ಬದುಕೆಂಬುದು ಗೊನೆಬಿಟ್ಟ ಬಾಳೆ..

ಆಕಾಶದ ಗುರುತು
 ಡಾ. ಬಸು ಬೇವಿನಗಿಡದ

ತಲೆಮೇಲಿನ ಭಾರಕ್ಕೆ ಸೋತ ಅಪ್ಪ
ಸೊರಗಿ, ಸಣ್ಣಗಾಗಿ, ಆಸೆ ಪುಡಿಪುಡಿಯಾಗಿ
ಮತ್ತೆ ಮೇಲೇಳಲಾರದಂತೆ
ಹಾಸಿಗೆ ಹಿಡಿದ ಸುದ್ದಿ ಸಿಡಿಲಂತೆ
ಸಂಜೆ ಹೊತ್ತಿಗೆ ಸಿಡಿದು, ಹೃದಯ ಕಣ್ಣೀರ್ಗರೆದು
ಎದೆಯೊಳಗೆ ಹೇಳಲಾರದ ಕಳವಳ
ಕಾಲಿಲ್ಲ ಎದ್ದು ನಿಲ್ಲಲು
ಕರಗಿಲ್ಲ ಎನ್ನೊಳಗಿನ ಕೇಡಿನ ಕತ್ತಲು
ಅಪ್ಪನ ನಿಟ್ಟುಸಿರಿಗೆ ಸುಟ್ಟಿತು
ನಾನು ಕಟ್ಟಿ ವಾಸವಿದ್ದ ಅರಗಿನರಮನೆ
ಕರಗಿತು ಕ್ಷಣಾರ್ಧದಲ್ಲಿ
ಅವನೊಡನೆ ಮಾತು ಕಡಿದುಕೊಂಡ
ಅಹಂಕಾರದ ಆವರಣ
ಮಗುಚಿ ಬಿದ್ದಿತು ಇದುವರೆಗು ತಡೆದಿದ್ದ
ಸುತ್ತಲಿನೇಳು ಸುತ್ತಿನ ನಿಶ್ಶಬ್ದ ಉಕ್ಕಿನಕೋಟೆ
ದಣಿವರಿಯದೆ ದುಡಿಯುತ್ತಲಿದ್ದವನ
ಶ್ರಮಸಾಗರಕ್ಕೆಲ್ಲಿದೆ ತೀರ
ಅಕ್ಕರೆ ಉಣಿಸಿದ ಅವನ ಹೃದಯಸಮುದ್ರಕ್ಕೆ
ಲ್ಲಿದೆ ಹೋಲಿಕೆ
ಮೈಮೇಲೆ ಬಂಡೆಗಳುರುಳಿದರೂ
ಬಿರುಕು ಬಿಡಲಿಲ್ಲ ಎದೆಗಾರನೆದೆ
ರಣರಣ ಬಿಸಿಲಿನಲ್ಲಿ ಒಂದೇ ಒಂದು ಕೋರಿಕೆ
ಭೂಮಿತಾಯಿ ನಕ್ಕೆ ನಗುವಳೆಂಬ ಗಾಢ ನಂಬಿಕೆ
ಅಪ್ಪ ಚಾಚಿದ ನೆರಳಿನಲ್ಲಿ ಮನಸು ಹಿಗ್ಗಿ ಹಿಂದಕ್ಕುರುಳಿ
ಹುಡುಕಿ ಹೋಗುವುದು ನೆನಪು ಸುರುಳಿ ಸುರುಳಿ
ತೀರಲಾರದ ಹೊಲದ ಅಸಲು ಬಡ್ಡಿ ತೀರಿಸಿ
ಬಿತ್ತಿ ಬೆಳೆದನು ಬಗೆಬಗೆಯ ಬೆಳೆ
ಬದುಕೆಂಬುದು ಗೊನೆಬಿಟ್ಟ ಬಾಳೆ
ಎಳೆಮಗು ತಾನು ಇರಬೇಕು ಅವನ ಹೆಗಲ ಮೇಲೆ
ಇದ್ದೇ ಇರಬೇಕು ಇನ್ನೂ ಹಾಗೆ
ಮರದ ಕೆಳಗೆ ಅವನು ತಿನ್ನದೆ ಇಟ್ಟ ರೊಟ್ಟಿ
ದಾಹತೀರಕ್ಕೆಂದು ಕಟ್ಟಿದ ಸಿಹಿನೀರಿನ ತೊಟ್ಟಿ

+++

ಮಲಗಿದವನ ಬಾಯಿಂದ
ಒಂದೇ ಸಮನೆ ಜೊಲ್ಲು ಸುರಿಯುತ್ತಿದೆ
ಗುರುತು ಹಿಡಿಯಲು ಕಷ್ಟಪಡುವ
ಕಣ್ಣುಗಳಿಂದ ನೀರು ದಳದಳ ಹರಿಯುತ್ತಿದೆ
ಕೂಸಿನ ಹಾಗೆ ಕೈಸನ್ನೆ ಮಾಡುತ್ತಾನೆ
ಅವೆ ಅವೆ ಕೈಗಳು, ತೂರಿ ಹಿಡಿದ ಕೈಗಳು
ತನ್ನನ್ನಾಡಿಸಿದ ಬಲಿಷ್ಠ ಕೈಗಳು
ದಟ್ಟಡಿಯಿಡಲು ಕಲಿಸಿದ ಕೈಗಳು
ಹೆಗಲ ಮೇಲೆ ಹೊತ್ತು ತಿರುಗಿದ ಕೈಗಳು
ಅಳು ನೇವರಿಸಿದ ಮೃದು ಕೈಗಳು
ತಪ್ಪಿದಾಗ ಹೊಡೆದ ಕಠೋರ ಕೈಗಳು
ಈಗ ಶಕ್ತಿ ಸಾಲದೆ ಮೇಲೇಳದೆ
ಮುದುಡಿಯಾಗಿರುವ ಎದೆಯ ಮೇಲೆ
ಒಣಗಿದೆಲೆಯಂತೆ ಬಿದ್ದುಕೊಂಡಿವೆ
ವಾರೆಬಾಯಿಯ ಅಸ್ಪಷ್ಟ ಮಾತು ತಿಳಿಯದೆ
ಆಳದಿಂದೇಳುವ ನೋವಿನ ಸ್ವರಕ್ಕೆ
ಸ್ವರ ಹೊಂದಿಸಲಾರದೆ ಬಾಗುತ್ತೇನೆ
ನಡುಗುವ ಕೈಗಳ ಮೇಲೆ ಕೈಯಿಟ್ಟು
ಮುಖಕ್ಕೆ ಮುಖ ಕೊಟ್ಟರೆ
ಅವನ ಪಿಚ್ಚುಗಣ್ಣಿನಲ್ಲಿ ಸರಿಯುತ್ತಿದೆ ನನ್ನ ಬಾಲ್ಯದ ಚಿತ್ರ
ಬೇಕೆಂದರೂ ಸಿಗದೆ ಬೆರಳುಗಳ ನಡುವೆ
ಜಾರಿ ಹೋಗುತ್ತಿದೆ ಅಪ್ಪನ ವಾತ್ಸಲ್ಯದ ಸ್ಪರ್ಶ
ಯಾಕೊ ತುಸು ಹೆದರಿ ಹಿಂದೆ ಸರಿದೆ
ಅವ್ವ ಮುಂದೆ ಬಂದು ತಬ್ಬಿಕೊಂಡಳು!

‍ಲೇಖಕರು nalike

May 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Kumar Vantamure

    ಅಪ್ಪನ ನೆನಪುಗಳ ಬುತ್ತಿ ಬಿಚ್ಚಿಟ್ಟ ನಿಮ್ಮ ಸಾಲುಗಳಿಗೆ
    ನೆನಪಿನ ಹಂದರ ಕಟ್ಟಲು ಪ್ರಯತ್ನಿಸುತ್ತಿರುವೆ .

    ಪ್ರತಿಕ್ರಿಯೆ
  2. Nagraj Harapanahalli.karwar

    ಕತೆಗಾರನ ಅಪ್ಪನ ಕೊನೆಯ ಕ್ಷಣಗಳ ಕವಿತೆಯಲ್ಲಿ ಕಟ್ಟಿಕೊಡುವ ಬಗೆಯಲ್ಲಿ ಕತೆಯ ಒಂದು ಪ್ಯಾರಾದ ದಟ್ಟ ವಿವರಗಳು ಎದೆಗೆ ನಾಟಿದವು.
    ಬೇವಿನಗಡಿದ ಸರ್, ನಿಮ್ಮ ಅಪ್ಪ ಹೊಡೆಯದ ದಿನ ಎಂಬ ಕವಿತೆ ನೆನಪಾಯಿತು. ಆ ಕವಿತೆಯನ್ನು ನೀವು ಕಾರವಾರದಲ್ಲಿ ಎರಡು ಸಲ ವಾಚಿಸಿದ್ದಿರಿ.‌ ಆ ಚಿತ್ರ ನನ್ನ ಕಣ್ಣಿಗೆ ಕಟ್ಟಿದಂತಿದೆ. ನಾವಿಬ್ಬರು ದಂಡೆಯಲ್ಲಿ ಓಡಾಡಿ,ಹರಟೆ ಹೊಡೆದ ದಿನ ನೆನಪಾದವು, ಸರ್.

    ಪ್ರತಿಕ್ರಿಯೆ
  3. T S SHRAVANA KUMARI

    ಆಪ್ತವಾದ ಕವಿತೆ. ಇಷ್ಟವಾಯಿತು.

    ಪ್ರತಿಕ್ರಿಯೆ
  4. .ಮಹೇಶ್ವರಿ.ಯು

    ಭಾವಾರ್ದ್ರ ಕವಿತೆ.ತಾಜಾ ಅನುಭವ ಮನಮುಟ್ಟಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: