ಹಚ್ಚಿಟ್ಟ ಪ್ರೀತಿಯ ದೀಪ

ಪ್ರಕಾಶ ಬುದ್ದಿನ್ನಿ

ಗಜಲ್ ಉರ್ದುವಿನ ಕಾವ್ಯ ಪ್ರಕಾರವಾಗಿದ್ದು ಇದು ಕನ್ನಡದಲ್ಲಿ ಹೆಜ್ಜೆ ಮೂಡಿಸುತಿದೆ. ಅದರಲ್ಲೂ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಂತೂ ಗಜಲ್ ಗುಂಗು ತುಸು ಹೆಚ್ಚೇ ಇದೆ. ಅನೇಕರು ಈ ಗುಂಗಿಗೆ ತಲೆ ತೂಗಿದ್ದಾರೆ ತೂಗುತ್ತಿದ್ದಾರೆ ಕೂಡ. ಇದೀಗ ಈ ಗುಂಗಿನ ನಶೆ ಹಚ್ಚಿಸಿಕೊಂಡವರ, ಹೆಚ್ಚಿಸಿಕೊಂಡವರ ಸಾಲಿನಲ್ಲಿ ಯುವ ಕವಿ ಅಭಿಶೇಕ್ ಬಳೆ ಸೇರಿದ್ದಾರೆ.

ಬಾಲ್ಯದಿಂದಲೇ ಅಪಾರವಾದ ಸಾಹಿತ್ಯದ ಒಲವನ್ನು ಬೆಳೆಸಿಕೊಂಡ ಇವರು ಹೈಸ್ಕೂಲು ಓದುವಾಗಲೇ ‘ಜಯ ಹೇ ಕರ್ನಾಟಕ ಮಾತೆ’ ಸಂಕಲನವನ್ನು, ಬಿ.ಎಸ್.ಸಿ ಓದುವಾಗ ‘ಅಮ್ಮ ಮತ್ತು ಇತರ ಕವಿತೆಗಳು’ ಕವನ ಸಂಕಲನವನ್ನು ಪ್ರಕಟಿಸುವುದರ ಮೂಲಕ ಕಿರಿವಯಸ್ಸಿಗೆ ಸಾಹಿತ್ಯ ಲೋಕಕ್ಕೆ ಪ್ರವೇಶ ಪಡೆದು ತಮ್ಮ ಸಾಹಿತ್ಯ ಕೃಷಿಗೆ ‘ಸಿರಿಗನ್ನಡ ವಚನಕಲ್ಯಾಣ ಪ್ರಶಸ್ತಿ’, ‘ಸಾಹಿತ್ಯ ಸಿರಿ ಪ್ರಶಸ್ತಿ’, ‘ಕವನಕುಸುರಿ ಪ್ರಶಸ್ತಿ’, ಚುಕ್ಕಿ ಸಾಂಸ್ಕೃತಿಕ ಪ್ರತಿಷ್ಟಾನ ಸಿರಿವಾರದ ವತಿಯಿಂದ ೨೦೧೬ನೇ ಸಾಲಿನಲ್ಲಿ ‘ಉತ್ತಮ ಯುವ ಬರಹಗಾರ’ ಪ್ರಶಸ್ತಿ ಪಡೆದಿದ್ದಾರೆ.

ಇದೀಗ ಇವರು ‘ಗೋರಿ ಮೇಲಿನ ಹೂ’ ಗಜಲ್ ಸಂಕಲನ ಹೊರತಂದಿದ್ದಾರೆ. ಓದಿದ್ದು ಬಿ.ಎಸ್.ಸಿ ಪದವಿಯಾದರು ಕನ್ನಡ ಸಾಹಿತ್ಯವನ್ನು ಪ್ರಮಾಣಿಕವಾಗಿ ಮತ್ತು ಅಪಾರವಾಗಿ ಪ್ರೀತಿಸುವ ಇವರು ಗಜಲ್ ಬರಹದಲ್ಲಿ ತೊಡಗಿ ಹಿರಿಯ ಮತ್ತು ಸಹ ಬರಹಗಾರರಿಂದ ಮೆಚ್ಚುಗೆಯನ್ನು ಗಳಿಸಿದ್ದಾರೆ. ‘ಗೋರಿ ಮೇಲಿನ ಹೂ’ ಗಜಲ್ ಸಂಕಲನ ತನ್ನ ಶೀರ್ಷಿಕೆಯ ಕಾರಣಕ್ಕಾಗಿಯೇ ಗಮನ ಸೆಳೆಯುತ್ತದೆ. ಈ ಸಂಕಲನದಲ್ಲಿ ಒಟ್ಟು ೬೧ ಗಜಲ್‌ಗಳಿವೆ.

ಗಜಲ್‌ಗಳ ವಸ್ತು, ವಿಷಯ ಹಲವು ಮಗ್ಗಲುಗಳಲ್ಲಿ ಅಭಿವ್ಯಕ್ತಗೊಂಡಿರುವುದನ್ನು ಕಾಣುತ್ತೇವೆ. ಗಜಲ್ ಸಂಕಲನವನ್ನು ಓದಿದಾಗಿ ವಯೋಸಹಜವಾದ ಪ್ರೀತಿ, ಪ್ರೇಮ, ಪ್ರಣಯ, ಕನಸು, ಕನವರಿಕೆ ತವಕ, ತಲ್ಲಣಗಳಿರುವುದನ್ನು ಕಾಣುತ್ತೇವೆ. ಅಭಿ ಗಜಲ್‌ಗಳುದ್ದಕ್ಕೂ ಪ್ರೀತಿಯನ್ನು ತಡಕಾಡಿದ್ದಾನೆ. ಅವರ ಗಜಲ್ ಸಂಕಲನದ ತುಂಬ ಪ್ರೀತಿಯ ದೀಪ ಉರಿದಿದೆ. ಕಣ್ಣ ತುಂಬಿದ ಕನಸುಗಳು, ಕನವರಿಕೆಗಳು, ಕಲ್ಪನೆಗಳು, ವರ್ಣನೆಗಳೇ ಈ ಗಜಲ್‌ನ ಅಂತಸತ್ವವನ್ನು ಹೆಚ್ಚಿಸಿರುವುದನ್ನು ಗಮನಿಸುವುದಾದದರೆ :

ನೋಡು ಆಗಸ ಮುನಿಸಿಕೊಂಡು ಕೆಂಪೇರಿದ ಬಾನಿನ ಬಯಲಲಿ
ಚೆಂದದ ಚೆಲುವೆ ನೀನು ಬೀಳದಿರು ಚಂದ್ರನ ಕಣ್ಣಿಗೂ ಮಗಗಳೇ

ಸೌಂದರ್ಯದ ವ್ಯಾಖ್ಯಾನವ ವ್ಯಾಖ್ಯಾನಿಸುವುದಕೆ ನೀನೆ ಇರಲು
ಅಂದಕ್ಕಾಗಿ ನಿನ್ನೊಡನೆ ಹೂಗಳ ಪೈಪೋಟಿ ನಡೆದಿತು ಗೆಳತಿ

ಹೀಗೆ ಕವಿ ಇಲ್ಲಿ ಕನಸು ಕಾಣುವ ಕ್ರಿಯೆಯ ಜೊತೆಗೆ ಪ್ರೀತಿಯನ್ನು ಆರಾಧಿಸಿದ್ದಾರೆ. ಇಷ್ಟೇ ಅಲ್ಲದೇ ಇದರಾಚೆಗೆ ವರ್ತಮಾನದ ಬದುಕಿನ ತುಡಿತಗಳರುವುದನ್ನು ಸಹ ಕಾಣಬಹುದಾಗಿದೆ. ದೇಶದ ತುಂಬ ದೇವರು, ಧರ್ಮ, ಜಾತಿಯ ಹೆಸರಿನಲ್ಲಿ ಹಿಂಸೆ ನಡೆಯುತ್ತಿರುವ ಕಾಲಘಟ್ಟದಲ್ಲಿ ಅಭಿ ತನ್ನ ಗಜಲ್ ಮೂಲಕ ಸೌಹಾರ್ದತೆಯನ್ನು ಸಾರಿ ಹೇಳುತ್ತಾರೆ.

ಗಣಪನ ಶರೀಫನ ಕುಲ ಒಂದೇ
ಮಂದಿರ ಮಸೀದಿ ಕಟ್ಟುವ ನೆಲ ಒಂದೇ

ಧರ್ಮ ಗ್ರಂಥಗಳ ನಾಲಿಗೆ ಹರಿತವಾಗಿದೆ ಇಂದು
ಬಾಯಾರಿಕೆ ನೀಗುವ ಜಲ ಒಂದೇ

ಎಲ್ಲರ ಮನದಿ ನಾಟಲಿ ವಿಶ್ವಮಾನವತೆಯ ತತ್ವ
ಸತ್ತಾಗ ಎಲ್ಲರ ದಫನ್ ಮಾಡುವ ಸ್ಥಳ ಒಂದೇ

ಹಿಂದೂ-ಮುಸ್ಲಿಂ ಎಂಬ ಬೇಧ-ಭಾವ ಯಾಕೆ?
ಜಂಗಮ ಫಕೀರನ ಜೋಳಿಗೆಯ ತಳ ಒಂದೇ

ಮೂರು ದಿನದ ಜಿಂದಗಿಯಲಿ ಬಾಳಲು ಬಂದ
ನಮ್ಮೆಲ್ಲರ ಬದುಕಿನ ಮೂಲ ಒಂದೇ

ಹೀಗೆ ಅಭಿಯವರ ಈ ಗಜಲ್ ಸಂಕಲನದಲ್ಲಿ ತನ್ನ ವಯೋಸಹಜ ತುಡಿತಗಳಾಚೆಗೂ ವರ್ತಮಾನಕ್ಕೆ ಮುಖಾಮುಖಿಯಾಗಿರುವುದನ್ನು ಕಾಣುತ್ತೇವೆ. ಇಲ್ಲಿ ರದೀಫ್ ಸಹಿತ ಮತ್ತು ರದೀಫ್ ರಹಿತ ಎರಡು ಬಗೆಯ ಗಜಲ್‌ಗಳಿವೆ. ಇಲ್ಲಿನ ಗಜಲ್‌ಗಳಲ್ಲಿ ಗಜಲ್‌ನ ಛಂದೋ ನಿಯಮಗಳನ್ನು ಬಳಸಿಕೊಳ್ಳುವುದರ ಜೊತೆಗೇನೆ ಗಜಲ್‌ನ ಆತ್ಮದ ಕಡೆಗೂ ಗಮನ ಹರಿಸಬೇಕಾದ ಅಗತ್ಯವಿದೆ. ಆ ನಿಟ್ಟಿನಲ್ಲಿ ಕವಿ ಇನ್ನೂ ಮಾಗಬೇಕಾಗಿದೆ. ಇವರಿಂದ ಇನ್ನೂ ಉತ್ತಮ ಗಜಲ್ ರಚನೆಯಾಗಲಿ. ಆ ಮೂಲಕ ಗಜಲ್ ಪ್ರೇಮಿಗಳಿಗೆ ಗಜಲ್ ಗುಂಗಿನ ನಶೆ ದೊರೆಯುವಂತಾಗಲಿ ಎಂದು ಆಶಿಸುವೆ.

‍ಲೇಖಕರು avadhi

April 12, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Venu Jalibenchi

    ಲೇಖಕರಿಗೂ ಮತ್ತು ಗೆಳೆಯ ಅಭಿಗೂ ಅಭಿನಂದನೆಗಳು…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: