ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೌಮ್ಯ ದಯಾನಂದ ಕವಿತೆ- ವಿಳಾಸವಿಲ್ಲದ ಪತ್ರಗಳು!

ಸೌಮ್ಯ ದಯಾನಂದ

ವಿಳಾಸವಿಲ್ಲದ ಪತ್ರಗಳವು!
ಬರೆದ ಪ್ರತಿ ಸಾಲುಗಳೂ
ಮನದ ವಿಳಾಸ
ಹೇಳಿವೆ..!
ಅಂಚೆಯಣ್ಣನ ಹಂಗೂ
ಅವುಗಳಿಗೆ ಬೇಡವಂತೆ!

ಅಕ್ಷರ ಅಕ್ಷರವೂ
ನೆನಪ ಪೂಸಿಕೊಂಡಿವೆ!
ಪದಗಳೆಲ್ಲಾ ಶಸ್ತ್ರಸಜ್ಜಿತ..!
ಏನಿದ್ದರೂ ನೇರಾನೇರ
ಬಳಸುದಾರಿಗಳಿಲ್ಲ..
ಪದಗಳು
ಎದೆಯ ಚುಚ್ಚಲು
ಹವಣಿಸಿವೆ!

ಪ್ರೀತಿಯ ರಕ್ತ
ಹರಿದರೂ ಸರಿಯೇ
ಕಣ್ಣೀರಿಗೆ
ಕರ್ಫ್ಯೂ ಜಾರಿಯಾಗಿದೆ..!
ಮಲ್ಲಿಗೆ ಮನವನ್ನು
ಬ್ಯಾನ್ ಮಾಡಲಾಗಿದೆ..!
ಕುಡಿನೋಟ
ಕಂಡಲ್ಲಿ ಗುಂಡು..!

ಬೇಕಿದ್ದರೆ
ಆಂಬುಲೆನ್ಸ್ ಕಾದಿರಿಸು
ಅವಕಾಶ ನೀಡಲಾಗಿದೆ..
ಪದಗಳ ಒಡತಿ
ನಿರೀಕ್ಷಣಾ ಜಾಮೀನು
ಪಡೆದಾಗಿದೆ!

ಖೂನಿಯಾಗುವುದಂತೂ
ಖಾಯಂ!
ದೂರು ಕೊಡಲು
ಠಾಣೆ ಹುಡುಕಿಕೋ!
ಪರಾರಿಯಾಗುವ
ಉಮೇದು ನನಗಿಲ್ಲ..

ನನ್ನೆದೆಯ ಕಟಕಟೆಯಲ್ಲಿ
ನಿನ್ನ ಹೆಜ್ಜೆ ಗುರುತುಗಳು
ಈಗಾಗಲೇ ನನಗೆ
ಕಾಣುತ್ತಿವೆ.!
ಜಡ್ಜ್ ಮುಖವೇಕೋ
ಮಸುಕು ಮಸುಕು!

ಜಡ್ಜ್ ಮೆಂಟಿನ
ಭಯವಿಲ್ಲ..
ನಿನ್ನ ನೆನಪಿನ
ಜೀವಾವಧಿ ಶಿಕ್ಷೆ
ಅಭ್ಯಾಸವಾಗಿದೆ!
ಇನ್ನು ನನಗೆ
ಗಲ್ಲುಶಿಕ್ಷೆಯೇ ಗೆಲುವು!!

‍ಲೇಖಕರು Admin

18 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading