ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಕ್ಕಿ ಮತ್ತು ಹಾಡು..

ಪಿ ಬಿ ಪ್ರಸನ್ನ

**

ಟೊಂಗೆ ಟೊಂಗೆಯ ಮೇಲೆ
ಕೂತ ಹಕ್ಕಿಯು
ಸರಾಗ ಲಹರಿ
ಹರಿಸುತ್ತಿತ್ತು

ಅದರ ಭಾವ
ಅದರ ಗತಿ
ಒಲವು ತುಂಬಿದ ಜಾಡು
ಅದರದ್ದೇ ಒಂದು ಲೋಕ

ಈಗ ಹಕ್ಕಿಗೂ
ಇಷ್ಟೇ ಶ್ರುತಿಯಲ್ಲಿ
ಹಿತಮಿತದ ಭಾವದಲಿ
ಎಲೆಯೂ ಅಲುಗಾಡದಂತೆ
ಹಾಡಬೇಕು ಎಂಬ ಹುಕುಂ ಇದೆ

ಹಾಡು ಹಕ್ಕಿಗೆ
ಆಜ್ಞೆ ಪಾಲಿಸುವುದು ಗೊತ್ತಿಲ್ಲ
ಹುಕುಮಿಗೆ ಹೆದರಿ
ಟೊಂಗೆ ಮರೆಯಲ್ಲಿ ಮುದುರಿ ಕುಳಿತುಕೊಳ್ಳುತ್ತದೆ
ಅಲ್ಲಿಂದಲೇ ಹೊಮ್ಮಿಸುತ್ತದೆ
ತನ್ನ ಕರುಳಿನ ಗೀತೆ

ಕೇಳಿದವರ ಪಿತ್ತ ಕೆದರುತ್ತದೆ
ತಮ್ಮ ಆಜ್ಞೆಗೆ ಬೆಲೆಯೇ ಇಲ್ಲ
ಹಕ್ಕಿ ಹಾಡಿದು ಎಲ್ಲರಿಗೂ ಸಲ್ಲ
ಹುಡುಕಿ ತೆಗೆಯಿರಿ ಸ್ವರದ ಮೂಲ

ಆಜ್ಞೆ ಬಂದದ್ದೇ

ಎಲ್ಲರಲ್ಲೂ ಹಕ್ಕಿ ಕೊರಳನು ಹಿಸುಕುವ ಆವೇಶ

ಹಕ್ಕಿಯೋ ಬಲು ಕಿಲಾಡಿ
ಮರದಿಂದ ಮರ
ಗೆಲ್ಲಿಂದ ಗೆಲ್ಲು
ಎಲೆಯ ಮರೆಯಿಂದ ಮರೆಗೆ

ಹಾರಿ
ಉಲಿಸುತ್ತಲೇ ಇರುತ್ತದೆ
ತನ್ನ ಪಂಚಮದ ಗೀತೆ.

‍ಲೇಖಕರು Admin MM

23 April, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading