ಹಂಗೇರಿಯನ್ ಭಾಷೆಯಲ್ಲಿ ಆ ಪದವೇ ಇರುವುದಿಲ್ಲ!

ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ.

। ಕಳೆದ ಸಂಚಿಕೆಯಿಂದ ।

ಈಗ ಒಂದು ವಿಚಿತ್ರ ಸಂದರ್ಭ ಎದುರಾಗಿದೆ! ಅದೇನೆಂದರೆ ಈ ಚಾಪ್ಟರ್ ಅತ್ಯಂತ ಗಂಭೀರವಾದ ಆಶ್ವಿಟ್ಜ಼್ ಬಗ್ಗೆ ಬರೆಯಬೇಕಿತ್ತು. ಆದರೆ ಹಿಂದಿನ ಅಂಕ ಅಪೂರ್ಣವಾಗಿ ಉಳಿದುಬಿಟ್ಟಿದೆ ಪೊಲೋನಿ ಎಂಬ ಕೆಟ್ಟ ಗುರುವಿನ ಆತುರದಿಂದ.

ಅವಳು ನಾವು ನೋಡಿದ ಸ್ಥಳಗಳ ಬಗ್ಗೆ ಹತ್ತು ಮಾರ್ಕ್‌ನ ಪ್ರಶ್ನೆಗೆ ಬೇಕಾಗುವಷ್ಟು ವಿವರ ಹೇಳಿಕೊಡಬೇಕಾದ ಜಾಗದಲ್ಲಿ, ಕೇವಲ ಒಂದು ಮಾರ್ಕ್‌ನಷ್ಟು ಮಾತ್ರ ಪಾಠ ಹೇಳಿ ಮುಗಿಸಿಬಿಟ್ಟಿದ್ದಾಳೆ.

ಉಳಿದ ಒಂಬತ್ತು ಮಾರ್ಕ್‌ನಷ್ಟು ವಿವರಗಳು ನಾನು ಆ ಸ್ಥಳಗಳ ಬಗ್ಗೆ ಪುಸ್ತಕ ಓದುವಾಗ, ಡಾಕ್ಯುಮೆಂಟರಿ ನೋಡುವಾಗ, ಗೂಗಲ್ ತಡಕಾಡುವಾಗ ತಿಳಿದಂಥವು. ಅಷ್ಟು ಆಸಕ್ತಿಕರವಾದ ವಿವರಗಳು ಗೊತ್ತೇ ಆಗದಿದ್ದರೆ ಸರಿ, ಆದರೆ ಗೊತ್ತಾಗಿಯೂ ನಿಮಗೆ ಹೇಳದೇ ಮುಂದೆ ಸಾಗುವುದು ಹೇಗೆ ಎಂಬುದು ನನ್ನ ಈ ಕ್ಷಣದ ಸಮಸ್ಯೆ.

ರಾಶಿರಾಶಿ ವಿವರಗಳು, ಅವುಗಳಲ್ಲಿನ ರೋಚಕತೆ, ನಿಗೂಢತೆ, ಸಾಹಸ, out of the box ಚಿಂತನೆ ಎಲ್ಲವನ್ನೂ ಸಂಕ್ಷಿಪ್ತಗೊಳಿಸಿ ಹೇಳಹೊರಡುತ್ತಿರುವ ನನಗೇ ಅದು ಬೆಟ್ಟದಷ್ಟಿದೆ ಅನ್ನಿಸುತ್ತಿರುವಾಗ ಅದು ಹೇಗೆ ಅಂಥದ್ದನ್ನೆಲ್ಲ ಮೂರು ನಾಲ್ಕು ವಾಕ್ಯಗಳಲ್ಲಿ ಮುಗಿಸುವುದು ಎಂದು ಅರ್ಥವೇ ಆಗುತ್ತಿಲ್ಲ.

ಮುಗಿದು ಹೋದ ಚಾಪ್ಟರ್ ಪುಸ್ತಕದಲ್ಲೂ, ಬದುಕಿನಲ್ಲೂ ಮತ್ತೆ ತೆರೆಯಬಾರದು ಅನ್ನುವುದು ಸತ್ಯ! ಆದರೆ ಇಂಥ ವಿಚಿತ್ರ ಸಂದಿಗ್ದ ಸ್ಥಿತಿಯಲ್ಲಿ ಅದನ್ನು ತೆರೆಯಲೇಬೇಕಾದ ಅನಿವಾರ್ಯತೆ ಇದೆ.

ಹೇಳಲೇ ಅಥವಾ ಹೇಳದೇ ಮುಂದುವರಿಯಲೇ ಎಂದು ಯೋಚಿಸಿ ಯೋಚಿಸಿ ಸಾಕಾದ ನಾನು ಕೊನೆಗೆ ‘ಅರೆ! ಎಷ್ಟೋ ಕೊಲೆಯ ಕೇಸ್‌ಗಳೇ ಮುಗಿದು ಹೋದವು ಮತ್ತೆ ರೀ ಓಪನ್ ಆಗುತ್ತವೆ… ಅಂಥದ್ದರಲ್ಲಿ ಇದು ಹೇಳಿದರೆ ಅಂಥ ಅಪರಾಧವೇನಲ್ಲ ಬಿಡು’ ಅಂದುಕೊಂಡು ಅದನ್ನು ಹೇಳಿ ಮುಗಿಸುವ ತೀರ್ಮಾನಕ್ಕೆ ಬಂದಿದ್ದೇನೆ! ಅಲ್ಲದೇ ಬಿಟ್ಟು ಹೋದ ವಿವರಗಳನ್ನು ಹೇಳುವುದರ ಈಗ ಮೊದಲಿಗೆ ನನಗೆ ಹೆಲೆನಾ ರುಬೆನ್‌ಸ್ಟೇನ್ ಮತ್ತು ಜಾನ್ ಕರ್ಸ್ಕಿಯ ಬಗ್ಗೆ ಹೇಳುವುದಿದೆ. ಬೆರಗುಗೊಳಿಸುವ ಬದುಕುಗಳು ಇಬ್ಬರವೂ….

ಜಗತ್ತನ್ನು ಕೊಂಬು ಹಿಡಿದು ಎದುರಿಸುವ ಹೆಣ್ಣುಮಕ್ಕಳು ನನಗೆ ಯಾವತ್ತೂ ವಿಸ್ಮಯ ಮೂಡಿಸುತ್ತಾರೆ. ಹೆಣ್ಣುಮಕ್ಕಳ ಆರ್ಥಿಕ ಸ್ವಾತಂತ್ರ್ಯ, ವೈಯುಕ್ತಿಕ ಸ್ವಾತಂತ್ರ್ಯ ಎಂಬ ವಿಷಯದ ಬಗ್ಗೆ 2020ನೆಯ ಇಸವಿಯಲ್ಲೂ ಮಾತನಾಡುತ್ತಿರುವಾಗ 120 ವರ್ಷಗಳ ಹಿಂದೆ ಹೆಲೆನಾ ರೂಬೆನ್‌ಸ್ಟೇನ್ ಇಡೀ ಜಗತ್ತಿನ ಉದ್ದಗಲಕ್ಕೂ ದಾಪುಗಾಲಿಟ್ಟು ಕ್ರಮಿಸಿದ ಕಥೆ ಅತ್ಯಂತ ರೋಚಕ!

ನಾವು ಸರಗೂರೆಂಬ ಹಳ್ಳಿಯಲ್ಲಿರುವಾಗ ಹೋಗುತ್ತಿದುದು ಸಾಧಾರಣವಾಗಿ ಮೈಸೂರು, ಅಬ್ಬಬ್ಬಾ ಎಂದರೆ ಬೆಂಗಳೂರು ಅಷ್ಟೇ. ಅದೂ ಜೊತೆಗೆ ಮನೆಯ ಹಿರಿಯರು ಇದ್ದರೆ ಮಾತ್ರ.

ಈ ಹೆಲೆನಾ ಅದೆಂಥ ಗಟ್ಟಿಗಿತ್ತಿ! ಪೋಲೆಂಡ್‌ನಿಂದ ಆಸ್ಟ್ರೇಲಿಯಾಗೆ ಒಬ್ಬಳೇ ಹೋಗುವ, ಅಲ್ಲಿ ಬದುಕು ಕಟ್ಟಿಕೊಳ್ಳುವ ಧೈರ್ಯ ಅವಳಲ್ಲಿ ಹೇಗೆ ಬಂದಿತೋ! ಅದೂ ಕರ್ಮಠ ಜ್ಯೂಗಳ ಮನೆಯಲ್ಲಿ 150 ವರ್ಷಗಳ ಹಿಂದೆ ಹುಟ್ಟಿದ ಹೆಲೆನಾ, ಯಹೂದೀ ಘೆಟ್ಟೋದಲ್ಲಿ ಅತ್ಯಂತ ಸಾಧಾರಣ ಬದುಕು ಸಾಗಿಸುತ್ತಿದ್ದ ಹೆಲೆನಾ, ಮುಂದೆ ಕಾಸ್ಮೆಟಿಕ್ ಜಗತ್ತನ್ನೇ ಆಳುವಂತಾದ ಅದ್ಭುತ ಯಶೋಗಾಥೆ ಸಾಮಾನ್ಯದ್ದಲ್ಲ…

1872ರಲ್ಲಿ ಕ್ರಾಕೋವ್‌ನ ಅತಿ ಸಾಧಾರಣ ಸಂಪ್ರದಾಯಸ್ಥ ಕುಟುಂಬದಲ್ಲಿ 8 ಹೆಣ್ಣುಮಕ್ಕಳಲ್ಲಿ ಮೊದಲನೆಯವಳಾಗಿ ಹುಟ್ಟಿದವಳು ಹೆಲೆನಾ. ಮೊದಲಿನಿಂದಲೂ ಏತಿ ಅಂದರೆ ಪ್ರೇತಿ ಅನ್ನುವ ಜಾತಿಯವಳು.

ಅವಳ ಅಮ್ಮ ಮನೆ ಕೆಲಸ ಮಾಡು ಎಂದರೆ ಹೆಲೆನಾ ಎಂದೂ ಅದನ್ನು ಕೇಳಿದ್ದೇ ಇಲ್ಲವಂತೆ. ಸದಾ ಅವಳದ್ದೇ ಲೋಕದಲ್ಲಿರುವ ಹೆಲೆನಾಳನ್ನು ನೋಡಿ ಅವಳ ಅಮ್ಮನಿಗೆ ಸಾಕಾಗಿ ಕೊನೆಗೆ ಅವಳಿಗಿಂತ ತುಂಬ ಹಿರಿಯನಾದ ಒಬ್ಬ ಗಂಡಿನೊಡನೆ ಮದುವೆ ನಿಶ್ಚಯಿಸಿ ಬಿಡುತ್ತಾಳೆ.

ಹೆಲೆನಾಗೆ ಆ ಮದುವೆ ಇಷ್ಟವಿರುವುದಿಲ್ಲ. ಹಾಗಾಗಿ ನಾವು ಬೆಂಗಳೂರಿನಿಂದ ಮೈಸೂರಿಗೆ ಗಂಟುಮೂಟೆ ಕಟ್ಟುವುದಕ್ಕಿಂತ ಸುಲಭವಾಗಿ ಕ್ರಾಕೋವ್‌ನಿಂದ ವಿಯೆನ್ನಾಗೆ ಹಾರಿ, ಆ ನಂತರ ಹೇಗೋ ಮಾಡಿ ಆಸ್ಟ್ರೇಲಿಯಾಗೆ ಹೊರಟುಬಿಡುತ್ತಾಳೆ ಚಿಕ್ಕಪ್ಪನ ಮನೆಗೆ.

ಇದೆಲ್ಲ ನಡೆದದ್ದು ಯಾವಾಗ ಹೇಳಿ… 1896 ರಲ್ಲಿ!! ಜಗತ್ತಿನ ಯಾವುದೇ ದೇಶದಲ್ಲೂ ಹೆಣ್ಣುಮಕ್ಕಳಿಗೆ ಮತದಾನ ಮಾಡುವ ಹಕ್ಕು ಕೂಡಾ ಸಿಕ್ಕಿರದ ಕಾಲಘಟ್ಟವದು, ವಿಮಾನ ಹಾರಾಟ ಕೂಡಾ ಇನ್ನೂ ಪ್ರಯೋಗದ ಘಟ್ಟದಲ್ಲಿದ್ದ ಕಾಲವದು!

2020ನೆಯ ಇಸವಿಯಲ್ಲಿ ನಾವು ಗೆಳತಿಯರು ದೇಶ ನೋಡಲು ಹೋದರೆ ‘ಮತ್ತೆ ನೀವು ಹೀಗೆ ಹೋಗಿಬಿಟ್ಟರೆ ಮನೆಯಲ್ಲಿ ಅಡಿಗೆ ಯಾರು ಮಾಡುತ್ತಾರೆ? ಗಂಡ ಏನೂ ಅನ್ನುವುದಿಲ್ಲವೇ? ನಮ್ಮನ್ನು ಹೋಗು ಅಂದರೂ ಮನಸ್ಸೇ ಬರುವುದಿಲ್ಲವಪ್ಪಾ’ ಎಂದು ಮಾತಾಡಿ ಗಿಲ್ಟ್ ಮೂಡಿಸುವ ಜನರಿರುವಾಗ, ಆ ಕಾಲದಲ್ಲಿ ಸಂಪ್ರದಾಯಸ್ಥ ಮನೆತನದಲ್ಲಿ ಬೆಳೆದ ಹೆಲೆನಾ ಪೋಲೆಂಡ್ ಬಿಟ್ಟು ಸಾವಿರಾರು ಕಿಲೋಮೀಟರ್ ದೂರದ ಆಸ್ಟ್ರೇಲಿಯಾಗೆ ಹೋಗುವುದೆಂದರೆ ಅದೇನು ಸಾಮಾನ್ಯದ ಮಾತಾ!

ಆದರೆ ಹೀಗೆ ಹೋದ ಹೆಲೆನಾ ತಲುಪುವುದು ಆಸ್ಟ್ರೇಲಿಯಾದ ಚಿಕ್ಕ ಹಳ್ಳಿಯೊಂದನ್ನು. ಅಲ್ಲಿ ಆಕೆ ಚಿಕ್ಕಪ್ಪನ ಅಂಗಡಿಗೆ ಕೆಲಸಕ್ಕೆ ಹೋಗಲಾರಂಭಿಸುತ್ತಾಳೆ. ಆಗ ಅಂಗಡಿಗೆ ಬರುವ ಹೆಣ್ಣುಮಕ್ಕಳ ಚರ್ಮ ಬಿಸಿಲಿಗೆ ತುಂಬ ಒರಟಾಗಿದೆ ಎನ್ನುವುದನ್ನು ಗಮನಿಸುತ್ತಾಳೆ.

ಆ ಹೆಣ್ಣುಮಕ್ಕಳು ಕೂಡಾ ಪೋಲೆಂಡ್‌ನ ಹವಾಮಾನದಿಂದ ಕಾಂತಿಯುಕ್ತವಾಗಿದ್ದ ಹೆಲೆನಾಳ ಚರ್ಮವನ್ನು ಗಮನಿಸುತ್ತಾರೆ. ಅದರ ರಹಸ್ಯವೇನು ಎಂದು ಅವರು ಕೇಳಿದಾಗ ಹೆಲೆನಾ ಅದಕ್ಕೆ ತನ್ನ ಅಮ್ಮ ಸಾಂಪ್ರದಾಯಿಕವಾಗಿ ಪೋಲೆಂಡ್‌ನಲ್ಲಿ ತಯಾರಿಸಿದ ಕ್ರೀಮ್ ಕಾರಣ ಎನ್ನುತ್ತಾಳೆ.

ತಮಗೂ ಆ ಕ್ರೀಮ್ ತರಿಸಿಕೊಡೆಂದು ದುಂಬಾಲು ಬೀಳುತ್ತಾರೆ ಆ ಹೆಣ್ಣುಮಕ್ಕಳು. ನಿಜಕ್ಕೂ ಹೇಳಬೇಕೆಂದರೆ ಹೆಲೆನಾ ಆ ಊರಿಗೆ ಕಾಲಿಟ್ಟಾಗಲೇ ಚರ್ಮದ ಕ್ರೀಮ್ ತಯಾರಿಸಲು ಬೇಕಾದ ಲಾನೊಲಿನ್ ಎಣ್ಣೆಯನ್ನು ಪಡೆಯಲು ಬೇಕಾದ ಕುರಿಗಳು ಆ ಊರಿನಲ್ಲಿ ಯಥೇಚ್ಛವಾಗಿರುವುದನ್ನು ಗಮನಿಸಿಯೇ ಈ ಕಥೆ ಕಟ್ಟಿರುತ್ತಾಳೆ.

ಲಾನೋಲಿನ್ ಕುರಿಯ ತುಪ್ಪಳದ ಅಡಿಯಲ್ಲಿ ಜಿನುಗುವ ಕೆಟ್ಟ ವಾಸನೆಯ ಎಣ್ಣೆ. ಹೆಲೆನಾ ಆ ವಾಸನೆ ಮರೆಸುವಂತೆ ಬೇರೆ ಬೇರೆ ಸುಗಂಧವನ್ನು ಬೆರೆಸಿ ತಾನೇ ವಲೇಜ಼್ ಎನ್ನುವ ಕ್ರೀಮ್ ತಯಾರಿಸಿ ಮಾರುತ್ತಾಳೆ. ಹಂಗೇರಿಯನ್ ಭಾಷೆಯಲ್ಲಿ ವಲೇಜ಼್ ಎಂದರೆ ಸ್ವರ್ಗದ ಉಡುಗೊರೆ ಎಂದರ್ಥ ಎನ್ನುತ್ತಾಳೆ.

ನಿಜಕ್ಕೂ ಹೇಳಬೇಕೆಂದರೆ ಹಂಗೇರಿಯನ್ ಭಾಷೆಯಲ್ಲಿ ಆ ಪದವೇ ಇರುವುದಿಲ್ಲ!

ಒಟ್ಟಿನಲ್ಲಿ ತನ್ನ ಕ್ರೀಮ್‌ಗೆ ಒಂದು ರೀತಿಯ ಅನನ್ಯತೆಯ ಭಾವ ಬರುವಂಥ ವಾತಾವರಣ ಸೃಷ್ಟಿ ಮಾಡಿ ತನ್ನ ಕ್ರೀಮ್ ಅನ್ನು ಮಾರ್ಕೆಟ್ ಮಾಡಲು ಶುರು ಮಾಡುತ್ತಾಳೆ. ಈ ರೀತಿಯ ಮಾರ್ಕೆಟಿಂಗ್ ತಂತ್ರಗಳು ಈ ಇಂಟರ್‌ನೆಟ್ ಕಾಲದಲ್ಲಿ ಮಾಮೂಲಾಗಿರಬಹುದು. ಆದರೆ 125 ವರ್ಷಗಳ ಹಿಂದೆ ಈ ರೀತಿ ಸ್ವತಂತ್ರವಾಗಿ ಆಲೋಚನೆ ಮಾಡುವುದು ಸುಲಭದ ಮಾತಲ್ಲ!

ಹಾರ್ವರ್ಡ್ ವಿಶ್ವವಿದ್ಯಾಲಯದ ತಜ್ಞರ ಪ್ರಕಾರ ಈ ರೀತಿಯಾಗಿ ನವಿರಾದ ಭಾವ ಹುಟ್ಟಿಸುವ, ಅನನ್ಯ ಹೆಸರುಗಳನ್ನಿಡುವ ಸಂಪ್ರದಾಯ ಹೆಲೆನಾಳಿಂದ ಶುರುವಾಗಿದ್ದು ಇವತ್ತಿಗೂ ಅದೇ ಅಭ್ಯಾಸ ನಡೆದುಕೊಂಡು ಬರುತ್ತಿದೆಯಂತೆ!

ಈಗಲೂ ಕಾಸ್ಮೆಟಿಕ್ ಕಂಪನಿಗಳು ಕ್ರೀಮ್‌ಗಳಿಗೆ ಆ ರೀತಿಯ ಹೆಸರುಗಳನ್ನೇ ಇಡುತ್ತವಂತೆ!

ಸರಿ, ಹೆಲೆನಾಳ ಕ್ರೀಮ್ ಬಳಸಿದ ಅಲ್ಲಿನ ಹೆಣ್ಣುಮಕ್ಕಳ ಚರ್ಮ ಥೇಟ್ ಹೆಲೆನಾಳ ಚರ್ಮದಂತೆ ತುಂಬ ಕಾಂತಿಯುಕ್ತವಾಗಿ ಹೋಗಿ (ಅಥವಾ ಹೋದಂತೆ ಭ್ರಮೆ ಹುಟ್ಟಿ!!) ಆ ಕ್ರೀಮ್ ‘ಸೂಪರ್ ಹಿಟ್, ಅಂಡ್ರೆಡ್ ಡೇಸ್ ಸಾ’ ಅನ್ನುವಂತಾಗಿಬಿಡುತ್ತದೆ!

ಸುದ್ದಿ ಒಬ್ಬರಿಂದೊಬ್ಬರಿಗೆ ಹರಡಿ ಎಲ್ಲರೂ ಅದಕ್ಕೆ ಮುಗಿಬೀಳಲಾರಂಭಿಸುತ್ತಾರೆ. ಹಾಗೆ ಶುರುವಾಗುತ್ತದೆ ಅವಳ ಬಿಸಿನೆಸ್!

। ಮುಂದಿನ ವಾರಕ್ಕೆ ।

‍ಲೇಖಕರು ಬಿ ವಿ ಭಾರತಿ

November 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: