ಭಾವಗೀತೆ ಬರೆಯಬೇಕೆ? ಇಲ್ಲಿದೆ ಬಿ ಆರ್ ಲಕ್ಷ್ಮಣರಾವ್ ಟಿಪ್ಸ್

ಬಿ.ಆರ್.ಲಕ್ಷ್ಮಣರಾವ್

ವಯಸ್ಸೇ ಕಾರಣವಾಗಿ, ನಾನು ಬೇಡವೆಂದರೂ ನನಗೀಗ ‘ಹಿರಿಯ ಕವಿ’ ಎಂಬ ಪಟ್ಟ ದೊರೆತುಬಿಟ್ಟಿದೆ. ಕವಿಗೋಷ್ಠಿಗಳ ಉದ್ಘಾಟನೆ, ಅಧ್ಯಕ್ಷತೆ ಇತ್ಯಾದಿಗಳಿಗೆ ಕರೆಯುತ್ತಿರುತ್ತಾರೆ. ಹೊಸ ಕವಿ, ಕವಯತ್ರಿಯರು ‘ಮುನ್ನುಡಿ’ಗಾಗಿ ತಮ್ಮ ಕವನ ಸಂಕಲನಗಳನ್ನು ಕಳಿಸುತ್ತಿರುತ್ತಾರೆ. ಜೊತೆಗೆ ಫೇಸ್‍ಬುಕ್, ವಾಟ್ಸಾಪ್‍ಗಳಲ್ಲೂ ಹೊಸ ಕವಿಗಳ ರಚನೆಗಳು ನನ್ನನ್ನು ವಿಪುಲವಾಗಿ ಎದುರುಗೊಳ್ಳುತ್ತಿರುತ್ತವೆ.

ಇಲ್ಲೆಲ್ಲ ನಾನು ಗಮನಿಸಿದ ಒಂದು ಸಾಮಾನ್ಯ ಅಂಶವೆಂದರೆ, ಇಂದಿನ ಕವಿಗಳಲ್ಲಿ ಕೆಲವರಲ್ಲಾದರೂ  ಹೊಸ ವಿಚಾರಗಳು, ಹೊಸ ಚಿತ್ರಗಳು, ಹೊಸ ನುಡಿಗಟ್ಟು ಇವೆ. ಆದರೆ ಇವರೆಲ್ಲರೂ ಬರೆಯುತ್ತಿರುವುದು ಮುಕ್ತ ಛಂದಸ್ಸು ಎಂಬ ಹೆಸರು ಹೊತ್ತ ಶುದ್ಧಾಂಗ ಗದ್ಯದಲ್ಲಿ. ಅದೇನು ಪದ್ಯವೋ, ಪ್ರಬಂಧವೋ ಗೊತ್ತೇ ಆಗುವುದಿಲ್ಲ. ಕವಿತೆಗೆ ತನ್ನದೇ ಆದ ವಿಶಿಷ್ಟ ನಡೆ, ರೂಪ, ಆಕೃತಿ, ಚೌಕಟ್ಟು ಇವೆ ಎಂಬ ಕಲ್ಪನೆಯೇ ಇವರಿಗೆ ಇದ್ದಂತಿಲ್ಲ. ಕೇಳಿದರೆ, ‘ಇಂದು ಎಲ್ಲರೂ ಬರೆಯುತ್ತಿರುವುದು ಹೀಗೇನೇ. ಇದು ಇಂದಿನ ರೀತಿ, ಇಂದಿನ ಟ್ರೆಂಡು’ ಅನ್ನುತ್ತಾರೆ. ವಿಮರ್ಶೆ, ವಿಶ್ಲೇಷಣೆ ಅಂದರೆ ಇಂದಿನವರಿಗೆ ಅಲರ್ಜಿಯಾದ್ದರಿಂದ ಆ ಬಗ್ಗೆ ಮಾತಾಡದಿರುವುದೇ ಲೇಸು.

ಆದರೆ ಓದುಗವಿತೆ ಹೇಗಿದ್ದರೂ ನಡೆದೀತು, ಹಾಡುಗವಿತೆ ಹಾಗಲ್ಲ. ನಿಯತ ಲಯ, ನಿರ್ದಿಷ್ಟ ಚೌಕಟ್ಟು ಇಲ್ಲದ ರಚನೆಗಳನ್ನು ಹಾಡಲು ಬರುವುದಿಲ್ಲ. ಇದಕ್ಕೆ ಕಾವ್ಯಕೌಶಲ ಅಥವಾ ಕಸುಬುದಾರಿಕೆ ಬೇಕೇ ಬೇಕು. ನಮ್ಮ ನವೋದಯ ಕಾಲದ ಎಲ್ಲ ಕವಿಗಳಿಗೂ ಇದು ಕರತಲಾಮಲಕವಾಗಿತ್ತು. ಹಾಗಾಗಿ ದೇಶಭಕ್ತಿಗೀತೆ, ನಾಡಗೀತೆ, ಪ್ರೇಮಗೀತೆ, ನಿಸರ್ಗಗೀತೆ, ಅನುಭಾವಗೀತೆ ಮುಂತಾದ ಗೇಯಗೀತೆಗಳು ಆಗ ಯಥೇಚ್ಛವಾಗಿ ಬಂದವು. ಅವುಗಳನ್ನು ಒಟ್ಟಾಗಿ ‘ಭಾವಗೀತೆ’ ಎಂದು ಕರೆದರು.

ನವ್ಯಕಾವ್ಯದ ಪ್ರಭಾವದಿಂದ ಇಂದು ಅಂಥ ಭಾವಗೀತೆಗಳು ವಿರಳವಾಗಿವೆ. ನಾನೂ ಸಹ ನವ್ಯಕಾವ್ಯದ ಕಾಲದಲ್ಲೇ ಕಾವ್ಯರಚನೆಗೆ ತೊಡಗಿದರೂ ಸಹ ನಾನು ಸ್ವತಃ ಗಾಯಕನಾಗಿದ್ದುದರಿಂದ ಭಾವಗೀತೆಗಳ ಮೋಹಕ್ಕೆ ಒಳಗಾದೆ ಹಾಗೂ ಸ್ವತಃ ಭಾವಗೀತೆಗಳನ್ನು ಬರೆದೆ. ಅದರಿಂದ ನನಗೆ ಅಪಾರ ಜನಪ್ರೀತಿಯೂ ದೊರೆಯಿತು. ಆದ್ದರಿಂದ ಭಾವಗೀತೆಯನ್ನು ಬರೆಯಲು ಬಯಸುವ ಇಂದಿನ ತರುಣ ಕವಿಗಳಿಗೆ ಕೆಲವು ಅತ್ಯಂತ ಸರಳ ಹಾಗೂ ಸುಲಭವಾದ  ಪ್ರಾಥಮಿಕ ಟಿಪ್ಸ್ ( ಮಾರ್ಗದರ್ಶಕ ಸಲಹೆ, ಸೂಚನೆಗಳನ್ನು ) ಕೊಡಲು ಬಯಸುತ್ತೇನೆ.

ಮೊದಲೇ ಹೇಳಬೇಕಾದ ಮಾತೆಂದರೆ, ಭಾವಗೀತೆಯೇ ಬೇರೆ, ಚಿತ್ರಗೀತೆಯೇ ಬೇರೆ. ಭಾವಗೀತೆಯಲ್ಲಿ ಮೊದಲೇ ಸಿದ್ಧವಾದ ಕಾವ್ಯಾತ್ಮಕವಾದ ಗೀತೆ ಇರುತ್ತದೆ. ಅದಕ್ಕೆ ಸಂಗೀತ ಸಂಯೋಜಕರು ಯುಕ್ತವಾದ ರಾಗವನ್ನು ಹೂಡುತ್ತಾರೆ. ಇದು ಒಂದು ರೀತಿಯಲ್ಲಿ ಕವಿತೆಯ ನಾದಾನುವಾದ ಅನ್ನಬಹುದು. ಇದೊಂದು ಸೃಜನಶೀಲ ಕ್ರಿಯೆ. ಆದರೆ ಚಿತ್ರಗೀತೆ ಇದಕ್ಕೆ ತದ್ವಿರುದ್ಧ. ಅಲ್ಲಿ ಚಿತ್ರದ ಸನ್ನಿವೇಶಕ್ಕೆ ತಕ್ಕಂತೆ, ಸಂಗೀತ ನಿರ್ದೇಶಕರು ಮೊದಲು ಒಂದು ರಾಗವನ್ನು ಸಿದ್ಧಪಡಿಸುತ್ತಾರೆ. ಅದಕ್ಕೆ ಅನುಗುಣವಾಗಿ ಹಾಗೂ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರ ಅಪೇಕ್ಷೆಗೆ ತಕ್ಕ ಹಾಗೆ ಸಾಹಿತ್ಯವನ್ನು ತುಂಬುವುದು ಗೀತರಚನಕಾರರ ಕೆಲಸ. ಹಾಗಾಗಿ ಅಲ್ಲಿನ ನಿಯಮಗಳೇ ಬೇರೆ. ಅಲ್ಲಿ ಕವಿಯ ಸೃಜನಶೀಲತೆಗೆ ಸ್ವಾತಂತ್ರ್ಯ ಮತ್ತು ಅವಕಾಶ ಕಡಿಮೆ. ಅಷ್ಟಾಗಿಯೂ ಕಾವ್ಯಾತ್ಮಕವಾದ, ಉತ್ತಮ ಗುಣಮಟ್ಟದ ಅನೇಕ ಚಿತ್ರಗೀತೆಗಳು ಮೂಡಿಬಂದಿರುವುದೂ ಸುಳ್ಳಲ್ಲ.
+
ಭಾವಗೀತೆಯನ್ನು ಬರೆಯಲು ಬಯಸುವವರು ಮಾಡಬೇಕಾದ ಮೊದಲ ಕಡ್ಡಾಯದ ಕೆಲಸವೆಂದರೆ ಹೊಸಗನ್ನಡದಲ್ಲಿ ಈಗಾಗಲೇ ಬಂದಿರುವ ಅತ್ಯುತ್ತಮ ಭಾವಗೀತೆಗಳ ಅಧ್ಯಯನ. ಇದನ್ನು ಕೆ.ಎಸ್.ನರಸಿಂಹಸ್ವಾಮಿ ಅವರ ‘ಮೈಸೂರ ಮಲ್ಲಿಗೆ’ಯಿಂದ ಪ್ರಾರಂಭಿಸುವುದು ಒಳ್ಳೆಯದು. ಏಕೆಂದರೆ ಅವು ಸರಳ, ಸುಕುಮಾರ ರಚನೆಗಳು. ಗ್ರಹಿಕೆ ಮತ್ತು ಅನುಕರಣೆಗೂ ಸುಲಭ.

ನಂತರದಲ್ಲಿ ಬೇಂದ್ರೆ, ಕುವೆಂಪು, ಶಿವರುದ್ರಪ್ಪ, ಕಣವಿ – ಹೀಗೆ ದೊಡ್ಡ ದಂಡೇ ಇದೆ. ಈ ಅಧ್ಯಯನ ಮತ್ತು ಅನುಕರಣೆ ಕೇವಲ ‘ಆಕೃತಿ’ಯನ್ನು ಕೈವಶ ಮಾಡಿಕೊಳ್ಳಲು ಮಾತ್ರ, ‘ಆಶಯ’ವನ್ನಲ್ಲ. ಏಕೆಂದರೆ ಮುಂದೆ ನೀವು ಬರೆಯುವ ನಿಮ್ಮ ಭಾವಗೀತೆಯ ಆಶಯ, ನುಡಿಗಟ್ಟು ನಿಮ್ಮ ಸ್ವಂತದ್ದೇ ಆಗಿರಬೇಕು. ನಿಮ್ಮ ಕಾಲ, ದೇಶದ್ದಾಗಿರಬೇಕು. ಅದು ನಿಮ್ಮ ಪ್ರತಿಭೆ ಮತ್ತು ಸೃಜನಶೀಲತೆಗೆ ಸಂಬಂಧಿಸಿದ ವಿಷಯ.
+
ಭಾವಗೀತೆಯ ಜೀವಾಳವೆಂದರೆ ಅದರ ನಾದ ಮತ್ತು ಲಯ. ಅದಕ್ಕೆ ಪೂರಕ ಮತ್ತು ಪೋಷಕವಾದದ್ದು ಪ್ರಾಸಾನುಪ್ರಾಸಗಳು ಮತ್ತು ಕಾವ್ಯಾಲಂಕಾರಗಳು. ಇವನ್ನು ಹೊಸ ಕವಿಗಳು ತಮ್ಮ ಅಧ್ಯಯನ ಮತ್ತು ಪರಿಶ್ರಮದಿಂದ ತಮ್ಮದಾಗಿಸಿಕೊಳ್ಳಲು ಸಾಧ್ಯವಿದೆ.

ಈಗ ಭಾವಗೀತೆಯ ಲಯ ಅಥವಾ ನಡೆಯ ವಿಷಯಕ್ಕೆ ಬರೋಣ. ಹೊಸಗನ್ನಡ ಕಾವ್ಯಕ್ಕೆ ಇರುವ ಪ್ರಮುಖ ನಡೆಗಳು ಮೂರು ಮಾತ್ರ. ಉಳಿದವು ಇವುಗಳ ಬಗೆ ಬಗೆ ಮಿಶ್ರಣಗಳಷ್ಟೇ. ೧) ಮೂರು ಮಾತ್ರಾಗಣಗಳ ನಡೆ, ೨) ನಾಲ್ಕು ಮಾತ್ರಾಗಣಗಳ ನಡೆ ಮತ್ತು ೩) ಐದು ಮಾತ್ರಾಗಣಗಳ ನಡೆ.

ಮೂರು ಮಾತ್ರಾಗಣದಲ್ಲಿ ಅದರ ಹೆಸರೇ ಹೇಳುವಂತೆ ಮೂರು ಮಾತ್ರೆಗಳಿರುತ್ತವೆ. ಲಘು ಅಥವಾ ಹ್ರಸ್ವಕ್ಕೆ ಒಂದು ಮಾತ್ರೆ (೧). ಗುರು ಅಥವಾ ದೀರ್ಘಕ್ಕೆ ಎರಡು ಮಾತ್ರೆ (೨). ಹೀಗಾಗಿ ಅಲ್ಲಿನ ಗಣಗಳಲ್ಲಿನ ಮಾತ್ರೆಗಳ ವಿನ್ಯಾಸ ಹೀಗಿರಬಹುದು ( ೧,೧,೧ ), ( ೧,೨ ), ( ೨,೧)

ಈಗ ಉದಾಹರಣೆಗಳ ಮೂಲಕ ಮೇಲಿನ ಅಂಶಗಳನ್ನು ಸ್ಪಷ್ಟಪಡಿಸಿಕೊಳ್ಳೋಣ. ‘ಮೈಸೂರ ಮಲ್ಲಿಗೆ’ಯಿಂದಲೇ ಉದಾಹರಿಸುತ್ತೇನೆ. ಮೂರು ಮಾತ್ರಾಗಣಗಳ ನಡೆಗೆ ಈ ಪದ್ಯಭಾಗವನ್ನು ನೋಡಿ:

ಮದುವೆಯಾಗಿ ತಿಂಗಳಿಲ್ಲ
ನೋಡಿರಣ್ಣ ಹೇಗಿದೆ?
ನಾನು ಕೂಗಿದಾಗಲೆಲ್ಲ
ಬರುವಳೆನ್ನ ಶಾರದೆ.

ಇಲ್ಲಿ ಮೊದಲ ಮತ್ತು ಮೂರನೆಯ ಸಾಲುಗಳಲ್ಲಿ ತಲಾ ಮೂರು ಮಾತ್ರೆಗಳ ನಾಲ್ಕು ಗಣಗಳಿವೆ. ಎರಡು ಮತ್ತು ನಾಲ್ಕನೆಯ ಸಾಲುಗಳಲ್ಲಿ ತಲಾ ಮೂರು ಗಣಗಳ ಜೊತೆಗೆ ಸಾಲಿನ ನಿಲುಗಡೆಗಾಗಿ ಕೊನೆಯಲ್ಲಿ ಒಂದು ದೀರ್ಘಾಕ್ಷರ ಬಂದಿದೆ. ಹಾಗೆಯೇ ಎರಡು ಮತ್ತು ನಾಲ್ಕನೆಯ ಸಾಲುಗಳ ಕೊನೆಯ ಪದಗಳು ಪ್ರಾಸಪದಗಳಾಗಿವೆ ( ಹೇಗಿದೆ/ಶಾರದೆ )

ಈಗ ನಾಲ್ಕು ಮಾತ್ರಾಗಣಗಳ ನಡೆಯನ್ನು ನೋಡೋಣ. ಇಲ್ಲಿ ಒಂದು ಗಣದಲ್ಲಿ ನಾಲ್ಕು ಮಾತ್ರೆಗಳಿರುತ್ತವೆ. ಅವು ಈ ವಿನ್ಯಾಸದಲ್ಲಿರಬಹುದು: ( ೧,೧,೧,೧ ), ( ೨,೧,೧ ), ( ೧,೨,೧ ), ( ೨,೨ ), ( ೧,೧,೨ ). ಉದಾಹರಣೆಗೆ:

ಮಾವನಮನೆಯಲಿ ಮಲ್ಲಿಗೆ ಹೂಗಳ
ಪರಿಮಳ ತುಂಬಿತ್ತು;
ಬಾಗಿಲ ಬಳಿ ಕಾಲಿಗೆ ಬಿಸಿನೀರಿನ
ತಂಬಿಗೆ ಬಂದಿತ್ತು.

ಇಲ್ಲಿ ಮೊದಲ ಮತ್ತು ಮೂರನೆಯ ಸಾಲುಗಳಲ್ಲಿ ತಲಾ ನಾಲ್ಕು ಮಾತ್ರೆಗಳ ನಾಲ್ಕು ಗಣಗಳಿವೆ. ಎರಡು ಮತ್ತು ನಾಲ್ಕನೆಯ ಸಾಲುಗಳಲ್ಲಿ ತಲಾ ಎರಡು ಗಣಗಳಿದ್ದು, ಸಾಲುಗಳ ನಿಲುಗಡೆಗಾಗಿ ಕೊನೆಯಲ್ಲಿ ಒಂದು ದೀರ್ಘಾಕ್ಷರ ಬಂದಿದೆ. ಹಾಗೆಯೇ ಎರಡು ಮತ್ತು ನಾಲ್ಕನೆಯ ಸಾಲುಗಳ ಕೊನೆಯ ಪದಗಳು ಪ್ರಾಸಪದಗಳಾಗಿವೆ (ತುಂಬಿತ್ತು/ಬಂದಿತ್ತು )

ಈಗ ಐದು ಮಾತ್ರಾಗಣಗಳ ನಡೆಯನ್ನು ನೋಡೋಣ. ಇಲ್ಲಿ ಒಂದು ಗಣದಲ್ಲಿ ಐದು ಮಾತ್ರೆಗಳಿರುತ್ತವೆ. ಅವು ಈ ವಿನ್ಯಾಸದಲ್ಲಿರಬಹುದು: ( ೧,೧,೧,೧,೧ ), ( ೨,೧,೧,೧ ), ( ೧,೨,೧,೧ ), ( ೧,೧,೨,೧ ), ( ೧,೧,೧,೨ ), ( ೨,೨,೧ ), (೧,೨,೨ ), (೨,೧,೨ ). ಉದಾಹರಣೆಗೆ:

ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ
ನಿಮ್ಮ ಪ್ರೇಮವ ನೀವೆ ಒರೆಯನಿಟ್ಟು;
ನಿಮ್ಮ ನೆನಪೇ ನನ್ನ ಹಿಂಡುವುದು ಹಗಲಿನಲಿ,
ಇರುಳಿನಲಿ ಕಾಣುವುದು ನಿಮ್ಮ ಕನಸು.

ಇಲ್ಲಿ ಮೊದಲ ಮತ್ತು ಮೂರನೆಯ ಸಾಲುಗಳಲ್ಲಿ ಐದು ಮಾತ್ರೆಗಳ ತಲಾ ನಾಲ್ಕು ಗಣಗಳಿವೆ. ಎರಡು ಮತ್ತು ನಾಲ್ಕನೆಯ ಸಾಲುಗಳಲ್ಲಿ ತಲಾ ಮೂರು ಗಣಗಳಿದ್ದು, ಸಾಲುಗಳ ನಿಲುಗಡೆಗಾಗಿ ಕೊನೆಯಲ್ಲಿ ಒಂದು ದೀರ್ಘಾಕ್ಷರ ಬಂದಿದೆ. ಹಾಗೆಯೇ ಎರಡು ಮತ್ತು ನಾಲ್ಕನೆಯ ಸಾಲುಗಳ ಕೊನೆಯ ಪದಗಳು ಪ್ರಾಸಪದಗಳಾಗಿವೆ ( ನಿಟ್ಟು/ಕನಸು )

ಇನ್ನು ಸಮ್ಮಿಶ್ರ ನಡೆಗೆ ಒಂದು ಉದಾಹರಣೆ ನೋಡೋಣ. ಇದು ಕುವೆಂಪು ಅವರ ಜನಪ್ರಿಯ ಗೀತೆ:

ದೋಣಿ ಸಾಗಲಿ, ಮುಂದೆ ಹೋಗಲಿ,
ದೂರತೀರವ ಸೇರಲಿ;
ಬೀಸುಗಾಳಿಗೆ ಬೀಳುತೇಳುತ
ತೆರೆಯ ಮೇಗಡೆ ಸಾಗಲಿ.

ಇಲ್ಲಿ ಮೂರು+ನಾಲ್ಕು ಮಾತ್ರಾಗಣಗಳ ನಡೆಯಿದೆ ( ಭಾಮಿನಿ ಷಟ್ಪದಿಯ ನಡೆ ). ಉಳಿದಂತೆ ಮೇಲಿನ ಉದಾಹರಣೆಗಳ ಎಲ್ಲ ಲಕ್ಷಣಗಳೂ ಇಲ್ಲಿವೆ. ಇಂಥ ಹಲವಾರು ಸಮ್ಮಿಶ್ರನಡೆಗಳು ಸಾಧ್ಯವಿದೆ. ಜೊತೆಗೆ ಮಾತ್ರಾಗಣಕ್ಕಿಂತ ವಿಭಿನ್ನವಾದ ಜಾನಪದೀಯ ‘ಅಂಶಗಣ’ವೂ ಇದೆ. ಕಾವ್ಯಕೌಶಲದಲ್ಲಿ ಕವಿ ಪಳಗಿದ ಹಾಗೆ ಇವೆಲ್ಲ ತಾವಾಗಿ ಅವನ ಕೈವಶವಾಗುತ್ತವೆ.

ಮೇಲಿನ ಉದಾಹರಣೆಗಳನ್ನು ಮಾದರಿಯಾಗಿಟ್ಟುಕೊಂಡು ಯುವ ಕವಿಗಳು ಕಾವ್ಯರಚನೆಗೆ ತೊಡಗಿದರೆ, ತಾವೂ ಸಹ ಉತ್ತಮ ಭಾವಗೀತೆಗಳನ್ನು ರಚಿಸುವಲ್ಲಿ ಯಶಸ್ವಿಯಾಗಬಹುದು. ಪ್ರಯತ್ನಿಸಿ. ಕನ್ನಡ ಭಾವಗೀತೆಗಳ ಶ್ರೀಮಂತ ಪರಂಪರೆಯನ್ನು ಮುಂದುವರಿಸಿ.

‍ಲೇಖಕರು avadhi

May 27, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: