ಹಕ್ಕಿ ಮತ್ತು ಅವಳು ಎಂಬ ರೆಕ್ಕೆ ಮತ್ತು ಬಾನು…

ಉದಯ ಗಾಂವಕರ್

ಹೆನ್ರಿ ಲಾರೆಂಜ಼್ ಎಂಬ ಹವಾಮಾನ ತಜ್ಞ ದೊಡ್ಡ ಬಿರುಗಾಳಿಯು ಕೆಲವು ವಾರಗಳ ಹಿಂದೆ ಒಂದು ವಿಶಿಷ್ಟ ಸಂದರ್ಭ ಮತ್ತು ಅವಕಾಶದಲ್ಲಿ ಹಕ್ಕಿಯೊಂದು ರೆಕ್ಕೆ ಬಡಿದ ಪರಿಣಾಮವೂ ಆಗಿರಬಹುದು ಎನ್ನುವ ಮೂಲಕ ಜಗತ್ತನ್ನು ಚಕಿತಗೊಳಿದ್ದರು. ಈ ಮಾತು ಎಂತಹ ತಲ್ಲಣವನ್ನು ಉಂಟುಮಾಡಿತೆಂದರೆ ಸ್ವತಃ ಲಾರೆಂಜ಼್ ತನ್ನ ಮಾತನ್ನು ಇನ್ನಷ್ಟು ಕಾವ್ಯಾತ್ಮಕವಾಗಿಸಿ ಚಿಟ್ಟೆಯೊಂದು ಎಂದೋ ರೆಕ್ಕೆ ಬಡಿದ ಪರಿಣಾಮವು ಇನ್ನೆಂದೋ ಬಿರುಗಾಳಿಯಾಗಿ ಬದಲಾಗಬಹುದು ಎಂದು ತಿದ್ದುಪಡಿ ಮಾಡಿದರು. ಹೀಗೆ ಹವಾಮಾನ ತಜ್ಞರೊಬ್ಬರು ಕವಿಯಾದರು.
ರೇಖೀಯವಲ್ಲದ ಪುಟ್ಟ ಬದಲಾವಣೆಗಳಲ್ಲಿ ಊಹಿಸಲಾಗದ ಭವಿಷ್ಯದ ವಿರಾಟ್ ಪರಿಣಾಮಗಳ ಬೀಜಗಳಿರುತ್ತವೆ ಎಂಬುದನ್ನು ನಂಬಿಕೊಂಡು ಕಟ್ಟಿದ ಕಾವ್ಯಾಭಿನಯವೇ ಹಕ್ಕಿ ಮತ್ತು ಅವಳು.

ತಿರುಮಲೇಶರೂ ಸೇರಿದಂತೆ ಅನೇಕ ಕವಿಗಳ ರಚನೆಗಳಿಗೆ ಈಗಿನ್ನೂ ಕಾಲೇಜು ವ್ಯಾಸಂಗ ಮಾಡುತ್ತಿರುವ ಕಾವ್ಯಾ ದೇಹದ ಮೂಲಕ ಚಲನೆಯನ್ನು‌ ಒದಗಿಸಿದ್ದಾರೆ. ಕಾವ್ಯಾಭಿವ್ಯಕ್ತಿಗೆ ಇರುವ ದೊಡ್ಡ ಸವಾಲೆಂದರೆ, ಕಾವ್ಯದ ಓದು ಒಂದು ಖಾಸಗಿಯಾದ ಗಳಿಗೆಯಲ್ಲಷ್ಟೇ ಸಂಭವಿಸಬಹುದಾದ ಸಂಗತಿಯಾಗಿರುವುದು. ಈ ಖಾಸಗಿತನವನ್ನು ಭೇದಿಸಲು ಕಾವ್ಯವು ವಾಚ್ಯವೂ, ಬಹಿರಂಗವೂ ಆಗಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಆಗ ಅದು ಕಾವ್ಯ ಗುಣಗಳನ್ನು ಕಳೆದುಕೊಳ್ಳುತ್ತದೆ. ಇದೊಂದು ಸಂದಿಗ್ಧ. ತನ್ನೊಡಲಲ್ಲಿ ಬೇರೆಯವರ ಎದೆಯ ವೈಡೂರ್ಯಗಳನ್ನು ಬಚ್ಚಿಟ್ಟುಕೊಳ್ಳಬಹುದಾದ ಕಾವ್ಯಕ್ಕೆ ಬಹಿರಂಗಗೊಳ್ಳುವ ಸೌಕರ್ಯವೇ ಸಿಗದು. ಹೀಗಿದ್ದೂ, ಪದಗಳ ನಡುವಿನ ಮೌನಗಳಲ್ಲಿ ಅಡಗಿರುವ ಹಲವರ್ಥಗಳನ್ನು ದಾಟಿಸಲು ಕಾವ್ಯ ಹಂದೆ ತನ್ನ ದೇಹಕ್ಕೆ, ದನಿಗೆ ನೀಡಿದ ಚಿಕಿತ್ಸೆ ಅಪೂರ್ವವಾದದ್ದು.

ಕವಿತೆ, ನಾನು ಈಗಷ್ಟೇ ಹೇಳಿದಂತೆ ಖಾಸಗಿ ಓದಿಗೆ ದಕ್ಕಬಹುದಾದ ರಚನೆ. ಓದು, ಮರು ಓದು, ಸಾಲುಗಳ ನಡುವೆ ತನ್ನೊಳಗನ್ನು‌ ಶೋಧಿಸುವ ಓದು, ಹೀಗೆ ಹಲವು ಹೊದಿಕೆಗಳಲ್ಲಿ ನಡೆಯಬಹುದಾದ ಕ್ರಿಯೆ. ತಟ್ಟನೆ ಎದುರಾಗುವ ಸಶಬ್ಧ ಪದಗಳು ದೇಹಭಾಷೆಯ ಮೂಲಕ ಪ್ರೇಕ್ಷಕರನ್ನು ತಲುಪುವ ಸವಾಲುಗಳನ್ನು ನಿರ್ದೇಶಕರಾದ DrShripad Bhat ಮತ್ತು ಕಾವ್ಯಾ ಕಲಾತ್ಮಕವಾಗಿ ಎದುರುಗೊಂಡಿದ್ದಾರೆ.
ರಂಗವಿಡೀ ‘ಅವಳೆ’ಷ್ಟು ಆವರಿಸಿಕೊಂಡಿದ್ದಳೆಂದರೆ, ಬೇರೆಲ್ಲ ಸಂದರ್ಭಗಳಲ್ಲಿ ಅತ್ಯಂತ ಪರಿಣಾಮಕಾರಿ ಎನಿಸಿಕೊಳ್ಳುವ ಡಾ. ಶ್ರೀಪಾದ್ ಭಟ್ಟರ ದನಿ ಇಲ್ಲಿ‌ ಪರಕೀಯವೆನಿಸುತ್ತದೆ.

ಇದೊಂದು ಚೆಂದದ ಪ್ರಯೋಗ. ಸಂಗತಿಗಳ ತರ್ಕಬದ್ಧ ಜೋಡಣೆಯನ್ನು ನೀರೀಕ್ಷಿಸುವ, ಕತೆಯಲ್ಲಿ‌ ನಿರಾಯಾಸವಾಗಿ ತಲ್ಲೀನವಾಗಲು ಬಯಸುವ ಪ್ರವೃತ್ತಿಯನ್ನು ಆಗಾಗ ಸಮಾಧಾನಪಡಿಸಿಕೊಳ್ಳುವುದು ರೂಢಿಯಿಂದ ಹೊರಬರಲು ನಾವು ವಿನಿಯೋಗಿಸಬೇಕಾದ ಶ್ರಮ ಎಂದಷ್ಟೇ ಭಾವಿಸುವೆ.

ಚಿಟ್ಟೆಯೊಂದು ರೆಕ್ಕೆಬಡಿದದ್ದು ಸತ್ಯ.
ಎದೆಯಲ್ಲದು ತಲ್ಲಣವಾಗಿ ಮುಂದುವರಿದದ್ದು ಸುಳ್ಳಲ್ಲ.

‍ಲೇಖಕರು Admin

February 5, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: