ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಣೆಪಟ್ಟಿ ಇಲ್ಲದ ಕೆಲ ಸಾಲುಗಳು

ಲಡಾಯಿ ಬಸೂ 

1
ಮುಸ್ಸಂಜೆ ದೀಪ ಹಚ್ಚಿದ್ದೆ
ಚಂದಿರನೂ ಮೂಡಿದ್ದ
ಮೆಲ್ಲಗೆ ಬೀಸುವ ತಂಪುಗಾಳಿಯಲಿ
ತೇಲಿ ಬಂದ
ಮಿಂಚುಹುಳು
ಸುಮ್ಮನೆ ಯಾವುದೊ ನೆನಪು ಬೆಳಕಾಯಿತು

2
ಮುಂಜಾವಿನ ಮೃದು ಮಂಜು
ಸಂಜೆಯ ಒದ್ದೆ ಮೋಡ
ಇರುಳ ಮುಳ್ಳಮೊನೆ ಮೇಲೆ ಕುಳಿತಿವೆ
ನನ್ನೆದೆಯ ನೆನಪಿನ ಆವರಣವನ್ನೆಲ್ಲ
ತೀಡಿ ಗಾಳಿಗೂಡಿವೆ
ಸಾಧ್ಯವಾದಲ್ಲಿ ನೀನು ಹಿಡಿ
ಬೆಕ್ಕಿನ ವಿಷಾದ ಕಣ್ಣಿಗಷ್ಟು ತಲುಪಿಸು

3
ಬೀಗ ಜಡಿದ ಷರಾಬು ಅಂಗಡಿ
ಒಡೆದು ಚೂರಾದ ಮಧುಬಟ್ಟಲು
ಅವನ ಹೆಜ್ಜೆಗುರುತಿನ ಸಾಕ್ಷಿ
ಇನ್ನೂ ಉಳಿದುಕೊಂಡಿದ್ದವು

ನಿಂತರೇನು ಬಹಳ ಹೊತ್ತು ಅಲ್ಲಿ..

ಚೂರಿಬಿದ್ದ ಕೋಳಿಯ ಕೊರಕೊರ
ಸದ್ದು ನಿಧಾನ ಇರುಳಲ್ಲಿ ಕರಗುವುದು

4
ಹುಟ್ಟು ಸಾವಿನ ನಡುವೆ
ಹಗಲು ರಾತ್ರಿಗಳು
ಮಧ್ಯದಲ್ಲಿ ಸಿಲುಕಿದಂತ
ಬೆಳಕಿನ ಹಸಿ ನೆನಪೊಂದನ್ನು
ಜರೂರಾಗಿ ಕಳಿಸು
ಹೊದ್ದು ಮಲಗಬೇಕಿದೆ

5
ಪ್ರತಿ ದಿನವೂ ಸಾಯುತ್ತೇನೆ ನಿನಗಾಗಿ
ಪ್ರತಿ ದಿನವೂ ಹುಟ್ಟುತ್ತೇನೆ ನಿನಗಾಗಿ
ಸಾಯದೆ ಹುಟ್ಟದೆ ನಿನ್ನ ಕೂಡಲು ನನಗೆ ಬರದು

6
ಅರಿಯಲು ಏನೋ ಇದೆಯೆಂದೇ ಭೂಮಿ ತಿರುಗುತ್ತಿದೆ
ಅರಿಯಲು ಏನೋ ಇದೆಯೆಂದೇ ನದಿ ಹರಿಯುತ್ತಿದೆ
ಅರಿಯಲು ಏನೂ ಇಲ್ಲವೆಂದು ಎಲೆಗಳು ಉದುರುತ್ತಿವೆ

7
ಅವರು ಕಾಗದದ ತುಣುಕಿನಲ್ಲಿ
ಕನಸಿನ ತಂಬಾಕು ಸುತ್ತಿದರು
ಮಾಲಕನ ಸಿಗರೇಟಿನ ಜಾಹಿರಾತಿನಲಿ
ಸೇದುವವರ ತುಟಿಗಳು ರಂಗಾಗಿದ್ದವು
ಅವರು ಸಿಗರೇಟಿನ ಜುರುಕಿ ಎಳೆದಾಗಲೆಲ್ಲ
ಕಟ್ಟಿದವರ ತುಟಿ ಕಪ್ಪಾಗುತ್ತಿದ್ದವು

‍ಲೇಖಕರು Admin

30 December, 2016

3 Comments

  1. Anonymous

    ಚಂದದ ಬರಹ

  2. Gayatri Badiger, Dharwad

    super sir… thank you….

  3. John suntikoppa

    ಚೆನ್ನಾಗಿದೆ ಸರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading