ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹತ್ತು ಜನರ ಗುಂಪಲ್ಲಿ ನಾನೊಂಟಿ..

ಅಂತರ್ಮುಖಿ

ಎಸ್ ನಾಗಶ್ರೀ

ಹತ್ತು ಜನರ ಗುಂಪಲ್ಲಿ ನಾನೊಂಟಿ
ದ್ವೀಪದಂತೆ ಸುತ್ತ ಕಡಲು
ಗಟ್ಟಿ ನೆಲ, ಕುರುಚಲು ಕಾಡು
ಕೋಗಿಲೆ ಕುಹು, ಹೆಸರಿರದ ಹಕ್ಕಿ ಹಾಡು
ಗಿಡಗಂಟಿ, ಮುಳ್ಳು ಕೊಂ‌ಬೆ
ಅಕ್ಷರದ ಸಾಂಗತ್ಯ
ಬೇಸರ ಹುಟ್ಟಿಸುವುದಿಲ್ಲ ಎಂದೆಂದೂ
ನನ್ನೊಳಗೆ ನಾನಿಳಿದು ಶೋಧಿಸುವ ಸಮಯ
ಏಕಾಂತ ಹುತ್ತಗಟ್ಟಿ
ಸದಾ ಹಸನ್ಮುಖಿ ನಾನೆಂದೂ

ಸ್ಪಂದಿಸುವೆನು ನಿಮ್ಮೆಲ್ಲಾ
ಸುಖ, ದುಃಖ, ಕನಸು, ಅಳಲಿಗೂ
ಒಂದೇ ವ್ಯತ್ಯಾಸ
ಹೆಚ್ಚು ಮಾತುಗಳಲಿ ಮನಬಿಚ್ಚಲಾರೆ
ಬಿಗಿದಪ್ಪಿ ನಾನಿರುವೆ ಎನ್ನಲಾರೆ
ಕಣ್ಣಕೊಳದಲಿ ಮಿಂದೇಳಬಹುದು ನೀವು
ಗೋಡೆ ಹಲ್ಲಿ, ಕಂಬಳಿ ಹುಳು,
ಪ್ರತಿ ಪರಿಮಳ, ಚಲನೆ, ಗೀರುಗಳನು
ಸೂಕ್ಷ್ಮ ಗಮನಿಸಿ ಅರ್ಥ ಹುಡುಕುವ ನಾನು
ಪ್ರೀತಿಯನು ತಪ್ಪುವುದು ಹೇಗೆ?

ಮತ್ಸರವಿಲ್ಲ ನನಗೆ
ಗುಂಪಿನೊಂದಿಗಿರುವವರ ಬಗೆ
ಒಂಟಿಸಲಗದಷ್ಟು ಗಡುಸು ನಾನಲ್ಲ
ಸಮಯ ಸಿಕ್ಕಾಗೊಮ್ಮೆ ಜೊತೆ ಕುಳಿತಿರಿ
ಸಾಕು
ಅರಿಯೋಣ ಮೌನವನು ಕವಿತೆಯಂತೆ
ಏಕಾಂತದಿ ಕಳೆಯೋಣ ಲೋಕಚಿಂತೆ.

‍ಲೇಖಕರು avadhi

27 May, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading