ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೌಮ್ಯಶ್ರೀ ಎ ಎಸ್ ಕವಿತೆ – ಕುರುಹು!…

ಸೌಮ್ಯಶ್ರೀ ಎ ಎಸ್

ನಿನ್ನೊಟ್ಟಿಗೆ ಕಳೆದ ಬೆಳಗು
ನೀನಿಲ್ಲದೆ ಕಾಡುವ ಸಂಜೆಗಳು
ತೀರದಲ್ಲಿ ಕುಳಿತು ಉಕ್ಕುವ ಅಲೆಯೆದುರಿಗೆ
ನಿನದೇ ಹೆಸರು ಉಳಿಸಿಕೊಳ್ಳಲು ಹೆಣಗುತ್ತಿರುವಾಗ
ಅಲೆಯೊಂದು ಅಲೆದು ಎಲ್ಲವನ್ನೂ ಅಳಿಸಿ ಮರೆಯಾಗಿತ್ತು!

ಅಲೆಯ ಮೊರೆತದಲ್ಲೂ ನಿನದೇ
ಹೆಸರು ಅನುರಣಿಸುತ್ತಿತ್ತು
ತೀರದಲ್ಲಿ ಒಂಟಿಯಾಗಿ ನಿಂತವಳ
ತಿರುಗಿಯೂ ನೋಡದೆ ತೊರೆದು ಹೋದ
ನಿನ್ನ ನೆನಪಾದರೂ ಅಳಿಸಲು ಅದ್ಯಾವ
ಮದ್ದು ಸುರಿದುಕೊಳ್ಳಬೇಕು ನನ್ನೆದೆಗೆ!

ನಿನ್ನೆಲ್ಲಾ ನೆನಪುಗಳನ್ನು ಗಂಟು ಕಟ್ಟಿ
ಎಸೆದು ತೀರಕ್ಕೆ ಬೆನ್ನು ಮಾಡಿ ನಡೆದವಳ
ಮನದಲ್ಲಿ ಅಲೆಯುತ್ತಿದ್ದ ಅಳಿದುಳಿದ ನಿನ್ನೊಂದಿಗಿನ
ಒಡನಾಟದ ಕ್ಷಣಗಳನ್ನು ತೀರದಲ್ಲಿ ‌ಮಣ್ಣು ತೆಗೆದು
ಹೂತು ಬಂದವಳೇ ತಲೆಗೆ ತಣ್ಣೀರು ಸುರಿದುಕೊಂಡು
ಹಗುರಾದೆನೆಂದುಕೊಂಡೆ!

ಒಣಗಿದ ಗಂಟಲಿಗೆ ಸುಡುವ ಹಸಿವಿಗೆ
ನೀರು ಸುರಿದುಕೊಂಡು ಕಣ್ಮಚ್ಚಿ‌ ಮಲಗಿದೆ
ಕ್ಷಣ ಕಾಲ ತಣಿದಂತಾಗಿ ಹಿತವೆನಿಸಿತ್ತು
ಸುಪ್ತವಾಗಿ ಹೂತಿದ್ದ ಮರೆವಿನ ಸ್ಮಶಾನದಿಂದ
ಎದ್ದು ಭೂತದಲ್ಲಿ ಘಟಿಸಿದ್ದೆಲ್ಲಾ ಭೂತವಾಗಿ ಕಾಡಿತ್ತು

ನೆನಪುಗಳ ತಹತಹಿಸುವಿಕೆಯಿಂದ ದೂರಾಗಲು
ಮರೆವಿಗೆ ಮೊರೆ ಹೋಗಲು
ಮದ್ದದಾದರೂ ಯಾವುದಿದೆ ಸಿಕ್ಕವರ ಬಳಿಯೆಲ್ಲ
ನನ್ನೆಲ್ಲಾ ಬಚ್ಚಿಟ್ಟ ಯಾತನೆಯನ್ನು ಬಿಚ್ಚಿಟ್ಟು ಯಾಚಿಸಿದೆ

ಹೇಳಿದ ಮದ್ದೆಲ್ಲವನ್ನು ತಿಂದೆ
ಮಾಯದ ನೋವು ಮಾಗಿ ಮರೆಯಾಯಿತೆಂದು
ಮನದಲ್ಲಿ ಮುಗುಳ್ನಗೆ ಮೂಡುವುದರೊಳಗೆ
ಮತ್ತದೆ ನೆನಪುಗಳು!

ಎಲ್ಲವನ್ನೂ ಹಾಳೆಯಲ್ಲಿ ಗೀಚಿ
ಬಿಕರಿಗಿಟ್ಟೆ ಕೊಳ್ಳವರಾದರೂ ಯಾರು
ಬೆಳಗಿನಿಂದ ಬೈಗಿನವರೆಗೂ
ಗಂಟಲು ಹರಿಯುವಂತೆ ಕೂಗಿದೆ
ಅರೆಕ್ಷಣ ನಿಂತು ತಿರುಗಿ
ನೋಡುತ್ತ ನಡೆದರೆಲ್ಲಾ!

ಮನದಲ್ಲಿ ಉರಿಯುತ್ತಿರುವ ನೆನಪುಗಳ ಚಿತೆಗೆ
ಬೊಗಸೆಯಷ್ಟು ನೀರು ಸುರಿದೆ
ತಣಿದು ಹೊಗೆಯಾಡುತ್ತಿತ್ತು
ಬೀಸುವ ಗಾಳಿಗೊಡ್ಡದೆ ಬೂದಿಯೊಳಗೆ
ಹುದುಗಿ‌ ಸುಪ್ತವಾಗಿ ಅಡಗಿಸಿಟ್ಟೆ
ಕಾಲ ಕಾಲವಾದಂತೆ ಉಸಿರು ನಿಂತ
ಶವದಂತಾಗಿತ್ತು! ಮತ್ತೆಂದೂ ಉಸಿರಲೇ ಇಲ್ಲ
ಹುಟ್ಟಿದ ಕುರುಹಾಗಿ‌ ಮನದ ಮೂಲೆಯಲ್ಲಿ ಹೂತು ಹೋಗಿತ್ತು!

‍ಲೇಖಕರು Admin

28 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading