ಸ್ವಾತಂತ್ರ್ಯದ ಸಂಭ್ರಮದ ಹಿಂದೆ ಮುಂದೆ..

ಪಿ ಬಿ ಪ್ರಸನ್ನ

`ಇಗೊಳ್ಳಿರಾ ನಾಡಿದ್ದು ಸ್ವಾತಂತ್ರ್ಯ ಉತ್ಸವ. ನಮ್ಮ ದೇಶಕ್ಕೇ ದೊಡ್ಡ ಹಬ್ಬ. ಮಹಾತ್ಮ ಗಾಂಧಿ, ಸುಭಾಸ್ ಚಂದ್ರ ಬೋಸ್, ಜವಹರ್ ಲಾಲ್ ನೆಹರು ಮೊದಲಾದವರು ಬ್ರಿಟಿಷರ ವಿರುದ್ಧ ಹೋರಾಡಿ, ಮನೆ ಮಠ ಬಿಟ್ಟು, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ದಿನ. ನೀವೆಲ್ಲರು  ಅವತ್ತು ಬೆಳಿಗ್ಗೆ ಬೇಗ ಎದ್ದು , ಸ್ನಾನ ಮಾಡಿ ತೊಳೆದು ಇಸ್ತ್ರಿ ಮಾಡಿದ ಸಮವಸ್ತ್ರ ಹಾಕಿಕೊಂಡು ಬರಬೇಕು. ದೇಶದ ಸ್ವಾತಂತ್ರ್ಯದ ಉತ್ಸವವನ್ನು ನಮ್ಮ ಶಾಲೆಯಲ್ಲಿ ಆಚರಣೆ ಮಾಡ್ಳಿಕ್ಕೆ ಉಂಟು. ಸರಿಯಾಗಿ ಏಳೂವರೆಗೆ ನಮ್ಮ ಶಾಲೆಯಲ್ಲಿ ಬಾವುಟ ಹಾರಿಸಲಾಗುತ್ತದೆ. ನಂತರ ಎಲ್ಲರು ಸಾ ಮೆರವಣಿಗೆಯಲ್ಲಿ  ಅಜ್ಜರಕಾಡಿಗೆ ಹೋಗ್ಲಿಕ್ಕೆ ಉಂಟು. ಅಲ್ಲಿ ಎಂಟು ಗಂಟೆಗೆ ಧ್ವಜಾರೋಹಣ ಮಾಡ್ತಾರೆ. ನಂತರ ಎಲ್ಲರಿಗೆ ಸಾ ಲಾಡು ಕೊಡ್ತಾರೆ. ಯಾರು ಸಾ ಸ್ವಾತಂತ್ರ್ಯ ದಿನಾಚರಣೆಯನ್ನು ತಪ್ಪಿಸಿಕೊಳ್ಳಿಕ್ಕೆ ಇಲ್ಲ. ತಪ್ಪಿಸಿದ್ರೆ ಅವರಿಗೆ ಲಾಡು ಸಿಗೂದಿಲ್ಲ. ಮಾತ್ರ ಅಲ್ಲ ಎರಡನೆಯ ಕಿರುಪರೀಕ್ಷೆಯ ಪ್ರಶ್ನೆ ಪತ್ರಿಕೆಗೆ ಉತ್ತರವನ್ನು ಐದೈದು ಸರ್ತಿ ಬರೆಸ್ತೇನೆ’ ಇದು ನಾನು ನಲವತ್ತೈದು- ನಲವತ್ತಾರು ವರ್ಷಗಳ ಹಿಂದೆ ಎಲಿಮೆಂಟರಿ ಶಾಲೆಯಲ್ಲಿ ಇದ್ದಾಗ ನಮ್ಮ ಹೆಡ್ ಮಾಷ್ಟ್ರು ಹೇಳುತ್ತಿದ್ದ ಮಾತುಗಳು. ನಮಗೆಲ್ಲ ಆಗ ರೋಮಾಂಚನ ಕಾರಣ ಸ್ವಾತಂತ್ರ್ಯ ದಿನದಂದು ಲಾಡು ಕೊಡುತ್ತಾರೆ. ಅದೂ ಬೂಂದಿ ಲಾಡು!. ದೊಡ್ಡ ಸೈಜಿನದ್ದು!.

ಒಂದು ವಾರಕ್ಕೆ ಮೊದಲೇ ಸ್ವಾತಂತ್ರ್ಯ ದಿನಾಚರಣೆಯ ಸಿದ್ಧತೆಯನ್ನು ತರಗತಿವಾರು ಮಾಡಲು ಕೆಲಸ ಹಚ್ಚುತ್ತಿದ್ದರು. ಎಸೆಂಬ್ಲಿಯಲ್ಲಿ ಯಾರು ಕಮಾಂಡ್ ಕೊಡಬೇಕು, ಯಾರು ಧ್ವಜ ವಂದನೆ ಗೀತೆ ಹಾಡಬೇಕು ಅಂತೆಲ್ಲ ನಿಯೋಜನೆ ಮಾಡುತ್ತಿದ್ದರು. ಸಣ್ಣ ಕ್ಲಾಸಿನವರಾದ ನಮಗೆ ಚೀಟಿ ಅಥವಾ ಬೋರ್ಡ್ ಗಳನ್ನು ತಯಾರು ಮಾಡುವ ಕೆಲಸ ಇರುತ್ತಿತ್ತು. ಬಟ್ಟೆ ಅಂಗಡಿಗಳಿಗೆ ಹೋಗಿ ಮಾಲೀಕರ ಬಳಿ ಅಂಗಲಾಚಿ ಬಟ್ಟೆ ಸುತ್ತಿ ಬರುತ್ತಿದ್ದ ರಟ್ಟುಗಳನ್ನು ತರುತ್ತಿದ್ದೆವು. ನಂತರ ಖಾಲಿ ಕಾಗದದಲ್ಲಿ `ಮಹಾತ್ಮ ಗಾಂಧಿ ಜಿಂದಾಬಾದ್,’ `ಸ್ವಾತಂತ್ರ್ಯ ಉತ್ಸವಕ್ಕೆ ಜಯವಾಗಲಿ,’ `ಬೋಲೋ ಭಾರತ್ ಮಾತಾ ಕೀ ಜೈ’, `ವಂದೇ ಮಾತರಂ’ ಇತ್ಯಾದಿ ಘೋಷಣೆಗಳನ್ನು ಬರೆದು ಅಂಟಿಸುತ್ತಿದ್ದೆವು. ಆಗ ಕಾರ್ಯಾನುಭವ ಅಂತ  ಒಂದು ಪಿರಿಯೆಡ್ಡೇ ಇರುತ್ತಿತ್ತು. ಅಂಥ ಪಿರಿಯೆಡ್ಡಿನಲ್ಲಿ ಇದೇ ಕೆಲಸ ಇರುತ್ತಿತ್ತು. ಸ್ವಾತಂತ್ರ್ಯದಿನಾಚರಣೆ ಹತ್ತಿರ ಬರುತ್ತಿದ್ದಂತೆ ನಮ್ಮ  ಉದ್ವೇಗ ಉತ್ಸಾಹ ಹೆಚ್ಚಾಗುತ್ತಿತ್ತು. ಧ್ವಜಾರೋಹಣದ ಹಿಂದಿನ ದಿನ ಧ್ವಜದ ಕಟ್ಟೆಯನ್ನು ನೀರು ಹಾಕಿ ಚೊಕ್ಕ ಮಾಡುವುದೇನು, ಹತ್ತಿರದ ಮನೆಗಳ ತೋಟದಿಂದ ಮಾವಿನ ಸೊಪ್ಪು ತಂದು ತೋರಣ ಕಟ್ಟುವುದೇನು. ಸಂಭ್ರಮವೋ ಸಂಭ್ರಮ..

ನಮ್ಮ ಪಿಟಿ ಮಾಷ್ಟ್ರು ಧ್ವಜಾರೋಹಣದ ಹಿಂದಿನ ದಿನ ಧ್ವಜದ ಕಟ್ಟೆಯ ಹತ್ತಿರ ಸುಣ್ಣದ ಗೆರೆಗಳನ್ನು ಎಳೆದು ಯಾವ ಯಾವ ತರಗತಿಯವರು ಎಲ್ಲೆಲ್ಲಿ ನಿಲ್ಲಬೇಕು ಅಂತೆಲ್ಲ ನಿರ್ದೇಶನವನ್ನು ಕೊಡುತ್ತಿದ್ದರು. ಕೆಲವು ಬಾರಿ ಹಿಂದಿನ ದಿನ ರಾತ್ರಿ ಮಳೆ ಬಂದು ಹಾಕಿದ ಸುಣ್ಣದ ಗೆರೆಗಳೆಲ್ಲ ಅಳಿಸಿ ಹೋಗುತ್ತಿತ್ತು. ,ಮರು ದಿವಸ ಬೆಳಿಗ್ಗೆ ಧ್ವಜಾರೋಹಣ  ಕಾರ್ಯಕ್ರಮ ಆಗುವಾಗ ಪಿಟಿ ಮೇಷ್ಟ್ರ ಗೊಂದಲ ದೇವರಿಗೇ ಪ್ರೀತಿ. ಒಂದೊಂದೇ ಕ್ಲಾಸಿನವರನ್ನು ಎತ್ತರಕ್ಕೆ ಅನುಗುಣವಾಗಿ ನಿಲ್ಲಿಸುವಾಗ ಕೆಲವರು ಏನೂ ತಿನ್ನದೇ ಬಂದವರು ತಲೆತಿರುಗಿ ಬೀಳುತ್ತಿದ್ದರು. ಮತ್ತೆ ಕೆಲವರು `ನಂಗೆ ಕಾರ್ಲಿಕ್ಕೆ ( ವಾಂತಿ) ಬರ್ತದೆ ಸಾರ್’ ಅಂತ ಹೇಳಿ ತಲೆ ನೋವು ತರುತ್ತಿದ್ದರು. ಅಂಥವರನ್ನೆಲ್ಲ ಬದಿಗೆ ತಂದು ಕೂರಿಸಬೇಕು, ಧ್ವಜವನ್ನು ಕಟ್ಟಬೇಕು, ಧ್ವಜಾರೋಹಣ ಸಾಂಗವಾಗಿ ಆಗಬೇಕು ಒಟ್ಟಾರೆ ಅವರ ಓಡಾಟವೋ ಓಡಾಟ.

ನನಗೆ ಧ್ವಜಾರೋಹಣದ ಹಿಂದಿನ ದಿನ ರಾತ್ರಿ ನಿದ್ರೆಯೇ ಬರುತ್ತಿರಲಿಲ್ಲ. ಗಂಟೆ ಗಂಟೆಗೆ ಎದ್ದು ಟಾರ್ಚ್ ಹಾಕಿ ಗಂಟೆ ನೋಡುತ್ತಿದ್ದೆ. ಯುನಿಫಾರ್ಮ್ ಅನ್ನು ಅಮ್ಮ ನೀಲಿ ಹಾಕಿ ತೊಳೆದು ಇಡುತ್ತಿದ್ದಳು. ಆಗ ನೀಲಿ ಪೌಡರ್ ಬರುತ್ತಿತ್ತು. ಅದು ಸರಿಯಾಗಿ ನೀರಿನಲ್ಲಿ ಬೆರೆಯದೆ ಬಿಳಿ ಅಂಗಿಯ ಒಂದು ಮೂಲೆಯಲ್ಲಿ ಸೇರಿ ಹೋಗುತ್ತಿತ್ತು. ಆಗ ನಮ್ಮ ಮನೆಯಲ್ಲಿ ಇಸ್ತ್ರಿ ಪೆಟ್ಟಿಗೆ ಇರಲಿಲ್ಲ. ತಂಬಿಗೆಗೆ ಬಿಸಿ ನೀರು ತುಂಬಿ ಅಂಗಿಯ ಮೇಲೆ ಎಳೆಯುತ್ತಿದ್ದೆ. ಇಲ್ಲವಾದರೆ ಅಂಗಿಯನ್ನು ಮಡಚಿ ಮಣೆಯ ಅಡಿಗೆ ಇಟ್ಟು ಅದರ ಮೇಲೆ ಕುಳಿತುಕೊಳ್ಳುತ್ತಿದ್ದೆ. ಕುಂಡೆ ಇಸ್ತ್ರಿ ಅಂತ ಅದಕ್ಕೆ ಹೆಸರು. ಬೆಳಗಾದರೆ ಸ್ವಾತಂತ್ರ್ಯ  ಉತ್ಸವ ಎಂಬ ಸಂಭ್ರಮ!

ಶಾಲೆಯಲ್ಲಿ ಬಾವುಟ ಹಾರಿಸಿದ ಬಳಿಕ ಉಡುಪಿಯ ಅಜ್ಜರಕಾಡಿಗೆ ಮೆರವಣಿಗೆಯಲ್ಲಿ ಹೋಗುವುದೇ ಒಂದು ಗಮ್ಮತ್ತು. ರಟ್ಟಿನಲ್ಲಿ ಬೇರೆ ಬೇರೆ ಘೋಷಣೆಗಳನ್ನು ಬರೆಯುವ ಬಗ್ಗೆ ಹೇಳಿದೆ ಅಲ್ಲವೇ? ನನ್ನ ಒಬ್ಬ ದೋಸ್ತಿ ಸಮಾ ಬೈಸಿಕೊಂಡಿದ್ದ.,ಅವನು `ಸ್ವಸಂತ್ರ ಭಾರತಕ್ಕೆ ಜಯವಾಗಲಿ’, `ಭಾರತದ ಸ್ವಸಂತ್ರ ಉಸ್ತವ’ ಎಂದೆಲ್ಲ ಬರೆದಿದ್ದ. ಬಹಳಷ್ಟು ಮಂದಿ ನನ್ನ ದೋಸ್ತಿಗಳು ಸ್ವಸಂತ್ರ ಎಂದೇ ಹೇಳುತ್ತಿದ್ದರು. ಹೇಗೆ ಉಚ್ಚರಿಸುತ್ತಿದ್ದರೋ ಹಾಗೇ ಬರೆದಿದ್ದರು. ಆವಾಗ ಹೊಳೆಯದೇ ಇದ್ದ ಕೆಲವು ಅಂಶಗಳು ನನಗೆ ಈಗ ಕುತೂಹಲವಾಗಿ ಕಾಣಿಸುತ್ತಿವೆ. ಅದೇನೆಂದರೆ ದೇಶಭಕ್ತ ನಾಯಕರ ಹೆಸರಿನಲ್ಲಿ ಅಂಬೇಡ್ಕರ್, ಖಾನ್ ಅಬ್ದುಲ್ ಗಫಾರ್ ಖಾನ್, ಮೊದಲಾದವರ ಹೆಸರುಗಳು ಆಗ ಗೈರಾಗುತ್ತಿದ್ದವು. ನಾವು ಎಂದೆಂದು ಅವರನ್ನು ನೆನಪು ಮಾಡಿಕೊಂಡದ್ದಿಲ್ಲ. ಗಣರಾಜ್ಯೋತ್ಸವ ದಿನದಂದು ಕೂಡ ಪಟೇಲ್, ನೆಹರು, ಮೊದಲಾದವರ ಹೆಸರು ಕೇಳಿ ಬರುತ್ತಿತ್ತು.! ಈಗ ಅದರ ಹಿಂದಿನ ರಾಜಕೀಯ ಅರ್ಥವಾಗುತ್ತಿದೆ.

ಶಾಲೆಯಲ್ಲಿ ಬಾವುಟ  ಹಾರಿಸಿದ ನಂತರ ಉಡುಪಿಯ ಅಜ್ಜರ ಕಾಡಿಗೆ ಘೋಷಣೆ ಕೂಗುತ್ತ ಮೆರವಣಿಗೆಯಲ್ಲಿ ಸಾಗುತ್ತಿದ್ದೆವು. ಅಲ್ಲಿ ಬಾವುಟ ಹಾರಿಸಿದ ಬಳಿಕ ಏನೇನೋ ಭಾಷಣ ಸನ್ಮಾನ ಇತ್ಯಾದಿಗಳು ಇರುತ್ತಿದ್ದವು.ನಮಗೆ ಅವುಗಳಲ್ಲಿ ಆಸಕ್ತಿ ಇರುತ್ತಿರಲಿಲ್ಲ. ನಮ್ಮ ಗಮನ `ಈಗ ಸಿಹಿತಿಂಡಿ ವಿತರಣೆ’ ಎಂಬ ಘೋಷಣೆಯ ಬಗ್ಗೆ!. ನಾವು ಬಯಸುವ ಬೂಂದಿ ಲಾಡು ನಮಗೆ ಸಿಗುತ್ತದೆ! ಹಿಗ್ಗೋ ಹಿಗ್ಗು. ಹೇಗೋ ಎರಡು ಮೂರು ಲಾಡು ಸಂಪಾದಿಸಿಕೊಂಡು ಮುಕ್ಕುತ್ತಿದ್ದೆವು. ಮರಳಿ ಮನೆಗೆ ಹೋಗುತ್ತ ದಾರಿಯಲ್ಲಿ ನಮಗಿಂತ ಸಣ್ಣ ತರಗತಿಯವರು ಲಾಡನ್ನು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿದ್ದರೆ ಅವರಿಗೆ ಹೊಡೆದು ಅವರ ಕೈಯಲ್ಲಿ ಇದ್ದ ಲಾಡನ್ನು ಕಸಿದುಕೊಂಡು ತಿನ್ನುತ್ತಿದ್ದೆವು. ಬಾವುಟ ಹಾರಿಸಲು ಮೆರವಣಿಗೆಯಲ್ಲಿ ಹೋಗುವಾಗ `ನಾವೆಲ್ಲ ಒಂದು. ನಾವೆಲ್ಲ ಒಂದೇ ತಾಯಿಯ ಮಕ್ಕಳು’ ಮೊದಲಾದ ಘೋಷಣೆಗಳನ್ನು ಕೂಗಿದವರು ಲಾಡು ಸಿಕ್ಕ ಬಳಿಕ ಬೇರೆ ಬೇರೆ ಯಾಗುತ್ತಿದ್ದೆವು.!

ಬಾಲ್ಯ ಕಾಲದ ಸ್ವಾತಂತ್ರ್ಯದಿನಾಚರಣೆಯ ಸಂಭ್ರಮವನ್ನು ನೆನಪಿಸಿಕೊಳ್ಳಲು ಕಾರಣಗಳಿವೆ. 1993 ರಲ್ಲಿ ನಾನು ಅರೆಕಾಲಿಕ ಕನ್ನಡ ಉಪನ್ಯಾಸಕನಾಗಿ ನಾನು ಕಲಿತ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿಗೆ ಸೇರಿಕೊಂಡೆ. ಆ ವರ್ಷ ಸ್ವಾತಂತ್ರ್ಯ ದಿನಾಚರಣೆಯ ಕುರಿತಾದ ನೋಟೀಸು ನಮ್ಮ ಸ್ಟಾಫ್ ರೂಮಿಗೆ ಬಂತು. ಎಲ್ಲರೂ ನಾಳೆ ಬೆಳಿಗ್ಗೆ ಧ್ವಜಾರೋಹಣಕ್ಕೆ ಹಾಜರಾಗಬೇಕು ಎಂದು ಬರೆಯಲಾಗಿತ್ತು. ನಾನು ಅದನ್ನು ಓದಿ ಆಲಸ್ಯದಿಂದ ಮೈಮುರಿಯುತ್ತ `ನಾಳೆ ಬಾವುಟ ಹಾರಿಸಲು ಬರ್ಲೇಬೇಕಾ ಸಾರ್? ಯಾರು ಬರ್ತಾರೆ ಈ ಮಳೆಯಲ್ಲಿ?’ಅಂತ ಅಲ್ಲಿಯೇ ಇದ್ದ ವಿಭಾಗದ ಹಿರಿಯರ ಬಳಿ ಕೇಳಿದೆ. ಅದನ್ನು ಕೇಳಿಸಿಕೊಂಡ ಹಿರಿಯ ಅರ್ಥಶಾಸ್ತ್ರ  ಉಪನ್ಯಾಸಕರೂ, ಕನ್ನಡದ ಕತೆಗಾರರೂ ಆಗಿದ್ದ ದಿವಂಗತ ಉದ್ಯಾವರ ಮಾಧವ ಆಚಾರ್ಯರು ಸಿಟ್ಟಾದರು.`ಪ್ರಸನ್ನರೆ, ನಮ್ಮ ಹಿಂದಿನ ಸ್ವಾತಂತ್ರ್ಯ ಹೋರಾಟಗಾರರು ಕೂಡ ನಿಮ್ಮ ಹಾಗೆ ಉದಾಸೀನ ಮಾಡುತ್ತಿದ್ದರೆ ಇವತ್ತು ನೀವು ಹೀಗೆ ಇರಲು ಸಾಧ್ಯವಾಗುತ್ತಿತ್ತಾ? ಯೋಚನೆ ಮಾಡಿ. ಮಾತ್ರವಲ್ಲ ನೀವೊಬ್ಬ ಲೆಕ್ಚರರ್. ನಾಕು ಜನಕ್ಕೆ ಪಾಠ ಮಾಡುವವರು. ಏನು ತಾನೇ ಪಾಠ ಮಾಡ್ತೀರಿ? ದೇಶಕ್ಕೆ ಏನನ್ನು ತಾನೇ ಕೊಟ್ಟೀರೀ?’ ಅಂತ ಖಾರವಾಗಿ ಹೇಳಿದರು. ನನಗೆ ರಪ್ಪಂತ ಕೆನ್ನೆಗೆ ಹೊಡೆದಂತೆ ಆಯಿತು. ನನಲ್ಲಿ ಅಂದು ಇದ್ದದ್ದು ದೇಶದ ಬಗ್ಗೆ ಅಗೌರವ ಭಾವನೆ ಅಲ್ಲ. ಬಾವುಟ ಹಾರಿಸುವ ಕಾರ್ಯಕ್ರಮಕ್ಕೆ ಬರಲು ಉದಾಸೀನ.ಅವರ ಎಚ್ಚರಿಕೆಯ ಮಾತಿನ ಬಳಿಕ ನನಗೆ ನನ್ನ ತಪ್ಪಿನ ಅರಿವಾಯಿತು. ಸರ್ಕಾರಿ ಸೇವೆಗೆ ಸೇರಿ ಇಪ್ಪತ್ತನಾಲ್ಕು ವರ್ಷಗಳಾದರೂ ಆಚಾರ್ಯರ ಮಾತು ಇನ್ನೂ ಕಿವಿಗಳಲ್ಲಿ ಗುಂಯ್ ಗುಡುತ್ತಲೇ ಇದೆ.

ಇಷ್ಟೆಲ್ಲ ಬರೆಯಲು ಇನ್ನೂ ಕೆಲವು ಕಾರಣಗಳಿವೆ. ಕಳೆದ ಹಾಗೂ ಈಬಾರಿಯ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಕೊರೊನಾ ನುಂಗಿ ಹಾಕಿದೆ. ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಭಾನುವಾರ ಬಂದಿದೆ. ಈಗಾಗಲೇ ಕೆಲವರು `ಆದಿನ ಬರುವುದು ಕಡ್ಡಾಯನಾ?’ ಅಂತ ಕೇಳಲು ಪ್ರಾರಂಭಿಸಿರುತ್ತಾರೆ. ಕೆಲವರು ಕುಂಟು ನೆಪ ಒಡ್ಡಿ ತಪ್ಪಿಸಿಕೊಳ್ಳುತ್ತಾರೆ! ಅದೇ ದೊಡ್ಡ ಸಾಧನೆ ಎಂಬಂತೆ ಕೊಚ್ಚಿಕೊಳ್ಳುತ್ತಾರೆ. ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಹುಟ್ಟಿದ ಸುಮಾರು ಮೂರು ತಲೆಮಾರಿನವರಿಗೆ ಹೋರಾಟದ ಕಠಿಣವಾದ ದಾರಿಗಳ ಕಷ್ಟದ ದಿನಗಳ ಕುರಿತು ಗೊತ್ತಿಲ್ಲ. ಅಂಥವರಿಗೆ ಸ್ವಾತಂತ್ರ್ಯದ ದಿನ ಕೇವಲ ತೋರಿಕೆಯ ಆಚರಣೆಯ ದಿನವಾಗಿದೆ. ನನ್ನ ಶ್ರೀಮತಿಯ ಅಜ್ಜಿ ಶಿರಸಿ ಸಮೀಪದ ಸಣ್ಣಳ್ಳಿ ಎಂಬ ಊರಿನಲ್ಲಿ ಇದ್ದರು. 2015 ರಲ್ಲಿ ಅವರು ತೀರಿಕೊಂಡಾಗ ಅವರಿಗೆ ತೊಂಬತ್ತೈದು ವರ್ಷ. ಕೈಕಾಲು ಗಟ್ಟಿ ಇರುವ ತನಕವೂ ಅವರು ಮನೆಯ ಹತ್ತಿರವೇ ಇದ್ದ ಶಾಲೆಯಲ್ಲಿ ಆಚರಿಸುತ್ತಿದ್ದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ಬಾವುಟ ಹಾರಿಸುವ ಸಮಯಕ್ಕೆ ಹೋಗಿ ಕೈ ಮುಗಿದು ಬರುತ್ತಿದ್ದರು. ತಾವು ಪಟ್ಟ ಶ್ರಮದ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದರು. ಇದು ಸಾರ್ಥಕದ ಅಭಿವ್ಯಕ್ತಿ. ದೇಶಪ್ರೇಮ ನಮ್ಮ ಅಂತರಂಗದಿಂದ ಮೂಡಿ ಬರುವ ಜರೂರತ್ತು ಇದೆ. ಆಗ ಸ್ವಾತಂತ್ರ್ಯ ಸಂಭ್ರಮಕ್ಕೆ ಅರ್ಥ ಬರುತ್ತದೆ. ಎಂದು ನನ್ನ ಅನಿಸಿಕೆ.

‍ಲೇಖಕರು avadhi

August 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: