ಸ್ವ್ಯಾನ್ ಕೃಷ್ಣಮೂರ್ತಿ ಅಂಕಣ: ಕಂಬಾರರ ಫರ್ಮಾನು..

ಕನ್ನಡ ಪುಸ್ತಕ ಪ್ರಾಧಿಕಾರದಿಂದ ಚಂದ್ರಶೇಖರ ಕಂಬಾರರ ಸಮಗ್ರ ನಾಟಕಗಳು ಪುಸ್ತಕ – ಸಿರಿಸಂಪಿಗೆ ಮುದ್ರಣದ ಸಮಯ.

ಆಗ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರು ಕಂಬಾರರ ನಾಟಕಗಳ ಸಮಗ್ರ ಪುಸ್ತಕ ಮುದ್ರಣ ಕುರಿತ ಮಾತುಕತೆಗಾಗಿ ಕಂಬಾರರ ಮನೆಗೆ ನನ್ನನ್ನು ಕರೆದುಕೊಂಡು ಹೋಗಿದ್ದರು.

ಮನೆಯಲ್ಲಿ ಮಾತುಕತೆ ಮುಗಿದ ಮೇಲೆ ಕಂಬಾರರು ಅವರ ಹಳೆಯ ನಾಟಕ ಪುಸ್ತಕಗಳನ್ನು ತಂದುಕೊಟ್ಟು “ಎಲ್ಲಾ ಡಿ.ಟಿ.ಪಿ. ಮಾಡಿಸಿ ಪ್ರೂಫ್ ಕೊಡಿ. ಆದರೆ ಇವು ಹಳೆಯ ಪುಸ್ತಕಗಳು, ಹುಷಾರು. ಇವು ಕಳೆದರೆ ಮತ್ತೆ ಎಲ್ಲೂ ಸಿಗಲ್ಲ” ಅಂತ ಎಚ್ಚರಿಕೆಯ ಮಾತು ಹೇಳಿದರು.

ಅದರಂತೆ ಒಂದೊಂದೇ ನಾಟಕ ಡಿ.ಟಿ.ಪಿ. ಆದಕೂಡಲೇ ಒರಿಜಿನಲ್ ಪುಸ್ತಕದ ಜೊತೆ ಪ್ರೂಫ್‌ನ ಕಂಬಾರರ ಮನೆಗೆ ಕೊಟ್ಟು ಬರ್ತಾ ಇದ್ವಿ . ಒಂದು ದಿನ ಈ ಪುಸ್ತಕಗಳ ಡಿ.ಟಿ.ಪಿ. ಮಾಡುತ್ತಿದ್ದ ಸತ್ಯಕುಮಾರಿ ಒಂದು ನಾಟಕದ ಪ್ರೂಫನ್ನು ಮತ್ತು ಒರಿಜಿನಲ್ ಪುಸ್ತಕವನ್ನು ಸರ್ ಮನೆಗೆ ತಲುಪಿಸಲು ಸಿದ್ಧ ಮಾಡಿ ಟೇಬಲ್ ಮೇಲೆ ಇಟ್ಟಿದ್ದರು. ಯಾರೋ ಟೇಬಲ್ ಮೇಲಿದ್ದ ಹಳೆ ಪುಸ್ತಕ ನೋಡಿ ಓದಲು ಎತ್ತಿಕೊಂಡವರು, ಮರೆತು ತಮ್ಮ ಬಗಲಲ್ಲಿ ಇಟ್ಟುಕೊಂಡು ಹೋಗಿಬಿಟ್ಟರೇನೋ ಅಥವಾ ದಿನವೂ ಮುದ್ರಣವಾದ ಪುಸ್ತಕಗಳ ಸ್ಯಾಂಪಲ್ ಗೆಂದು ನಮ್ಮ ಟೇಬಲ್ ಮೇಲೆ ಇಟ್ಟಿದ್ದ ರಾಶಿ ರಾಶಿ ಪುಸ್ತಕದಲ್ಲಿ ಸೇರಿಬಿಟ್ಟಿತ್ತೋ! ಎಷ್ಟು ಹುಡುಕಿದರೂ ಹಳೆಯ ಪುಸ್ತಕ ಸಿಗಲೇ ಇಲ್ಲ.

ಕಂಬಾರರಿಗೆ ಏನು ಹೇಳೋದು?

“ಇವು ಹಳೆಯ ಪುಸ್ತಕಗಳು, ಎಲ್ಲಿಯೂ ಸಿಗಲ್ಲ, ಕಳೆದೀರಾ ಜೋಕೆ..!” ಎಂದು ಮೊದಲೇ ಹೇಳಿಬಿಟ್ಟಿದ್ದರು ಬೇರೆ.

ಕೊನೆಗೆ ಏನೂ ತೋಚದೆ ಬರೀ ಪ್ರೂಫ್ ಹಿಡಿದು ಕಂಬಾರರ ಮುಂದೆ ನಿಂತು “ಸರ್, ಇದು ಒಂದು ಪ್ರೂಫ್‌ದು ಒರಿಜಿನಲ್ ಬುಕ್ ಕಳೆದುಹೋಗಿದೆ” ಎಂದಕೂಡಲೇ ಸರ್‌ಗೆ ಸಿಟ್ಟು ತಾರಕಕ್ಕೇರಿ ಬಿಟ್ಟಿತ್ತು!

“ಏನಯ್ಯ, ಕಳೆದುಬಿಟ್ಟಿತು ಅಂತ ಎಷ್ಟು ಸುಲಭವಾಗಿ ಹೇಳ್ತೀಯಾ! ಸ್ವಲ್ಪವೂ ಜವಾಬ್ದಾರಿ ಬೇಡವಾ…” ಎಂದು ಬೈಯುತ್ತಾ ಕೊನೆಗೆ “ಗೆಟ್ ಔಟ್” ಎಂದು ಪ್ರೂಫ್ ಅನ್ನು ಟೇಬಲ್ ಮೇಲೆ ಎಸೆದು, ಒಳಗೆ ಹೋಗಿಬಿಟ್ಟರು.

ಹ್ಯಾಪು ಮೋರೆಯೊಂದಿಗೆ ಅವರ ಮನೆಯಿಂದ ಹೊರಗೆ ಬಂದೆ.

ಮೂರ್ನಾಲ್ಕು ದಿನ ಕಳೆದ ಮೇಲೆ ಮಲ್ಲೇಪುರಂ ಅವರು ಹೋಗಿ, “ನಮ್ಮ ಯೂನಿವರ್ಸಿಟಿ ಗ್ರಂಥಾಲಯದಲ್ಲಿ ಈ ಪುಸ್ತಕದ ಒಂದು ಪ್ರತಿ ಇದೆ, ಅದನ್ನು ತರಿಸಿಕೊಡುವೆ” ಎಂದು ಸಮಾಧಾನಪಡಿಸಿ ಬಂದಿದ್ದರು…

ಮುಂದೆ ‘ಶಿವನ ಡಂಗುರ’ ಪುಸ್ತಕ ಮುದ್ರಣ ಸಮಯದಲ್ಲಿ ಕರಡು ತಿದ್ದಿಸಲು ಅವರೇ ಎರಡು ಮೂರು ಬಾರಿ ನಮ್ಮ ಮುದ್ರಣಾಲಯಕ್ಕೆ ಬಂದಿದ್ದರು.

ಆನಂತರ ಒಂದು ದಿನ ಪುಸ್ತಕದ ಪ್ರೂಫ್‌ನ ತಿದ್ದುಪಡಿ ಬಗ್ಗೆ ಏನೋ ಹೇಳಲು ಸರ್ ನನಗೆ ಮೂರು ನಾಲ್ಕು ಬಾರಿ ಕರೆ ಮಾಡಿದ್ದಾರೆ, ನಾನು ಕರೆ ಸ್ವೀಕರಿಸಿಲ್ಲ..!! ಮತ್ತೆ ಮಾರನೇ ದಿನ ಕರೆ ಮಾಡಿದಾಗಲೂ ನಾನು ಕರೆ ಸ್ವೀಕರಿಸಿಲ್ಲ. ಅವರಿಗೆ ಕೋಪ ಬಂದು ಪುಸ್ತಕ ಪ್ರಕಾಶಕರಾದ ಪ್ರಕಾಶ್ ಕಂಬತ್ತಳ್ಳಿ ಅವರಿಗೆ ಕರೆ ಮಾಡಿ, “ಏನಯ್ಯ ನಿಮ್ಮ ಪ್ರೆಸ್‌ನವನು ನಾನು ಎಷ್ಟು ಸಾರಿ ಫೋನ್ ಮಾಡಿದರೂ ನನ್ನ ಫೋನ್ ತಗೋತಾ ಇಲ್ಲ… ನೋಡು ನನ್ನ ಪುಸ್ತಕ ಆ ಪ್ರೆಸ್‌ನಲ್ಲಿ ಪ್ರಿಂಟ್ ಆಗುವುದು ಬೇಡ.. ನನ್ನದು ಅಷ್ಟೇ ಅಲ್ಲ, ನಿಮ್ಮ ಪ್ರಕಾಶನದ ಯಾವುದೇ ಪುಸ್ತಕವನ್ನು ಅವನಿಗೆ ಮುದ್ರಣಕ್ಕೆ ಕೊಡಬೇಡ” ಎಂದು ಕೋಪದಲ್ಲಿ ಹೇಳಿಬಿಟ್ಟಿದ್ದರು.

ಕೊನೆಗೆ ಪುಸ್ತಕ ಬಿಡುಗಡೆ ದಿನ ಬೈರಮಂಗಲ ರಾಮೇಗೌಡ ಅವರು “ಗುರುಗಳು ಈಗ ಖುಷಿಯಾಗಿದ್ದಾರೆ, ಏನೋ ಒಂದು ಕಾರಣ ಹೇಳಿ ಸಮಾಧಾನಪಡಿಸಿ, ನಿಮ್ಮಿಬ್ಬರನ್ನು ರಾಜಿ ಮಾಡಿಸ್ತೀನಿ ಬಾ” ಅಂತ ಅವರ ಬಳಿಗೆ ಕರೆದೊಯ್ದರು.

ನನ್ನನ್ನು ನೋಡುತ್ತಲೇ ಕಂಬಾರರು ನಗುತ್ತಲೇ ಹತ್ತಿರಕ್ಕೆ ಕರೆದು “ಪುಸ್ತಕ ಚೆನ್ನಾಗಿ ಮುದ್ರಣವಾಗಿದೆ ಕಣಯ್ಯ” ಅಂತ ಖುಷಿಯಿಂದ ಹೇಳಿದರು . “ಸರ್, ಪ್ರಕಾಶ್ ಕಂಬತ್ತಳ್ಳಿ ಅವರಿಗೆ ನಮ್ಮ ಮುದ್ರಣಾಲಯಕ್ಕೆ ಪುಸ್ತಕಗಳನ್ನು ಮುದ್ರಣಕ್ಕೆ ಕೊಡುವುದು ಬೇಡ ಅಂತ ಹೇಳಿದ್ರಿ” ಅಂದಾಗ… ಕಿರುನಗೆಯೊಂದಿಗೆ ಒಂದೇ ಕೈನಲ್ಲಿ ನನ್ನನ್ನು ಹಿಡಿದು ಬಿಗಿದಪ್ಪಿ “ನಿಮಗೇ ಕೊಡಲು ಹೇಳ್ತೀನಿ ಬಿಡು” ಅಂತ ಹೇಳುತ್ತಿರುವಾಗಲೇ ತಕ್ಷಣ “ಸರ್, ಈ ಮಾತನ್ನು ನೀವು ಇಂದು ಬಿಡುಗಡೆಯಾದ ಪುಸ್ತಕದಲ್ಲೇ ಬರೆದುಕೊಡಿ” ಎಂದು ಕೇಳಿದೆ.

“ಇನ್ನು ಮುಂದೆ ನನ್ನ ಎಲ್ಲಾ ಪುಸ್ತಕಗಳನ್ನು ನೀನೇ ಪ್ರಿಂಟ್ ಮಾಡತಕ್ಕದ್ದು” ಎಂದು ಬರೆದು, ಸಹಿ ಮಾಡಿ ಕೊಟ್ಟು ಮತ್ತೊಂದು ನಗೆಬೀರಿದರು.

“ಸರ್, ಆದರೆ ಅವತ್ತು ನೀವು ಕರೆ ಮಾಡಿದ್ದೆ, ನೀನು ಸ್ವೀಕರಿಸಲಿಲ್ಲ ಎಂದು ಕೋಪಿಸಿಕೊಂಡಿದ್ರಲ್ಲಾ, ಅವತ್ತು ನಿಮ್ಮಿಂದ ಯಾವುದೇ ಕರೆ ಬಂದಿರಲಿಲ್ಲ….” ಎಂದೆ. “ನೀವು ಯಾವ ನಂಬರ್ ಸೇವ್ ಮಾಡಿಕೊಂಡಿದ್ದೀರಿ….?” ಎಂದು ಅವರ ಮೊಬೈಲ್‌ನಲ್ಲಿ ಚೆಕ್ ಮಾಡಿದರೆ, ಅವರು ನಮ್ಮ ಆಫೀಸ್ ಲ್ಯಾಂಡ್ ಲೈನ್ ನಂಬರ್ ಸೇವ್ ಮಾಡಿಕೊಂಡಿದ್ದರು. ಆ ದಿನಗಳಲ್ಲಿ ನಮ್ಮ ಲ್ಯಾಂಡ್‌ಲೈನ್ ದುರಸ್ತಿಯಲ್ಲಿತ್ತು.

“ಕಂಬಾರರು – ನಾನು ನನ್ನ ಬರವಣಿಗೆ ಮಾಡಲು ಬಿಳಿ ಹಾಳೆಯ ನೋಟ್ ಪ್ಯಾಡನ್ನು ಇವರ ಮುದ್ರಣಾಲಯದಿಂದಲೇ ನಾನು ಕೇಳಿದಾಗಲೆಲ್ಲಾ ಕೊಡುತ್ತಲೇ ಇರುತ್ತಾರೆ. ನನ್ನ ಎಲ್ಲ ಪುಸ್ತಕಗಳು ಸ್ವ್ಯಾನ್‌ನಲ್ಲೇ ಮುದ್ರಣವಾಗಿವೆ” ಎಂದು ಅವರೇ ಒಂದು ಸಂದರ್ಶನದಲ್ಲಿ ಸಂತೋಷದಿಂದ ಹೇಳಿಕೊಂಡಿದ್ದು… ನಮಗೆ ಹೆಮ್ಮೆಯ ವಿಷಯ.

‍ಲೇಖಕರು nalike

May 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: