ಅಂತೂ ಇಂತೂ ಆಯ್ತು ಟೇಕಾಫ್..!

ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್‌ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಗಂಡನನ್ನು ಕ್ಯೂನಲ್ಲಿ ನಿಲ್ಲಿಸಿ ತೂಕಡಿಸುತ್ತ ಕುಳಿತ ಹೆಂಗಸೊಬ್ಬರು ನಿದ್ದೆಯಿಂದ ಎಚ್ಚರವಾಗಿ ಧಿಗ್ಗನೆದ್ದು ‘ಅಯ್ಯೋ ಅವರು ಇನ್ನೂ ಊಟನೇ ಕೊಡ್ಲಿಲ್ಲ’ ಅಂದಾಗ ನಾವೆಲ್ಲ ‘ಇರಿ ಇನ್ನೊಂದು ಘಂಟೆ ಮನೆಗೆ ಹೋಗಿ ತಿಂಡಿ ತಿನ್ನುವಿರಂತೆ’ ಅಂತ ನಗಾಡಿಕೊಂಡೆವು.

ಕ್ಯೂನಲ್ಲಿ ಆರು ತಿಂಗಳ ಒಂದು ಮಗು ಮತ್ತು ಎರಡು ವರ್ಷದ ಮತ್ತೊಂದು ಮಗು ಹೊತ್ತು ನಿಂತ ಅಸಹಾಯಕ ಅಪ್ಪ, ವೀಲ್ ಛೇರ್ ಹಿಡಿದ ವಯಸ್ಕರು… ಇವರೆಲ್ಲರ ನಡುವೆಯೇ ಬೆಂಗಳೂರಿನಲ್ಲಿ ಬೆಳಕು ಹರಿಯಿತು!

ಹಾಗೇ ಸರದಿ ಪ್ರಕಾರ ನಿಲ್ಲುತ್ತ, ಕೂರುತ್ತ ಕೊನೆಗೂ ಅವರ ಕೌಂಟರ್ ತಲುಪಿದೆವು. ಇನ್ನೇನು ಎಲ್ಲ ಸಲೀಸು… ಯಾವ ವಿಮಾನ ಬೇಕು, ಇಲ್ಲಿಂದ ಹೋಗ್ತೀರಾ, ಅಲ್ಲಿಂದ ಹೋಗ್ತೀರಾ ಎಂದು ಮಾತಾಡಿಸಿ ನಮಗೊಂದು ದಾರಿ ತೋರಿಸುತ್ತಾರೆ ಅನ್ನುವ ಭ್ರಮೆಯಲ್ಲಿ ನಿಂತಿದ್ದ ನಮಗೆ ಅಲ್ಲಿಗೆ ಹೋದಾಗಲೇ ಗೊತ್ತಾಗಿದ್ದು- ಅದು ಮನೆಗೆ ಹೋಗಲು ಟ್ಯಾಕ್ಸಿ ಬೇಕಾ ಇಲ್ಲವಾದರೆ ಹೋಟೆಲ್ ರೂಮ್ ಬೇಕಾ ಅನ್ನುವುದೆರಡೇ ಆಯ್ಕೆ ಕೊಟ್ಟು ಉತ್ತರ ಪಡೆವ ಕ್ಯೂ ಎಂದು!

ಮೈ ಉರಿದು ಹೋಯಿತು ಆ ಪುಟಗೋಸಿ ಕೆಲಸಕ್ಕೆ ಎರಡು ಘಂಟೆ ಕ್ಯೂನಲ್ಲಿ ನಿಂತುಕೊಂಡಿದ್ದೆವಲ್ಲಾ ಎಂದು. ಆದರೂ ಏನೋ ಆಶಾವಾದದಲ್ಲಿ ಹದಿನೈದು ದಿನಗಳ ಉಸಿರುಗಟ್ಟಿಸುವ ಕಾರ್ಯಕ್ರಮವೊಂದು, ಟೇಕ್ ಆಫ್ ನಲ್ಲಿ ಸೋತರೆ, ಮುಂದಿನ ಎಲ್ಲವೂ ನಾಶವಾಗಿ, ಹಾಕಿದ ಹಣವೆಲ್ಲ ಹೊಳೆಯಲ್ಲಿ ತೊಳೆದ ಹುಣಿಸೆಹಣ್ಣು ಅಂತ ಹೇಳಿಯೇ ಹೇಳಿದೆವು.

ಅವರು ಇಂಥ ಕಥೆ ಅದೆಷ್ಟೋ ಕೇಳಿದ್ದವರು ನಾಳೆಗೆ ಅಬು ದಾಬಿ, ಅಲ್ಲಿಂದ ಮ್ಯೂನಿಕ್‌ಗೆ, ಅಲ್ಲಿಂದ ಮೊದಲ ಜಾಗ ವ್ರೋಟಾಜ್ವಗೆ ಎಗರಿಸಿ, ಎರಡನೆಯ ಜಾಗವಾದ ಕ್ರಾಕೋವ್‌ಗಾದರೂ ತಲುಪಿಸುತ್ತೇವೆ ಅನ್ನುವ ಭರವಸೆಯೊಂದನ್ನು ಕೊಟ್ಟು ‘ಈಗ ಟ್ಯಾಕ್ಸಿ ಬೇಕಾ, ಹೊಟೆಲ್‌ನಲ್ಲಿ ಇರುತ್ತೀರಾ’ ಎಂದರು. ಮನೆ ಇರುವಾಗ ಹೋಟೆಲ್‌ನಲ್ಲಿರಲು ನಮಗೇನು ಗ್ರಹಚಾರ ಕೆಟ್ಟಿತ್ತು?

ಕೆಟ್ಟ ದ್ರಾಬೆ ಮೂಡಿನಲ್ಲಿ ಮತ್ತೆರಡು ಟ್ಯಾಕ್ಸಿ ಮಾಡಿ ಮನೆಯ ಕಡೆ ಹೊರಟೆವು. ಹಬ್ಬ ಹರಿದಿನವನ್ನು ಆಚರಿಸದ ನನಗೆ ನಾವು ಹೊರಟ ಮರುದಿನ ಗೌರಿ ಹಬ್ಬ ಎಂದಾಗಲೀ, ಅದರ ಮರುದಿನ ಗಣೇಶ ಹಬ್ಬ ಎಂದಾಗಲೀ ಗೊತ್ತೇ ಇರಲಿಲ್ಲ.

ನಾವು ಪ್ರೋಗ್ರಾಂ ಹಾಕಿದ ನಂತರ ಅಮ್ಮ ‘ಅಯ್ಯೋ ಅವತ್ತೇ ಗೌರಿ ಹಬ್ಬ. ಹಬ್ಬದ ದಿನವೇ ಹೊರಡಬೇಕಿತ್ತಾ’ ಎಂದು ಪೇಚಾಡಿದ್ದಳು. ಈಗ ಅನಿವಾರ್ಯವಾಗಿ ಮನೆಗೆ ಹೋಗಲೇ ಬೇಕಾದಾಗ ‘ತಗೋ ನಿನ್ನ ಗಂಡನನ್ನ, ಸದ್ಯಕ್ಕೇನು ನಾವು ಹೊರಡಲ್ಲ. ಬರೀ ಗೌರಿ ಏನು, ಗಣೇಶನ ಹಬ್ಬಾನೂ ಆಚರಿಸಿಕೋ’ ಅಂತ ಅಪ್ಪನನ್ನು ಮನೆ ಸೇರಿಸಿ ಬಂದಾಗ ಎಂಟು ಘಂಟೆ.

ತಿಂಡಿ ತಂದಿಟ್ಟಿದ್ದ ನಮ್ಮ ಆಫೀಸ್‌ನ ಹುಡುಗ. ತಿಂದು ನಂತರ ಹಾಸಿಗೆ ಮೇಲೆ ಬಿದ್ದರೆ ಇನ್ನೇನು ನಿದ್ರೆ ಆವರಿಸಿಯೇ ಬಿಡುತ್ತದೆ ಅನ್ನುವ ಭ್ರಮೆಯಲ್ಲಿ ಮಲಗಿದರೆ, 24 ಘಂಟೆಗಳಿಂದ ನಿದ್ರೆಯಿಲ್ಲದೇ ಎದ್ದೇ ಇರುವ ದೇಹಕ್ಕೆ ನಿದ್ರೆ ಸುಳಿಯುತ್ತಲೇ ಇಲ್ಲ ದರಿದ್ರ. ಗಂಡ ಮಗ ಎರಡೇ ನಿಮಿಷಕ್ಕೆ ನಿದ್ರೆ ಹೊಡೆದರು.

ನಾನು ಹೊರಳಾಡುತ್ತ “ಥತ್! ಈ ಈ ಹಿಟ್ಲರನ ಕಾಲ್ಗುಣವೇ ಸರಿಯಿಲ್ಲ… ಅವನು ಹೋಗಿ 73 ವರ್ಷಗಳೇ ಕಳೆದುಹೋಗಿದೆ… ಈಗಲೂ ಅವನ ನೆರಳಿರುವೆಡೆಯೆಲ್ಲ ಬರೀ ದುರಾದೃಷ್ಟ” ಎಂದು ಅಸಂಬದ್ಧವಾಗಿ ಬಯ್ದುಕೊಳ್ಳಲು ಶುರು ಮಾಡಿದೆ!

ಏನು ಮಾಡಿದರೂ ನಿದ್ರೆ ಸುಳಿಯುತ್ತಿಲ್ಲ… ಒಂದು ರೀತಿಯ ಹಿಂಸೆ ಶುರುವಾಯಿತು. ಅಷ್ಟು ಕಷ್ಟ ಪಟ್ಟು ಹಾಕಿದ ನಮ್ಮ ಪ್ರೋಗ್ರಾಂ ನಾಶವಾಗಿ ಹೋಗುತ್ತದಾ? ಮತ್ತೆ ಎಲ್ಲಿಗಾದರೂ ವಿಮಾನ ಸಿಗುತ್ತದಾ ಇಲ್ಲವಾ? ಹೀಗೆಲ್ಲ ಯೋಚನೆ ಬರುವುದರಲ್ಲಿ ಒಟ್ಟಿನಲ್ಲಿ ಬೆಂಗಳೂರನ್ನು ಬಿಟ್ಟು ಹೇಗಾದರೂ ಹೊರಬೀಳಬೇಕು ಅನ್ನಿಸಿಬಿಟ್ಟಿತು.

ಚೆನ್ನೈ ಅಂದರೆ ಓ ಯೆಸ್, ಮುಂಬಯಿ ಅಂದರೂ ಓ ಯೆಸ್, ದೆಹಲಿ ಎಂದರೂ ಓ ಯೆಸ್ ಯೆಸ್ ಅನ್ನುವ ಥರದ ಸ್ಥಿತಿ. ಹೀಗೆ ಒದ್ದಾಡಿಕೊಳ್ಳುತ್ತ ನಿದ್ರೆಗೆ ಯತ್ನಿಸುತ್ತಿರಬೇಕಾದರೆ ಧಡಕ್ಕನೆ ಬಾಗಿಲು ತೆರೆದ ಗಂಡ ‘ಟೂರ್ ಆಪರೇಟರ್ ಫೋನ್ ಮಾಡಿದ್ರು, ದೆಹಲಿಗೆ ಸಂಜೆ 5.45ಕ್ಕೆ ಹೊರಡಲಾಗುತ್ತದಾ? ಅಲ್ಲಿಂದ ಮ್ಯೂನಿಕ್‌ಗೆ ಮತ್ತು ಅಲ್ಲಿಂದ ವ್ರೋಟಾಜ್ವಗೆ ಫ್ಲೈಟ್ ಮಾಡಿಕೊಡ್ತಾರಂತೆ’ ಎಂದ!

ನಾನಿದ್ದ ಸ್ಥಿತಿಯಲ್ಲಿ ಬಹುಶಃ ನಿರಾಕರಿಸುತ್ತೇನೆ ಅಂದುಕೊಂಡಿದ್ದನೋ ಏನೋ ಗೊತ್ತಿಲ್ಲ. ಆದರೆ ಹತಾಶಳಾಗಿದ್ದ ನಾನು ಕಾಲ್ನಡಿಗೆಯಲ್ಲಿ ಕರೆದರೂ ಹೊರಡುವ ದುಸ್ಥಿತಿ ತಲುಪಿದ್ದೆ ಅಂತ ಪಾಪ ಅವನಿಗೇನು ಗೊತ್ತು? ‘ನಡಿ ಮತ್ತೆ ಅದನ್ನ ಕೇಳೋದೇನು’ ಎಂದೆ. ‘ನಿಮ್ಮಪ್ಪನ್ನ ಕೇಳು’ ಎಂದ.

83 ವರ್ಷದ ಅಪ್ಪ ಇಡೀ ರಾತ್ರಿ ನಿದ್ರೆ ಇಲ್ಲದೆ ಸುಸ್ತಾಗಿ ಬೇಡ ಅನ್ನಬಹುದು ಅಂದುಕೊಂಡು ಕಾಲ್ ಮಾಡಿದರೆ ನಮ್ಮ ತಿರುಗಾಲುತಿಪ್ಪ ಅಪ್ಪ ‘ಈಗಲೇ ಬೇಕಿದ್ದರೂ ಸರಿ, ಹೊರಡುತ್ತೇನೆ’ ಅಂದರು! ‘ಮಗನನ್ನು ಕೇಳು’ ಎಂದ. ಅವನೂ ‘ಓ ಯೆಸ್’! ಮನೆಯಲ್ಲಿ ಮತ್ತೆ ಜೀವ ಸಂಚಾರ!

ಅತೀವ ಉತ್ಸಾಹದಲ್ಲಿ ಅದು ದೆಹಲಿಗೆ ಹೋಗುವ ಲೋಕಲ್ ವಿಮಾನ ಅನ್ನುವುದನ್ನೂ, ಅದು ಹೊರಡುವ ಒಂದು ಘಂಟೆ ಮೊದಲು ಮಾತ್ರ ತಲುಪಿದರೆ ಸಾಕು ಎನ್ನುವುದನ್ನೂ ಮರೆತು ಎಂದಿನ ಅಂತರರಾಷ್ಟ್ರೀಯ ಪ್ರಯಾಣದಂತೆ 1.45 ಕ್ಕೆ ಮನೆ ಬಿಡೋಣ ಎಂದು ತೀರ್ಮಾನಿಸಿದೆವು.

ಬಿದ್ದುಕೊಂಡಿದ್ದವರೆಲ್ಲ ಎದ್ದು ಸ್ನಾನ ಮುಗಿಸಿದೆವು. ಸರಸರನೆ ಸಿದ್ದವಾಗುವುದರಲ್ಲಿ ಟ್ಯಾಕ್ಸಿ ಚಾಲಕನ ಕರೆ. ಹಿಂದಿನ ದಿನ ಹಾಕಿಕೊಂಡಿದ್ದ ದಪ್ಪನೆಯ ಜ್ಯಾಕೆಟ್ ಎತ್ತಿಕೊಳ್ಳಲು ಹೋದವಳು ‘ಅಯ್ಯೋ ಅಲ್ಲಿ 10 ರಿಂದ 24 ಡಿಗ್ರಿ ಅಂತಿದೆ. ಜ್ಯಾಕೆಟ್ ಯಾಕೆ ಬೇಕು ಬಿಡು ಎಂದು ಜೀನ್ಸ್ ಜ್ಯಾಕೆಟ್ ಒಂದನ್ನು ಹಾಕಿ ಹೊರಬಂದರೆ ಹಿಂದಿನ ದಿನ ಬಂದಿದ್ದ ಅದೇ ಮಂಡ್ಯದ ಗಂಡು!

ನಮ್ಮನ್ನು ನೋಡಿದವನೇ ಅವನು ‘ಸಾಆಆಆಆರ್! ಇದೇನ್ ಕತೆ ಸಾರ್ ನಿಮ್ದೂಊಊಊಊ! ಇದೊಳ್ಳೆ ವಿಚಿತ್ರ ಆಯ್ತಲ್ಲ! ರಾತ್ರಿ ನಿಮ್ಮನ್ನ ಡ್ರಾಪ್ ಮಾಡಿದ ಮೇಲೆ ಒಂದೆರಡು ಘಂಟೆ ಕಾದೆ ಬೇರೆ ಗಿರಾಕಿ ಯಾರಾದ್ರೂ ಸಿಗ್ಬೋದು ಅಂತ. ಯಾರೂ ಸಿಗ್ಲಿಲ್ಲ. ಸರಿ ಸಾಕಿನ್ನು ಕಾದಿದ್ದು ಅಂತ ಮನೆಗೋಗಿ ಬಿದ್ಕೊಂಡೆ. ಒಳ್ಳೆ ನಿದ್ದೆ. ಕಣ್ಣು ಬಿಡೋಷ್ಟ್ರಲ್ಲಿ ನಿಮ್ಮ ಟ್ರಿಪ್ ಇದೆ ಅಂತ ಮೆಸೇಜು!’

‘ನಾನು ಈ ನಂಬರ್ ಎಲ್ಲೋ ನೋಡ್ದಂಗಿದೆಯಲ್ಲಾ ಅಂತ ಯೋಚಿಸ್ತಾ ಕೂತೆ. ನನ್ನ ಜೊತೆಗೆ ಇನ್ನೊಬ್ಬ ನೆಂಟರ ಹುಡುಗ ಇದ್ದ ಅವನಿಗೂ ಹೇಳ್ದೆ. ಆಮೇಲೆ ಕಾಲ್ ಲಾಗ್ ತಿರುವಿ ನೋಡ್ತೀನಿ… ಅದು ನೀವು! ಸಾರ್ ನಿಜ್ವಾಗಲೂ ಈ ಪ್ರಪಂಚದಾಗೆ ಏನು ನಡೀತಿದೆ ಅಂತಾನೆ ಕನ್‌ಪ್ಯೂಸ್ ಆಗೋಯ್ತು!’

‘ಅಯ್ಯೋ ನೆನ್ನೆ ರಾತ್ರಿ ತಾನೇ ಈ ಮನೆಯವರನ್ನ ಏರ್‌ಪೋರ್ಟ್‌ಗೆ ನಾನೇ ಬಿಟ್ಟು ಬಂದ್ನಲ್ಲ, ಮತ್ತೆ ಹೆಂಗಿದು ಅಂತ ಗಾಬರಿ ಬಿದ್ದೋದೆ. ನಮ್ ನೆಂಟರ ಹುಡುಗ ಅಣ್ಣ ನಿಂಗೆಲ್ಲೋ ಭ್ರಮೆ ಇರ್ಬೇಕಣ್ಣಾ ಅಂದ. ಏಯ್ ಇಲ್ಲ ಕಣಾ ಇಲ್ನೋಡು ಅವರ ಕಾಲ್ ನೆನ್ನೆ ರಾತ್ರಿನೂ ಬಂದಿತ್ತು. ಅದೇ ಅಡ್ರೆಸ್ ಇಂದ ಟ್ರಿಪ್ ಹೊಡ್ದಿದೀನಿ ನೋಡು ಅಂತ ತೋರಿಸಿದೆ.’

‘ಅವ್ನೂ ಕಕಮಕ ಅಂತ ನೋಡ್ತಾ ಕುಂತ. ಆಮೇಲೆ ಕಂಪನಿಗೆ ಫೋನ್ ಮಾಡಿ ಸಾರ್ ನೆನ್ನೆ ರಾತ್ರಿ ಇವ್ರು ಎರಡು ಗಾಡಿ ಮಾಡಿದ್ರು ಸಾರ್. ನಾನೇ ಬಿಟ್ಟು ಬಂದಿದೀನಿ ಅಂದೆ. ಅವ್ರು ಗೊತ್ತು ಕನಾ. ಅವರೇ ಮತ್ತೆ ಎರಡು ಗಾಡಿ ಬುಕ್ ಮಾಡವ್ರೆ ಅಂದ್ರು! ನಾ ಇದೇನೋ ಮ್ಯಾಜಿಕ್ ಆಗೋಗದಲ್ಲ ಇಡೀ ಭೂಮಿ ಅಂತ ಅಂದ್ಕೊಂಡೇ ಬಂದೆ. ಏನಾಯ್ತು ಸಾರ್? ಹೋಗಿದ್ದೋರು ಹೆಂಗೆ ಮತ್ತೆ?’ ಬಡಬಡ ಮಾತು ಅವನದ್ದು.

‘ಅಯ್ಯೋ ಯಾಕ್ ಹೇಳ್ತೀಯಾ ಗುರೂ ಆ ಗೋಳನ್ನ’ ಅಂತ ಅವನು ಕೇಳಿದ್ದೇ ಸಾಕು ಎನ್ನುವಂತೆ ನಮ್ಮ ದುಃಖಭರಿತ ಕಥೆಯನ್ನು ಬಳಬಳ ಅಂತ ಅಳುತ್ತ ಹೇಳಿದೆವು. ಅವನಿಗೆ ಒಂದು ಕಡೆ ಬೇಜಾರು, ಇನ್ನೊಂದು ಕಡೆ ನಗು. ‘ಇಂಥ ವಿಚಿತ್ರ ಯಾರಿಗಾದ್ರೂ ಆಗತ್ತಾ ಸಾರ್’ ಅಂತ ಮಾತನಾಡುತ್ತಲೇ ಏರ್‌ಪೋರ್ಟ್ ತಲುಪಿಸಿದ.

ಏನೇನೆಲ್ಲ ನಡೆಯುವ ಜಗತ್ತಿನಲ್ಲಿ ಇದು ನಡೆಯುವುದೇನು ಮಹಾ ಎನ್ನುತ್ತಲೇ ಅವನಿಂದ ಬೀಳ್ಕೊಟ್ಟು ಒಳ ಹೋದಮೇಲೆ ನೆನಪಾಯಿತು ಇದು ದೆಹಲಿಗೆ ಹೋಗುವ ಲೋಕಲ್ ಫ್ಲೈಟ್, ತಡವಾಗಿಯೇ ಬರಬಹುದಿತ್ತು ಎಂದು!

ಸರಿ ಏರ್‌ಪೋರ್ಟ್‌ನಲ್ಲಿ ಸಮಯ ಕಳೆಯುವುದೇನು ಕಷ್ಟ ಅಂತ ಚೆಕಿನ್ ಮತ್ತಿತರ ಕೆಲಸಗಳನ್ನು ಮುಗಿಸಿಕೊಂಡೆವು. ಸಂಜೆ 5.45ಕ್ಕೆ ಬೆಂಗಳೂರು ಬಿಡುವವರೆಗೆ ನಮಗೆ ಇನ್ನೂ ಹೊರಡುವ ಗ್ಯಾರಂಟಿಯೇ ಇಲ್ಲ. ಅಂತೂ ಕೊನೆಗೊಮ್ಮೆ ವಿಮಾನ ಟೇಕ್ ಆಫ್ ಆಯಿತು. ಆಲೂ, ಪನೀರ್‌ದು ಏನೋ, ಬೂಂದಿ ಕಾಳಿನ ಸಿಹಿ ತಿನ್ನುವುದರಲ್ಲಿ ಕಣ್ಣು ಎಳೆದುಕೊಂಡು ಬಂದಿತು.

ಒಂದು ಘಂಟೆಯ ಗಾಢ ನಿದ್ರೆ ಮಾಡುವುದರಲ್ಲಿ ದೆಹಲಿ ತಲುಪಿ ಆಗಿತ್ತು. ಆಗ ಸಮಯ 8.30. ಅಲ್ಲಿಂದ ನಡುರಾತ್ರಿ 12.55ಕ್ಕೆ ಮ್ಯೂನಿಕ್ ಹೋಗುವ ಲುಫ್ತಾನ್ಸಾ ವಿಮಾನವಿತ್ತು. ಇನ್ನು ನಾಲ್ಕೂವರೆ ಘಂಟೆಗಳ ಬ್ರೇಕ್. ಒಂದೂವರೆ ದಿನದಿಂದ ಕೇವಲ ಒಂದು ಘಂಟೆ ನಿದ್ರೆ ಮಾಡಿದ್ದರಿಂದ ತುಂಬ ಅಸಹನೆಯಾಗಿತ್ತು.

ಆ ದೆಹಲಿ ವಿಮಾನ ನಿಲ್ದಾಣವೋ ಮುಗಿಯಲೇ ಒಲ್ಲದು, ಅಷ್ಟು ದೊಡ್ಡದು. ನಮ್ಮ ಗೇಟಿನತ್ತ ನಡೆದು ನಡೆದರೂ ಸಿಗದಾದಾಗ ತಲೆ ಕೆಟ್ಟು ಏರ್‌ಪೋರ್ಟ್ ಒಳಗೆ ವಯಸ್ಸಾದವರನ್ನು ಕರೆದೊಯ್ಯಲು ಇರುವ ಗಾಡಿಯಲ್ಲಿ ಅಪ್ಪನ ನೆಪ ತೋರಿಸಿ ಎಲ್ಲರೂ ಹತ್ತಿ ಕುಳಿತು ಬಿಟ್ಟೆವು ಭಂಡರಂತೆ.

ಗಾಡಿಯಲ್ಲೆ ಸುಮಾರು 5 ನಿಮಿಷದ ಹಾದಿ ಕ್ರಮಿಸಿ ಅಂತೂ ಕೊನೆಗೆ ನಮ್ಮನ್ನು ಗುರಿ ತಲುಪಿಸಿದ ಆ ಹುಡುಗ, ಸರಕಾರಿ ಆಫೀಸ್‌ಗಳಲ್ಲಿ ಲಂಚಕ್ಕಾಗಿ ತಲೆ ಕೆರೆಯುವವನ ಹಾಗೆ ತಡೆದು ನಿಂತ. ಉಚಿತವಾದ ಸೌಲಭ್ಯಕ್ಕೆ ನಿನಗೆ ಯಾಕೆ ಕೊಡಬೇಕು ಹೋಗು ಎನ್ನುವಂತೆ ಸುಮ್ಮನೆ ನಡೆದು ಬಿಟ್ಟೆವು.

ನೆಟ್ಟಗಿನ ಮೂಡ್‌ನಲ್ಲಿದ್ದರೆ ‘ಅಯ್ಯೋ ಎಲ್ಲೆಲ್ಲೋ ಹಣ ಖರ್ಚಾಗಿರತ್ತೆ. ಇವನಿಗೆ ಕೊಡುವ ಹಣವನ್ನೇನು ಉಳಿಸಿ ಅರಮನೆ ಕಟ್ಟುವುದು’ ಎಂದು ಕೊಟ್ಟಿರುತ್ತೇವೆ. ಆದರೆ ಈ ಎರಡು ದಿನಗಳ Roller Coaster Ride ನಮ್ಮ ಶಕ್ತಿಯನ್ನೆಲ್ಲ ಹೀರಿ ಹಾಕಿತ್ತು. ಪಾಪ ಅವನ ಹಣೆಬರಹ!

ಅಂತೂ ಮತ್ತೆ ಎಲ್ಲ formalities ಮುಗಿಸಿ ಗೇಟ್‌ನ ಬಳಿ ಕಾದು ಕುಳಿತೆವು. ಹಿಂದಿನ ರಾತ್ರಿಯೂ ಹಾಗೇ ಕುಳಿತಿದ್ದ ನೆನಪು ಬಂತು. ಅಯ್ಯೋ ಇವತ್ತಾದರೂ ವಿಮಾನ ಹೊರಡುತ್ತದೆ ತಾನೇ ಎಂದು ಚಡಪಡಿಸುತ್ತಾ ಕುಳಿತಿರುವಾಗಲೇ ಸುಮಾರು 12 ಘಂಟೆಯ ಹೊತ್ತಿಗೆ ಅದೇನೋ ಪ್ರಕಟಣೆ ಶುರುವಾಗಿ, ಎದೆ ಧಸಕ್ಕೆಂದಿತು.

ಟೆನ್ನಿಸ್ ಮ್ಯಾಚ್‌ನಲ್ಲಿ ಮೊದಲನೆಯ ಸರ್ವ್‌ನಲ್ಲಿ ಮಾತ್ರ ಏಸ್ ಆಗುತ್ತದೆ. ಎರಡನೆಯ ಸರ್ವ್ ಯಾವತ್ತೂ ಮೊದಲಿನದರಷ್ಟು ಬಲವಾಗಿ ಇರುವುದಿಲ್ಲ ಅಲ್ಲವೇ? ಹಾಗೆಯೇ ನಮಗೆ ಹಿಂದಿನ ದಿನದ ಕಹಿ ಅನುಭವ ಹಸಿಯಾಗಿರಬೇಕಾದರೆ ಈ ರೀತಿ announcement ಬಂದರೆ ಎದೆ ನಡುಗದೆ ಇರುತ್ತದೆಯೇ?

ಅತ್ತ ಕಿವಿಗೊಟ್ಟರೆ ವಿಮಾನ 20 ನಿಮಿಷ ತಡವೆಂದು ಹೇಳುತ್ತಿದ್ದಿದ್ದು ಕೇಳಿಸಿತು! ಹೆದರುವವರ ಮೇಲೆ ಹಾವು ಎಸೆದಂತ ಪರಿಸ್ಥಿತಿ. ನನ್ನ ಗಂಡನಂತೂ ಇನ್ನೇನು ಈ ವಿಮಾನವೂ ಹೊರಡುವುದೇ ಇಲ್ಲವೇನೋ ಎನ್ನುವಂತೆ ‘ಏ ಬೆಂಕಿ ಪಟ್ಣ ಕೊಡ್ರೋ ಯಾರಾದ್ರೂ, ಏರ್‌ ಪೋರ್ಟ್ ‌ಗೆ ಬೆಂಕಿ ಹಾಕಿಬಿಡ್ತೀನಿ. ಎಲ್ಲ ಕಿತ್ತೋಗಿರೋ ದರಿದ್ರ flightಗಳು’ ಎಂದು ಕಿರುಚಾಡಲು ಶುರು ಮಾಡಿದ. ಮೊದಲೇ ಗಾಬರಿಯಾಗಿದ್ದ ನಾವು ಅವನ ಕಿರುಚಾಟದಿಂದ ಮತ್ತಿಷ್ಟು ತಬ್ಬಿಬ್ಬಾದೆವು.

ನೆನ್ನೆ ವಿಮಾನವಿಲ್ಲ ಅಂದರೆ ಹೋಗಿ ಬಿದ್ದುಕೊಳ್ಳಲು ಮನೆಯಾದರೂ ಇತ್ತು. ಇಲ್ಲಿ ಅದೂ ಗತಿ ಇಲ್ಲವಲ್ಲ ಅಯ್ಯೋ ದೇವರೇ ಅಂತ ಪ್ರಲಾಪ ಮಾಡುವುದರಲ್ಲೇ ಲುಫ್ತಾನ್ಸಾದವರು ದಯೆ ತೋರಿ ಅಂತೂ ವಿಮಾನ 9/11 ಆಗಬೇಕಿದ್ದ ಪ್ರಯಾಣ 9/13ಕ್ಕೆ ನಿಜಕ್ಕೂ ಇಪ್ಪತ್ತೇ ನಿಮಿಷ ತಡವಾಗಿ ರಾತ್ರಿ 1.30ಕ್ಕೆ ಹೊರಟೇ ಬಿಟ್ಟಿತು. ಟೇಕ್ ಆಫ್ ಆಗುವುದನ್ನೇ ಕಾಯುತ್ತಿದ್ದ ನಾನು ಒಂದು ಗ್ಲಾಸ್ ವೈನ್ ಹೀರಿದೆ.

ಅದಷ್ಟೇ ಗೊತ್ತು, ಆ ನಂತರ ಗಾಢವಾದ ನಿದ್ರೆ. ಸಾಧಾರಣವಾಗಿ ಪ್ರಯಾಣದಲ್ಲಿ ಎಂದೂ ಸುಖ ನಿದ್ರೆ ಬರುವುದಿಲ್ಲ ನನಗೆ. ಆಗೀಗ ಎದ್ದು ಇಡೀ ವಿಮಾನ ನನ್ನದೇ ಜವಾಬ್ದಾರಿಯೇನೋ ಎನ್ನುವಂತೆ ಒದ್ದಾಡಿಕೊಳ್ಳುತ್ತಿರುತ್ತೇನೆ. ಅಂಥ ನನಗೆ ಸುಮಾರು ನಾಲ್ಕೈದು ಘಂಟೆಗಳ ನಿದ್ರೆ ಎಂದರೆ ಅದು ಲಾಟರಿ ಹೊಡೆದಂತೆ!

ಸುಮಾರು 4.30ರ ಹೊತ್ತಿಗೆ ವಿಮಾನದ ತುಂಬ ಗಗನ ಸಖರು ಮತ್ತು ಸಖಿಯರು ಬೆಳಗಿನ ಉಪಾಹಾರ ಕೊಡಲು ಸರಭರ ಓಡಾಡಲು ಶುರು ಮಾಡಿದ್ದರು. ಇಷ್ಟು ಬೇಗ ಇವರದ್ದೇನು ಸಂಭ್ರಮವಪ್ಪಾ ಮದುವೆ ದಿನ ಬೀಗರ ಬಿಡಾರಕ್ಕೆ ಕಾಫಿ ಕಳಿಸಿಕೊಡುವಂತೆ ಅಂತ ಬಯ್ದುಕೊಳ್ಳುವುದರಲ್ಲೇ ಆಗ ನಮ್ಮ ದೇಶದ 8 ಘಂಟೆ ಎಂದು ನೆನಪಾಗಿ ಹಸಿವಾದಂತೆನಿಸಿತು!

ನಾವು ನಮ್ಮೂರಲ್ಲಿ ಇರುವಾಗ ಹಲ್ಲುಜ್ಜದೆ, ಮುಖ ತೊಳೆಯದೇ ಏನನ್ನೂ ತಿನ್ನದೆ ಕುಡಿಯದೇ ಇರುವವರು ಅಚ್ಚುಕಟ್ಟಾಗಿ ಕುಳಿತು ಪರೋಟಾ, ಪನೀರ್ ಗ್ರೇವಿ, ಬನ್, ಬಟರ್ ಜಾಮ್, ಹಣ್ಣು, ಯೋಗರ್ಟ್ ಎಲ್ಲವನ್ನೂ ನುಂಗಿ ತೇಗಿದೆವು. ಆ ನಂತರ ಕಾಫಿಯೂ ಬಂದಾಯಿತು. ಸುಮಾರು 5.30ರ ಹೊತ್ತಿಗೆ ಅದೆಲ್ಲ ಮುಗಿಯಿತು. ಆದರೆ ಮತ್ತೆ ನಿದ್ರೆ ಬರುವುದಿಲ್ಲ ಅನ್ನುವುದು ಗ್ಯಾರಂಟಿ. ಹಾಗಾಗಿ ಸುಮ್ಮನೆ ಹಾಗೇ ಸಮಯ ಕಳೆದೆ.

ಸುಮಾರು 9ರ ಸಮಯಕ್ಕೆ ಮ್ಯೂನಿಕ್ ತಲುಪಿದ್ದೆವು. ಇಳಿಯುವಾಗ ಗಗನ ಸಖಿ ‘Thank you for flying with Lufthansa’ ಎಂದಾಗ ‘ಏ ಇದ್ಕೆಲ್ಲ ಯಾವ ಥ್ಯಾಂಕ್ಸ್ ಲುಫ್ತಾನ್ಸಮ್ಮ, ನೀನು ವಿಮಾನ ಹಾರಿಸಿದ್ಯಲ್ಲ ಅದು ನಮ್ಮ ಭಾಗ್ಯ’ ಎಂದು ಮನಸ್ಸಿನಲ್ಲಿಯೇ ಅಡ್ಡ ಬಿದ್ದು ಹೊರಟೆ… ಅಂತೂ ಇಂತೂ ಕೊನೆಗೆ ನಾವು ಮ್ಯೂನಿಕ್ ತಲುಪಿದ್ದೆವು!!!!

ಅಲ್ಲಿ ಇಳಿದ ನಂತರ ರೆಸ್ಟ್ ರೂಮ್ ಕಂಡ ಕೂಡಲೇ ಮೊದಲು ನೆನಪಾದದ್ದೇ ಹಲ್ಲುಜ್ಜುವ ಕೆಲಸ! ನಿದ್ದೆಗಣ್ಣಿಗೆ ನೀರು ಹಾಕಿ ತೊಳೆದಾಗ ಇದ್ದಿದ್ದರಲ್ಲೇ ಮುಖಕ್ಕೆ ಚೂರು ಕಳೆ ಬಂದಿದೆ ಅನ್ನಿಸಿತು! ಟಿಷ್ಯೂ ಹೋಲ್ಡರ್‌‌ನಿಂದ ಶುಭ್ರ ಬಿಳಿಯ ಬಟ್ಟೆ ಸ್ವಲ್ಪ ಕೆಳಗೆ ನೇತಾಡುತ್ತಿತ್ತು.

‘ಓ ಟಿಷ್ಯೂ ಬದಲು ಟವಲ್ಲೇ ಕೊಟ್ಬಿಡ್ತಾರಾ! ಒಬ್ಬಬ್ರೂ ಒಂದೊಂದು ಎತ್ಕೊಂಡು ಹೋಗ್ಬಿಟ್ರೆ?’ ಅಂತೆಲ್ಲ ಅಂದುಕೊಳ್ಳುತ್ತಾ ಆ ಬಟ್ಟೆ ಎಳೆದರೆ ಅದು ಮೆಷಿನ್‌ಗೆ ಅಂಟಿಕೊಂಡೇ ಇತ್ತು. ನಾನು ಎಳೆದು ಬಿಟ್ಟ ಕೂಡಲೇ ಮತ್ತೆ ಸುಯಕ್ ಅಂತ ಒಳ ಸೇರಿಕೊಂಡಿತು. ಇಂಥದ್ದನ್ನು ಎಂದೂ ನೋಡಿರದ ನಾನು ಹಂಗೇ ಒಳೀಕೋದ್ರೆ ಕಿಲೀನ್ ಎಂಗಾಯ್ತದೆ ಸಿವಾ ಅಂದುಕೊಳ್ಳುತ್ತ ಪಿಳಿಪಿಳಿ ಕಣ್ಣು ಬಿಟ್ಟವಳು ಕಾಫಿಯ ನೆನಪಾಗಿ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವುದು ಬಿಟ್ಟು ಇದೇನು ಮಾಡುತ್ತಿದ್ದೇನೆ ಎಂದು ಬಯ್ದುಕೊಳ್ಳುತ್ತ ಆಚೆ ನಡೆದೆ.

ಆದರೆ ಕಾಫಿ ಕೊಳ್ಳಲು ಹೋದಾಗ ಮಾತ್ರ ವಾಷ್ ರೂಮಿನ ಬಟ್ಟೆಯ ಮೆಷಿನ್ ನೋಡುತ್ತ ಸಮಯ ಕಳೆದಿದ್ದರೇ ವಾಸಿ ಇತ್ತು ಅನ್ನಿಸಿತು. ಸ್ಟೈಲಾಗಿ ಹೋಗಿ ಕ್ಯೂನಲ್ಲಿ ನಿಂತು, ಒಂದು ಕಾಫಿಗೆ ಎಷ್ಟು ಎಂದು ವಿಚಾರಿಸಿದೆವು. ಅವ ಭರ್ತಿ 6 ಯೂರೋ ಅಂದಾಗ ಹೊಟ್ಟೆ ಉರಿದುಹೋಯಿತು. 6 ಯೂರೋ ಅಂದರೆ ಸುಮಾರು 500 ರೂಪಾಯಿ. ಕ್ಯೂನಲ್ಲಿ ನಿಂತವರು ರೇಟ್ ಕೇಳಿ ಹಾಗೇ ವಾಪಸ್ ಬಂದರೆ ಅವಮಾನ ಅನ್ನುವ ಒಂದನೆಯ ಕಾರಣಕ್ಕೆ ಮತ್ತು ನಾವು ಕಾಫಿ ಅಡಿಕ್ಟ್‌ಗಳಾಗಿದ್ದ ಎರಡನೆಯ ಕಾರಣಕ್ಕೆ ಕಾಫಿ ಕೊಂಡೆವು.

ಎರಡು ಕಾಫಿಗೆ 1000 ರೂಪಾಯಿ. ಹೋಗಲಿ ಕಾಫಿಯಾದರೂ ಚೆನ್ನಾಗಿತ್ತಾ ಅಂದರೆ ಅದೂ ಇಲ್ಲ. ಬೆಳ್ಳನೆಯ ಹಾಲಿನಂಥ ಕಾಫಿ. ಒಂದು ಸ್ವಲ್ಪವೂ ಪರಿಮಳವಿಲ್ಲ, ರುಚಿಯಂತೂ ಇಲ್ಲವೇ ಇಲ್ಲ. ಹಾಗಿರುವಾಗ ಬೆಲೆಯಾದರೂ ಕಡಿಮೆ ಇದ್ದಿದ್ದರೆ ಅಥವಾ ನಾನೇನಾದರೂ ಯೂರೋನಲ್ಲಿ ಸಂಪಾದಿಸಿದ್ದರೆ ಮಾತ್ರ ಆ ಕಾಫಿ ರುಚಿಸುತ್ತಿತ್ತೇನೋ! ಅದೂ ಇಲ್ಲದಾಗ ‘ಇಲ್ಲೊಂದು ಕಾಕಾ ಹೋಟ್ಲು ಹಾಕಿದ್ರೆ ಒಳ್ಳೆ ಸಂಪಾದನೆ ಮಾಡಬಹುದು ಕಣೋ’ ಎಂದು ಮಗನೊಡನೆ ವ್ಯಂಗ್ಯವಾಡಿದೆ.

ಸರಿ ವಿಮಾನ ಹೊರಡಲು ಸುಮಾರು ಸಮಯವಂತೂ ಇತ್ತಲ್ಲ, ಹಾಗಾಗಿ ಅಲ್ಲಿಯೇ ಸುಮಾರು ಹೊತ್ತು ಸಮಯ ಕೊಂದು ನಂತರ ಸೆಕ್ಯುರಿಟಿ ಚೆಕ್‌ಗೆ ಹೊರಟು ನಿಂತೆವು. ಇದುವರೆಗೆ ನಾನು ನೋಡಿದ ಕಡೆಯೆಲ್ಲ ಮನುಷ್ಯರೇ ನಮ್ಮನ್ನು ತಡಕಾಡಿದ ಅನುಭವವಿತ್ತು. ಆದರೆ ಇಲ್ಲಿ ಎರಡು ಪಾದಗಳ ಗುರುತಿದ್ದ ಕಡೆ ನಿಂತು ಎರಡು ಕೈ ಎತ್ತಿ ನಿಂತರೆ ಒಂದಿಷ್ಟು ಕ್ಷಣಗಳಲ್ಲಿ ನಮ್ಮನ್ನು ಪಾಸ್ ಮಾಡಿ ಕಳಿಸುತ್ತದೆ ಅಲ್ಲಿನ ಸ್ಕ್ಯಾನರ್. ಹಾಗಾಗಿ ಯಾವ ಮನುಷ್ಯರ ಹಸ್ತಕ್ಷೇಪವಿಲ್ಲದೆ ಬೇಗನೆ ಆ ಕೆಲಸವೂ ಮುಗಿದು ಹೋಯಿತು.

ದಣಿವಾದ ದೇಹಕ್ಕೆ ಮೂರು ಘಂಟೆಯ ಕಾಯುವಿಕೆ ಅಸಹನೀಯ ಅನ್ನಿಸುತ್ತಿತ್ತು. ಆದರೂ ಬರುವಾಗ ಫ್ರಾಂಕ್‌ಫರ್ಟ್ ಮೂಲಕ ಬರುವುದರಿಂದ ಮ್ಯೂನಿಕ್‌ನ ಏರ್‌ಪೋರ್ಟ್ ಹೇಗಿದೆ ಎಂದು ನೋಡಲಾಗುವುದಿಲ್ಲ ಎಂದು ನೆನಪಾಯಿತು. ಹಾಗೆ ನೋಡದಿದ್ದರೆ ಜಗತ್ಪ್ರಳಯವಾಗುವುದಿಲ್ಲವೇ ನೀವೇ ಹೇಳಿ! ಹಾಗಾಗಿ ನಾನು, ನನ್ನ ಮಗ ಒಂದು ಸುತ್ತು ಸುತ್ತಿ ಬರೋಣವೆಂದು ಹೊರಟೆವು.

ಯಾವ ಅಂಗಡಿಯ ಮುಂದೆ ನಿಂತರೂ ಬಡ ಭಾರತೀಯರ ಜೇಬಿಗೆ ನಿಲುಕದ ಬೆಲೆಯವೇ ಎಲ್ಲ. ಹಾಗಾಗಿ ಸುಮ್ಮನೆ ನಿಂತು ದೇವರಂತೆ ನೋಡಿದೆವು ಎಲ್ಲವನ್ನೂ. ಎಲ್ಲ ಅಂಗಡಿಗಳ ಮುಂದೆ ನಿಂತು ವಾಪಸ್ ಬರುವಾಗ ಒಂದೆಡೆ ಕಾಫಿ ಮೇಕರ್ ಒಂದು ಇಟ್ಟಿದ್ದರು. ೨ ಯೂರೋಗೆ ಒಂದು ಕಾಫಿ ಎಂದು ಓದಿ ಅಯ್ಯೋ ಜೊಲ್ಲು ಸುರಿಯಿತು, ಲೆಕ್ಕ ಹಾಕಿ 170 ರೂಪಾಯಿಯೇ ಕಡಿಮೆ ಅನ್ನಿಸಬೇಕಾದರೆ ಉಳಿದೆಲ್ಲದರ ಬೆಲೆ ಎಷ್ಟಿದ್ದಿರಬಹುದು ಎಂದು!

ಒಬ್ಬರು ವ್ಯಕ್ತಿ ಕಾಫಿ ತೆಗೆದುಕೊಳ್ಳುತ್ತಿದ್ದರು, ಹಾಗಾಗಿ ನಾವು ಕ್ಯೂನಲ್ಲಿ ನಿಂತೆವು. ಆತ ತೆಗೆದುಕೊಂಡು ಹೋದ ಬಳಿಕ ಆ ಮೆಷಿನ್ ಒಳಗೆ ಕಾಯಿನ್ ಹಾಕಿ ಅಂತ ಇದ್ದ ಕಡೆಗೆ ಹಾಕಿದೆವು. ಕಾಫಿಗೆ ಪೇಪರ್ ಕಪ್ ಬರುತ್ತದೆ ಅಂತ ನಿರೀಕ್ಷಿಸುತ್ತ ನಿಂತರೆ ಅದೇನೋ ಗುಂಡು ಪೊಟ್ಟಣವೊಂದು ಉದುರಿತು. ಈಗೇನ್ ಮಾಡ್ಬೇಕಣಾ ಅಂತ ತಲೆ ಕೆರೆದುಕೊಳ್ಳುತ್ತ ನೋಡಿದರೆ ಇನ್ನೊಂದು ಮೆಷಿನ್‌ಗೆ ಆ ಪೊಟ್ಟಣ ತುರುಕಿ ಕಾಫಿ, ಎಸ್‌ಪ್ರೆಸ್ಸೋ ಎನ್ನುವ 2 ಬಟನ್‌ಗಳಲ್ಲಿ ಒಂದನ್ನು ಒತ್ತಿ ಅಂತಿತ್ತು, ಒತ್ತಿದೆವು.‌ ಒಂದು ಪೇಪರ್ ಕಪ್ ಬಂದಿತು. ಅದರಲ್ಲಿ ಸರಿಯಾಗಿ ನಾಲ್ಕು ಸ್ಪೂನ್ ಬಿಸಿನೀರು ತುಂಬಿ ನಿಂತು ಹೋಯಿತು!

ಈಗೇನು ಶಿವಾ ಅಂತ ಗೊಂದಲಗೊಂಡು ಪಕ್ಕದಲ್ಲಿದ್ದ ಮತ್ತೊಂದು ಬಟನ್ ಒತ್ತಿದೆವು. ಸಬೀನಾ ಬೆರೆಸಿದ ಬಣ್ಣದ ದ್ರವ ಹೊರಬಂತು! ಈಗೇನು ಮಾಡಬೇಕು ಎಂದು ತಿಳಿಯದೆ ಮತ್ತೆ ಮೊದಲ ಬಟನ್ ಒತ್ತಿದೆವು, ಮತ್ತೆ ಬಹಳ ವಿಧೇಯವಾಗಿ ನಾಲ್ಕು ಸ್ಪೂನ್ ನೀರು ಬಂದಿತು. ಮತ್ತೆ ಎರಡನೆಯದ್ದು ಒತ್ತಿದೆವು. ಮತ್ತೆ ನಾಲ್ಕು ಸ್ಪೂನ್ ಸಬೀನಾ ನೀರು. ಹೀಗೆ ಎಂಟು ಬಾರಿ ಒತ್ತೇ ಒತ್ತಿ ಲೋಟಾದ ಅರ್ಧ ಭಾಗ 32 ಸ್ಪೂನ್ ಬಿಸಿ ನೀರು ತುಂಬಿದ ನಂತರ, ಇದರ ಹಣೆಬರಹ ಇಷ್ಟೇ ಅಂತ ಗೊತ್ತಾಗಿ ಅಯ್ಯೋ 170 ರೂಪಾಯಿ ಹೋಯ್ತಲ್ಲಾ ಅಂತ ಅಳುಮುಖ ಮಾಡಿ ಪೆಕರು ಪೆಕರಾಗಿ ನಿಂತೆವು. ಹಿಂದೆ ಯಾರೋ ಕಿಸಕ್ಕನೆ ನಕ್ಕ ಸದ್ದು ಕೇಳಿಸಿತು. ನಮ್ಮನ್ನು ಕಂಡೇ ನಕ್ಕಿರಬೇಕು ಎಂದುಕೊಳ್ಳುತ್ತ ಹಿಂತಿರುಗಿ ನೋಡಿದರೆ ಇಬ್ಬರು ಹುಡುಗಿಯರು ಕಂಡರು. ತುಸು ಅವಮಾನವಾದಂತಾಯಿತು. ಮತ್ತಿಷ್ಟು ಪೆಚ್ಚಾದೆವು. ಸರಿ ಆ ಬಿಸಿನೀರನ್ನು ತೆಗೆದುಕೊಂಡು ಸರಿದು ನಿಂತೆವು.

ಅಷ್ಟರಲ್ಲಿ ನಮ್ಮ ಹಿಂದಿದ್ದ ಮತ್ತೊಬ್ಬ ಗಂಡಸು ಕಾಯಿನ್ ಹಾಕುತ್ತಿರುವುದು ಕಂಡು ನಾವು ಏನು ತಪ್ಪು ಮಾಡಿದೆವು ನೋಡೋಣ ಅಂತ ಅಲ್ಲೇ ನಿಂತೆವು. ಆತನಿಗೂ ನಮಗಾದಂತೆಯೇ ಗುಂಡು ಪೊಟ್ಟಣ ಬಿತ್ತು. ಅದನ್ನು ತೆಗೆದು ತುರುಕಿ ಲೋಟ ಇಟ್ಟು ನಿಂತರು. ಅವರಿಗೂ ನಾಲ್ಕು ಸ್ಪೂನ್ ಬಿಸಿ ನೀರು ಬಂದು ನಿಂತು ಹೋಯಿತು ಮತ್ತು ಆಯಪ್ಪ ನಮ್ಮಷ್ಟೇ ಪೆಕರು ಪೆಕರಾಗಿ ನಿಂತು ಅದನ್ನೇ ದಿಟ್ಟಿಸಿದರು! ಮತ್ತೆ ಒತ್ತಿದರು, ಮತ್ತೆ ನಾಲ್ಕು ಸ್ಪೂನ್ ನೀರು… ಮತ್ತೆ ನಾಲ್ಕು ಸ್ಪೂನ್… ಮತ್ತೆ ನಾಲ್ಕು ಸ್ಪೂನ್… ನೋಡುತ್ತಿದ್ದ ನಾನು ನನ್ನ ಮಗ ಕಿಸಿಕಿಸಿ ನಗಲು ಶುರು ಮಾಡಿದೆವು. ಅವರಿಗೂ ಅದು ಗೊತ್ತಿಲ್ಲ ಎಂದು ಒಂದು ರೀತಿಯ ವಿಚಿತ್ರ ಸಮಾಧಾನವೂ ಆಯಿತು!

ಸಾಧಾರಣವಾಗಿ ನಾವು ಭಾರತೀಯರಿಗೆ ಬಿಳಿ ತೊಗಲಿನವರು ನಮಗಿಂತ ಶ್ರೇಷ್ಠರು ಎನ್ನುವ ಭ್ರಮೆ ಇರುತ್ತದೆ. ಎಲ್ಲ ಭಾರತೀಯರಿಗೂ ಇದೆಯೋ ಗೊತ್ತಿಲ್ಲ. ಅವರ ಪರದಾಟ ನೋಡಿ ನಾನು, ಮಗ ಮುಖ ಮುಖ ನೋಡಿಕೊಳ್ಳುವಾಗಲೇ ನಮಗೆ ಆ ಹುಡುಗಿಯರೂ ಇದೇ ಕಾರಣಕ್ಕೆ ನಕ್ಕಿದ್ದಿರಬೇಕು ಅಂತ ಜ್ಞಾನೋದಯವಾಗಿದ್ದು! ಇಬ್ಬರೂ ನಗು ಅದುಮಿಡುತ್ತ ಅಲ್ಲಿದ್ದ ಕ್ರೀಮ್ ಮತ್ತು ಸಕ್ಕರೆ ಬೆರೆಸಿದೆವು. ಆದರೂ ಆ ಕಾಫಿಯ ಪರಿಸ್ಥಿತಿ ಹೆಚ್ಚು ಸುಧಾರಿಸದೇ ಬಿಸಿ ನೀರಿನ ಥರವೇ ಇತ್ತು. ಬಿದ್ದರೂ ಮೀಸೆ ಮಣ್ಣಾಗದವಳಂತೆ  ‘ಹೇಗೂ ಬಿಸಿನೀರು ಬೇಕಿತ್ತು ಮಗಾ ಗಂಟಲು ನೋವಿಗೆ, ಸಿಕ್ತು ನೋಡು’ ಅಂದೆ! ಅವನು ನಗುತ್ತಾ ‘ಆಹಾ ನೋಡು 170 ರೂಪಾಯಿಗೆ ಒಂದ್ಲೋಟ ಬಿಸಿ ನೀರು ಸಿಕ್ಕಿತು, ಎಷ್ಟು ಉಳಿತಾಯ’ ಎಂದು ಆಡಿಕೊಂಡ!

ಇಷ್ಟು ಸರ್ಕಸ್ ಮಾಡುವುದರಲ್ಲಿ 11.30 ಆಗಿತ್ತು. ಮತ್ತು ನಾವು ಕೊನೆಗೂ ವ್ರೋಟಾಜ್ವ ಗೆ ಹೋಗುವ ವಿಮಾನ ಹತ್ತುವ ಸಮಯ ಸನ್ನಿಹಿತವಾಗಿತ್ತು! ಪುಟ್ಟ ವಿಮಾನ. ದಡಕ ಬಡಕ ಎನ್ನುತ್ತ ಹೊರಟಿತು. ಅಲ್ಲಿಯವರೆಗೆ ಮರೆಯಾಗಿದ್ದ ಆಯಾಸ ಮತ್ತೆ ಧುತ್ತೆಂದು ಎದುರಾಯಿತು. ಮಲಗಲು ಹೆಚ್ಚು ಸಮಯವೂ ಇರಲಿಲ್ಲ. ಗಗನ ಸಖಿ ಏನೋ ತರುವುದು ಕಾಣಿಸಿ, ಇನ್ನೇನು ತಿನ್ನುವುದರಲ್ಲಿ ಅಲ್ಲಿ ತಲುಪಿರುತ್ತೇವೆ ಅಂತ ಖುಷಿಯಲ್ಲಿ ‘ವೆಜ್’ ಅಂದೆವು. ಆಕೆ ‘ನೋ ವೆಜ್’ ಎಂದಳು. ‘ಅಂದರೆ? ಬೇರೆ ತಂದುಕೊಡು ಮಾರಾಯ್ತಿ’ ಅಂದರೆ ‘ಇಲ್ಲ ಇಲ್ಲ… ಈ ವಿಮಾನದಲ್ಲಿ ನಾವು ಕೊಡುವುದು ಬರೀ ನಾನ್ ವೆಜ್’ ಎಂದುಬಿಟ್ಟಳು.

ನನ್ನ ಗಂಡ ‘ಇದು ಅನ್ಯಾಯ, ಧಿಕ್ಕಾರ, ನಾವೇನು ತಿನ್ನಬೇಕು’ ಅಂತೆಲ್ಲ ಕೂಗಾಡಿದ. ನಾನು ತಿನ್ನುವ ಕೆಲಸವೇ ಉಳಿಯಿತು ಅತ್ಲಾಗೆ ಎಂದುಕೊಂಡು ಆಚೀಚೆ ನೋಡುವುದರಲ್ಲಿ ಲ್ಯಾಂಡಿಂಗ್ ಸೂಚನೆ ಹೊರಡಿಸಿದ್ದರು ನಮ್ಮ ಪೈಲಟ್. 475 ಕಿಲೋಮೀಟರ್‌ಗಳ ಹಾದಿ ಕ್ರಮಿಸಿ ವ್ರೋಟಾಜ್ವ ಬಂದೇ ಬಿಟ್ಟಿತ್ತು… ಎಂಥ ಪ್ರಯಾಣವಿದು!

ಹಿಂದಿನ ದಿನ ಬೆಂಗಳೂರು-ಫ್ರಾಂಕ್‌ಫರ್ಟ್-ವ್ರೋಟಾಜ್ವ ಇದ್ದ ನಮ್ಮ ಹಾದಿ, ಇವತ್ತು ಬೆಂಗಳೂರು-ದೆಹಲಿ-ಮ್ಯೂನಿಕ್-ವ್ರೋಟಾಜ್ವ ಆಗಿ ಹೋಗಿತ್ತು! ಉಗಮ ಮತ್ತು ಗಮ್ಯ ಅದೇ ಆದರೂ ಹಾದಿ ಬೇರೆ. ಬದುಕಿನ ಎಷ್ಟೊಂದು ಪ್ರಯಾಣಗಳು ಹೀಗೇ ಅಲ್ಲವಾ… ಏನೋ ಲೆಕ್ಕಾಚಾರ ಹಾಕಿ ಹೊರಡುತ್ತೇವೆ, ಮತ್ಯಾವುದೋ ಹಾದಿ ತೆರೆದಿರುತ್ತದೆ ಎಂದುಕೊಂಡವಳು ಮಹಾ ಮೇಧಾವಿಯಂತೆ ‘ಆದರೆ ಗಮ್ಯವೊಂದು ಬದಲಾಗಬಾರದು ನೋಡು’ ಎಂದುಕೊಂಡೆ.

ಒಳಗಿನ ತುಂಟ ಮನಸ್ಸು ‘ಗಮ್ಯವೂ ಬದಲಾದರೆ ಏನು. ಬದುಕು ಮತ್ತೆಲ್ಲಿಗಾದರೂ ನಿನ್ನ ಹೊತ್ತೊಯ್ದಿದ್ದರೆ ಅಲ್ಲಿ ಯಾವ ಅದ್ಭುತ ಅನುಭವ ನಿನಗಾಗಿ ಕಾದಿತ್ತೋ. ಛೇ ಅದನ್ನೆಲ್ಲ ಮಿಸ್ ಮಾಡಿಕೊಂಡೆಯೇನೋ ಭಾರತಿ’ ಎಂದಿತು. ಬದುಕಿನ ಆಶಾವಾದಗಳು ಹೀಗಿರುತ್ತವೆ..!!

‍ಲೇಖಕರು ಬಿ ವಿ ಭಾರತಿ

September 8, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: