ಸ್ವ್ಯಾನ್ ಕೃಷ್ಣಮೂರ್ತಿ ಅಂಕಣ: ಮುರುಘಾ ಶ್ರೀಗಳಿಗೆ ಶರಣು..


ಮುದ್ರಣ ಕ್ಷೇತ್ರದ ನನ್ನ ಪಯಣ ಪ್ರಾರಂಭವಾಗಿದ್ದೇ ಮುರುಘಾಮಠದಿಂದ ಹಾಗೂ
ನನ್ನ ಜೀವನಕ್ಕೆ ಮಹತ್ವವಾದ ತಿರುವನ್ನು ಕೊಟ್ಟವರು ಡಾ. ಶಿವಮೂರ್ತಿ ಮುರುಘಾ ಶರಣರು…
ತ್ರಿವಿಧ ದಾಸೋಹಕ್ಕೆ ಮೊದಲಿನಿಂದಲೂ ಪ್ರಖ್ಯಾತಿ ಪಡೆದ ನಮ್ಮ ಮುರುಘಾ ಮಠವು ಕೇಂದ್ರ ಸ್ಥಾನವಾದ ಚಿತ್ರದುರ್ಗ ಹಾಗೂ ರಾಜ್ಯದ ಉದ್ದಗಲಕ್ಕೂ ಇರುವ ಶಾಖಾ ಮಠಗಳ ಮುಖಾಂತರ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಜೊತೆಗೆ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿ ಗ್ರಾಮೀಣ ಭಾಗದ ನೂರಾರು ಮಕ್ಕಳನ್ನು ಮಠದಲ್ಲಿ ಇಟ್ಟುಕೊಂಡು ಶಿಕ್ಷಣ ಮತ್ತು ಪ್ರಸಾದ ವ್ಯವಸ್ಥೆ ಮಾಡುತ್ತಿದೆ. ಮಠದಲ್ಲಿ ನನ್ನ ಮೇಲೆ ಅಪಾರ ಪ್ರಭಾವ ಬೀರಿದ್ದು ಶ್ರೀ ಶಿವಮೂರ್ತಿ ಮುರುಘಾ ಶರಣರು ಪದೇಪದೇ ತಮ್ಮ ಭಾಷಣಗಳಲ್ಲಿ ಹೇಳುತ್ತಿದ್ದ ಬಸವಣ್ಣನವರ ಕಾಯಕ ನಿಷ್ಠೆ. ಕೆಲಸಗಳಲ್ಲಿ ಈ ಕೆಲಸ ಅತಿ ಶ್ರೇಷ್ಠ – ಆ ಕೆಲಸ ಕನಿಷ್ಟ ಎಂದು ಯಾವತ್ತೂ ಭಾವಿಸಬಾರದು, ಶ್ರೇಷ್ಠತೆಯನ್ನು ನಾವು ಮಾಡುವ ಕೆಲಸ ಹಾಗು ಅದನ್ನು ಪ್ರೀತಿಸುವ ವಿಧಾನದಲ್ಲಿ ತೋರಬೇಕು ಎಂಬುದು ನನ್ನ ತ‌ಲೆಯಲ್ಲಿ ಉಳಿಯಿತು.
ಈ ರೀತಿ ಬಸವಾದಿ ಶರಣರ ತತ್ತ್ವಗಳನ್ನು ದಿನವೂ ಕೇಳುತ್ತ, ಪಾಲಿಸುತ್ತ ಮಠದಲ್ಲಿ ಬೆಳೆದ ಮಕ್ಕಳು ಪ್ರಪಂಚದ ಯಾವ ಮೂಲೆಯಲ್ಲಿ ಬಿಟ್ಟರೂ ಎಂತಹ ಸಂಕಷ್ಟವನ್ನಾದರೂ ಎದುರಿಸಿ ಬದುಕಬಲ್ಲರು ಎನ್ನುವುದಕ್ಕೆ ಹಲವು ನಿದರ್ಶನಗಳು ನಮ್ಮೆದುರಿಗಿವೆ.
ಒಂದು ದಿನ ನನ್ನ ಅಜ್ಜಿ ನಮ್ಮ ಮಠದ ಹಿರಿಯ ಜಗದ್ಗುರುಗಳನ್ನು ಭೇಟಿಮಾಡಲು ನನ್ನನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದರು. ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮೀಜಿಯವರು ನನ್ನನ್ನು ನೋಡುತ್ತಲೇ, ಈತ ಯಾರು ಎಂದು ಕೇಳಿ ತಿಳಿದು, ಹ್ಞೂ..ಏನು ಓದುತ್ತಿದ್ದೀಯಾ…… ಎಂದು ಕೇಳಿದಾಗ ನಾನು ಎಸೆಸೆಲ್ಸಿ ಪಾಸಾಗಿ ಕಾಲೇಜಿಗೆ ಸೇರಿದ್ದೇನೆ ಎನ್ನುವಷ್ಟರಲ್ಲಿ ನಮ್ಮಜ್ಜಿ..’ ಇವನಿಗೆ ವಿದ್ಯೆಯೇ ತಲೆಗೆ ಹತ್ತಲ್ಲ ಬುದ್ಧಿ ‘ ಎಂದಾಗ,…” ಎಲ್ಲರೂ ಡಾಕ್ಟರ್ ಇಂಜಿನಿಯರ್ ಲಾಯರ್…. ಆಗಿಬಿಟ್ಟರೆ ಬೇರೆ ಕೆಲಸಗಳನ್ನು ಯಾರು ಮಾಡುವುದು…ಹ್ಞೂ.. ಇನ್ನು ಮುಂದಾದರೂ ಚೆನ್ನಾಗಿ ಓದು, ಇಲ್ಲ ಮುಂದೆ ಯಾವುದೇ ಕೆಲಸ ಮಾಡಿದರೂ ಇಷ್ಟಪಟ್ಟು – ಕಷ್ಟಪಟ್ಟು ಮಾಡು ಎಲ್ಲಾ ಒಳ್ಳೆಯದಾಗುತ್ತದೆ..” ಎಂದು ಆಶೀರ್ವದಿಸಿದ್ದರು.

ನಮ್ಮ ಇಡೀ ಕುಟುಂಬ ಸಂಕಷ್ಟದಲ್ಲಿದ್ದಾಗ ಕೈಹಿಡಿದದ್ದು ಮುರುಘಾಮಠ. ಶೂನ್ಯ ಪೀಠಾಧ್ಯಕ್ಷರಾದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ನನಗೆ ವಿದ್ಯಾಭ್ಯಾಸ ಮುಂದುವರಿಸಲು ಮಠದ ಕಾಲೇಜಿನಲ್ಲಿ ಅನುವುಮಾಡಿಕೊಟ್ಟಿದ್ದರು. ಆದರೆ, ನನ್ನಿಂದ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗದು ಎನಿಸಿ, ಚಿಂತಾಕ್ರಾಂತನಾಗಿ ಕುಳಿತಿದ್ದಾಗ, ಮಠದ ಆವರಣದಲ್ಲೇ ಇದ್ದ ಎಸ್.ಜೆ.ಎಂ. ಪ್ರಿಂಟಿಂಗ್ ಪ್ರೆಸ್‌ನಲ್ಲಿ (Letter Press) ಒಂದು ಕೆಲಸ ಕೊಟ್ಟು ಮುದ್ರಣ ಕ್ಷೇತ್ರದ ಪಯಣಾರಂಭಕ್ಕೆ ಹಸಿರು ನಿಶಾನೆಯನ್ನು ತೋರಿಸಿದರು.
ಆಗಿನ್ನೂ ಮೊಳೆ ಜೋಡಿಸಿ ಮುದ್ರಣ ಮಾಡುವ ಪದ್ಧತಿ ಚಾಲ್ತಿಯಲ್ಲಿತ್ತು. ಕನ್ನಡ ಅಕ್ಷರಗಳು ಮೊಳೆಗಳಲ್ಲಿ ತಿರುಗುಮುರುಗಾಗಿ ಇದ್ದದ್ದನ್ನು ನೋಡಿ ಏನೂ ಅರ್ಥವಾಗದೆ ಗೊಂದಲಕ್ಕೆ ಈಡಾಗಿದ್ದೆ. ಆ ಪರಿಸ್ಥಿತಿಯಲ್ಲೂ ಸಹ ಅಲ್ಲಿನ ಕೆಲಸಗಾರರು ಮೊಳೆಗಳು ಇದ್ದ ಕೇಸ್‌ಗಳ ಮುಂದೆ ನಿಂತು, ನಿಜವಾದ ಯಂತ್ರದ ರೀತಿಯಲ್ಲೇ ಮೊಳೆಗಳನ್ನು ಎತ್ತಿ ಜೋಡಿಸುವ ಪರಿಯನ್ನು ಕಣ್ಣು ಬಾಯಿ ಬಿಟ್ಟುಕೊಂಡು ಸೋಜಿಗದಿಂದ ನೋಡುತ್ತಾ ನಿಂತುಬಿಡುತ್ತಿದ್ದೆ.
ಇನ್ನು, “ಕಾಲಿನಲ್ಲಿ ತುಳಿದು ಮುದ್ರಿಸುವ ಹಾಗೂ ಕತ್ತರಿಸುವ ಯಂತ್ರಗಳ ಹತ್ತಿರ ಹೋಗಬೇಡ, ಸ್ವಲ್ಪ ಎಚ್ಚರ ತಪ್ಪಿದರೂ ಕೈ ತುಂಡರಿಸಿ ಬಿಡುತ್ತವೆ” ಎಂದು ಜೊತೆಗಾರರು ಅನೇಕ ಉದಾಹರಣೆಗಳನ್ನು ಕೊಟ್ಟು ಹೆದರಿಸುತ್ತಿದ್ದರಿಂದ ನಾನು ಭಯಬೀತನಾಗಿದ್ದೆ.
ಸ್ವಾಮೀಜಿಗಳ ಬಳಿ ಹೋಗಿ ‘ಮುದ್ರಣಾಲಯದ ಕೆಲಸ ಬೇಡ, ನನಗೆ ಬೇರೆ ಕೆಲಸ ಕೊಡಿ’ ಎಂದು ಅನೇಕ ಬಾರಿ ಬಿನ್ನಹ ಮಾಡಿಕೊಂಡೆ. ‘ಕೊಟ್ಟ ಕುದುರೆಯನ್ನು ಏರಲಾರದವನು ವೀರನೂ ಅಲ್ಲ ಧೀರನೂ ಅಲ್ಲ’ ಈ ರೀತಿಯ ಅನೇಕ ಶರಣರ ವಚನಗಳನ್ನು ಹೇಳಿ ಸ್ವಾಮೀಜಿಯವರು ಬುದ್ಧಿವಾದ ಹೇಳುತ್ತಿದ್ದರು. ನಾನು ನಿರಾಶ‌ನಾಗಿ ಒಲ್ಲದ ಮನಸ್ಸಿನಿಂದ ಹಿಂದಿರುಗುತ್ತಿದ್ದೆ. ಮುಂದೆ ಸ್ವಲ್ಪ ದಿನಗಳಲ್ಲಿ ಎಲ್ಲರೊಂದಿಗೆ ಹೊಂದಿಕೊಂಡು ಒಂದೊಂದೇ ಕೆಲಸಗಳನ್ನು ಕಲಿಯತೊಡಗಿದೆ.
ಆ ದಿನಗಳಲ್ಲಿ ಮುದ್ರಣಾಲಯದ ಕೆಲಸಗಳೊಂದಿಗೆ ಮುರುಘಾವನದಲ್ಲಿ ಜನಸಂದಣಿ ಹೆಚ್ಚು ಇರುತ್ತಿದ್ದ ಭಾನುವಾರಗಳು ಮತ್ತು ಪ್ರತಿ ತಿಂಗಳ 5ನೇ ತಾರೀಕು ನಡೆಯುತ್ತಿದ್ದ ಸಾಮೂಹಿಕ ವಿವಾಹದ ದಿನದಂದು ಮಠದ ಒಳ ರಸ್ತೆ ಬದಿ ಗುರುಸ್ವಾಮಿಯೊಂದಿಗೆ ಪಾಪ್ ಕಾರ್ನ್ ಮತ್ತು ಮಜ್ಜಿಗೆ ಮಾರಲು ಅನುಮತಿ ನೀಡಿದ್ದರು. ಆ ರೀತಿಯಲ್ಲಿ ಅಲ್ಪ ವ್ಯವಹಾರ‌ ಜ್ಞಾನವನ್ನು ಪಡೆಯಲು ಮುರುಘಾ ಶರಣರು ಅಂದೇ ಅನುವು ಮಾಡಿಕೊಟ್ಟಿದ್ದರು.
ಬೆಂಗಳೂರಿನಲ್ಲಿ ಆಗಲೇ ಆಫ್‌ಸೆಟ್ ಯಂತ್ರಗಳು ಬಂದಿದ್ದು, ಲೆಟರ್ ಪ್ರೆಸ್‌ಗೆ ಬೇಡಿಕೆ ಕಮ್ಮಿಯಾಗುತ್ತಿತ್ತು. ಆಫ್‌ಸೆಟ್ ಮುದ್ರಣ ಯಂತ್ರಗಳಲ್ಲಿ ಕೆಲಸ ಕಲಿತರೇ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಅನೇಕ ಹಿರಿಯ ಕೆಲಸಗಾರರು ಮಾತನಾಡುವುದನ್ನು ಕೇಳಿ ನನ್ನಲ್ಲೂ ಬೆಂಗಳೂರಿಗೆ ಹೋಗಿ ಅತ್ಯಾಧುನಿಕ ಮುದ್ರಣದ ಕೆಲಸಗಳನ್ನು ಕಲಿಯಬೇಕೆಂಬ ಆಸೆ ಹುಟ್ಟಿತ್ತು. ಅಲ್ಲಿಂದ ನನ್ನ ಬಾಳ ಪಯಣ 1998ರಲ್ಲಿ ಬೆಂಗಳೂರಿನ ಸುಪ್ರಸಿದ್ಧ ‘ಲಕ್ಷ್ಮೀ ಮುದ್ರಣಾಲಯ’ದ ಕಡೆಗೆ ಸಾಗಿತು… ನಂತರ ಬೆಂಗಳೂರಿಗೆ ಬಂದು ಲಕ್ಷ್ಮೀ ಮುದ್ರಣಾಲಯದಲ್ಲಿ ಕೆಲಸಕ್ಕೇನೋ ಸೇರಿದೆ, ಆದರೆ ಮಾಯಾನಗರಿಯಲ್ಲಿ ವಾಸ್ತವ್ಯದ ಚಿಂತೆಯಲ್ಲಿದ್ದಾಗ ಮತ್ತೆ ಕೈಹಿಡಿದದ್ದು ಮುರುಘಾಮಠವೇ. ಸುಮಾರು ಹತ್ತು ವರ್ಷಗಳ ಕಾಲ ಸ್ವಾಮೀಜಿ ನನಗೆ ಬೆಂಗಳೂರಿನಲ್ಲಿ ಊಟ ವಸತಿಯನ್ನು ಗಾಂಧಿನಗರದ ಬಸವಕೇಂದ್ರದಲ್ಲಿ ಮಾಡಿಕೊಟ್ಟಿದ್ದರು.
ನನ್ನ ಜೀವನಕ್ಕೆ ದೊಡ್ಡ ತಿರುವು ಕೊಟ್ಟ ಪ್ರಸಂಗ ನಾನು ಲಕ್ಷ್ಮೀ ಮುದ್ರಣಾಲಯದ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ನಡೆಯಿತು. ನಮ್ಮ ಮಠದ ಸಿಬ್ಬಂದಿಯ ಮಗಳನ್ನು ಮದುವೆಯಾದರೆ ಮಠದಲ್ಲಿ ಖಾಯಂ ಕೆಲಸಕೊಡಿಸುವುದಾಗಿ ಒಂದು ಸಲಹೆ ಬಂತು. ಎಲ್ಲರೂ “ಒಳ್ಳೆಯ ಸಲಹೆ, ಬೆಂಗಳೂರು ಬಿಟ್ಟುಬಿಡು, ಮಠದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ ಊರಿನಲ್ಲಿ ಜಮೀನನ್ನು ನೋಡಿಕೊಂಡು ಹೋಗಬಹುದು” ಎಂದು ಹೇಳತೊಡಗಿದ್ದರು.
ನನಗೆ ಮುದ್ರಣಾಲಯದ ಕೆಲಸ ಬಿಟ್ಟು ಬರಲು ಇಷ್ಟವಿರಲಿಲ್ಲ. ಅದು ಸ್ವಾಮೀಜಿಯವರಿಗೆ ಹೇಗೋ ಗೊತ್ತಾಗಿ, ನನ್ನನ್ನು ಕರೆಸಿಕೊಂಡರು. ನನ್ನ ಜೊತೆ ಚರ್ಚಿಸಿ, ನನ್ನ ಮನಸ್ಥಿತಿಯನ್ನು ಗಮನಿಸಿ, “ನೀನು ಮುದ್ರಣಾಲಯದ ಕೆಲಸ ಬಿಟ್ಟು ಬರುವುದು ಬೇಡ. ನೀನು ಆ ಕೆಲಸವನ್ನೇ ಚೆನ್ನಾಗಿ ಕಲಿತುಕೋ, ಮುಂದೆ ಎಲ್ಲಾ ಒಳ್ಳೆಯದಾಗುತ್ತದೆ” ಎಂದು ಉತ್ತಮ ಸಲಹೆ ನೀಡಿ ನನ್ನ ಜೀವನಕ್ಕೆ ಒಂದು ಮಹತ್ವದ ತಿರುವನ್ನೇ ಕೊಟ್ಟರು. ನಾನು ಆಗ ಲಕ್ಷ್ಮೀ ಮುದ್ರಣಾಲಯದ ಕೆಲಸ ಬಿಟ್ಟು ಊರಿಗೆ ಹೋಗಿದ್ದರೆ ಸ್ವ್ಯಾನ್ ಪ್ರಿಂಟರ್ಸ್‌ನ ಕನಸು ಕಮರಿ ಹೋಗುತ್ತಿತ್ತು.

ಮುಂದೆ 2008ರಲ್ಲಿ ನಾನು ಸ್ವಂತ ಮುದ್ರಣಾಲಯ ಪ್ರಾರಂಭಿಸುವ ಇಂಗಿತವನ್ನು ಸ್ವಾಮೀಜಿಯವರ ಮುಂದೆ ವ್ಯಕ್ತಪಡಿಸಿದಾಗ ಮಠದ ದೊಡ್ಡ ದೊಡ್ಡ ಮುದ್ರಣ ಕೆಲಸಗಳನ್ನು ಕೊಡುವ ಮುಖಾಂತರ ಆಶೀರ್ವದಿಸಿದರು. ಅಷ್ಟೇ ಅಲ್ಲದೆ ನಮ್ಮ ಮುದ್ರಣಾಲಯಕ್ಕೆ ಸ್ವತಃ ಅವರೇ ಬಂದು ಜಾಗವನ್ನೆಲ್ಲ ಪರಿಶೀಲಿಸಿ, ಸೂಕ್ತ ಸಲಹೆ ಸೂಚನೆಗಳನ್ನು ಕೊಡುವುದರ ಜೊತೆಗೆ ಮುಂಗಡವಾಗಿ ದೊಡ್ಡ ಮೊತ್ತವನ್ನು ಕೊಟ್ಟು ಪ್ರೋತ್ಸಾಹಿಸಿದರು.
ನಂತರ ಸ್ವಾಮೀಜಿಯವರ ಮಹತ್ವಾಕಾಂಕ್ಷೆಯ ‘ವಚನ ಮಾರ್ಗ’ ಪುಸ್ತಕ ಮುದ್ರಣಕ್ಕೆ ಕೊಟ್ಟು, “ಈ ಪುಸ್ತಕ ಮುದ್ರಣಕ್ಕೆ ಹಣ ಎಷ್ಟು ಖರ್ಚಾದರೂ ಪರವಾಗಿಲ್ಲ, ಪುಸ್ತಕದ ಗುಣಮಟ್ಟ ಅಂತರರಾಷ್ಟ್ರೀಯ ಪುಸ್ತಕಗಳಿಗಿಂತ ಚೆನ್ನಾಗಿರಬೇಕು” ಎಂದರು. ಕೆಲವರು “ಪುಸ್ತಕದ ಅಕ್ಷರ ಜೋಡಣೆ, ವಿನ್ಯಾಸವೆಲ್ಲವನ್ನು ಸಿದ್ಧಪಡಿಸಿಕೊಂಡು ಸಿಂಗಾಪುರ್‌ಗೆ ಹೋಗಿ ಅಲ್ಲಿಯೇ ಮುದ್ರಿಸಿಕೊಂಡು ಬರಬಹುದು” ಎಂದು ಸಲಹೆಯನ್ನು ನೀಡಿದರು. ಸ್ವಾಮೀಜಿಯವರು ಆ ಸಲಹೆಯನ್ನು ಒಪ್ಪದೇ “ನಿಮ್ಮ ಮುದ್ರಣಾಲಯದಲ್ಲೇ ಪ್ರಯತ್ನಿಸು, ಧೈರ್ಯವಾಗಿ ಕೆಲಸ ಮಾಡು, ಹಣದ ಚಿಂತೆ ಮಾಡಬೇಡ” ಎಂದು ಧೈರ್ಯದ ಮಾತುಗಳನ್ನು ಹೇಳಿ ಹುರಿದುಂಬಿಸಿದರು.
ಅವರ ಇಚ್ಛೆಯಂತೆ ಪುಸ್ತಕ ಸಿದ್ಧವಾಗಿ ಅವರ ಕೈ ಸೇರಿದ ಮೇಲಂತೂ, ಬಹಳ ಸಂತೋಷದಿಂದ “ಈ ಪುಸ್ತಕ ಮುದ್ರಣಕ್ಕೆ ಯಾವುದಾದರೂ ಪ್ರಶಸ್ತಿ ಬರಲೇಬೇಕು ನಿನಗೆ” ಎಂದು ಹಾರೈಸಿದರು. ಅವರ ಹಾರೈಕೆಯಂತೆ ಮುಂದೆ ಆ ಪುಸ್ತಕಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರ ಪ್ರಾರಂಭಿಸಿದ, ಮುದ್ರಣಾಲಯಗಳಿಗೆ ಕೊಡಮಾಡುವ ಮೊಟ್ಟಮೊದಲ ಮುದ್ರಣ ಸೊಗಸು ಪ್ರಶಸ್ತಿ ಬಂದ ವಿಷಯ ತಿಳಿದಾಗ ನಮಗಿಂತ ಹೆಚ್ಚು ಸಂತಸಪಟ್ಟವರು ಸ್ವಾಮೀಜಿಯವರೇ.
ನಮ್ಮ ಮುದ್ರಣಾಲಯ ಅತ್ಯಂತ ಅಲ್ಪಾವಧಿಯಲ್ಲಿ ಕರ್ನಾಟಕದ ಉದ್ದಗಲಕ್ಕೂ ಹೆಸರು ಮಾಡಲು ಶ್ರೀಗಳೇ ಮುಖ್ಯ ಕಾರಣ. ಕರ್ನಾಟಕದ ಎಲ್ಲಾ ಭಾಗದಲ್ಲಿರುವ ನಮ್ಮ ಮಠದ ಶಾಖಾಮಠಗಳ ಕಾರ್ಯಕ್ರಮಗಳ ಮುದ್ರಣ ಕಾರ್ಯವನ್ನು ನಮಗೆ ಕೊಡಿಸಿದರು.
ಆಹ್ವಾನ ಪತ್ರಿಕೆ, ಕರಪತ್ರ, ಭಿತ್ತಿಪತ್ರಗಳಲ್ಲಿ ನಮ್ಮ ಮುದ್ರಣಾಲಯದ ಹೆಸರನ್ನು ಒಂದು ಬದಿ ಮೂಲೆಯಲ್ಲಿ ದೊಡ್ಡದಾಗಿ ಹಾಕಿಸಿದರು. ಜೊತೆಗೆ ಸ್ವಾಮೀಜಿ ಅವರು ಕಾರ್ಯಕ್ರಮದ ವೇದಿಕೆಗಳಲ್ಲಿ ದೊಡ್ಡದೊಡ್ಡ ಮಹನೀಯರ ಮುಂದೆ ನನ್ನನ್ನು ಸನ್ಮಾನಿಸಿ ನಮ್ಮ ಮುದ್ರಣ ಸಂಸ್ಥೆಯ ಬಗ್ಗೆ ನಾಲ್ಕು ಮೆಚ್ಚುಗೆಯ ಮಾತುಗಳನ್ನು ಪ್ರೀತಿ ಮತ್ತು ಹೆಮ್ಮೆಯಿಂದ ಆಡುತ್ತಿದ್ದರು. ಅದು ನನ್ನ ಬೆಳವಣಿಗೆಗೆ ಮತ್ತು ಮುದ್ರಣ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಹುಮ್ಮಸ್ಸಿಗೆ ಕಾರಣವಾಯಿತು.

‍ಲೇಖಕರು avadhi

June 8, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: