ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

“ಹತ್ಕೋ ರೈಲು” ಅಂದೆ, ಹತ್ತೇ ಬಿಟ್ಟ..

ಪರಮೇಶ್ವರ ಗುರುಸ್ವಾಮಿ

ರಾಷ್ಟ್ರೀಯ ಸಾಕ್ಷರತಾ ಮಿಷನ್ ಕರ್ನಾಟಕದಲ್ಲಿ 1988-89ರಲ್ಲಿ ಹಮ್ಮಿಕೊಂಡಿದ್ದ ಸಂಪೂರ್ಣ ಸಾಕ್ಷರತಾ ಆಂದೋಲನ ಎರಡು ಜಿಲ್ಲೆಗಳಲ್ಲಿ  ಆರಂಭಗೊಂಡಿತು. ಮಂಗಳೂರು ಮತ್ತು ಅಂದಿನ ಬಿಜಾಪುರಗಳಲ್ಲಿ. ಬಿಜಾಪುರ ಆಂದೋಲನದ ಪ್ರಚಾರ ಕಾರ್ಯಕ್ರಮ ಮತ್ತು ಅಗತ್ಯವಿದ್ದ ಜಾಗೃತಿ ಸಂಪನ್ಮೂಲಗಳನ್ನು ಪೂರೈಸುವುದು ನಮ್ಮ ಸಂಸ್ಥೆಯ ಜವಾಬ್ದಾರಿಯಾಗಿತ್ತು.

ಶಶಿಧರ ಅಡಪ ಬೀದಿ ನಾಟಕ, ಬ್ಯಾನರುಗಳು ಮತ್ತಿತರ ಪ್ರಚಾರ ಕಾರ್ಯಕ್ರಮಗಳು ಮತ್ತು ಸಾಮಗ್ರಿಗಳ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದರು. ನನಗೆ ಇಡೀ ಆಂದೋಲನವನ್ನು ಪ್ರಸಾರ ಗುಣಮಟ್ಟದ ವಿಡಿಯೋ ದಾಖಲೀಕರಣ ಮಾಡುವ ಜವಾಬ್ದಾರಿ ಇತ್ತು. ಸಂಪೂರ್ಣ ಸಾಕ್ಷರತಾ ಆಂದೋಲನವು ದೇಶದಲ್ಲಿ ಸರ್ಕಾರದ ಕಾರ್ಯಕ್ರಮವೊಂದು ಇಡೀ ಜಿಲ್ಲೆಯ ಜನರನ್ನು ಒಳಗೊಳ್ಳುವ ಬೃಹತ್ ಆಂದೋಲನವಾಗಿತ್ತು. ಮೊದಲ ಕಂತಿನ ಆ ಮಟ್ಟದ ಪ್ರಾಯೋಗಿಕ ಪ್ರಚಾರ ಮತ್ತು ಅನುಷ್ಠಾನ ಜೊತೆಜೊತೆಯಲ್ಲಿ ಸಾಗಬೇಕಾದ ಆಂದೋಲನವಾಗಿತ್ತು. ಬೇರೆ ರಾಜ್ಯಗಳಲ್ಲೂ ಇದೇ ರೀತಿ ಆರಂಭವಾಗಿತ್ತು.

ರಾಜ್ಯದಲ್ಲಿ ಈ ಆಂದೋಲನದ ನೇತೃತ್ವ ವಹಿಸಿದ್ದವರು ದಿ. ಲಿಂಗದೇವರು ಹಳೆಮನೆ (ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕರು) ಮತ್ತು ಮದನ್ ಗೋಪಾಲ್ (ರಾಜ್ಯ ಸಾಕ್ಷರತಾ ಮಿಷನ್ ನ ನಿರ್ದೇಶಕರು). ಸಾಕ್ಷರತಾ ಆಂದೋಲನವೇ ನಿಜವಾದ ಕ್ರಾಂತಿ ಎಂದು ನಂಬಿ ರಣೋತ್ಸಾಹದಲ್ಲಿ ಕೆಲಸ ಮಾಡುತ್ತಿದ್ದರು.

ಆಂದೋಲನದ ಪೂರ್ವತಯಾರಿಯಲ್ಲಿ ತೊಡಗಿಕೊಂಡಿದ್ದಾಗ ಮದನ್ ಗೋಪಾಲ್ ರವರಿಗೆ ಒಂದು ಪ್ರೇರಣಾ ಚಿತ್ರ ಮಾಡಿದರೆ ಒಳ್ಳೆಯದು ಅನಿಸಿತು. ನನಗೆ ಮಾಡಿ ಎಂದರು. ಏನು ಕಥೆ ಇಟ್ಟುಕೊಳ್ಳಲಿ ಎಂದಾಗ ಹೆಣ್ಣು ಮಕ್ಕಳು ಮತ್ತು ಸಾಕ್ಷರತೆಯ ಅಗತ್ಯ ಕುರಿತು ಮಾಡಿ ಎಂದರು. ಸರಿ. ಒಂದು ಕಥೆ ಹೆಣೆದೆ, ಮೊಮ್ಮಗಳು ಸಾಲಿ ಕಲಿಯಬಾರದು ಎಂದು ಹಠ ಹಿಡಿದು ಸಂಜೆ-ಶಾಲೆಯಿಂದ ಎಳೆದುಕೊಂಡು ಬಂದ ಆಯಿ, ಹಲವಾರು ಘಟನೆಗಳಿಂದ ಅಕ್ಷರ ಜ್ಙಾನ ಅಗತ್ಯ ಎಂಬುದನ್ನು ಮನಗಂಡು ಮೊಮ್ಮಗಳನ್ನು ಸಂಜೆ-ಶಾಲೆಗೆ ಕಳಿಸುತ್ತಾಳೆ.

ಕೊನೆಗೆ, “ನನಗೂ ಕಲಿಸವ್ವಾ…” ಎಂದು ಮೊಮ್ಮಗಳ ಮುಂದೆ ಸ್ಲೇಟು ಬಳಪ ಹಿಡಿಯುತ್ತಾಳೆ. ಕೋಟಿಗಾನಹಳ್ಳಿ ರಾಮಯ್ಯ ಮತ್ತು ನಾನು ಚಿತ್ರಕಥೆ ಬರೆದು ಸಂಭಾಷಣೆ ಬರೆದೆವು. ಸಂಭಾಷಣೆ ನಮ್ಮ ಕಡೆ ಶಿಷ್ಟ ಕನ್ನಡದಲ್ಲಿದ್ದುದನ್ನು ಶ್ರೀನಿವಾಸ ತಾವರಗೆರಿಯವರು ಬಿಜಾಪುರಿ ಕನ್ನಡಕ್ಕೆ ಪರಿವರ್ತಿಸಿಕೊಟ್ಟರು. ನಟನಟಿಯರೆಲ್ಲ ಬಿಜಾಪುರದವರೆ. ತಾಂತ್ರಿಕ ಟೀಂ ಬೆಂಗಳೂರಿನಿಂದ ಹೊರೆಟವು.

ನಮ್ಮನ್ನು ಬೀಳ್ಕೊಡಲು ಪಿಚ್ಚಳ್ಳಿ ಸ್ಟೇಷನ್ ಗೆ ಬಂದಿದ್ದ. (ಈಗ ಅವರು ಜಾನಪದ ಅಕಾಡೆಮಿಯ ಅಧ್ಯಕ್ಷರು. ನಾನು ಅಂದಿನ ಪಿಚ್ಚಳ್ಳಿಯನ್ನು ಏಕವಚನದಲ್ಲೇ ಗುರುತಿಸುತ್ತೇನೆ.) ಪಿಚ್ಚಳ್ಳಿ ರಂಗಾಯಣ ಸೇರಿದ್ದ. ರಂಗಾಯಣ ಶುರುವಾಗಿ ಇನ್ನೂ ಒಂದು ವರ್ಷ ಆಗಿತ್ತೋ ಇಲ್ಲವೋ ಗೊತ್ತಿಲ್ಲ. ಅವನಿಗೆ ರಾಮಯ್ಯನ ಬಗ್ಗೆ ಬಹಳ ಪ್ರೀತಿ. ರಾಮಯ್ಯ ಬರೆದ ಎಲ್ಲ ಹಾಡುಗಳಿಗೆ ರಾಗ ಹಾಕಿ ಹಾಡುತ್ತಿದ್ದ.

ಬೆಂಗಳೂರಿನಿಂದ ಕವಿ ಸಿದ್ದಲಿಂಗಯ್ಯ ಮತ್ತು ಜನ್ನಿ ಜೋಡಿಯಾದರೆ ಕೋಲಾರದಿಂದ ರಾಮಯ್ಯ ಮತ್ತು ಪಿಚ್ಚಳ್ಳಿ ಜೋಡಿ ಆಗ ಹೋರಾಟದ ಹಾಡುಗಳಿಗೆ ಹೆಸರುವಾಸಿ. ಸರಿ. ರೈಲು ಹೊರಟಿತು. ಒಂದಷ್ಟು ಹೆಜ್ಜೆ ಪಿಚ್ಚಳ್ಳಿ ರೈಲಿನೊಂದಿಗೆ ಓಡಿದ. ನನಗೆ ಅಮ್ಮನ (ರಾಮಯ್ಯನ) ಬೀಳ್ಕೊಡಲಾಗದ ತಬ್ಬಲಿ ಕರುವಿನಂತೆ ಕಂಡ. “ಹತ್ಕೊ. ರೈಲು” ಅಂದೆ. ಹತ್ತೇ ಬಿಟ್ಟ.

ಉಳಿದ ನಮಗೆಲ್ಲ ರಿಸರ್ವೇಶನ್ ಆಗಿತ್ತು. ಇವನಿಗೆ ಟಿಕೇಟೂ ಕೊಂಡಿರಲಿಲ್ಲ. ಚೆಕಿಂಗ್ ಬಂದಾಗ ನೋಡ್ಕೊಳ್ಳೋಣ ಎಂದುಕೊಂಡೆ. ಯಾರೂ ಚೆಕಿಂಗ್ ಗೆ ಬರ್ಲಿಲ್ಲ. ಪ್ರಯಾಣ ಮಾಡುತ್ತಿದ್ದಂತೆ ಪಿಚ್ಚಳ್ಳಿ ತಾನು ಸಂಗ್ರಹಿಸಿದ್ದ ತಾಯಿ ಮೊಲ ಬೇಟೆಗಾರನಿಗೆ ತಾನು ಗರ್ಭಿಣಿ, ಹೊಟ್ಟೆಯಲ್ಲಿ ಮರಿ ಇದೆ. ಬಾಣ ಬಿಡಬೇಡ. ಎಂದು ಕೋರುವ ತೆಲುಗು ಹಾಡನ್ನು ಹಾಡಿದ.

ರಾಮಯ್ಯ ಪುನಃ ಪುನ: ಹಾಡಿಸಿ ಆ ರಾಗಕ್ಕೆ ಧಾಟಿಗೆ ಕನ್ನಡದಲ್ಲಿ “ಹಚ್ಚ ಬ್ಯಾಡ .. ಹಚ್ಚಬ್ಯಾಡವ್ವ.. ಜೀತಕ್ಕೆ ನನ್ನನ್ನ. ಎಳೆಬಾಳೆ ಸುಳಿ ನಾನವ್ವ…” ಜೀತದ ಬದಲು ಶಾಲೆಗೆ ಹಾಕು ಎಂಬ ಹಾಡನ್ನು ಬರೆದರು. ಅದರಲ್ಲಿ ತಮ್ಮ ಜೀತದ ಅನುಭವವನ್ನೂ ತುಂಬಿದರು.

ಹೀಗೆ ತೆಲುಗಿನಲ್ಲಿ ಬೇಟೆಗಾರನನ್ನು ಬಿಮ್ಮನ್ಸೆ ಮೊಲ ಕೊಲ್ಲಬೇಡ ಎಂದು ಪ್ರಾರ್ಥಿಸುವ ಹಾಡು ಕನ್ನಡದಲ್ಲಿ ಸಾಕ್ಷರತೆಯ anthem ಆಗಿ ಹೋಯಿತು.

‍ಲೇಖಕರು Admin

5 January, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading