ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಅನ್ಯ ರಾಜ್ಯಗಳ ನೆಲೆಗಳಲ್ಲಿ ಹಕ್ಕಿಗಳಿಗಾಗಿ…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.

ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.

ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್‌ ಅಂಡ್‌ ಎರರ್‌ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.

ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

12

ಸಾತ್ತಾಲಿನ ಸುಳಿಯಲ್ಲಿ : ಭಾಗ-1 ಮೊದಲ ಒಲವು

2017ರ ಮೇ ತಿಂಗಳು. ಹೈದರಾಬಾದಿನಲ್ಲಿ ಸೈಕಿಯಾಟ್ರಿ ಡಿ.ಎನ್.ಬಿ ಮಾಡುತ್ತಿದ್ದ ಮಗಳು ಡಾ.ರಶ್ಮಿ ವ್ಯಾಸಂಗ ಮುಗಿಸಿ ಮನೆಗೆ ಮರಳಿ ಬರುವವಳಿದ್ದಳು. ಅವಳನ್ನು ಕರೆತರಲು, ಅಲ್ಲಲ್ಲ ಹೈದರಾಬಾದನ್ನು ಮೊಮ್ಮಗ ಧೀಮಂತನಿಗೆ ತೋರಿಸಲು ಅವನೊಡನೆ ಹೋಗಿದ್ದೆ. ಹೈದರಾಬಾದಿಗೆ ಈ ಹಿಂದೆ ನಾಲ್ಕಾರು ಸಲ ಹೋಗಿದ್ದೆ, ಅಲ್ಲಿ ನಾದಿನಿ ವೀಣಾ ನೆಲೆಸಿದ್ದರಿಂದ. ಹೈದರಾಬಾದನ್ನು ಬೇರೆ ಬೇರೆ ನೋಟಗಳಿಂದ ನೋಡುವ, ಕಂಡದ್ದನ್ನು ಕೊಳ್ಳುವ ಕೊಳ್ಳುಬಾಕತನದ ತವಕದಿಂದ ಸುತ್ತುತ್ತಿದ್ದೆ. ಪಕ್ಷಿಪ್ರೇಮಿಯಾಗಿ ಪರಿವರ್ತಿತಳಾದ ಬಳಿಕ ಬೇರೆ ನೋಟ, ಕೊಳ್ಳುವಾಟ ಬೇಕೆನಿಸುತ್ತಿರಲಿಲ್ಲ. ಏನೇನನ್ನೋ ಕೊಳ್ಳುವ ಆಸೆಗಳು ಇಂಗಿಹೋಗಿ ಏನಿದ್ದರೂ ಫೋಟೋಗ್ರಫಿಗೆ ಸಂಬಂಧಿಸಿದಂತೆ ಮಾತ್ರ ಕೊಳ್ಳುತ್ತಿದ್ದೆ. ಈ ಸಲ ಹೈದರಾಬಾದಿಗೆ ಹೋದಾಗ ಕೊನೆಯ ಪಕ್ಷ ಅಮೀನ್‌ಪುರ ಕೆರೆಗಾದರೂ ಹೋಗಬೇಕೆಂ ಎಂಬ ಆಸೆ ಇತ್ತು. ಮಗಳೂ ಕರೆದುಕೊಂಡು ಹೋಗುತ್ತೇನೆಂದಿದ್ದಳು. ಧೀಮಂತ್ ಆರೋಗ್ಯ ತಪ್ಪಿದ್ದರಿಂದ ಕೆರೆಯ ಕರೆಯನ್ನು ಪೂರೈಸಲಿಲ್ಲ. ರಾಮೋಜಿ ಸ್ಟುಡಿಯೋಗೆ ಹೋಗಿದ್ದಾಗ ಸಾಕಿದ ಪಕ್ಷಿಗಳನ್ನು ನೋಡಿ, ಅದನ್ನೇ ಒಂದೆರಡು ಪಟ ಕ್ಲಿಕ್ಕಿಸಿದೆ. ಅದೇ ಬೇಸರದಲ್ಲಿದ್ದಾಗ ಸಿಂಪಿಗ ಬಂದದ್ದನ್ನು ನೋಡಿ ಸಮಾಧಾನಿಸಿಕೊಂಡೆ.

ಹೈದರಾಬಾದಿನಿಂದ ಮರಳಿದ ರಶ್ಮಿ ಬೆಂಗಳೂರಿನ ನಿಮ್ಹಾನ್ಸಿನಲ್ಲಿ ಅಧ್ಯಯನ ಮುಂದುವರೆಸಲು ಹೋಗುವವಳಿದ್ದಳು. ಅದಕ್ಕೆ ಮುನ್ನ ಕೆಲವು ದಿನಗಳ ಬಿಡುವಿತ್ತು. ಅವಳ ಹಿಂದೆ ಮುಂದೆ ತಿರುಗುತ್ತಾ ಬೇಡಿಕೆ ಸಲ್ಲಿಸತೊಡಗಿದೆ. ಎಲ್ಲಾದರೂ ಹೊರಗೆ ಹೋಗೋಣ… ಅಮ್ಮಾ ಕೇಳುತ್ತಿದ್ದಾಳೆಂದು ಬೇಡಿಕೆಗೆ ಮನ್ನಣೆ ಇತ್ತಳು. ಎಲ್ಲಿಗೆ ಹೋಗಬೇಕೆಂಬ ಆಯ್ಕೆಯ ಸಮಸ್ಯೆ ಎದುರಾಯಿತು. ಹಸಿದವರ ಮುಂದೆ ತಟ್ಟೆ ತುಂಬಾ ನಾನಾ ನಮೂನೆಯ ಭಕ್ಷ್ಯಗಳನ್ನಿರಿಸಿ ಒಂದನ್ನು ಮಾತ್ರ ಆರಿಸಿಕೋ ಎಂದರೆಷ್ಟು ಕಷ್ಟ. ನಾನೂ ಅಂತಹುದ್ದೇ ಪರಿಸ್ಥಿತಿಯಲ್ಲಿ ನಾನಿದ್ದೆ. ಆದರೂ ಒಂದು ಸ್ಥಳದ ಆಯ್ಕೆ ಅನಿವಾರ್ಯವಾಗಿತ್ತು. ಹತ್ತಿರದ್ದೋ ದೂರದ್ದೋ’ ಮಗಳನ್ನು ಕೇಳಿದೆ.ಎಲ್ಲಿಗಾದರೂ ಸರಿ, ಜಾಗ ನಿಮ್ಮ ಆಯ್ಕೆ. ನಿಮ್ಮ ಜೊತೆ ಬರುತ್ತೇನೆ’ ಎಂದಳು. ಅನ್ಯ ರಾಜ್ಯದ ಸ್ಥಳದ ಆಯ್ಕೆಗೆ ಮನಸ್ಸು ಒತ್ತಡ ಹಾಕುತ್ತಿತ್ತು. ಕೇರಳದ ತಟ್ಟೆಕಾಡಿನ ಆಕರ್ಷಣೆ ಇತ್ತು. ಕೊಚ್ಚಿನ್‌ಗೆ ಹೋಗಿ ಅಲ್ಲಿಂದ ತಟ್ಟೆಕಾಡಿಗೆ ಹೋಗಬೇಕಿತ್ತು. ಎಲ್ಡೋಸ್‌ರನ್ನು ಕೇಳಿದ್ದಕ್ಕೆ ಸಧ್ಯಕ್ಕೆ ಸಾಧ್ಯವಿಲ್ಲ ಎಂಬ ನಕಾರದ ಉತ್ತರ ಸಿಕ್ಕಿತು. ಪರಿಚಿತರು `ಸೀಜ಼ನ್ ಅಲ್ಲ, ಯಾಕೆ ಹೋಗ್ತೀರಿ’ ಎಂದರು. ಅಲ್ಲಿಗೆ ಹೋಗದಿದ್ದರೂ ಬೇರೆಡೆ ಹೋಗುವುದನ್ನು ನಿಲ್ಲಿಸಲು ಮನಸ್ಸು ಒಪ್ಪುತ್ತದೆಯೇ. ಮತ್ತೆ ಬೇರೆ ಆಯ್ಕೆಯ ಪ್ರಶ್ನೆ ಎದುರಾಯಿತು.

ಉತ್ತರಾಖಂಡದ ಸಾತ್ತಾಲಿನ ಹಕ್ಕಿಗಳ ಬಗ್ಗೆ ಪದೇ ಪದೇ ಕೇಳಿದ್ದೆ. ಗಣೇಶಗುಡಿಯ ಟೂರಿನ ಸಹಯಾತ್ರಿ ಮಮತಾ ರಾವ್ `ಒಂದೇ ಟೂರಿನಲ್ಲಿ ಕನಿಷ್ಠ 70 ವಿವಿಧ ಹಕ್ಕಿಗಳ ಫೋಟೊ ತೆಗೆಯಬಹುದೆಂದು’ ಹೇಳಿ ಆಸೆಯ ಭವ್ಯಮಹಲು ಕಟ್ಟಿಸಿದ್ದರು. ಸಾತ್ತಾಲಿನಲ್ಲಿ ಹಲವರು ತೆಗೆದ ಚಿತ್ರಗಳು ಮನದಲ್ಲಿ ಮನೆ ಮಾಡಿದ್ದವು. ಉತ್ತರಾಖಂಡ ಎಲ್ಲಿದೆ, ಸಾತ್ತಾಲ್ ಎಲ್ಲಿದೆ ಎನ್ನುವುದನ್ನೂ ನಕ್ಷೆಯಲ್ಲಿಯೂ ನೋಡಿರಲಿಲ್ಲ. ದೂರವೆಷ್ಟು ಎನ್ನುವದೂ ಮೊದಲೇ ಗೊತ್ತಿರಲಿಲ್ಲ. ಪ್ರಯತ್ನಿಸಿದ್ದರೆ ಸಾತ್ತಾಲಿಗೆ ಹೋಗೋದು ಸಮಸ್ಯೆ ಆಗಿರಲಿಲ್ಲ. ಸಾತ್ತಾಲಿನಿಂದ ಮೂವತ್ತು ಕಿ.ಮೀ ದೂರದ ಹಲ್ದ್ವಾನಿಯ ಮೆಡಿಕಲ್ ಕಾಲೇಜಿನಲ್ಲಿ ತಂಗಿಯ ಮಗ ಡಾ.ಸ್ವರೂಪ್ ಬೋಧಕ ವೈದ್ಯನಾಗಿದ್ದ. ತಂಗಿ ಹೋದಾಗ ಜೊತೆಯಲ್ಲಿ ಹೋಗಬಯಸಿದರೂ ಸಾಧ್ಯವಾಗಿರಲಿಲ್ಲ. ಅವಳು ಅಲ್ಲಿಗೆ ಹೋಗಿದ್ದಾಗ ತಾನು ನೋಡಿದ ಬಣ್ಣಬಣ್ಣದ ಹಕ್ಕಿಗಳ ಬಗ್ಗೆ ಹೇಳಿ ಹೇಳಿ ಸಾತ್ತಾಲಿನ ಆಸೆಯನ್ನು ಹೆಚ್ಚಿಸಿದ್ದಳು.

ಸಾತ್ತಾಲ್ ಹೇಗಿದೆ ಎನ್ನುವ ಕಲ್ಪನೆಯೆ ಇರದ ನನಗೆ ಒಂದು ಸಲ ಸತ್ತಾಲಿಗೆ ಹೋಗಿಬಿಟ್ಟರೆ ಸಾಕು, ಹಕ್ಕಿಗಳ ಚಿತ್ರ ತೆಗೆಯಬಹುದು ಎಂದುಕೊಂಡಿದ್ದೆ. ಹುಂಬತನ ಅಂದರೆ ಹೀಗೂ ಇರಬಹುದೆ! ಹೋಗಿ ನೋಡಿ ಅರಿತ ಮೇಲೆ ತಾನೆ ವಾಸ್ತವದ ಅರಿವಾಗುವುದು. ನವೀನ್‌ರಾಜರಿಂದ ಸಾತ್ತಾಲಿನ ನಂಬರ್ ಪಡೆದು ಫೋನ್ ಮಾಡಿದರೆ ಮಾತನಾಡಿದ್ದು ಹಕ್ಕಿ ಟೂರ್ ಆಯೋಜಿಸುವ ಖುಷ್ಬೂ. ನಮ್ಮ ಬಿನ್ನಹ ಕೇಳಿ ಒಂದು ದಿನದಲ್ಲೇ ದಿನ ಹೊಂದಾಣಿಕೆ ಮಾಡಿಕೊಟ್ಟರು. ಮನಸ್ಸು ಹಕ್ಕಿಗಿಂತ ಹಗುರಾಗಿ ಹಾರಿತು.

ಸಾತ್ತಾಲ್ ಅಥವಾ ಸಾತ್ ತಾಲ್ ಅಂದರೆ “ಏಳು ಸರೋವರಗಳು” ಎಂದರ್ಥ. ನೈನಿತಾಲಿನಿಂದ 22 ಕಿ.ಮೀ ದೂರದಲ್ಲಿದೆ. ದೆಹಲಿಯಿಂದ ಸಾತ್ತಾಲ್‌ಗೆ 330 ಕಿಮೀ ದೂರ. 6-7 ಗಂಟೆಗಳಲ್ಲಿ ತಲುಪಬಹುದು. ಅವಸರದಲ್ಲಿ ಹೊರಟಿದ್ದರಿಂದ ವಿಮಾನ ಪ್ರಯಾಣವೆಚ್ಚ ದುಬಾರಿಯಾದರೂ ಹೋಗಲು ಅಡ್ಡಿಯಾಗಲಿಲ್ಲ. ದೆಹಲಿಯಿಂದ ಕಾತಗೋದಾಮಿಗೆ ಬೆಳಿಗ್ಗೆ ಆರು ಗಂಟೆಗೆಯೆ ರೈಲಿದ್ದುದ್ದರಿಂದ ದೆಹಲಿಗೆ ಹಿಂದಿನ ದಿನವೇ ಹೋಗಿ ಉಳಿಯಬೇಕಿತ್ತು. ರೈಲ್ವೆನಿಲ್ದಾಣದ ಸಮೀಪದ ಹೊಟೇಲಿನಲ್ಲಿ ರೂಂ ಕಾಯ್ದಿರಿಸಿ ದೆಹಲಿ ತಲುಪಿದೆವು. ಕಾತಗೋದಾಮಿನಿಂದ ದೆಹಲಿಗೆ ಹಿಂತಿರುಗುವ ರೈಲಿಗೆ ರಿಸರ್ವ್ ಪಟ್ಟಿಯಲ್ಲಿದ್ದೆವು. ರಾಷ್ಟ್ರಪತಿ ಭವನದಲ್ಲಿ ಕೆಲಸದಲ್ಲಿದ್ದ ನನ್ನೂರಿನ ಬಂಧುವಿಗೆ ಕೋರಿಕೆ ಸಲ್ಲಿಸಿಯೂ ಖಚಿತವಾಗಲಿಲ್ಲ. ಬರುವುದಂತೂ ಬಂದಾಯಿತು. ಮರಳುವ ವಿಚಾರ ನಂತರ ನೋಡೋಣವೆಂದು ಕಾತಗೋದಾಂ ರೈಲು ಹತ್ತಿದೆವು. ಆರೂವರೆ ಗಂಟೆ ಪ್ರಯಾಣಿಸಿ ಕಾತಗೋದಾಂ ತಲುಪಿದಾಗ ಮನಸ್ಸಿಗೆ ಉಲ್ಲಾಸ, ಇನ್ನೇನು ಸಾತ್ತಾಲ್ ತಲುಪಿಯೇ ಬಿಡುತ್ತೇವೆಂದು. ರೈಲಿನಲ್ಲಿ ಬಂದಷ್ಟೆ ಸಲೀಸಾಗಿ ಮುಂದಿನ ದಾರಿ ಇರುವುದಿಲ್ಲ ಎಂಬ ಸಣ್ಣ ಸುಳಿವೂ ಇರಲಿಲ್ಲ.

ಸಾತ್ತಾಲಿಗೆ ನಮ್ಮನ್ನು ಕರೆದೊಯ್ಯ ಬಂದ ಬಿಸಿಪ್ರಾಯದ ಸಾರಥಿ ಲಲಿತನಿಗೆ ಕಾರು ತುಂಟು ಕುದುರೆಯಂತಿತ್ತು. ಅವನು ಕಾರು ಚಲಾಯಿಸುತ್ತಿದ್ದ ಎನ್ನುವುದಕ್ಕಿಂತ ನಾಗಾಲೋಟದಲ್ಲಿ ಹಾರಿಸುತ್ತಿದ್ದ ಎನ್ನುವುದೇ ಸೈ. ಆ ಗುಡ್ಡ, ಆ ಇಳಿಜಾರುಗಳಲ್ಲಿ ಹಾರಿ ನೆಗೆಯುತ್ತಿದ್ದ ಆಲ್ಟೋ ಗಾಡಿ ಎಲ್ಲಿ ಉಲ್ಟಾ ಆಗುವುದೋ ಎಂಬ ಭಯದಲ್ಲಿ ಬಾಯಿಗೆ ಬರುತ್ತಿದ್ದ ಜೀವವನ್ನು ಕೈಯಲ್ಲಿ ಹಿಡಿದು ಕೂತಿದ್ದೆವು. ಸರ್‌ಭರ್ ನುಗ್ಗಿಸಿ ಅಂತೂ ಇಂತೂ ಸಾತ್ತಾಲಿಗೆ ತಲುಪಿದ ಅಲ್ಲಲ್ಲ ತಲುಪಿಸಿದ. ಆದರೆ ನಮ್ಮ ನೆಲೆ ಸೂರ್ಯಗಾವ್ ಆಗಿತ್ತು. ಅಲ್ಲಿಗೂ ತಲುಪಿದ್ದಾಯಿತು. ನಂತರದ ನನ್ನ ಬಹುತೇಕ ಹಕ್ಕಿ ಪಯಣಗಳ ಆಯೋಜಕರಾದ ರಾಹುಲ್, ಖುಷ್ಬೂ ಆತ್ಮೀಯವಾಗಿ ಸ್ವಾಗತಿಸಿದ್ದು ನಮ್ಮ ಮುಂದಿನ ಪಯಣಗಳಿಗೆ ಅಡಿಪಾಯವಾಗಿತ್ತು. ಅವರಿಬ್ಬರೂ ಹಕ್ಕಿಗಳ ಒಲವಿನಿಂದಾಗಿ ದೆಹಲಿಯಲ್ಲಿನ ಐ.ಟಿ ವೃತ್ತಿ ತೊರೆದು ಸಾತ್ತಾಲಿನಲ್ಲಿ ನೆಲೆಸಿದ್ದರು. ಮಾಡುವುದು ವ್ಯವಹಾರವಾದರೂ ಆತ್ಮೀಯತೆಯ ಸ್ಪರ್ಶವಿದ್ದಲ್ಲಿ ಪ್ರಯಾಣಗಳ ಕಡೆಗೆ ಮತ್ತೆ ಸೆಳೆತ. ಭಿನ್ನಾಭಿಪ್ರಾಯಗಳೂ ಏಳಬಹುದು. ಖಂಡಿತಾ ಏಳುತ್ತವೆ. ಆಲೋಚನಾ ಲಹರಿಗಳಲ್ಲಿ ವ್ಯತ್ಯಾಸವೂ ಇರಬಹುದು. ಆದರೂ ಪ್ರೀತಿ ವಿಶ್ವಾಸದ ಎಳೆಗಳು ಯಾರೂ ಪರಿಚಿತರಿಲ್ಲದ ಊರುಗಳಲ್ಲಿ ಪರಭಾಷೆಯ ಸಂಪರ್ಕವಿರದ ನನಗೆ ನನ್ನ ಹರಕುಮುರುಕು ಭಾಷಾಪ್ರಯೋಗದಲ್ಲಿ ಈ ಸಂಬಂಧವನ್ನು ಇಂದುತನಕ ಉಳಿಸಿಕೊಂಡಿರುವೆ. ನಮ್ಮ ದೇಶದ ನಾಲ್ಕೂ ದಿಕ್ಕುಗಳಲ್ಲಿ ಅವರೊಡನೆ ಸಂಚರಿಸಿರುವೆ. ಆಪತ್ತಿನಲ್ಲಾದ ನಂಟರೂ ಆಗಿದ್ದಾರೆ. ಅಮ್ಮಾ ಎನ್ನುವ ಅವರೊಡನೆ ಅಂದು ಹುಟ್ಟಿದ ಸಂಬಂಧ ಸದಾ ಹಸಿರಾಗಿದೆ.

ಗಾಡಿಯಿಳಿದ ಕೂಡಲೆ ಬ್ಯಾಗು ಕೋಣೆಯಲ್ಲಿರಿಸಿ ಕ್ಯಾಮೆರಾ ಕೈಗೆತ್ತಿಕೊಂಡೆ, ಆಸುಪಾಸಿನಲ್ಲಿ ಕಣ್ಣಾಡಿಸಿದೆ. ಕೊಠಡಿಯ ಮುಂದಿನ ಮರದಲ್ಲಿ ಚೆಸ್ಟ್ನಟ್ ಬೆಲ್ಲಿಡ್ ನಟ್ಹ್ಯಾಚ್ ಕೀಟಕ್ಕೆ ಕಾಟ ಕೊಡುತ್ತಿತ್ತು. ಕ್ಯಾಮೆರಾ ತೋರಿಸಿದೆ. ಅದೇ ಮರದಲ್ಲಿ ಬ್ರೌನ್ ಫ್ರಾಂಟೆಡ್ ಮರಕುಟುಕವೂ ಸಿಕ್ಕಿತು. ದೂರದಲ್ಲಿ ಕೇಳಿದ ಕೂಗಿನೆಡೆಗೆ ಬೀರಿದ ಕಣ್ಣಿನ ದುರ್ಬೀನು ನೋಟಕ್ಕೆ ಸಿಕ್ಕಿದ್ದು ಗ್ರೇಟ್ ಬಾರ್ಬೆಟ್. ಅದೂ ಲೈಫರ್, ಸಿಕ್ಕಿದಂಗೆ ಸಿಕ್ಕಲಿ ಶಿವ ಎಂದು ಕ್ಲಿಕ್ಕಿಸಿದೆ. ಅರ್ಧ ಗಂಟೆಗೆ ಮೂರು ಲೈಫರ್. ಮೂರು ದಿನಗಳಲ್ಲಿ ಇನ್ನೆಷ್ಟು ಸಿಗಬಹುದು! ಲೆಕ್ಕಾಚಾರ ಹಾಕಿದ ಮನಸ್ಸು ಮಂಡಿಗೆ ಸವಿಯಿತು.

ಊಟದ ಬಳಿಕ ಮಧ್ಯಾಹ್ನ ಇವತ್ತು Hideನಲ್ಲಿ ಫೋಟೋಗ್ರಫಿ ಮಾಡಿ ಎಂದು ಸೂರ್ಯಗಾವಿನ ಮತ್ತೊಂದು ಮೂಲೆಗೊಯ್ದರು. ವಸತಿ ತಾಣದ ಎಂಟಡಿ ಇಳಿಜಾರಿಗೆ ಬೆಚ್ಚಿದ್ದ ನಾನು ಅಲ್ಲಿನ 20-25 ಅಡಿಯ ಕಿರಿಯ ಗುಡ್ಡ ಕಂಡು ಕಂಗಾಲಾದೆ. ಖುಷ್ಬೂ `ಹೆದರಬೇಡಿ ಅಮ್ಮಾ ನಾವಿದ್ದೇವೆ’ ಎನ್ನುತ್ತಾ ಕೈಗೆ ಊರುಗೋಲಿತ್ತು ಇನ್ನೊಂದು ಕೈಹಿಡಿದು ನಿಧಾನವಾಗಿ ಮೇಲಕ್ಕೆ ನಡೆಸಿಕೊಂಡು ಹೋದರು. ಮಗಳು ಕ್ಯಾಮೆರಾ-ಟ್ರೈಪಾಡ್ ಹಿಡಿದು ತಂದಳು. ಅಂದು ಶುರುವಾದ ಸಾತ್ತಾಲಿನ ಹಕ್ಕಿಗಳ ದಾಹಕ್ಕಿನ್ನೂ ತಣಿವಿಲ್ಲ. ಸಾತ್ತಾಲಿನಲ್ಲಿ ನನಗೆಷ್ಟು ಹಕ್ಕಿಗಳು ಸಿಕ್ಕಿವೆ ಎನ್ನುವ ಪಟ್ಟಿ ಮಾಡಿಲ್ಲ. ಮಾಡಲು ಮನವಿಲ್ಲ. ಆಸೆ ಪಡುವುದು ಬಂದಾಗ ಐದಾರು ಹೊಸ ಹಕ್ಕಿ ಸಿಗಲಿ. ಚಂದದ ಚಿತ್ರ ಆಗಲಿ ಎಂದು ಮಾತ್ರ.

ಅಂದು ಹೈಡಿನಲ್ಲಿ ಕೂತ ನನಗೆ ಸುಗ್ಗಿಯೋ ಸುಗ್ಗಿ. ನನ್ನ ಪುಳಕಕ್ಕೆ ಹೈಡಿನ ಪಕ್ಕದಲ್ಲಿ ಮರುದಿನ ಮದುವೆ ಇದ್ದುದ್ದರಿಂದ ವಾದ್ಯದ ಹಿಮ್ಮೇಳ ಕೂಡಾ ಜೊತೆಗೂಡಿತ್ತು. ಜೊತೆಗೆ ಮದುವೆ ಮನೆಯ ಕೆಲಸ ಮಾಡುವವರ ಓಡಾಟ-ಮಾತುಕಥೆಗಳೂ ಇದ್ದವು. ಇಷ್ಟು ಗದ್ದಲದ ನಡುವೆ ಹಕ್ಕಿಗಳು ಆಗಮಿಸಿಯಾವೆ ಎಂಬ ಚಿಂತೆಯ ಎಳೆ ಹಾಯ್ದು ಹೋಯಿತು. ರಶ್ಮಿಗೆ ಪುಟ್ಟದೊಂದು ಕ್ಯಾಮೆರಾ ಕೊಟ್ಟು ಚಿತ್ರ ತೆಗೆಯೋ ಎಂದೆ. ಅದು ನಿಮಗೆ ಮೀಸಲೆನ್ನುತ್ತಾ ಸನಿಹದಲ್ಲಿ ಸುತ್ತಾಡಿ ಗಿರಿಸಾಲುಗಳ ನಡುವಣ ಸಾತ್ತಾಲಿನ ಚೆಲುವನ್ನು ಕಣ್ತುಂಬಿಕೊಂಡು, ತನಗೆ ಚಂದ ಎನಿಸಿದ ನಾಲ್ಕಾರು ಚಿತ್ರ ಮಾತ್ರ ಸೆರೆ ಹಿಡಿದಳು. ಹೈಡಿನಲ್ಲಿ ಕುಳಿತ ನನ್ನ ಜೊತೆಗೆ ಇನ್ನೂ ಕೆಲವರಿದ್ದರು. ಅದರಲ್ಲೊಬ್ಬಾಕೆ ದೆಹಲಿಯಿಂದ ಮಗಳನ್ನೂ ಕರೆತಂದ ಅಮ್ಮ. ಮಗಳನ್ನು ಹೈಡಿನಲ್ಲಿ ಇರಿಸಿಕೊಳ್ಳ ಬಯಸಿದರೂ ಮಗಳು ಅನಾಸಕ್ತೆ. ಅಮ್ಮನ ಗದರಿಕೆಗೆ ಮಣಿಯದೆ ತನ್ನ ಮೊಬೈಲಿನಲ್ಲಿ ಮಗ್ನಳಾದಳು.

ನಾನು ಕ್ಯಾಮೆರಾಕ್ಕೆ ಕಣ್ಣು ಕೀಲಿಸಿದೆ. ಅಲ್ಲಿರಿಸಿದ್ದ ಹಣ್ಣು ಆಹಾರ ನೀರಿನಾಸೆಗೆ ಹಕ್ಕಿಗಳು ಬರಲಾರಂಭಿಸಿದವು. ಒಂದು ಹಕ್ಕಿಯಂತೂ ಪುನಃ ಪುನಃ ಪಪಾಯಿಗೆ ಬಾಯಿ ಹಾಕುತ್ತಿದ್ದುದು ಕಂಡು ಮಗಳು ಪಪಾಯಿಪ್ರಿಯ ಎಂದೇ ನವನಾಮಕರಣಿಸಿದಳು. ಬಂದ ಬಹುಪಾಲು ಹಕ್ಕಿಗಳು ಲೈಫರ್ ಆಗಿದ್ದವು. red billed magpie, grey tree pie, rufous chinned laughing thrush, russet sparrow, himalayan bulbul, grey oriental turtle dove, black headed jay, grey bush chat (male-female), white browed fantail flycatcher, Yellow breasted green finch… ಅದುವರೆಗೂ ಕಾಣದಿದ್ದ ಬಣ್ಣ ವಿನ್ಯಾಸದ ಹೊಸ ಹಕ್ಕಿಗಳು ಕ್ಯಾಮೆರಾಕ್ಕೆ ಬಿಡುವು ಕೊಡಲಿಲ್ಲ. ಬನ್ನಿ ಹಕ್ಕಿಗಳೆ, ನನ್ನೆದೆಗೆ ಬನ್ನಿ ಎನ್ನದೆ, ಬನ್ನಿ ನನ್ನ ಕ್ಯಾಮೆರಾದೊಳಕ್ಕೆ ಬನ್ನಿ ಎಂದು ಸೇರಿಸಿಕೊಂಡೆ. ಬಿಸಿಲಿನ ಝಳ ಹೆಚ್ಚಿತ್ತು. ಬಹುಶಃ ಕೆಲವು ಚಿತ್ರ ಚೆನ್ನಾಗಿ ಬಂದಿರಲ್ಲ ಎನಿಸಿದರೂ ತಲೆ ಬಿಸಿ ಮಾಡಿಕೊಳ್ಳದೆ ಸೆರೆ ಹಿಡಿದಿದ್ದೆ. ಮಬ್ಬು ಕವಿದು ಕ್ಯಾಮರಾಕ್ಕೆ ಕ್ಯಾಪ್ ಹಾಕಿ ಪ್ಯಾಕಪ್. ಅಂದಿನ ಕಥೆ ಮುಗಿದು ಕೋಲೂರುತ್ತಾ ಕೆಳಗಿಳಿದು ಮೂಲನೆಲೆಗೆ ಮರಳಿದೆವು.

ಕೊಠಡಿಯತ್ತ ಬಂದ ಖುಷ್ಬೂ-ರಾಹುಲ್ ಬೆಳಿಗ್ಗೆ ಬೇಗ ಸ್ಟುಡಿಯೋಗೆ ಹೋಗೋಣ ಸಿದ್ಧವಾಗಿರಿ ಎಂದು ಸೂಚನೆಯಿತ್ತರು. ತಲೆಯಲ್ಲಿ ಒಂದೇ ಸಮನೆ ಗುಯ್‌ಗುಯ್ ಗಾನ. ಸ್ಟುಡಿಯೋನೆ, ಏನು ಹಕ್ಕಿ ಫೋಟೋ ತೆಗೆಯಲು ಸ್ಟುಡಿಯೋ ಬೇರೆ ಇದೆಯೆ? ಯಾಕೆ ಈ ಹೆಸರು ಇಟ್ಟಿದ್ದಾರೆ? ಹಕ್ಕಿಗಳೆಲ್ಲಾ ಅಲ್ಲಿಗೆ ಬರುತ್ತವೆಯೇ? ಕಾಡುವ ಆಲೋಚನೆಗಳಿಗೆ ಉತ್ತರವಿರಲಿಲ್ಲ. ಬೆಳಿಗ್ಗೆ ರಾಹುಲ್ ಹೇಳಿದ್ದ ಸಮಯಕ್ಕೆ ಸಿದ್ಧರಾಗಿ ಕುಳಿತೆವು. ತಡ ಮಾಡಿದ ರಾಹುಲನತ್ತ ಬೀರಿದ ಪ್ರಶ್ನೆಯ ನೋಟಕ್ಕೆ ಹಕ್ಕಿಗಳು ಬರುವ ಸಮಯವಾಗಿಲ್ಲವೆಂದ. ನಂತರ ಸ್ಟುಡಿಯೋಕ್ಕೆ ಹೊರಟ ಗಾಡಿಯನ್ನು ಸಾತ್ತಾಲ್ ಲೇಕಿನ ಬಳಿ ನಿಲ್ಲಿಸಿ ಇಳಿಸಿದರು. ಸುತ್ತಮುತ್ತ ನೋಡಿದೆ, ಸತ್ತಾಲ್ ಲೇಕಿನಲ್ಲಿ ದೋಣಿಯಾಟ… ದೋಣಿಯಾಟ. ಎಲ್ಲಿ ನೋಡಿದರೂ ನೀರಿಗಿಳಿದವರ ಸಂಭ್ರಮ. ಇದಾ ಸ್ಟುಡಿಯೋ ತಲೆಕೆಟ್ಟು ದಿಗ್ಭ್ರಾಂತಳಾದೆ.

ರಾಹುಲ್ ಹೊರಟ, ಹಿಂಬಾಲಿಸಿದೆವು. ಎಲ್ಲಿಗೆ ಎಂದಿದ್ದಕ್ಕೆ ಸ್ಟುಡಿಯೋಗೆ ಎಂದು ಕೆಳಗಿಳಿಯಲಾರಂಭಿಸಿದ. ಮೆಟ್ಟಿಲುಗಳೋ ಒಂದೊಂದು ಒಂದಡಿಗಿಂತ ಎತ್ತರೆತ್ತರ. ಹತ್ತಿಪ್ಪತ್ತು ಮೆಟ್ಟಿಲ ತನಕ ಒಂದು ಬದಿಯಲ್ಲಿ ಕಬ್ಬಿಣದ ಗ್ರಿಲ್ ಇತ್ತು. ನಂತರ ಗ್ರಿಲ್ ಇದ್ದುದ್ದಕ್ಕೆ ಸಾಕ್ಷಿಯಾಗಿ ಕಂಬಿ ಕೆಳಗೆ ಬಿದ್ದಿದ್ದವು. ಗ್ರಿಲ್ ಇದ್ದ ಕಡೆ ಹಿಡಿಯಹೋದರೆ ತುರಿಕೆ ಸೊಪ್ಪು. ಅದರ ನವೆ ತಾಸುಗಟ್ಟಲೆ ಬೇರೆ. ರಾಹುಲ್ `ಇದು Antibiotics ತರಹ ಕೆಮ್ಮು, ನೆಗಡಿಗಳಿಗೆ ಒಳ್ಳೆಯದೆಂದ.’ ನಮ್ಮಿಬ್ಬರಿಗಾಗ ನೆಗಡಿ ಕೆಮ್ಮು ಕಾಡುತ್ತಿರಲಿಲ್ಲ. ಆದ್ದರಿಂದ ಜೋಪಾನವಾಗಿ ನೋಡುತ್ತಾ ಮಗಳ ಭುಜದಾಸರೆ ಪಡೆದು ನಿಧಾನವಾಗಿಳಿದು ಮೆಟ್ಟಿಲ ಸಂಖ್ಯೆ ಕಡಿಮೆ ಮಾಡಿದೆ. ರಾಹುಲ್ ತಿರುತಿರುಗಿ ನೋಡಿ ಬರುತ್ತಿರುವುದನ್ನು ಖಚಿತ ಪಡಿಸಿಕೊಂಡು ಮುಂದೆ ಹೋಗುತ್ತಿದ್ದ. ಮೆಟ್ಟಿಲು ಇಳಿದ ಕಿರುದಾರಿಯಲ್ಲಿ ಕಸರತ್ತು ಮಾಡಿ ಮುನ್ನಡೆದರೆ ಕಾಲಿಡಲೂ ಕಷ್ಟವಿದ್ದ ಹತ್ತಿಪ್ಪತ್ತು ಮೆಟ್ಟಿಲುಗಳಿಂದ ಕೆಳಗಿಳಿದರೆ ಕಿರುಹಳ್ಳ. ಒಂದಷ್ಟು ದೂರ ಪೊದೆ, ಗಿಡ, ಮರ, ಕೊನೆಗೆ ಪಾಚಿ. ಕೊನೆಗೂ ನಡಿಗೆ ನಿಲ್ಲಿಸಿದಾಗ ರಾಹುಲ್ ಇದೇ ಸ್ಟುಡಿಯೋ ಎಂದ.

ಎಂತಹ ಜಾಗವಪ್ಪ ಇದು! ಒಂದು ಕಟ್ಟಡವಿಲ್ಲ. ಇದಕ್ಕೇಕೆ ಸ್ಟುಡಿಯೋ ಎನ್ನುತ್ತಾರೆಂದು ನೋಡಿದೆ. ಸಣ್ಣ ಹಳ್ಳ ಇತ್ತು. ಸರೋವರದ ಪಕ್ಕದ ಇಳಿಜಾರಿನ ಸಣ್ಣ ಜಾಗ. ದಟ್ಟ ಪೊದೆ ಮತ್ತು ಎತ್ತರದ ಮರಗಳಿವೆ. ಹಣ್ಣು ಮತ್ತು ಕೀಟ ತಿನ್ನಲು ಬರುವ ಹಕ್ಕಿಗಳು ಸೂರ್ಯ ಮೇಲೇರುತ್ತಿದ್ದಂತೆ ನೀರು ಕುಡಿಯಲು ಮತ್ತು ಸ್ನಾನ ಮಾಡಲು ಬರುತ್ತವೆ. ನೀರಿಗಿಳಿಯುವ ಮುನ್ನ ಅಕ್ಕಪಕ್ಕದಲ್ಲಿ ಹಾಕಿದ ಪರ್ಚಿಗೆ ಬಂದು ಅಲ್ಲಿಂದ ಹಾರಿ ನೀರಿಗಿಳಿದು ನಂತರ ಮತ್ತೆ ಪರ್ಚಿಗೆ ಬಂದು ಹನಿಗಳನ್ನು ಒದರಿ ಹಾರಿ ಹೋಗುತ್ತವೆ. ಕೆಲವು ಹಕ್ಕಿ ಮೂರ್ನಾಲ್ಕು ಸಲ ಬಂದು ಹೋದರೆ ಕೆಲವು ಒಂದೇ ಸಲಕ್ಕೆ ಮಿಂಚಿನಂತೆ ಮಾಯವಾಗುತ್ತವೆ.

ಸಾತ್ತಾಲ್ ಸ್ಟುಡಿಯೋ ಪಕ್ಷಿಪ್ರೇಮಿಗಳ ಪಕ್ಷಿಕಾಶಿ. ಕೆಲವೇ ಮೀಟರ್ ದೂರದಲ್ಲಿ ತಮ್ಮ ಕ್ಯಾಮೆರಾವನ್ನು ಟ್ರೈಪಾಡಿಗೆ ಹೊಂದಿಸಿಕೊಂಡು ಬಕಪಕ್ಷಿಗಳಂತೆ ಕಾಯ್ದು ಕುಳಿತ ಪಕ್ಷಿ ಛಾಯಾಗ್ರಾಹಕರು. ಪರ್ಚ್‌ಗಳ ಮೇಲೆ ಇಳಿಯುವ ಪ್ರತಿಯೊಂದು ಹಕ್ಕಿಗಳ ಓಡಾಟ ಹಾರಾಟಕ್ಕೆ ತಕ್ಕಂತೆ ಕ್ಯಾಮೆರಾ ಫೋಕಸ್ ಸೆಟ್ಟಿಂಗ್‌ಗಳನ್ನು ಹೊಂದಿಸಿ ಕ್ಲಿಕ್ಕಿಸುವುದರಲ್ಲಿ ತನ್ಮಯರು. ಆ ಪಕ್ಷಿಗಳೋ ಕಾಯುವವರಿಗೆ ಪೋಸ್ ಕೊಡಲು ಬಂದಿವೆಯೋ ಎನ್ನುವಂತೆ ಭಂಗಿ ನೀಡುತ್ತವೆ. ಮಾತಿಲ್ಲದೆ ಕುಳಿತರೆ ಹಕ್ಕಿಗಳು ಕಾಣುತ್ತವೆ. ನಾನು… ನಾನೂ ಅಲ್ಲಿಯೇ ಕುಳಿತೆ. ಅವರು ನೋಡುತ್ತಿದ್ದ ಕಡೆಗೆ ನನ್ನ ನೋಟವನ್ನೂ ಬೀರುತ್ತಾ ಕ್ಯಾಮೆರಾ ಹೊಂದಿಸಿಕೊಂಡೆ, ರೆಡಿಯಾದೆ. ಬಿಸಿಲಿನ ಝಳ ಏರುವವರೆಗೂ ಅಲ್ಲೇ ಠಿಕಾಣಿ. ಆಗಾಗ್ಗೆ ಬಿಡುವು ಕೊಡುತ್ತಾ ಒಂದಲ್ಲ ಒಂದು ಹಕ್ಕಿ ಬರುತ್ತಿತ್ತು. ಒಂಟಿಯಾಗಿ ಇಲ್ಲವೆ ಗುಂಪಿನಲ್ಲಿ ಬಂದು ನೀರು ಕುಡಿದು, ಮಜ್ಜನಿಸಿ ಹೋಗುತ್ತಿದ್ದವು. ಅಲ್ಟ್ರಾ ಮೆರೀನ್ ಫ್ಲೈಕ್ಯಾಚರ್ (ಗಂಡು-ಹೆಣ್ಣು), ಬ್ಲೂ ವಿಂಗ್ಡ್ ಶಿವ, ಟಿಕೆಲ್ಸ್ ಥ್ರಶ್, ಗ್ರೇ ಹುಡೆಡ್ ವಾರ್ಬ್ಲರ್, ಗ್ರೇ ಹೆಡೆಡ್ ಕ್ಯಾನರಿ ಫ್ಲೈಕ್ಯಾಚರ್, ಕೆಂಪು ಕೊಕ್ಕಿನ ಲಿಯೋಥ್ರಿಕ್ಸ್, ಬಿಳಿಗೊರಳಿನ ಹರಟೆಮಲ್ಲ, ಸ್ಕಾರ್ಲೆಟ್ ಮಿನಿವೆಟ್, ಹಿಮಾಲಯನ್ ಬ್ಲ್ಯಾಕ್ ಲೋರ್ಡ್ ಟಿಟ್, ನೀಲಿ ವಿಷಲಿಂಗ್ ಥ್ರಶ್ ಹೀಗೆ ಹಕ್ಕಿಗಳು… ಬರುತ್ತಿದ್ದವು. ಎಲ್ಲಾ ಹೊಸ ಹೊಸ ಹಕ್ಕಿಗಳೆ ನನಗೆ. ಮೇ ತಿಂಗಳ ಬಿಸಿಲಿಗೆ ನೀರಿಗೆ ಬೀಳುತ್ತಿದ್ದವು. ವರ್ಡೀಟರ್ ಫ್ಲೈ ಕ್ಯಾಚರ್, ಬೆಳ್ಗಣ್ಣವೂ ಹಾಜರಾತಿ ಹಾಕುತ್ತಿತ್ತು. ಒಂದೆರಡು ಸಲ asian paradise flycatcher ಹೆಣ್ಣು ಕಣ್ಣ ಮುಂದೆ ಮೋಹಕ ಲೋಕ ತೆರೆದಳು. ಎಲ್ಲರ ಕ್ಯಾಮೆರಾಗಳಿಂದ ಕ್ಲಿಕ್ ಸದ್ದಿನ ವಿನಾ ಮತ್ತೇನಿಲ್ಲ. ಬಿಸಿಲೇರಿದಂತೆ ಹಕ್ಕಿಗಳ ಸಂಖ್ಯೆ ಇಳಿಮುಖವಾಗಿ ರಾಹುಲ್ ಅಲ್ಲಿಂದ ಏಳಿಸಿ ಹೊರಡಿಸಿದ.

ಮೆಟ್ಟಿಲು ಹತ್ತಿ ಸರೋವರದ ಎದುರಿನ ಮರಗಳ ನೆರಳಿನಲ್ಲಿ ಕುಳಿತು ದೋಣಿಯಾಟ ಕಣ್ತುಂಬಿಕೊಳ್ಳುತ್ತಾ ಲೇಕ್ ವ್ಯೂ ರೆಸ್ಟೋರೆಂಟಿನಿಂದ ಬಂದ ನಿಂಬೂಪಾನಿ ಕುಡಿದೆವು. ಸತ್ತಾಲಿನ ಸರೋವರಗಳಲ್ಲಿ ದೋಣಿ ವಿಹಾರದ ಆಕರ್ಷಣೆಯಿಂದ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ನಮಗೆ ಬರಿಯ ಹಕ್ಕಿ ಹುಡುಕಾಟ ಮಾತ್ರ. ಕುಳಿತವಳು ತಲೆಯೆತ್ತಿ ನೋಡಿದರೆ ಮರದ ಮೇಲೆ bar tailed tree creeper ಇತ್ತು. ಕೂಡಲೇ ಕ್ಲಿಕ್ಕಿಸಿದೆ. ಸಂಧಿಯಲ್ಲಿ ಸಿಕ್ಕಿತು speckled piculet.

ಸ್ಥಳೀಯ ಯುವಕನೊಬ್ಬ ಬಂದವನೆ ರಾಹುಲನಿಗೆ ಏನೋ ಹೇಳಿದ. ಕೂಡಲೇ ರಾಹುಲ್ ಸನಿಹದ ಜಾಗಕ್ಕೆ ಕರೆದುಕೊಂಡು ಹೋದ. ಇಲ್ಲೇನು ವಿಶೇಷ ಎಂದದ್ದಕ್ಕೆ broad bill ಬರುತ್ತದೆಂದು ಆಸೆ ಹುಟ್ಟಿಸಿದ. ಕುತೂಹಲದಿಂದ ಕಾಯುತ್ತಿದ್ದಾಗ ಖುಷ್ಬೂ ಪ್ಯಾಕ್ ಮಾಡಿಕೊಟ್ಟಿದ್ದನ್ನು ಖಾಲಿ ಮಾಡಿದೆವು. ರಾಹುಲ್ ಕೈಗಿತ್ತ ಕವರ್ ತೆಗೆದು ನೋಡ್ತೀವಿ, ಕಡ್ಲೇಕಾಯಿಬೀಜ. ಇಷ್ಟ ಪಡುವಂತದ್ದೆ. ಬಾಯಿಗೆ ಹಾಕಿದರೆ ಖಟುಂ, ಖಟುಂ. ಉಪ್ಪಿನಲ್ಲಿ ಬೇಯಿಸಿ ಹುರಿದಿದ್ದ ಗಟ್ಟಿಕಾಳು ಕಾಲ ಕಳೆಯಲು ಒಳ್ಳೆಯ ಸಾಧನ ಆಯಿತು. ಮಧ್ಯೆ ಮಧ್ಯೆ ಬ್ಲ್ಯಾಕ್ ಬುಲ್ಬುಲ್, ಗ್ರೇ ಹೆಡೆಡ್ ವುಡ್ ಪೆಕರ್ ಬಂದವು. ತಾಸು ಕಳೆದ ಬಳಿಕ ಮರಗಳ ಸಂಧಿಯಲ್ಲಿ ತೂರಿಬಂದ ಹಸಿರು ಮೈ, ಹಳದಿ ತಲೆ, ಕಪ್ಪು ಕಿರೀಟ, ನೀಲಿಬಾಲದ ಬ್ರಾಡ್‌ಬಿಲ್ ಟೊಂಗೆಯೇರಿತು. ಏಳೆಂಟು ಜನ ಮಿಷನ್‌ಗನ್ ತರಹ ಕ್ಯಾಮೆರಾದಿಂದ ಚಚ್ಚತೊಡಗಿದರು. ಬ್ರಾಡ್‌ಬಿಲ್ ನೀರಿನಲ್ಲಿ ಮುಳುಗಿ ಮತ್ತೆ ಟೊಂಗೆ ಏರಿತು. ಮತ್ತೊಂದು ರೌಂಡ್ ಷೂಟಿಂಗ್. ರಶ್ಮಿ ಹೇಳಿದಂತೆ ಹೆಲ್ಮಟ್ ತಲೆಯ ಬ್ರಾಡ್‌ಬಿಲ್ ಕನಸು ಕರಗಿದಂತೆ ಹಸಿರ ನಡುವೆ ಕರಗಿಹೋಯಿತು. ಅದೇ ಮೊದಲು ಮತ್ತು ಈತನಕ ಅದೇ ಕೊನೆ, ಮತ್ತೆ ಬ್ರಾಡ್‌ಬಿಲ್ ದರ್ಶನ ಆಗಿಲ್ಲ. ಸಾತ್ತಾಲಿಗೆ ಹೋದಾಗ ಹುಡುಕುತ್ತಲೇ ಇದ್ದೇನೆ. 2019ರ ಡಿಸೆಂಬರಿನಲ್ಲಿ ಒಂದಿಡೀ ಹಗಲು ಹಿಂದೆ ಬ್ರಾಡ್‌ಬಿಲ್ ಸಿಕ್ಕಿದ್ದ ಜಾಗದಲ್ಲೇ ಕುಳಿತು ಕಾಯ್ದರೂ ದರ್ಶನ ಆಗಲಿಲ್ಲ. ಪಶ್ಚಿಮ ಬಂಗಾಳದ ಲಾಟ್ಪಂಚಾರಿನಲ್ಲಿ ಪ್ರಯತ್ನಿಸಿ ವಿಫಲವಾದೆ. ಹೆಲ್ಮೆಟ್ ತಲೆಯ ಮುದ್ದು ಹಕ್ಕಿ ಕ್ಯಾಮೆರಾ ಭೇಟಿಗೆ ಲಭ್ಯವಾಗಬಹುದೆಂಬ ಭರವಸೆ ಉಳಿಸಿಕೊಂಡಿದ್ದೇನೆ. ಎಷ್ಟಾದರೂ ಭರವಸೆಯೇ ಬಾಳಿನ ಬೆಳಕು.

ರಶ್ಮಿ ಹತ್ತಿಪ್ಪತ್ತು ಮೀಟರ್ ಪರಿಧಿಯಲ್ಲೇ ಸುತ್ತಾಡುತ್ತಿದ್ದಳು. ಅಲ್ಲಿ ಸಣ್ಣಪುಟ್ಟ ಬಂಡೆಗಳನ್ನೇ ಬಳಸಿಕೊಂಡು ರಾಕ್ ಕ್ಲೈಂಬಿಂಗ್ ಸಾಹಸ ಕಲಿಸುತ್ತಿದ್ದರು. ಮಗಳದನ್ನು ಕ್ಲಿಕ್ಕಿಸಿಕೊಂಡಳು. ಬ್ರಾಡ್‌ಬಿಲ್ ದರ್ಶನದ ಬಳಿಕ ಸ್ಟುಡಿಯೋಕ್ಕೆ ಮರಳಿ ಇಳಿಯುವ ಸೂರ್ಯನಿಂದಾಗಿ ದಿಕ್ಕು ಬದಲಿಸಿ ಕುಳಿತೆವು. ಗುಂಪಿನಲ್ಲಿ ಬಂದ ಬಿಳಿಗೊರಳಿನ ಹರಟೆಮಲ್ಲ ಬೆಳಿಗ್ಗೆ ಲೈಫರ್ ಆಗಿದ್ದುದು ಈಗ ಬೋರ್ ಎನಿಸಿತು. ಅರೆ ಎಂತವಳು ನಾನು! ವರ್ಡೀಟರ್ ಮೂರ್ನಾಲ್ಕು ಸಲ ಭೇಟಿ ಕೊಟ್ಟಿತು. ಬೆಳ್ಗಣ್ಣ ಮತ್ತೆ ಬಂದಿತು. ಕಿತ್ತಳೆ ಕೊರಳಿನ ನೀಲಿ ನೊಣಹಿಡುಕ ಲೈಫರ್ ಆಯಿತು. ಹಕ್ಕಿಗಳು ಬರಬಹುದೆಂದು ಕಾಯ್ದು ಬೆಂಡಾದೆವು. ರೆಸ್ಟ್ ಲೆಸ್ ರಾಹುಲ್ `ಚಲೋ’ ಎಂದ. ನಾವೂ ಕ್ಯಾಮೆರಾ ಬ್ಯಾಗೇರಿಸಿಕೊಂಡು ಸೂರ್ಯಗಾವಿಗೆ ತಲುಪಿದೆವು.

ಮರುದಿನ ಬೆಳಿಗ್ಗೆ ಖುಷ್ಬೂ ನೈನಿತಾಲ್ ಮಾರ್ಗವಾಗಿ ಪಂಗೋಟ್ ದಾಟಿ ವಿನಾಯಕ್ ಪಾಯಿಂಟ್‌ಗೆ ಒಯ್ದರು. ಚೀರ್‌ಪೆಸೆಂಟ್ ಸಿಗುವ ಆ ತಾಣಕ್ಕೆ ಚೀರ್‌ಪಾಯಿಂಟ್ ಎನ್ನುತ್ತಾರೆ. ಚೀರ್‌ಪೆಸೆಂಟ್ ಕಾಣಸಿಗಲಿಲ್ಲ. ಉತ್ತರದ ಪಟ್ಟಿಯಲ್ಲಿ ಬಾಕಿ ಇರುವ ಈ ಹಕ್ಕಿ ಹಿಡಿಯುವ ಕಾಲಕ್ಕೆ ಕಾಯುತ್ತಿದ್ದೇನೆ. ಖುಷ್ಬೂ ಹೆಜ್ಜೆ ಹಾಕುತ್ತಾ ಹಕ್ಕಿಗಳ ಹೆಸರು ಹೇಳುತ್ತಾ ಉಲಿಗಳ ವೈಶಿಷ್ಟ್ಯದಿಂದ ಗುರುತಿಸಿ ನಮ್ಮ ಗಮನ ಸೆಳೆಯುತ್ತಿದ್ದರು. ಇನ್ನಷ್ಟು ಮೇಲೆ ಹೋಗುತ್ತಿದ್ದಂತೆ ಒಂದೆರಡು ಜಾತಿಯ ಮರಕುಟುಕಗಳು ದರ್ಶನ ಕೊಟ್ಟವು. ಸ್ಪೀಡಾಗಿ ಹೋದ ಖುಷ್ಬೂ ಮರಕುಟುಕ ಕುಟುಕುತ್ತಿದ್ದ ಮರದತ್ತ ಕಣ್ಣಿಟ್ಟು ಬ್ರೇಕ್ ಹಾಕಿದಂತೆ ನಿಂತಿದ್ದರು. ಮರಕುಟುಕ ಮರಗಳನ್ನು ಕುಟುಕಿ ಮಾಡಿದ ಕುಳಿಗಳೂ ಚಂದವಾಗಿದ್ದವು. ಕುಟುಕದ ಜೊತೆ ಪೈಪೋಟಿಯಲ್ಲಿದ್ದವು rufous sibia. ಮರಳುವಾಗ ಚಾಫಿಗೂ ಹೋಗಿದ್ದೆವು. crested kingfisher ದರ್ಶನವಾಯಿತು. ಅಲ್ಲಿಗೆ ಆ ದಿನ ಒಂದರ್ಥದಲ್ಲಿ ಮುಗಿದಂತೆ ಇತ್ತು, ಆದರೆ ಮುಗಿದಿರಲಿಲ್ಲ.

ಸಂಜೆ ಮರಳಿದ ಬಳಿಕ ಖುಷ್ಬೂ ನಮ್ಮ ವಾಸ್ತವ್ಯವನ್ನು ಪಕ್ಕದ ಕೊಠಡಿಗೆ ಬದಲಿಸಲು ವಿನಂತಿಸಿದರು. ಪಕ್ಕದ ಕ್ಯಾಂಪಿಗೆ ಬಂದಿದ್ದ ಮಕ್ಕಳನ್ನು ಆ ರಾತ್ರಿ ನೆಲೆಗೊಳಿಸಲು ಜಾಗದ ಅಗತ್ಯವಿತ್ತು ಅವರಿಗೆ. ಇರುವ ಒಂದು ರಾತ್ರಿ ಎಲ್ಲಿದ್ದರೇನೆಂದು ಪಕ್ಕದ ಕೊಠಡಿಗೆ ನೆಲೆ ಬದಲಿಸಿದೆವು. ಇರುಳು ಇಳಿಯುತ್ತಿದ್ದಂತೆ ಸಾತ್ತಾಲನ್ನೆ ಹೊತ್ತೊಯ್ಯುವಂತೆ ಮಳೆ ಬಿರುಸುಗಾಳಿಯೊಡನೆ ಬಂದಿತು. ಕೊಠಡಿಯ ಬಾಗಿಲು ಒಂದೇ ಸಮನೆ ಗಲಾಟೆ ಮಾಡಿ ಓಪನ್ ಸೆಸೇಂ ಎಂದು ತನ್ನಿಂತಾನೇ ತೆರೆದುಕೊಂಡಿತು. ಬಾಗಿಲು ಮುಚ್ಚಲಾರದೆ ಟೀಪಾಯಿ ಒರಗಿಸಿಟ್ಟರೂ ಸಂಧಿಯಲ್ಲಿ ಹರಿದ ಮಳೆಯಿಂದ ಕೊಠಡಿಯಲ್ಲಿ ಪುಟ್ಟ ಕೊಳವಾಯಿತು. ನೆಲದ ಮಣ್ಣನ್ನೂ ಎಬ್ಬಿಸಿಕೊಂಡು ರಾಡಿ ನೀರು ತುಂಬಿತು. ಛಾವಣಿಯ ಶೀಟುಗಳು ಇನ್ನೇನು ಎದ್ದು ಹಾರಿಯೇ ಹೋಗುತ್ತವೆಂಬಂತೆ ಅಬ್ಬರಿಸುತ್ತಿದ್ದವು. ನಾವಿಬ್ಬರೂ ಹೆದರಿದ ಗುಬ್ಬಿಗಳಂತಿದ್ದ ಹೊತ್ತಿನಲ್ಲೇ ಛತ್ರಿ ಹಿಡಿದು ಬಂದ ರಾಹುಲ್ `ಹೆದರಬೇಡಿ’ ಎಂದು ಕ್ಯಾಂಡಲ್ ಕೊಟ್ಟುಹೋದ. ಕೊನೆಗೆ ಮಳೆಯೇ ಹೆದರಿ ತಟಸ್ಥವಾಯಿತು. ಹನಿ ತೊಟ್ಟಿಕ್ಕುತ್ತಿದ್ದ ಅಂಗಳದಲ್ಲಿ ಊಟ ಮುಗಿಸಿದೆವು, ಮರುದಿನದ ಪ್ಲ್ಯಾನ್ ಸಮೇತ.

ಕಾತಗೋದಾಮಿನಿಂದ ದೆಹಲಿಗೆ ಮರಳುವ ವ್ಯವಸ್ಥೆ ಆಗಲೇ ಇಲ್ಲ. ದೆಹಲಿಯಿಂದ ಬೆಂಗಳೂರಿಗೆ ಸಂಜೆ ಫ್ಲೈಟ್‌ಗೆ ಬುಕ್ ಆಗಿತ್ತು. ರೈಲಿನ ಯೋಚನೆ ಬಿಟ್ಟು ಬಸ್ಸಿಗೆ ಹುಡುಕಾಡಿದಾಗ ಹಲ್ದ್ವಾನಿಯಿಂದ ಬೆಳಿಗ್ಗೆ ಆರು ಗಂಟೆಗೆ ದೆಹಲಿಗೆ ಬಸ್ಸಿತ್ತು. ಹಲ್ದ್ವಾನಿಯಲ್ಲಿದ್ದ ಸ್ವರೂಪನಿಗೆ `ನಾಳೆ ಸಂಜೆ ಹಲ್ದ್ವಾನಿಗೆ ಬರುತ್ತೇವೆ, ಬೆಳಿಗ್ಗೆ ಬಸ್‌ನಿಲ್ದಾಣಕ್ಕೆ ಬಿಟ್ಟುಕೊಡಲು ಸಾಧ್ಯವೆ’ ಎಂದಾಗ ಒಪ್ಪಿದ, ಮನ ನಿರಾಳವಾಯಿತು.

ಮರುದಿನ ರಾಡಿಯಾದ ಸಾತ್ತಾಲ್ ಸ್ಟುಡಿಯೋಕ್ಕೆ ಹೋದೆವು. ಆದರೆ ಬಹುತೇಕ ಹಕ್ಕಿಗಳು ನೀವೇನೊ ಬಂದಿದ್ದೀರಿ, ಆದರೆ ನಾವು ಹೊರಬರುವುದಿಲ್ಲ ಎಂದು ನಾವೆಷ್ಟೇ ದಮ್ಮಯ್ಯ ದತ್ತಯ್ಯ ಎಂದರೂ ಹೊರಬಾರದೆ ಉಳಿದವು. ಪಾಪ ಅಷ್ಟು ದೂರದಿಂದ ಬಂದಿದ್ದಾರಲ್ಲ ಎಂದು ಒಂದೆರಡು ಹಕ್ಕಿಗಳು ಆಗಾಗ್ಗೆ ಬಂದು ಸಮಾಧಾನಿಸಿದವು. ಹೊರಡುವ ದಿನ ಮಧ್ಯಾಹ್ನದಿಂದ ಸಂಜೆಯ ತನಕ ಹೈಡ್ ಫೋಟೋಗ್ರಫಿ ಮಾಡಿದೆವು. ಕ್ಷಣಕ್ಷಣಕ್ಕೂ ಸಮಯವಾಯಿತೆ ಎಂದು ವಾಚ್ ಕಡೆ ನೋಡುತ್ತಾ ಕ್ಲಿಕ್ಕಿಸುತ್ತಿದ್ದೆ. ಮೊದಲ ದಿನ ಬಂದು ಮುಖ ತೋರಿಸಿದ್ದ ಹಕ್ಕಿಗಳೇ ಮತ್ತೂ ಬಂದವು. ಎಲ್ಲಾ ಟೂರಿನಲ್ಲಿಯೂ ಕೊನೆಯ ಕ್ಷಣಗಳು ಟೈಂ ಆಗಿಯೆ ಬಿಟ್ಟಿತಾ, ಇನ್ನೊಂದೆರಡು ಹಕ್ಕಿ ಸಿಗಬೇಕಿತ್ತೆಂಬ ಟೆನ್ಷನ್ ಇದ್ದೇ ಇರುತ್ತದೆ. ಆಸೆಗೆ ಆಕಾಶವೇ ಅವಕಾಶವಲ್ಲವೆ.

ನಲವತ್ತು ಹೊಸ ಹಕ್ಕಿಗಳ ದರ್ಶನ ಪಡೆದದ್ದು ಸಾತ್ತಾಲಿನ ಮೊದಲ ಭೇಟಿಯ ಸೌಭಾಗ್ಯ. ಇಳಿಸಂಜೆಯಲ್ಲಿ ಹಲ್ದ್ವಾನಿ ತಲುಪಿ ಸ್ವರೂಪನ ಮನೆಯಲ್ಲುಳಿದು, ಅವನ ನಳಪಾಕ ಸವಿದೆವು. ಬೆಳಿಗ್ಗೆ ಬೇಗನೆ ಬಸ್ಸೇರಿಸಿ ಬೀಳ್ಕೊಟ್ಟ. ನಾವೂ ದೆಹಲಿ ತಲುಪಿದೆವು. ಬಸ್ಸಿಳಿದು ಎರಡು ಮೆಟ್ರೊ ಬದಲಿಸಿ ಏರ್‌ಫೋರ್ಟ್ ತಲುಪಬೇಕಿತ್ತು. ನನಗದು ಮೊದಲ ಮೆಟ್ರೊ ಪಯಣ. ನಡಿಗೆ ಬಹುತೇಕ ಓಡಿದಂತೆಯೆ ಇತ್ತು. ಕೊನೆಗೆ ಸ್ಟೇಷನ್ ಸೇರಿ ಲಿಫ್ಟ್ ಹತ್ತಿ ಇಳಿದು ಮೆಟ್ರೊ ಏರಿದೆವು.

ಏರಿದ ಮೇಲೆ ನೋಡ್ತೀನಿ, ನನ್ನ ಹೆಗಲಿಗೇರಿದ್ದ ಕೈಚೀಲದ ಬಾಯಿ ತೆರೆದಿದೆ. ಇಟ್ಟಿದ್ದ ದುಡ್ಡು ನಾಪತ್ತೆ. ಪುಣ್ಯಾತ್ಮರು ಒಂದು ಬದಿಯ ಝಿಪ್ ಎಳೆದು ಇನ್ನೂರೈವತ್ತು ರೂಪಾಯಿ ತಮ್ಮದಾಗಿಸಿಕೊಂಡಿದ್ದರು. ಇನ್ನೊಂದು ಜಿಪ್ ಎಳೆದಿದ್ದರೆ ಮೂರೂವರೆ ಲಕ್ಷದ ಲೆನ್ಸ್ ಕ್ಯಾಮೆರಾ ಇದ್ದವು. ಅಳುವುದೋ ನಗುವುದೋ ಹೇಳಿ! ಅದೃಷ್ಟ ದುರದೃಷ್ಟಗಳ ಬಗ್ಗೆ ನಂಬಿಕೆಯೇ ಇರದವಳು ಅವತ್ತಿನಿಂದ ಈ ಬ್ಯಾಗ್ ನನ್ನ ಪಾಲಿಗೆ ಅದೃಷ್ಟದ ಬ್ಯಾಗೆಂದು ಗಟ್ಟಿಯಾಗಿ ನಂಬಿಬಿಟ್ಟೆ. ಅಂದಿನಿಂದ ಇಂದುತನಕದ ನನ್ನ ಎಲ್ಲಾ ಹಕ್ಕಿ ಟೂರುಗಳಿಗೆ ಆ ಬ್ಯಾಗನ್ನು ತಪ್ಪದೆ ಒಯ್ಯುತ್ತೇನೆ. ಆ ಬ್ಯಾಗಿನಲ್ಲೇ ಕ್ಯಾಮೆರಾ ಮತ್ತು 100-400 mm ಲೆನ್ಸ್ ಹಾಕಿಯೇ ಒಯ್ಯುತ್ತೇನೆ. ಅದು ಸಾಧಾರಣವಾದ ಬ್ಯಾಗು. ಬ್ಯಾಗಿನ ತಳದಲ್ಲಿ ಸ್ಪಂಜು ಹಾಕಿರುವ ಕಾರಣ ಕ್ಯಾಮೆರಾ, ಲೆನ್ಸುಗಳಿಗೆ ಸೇಫ್ಟಿ ಎಂದು ಬಳಸುತ್ತೇನೆ. ಕಿತ್ತುಹೋದ ಝಿಪ್ ಮತ್ತೆ ಹಾಕಿಸಿಕೊಂಡು ರಾಜ್ಯ-ಪರರಾಜ್ಯಗಳ ಹಕ್ಕಿ ಪಯಣಗಳಿಗೆ ಇದಕ್ಕೆ ನನ್ನ ಪೇಟೆಂಟ್ ಇದೆ ಎನ್ನುವಂತೆ ಬಳಸುತ್ತಿದ್ದೇನೆ.

ಮರಳಿ ಊರಿಗೆ ಬಂದೆ, ಆದರೆ ಸಾತ್ತಾಲಿನಿಂದ ನನ್ನ ಮನಸ್ಸು ಮರಳಲೇ ಇಲ್ಲ. ಇಂದಿನ ತನಕವೂ ಸಾತ್ತಾಲ್ ನನ್ನನ್ನು ಮೋಹಮಯವಾಗಿ ಕಟ್ಟಿಹಾಕಿದೆ. ಅವವೇ ಹಕ್ಕಿಗಳಾದರೂ ದಿನವಿಡೀ ವಾರವಿಡೀ ಮೈಮರೆಸಿಸಿ ಬೇಸರವಿಲ್ಲದೆ ಕೂರಿಸಿಕೊಂಡಿವೆ. ಮತ್ತೆ ಮತ್ತೆ ಕರೆಯುತ್ತಲೇ ಇವೆ. ಕರೆಯೆ ಕೋಗಿಲೆ ಮಾಧವನ, ಕಾತರ ತುಂಬಿದ ಈ ನಯನ, ಕಾಣಲು ಕಾದಿದೆ ಪ್ರಿಯತಮನ’ ಎಂದು ನನ್ನಾಂತರ್ಯದ ವಾಣಿ ಕೂಗುತ್ತಲೇ ಇದೆ. ನಾನೂ ಆಗಾಗ್ಗೆ ಹಕ್ಕಿ ಗೆಳೆಯರನ್ನು ಕಾಣಲು ಹೋಗುತ್ತಲೇ ಇದ್ದೇನೆ. ಒಂದೋ ಎರಡೋ ಹೊಸ ಹಕ್ಕಿಗಳು ಸಿಗಬಹುದು, ಬಿಡಬಹುದು ಅದು ಮುಖ್ಯವಲ್ಲ, ಇಳಿಯಲಾರದೆ ಹತ್ತಲಾರದೆ ಸಾತ್ತಾಲ್ ಸ್ಟುಡಿಯೋಗೆ ಇಳಿದು ಹತ್ತುತ್ತಲೇ ಇದ್ದೇನೆ. ನನ್ನ ಭಯ ನನಗೆ ಮುಂದಿನ ಸಲ ಎನ್ನುವುದು ಇರುತ್ತದೋ ಇಲ್ಲವೋ ಎಂಬುದು. ಮೊದಲ ಬಾರಿ ಮುದ್ದಿನ ಮಗಳು ಸಾತ್ತಾಲಿಗೆ ಕರೆದುಕೊಂಡು ಹೋಗಿ ದಾರಿ ತೋರಿಸಿಇದೇ ನಿನ್ನ ದಾರಿ ಕಣಮ್ಮ, ನಿನಗೆ ಬೇಕಾದಾಗಲೆಲ್ಲ ಇಲ್ಲಿಗೆ ನೀನೇ ಬಂದು ಹೋಗಬಹುದು’ ಎಂದು well begun is half done ಎಂಬಂತೆ ಮೊದಲ ಸಾತ್ತಾಲ್ ಟೂರಿನ ಮಾರ್ಗದರ್ಶನ ಮಾಡಿದ್ದಳು. ಹಾಗಾಗಿ ಕಾಲ ಮಣಿಸುವವರೆಗೆ ಕಾಲೆಳೆಯುತ್ತಾ ಸಾತ್ತಾಲಿನೆಡೆಗೆ ನನ್ನ ಮೋಹಕ ಪಯಣ ಸಾಗುತ್ತಲೇ ಇದೆ.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

February 5, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: