ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ಮಶಾನದಲಿ ಹೇಳಿದ ನಗ್ನಸತ್ಯ

ಆರ್ ಎನ್ ದರ್ಗಾದವರ

ಬಾ,
ಸ್ಮಶಾನದ ಅಂಗಳದ ತುಂಬಾ ಆಟಿಕೆ
ಹರಿವಿಕೊಂಡು ಮನಬಿಚ್ಚಿ ಆಡೋಣ
ಅಂಜಿಕೆಬೇಡ…!
ಧಹಿಸುತ್ತಿದ್ದವರು, ದಫನ್ ಆದವರು
ಬಿಳಿಬಟ್ಟೆ ಸುತ್ತಿಕೊಂಡು ದಹಿಸಲು
ಸರದಿಯಲಿ ಮಲಗಿದವರು,
ಕಂಪೌಂಡಿನ ಆಚೆ ಆಂಬ್ಯುಲೆನ್ಸ್ ನಲಿ
ಬರುತ್ತಿರುವವರು ಹೀಗೆ….
ಎಲ್ಲರೂ ನಮ್ಮವರೇ
ಉಸಿರು ನಿಲ್ಲಿಸಿ ಶವವಾಗಿದ್ದಾರಷ್ಟೇ

ಕೊಲೆಗೈದಿದ್ದಾರೆ ಅಂತ ಕೇಳಿದಿಯಾ…?

ಶ್…
ಇಲ್ಲ,
ಅವರೆಲ್ಲ ಶುಭ್ರ ಬಣ್ಣದ ಕಾಲರ್ ನವರು
ದೇಶ ಕಟ್ಟಲು ಪಣತೊಟ್ಟು
ನನ್ನವರ ಶವಗಳನ್ನು ಬುನಾದಿಯಲಿ ತುಂಬಿದವರು
ಸಧ್ಯ ನಿನ್ನ ನಡುಗುವ ದನಿ ಕೇಳಿಲ್ಲವರಿಗೆ….!!

ನಿನ್ನೆವರಿಗೂ ರಕ್ತಸಂಚಲನ ಉಕ್ಕುವಷ್ಟಿತ್ತು
ಇವತ್ತು ಯಾರೋ ದ್ರೋಹಿಗಳೆಂದು
ವ್ಯಾಘ್ರದನಿಯಲಿ ಬೊಟ್ಟು
ಮುಂದೆ ಮಾಡಿ ತೋರಿಸುತ್ತಿದ್ದರು
ಉಳಿದ ನಾಲ್ಕು ಬೆರಳು ಅವರತ್ತಲೇ
ಇದ್ದವು…!!
ಉಕ್ಕುತ್ತಿದ್ದ ರಕ್ತ ನಾಲಿಗೆಯನು ಹತ್ತಿಕ್ಕಿಸಿ
ಮೂಲೆಯನು ಸೇರುವಂತೆ ಮಾಡಿತು
ಬಿತ್ತರಗೊಂಡ ಟಿವಿಯಲೂ ಅವರೇ
ಕಾಣುತ್ತಿದ್ದರು

ಬಿಸಿಲು ಇರಿದು ನರಳುವ ಟಾರಿನ ರೋಡು
ಮುಗಿಲಿಗೆ ಮುತ್ತಿಸುವ ಕಾಂಕ್ರೀಟ್ ಗಿಡಗಳು
ದಾರಿಹೋಕರಿಲ್ಲದಿದ್ದರೂ
ದಾರಿ ತೋರುವ ಫಲಕಗಳು
ಅತ್ತಿಂದಿತ್ತ ಅತ್ಯುತ್ಸಾಹದಿಂದ
ಮಣ್ಣು ಅಗೆಯಲು ಹೊರಟ
ರಾಕ್ಷಸಪ್ರವೃತ್ತಿಯ ಬುಲ್ಡೋಜರ್ ಗಳು
ಬಾಗಿಲು ಮುಚ್ಚಿದ ಮನೆಯಿಂದ
ನುಸುಳುತ್ತಾ ಹೊರ ಬಂದು ಬಿಕ್ಕುವ ದನಿ
ಜೊತೆಗಾರ ಬರುವದನ್ನು ಕಾಯುತ್ತಾ
ಕುಳಿತ ಬೆಂಚುಗಲ್ಲಿನ ಕುರ್ಚಿಗಳು
ಕೊಳೆತು ನಾರುವ ಬೀದಿಬದಿಯಲಿ
ಬಾಡಿ ಬಿದ್ದ ಬಿಳಿಹೂವುಗಳು
ಕಾಲು ಮುರಿದು ಉಸಿರು ನಿಲ್ಲಿಸಿದ
ಆಕ್ಸಿಜನ್ ಹೊತ್ತ ಗಾಡಿಗಳು
ಅಲ್ಲಿ ಯಾರೋ ಹೂಮಾಲೆಗಳನ್ನು
ಚೋಟುದ್ದ ಸೂಜಿಯಲಿ
ಪೋಣಿಸುತ್ತಾ ಕುಳಿತವರು ಮುಂದೆ
ದಾಖಲೆ ಬೇಡಿಕೆ….!
ಶಿಸ್ತಿನ ಸಿಪಾಯಿಗಳಂತೆ ಸಾಲುಗಟ್ಟಿ ಮಸಣದತ್ತ
ಮಣ್ಣು ಹೊತ್ತೊಯ್ಯುವ ಇರುವೆಗಳು

ಭಕ್ತರು ಬರದಿದ್ದರೂ,
ಬಾಗಿಲಲಿ ನಿಂತು ದಾರಿ ಕಾಯುವ ದೇವರುಗಳು
ತರಕಾರಿ ತರಲು ಕೈಚೀಲ ಹಿಡಿದು
ಹೊರಟರೂ ನರಕದ ಕಡೆ ಹೊರಟಂತೆ
ಒಮ್ಮತವಾಗುವ ಭಯ…!

ಆ ರಸ್ತೆಯಲ್ಲಿ ಹೋಗುವದು ಬೇಡವೇ ಬೇಡ

ಇಲ್ಲಿ ಒಬ್ಬರಿಗೊಬ್ಬರು ಹೆಗಲಾದವರು,
ಪರಿಚಯವೇ ಇಲ್ಲದೆ ಬೀಳ್ಕೊಡಲು
ಬಂದವರು,
ಸಾಮೂಹಿಕವಾಗಿ ರೋಧಿಸಿದವರು
ಯಾರೋ ಮಾಡಿದ ತಪ್ಪಿಗೆ ಶವವಾದವರು
ಹೀಗೆ ….
ನಮ್ಮವರೆನ್ನಲು ಹಲವರಿದ್ದಾರೆ

‍ಲೇಖಕರು Avadhi

7 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading