕಲು ಮಾಡಿ
ತಿಳಿಗೊಳಿಸುವುದು ಬೇಕಿಲ್ಲ..
ನಮಗೇನು ಸಂಜೆಗಳ ಕೊರತೆಯೇ?
ಪ್ರತಿ ಸಂಜೆಗೊಂದು ಹೊಸತು ನಿಲುವು
ಹೊಸತು ಗೆಲುವು
ಆದರೆ ಬಲು ಭಿನ್ನ..
ಭೂಮಿಯೊಳಗೆ ಭಾವದೊಡನೆ
ನಮ್ಮ ಪಯಣ..
ಆದರೆ ಅಂಟಿಲ್ಲ..
ಜಿನುಗಿಲ್ಲ..
ಜೀನಿಲ್ಲ…






0 Comments