ಹಗಲು ಬಡಿಸುವ ಹುಸೇನಿ…

‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ.

ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ.

ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ.

ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ ಸುಷ್ಮಿತಾ ‘ಮಣ್ಣಪಳ್ಳದ ಮೂಕಿಚಿತ್ರ’ದಲ್ಲಿ ಈ ಊರಿನ ಯಾರೂ ಕಾಣದ ಚಿತ್ರಗಳನ್ನು ಕಟ್ಟಿ ಕೊಡಲಿದ್ದಾರೆ.

‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಗುತ್ತಿ, ತಿಮ್ಮಿಯನ್ನು ಸಂಧಿಸಲು ಹೊರಟಿರುವ ಗಡಿಬಿಡಿಯಲ್ಲೂ ಮೇಗರವಳ್ಳಿಯ ದಾರಿಯಲ್ಲಿ ಸೆಟ್ಟಿಗಿತ್ತಿ ಅಂತಕ್ಕನ ಅಡುಗೆ ಮನೆ ಪರಿಮಳಕ್ಕೆ ಸೋಲುವುದು ಒಂದು ರಸಭರಿತ ಪ್ರಸಂಗ. ಮನುಷ್ಯನ ಮನಸ್ಸು, ಹೊಟ್ಟೆ ಮತ್ತು ನಾಲಿಗೆ ಮಾತನಾಡಿ ತಣಿಯುದಕ್ಕಿಂತಲೂ, ಪ್ರಾಯಶಃ ಖಾದ್ಯಗಳ ಘಮಕ್ಕೆ ಮಣಿಯುವುದೇ ಜಾಸ್ತಿ. ಇದರ ಜಾಡನ್ನು ಹಿಡಿದೇ ಊರೂರು ದೇಶ ದೇಶಗಳೆನ್ನದೆ ಆಹಾರೋದ್ಯಮ ಎಲ್ಲವನ್ನೂ ಎಲ್ಲರನ್ನೂ ಆವರಿಸಿಕೊಂಡಿರುವುದು.

ಮಣಿಪಾಲವೂ ಈ ಪಟ್ಟಿಯಲ್ಲಿ ಹಿಂದೆ ಬಿದ್ದಿಲ್ಲ. ಇಲ್ಲಿ ಅಡಿ ಅಡಿಗೂ ಹೋಟೆಲ್ ಅಡಿಗೆ ಕೋಣೆಗಳ ಘಮ ತುಂಬಿಕೊಂಡಿದೆ. ವಿದ್ಯಾರ್ಥಿಗಳು, ಊರಿನವರು, ಉದ್ದಿಮೆದಾರರು, ದುಡಿಯುವವರು ಎಲ್ಲರೂ ಅವರವರ ಅನುಕೂಲತೆಗೆ ತಕ್ಕಂತ ಅಡುಗೆ ಮನೆಯನ್ನು ಒಪ್ಪಿಕೊಂಡು ಹಸಿವು ಮತ್ತು ರಸಾಲಾಲಸೆ ನೀಗಿಸಿಕೊಳ್ಳುತ್ತಾರೆ.

ಇಲ್ಲಿನ ಹೋಟೆಲ್ ಗಳ ಲೋಕದಲ್ಲಿ ಸ್ವಾದ, ಸೇವೆ, ಪರಿಸರ ಮತ್ತು ಗ್ರಾಹಕರನ್ನು ಉಳಿಸಿಕೊಳ್ಳುವ ಪೈಪೋಟಿ ಇದೆ. ಈ ಪೈಪೋಟಿ, ಅವಶ್ಯಕತೆ, ಬಯಕೆಗಳ ಮಧ್ಯೆ ಅವುಗಳನ್ನು ಬೆಸೆಯುವ ಹುಸೇನಣ್ಣನ ಕೈಗಳು ಗಮನಕ್ಕೆ ಬಾರದೆ ಎಲ್ಲೋ ಕಳೆದೇ ಹೋಗಿ ಬಿಡುತ್ತವೆ.

ಹುಸೇನಣ್ಣನ ಊರು ಭಟ್ಕಳದ ಹತ್ತಿರ ಎಲ್ಲೋ ಅಂತ ಕೇಳಿದ ನೆನಪು. ಮಣಿಪಾಲಕ್ಕೆ ಬಂದು ಎಷ್ಟು ವರ್ಷಗಳಾಗಿವೆ ಅನ್ನೋದು ಕೂಡ ಅವನಿಗೆ ನೆನಪಿರುವ ಹಾಗಿಲ್ಲ. ಏನೇನನ್ನೋ ತಾಳೆ ಹಾಕಿ ಹತ್ತು – ಹದಿನೈದು ವರ್ಷವಾದರೂ ದಾಟಿರಬೇಕು ಅನ್ನೋದಷ್ಟೇ ವಾದ.

ಭಟ್ಕಳದ ಸಾಂಪ್ರದಾಯಿಕ ಉರ್ದು ನಾಲಗೆಯಲ್ಲಿ ಮೆನುಕಾರ್ಡಿನ ಸರಾಗರಾಗ ಹತ್ತಿದ್ದರ ಹಿಂದೆಯೂ ವರ್ಷಗಳ ಕಥೆ ಇದೆ. ದುಡಿಮೆಯ ಸಲುವಾಗಿ ಊರೂರು ತಿರುಗಿ ಮಣಿಪಾಲದ ಮೆಟ್ಟಿಲು ಹತ್ತಿ ಇಲ್ಲೇ ಕಳೆದು ಹೋದವ ಈ ಶಹರದಲ್ಲಿ ಅತೀ ಪರಿಚಯದ ಮುಖವಾದರೂ ಅಪರಿಚಿತ.

ನಮ್ಮ ಕಾಲೇಜಿಗೆ ತಾಗಿಯೇ ಇರುವ ಹೋಟೆಲ್ ನ ಮಾಣಿ ಹುಸೇನ್ ಈಗೀಗ ಹುಸೇನಣ್ಣನ ಸ್ಥಾನಕ್ಕೆ ಬಡ್ತಿ ಪಡೆದಿರುವುದು. ನಾ ಮಣಿಪಾಲಕ್ಕೆ ಬಂದ ದಿನಗಳಿಂದಲೂ ದಿನ ಬೆಳಗ್ಗೆ, ಮಧ್ಯಾಹ್ನ, ಸಂಜೆಯ ಯಾವ ಹೊತ್ತು ಅಲ್ಲಿ ಹೊಕ್ಕಾಗಲೂ ಇವನದ್ದೇ ನಗು ಮತ್ತು ಓಡಾಟ ಇದಿರಾಗುವುದು.

ಕುಳ್ಳ ನಿಲುವು, ಚಟುವಟಿಕೆಯ ಕಾಲು, ಸದಾ ನಗುವಾವಸ್ಥೆಯಲ್ಲಿರುವ ತುಟಿ, ಆದರೂ ಸ್ತಬ್ಧ ಕಣ್ಣುಗಳು ಹುಸೇನಣ್ಣನ ತಟ್ಟನೆ ವರ್ಣಿಸಬಹುದಾದ ಮಾತುಗಳಷ್ಟೇ. ಇದನ್ನ ಹೊರತುಪಡಿಸಿ ಅವನ ಆಗು ಹೋಗುಗಳು ಈ ಊರಿಗೆ ಅನಾವಶ್ಯಕ.

ಕೆಲವೊಮ್ಮೆ ಒಳ ಕಾವಲಿಯಲ್ಲಿನ ದೋಸೆಯ ಬೇಯುವ ಸದ್ದು ಮತ್ತು ಅವನ ಓಡಾಟದ ಬಿರುಸು ಒಂದೇ ಲಯವೇನೋ ಅನ್ನಿಸಿಬಿಡುತ್ತದೆ. ಹೊರಗೆ ನಾವುಗಳು ಕೇಳಿದ ತಿಂಡಿಯ ಹೆಸರನ್ನು ಹತ್ತುಪಟ್ಟು ಉತ್ಸಾಹ ತುಂಬಿಸಿ ಬಾಣಸಿಗನವರೆಗೆ ಮುಟ್ಟಿಸಿ, ತಟ್ಟೆಗೆ ಬಿದ್ದ ತಿಂಡಿ ಆಚೀಚೆಯಾಗಂತೆ ಮುಂದಿಟ್ಟು, ನಕ್ಕು, ಅಲ್ಲಿನ ಮಹೋಲನ್ನು ಕಾಪಾಡುವಷ್ಟು ಮಾತ್ರ ನಿಷ್ಣಾತ.

ಬೆಳಗ್ಗಿನ ಎಂಟು ಗಂಟೆಯೋ ಇಲ್ಲ ಸಂಜೆ ಆರು ದಾಟಿಯೂ ಅದೇ ಉತ್ಸಾಹದಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಕಾಲಿಗೆ ಚಕ್ರ ಕಟ್ಟಿದ ಹಾಗೆ ಓಡಾಡುವ ಅವನ ದಿನಚರಿ ಮಣಿಪಾಲದ ಮೇಲು ನೋಟದಲ್ಲಿ ದಾಖಲಾಗುವುದಿಲ್ಲ…

ಹುಸೇನಣ್ಣನ ಹೋಟೆಲ್ ನದ್ದು ಹಗಲು ಪಾಳಿ ಮಾತ್ರವಾದರೂ, ಮಣಿಪಾಲಕ್ಕೆ ಇತ್ತೀಚಿನ ದಶಕಗಳು ಎಲ್ಲ ಶಹರಗಳಂತೆ ಜಾಗರಣೆಯ ರಾತ್ರಿಗಳನ್ನ ತಂದಿವೆ. ಇಲ್ಲಿನ ಬೆಳಗು ಎಷ್ಟು ಚಟುವಟಿಕೆಯಿಂದ ಕೂಡಿರುತ್ತದೋ ಅಷ್ಟೇ ಹುಮ್ಮಸ್ಸು ರಾತ್ರಿಯ ಬದುಕಿಗೂ ಇದೆ.

ನಮ್ಮ ಶಾಂತಕ್ಕ, ಬಸಪ್ಪ, ಹುಸೇನಣ್ಣನಂತವರು ಎದ್ದು ದಿನ ಆರಂಭಿಸುವ ನಸುಕಿನಲ್ಲಿ ರಾತ್ರಿ ಪಾಳಿ ಮುಗಿಸಿ ನಿದ್ರೆಗೆ ಜಾರುವ ಅರ್ಧದಷ್ಟು ಜನಸಂಖ್ಯೆ ಇಲ್ಲಿಯದು. ಹುಸೇನಣ್ಣ  ಈ ಗುಂಪಿನಲ್ಲಿ ಒಂದು ಹೆಸರು ಮಾತ್ರ. ಅವನಂತೆಯೇ ನೂರಾರು ಹುಸೇನರು ತಮ್ಮ ದೇಶ, ರಾಜ್ಯ, ಊರುಗಳನ್ನ ಬಿಟ್ಟು ಇಲ್ಲಿನ ಶೋಭೆಗೆ ಮತ್ತು ಕ್ಷೋಭೆಗೆ ಸಿಕ್ಕು ಊರಿಡೀ ಬಡಿಸುವ ಕೈಗಳಾಗಿದ್ದಾರೆ.

ಅವರು ರಾತ್ರಿ ಮತ್ತು ಹಗಲುಗಳ ಪಾಳಿಗೆ ಒಗ್ಗಿಕೊಂಡು ಅಡುಗೆ ಕೋಣೆಯಿಂದ ಗ್ರಾಹಕರ ಟೇಬಲ್ ಗಳವರೆಗೂ ಸೇವಾ ನಿರತರಷ್ಟೇ. ತಾವು ಆದರಿಸುವವರ ಬಯಕೆಗೆ ತಕ್ಕಂತೆ ನಡೆ, ನುಡಿ, ಭಾಷೆಗಳನ್ನು ರೂಢಿಸಿಕೊಂಡರಷ್ಟೇ ಬದುಕು ಎನ್ನುವುದು ಅವರಿಗೆ ಯಾರೂ ಹೇಳಿಕೊಡದ ಕಲಿಕೆ. ಮಣಿಪಾಲದ ಮೇಲ್ ಸಂಸ್ಕೃತಿಗೆ ತಕ್ಕಂತೆ ಹೊಂದಿಸಿಕೊಂಡು ಅವರೆಲ್ಲರೂ ಮಣಿಪಾಲಿಗರೇ ಆಗಿ ಹೋಗಿದ್ದಾರೆ.

ಎಲ್ಲರಂತೆಯೇ ಮಣಿಪಾಲಿಗರಾದರೆ ಅಥವಾ ದೊಡ್ಡ ಹೋಟೆಲ್ ಗಳತ್ತ ಹೋದರೆ ಸಂಬಳದ ಬದಿಯಲ್ಲೇ ಉಂಡವರಿಡುವ ಟಿಪ್ಸ್ ಸಮಾಧಾನಿಸುತ್ತದೇನೋ. ತನ್ನ ಸಣ್ಣ ಹೋಟೆಲ್ ನಲ್ಲಿ ಆ ದೆಸೆ ಹುಸೇನನಿಗಿಲ್ಲದಿದ್ದರೂ ಅದಾವುದೂ ಅವನ ಮುಟ್ಟುವುದಿಲ್ಲ ಅಥವಾ ಮುಟ್ಟಿಸಿಕೊಳ್ಳುವುದಿಲ್ಲ. ತನ್ನ ದಿನದ ಕೆಲಸ ಮತ್ತು ಎಂಥ ಗಳಿಗೆಯಲ್ಲೂ ಕೆಳಗಿಳಿಸಬಾರದ ನಗುವಂತಿರುವ ಮುಖ ಅಷ್ಟೇ ಅವನ ಚಿಂತೆ.

ಹೋಟೆಲ್ ಖಾಲಿ ಇರುವ ಯಾವುದೊ ಸಂಧಿಯಲ್ಲಿ ಊಟ, ತಿಂಡಿ ಮುಗಿಸಿ ಮತ್ತೆ ಕಾರ್ಯ ಸನ್ನದ್ಧನಂತೆ ಕಾಣುವ ಇವನು ತಿಂದದ್ದು ನಳಪಾಕವೇ ಆದರೂ ರುಚಿ ವಿಶ್ಲೇಷಣೆಯ ಬಗ್ಗೆ ಅಜ್ಞಾನಿಯೇ. ತಾ ಬಡಿಸುವ ಟೇಬಲ್ ಮೇಲಿನ ರಾಜಕೀಯ, ಸ್ನೇಹ, ಜಗಳ, ಪ್ರೇಮ ಎಲ್ಲವನ್ನೂ ಕಂಡೂ ಕಾಣದಂತೆ ತನ್ನ ಕರ್ತವ್ಯವೆಷ್ಟೋ ಅಷ್ಟೇ ತನ್ನದು ಎಂಬಂತೆ ದಿನದೂಡುವ ಇವನನ್ನು ಇಂತಹ ರಾಶಿ ಕಥೆಗಳು ಹಾದು ಹೋದರೂ ಅವಾವುದಕ್ಕೂ ತಲೆ ಕೊಟ್ಟಿರುವುದರ ಬಗ್ಗೆ ನನಗೆ ಅನುಮಾನವಿದೆ.

ದಿನವಿಡೀ ನಿಲ್ಲದ, ಇಡೀ ಮಣಿಪಾಲವನ್ನು ಕಾಲ ಬಲದಲ್ಲೇ ಸುತ್ತಬಲ್ಲ ಹುಸೇನಣ್ಣ, ಒಂದಿಷ್ಟು ದಿನ ಪಳ್ಳದ ಸುತ್ತ ಜೋರು ಉಸಿರು ಬಿಡುತ್ತ ವೇಗದಲ್ಲಿ ಓಡುತ್ತಿದ್ದಾಗ ನಿಲ್ಲಿಸಿ ಮಾತಿಗೆಳೆದೆ. ಆಗ ಗಟ್ಟಿಮುಟ್ಟಿನ ಅವನಿಗೂ ತಾಗಿದ ಅನಾರೋಗ್ಯದ ಪಟ್ಟಿ ಹೊರ ಬಿದ್ದದ್ದು. 

ಎಲ್ಲರಂತೆ ಇವನಿಗೂ ಮನೆ, ಮಡದಿ, ಮಕ್ಕಳು ಎಂಬ ಜವಾಬ್ದಾರಿಗಳಿವೆ. ಆದರೆ ಬೆಳಗ್ಗೆಯಿಂದ ಸಂಜೆಯವರೆಗೂ ದುಡಿದು ದಣಿವಾಗಲೇ ಯೋಚನೆಗಳಿಲ್ಲದೆ ನಿದ್ರೆ ಹತ್ತುವುದೆಂಬ ವಿಚಿತ್ರವಾದ ಇವನದ್ದು. ಅವನನ್ನ ಏಕಮುಖವಾಗಿಯೇ ಸ್ವೀಕರಿಸ ಬಯಸುವ ನನ್ನಂತವರಿಗೆ ಹುಸೇನ್ ವೈರುಧ್ಯಗಳ ಸರಮಾಲೆ.

ಒಂದೇ ದಿನಚರಿ ಎಂದು ಗೋಗರೆಯುವ ಬಲ್ಲವರಂತೆ ಗೋಗರೆಯುವ ಆಯ್ಕೆ ಕೂಡ ಅವನಿಗಿಲ್ಲ. ಅತೀ ಅಪರೂಪಕ್ಕೆ ಹೋಟೆಲ್ ನಿಂದ ಹೊರ ಕಾಣಿಸಿಕೊಳ್ಳುವವ ಒಂದು ಸಂಜೆ ಮಣಿಪಾಲದ ನಿರ್ಮಿತಿ ಕೇಂದ್ರದಲ್ಲಿ ತುಂಬಿದ ಜನರಿಂದ ದೂರದಲ್ಲೆಲ್ಲೋ ಮರದ ಕೆಳಗೆ ಸಂಗೀತವನ್ನು ಆಲಿಸುತ್ತಿದ್ದ.

ಸಭೆಯಲ್ಲಿನ ಪಂಡಿತರ ವಿಮರ್ಶೆಗಳಿಂದ ಬಹುದೂರ ಹುಸೇನಿ ಅದನ್ನು ಅನುಭವಿಸುತ್ತಿದ್ದ. ಬೆಳಗ್ಗಿನ ಆಝನ್ ಕೇಳುವ ಹೊತ್ತಲ್ಲೂ ತಾನು ಹಾಗೆಯೇ ಕಳೆದು ಹೋಗುವುದು ಎನ್ನುವ ಅವನಿಗೆ ಆ ಗಳಿಗೆಗಳು ಮಾತ್ರ ತನ್ನವು ಅನ್ನಿಸುತ್ತದೇನೋ.

ಹಾಡು ಕಟ್ಟುವುದು ಕಾಯಕವಾಗದೆ
ಬದುಕುವುದಷ್ಟೇ ಬೇಡಿಕೆಯಾದರೆ ಎಂತು ಸರ್ವ
ಹಾಡು ಪಾಡೆಲ್ಲವೂ ನಿತ್ಯ ನಿರಂತರ
ಮಹಲಿನಲ್ಲಿ ಕಳೆದು ಹೋಗದಿರುವಂತಿಹುದೆ ಬಲ

ಅದೆಷ್ಟೋ ಬಾರಿ ಕಾಣಲಾಗದ ‘ಹುಸೇನಣ್ಣ’ನ ಇನ್ನೊಂದು ಬದುಕಿನ ಆಯಾಮದ ಬಗ್ಗೆ ಊರು ಆಲೋಚಿಸಿರಲಿಕ್ಕಿಲ್ಲ. ಅದರಲ್ಲೂ ತಟ್ಟೆಯ ಪಕ್ಕದಲ್ಲೇ ಸರಿದು ಹೋಗುತ್ತಿದ್ದ ಅವನ ಕೈಗಳನ್ನ ಬಿಟ್ಟು ಅವನ ಕಣ್ಣುಗಳನ್ನ ಕಾಣದವರು ಅದೆಷ್ಟೋ.

ಅವನು ತಮ್ಮ ದಿನಚರಿಯ ಭಾಗವಾಗಿಯೇ ನಮ್ಮವನಾಗದಿದ್ದವನು ಅದಾಗಿಯೂ ಹುಸೇನಿ ಒಮ್ಮೆಯಾದರೂ ನಮ್ಮಂತೆ ಹೋಟೆಲ್ ಗಳ ಗ್ರಾಹಕನಾಗಿ ಕಂಡರೆ? ನಾವು ಅವನೊಡಗೂಡಿಯೇ ತಿಂದರೆ? ನಮ್ಮೊಳಗೇ ಅಚ್ಚಾದ ಅವನ ಚಿತ್ರಕ್ಕೋ ಬೇರೆಯದೇ ಆಯಾಮವಿದ್ದರೆ?

September 8, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: