ಇಲ್ಲಿ ದುಡಿಯುವವಳಾಗಿ ಇರುವುದೆಂದರೆ…

‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ.

ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ.

ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ.

ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ ಸುಷ್ಮಿತಾ ‘ಮಣ್ಣಪಳ್ಳದ ಮೂಕಿಚಿತ್ರ’ದಲ್ಲಿ ಈ ಊರಿನ ಯಾರೂ ಕಾಣದ ಚಿತ್ರಗಳನ್ನು ಕಟ್ಟಿ ಕೊಡಲಿದ್ದಾರೆ.

ಬೆಳಿಗ್ಗೆ ಐದರ ಹೊತ್ತಿಗೆಲ್ಲ ಕೆಳ ಅಡುಗೆಮನೆಯಲ್ಲಿ ಕಾಯಿ ತುರಿಯುವ, ಸೌಟು ಮಗಚುವ ಸದ್ದಿನ ಜೊತೆಗೆ, ಇಡ್ಲಿ ತಟ್ಟೆ ಬಾಯಿ ತೆಗೆದ ಮತ್ತು ಕುಚ್ಚಲಕ್ಕಿ ಗಂಜಿ ತಿಳಿ ಬಸಿದ ವಾಸನೆ ಎರಡು ಒಟ್ಟಿಗೆ ಬರುತ್ತಿದ್ದರೆ ಆಂಟಿ ಅಡುಗೆ ಮನೆ ಕೆಲಸ ಮುಗಿಸುವ ಹಂತದಲ್ಲಿದ್ದರೆ ಅನ್ನೋದು ಖಚಿತ. ಇನ್ನರ್ದ ಗಂಟೆಯಲ್ಲಿ ಮನೆ ಎಲ್ಲ ಗುಡಿಸಿ, ಚಾ ಗೆ ಹಾಲು ಕಾಸಿಟ್ಟು, ವಾಷಿಂಗ್ ಮಶೀನಲ್ಲಿರೋ ಬಟ್ಟೆ ಎಲ್ಲ ಹಗ್ಗದ ಮೇಲೆ ಹರವಿದರೆ ಅವರ ಮನೆ ಕೆಲಸಗಳ ಬೆಳಗ್ಗಿನ ಸರಣಿ ಮುಗಿದ ಹಾಗೆ. ‌

ಆಮೇಲೆ ಅವರ ಸ್ನಾನ, ಸೀರೆ, ಮಧ್ಯಾಹ್ನದ ಬುತ್ತಿ ಅಂತೆಲ್ಲ ತಯಾರಿ ಮಾಡುವ ಹೊತ್ತಿಗೆ ಎಂಟಾಗಿರುತ್ತಿತ್ತು. ಆಸ್ಪತ್ರೆಯಲ್ಲಿ  ಬೆಳಿಗ್ಗಿನ ಶಿಫ್ಟ್ ಅಥವ ರಾತ್ರಿ ಶಿಫ್ಟ್ ಏನೇ ಆದರೂ ಆಂಟಿಯ ಮನೆಯ ಕೆಲಸಗಳು ಮಾತ್ರ ಸರಿಯಾದ ಹೊತ್ತಿಗೆಲ್ಲ ಮುಗಿಯಲೇ ಬೇಕು ಇಲ್ಲದೆ ಹೋದರೆ ಅವರ ಮನೆಯವರು ಮತ್ತು ಮಕ್ಕಳಿಗೆ ಕಿರಿಕಿರಿಯಾಗುತ್ತದೆ.

ಇವರು ಮಣಿಪಾಲದ ನನ್ನ ಮೊದಲ ಬಾಡಿಗೆ ಮನೆಯ ಕೆಳಗೆ ಇದ್ದ ನರ್ಸ್ ಆಂಟಿ. ಬಸ್ ಇನ್ನೇನು ತಪ್ಪಿಯೇ ಹೋಯ್ತು ಅನ್ನುವ ಹೊತ್ತಿಗೆ ಬಸ್ ಸ್ಟಾಂಡ್ ವರೆಗೆ ಅವರ ನಿತ್ಯ ಓಟ ಇದ್ದದ್ದೇ.

ನಮ್ಮ ಮನೆಯಲ್ಲಿ ಯಾವತ್ತೂ ಹೊರಗಡೆ ದುಡಿಯುವ ಮಹಿಳೆಯರನ್ನು ಕಂಡೆ ಇರದ ನನಗೆ, ಇವರ ಈ ದಿನಚರಿ ಹೊಸತು ಎನ್ನಿಸುತ್ತಿತ್ತು. ಸಂಜೆ ಬಂದ ಕೂಡಲೇ ಮಕ್ಕಳಿಗೆ ತಿಂಡಿ, ರಾತ್ರಿ ಊಟ. ಅದರ ಮಧ್ಯದಲ್ಲಿ ನೆಂಟರಿಷ್ಟರ ಮದುವೆ, ಮುಂಜಿ ಎಲ್ಲದರ ಓಡಾಟ ಹೀಗೆ. ಆದಿತ್ಯವಾರದ ದಿನವೂ ಅವರನ್ನ ಕೂತು ಮಾತಾಡಿಸಿದ ನೆನಪೇ ಇಲ್ಲ.

ಹಾಗೆಯೇ ಸಾಯಂಕಾಲ ನನ್ನ ಕಾಲೇಜು ಬಿಡುವ ಹೊತ್ತಿಗೆ ಸರಿಯಾಗಿ, ಪಕ್ಕದ ಜೀನ್ಸ್ ಫ್ಯಾಕ್ಟರಿ ಇಂದ ಹೊರಬಂದು ಬಸ್ ಸ್ಟಾಂಡ್ ಕಡೆಗೆ ದೌಡಾಯಿಸಿ ಓಡುತ್ತಿರುವ ಹೆಂಗಸರ ಗುಂಪಲ್ಲಿ ತೆಳು ನೈಲಾನ್ ಸೀರೆಗೆ ಪಿನ್ನು ಹಾಕಿ ಉಟ್ಟ ಮೋಟು ಜಡೆಯ ಭಾಗ್ಯ. ಸುಮಾರು ಐದು ವರ್ಷಗಳ ಹಿಂದೆ ಇಲ್ಲಿಯೇ ನಾನು ನೋಡುತ್ತಿದ್ದ ದುಡಿಯುವ ಮಹಿಳೆಯರ ಎರಡು ಜಗತ್ತುಗಳು ಇವು. ಒಬ್ಬಳದ್ದು ಮನೆಯಿಂದ ಕೆಲಸಕ್ಕೆ ಹೊರಡುವಾಗಿನ, ಇನ್ನೊಬ್ಬಳದ್ದು ಕೆಲಸದಿಂದ ಮನೆ ಮುಟ್ಟುವಾಗಿನ ತರಾತುರಿ ಮತ್ತು ತಯಾರಿ.

ಈ ಊರಿನಲ್ಲಿಯೇ ದುಡಿಯುವ ಮಧ್ಯಮ ವರ್ಗದ ಮಹಿಳೆಯರ ಒಂದು ಅಪೂರ್ವದ ಜಗತ್ತಿದೆ. ಅಲ್ಲಿ ಉತ್ಸಾಹ, ಅಳಲು, ದುಡಿಮೆ ಸಮಯ ಎಲ್ಲವೂ ಒಟ್ಟೊಟ್ಟಿಗೆ ಹೆಜ್ಜೆ ಹಾಕುತ್ತಿರುತ್ತದೆ. ಒಂದೇ ಕಾಲಕ್ಕೆ ನಾಲ್ಕಾರು ವಿಚಾರಗಳನ್ನು ಹೊತ್ತು ಎಲ್ಲವನ್ನೂ ಒಂದೇ ಹದದಲ್ಲಿ ಸರಿ ತೂಗಿಸಿಕೊಂಡು ಹೋಗುವುದೆಲ್ಲವೂ ಇದೇ ಜಗತ್ತಲ್ಲಿ ಉಳಿಯಲು ಕಲಿಯಲೇಬೇಕು.

ದುಡಿಯುವ ಮಹಿಳೆಯರು ಇವೆಲ್ಲ ಕಲಿಯದಿದ್ದರೆ ಹೇಗೆ? ಎಲ್ಲವನ್ನೂ ಸರಿ ತೂಗಿಸಲು ಬರದೇ ಹೋದರೆ ಹೊರಗೆ ಹೋಗಿ ದುಡಿಯುವ ಅವಶ್ಯಕತೆ ಏನಿದೆ? ಎಂಬೆಲ್ಲ ಪ್ರಶ್ನೆಗಳಿಂದ ಪ್ರಾರಂಭಿಸಿಯೇ  ಗೀತಾ, ಸವಿತಾ, ವಾರಿಜ, ಕುಸುಮ, ಶಾಂತ ಎಲ್ಲರೂ ಇಲ್ಲಿ ತಾವು ಮನೆಯಿಂದ ಹೊರ ಬಂದು ದುಡಿಯುವ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದಕ್ಕೆ ಶ್ರಮಿಸುವುದು.

ಸಂಜೆ ಜೀನ್ಸ್ ಫ್ಯಾಕ್ಟರಿ ಇಂದ ಹೊರ ಬರುವ ಹೆಂಗಸರ ಬಿರುಸು ಜೇನು ಗೂಡಿಗೆ ಕಲ್ಲು ಹೊಡೆದ ಹಾಗಿರುತ್ತದೆ. ಅವರ ದೃಷ್ಟಿ ಸೀದಾ ತಮ್ಮ ಖಾಯಂ ಬಸ್ಸಿನ ಮೇಲಿರುತ್ತದೆ. ಅಕ್ಕ ಪಕ್ಕದ ನಡೆದು ಬರುವ ಸ್ನೇಹಿತೆಯರ ಜೊತೆ ಏನೇನೋ ಮಾತಾಡುತ್ತಿದ್ದರೂ ಯೋಚನೆ ಇಡೀ ಮನೆಯಲ್ಲಿ ಹೋಗಿ ಮುಗಿಸಬೇಕಿರೋ ಕೆಲಸದ ಮೇಲಿರುತ್ತದೆ.

ಭಾಗ್ಯ ಯಾವತ್ತೂ ಫ್ಯಾಕ್ಟರಿ ಹೋಗುವುದನ್ನು ನೋಡಿಲ್ಲ. ಆದರೆ ಸಂಜೆಯ ಹೊತ್ತು ಮಾತ್ರ ನೂರರ ಗುಂಪಲ್ಲೂ ಬೇರೆಯೇ ಬಿರುಸಿನಲ್ಲಿ ನಡೆಯುವವಳು ಅನ್ನಿಸಿದಾಗ ಎದುರು ಸಿಕ್ಕಿ ಮಾತಾಡಿಸಿದ್ದೇನೆ.

ಅವಳ ಪ್ರಕಾರ ಅವಳಿಗೆ ಗೋಳುಗಳಿಲ್ಲ. ಬೆಳಿಗ್ಗೆ ಒಂದು ಸುತ್ತು ಮನೆ ಕೆಲಸ ಎಲ್ಲ ಮುಗಿಸಿ ಬಂದರೆ, ಸಂಜೆ ಮನೆ ಮುಟ್ಟಿ ಮಕ್ಕಳ ಹೋಂ ವರ್ಕ್, ರಾತ್ರಿ ಊಟಕ್ಕೆಲ್ಲ ತಯಾರು ಮಾಡಿದರೆ ಮನೆಯವರೆಲ್ಲರೂ ಸಂತೃಪ್ತರು.

ಆದರೆ ಎಲ್ಲಾದರೂ ಒಂದು ಕೆಲಸ ಆಚೀಚೆ ಆದರೆ ಮಾತ್ರ  “ನಿನಗೆ ಅಷ್ಟು ದೂರದ ಮಣಿಪಾಲಕ್ಕೆ ಹೋಗಿ ದುಡಿಯುವುದೇನುಂಟು? ಮನೆ ಹತ್ತಿರವೇ ಎಲ್ಲೋ ಕೆಲಸಕ್ಕೆ ಹೋದರೆ ಮನೆ ಬೇಗ ಮುಟ್ಟಲಿಕ್ಕಾಗೋದಿಲ್ಲವಾ? ಗಂಡ ಸಾಕೋಗೋವಷ್ಟು ದುಡಿಯುದಿಲ್ಲವಾ? ಸಂಜೆ ತಿಂಡಿಗೆ ಮಕ್ಕಳು ನಿನ್ನ ದಾರಿ ಕಾಯಬೇಕಾ? ಅಂತೆಲ್ಲ ಒಂದೆರಡು ದಿನ ಹಂಗಿಸುತ್ತಾರಷ್ಟೆ. ಆಮೇಲೆ ಅವಳೇ ಮನೆಯವರಿಗೆ ಏನೂ ರಗಳೆ ಆಗದಂತೆ ತಯಾರಿ ಮಾಡಿಟ್ಟರೆ, ಎಲ್ಲ ಕೆಲಸ ಸುಸೂತ್ರವಾಗಿದೆ ಎನ್ನಿಸಿ ಸುಮ್ಮನಾಗಿಬಿಡುತ್ತಾರಷ್ಟೆ.

ಫ್ಯಾಕ್ಟರಿ ಒಳ ಹೊಕ್ಕು, ಜೀನ್ಸ್ ಧೂಳು ಹತ್ತದಂತೆ ಮುಖವೆಲ್ಲ ಮುಚ್ಚುವ ಹಾಗೆ ಬಟ್ಟೆ ಸುತ್ತಿ ಕೆಲಸ ಆರಂಭಿಸಿದರೆ, ಸಂಜೆ ಐದರವರೆಗೆ ಹೊರ ಪ್ರಪಂಚದ ಸುಳಿವೇ ಇಲ್ಲದವರಂತೆ ಕಳೆದು ಹೋಗಿರುತ್ತಾರೆ. ದುಡಿಮೆ ಮಾಡುವ ಜಾಗದಲ್ಲೂ ತಕ್ಕಷ್ಟು ಕೆಲಸ ಸಲ್ಲಲೇಬೇಕು. ಮಧ್ಯದಲ್ಲಿ ಚಾ ಕಾಫಿಯ ಬಿಡುವು ಅಂತೆಲ್ಲ ಹೊರ ಬಂದಿದ್ದು ನಾನು ನೋಡಿಲ್ಲ. ನಡುವೆ ಎಲ್ಲೋ ತಮ್ಮಂತದೇ ಸಹೋದ್ಯೋಗಿಗಳನ್ನ ದಾಟಿ  ಜೊತೆ ಆಚೀಚೆ ಹೋಗುವಾಗ ‘ಅಲ್ಲಾ ಮೊನ್ನೆ ಹೇಳುತ್ತಿದ್ದೆಯಲ್ಲ…” ಅಂತ ಶುರುವಾಗಿ “ಇರಲಿ ಬಿಡು ನಮಗ್ಯಾಕೆ? ಕೆಲಸ ಅಲ್ಲೇ ಬಾಕಿ ಇದೆ…” ಅಂತಲೇ ದುಡಿಮೆ ಸಾಗಿರುತ್ತದೆ.

ಹೀಗೆ ಪ್ರತಿದಿನವೂ ಬಸ್ಸಿನ ಸರತಿಯಲ್ಲೋ, ದಾರಿಯಲ್ಲೋ, ಹೋಟೆಲ್ ಅಂಗಡಿಗಳಲ್ಲೋ ಇಲ್ಲ ನನ್ನ ಆಫೀಸ್ ನಲ್ಲೋ ಇಂತಹದೇ ಜಗತ್ತಿಗೆ ಅತೀ ಹತ್ತಿರದಲ್ಲಿಯೇ ಸುಳಿದು ಹೋಗುತ್ತಿರುತ್ತೇನೆ. ಮಧ್ಯಾಹ್ನದ ಊಟದ ವಿರಾಮದಲ್ಲೂ ನಿಮಿಷಗಳಲ್ಲೇ ಊಟ ಮುಗಿಸಿ,  ಔಷದಿ, ಮನೆಗೆ ತರಕಾರಿ ಸಾಮಾನು, ಬ್ಯಾಂಕು ಅಂತೆಲ್ಲ ಓಡಾಟವನ್ನೂ ಮುಗಿಸಿಕೊಂಡು ಬಿಡುತ್ತಾರೆ. ಸಾಯಂಕಾಲ ಆಫೀಸ್ ಬಿಡುವ ಹೊತ್ತಿಗೆ ಅವೆಲ್ಲಾ ಸಾಧ್ಯವೇ ಇಲ್ಲ. ಖಾಯಂ ಬಸ್ಸು ತಪ್ಪಿ ಹೋದರೆ, ಮನೆ ತಲುಪುವುದು ತಡವಾದರೆ, ಅವತ್ತಿನ ಮನೆ ಕೆಲಸವೆಲ್ಲ ಮತ್ತೆ ಆಚೀಚೆಗುತ್ತದೆ ಎಂಬುದೇ ಚಿಂತೆ.

ಇವರ್ಯಾರು ತಮ್ಮ ಬಿಡುವಿಲ್ಲದ ಬದುಕಿಗೆ ಯಾರನ್ನೂ ದೂರಿದವರಲ್ಲ. ಬದಲಾಗಿ ಹೆಂಗಸರಾಗಿ ಮನೆ ಮಾಡಿಕೊಂಡಿದ್ದ ಮೇಲೆ ಇದೆಲ್ಲ ಇದ್ದದ್ದೇ ಅಲ್ಲವಾ? ಅಂದು ಬಿಡುತ್ತಿದ್ದರು. ‘ನರ್ಸ್ ಆಂಟಿ ಮತ್ತು ಭಾಗ್ಯ’ ಈ ಎರಡೂ ದುಡಿಯುವ ಮಹಿಳೆಯರನ್ನು ಮಣಿಪಾಲದಲ್ಲಿ ಸಂದಿಸಿದ್ದು ಸುಮಾರು ಐದು ವರ್ಷಗಳ ಹಿಂದೆ ಆದರೆ ಇವತ್ತೂ ಕೂಡ ಅವರ ದುಡಿಮೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಐವತ್ತರ ಆಸು ಪಾಸಿನಲ್ಲಿರುವ ಇಬ್ಬರೂ ಇಬ್ಬದಿಯ ದುಡಿಮೆಗೆ ಒಗ್ಗಿ ಹೋಗಿದ್ದಾರೆ.

ಇವರಿಬ್ಬರ ಆರ್ಥಿಕ ಪರಿಸ್ಥಿತಿ, ಕುಟುಂಬ ವ್ಯವಸ್ಥೆ, ಕೆಲಸದ ಸ್ತರದಲ್ಲಿ ಒಂದಿಷ್ಟು ಬದಲಾವಣೆಗಿರಬಹುದಷ್ಟೆ ಆದರೆ ಅವರ ನಿತ್ಯಹೋರಾಟ ಮಾತ್ರ ಒಂದೇ. ಇದಕ್ಕೆ ಕಾರಣ, ಪರಿಣಾಮ, ಪರಿಹಾರಗಳನ್ನೆಲ್ಲ ಯೋಚಿಸುವುದಕ್ಕಿಂತ ಇದ್ದದ್ದಕ್ಕೆ ಒಗ್ಗಿಕೊಳ್ಳುವುದೇ ಇಲ್ಲಿ ಸುಲಭ ಎಂದುಕೊಂಡಿದ್ದಾರೆ.

ನಾನು ಇಬ್ಬರಿಗೂ ಕೇಳಿದ ಒಂದೇ ಪ್ರಶ್ನೆ ನೀವು ಇಷ್ಟೆಲ್ಲಾ ಕಷ್ಟಪಟ್ಟು ಹೊರಗೆ ಹೋಗಿ ದುಡಿಯಲೇ ಬೇಕಾ? ಯಾವತ್ತಾದರೂ ಮನೆಯಲ್ಲೇ ಉಳಿದು ಬಿಡೋಣ ಅಂದೆನುಸುವುದಿಲ್ಲವಾ? ಅಂದದಕ್ಕೆ “ಎಲ್ಲ ಕೇಳುವ ಪ್ರಶ್ನೆಯನ್ನೇ ನೀನು ಕೇಳಿದ್ದು. ಅದರಲ್ಲಿ ಹೊಸತೇನು ಇಲ್ಲ. ಮನೆಯ ದುಡಿಮೆಯೇ ಸಾಕಷ್ಟಿದೆ ಹೌದು. ಮನೆಗೆಲಸದವರನ್ನು ಹಾಕಿಕೊಳ್ಳುವಷ್ಟು ಸ್ಥಿತಿ ಇಲ್ಲದೆ ಇರುವುದೂ ಹೌದು. ನಮ್ಮ ಮನೆ ಗಂಡಸರಿಗೆ ಹೋಲಿಸಿದರೆ ಮನೆಕೆಲಸದ ಭಾರ ಹೆಚ್ಚು, ಅವರಿಗಿಂತ ದುಡಿಮೆ ಕಡಿಮೆ. ಆದರೆ ಮನೆಯಿಂದ ಹೊರಬಿದ್ದು ಕೆಲಸಕ್ಕೆ ನಡೆಯುವಾಗ ಏನೋ ನಿರಾಳ, ಕೈಯಲ್ಲಿ ಉಳಿಯುವ ಅಲ್ಪ ಸ್ವಲ್ಪ ತಮ್ಮದೇ ಹಣ. ತಾವೇ ಕೊಳ್ಳುವ ಬಟ್ಟೆ, ಚೂರು ಪಾರು ಒಡವೆ, ದುಡಿಮೆಯ ಸ್ವಾತಂತ್ರ್ಯ ಅವರ ದಣಿವನ್ನ ಮೀರಿಸುವಂತದ್ದು.” ಎಂದರು.

ಈಗೀಗ ಇದೇ ಊರಲ್ಲಿ ದುಡಿಯಲು ಶುರು ಮಾಡಿರುವ ನಾನೂ ಹಾಗೆಯೇ ಅಂದುಕೊಳ್ಳುತ್ತೇನೆ.

November 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಪ್ರೀತಂ

    ಉತ್ತಮವಾದ ಬರಹ..ಲೇಖಕರಿಗೆ ಅಭಿನಂದನೆಗಳು..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: