ಅನಾಮಿಕಾ @ ಹ್ಯಾಂಡ್ ಪೋಸ್ಟ್: ಶೀಘ್ರ ಭೇಟಿಗೆ ಬರುವೆ…


ನನಗಿರುವ ಅಕ್ಕಂದಿರಂತಹವರು ಬೇರಾರಿಗೂ ಇಲ್ಲವೆಂದು ನಾನು ‘ತುತ್ತೂರಿ’ಯ ‘ಕಸ್ತೂರಿ’ಯಂತೆ ಜಂಭದಿ ನಡೆಯಲು ಅನೇಕ ಉದಾಹರಣೆಗಳಿವೆ.

ಅದರಲ್ಲೊಂದು, ನಾವು ಮೂವರು ಹೈಸ್ಕೂಲಿನಲ್ಲಿದ್ದಾಗ, “ಪ್ರತಿ ಮನುಷ್ಯ ಜೀವಮಾನದಲ್ಲಿ ಒಮ್ಮೆಯಾದರು ಒಂಟಿಕಾಲಲ್ಲಿ ನಿಲ್ಲುತ್ತಾನೆ. ಬೇರೆ ಯಾವ ಸಂದರ್ಭದಲ್ಲಿ ಅಲ್ಲದೆ ಹೋದರು, ಚಡ್ಡಿ ಧರಿಸುವಾಗಲಾದರು ನಿಂತೆ ನಿಲ್ಲುತ್ತಾನೆ,” ಎನ್ನುವ ಸಾಲುಗಳನ್ನು ಓದಿದ್ದೆವು.

ಅದನ್ನು ಓದುವ ಹಿಂದಿನ ದಿನ ಮಾತ್ರ ನಾವು ಹಾಗೆ ನಿಂತಿದ್ದು. ಮಾರನೆಯ ದಿನದಿಂದ ಇವತ್ತಿನವೆರಗು ‘ಅದಕ್ಕಾಗಿ’ ಒಂದು ದಾರಿ ಕಂಡುಕೊಂಡಿದ್ದೇವೆ! ‘ಘಾಚರ್-ಘೋಚರ್’ ಥರ ಇದು ನಮ್ಮ ಮನೆಯವರಿಗೆ ಮಾತ್ರ ಗೊತ್ತಿರುವ ಸಿಕ್ರೆಟ್. ಇಲ್ಲ ಅಂದ್ರೆ ಹೇಳಿಬಿಡುತ್ತಿದ್ದೆ!!

ಸ್ನೇಹಿತರೊಟ್ಟಿಗೆ ಸೆಕೆಂಡ್ ಶೋ ಸಿನೆಮಾ ನೋಡಿ, ಕಾಂಪೌಂಡ್ ಹಾರಿ; ಕಿಟಕಿಯಿಂದ ಒಳಗೆ ಧುಮುಕಿದಾಗ: -ಯಾರಿಲ್ಲ, ಯಾರಿಲ್ಲ, ಎರಡು ಬೆಕ್ಕುಗಳು ಸಜ್ಜಾದಿಂದ ಒಟ್ಟಿಗೆ ಟೇಬಲ್ ಮೇಲೆ ಜಿಗಿದಿದ್ದರ ಶಬ್ದವದು ಎನ್ನುತ್ತ ನನ್ನನ್ನು safeguard ಮಾಡುತ್ತಿದ್ದ ಅಕ್ಕ ಇವತ್ತು, ಬದುಕು ನೀಡಿದ ಪೆಟ್ಟಿಗೆ ಅಳುತ್ತಿದ್ದಾಳೆ, ಸದ್ದಿಲ್ಲದೆ.

ಎದುರು ಕೂತು ಮಾತನಾಡುವಾಗ ಅವಳು ಬಿಕ್ಕಿದ್ದೆ ಜಾಸ್ತಿ. ಹಾಗಾಗಿ ನಾನು ಮಾತನಾಡದೆ ಸಂತೈಸಿದೆ. ಆಡಬೇಕು ಎಂದ ಮಾತುಗಳನ್ನೆ ಏ.10ರ Siblings dayಗೆ ಪತ್ರ ಬರೆದೆ.

ನಲ್ಮೆಯ ಅಕ್ಕನಿಗೆ,

ನಾವು ಇಷ್ಟಪಡುವವರ ಬಗ್ಗೆ ಪ್ರೀತಿ ಇರುವುದು ಸಹಜ ಆದರೆ ನಾವು ಇಷ್ಟಪಡದವರ ಬಗ್ಗೆ ಕಡೆ ಪಕ್ಷ ಸಹನೆಯನ್ನಾದರು ಪ್ರಯತ್ನ ಪಟ್ಟು ರೂಢಿಸಿಕೊಳ್ಳಬೇಕು, ಇದು ಇಷ್ಟಪಡದವರ ಹಿತದೃಷ್ಟಿಯಿಂದ ಅಲ್ಲ, ಬದಲಾಗಿ ಸಹನೆಗೆಟ್ಟ ಕ್ಷಣ ನಾವು ಅಧರ್ಮಿಗಳಾಗಿ ಬಿಡುತ್ತೇವೆ, ಕುಬ್ಜರಾಗುತ್ತೇವೆ. ‘ಸಹನೆ ಮತ್ತು ಪ್ರೀತಿ’ ನನ್ನ ಧರ್ಮ ಎಂಬ ಗಾಂಧೀಜಿಯವರ ಮಾತನ್ನು ಒತ್ತಿ ಹೇಳುತ್ತ ದೇವನೂರು ಮಹಾದೇವರು ಹೇಳಿದ ಮಾತಿದು. ನನಗು ಹೌದು ಅಂತಲೆ ಅನಿಸಿದೆ.

ಕೆಲವು ವಿಷಯಗಳನ್ನು ಹೇಳುತ್ತ ಹೋದರೆ ತೀರಾ ಕ್ಲೀಷೆ ಅಥವಾ ಇವಳೇನು ಹೇಳಿಯಾಳು ಅಥವಾ ಹೇಳಿದ್ದನ್ನೆ ಹೇಳುತ್ತಾಳೆ ಎನಿಸುವ ಭಾವ ಮೂಡುತ್ತದೆ ಇಲ್ಲವೆಂದಲ್ಲ. ಎಷ್ಟೆ ತಿಳಿದು ನೋಡಿದರು ವಯಸ್ಸು ಕೊಡುವ ಅನುಭವವನ್ನು ವಯಸ್ಸೆ ಕೊಡಬೇಕು. ಆ ವಿಷಯದಲ್ಲಿ ನೀನು ನನಗಿಂತ ದೊಡ್ಡವಳು.

ಇದನ್ನ ಮೀರಿ ಎರಡು ಮಾತು ಹೇಳಬೇಕೆನಿಸಿ ಹೇಳುತ್ತಿದ್ದೇನೆ. ತೀರ ಮನೆ, ಶಾಲೆ ಅಂತಷ್ಟೆ ಯೋಚಿಸಿದರೆ ಮನಸ್ಸು ಅಷ್ಟಕ್ಕೆ ಸೀಮಿತಗೊಳ್ಳುತ್ತದೆ. ಅದರಾಚೆಗೆ ಮನಸಿಗೆ ಮುದ ಕೊಡುವ ಸಂಗತಿಗಳ ಬಗ್ಗೆ ಚಿಂತಿಸು. ನೌಕರಿ ವಿಷಯದಲ್ಲಿ ನಿನ್ನ ಜಾಣ್ಮೆ ಉಪಯೋಗ ಆಗ್ತಿಲ್ಲ ಎನ್ನುವ ಭಾವ ಬೇಡ. ಅದು ನೀನು ಆಯ್ಕೆ ಮಾಡಿಕೊಂಡ ಕ್ಷೇತ್ರದ ಮಿತಿ. ಹಾಗಾಗಿ ಇದು ವ್ಯವಸ್ಥೆಯ ಜೊತೆಗೆ ನೀನು ಮಾಡಿಕೊಳ್ಳಲೆ ಬೇಕಾದ ರಾಜಿ. ಒಂದೆರೆಡು ವರ್ಷ ಹೈಸ್ಕೂಲು, ಪಿಯು ಮಕ್ಕಳ ಗಣಿತ ಪುಸ್ತಕಗಳನ್ನ ಅಧ್ಯಯನ ಮಾಡು. ಹೊಸತು ಹೊಳೆಯಬಹುದು.

ಗಂಡ ಹೆಂಡತಿ ಬೇರೆಯಾದರೆ ತಪ್ಪಿಲ್ಲ. ಅಪ್ಪ-ಅಮ್ಮ ಬೇರೆಯಾಗುವುದು ಬೇಡ. ಒಂದು ಸಲ ಅದು ನಿನ್ನ ಮನಸಿಗೆ ಬಂದರೆ ಜೊತೆಯ ಭಾವ ನಶಿಸುತ್ತದೆ ಅದಕ್ಕಾಗಿ ಈ ಮಾತು. ಯಾವ ವ್ಯಕ್ತಿಯು ಇವರ ಜೊತೆ ಬದುಕಲು ಸಾಧ್ಯವೆ ಇಲ್ಲ ಅನ್ನೊಷ್ಟು ಕೆಟ್ಟವರಲ್ಲ. ಅವರ ಮನಸ್ಥಿತಿ ಅವರು ಬೆಳೆದು ಬಂದ ಪರಿಸರದ ಮೇಲೆ ಅವಲಂಬಿಸಿರುತ್ತದೆ. ನಮ್ಮ ಮನೆ, ನಮ್ಮ ಅಪ್ಪ-ಅವ್ವ ನಮಗೆ ನೀಡಿದ ಸಂಸ್ಕಾರದ ಮೇಲೆ ನಾವು ಕಲಿಯಬೇಕಾದದ್ದು, ಮನುಷ್ಯ ಸಹಜ ಸಣ್ಣತನ, ಕೆಟ್ಟತನಗಳ ಸಮೇತ ವ್ಯಕ್ತಿಗಳನ್ನ ಒಪ್ಪಿಕೊಂಡು ಗೌರವಿಸುವುದು. ಇದನ್ನ ಮೀರಿ ಬಿಟ್ಟು ಬದುಕುವುದೆ ಆದರೆ ಬದುಕಿಗೆ ಸಾವಿರ ದಾರಿ. ನಾನಿರುವೆ ಚಿಂತೆ ಬೇಡ.

ಇನ್ನೊಂದು ಮಾತು, ನಿಯತಿ ನಿನಗೆ ನೀಡಿದ ಅವಕಾಶದ ಬಗ್ಗೆ ಒಂದು ಕೃತಜ್ಞತಾ ಭಾವವಿರಲಿ. ಇದರಿಂದ ಬದುಕು ತುಂಬ ಸಹ್ಯ ಅನಿಸುತ್ತದೆ. ನನ್ನದೆ ಉದಾಹರಣೆ ತಗೊ, ನನ್ನ ಸಾಂಗತ್ಯ, ತಿರುಗಾಟಗಳು ಯಾವುದು ಸ್ವಾಭಾವಿಕ ಅಲ್ಲ. ನನ್ನ ಹುಚ್ಚಾಟಗಳಿಗೆ ಒಂದು ಸರ್ಮಥನೆ ಅಥವಾ ಜವಾಬ್ದಾರಿಗಳಿಂದ ಪಲಾಯನವು ಇರಬಹುದು. ನಿನ್ನ ಆಯ್ಕೆಯ ಮದುವೆ, ಗಂಡ, ಮನೆ, ಮಕ್ಕಳಲ್ಲಿ ಎಲ್ಲವು ಸ್ವಾಭಾವಿಕ. ಅದಕ್ಕಾಗಿ ನೀನು ಬದುಕಿಗೆ ಋಣಿ.

ಮಿಲನವಿಲ್ಲದೆ ಮಕ್ಕಳು ಭೂಮಿಗೆ ಬರಬಾರದು ಎನ್ನುವ ಕಾಲಘಟ್ಟ ದಾಟಿ, ಬಾಡಿಗೆ ತಾಯ್ತನ, ಐವಿಎಫ್ ಕಾಲದಲ್ಲು ನಿನ್ನದು ಸ್ವಾಭಾವಿಕ. ಆ ಕಾರಣಕ್ಕಾಗಿ ನೀನು ಮಕ್ಕಳಿಗೆ ಋಣಿ. ನಿನ್ನ ಮಾನಸಿಕ ಆರೋಗ್ಯದ ಮೇಲೆ ನಿನ್ನ ದೈಹಿಕ ಆರೋಗ್ಯ ನಿಂತಿದೆ. ನಿನ್ನ ಖುಷಿ ಮತ್ತು ನೋವು ನಿನ್ನದೆ ಹೊಣೆಯಾದಾಗ ದೋಷಾರೋಪಣೆ ಪಟ್ಟಿ ಚಿಕ್ಕದಾಗುತ್ತದೆ. ನಿನ್ನ ಮತ್ತು ದೊಡ್ಡಕ್ಕನ ಬದುಕಿನಲ್ಲಿ ಎಂದು ಮುಗಿಯದ ಏರಿಳಿತಗಳನ್ನು ನೋಡುವಾಗಲೆಲ್ಲ ನನಗು ಬೇಸರವೆನಿಸುತ್ತದೆ. ಈ ಉಡಾಳರ ಬದುಕನೆಲ್ಲ ನೆಟ್ಟಗೆ ನಿಲ್ಲಿಸಲು ನಮ್ಮ ಮನೆಯ ಹೆಣ್ಣುಮಕ್ಕಳೆ ಆಗಬೇಕಿತ್ತೆ ಎಂದು ಕುದಿದಿದ್ದೇನೆ. ಇರಲಿ,

ಇದೆಲ್ಲದರಿಂದ ಹೊರಗೆ ಬರಬೇಕು ಎಂದರೆ ಕೂತು ಬೇಸರ ಪಡೋಕೆ ಕೂಡ ವೇಳೆ ಇಲ್ಲದಷ್ಟು ಕೆಲಸ ಮಾಡುವ ಕಲೆಯನ್ನು ಕಲಿಯುವುದು. ದಿನನಿತ್ಯದ ಕೆಲಸಗಳಿಗು ಉದ್ದೇಶ ಪ್ರಾಪ್ತವಾದಾಗ ಅದೊಂದು ಅರ್ಥಪೂರ್ಣ ತಪಶ್ಚರ್ಯವಾಗುತ್ತವೆ. ಇದರಿಂದ ಎರಡು ಅಮೂಲ್ಯ ವಸ್ತುಗಳು ಸಿಗುತ್ತವೆ. ಒಂದು, ನೀನು ನಿನ್ನ ಪೂರ್ತಿ ವ್ಯಕ್ತಿತ್ವವನ್ನು ತೊಡಗಿಸಿ ಮಾಡಬಲ್ಲ ಕೆಲಸ; ಅದು ನಿನ್ನನ್ನು ಬೆಳೆಸುವ ಜತೆಗೆ ನಿನಗೆ ಪ್ರೀತಿ, ವಿಶ್ವಾಸವನ್ನೆಲ್ಲ ತರುತ್ತದೆ; ನಿನ್ನ ಸುತ್ತಣ ಬದುಕಿಗೆ ನೀನು ನೆರವಾಗುವ ಬಗ್ಗೆ ನಿನಗಿರುವ ಅಹಂಕಾರಕ್ಕಿಂತ ಹೆಚ್ಚಾಗಿ ನಿನಗೆ ಬದುಕು ನೀಡಿದ ಕ್ರಿಯಾಶೀಲ ಸಂತೋಷದ ಬಗ್ಗೆ ನಿನ್ನಲ್ಲಿ ಕೃತಜ್ಞತೆ ಹುಟ್ಟುತ್ತದೆ.

ಬದುಕು ಮೂಲಭೂತವಾಗಿ ಸ್ವಾರ್ಥಿಗಳಿಂದ ಕೂಡಿದ್ದು; ಈ ಸ್ವಾರ್ಥದ ಗುಹೆಯಲ್ಲಿ ಖಾಸಗಿ ವಲಯಗಳನ್ನು, ಪ್ರೀತಿ ವಿಶ್ವಾಸದ ಗೂಡುಗಳನ್ನು ಕಟ್ಟಿಕೊಳ್ಳಬೇಕು; ನಮ್ಮ ಸುಖವನ್ನು ನಮ್ಮ ಅಂತರಾಳದಲ್ಲಿ ಕಾಣುವ ಕಲೆಯನ್ನು ಬೆಳೆಸಿಕೊಳ್ಳಬೇಕು. ಆದರೆ ಈ ಖಾಸಗಿ ಗ್ರಹಿಕೆಗೆ ಹೊರಜಗತ್ತು ಅನುಭವಗಳನ್ನು ಕೊಡಬೇಕು. ಆಗಲೆ ಸಂಬಂಧಗಳು ಮುಖ್ಯವಾಗೋದು.

ಸಂಬಂಧ ಅಂದಾಗ ನನಗೆ ಅಪ್ಪ-ಅವ್ವನಿಗಿಂತ ಮುಂಚೆ ನೆನಪಿಗೆ ಬರುವುದೆ ನೀನು ಮತ್ತು ದೊಡ್ಡಕ್ಕ. ನಾನು ಆಡಿದ್ದೆಲ್ಲವನ್ನು ಅಪಾರ್ಥವಿಲ್ಲದೆ ಅರ್ಥ ಮಾಡಿಕೊಳ್ಳುವ ನಿಮ್ಮಿಬ್ಬರಿಂದಾಗಿಯೆ ಎಷ್ಟೆ ಕಿರಿಕಿರಿ ಬೇಸರ, ಅವಮಾನವೆಲ್ಲ ಇದ್ರು ಈ ಜೀವನ ನಿಜಕ್ಕು ಜೀವಿಸಲು ಯೋಗ್ಯ ಮತ್ತು ಸುಂದರ ಅಂತಲೆ ಅನಿಸಿದೆ ನನಗೆ. ನಮಗಂತು ಬೇಕು ಎಂದಂತೆ ಬದುಕಲು ಆಗಲಿಲ್ಲ, ಅವಳಾದರು ಅವಳಿಗೆ ಬೇಕು ಎಂದಂತೆ ಬದುಕಲಿ ಎನ್ನುವ ಹಾರೈಕೆ ಎಷ್ಟು ಜನಕ್ಕೆ ಸಿಗತ್ತೆ ಹೇಳು? ಅದಕ್ಕಾಗಿ ನಾನು ನಿಮ್ಮಿಬ್ಬರಿಗು ಋಣಿ.

ಕೊನೆಯದಾಗಿ ನನ್ನಿಷ್ಟದ ಎರಡು ಮಾತುಗಳು:

ಒಮ್ಮೆ ಬೇಂದ್ರೆ ಅಜ್ಜನನ್ನ ಧಾರವಾಡ ಆಕಾಶವಾಣಿ ಕೇಂದ್ರದ ಹೊರಾಂಗಣದಲ್ಲಿ ಅಡ್ಡಾಡುವಾಗ ಒಬ್ಬರು ಕೇಳಿದರಂತೆ, “ಅಣ್ಣಾ ನಮ್ಮ ಈ ಬದುಕಿನ ಅರ್ಥ ಏನು? ಯಾತರ ಸಲುವಾಗಿ ಬದುಕತೀವಿ.” ಅಜ್ಜ ಅಂದರಂತೆ, “ಅರಳೂದು! ಯಾ ಪರಿಸ್ಥಿತಿ ಒಳಗಾ ಬದುಕು ಇರ್ತದೋ ಅದ ಪರಿಸ್ಥಿತಿ ಒಳಗಾ ಅರಳುದು ಬದುಕೂದರ ಅರ್ಥಾ… ಈ ಸಣ್ಣ ಗಿಡಗಳ ಅಗಿಗಳನ್ನು ನೋಡು. ಇದ್ದ ಪರಿಸ್ಥಿತಿ ಒಳಗಾ ಎಷ್ಟು ಆನಂದದಿಂದ ಬೆಳಿಲಿಕ್ಕೆ ಹತ್ಯಾವ! ಆ ಗಟಾರದ ದಂಡೀ ಅಗೀ ನೋಡು, ಹ್ಯಾಂಗ ಹಳದೀ ಹೂ ಹೊತ್ತು ಆನಂದದಿಂದ ಅರಳೆದ! ನಾ ಗುಲಾಬಿ ಅಲ್ಲಾ ಅಂತ ಅದೆನರ ತಕರಾರು ಮಾಡತದೇನು? ಇದ್ದಲ್ಲೇ ಅದು ಆನಂದದಿಂದ ಬೆಳಕೊತ ಇರತದ. ಅದಕ್ಕ ಖರೇ ಜೀವನದ ಅರ್ಥ ತಿಳಿದದ. ಜೀವನಾ ಅಂದರ ಅರಳೀಕೋತ ಇರುದು ತಿಳೀತ?” ಎಂದಿದ್ದರಂತೆ.

ತಿಳಿದೊ ತಿಳಿಯದಲೊ ನನ್ನಿಂದ ತಪ್ಪಾಗಿದೆ ಕ್ಷಮಿಸು ಎಂದು ಯಾರಾದರು ಕೇಳಿದರೆ, ‘ನಿನ್ನ ಕ್ಷಮಿಸಿದ್ದೇನೆ,’ ಎಂದು ಹೇಳುವುದು ಕ್ಷಮಿಸೊ ಉದಾರ ಭಾವವಲ್ಲ, ಉದ್ಧಟತನವಂತೆ. ಎದುರಿದ್ದವರು ತಪ್ಪು ಮಾಡಿದ್ದಾರೆ ಎಂದು ಗೊತ್ತಾದ ಮೇಲೆಯು ಅದನ್ನ ಅವರಿಗೆ ಹೇಳದೆ, ಮೊದಲಿನ ನಲ್ಮೆಯಿಂದ ನಡೆದುಕೊಂಡರೆ ಕ್ಷಮಿಸುವ ಗುಣ ನಮ್ಮಲಿದೆ ಎಂದು ಅರ್ಥವಂತೆ. ಕ್ಷಮೆ ಎಂಬ ಪದವನ್ನು ನಾವು ಇನ್ನೊಬ್ಬರ ತಪ್ಪನ್ನು ಕ್ಷಮಿಸಿದ್ದೇವೆ ಎನ್ನುವುದಕ್ಕೆ ಬಳಸುವುದಲ್ಲ, ನಮ್ಮ ಕ್ಷಮಾಗುಣ ನಮ್ಮನ್ನು ನೆಮ್ಮದಿಯಾಗಿ ಬದುಕಲು ಸಹಾಯ ಮಾಡುತ್ತದೆ ಎನ್ನುವ ಕಾರಣಕ್ಕೆ ಬಳಸಬೇಕಂತೆ. ಪ್ರಕ್ಷುಬ್ಧಗೊಂಡ ಮನಸು ತಿಳಿಯಾಗುವವರೆಗೆ ಕ್ಷಮೆ ನಿನ್ನ ಸ್ಥಾಯೀಭಾವವಾಗಿರಲಿ. ಶೀಘ್ರ ಭೇಟಿಗೆ ಬರುವೆ. ಕಾಳಜಿಯಿರಲಿ.

ಏಕಾಂತದಿಂದ,
ಗುಂಡುಮರಿ.

‍ಲೇಖಕರು avadhi

April 12, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

4 ಪ್ರತಿಕ್ರಿಯೆಗಳು

  1. Vijayavaman

    ಬಹಳ ದಿನಗಳ ಬಳಿಕ ಸಾರ್ಥಕ ವಾದದನ್ನು ಓದಿದ ಅನುಭವ. ಥ್ಯಾಂಕ್ಸ್.

    ಪ್ರತಿಕ್ರಿಯೆ
  2. Gayatri V

    ಈ ಬದುಕು ಖಾಲಿ ಬಿದ್ದ ಸಂದರ್ಭದಲ್ಲಿ ನಿಮ್ಮ ಬರಹ, ಅದು ತೆರೆಯುವ ನೂರಾರು ಅರ್ಥ ನನ್ನನ್ನು ಮತ್ತೆ ಮತ್ತೆ ಬದುಕನ್ನು ಪ್ರೀತಿಸುವಂತೆ ಮಾಡುತ್ತಿದೆ. ಬರೆಯುತ್ತಿರಿ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: