ಹಾಡ್ಲಹಳ್ಳಿ ನಾಗರಾಜ್ ಅಂಕಣ – ಅಂತೂ ಲಲನೆಯರಿಂದ ಪಾರಾದೆವು…

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.

ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯ ವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾ ಪತ್ರಕ್ಕೆ ಪಾತ್ರರಾಗಿದ್ದಾರೆ. ಗೆಜೆಟೆಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಪ್ರಸ್ತುತ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

ದೇವರಬೆಟ್ಟ, ಗುದ್ದಿನಿಂದ ತೆಗೆದ ಹೆಣ, ನಕ್ರ ಹಾಗೂ ನಾನು, ಕುಂಭದ್ರೋಣ (ಕತಾಸಂಕಲನಗಳು), ಬಾಡಿಗೆಬಂಟರು, ಬಿಂಗಾರೆಕಲ್ಲು, ಬೆಂಕಿಯಸುಳಿ, ಗೃಹ ಪುರಾಣ, ಕಡವೆಬೇಟೆ, ನಿಲುವಂಗಿಯ ಕನಸು ಕಾದಂಬರಿಗಳು ಪ್ರಕಟವಾಗಿವೆ.

‘ಕಾಡುಹಕ್ಕಿಯ ಹಾದಿನೋಟ’ ಎಂಬ ಆತ್ಮಕಥನ ಸ್ವರೂಪದ ಪ್ರಬಂಧ ಸಂಕಲನವಾಗಿದೆ. ಸುಮಾರು ನಾಲ್ಕು ದಶಕಗಳಿಂದಲೂ ಮಿತ್ರರೊಡಗೂಡಿ ಹಾಸನದಲ್ಲಿ ಹೊಯ್ಸಳ ಕಲಾ ಸಂಘ ಎಂಬ ಸಾಂಸ್ಕ್ರತಿಕ ಸಂಘಟನೆ ನಡೆಸುತ್ತಿದ್ದು, ಸಾಹಿತ್ಯಿಕ ಚಟುವಟಿಕೆ, ನಾಟಕ ಹಾಗೂ ಜನಪದ ಗೀತ ಗಾಯನ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಸಾಹಿತ್ಯ ಪ್ರಕಾರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಕೊಡಮಾಡುವ ಕಿರಂ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಸಿದ್ದಗಂಗಾ ಮಠ ಅನ್ನ ದಾಸೋಹ, ಅಕ್ಷರ ದಾಸೋಹ ಮುಖೇನ ವಿದ್ಯಾದಾನಕ್ಕೆ ಕಾರಣವಾಗಿ ನಾಡಿನ ಲಕ್ಷಾಂತರ ಬಡ ವಿದ್ಯಾರ್ಥಿಗಳ ಬದುಕಿನಲ್ಲಿ ಬೆಳಕು ಮೂಡಿಸಿದೆ.

ವಿದ್ಯೆಯಿಂದ ವಂಚಿತರಾಗಿ ಎಲ್ಲೋ ಮೂಲೆ ಗುಂಪಾಗಬೇಕಾಗಿದ್ದ ಬಡ ಗ್ರಾಮೀಣ ಮಕ್ಕಳು ಮಠದ ಮಡಿಲಿಗೆ ಬಿದ್ದ ಕಾರಣ ಸಮಾಜದ ಹಲವಾರು ರಂಗಗಳಲ್ಲಿ ತಮ್ಮ ಪ್ರತಿಭೆ ಮೆರೆಯಲು ಸಾಧ್ಯವಾಗಿದೆ. ಅಲ್ಲಿ ವಿದ್ಯೆ ಕಲಿತು ಹೋದವರು ಸಾಹಿತಿಗಳಾಗಿದ್ದಾರೆ, ಶಿಕ್ಷಣ ತಜ್ಙರಾಗಿದ್ದಾರೆ, ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದಾರೆ, ಐ ಎ ಎಸ್, ಐ ಪಿ ಎಸ್ ಅಧಿಕಾರಿಗಳಾಗಿದ್ದಾರೆ, ನಾಟಕ, ಸಿನಿಮಾರಂಗಗಳಲ್ಲಿ ಮಿಂಚಿದ್ದಾರೆ.

ಹೀಗೆ ಮಠದ ಅನ್ನ ದಾಸೋಹ, ಅಕ್ಷರ ದಾಸೋಹಗಳು ಲಕ್ಷಾಂತರ ಬಡಮಕ್ಕಳ ಬದುಕಿನಲ್ಲಿ ‘ದಾಟು ಹಲಗೆ’ಯಾಗಿ ಪರಿಣಮಿಸಿದೆ. ಈ ಶ್ರೀ ಮಠದಲ್ಲಿ ವಿದ್ಯಾರ್ಜನೆ ಮಾಡಿ ಬದುಕು ರೂಪಿಸಿಕೊಂಡ ಹಾಡ್ಲಹಳ್ಳಿ ನಾಗರಾಜ್ ಕತೆಗಾರರಾಗಿಯೂ, ಕಾದಂಬರಿಕಾರರಾಗಿಯೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ.

ಸಿದ್ದಗಂಗೆಯಲ್ಲಿನ ಅವರ ಅನುಭವ ಕಥನಗಳನ್ನು ಇಲ್ಲಿ ನಿರೂಪಿಸಿದ್ದಾರೆ.

11

ನಾನು ಪೂರ್ ಹೌಸ್‌ ಕಾಲೊನಿಯಿಂದ ಸೋಮೇಶ್ವರ ಬಡಾವಣೆಗೆ ವಲಸೆ ಬಂದ ವಿಚಾರ ನಮ್ಮ ನಿಕಟವರ್ತಿಗಳಿಗೆ ಬಹುತೇಕ ತಿಳಿದು ಹೋಗಿತ್ತು.

‘ಓ ಆ ಗಾಂಧಿ ಜೊತೆ ಸೇರ್ಕಂಡಿದೀಯಾ’ ನನ್ನ ಹೊಸ ರೂಮ್  ಮೇಟ್‌ನ ಗುಣ ಸ್ವಭಾವ ತಿಳಿದಿದ್ದವರು ತಮಾಷೆ ಮಾಡುತ್ತಿದ್ದರು.

ಬೀಡಿ ಸಿಗರೇಟು ಸೇದದಿದ್ದವನನ್ನು, ಹುಡುಗಿಯರ ಕಡೆ ಕಣ್ಣೆತ್ತಿ ನೋಡದಿದ್ದವನನ್ನು, ಮದ್ಯದ ವಾಸನೆಯನ್ನು ತಿಳಿಯದಿದ್ದವನನ್ನು, ಯಾವುದೇ ಶೋಕಿಗಾಗಿ ಅನಾವಶ್ಯಕವಾಗಿ ಹಣ ಉಡಾಯಿಸದೆ ದುಂದು ವೆಚ್ಚ ಮಾಡದವನನ್ನು ಆಗೆಲ್ಲಾ ‘ಗಾಂಧಿ’ ಎಂದು ಕರೆದು ವ್ಯಂಗ್ಯವಾಡುತ್ತಿದ್ದುದು ವಾಡಿಕೆ.

ಈ ಎಲ್ಲಾ ಗುಣಗಳೂ ನನ್ನ ಹೊಸ ರೂಂ ಮೇಟ್‌ ವೆಂಕಟರಮಣನಲ್ಲಿದ್ದವು. ಗುಣ ಸ್ವಭಾವದಲ್ಲಿ ಅವನು ಕುಮಾರಸ್ವಾಮಿಗೆ ತದ್ವಿರುದ್ಧ.

ಅವನೂ ಮಲೆನಾಡಿನವನೇ. ಮೂಡಿಗೆರೆ ತಾಲೂಕಿನ ಗೌತವಳ್ಳಿ ಎಂಬ  ಗ್ರಾಮದಿಂದ ವಿದ್ಯೆ ಅರಸಿ ಸಿದ್ದಗಂಗೆಗೆ ಬಂದಿದ್ದವನು. ನಂತರ ತುಮಕೂರಿನಲ್ಲಿ ಬಿಎಗೆ ಸೇರಿಕೊಂಡ ಅವನು ಸೋಮೇಶ್ವರ ಬಡಾವಣೆಯಲ್ಲಿ ರೂಂ ಮಾಡಿಕೊಂಡು ಓದು ಮುಂದುವರೆಸಿದ್ದ.

ಮದ್ಯ ವಯಸ್ಸಿನಲ್ಲೇ ವಿಧವೆಯಾಗಿದ್ದ ಅವನ ತಾಯಿಯ ಮೂರು ಮಕ್ಕಳಲ್ಲಿ ಅವನೇ ಹಿರಿಯ. ಹಳ್ಳಿಯವರ, ದಾಯಾದಿಗಳ ಕಿರುಕುಳ ಸಹಿಸುತ್ತಲೇ ಮಕ್ಕಳನ್ನು ಬೆಳೆಸಿದ್ದ ಆಕೆಗೆ, ಮಕ್ಕಳಿಗೆ ವಿದ್ಯೆಕೊಡಿಸಿ ಚೆನ್ನಾಗಿ ಬೆಳೆಸಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳನ್ನಾಗಿ ಮಾಡಬೇಕೆಂಬ ಆಸೆಯಿತ್ತು.

ಬಾಲ್ಯದಿಂದಲೂ ಇದೆಲ್ಲವನ್ನು ಕಂಡಿದ್ದ ಅವನು ಅಮ್ಮನ ಆಸೆಯಂತೆ ಚೆನ್ನಾಗಿ ಓದಿ ಪದವಿ ಪಡೆದು ಯಾವುದಾದರೂ ನೌಕರಿ ಹಿಡಿದು, ಇಳಿಗಾಲದಲ್ಲಾದರೂ ಆಕೆಗೆ ಘನತೆಯ ಬದುಕು ದೊರೆಯುವಂತೆ ನೋಡಿಕೊಳ್ಳಬೇಕೆಂದು ಪಣ ತೊಟ್ಟಿದ್ದ.

ನಮ್ಮ ಕಾಲೇಜಿನಲ್ಲಿ ಜವಾನನಾಗಿದ್ದ ವ್ಯಕ್ತಿ ನಮ್ಮ ಮನೆಯ ಓನರ್‌. ಮನೆಯೊಳಗೆ ಹಾಲ್‌ಗೆ ಪ್ರವೇಶ ಪಡೆದ ಕೂಡಲೇ ಎಡಬದಿಗೆ ಇದ್ದುದೇ ನಮ್ಮ ರೂಮು.

ಹಾಗೆಯೇ ಮುಂದೆ ಒಂದು ಬದಿಗೆ ಒಂದು ರೂಮು ಇನ್ನೊಂದು ಬದಿಗೆ ಅಡಿಗೆ ಮನೆ. ದಾಟಿ ನಡೆದರೆ ಹಿಂದಿನ ಗಲ್ಲಿ ಕಡೆಗೆ ಪ್ರವೆಶ. ಅಲ್ಲಿಯೇ ಬಚ್ಚಲು ಮನೆ, ಕಕ್ಕಸು ರೂಮು, ಬಟ್ಟೆ ಒಗೆಯುವ ಕಲ್ಲು ಎಲ್ಲಾ ಇತ್ತು. ಆ ಮನೆಯವರೊಂದಿಗೆ ನಾವೂ ಅವುಗಳನ್ನೇ ಉಪಯೋಗಿಸಬೇಕಾಗಿತ್ತು.

ಆ ಮನೆಯಲ್ಲಿದ್ದವರು ಮೂರೇ ಜನ. ಓನರ್‌, ಅವನ ಹೆಂಡತಿ ಹಾಗೂ ಎಸೆಸೆಲ್ಸಿ ಪೇಲಾಗಿ ಮನೆಯಲ್ಲೇ ಇದ್ದ ಅವನ ಮಗಳು. ನಾವು ಅವರೊಂದಿಗೆ ಹೊಂದಿಕೊಂಡು ಬದುಕು ಸಾಗಿಸಬೇಕಾಗಿತ್ತು.

ನಾನು ಆ ರೂಮಿಗೆ ಹೋದ ದಿನ ವೆಂಕಟರಮಣ, ನಾನು ಅಲ್ಲಿ ಹೇಗಿರಬೇಕೆಂದು, ರಾತ್ರಿಯೆಲ್ಲಾ ಉಪದೇಶ ನೀಡಿದ. ಅಡಿಗೆ, ಊಟ, ಶುಚಿತ್ವದ ಬಗ್ಗೆ ಪಾಠ ಮಾಡಿದ. ರೂಮಿನಲ್ಲಿ ನಮ್ಮ ದಿನಚರಿ ಹೇಗಿರಬೇಕೆಂಬ ಬಗ್ಗೆ ಮನದಟ್ಟಾಗುವಂತೆ ಹೇಳಿದ. ಕೊನೆಯಲ್ಲಿ ‘ಆ ಕರಿ ಡುಮ್ಮಿಗೆ ಏನೂ ತಿಳಿಯದಿಲ್ಲ. ಬಚ್ಚಲು ಮನೆ ಬೋಲ್ಟ್‌ ಹಾಕದಲೆ ಸ್ನಾನ ಮಾಡ್ತಾ ಇರ್ತಾಳೆ.. ಹಾಗೇ ಬಟ್ಟೆ ಬದಲಾಯಿಸ್ತಾಳೆ… ಹುಷಾರಾಗಿ ಅವರು ಯಾರೂ ಇಲ್ಲದಾಗ ನೋಡಿಕೊಂಡು ನಾವು ಹೋಗಬೇಕು’ ಎಂಬ ಎಚ್ಚರಿಕೆಯ ಮಾತು ಹೇಳಿದ.

ಸೋಮೇಶ್ವರ ಬಡಾವಣೆಯ ಹೊಸ ರೂಮಿನಲ್ಲಿ ನಾಲ್ಕೈದು ದಿನಗಳು ಯಾಂತ್ರಿಕವಾಗಿ ಕಳೆದು ಹೋದವು. ಬೆಳಗಾಗೆದ್ದು ಎರಡು ಹೊತ್ತಿಗೆ ಆಗುವಷ್ಟು ಟೊಮೆಟೊ ತಿಳಿಸಾರು ಮಾಡಿ ಸ್ವಲ್ಪ ಅನ್ನ ಮಾಡಿಕೊಂಡು ಬೆಳಗ್ಗೆ ಹತ್ತು ಗಂಟೆಗೆ ಊಟ ಮಾಡಿ ಹೋದರೆ ಮತ್ತೆ ಇಬ್ಬರೂ ಹಿಂತಿರುಗುತ್ತಿದ್ದುದು ಸಂಜೆಯೇ. ಓದು ಬರಹ ಮುಗಿಸಿ ಒಂದಷ್ಟು ಅನ್ನ ಮಾಡಿಕೊಂಡು ಒಂಬತ್ತು ಗಂಟೆಗೆ ರಾತ್ರಿಯ ಊಟ ಮಾಡುವುದರೊಂದಿಗೆ ಅಂದಿನ ದಿನಚರಿ ಮುಗಿಯುತ್ತಿತ್ತು.

ನಮ್ಮ ರೂಮಿನ ಎದುರಿಗೇ ರಸ್ತೆಯ ಆಚೆ ಬದಿಯಲ್ಲಿ ಒಂದು ಅಂಗಡಿಯಿತ್ತು. ಯಾವಾಗಲೂ ಹಣೆಗೆ ಮೂರು ನಾಮ ಧರಿಸಿ ಗಲ್ಲಾ ಮೇಲೆ ಕೂತಿರುತ್ತಿದ್ದ ಶೆಟ್ಟಿ ನಮ್ಮೊಂದಿಗೆ ಅಪರಿಚಿತನಂತೆಯೇ ನಡೆದುಕೊಳ್ಳುತ್ತಿದ್ದುದು ನಮಗೆ ಆಶ್ಚರ್ಯ ಮೂಡಿಸುತ್ತಿತ್ತು. ಅವನ ಅಂಗಡಿಯ ಮುಂದೆ ನಾವೇನಾದರೂ ದಾಟುವಾಗ ಆತ ನಮ್ಮೆಡೆಗೆ ಒಂದು ಬಗೆಯ ತಿರಸ್ಕಾರದ ನೋಟ ಬೀರುತ್ತಿದ್ದ.

ಅಂದು ಶನಿವಾರ, ರಾತ್ರಿ ಊಟವಾದ ನಂತರ ವೆಂಕಟರಮಣ ತನ್ನ ಟ್ರಂಕಿನಿಂದ ಒಂದು ನೋಟ್‌ ಬುಕ್‌ ತೆಗೆದು ಕೆಲ ಕಾಲ ಹಾಳೆ ಮಗುಚಿ ನೋಡಿ, ಪುಸ್ತಕದ ಕೊನೆಯ ಖಾಲಿ ಹಾಳೆಯೊಂದನ್ನು ಹರಿದುಕೊಂಡು ಅದರಲ್ಲಿ ಏನೋ ಗುರುತು ಹಾಕತೊಡಗಿದ. ನನಗೆ ಕುತೂಹಲವಾಯಿತು. ಟ್ರಂಕ್‌ ಮೇಲಿಟ್ಟುಕೊಂಡಿದ್ದ ನೋಟ್‌ ಬುಕ್‌ ತೆಗೆದು ಹಾಳೆ ತೆರೆದು ಕುತೂಹಲದಿಂದ ಕಣ್ಣು ಹಾಯಿಸಿದೆ. ಅದರಲ್ಲಿ ಅಂಗಡಿ ಸಾಮಾನು ಹಾಗೂ ಇತರ ಖರ್ಚಿನ ಲೆಕ್ಕ ಬರೆದಿದ್ದ. ಅದುವರೆಗೂ ಅವನೊಬ್ಬನೇ ರೂಮಿನಲ್ಲಿದ್ದರೂ ಎಲ್ಲಾ ಖರ್ಚಿನ ವಿವರವನ್ನು ನೀಟಾಗಿ ಬರೆದಿದ್ದು ನೋಡಿ ನನಗೆ ಅವನ ಬಗ್ಗೆ ಪ್ರಶಂಸೆ ಮೂಡಿತು.

ನನ್ನ ಕುತೂಹಲವನ್ನು ಗಮನಿಸಿದ ಅವನು ಕೈಯಲ್ಲಿದ್ದ ಚೀಟಿಯನ್ನು ನನ್ನ ಕೈಗೆ ನೀಡಿ ‘ನಾಳೆ ಬೆಳಗ್ಗೆ ಅಂಗಡಿಗೆ ಹೋಗಿ ಈ ಸಾಮಾನು ತರಬೇಕು’ ಎಂದ.

ಅದರಲ್ಲಿ ‘ರವೆ ಕಾಲು ಕೆಜಿ, ಎಣ್ಣೆ ನೂರು ಮಿಲಿ, ಸಕ್ಕರೆ ನೂರು ಗ್ರಾಂ, ತೆಂಗಿನಕಾಯಿ ಹೋಳು ಎರಡು ಆಣೆ, ಟೀಪುಡಿ ಎರಡು ಆಣೆ, ಹಾಲು ಕಾಲು ಲೀಟರ್‌… ಮುಂತಾಗಿ ಬರೆದಿದ್ದ. ಅದುವರೆಗಿನ ದಿನಗಳಲ್ಲಿ ಆ ರೂಮಿನಲ್ಲಿ ಊಟ ಮಾಡಿ ಅನುಭವವಿದ್ದ ನನಗೆ ‘ಇದೇನು ಈ ಎಲ್ಲಾ ಸಾಮಾನುಗಳನ್ನು ಬರೆದಿದ್ದಾನಲ್ಲ. ನಮ್ಮ ಅಡಿಗೆಗೆ ಈ ಎಲ್ಲಾ ಸಾಮಾನು ಬೇಕೆ’ ಎಂದು ಸಂಶಯ ಮೂಡಿ, ಅವನ ಮುಖ ನೋಡಿದೆ.
‘ನಾಳೆ ಭಾನುವಾರ ಅಲ್ವೆನೋ..ಬೆಳಗ್ಗೆ ಒಂದಿಷ್ಟು ಉಪ್ಪಿಟ್ಟು ಮಾಡೋಣ… ತೆಂಗಿನಕಾಯಿ ಹಾಕಿ ಸ್ವಲ್ಪ ಒಳ್ಳೆಯ ಸಾರು, ರಜಾ ಸ್ಪೆಷಲ್‌..ಮತ್ತೆ ವಾರಕ್ಕೊಮ್ಮೆಯಾದರೂ ಒಂದು ಟೀ ಕುಡಿಯಬೇಡವೇ.. ಉಳಿದ ಹಾಲಿಗೆ ಹುಳಿ ಹಿಂಡಿ ಹೆಪ್ಪು ಹಾಕಿದರೆ ರಾತ್ರಿಗೆ ಮೊಸರಿನ ಊಟವೂ ಆಗುತ್ತೆ’ ಎಂದು ಹೇಳಿದ.
ಹುಡುಗರು ಆಡಿಕೊಳ್ಳುವ ಹಾಗೆ ಅವನೇನೂ ‘ಕಂಜೂಸ್‌’ ಅಲ್ಲ ಎನಿಸಿತು.

ಮರುದಿನ ಬೆಳಗ್ಗೆ ಸಣ್ಣದೊಂದು ಬ್ಯಾಗ್ ಹಿಡಿದು ಅಂಗಡಿ ಸಾಮಾನಿಗಾಗಿ ಹೊರಟೆವು. ಎದುರಿನ ಶೆಟ್ಟಿಯ ಅಂಗಡಿ ಕಡೆ ತಿರುಗಿಯೂ ನೋಡದೆ ವೆಂಕಟರಮಣ ರಸ್ತೆ ದಾಟಿ ಮುಖ್ಯರಸ್ತೆಯ ಕಡೆ ನಡೆಯತೊಡಗಿದ.

‘ಇಲ್ಲಿಯೇ ಇರುವ ಅಂಗಡಿ ಬಿಟ್ಟು ಇನ್ನೆಲ್ಲಿಗೆ ಹೋಗುತ್ತಿದ್ದಾನೆ’ ಅಂದುಕೊಳ್ಳುತ್ತಾ ಅವನ ಮುಖ ನೋಡಿದೆ.
‘ಆ ಶೆಟ್ಟಿ ಕಳ್‌ ನನ್ಮಗ, ತೂಕದಲ್ಲಿ, ರೇಟಲ್ಲಿ ಎಲ್ಲಾ ಮೋಸ.. ಅವನ ಹಣೆ ಮೇಲಿರೋ ನಾಮ ನಮಗೂ ಹಾಕಿ ಕಳಿಸ್ತಾನೆ…ಅವನ ಅಂಗಡಿಗೆ ಹೋಗದ್‌ ಬಿಟ್ಟು ಬಹಳ ಕಾಲನೇ ಆಯ್ತು… ಅದ್ಕೇ ಅವನು ನನ್ನ ಕಂಡ್ರೆ ಉರ್ಕಳ್ತಾನೆ’ ಎಂದ. ವೆಂಕಟರಮಣನ ಆಲೋಚನೆ ಸರಿಯಾದ ದಿಕ್ಕಿನಲ್ಲೇ ಇದೆ ಎನಿಸಿತು.

ಎಲ್ಲದರಲ್ಲಿಯೂ ಹಿಡಿತ ಸಾಧಿಸುತ್ತಿದ್ದ ನನ್ನ ರೂಮ್‌ ಮೇಟ್‌ನ ಸಾರಥ್ಯದಲ್ಲಿ ನನ್ನ ಬದುಕು ಚೆನ್ನಾಗಿಯೇ ಸಾಗಿತ್ತು.

ಆದರೂ ನಮ್ಮ ಕಾಲೇಜಿನ ಇತರ ಸಹಪಾಠಿಗಳ ಉಡುಗೆ ತೊಡುಗೆ, ಮೋಜು ಮಸ್ತಿ ನಮ್ಮನ್ನು ಸೆಳೆಯದೇ ಇರುತ್ತಿರಲಿಲ್ಲ. ಬಹುತೇಕ ಹುಡುಗರು ವಾರಕ್ಕೊಂದು ಸಿನಿಮಾ ನೋಡಿ ಬಂದು ಅದರ ಬಗ್ಗೆ ನಮ್ಮೆದುರಿಗೆ ಪ್ರಶಂಸೆ ಮಾಡುತ್ತಿದ್ದುದು ನಮಗೂ ಆಸೆ ಗರಿಗೆದರುವಂತೆ ಮಾಡುತ್ತಿತ್ತು.

ಏನೇ ಇದ್ದರೂ ಆ ವಿಚಾರದಲ್ಲೂ ನಾವು ಗಡಿದಾಟದಂತೆ ನನ್ನ ಮಿತ್ರ ಒಂದು ಕಟ್ಟಳೆ ವಿಧಿಸಿದ್ದ. ಯಾರು ಏನೇ ಹೇಳಿ ಒಳಗಿನ ಆಸೆಯನ್ನು ಉದ್ದೀಪನಗೊಳ್ಳುವಂತೆ ಮಾಡಿದರೂ, ಸಿಕ್ಕಿ ಸಿಕ್ಕಿದ ಸಿನಿಮಾಕ್ಕೆ ಹೋಗುವಂತಿರಲಿಲ್ಲ. ಯಾವುದಾದರೂ ಸಿನಿಮಾ ಐವತ್ತು ದಿನ ಪ್ರದರ್ಶನ ಪೂರೈಸಿ ಶತ ದಿನೋತ್ಸವ ಕಾಣುವ ಹೊಸ್ತಿಲಲ್ಲಿರಬೇಕು. ಆಗ ಮಾತ್ರ ಆ ಸಿನಿಮಾ ನೋಡಬಹುದೆಂಬ ನಿಬಂದನೆ ವಿಧಿಸಿದ್ದ.

ನಮ್ಮ ಕಾಲೇಜು ಎದುರಿನ ರಸ್ತೆಯಲ್ಲಿ ಒಂದು ಟೀ ಅಂಗಡಿಯಿತ್ತು. ಅದರಲ್ಲಿ ಒಂದು ಗ್ರಾಮಾ ಫೋನ್‌ ಇದ್ದು ದುಡ್ಡು ಕೊಟ್ಟು ಸಿನಿಮಾ ಹಾಡು ಕೇಳಬಹುದಾಗಿತ್ತು. ನಾಲ್ಕು ಆಣೆ ಕೊಟ್ಟರೆ ನಮ್ಮ ಇಷ್ಟದ ಮೂರು ಸಿನಿಮಾ ಹಾಡುಗಳನ್ನು ಹಾಕಿಸಿ ಕೇಳಬಹುದಾಗಿತ್ತು.

ವೆಂಕಟರಮಣ, ನಮ್ಮೊಂದಿಗೆ ಇನ್ನಿಬ್ಬರನ್ನು ಸೇರಿಸಿಕೊಂಡು ನಾಲ್ಕು ಆಣೆ ಒಟ್ಟು ಮಾಡಿ ತಿಂಗಳಿಗೊಮ್ಮೆ ಮೂರು ಹಾಡು ಕೇಳುವ ವ್ಯವಸ್ಥೆ ಮಾಡುತ್ತಿದ್ದ. ಯಾವ ಯಾವ ಹಾಡು ಕೇಳಬೇಕೆಂದು ನಮ್ಮ ನಮ್ಮಲ್ಲೇ ವಾರಗಟ್ಟಳೇ ಚರ್ಚೆಯಾಗುತ್ತಿತ್ತು. ಹೀಗೆ ಹಾಡು ಕೇಳಿ ಒಂದು ಮಟ್ಟಕ್ಕೆ ನಮ್ಮ ಸಿನಿಮಾ ಆಸೆ ತಣಿಸಿಕೊಳ್ಳಲು ಯತ್ನಿಸುತ್ತಿದ್ದೆವು.
*****
ನಾವಿಬ್ಬರೂ ಸೇರಿ ಆ ಮನೆಯೊಳಗೆ ಐದು ಜನರಿದ್ದರೂ ಯಾವುದೇ ಸದ್ದು ಗದ್ದಲಕ್ಕೆ ಆಸ್ಪದವಿರಲಿಲ್ಲ. ಮನೆಯೊಡತಿ ಅಡುಗೆಯ ವೇಳೆ ಬಿಟ್ಟು ಮಿಕ್ಕಂತೆ ನೆಲವನ್ನು ಉಜ್ಜಿ ಉಜ್ಜಿ ಒರೆಸುತ್ತಲೋ, ಹಿಂದಿನ ಗಲ್ಲಿಯಲ್ಲಿ ಬಟ್ಟೆ ಒಗೆಯುತ್ತಲೋ, ಪಾತ್ರೆ ತೊಳೆಯುತ್ತಲೋ ಮೌನವಾಗಿರುತ್ತಿದ್ದಳು. ಸಪ್ಲಿಮೆಂಟರಿ ಪರೀಕ್ಷೆ ಕಟ್ಟಿದ್ದ ‘ಡುಮ್ಮಿ’ ಬುಕ್ಕು, ನೋಟ್‌ ಬುಕ್ಕು ಹಿಡಿದು ಮೂಲೆಯಲ್ಲಿ ಕುಳಿತಿರುತ್ತಿದ್ದಳು. ಒಮ್ಮೊಮ್ಮೆ ಅವಳ ಕೈಯಲ್ಲಿ ತ್ರಿವೇಣಿಯದೋ, ಎಂ.ಕೆ ಇಂದಿರಾದೋ ಪುಸ್ತಕ ಇರುತ್ತಿತ್ತು. ಇನ್ನು ಬೆಳಗ್ಗೆ ಮನೆಯಿಂದ ಹೋದ ಓನರ್‌ ಸಂಜೆ ಬಂದರೆ ಅಲ್ಲಿ ಇಲ್ಲಿ ಉಳಿಕೆಯ ಮನೆಕೆಲಸವಿದ್ದರೆ ಮಾಡಿ ಊಟ ಮುಗಿಸಿ ನಿದ್ದೆಗೆ ಶರಣಾಗುತ್ತಿದ್ದ.

ಒಂದು ದಿನ ಭಾನುವಾರ ಕೆಲವರು ಬಂದು ಒಂದು ಬಾಗಿಲು ಹಾಗೂ ಕಿಟಕಿಯನ್ನು ತಂದು ಮನೆಯ ಮುಂದೆ ಜಗುಲಿಯಲ್ಲಿರಿಸಿ ಹೋದರು. ಇಟ್ಟಿಗೆ, ಜಿಂಕ್‌ ಶೀಟು, ಮರಳು ಬಂದವು. ಒಂದಿಬ್ಬರು ಗಾರೆಯವರು ಬಂದು ಮನೆಯ ಗೋಡೆಗೆ ಸೇರಿಸಿ ಮುಂಭಾಗಕ್ಕೆ, ಎಂಟಡಿ ಎಂಟಡಿ ಖಾಲಿ ಜಾಗದಲ್ಲಿ ಗೋಡೆ ಏಳಿಸತೊಡಗಿದರು. ಬಾಗಿಲು ಕಿಟಕಿ ಕೂರಿಸಿ ಮೇಲಕ್ಕೆ ಶೀಟ್‌ ಹೊದಿಸಿ ರೂಮು ಸಿದ್ದವಾಗಿಯೇ ಬಿಟ್ಟಿತು. ಅಲ್ಲಿಗೆ ಮತ್ತೆ ಯಾರೋ ಬಾಡಿಗೆಗೆ ಬರುವ ಸೂಚನೆ ಹೊಳೆದು ನಮಗೆ ಕಸಿವಿಸಿಯಾಗತೊಡಗಿತು.

ಸೆಕೆಂಡ್‌ ಬಿಎಸ್‌ಸಿ ಪರೀಕ್ಷೆ ಬರೆದು ರಜಾಕ್ಕೆ ಊರಿಗೆ ಹೋಗಿ ಬರುವ ವೇಳೆಗೆ ಆ ರೂಮಿಗೆ ಬಾಡಿಗೆದಾರರೂ ಬಂದಿದ್ದರು.

ಅಲ್ಲಿಗೆ ಬಂದಿದ್ದವರು ಟಿಸಿಎಚ್‌ ಓದುತ್ತಿದ್ದ ಇಬ್ಬರು ಹುಡುಗಿಯರು, ಅವರೂ ಮನೆಯೊಳಗೇ ಬಂದು ಬಾತ್‌ ರೂಮ್‌ ಉಪಯೋಗಿಸುತ್ತಿದ್ದರು.

ಅವರ ಪೈಕಿ ತೆಳ್ಳಗೆ ಬೆಳ್ಳಗೆ ಚುರುಕಾಗಿದ್ದ ಒಬ್ಬಳು ಮನೆಯೊಳಗೆ ಹಾದು ಗಲ್ಲಿಯ ಕಡೆ ಹೋಗುವಾಗಲೆಲ್ಲಾ ನಮ್ಮ ರೂಮಿನ ಕಡೆ ಕುತೂಹಲದ ದೃಷ್ಟಿ ಹರಿಸುತ್ತಿದ್ದಳು. ಒಮ್ಮೊಮ್ಮೆ ಅನಾವಶ್ಯಕವಾಗಿ ಮನೆಯೊಳಗೆ ಸುಳಿಯುತ್ತಾಳೇನೋ ಅನಿಸುತ್ತಿತ್ತು.

ಕಸಿವಿಸಿಗೊಳಗಾಗುತ್ತಿದ್ದ ನನ್ನ ಮಿತ್ರ ‘ಇನ್ನು ಮುಂದೆ ಬಹಳ ಹುಷಾರಾಗಿರಬೇಕು ಮಾರಾಯ… ಅವರ ಕಡೆ ಗಮನ ಹರಿಸಬಾರದು.. ಹ್ಯಾಗಾದರೂ ಈ ವರ್ಷ ಫೈನಲ್‌ ಡಿಗ್ರಿ ಮುಗಿಸಿಕೊಂಡು ಹೋಗಿ ಬಿಡೋಣ’ ಎನ್ನುತ್ತಿದ್ದ..
ಅವತ್ತು ಮೂರು ಗಂಟೆಗೇ ಕ್ಲಾಸ್‌ ಮುಗಿದಿತ್ತು.. ಬೇಗನೇ ರೂಮಿಗೆ ಬಂದು ಬಟ್ಟೆ ಬದಲಿಸುವ ಸಿದ್ದತೆಯಲ್ಲಿದ್ದೆ. ಮಿತ್ರ ಇನ್ನೂ ಬಂದಿರಲಿಲ್ಲ. ಸ್ವಲ್ಪ ಕಾಲ ಹಾಯಾಗಿ ವಿಶ್ರಾಂತಿ ತೆಗೆದುಕೊಳ್ಳಬಹುದೆಂದು ಯೋಚಿಸುತ್ತಿದ್ದೆ. ‘ರೀ’ ಎಂದು ಮಧುರ ಕಂಠ ಉಲಿದಂತಾಯಿತು. ತಲೆಯೆತ್ತಿ ಬಾಗಿಲ ಕಡೆ ನೋಡಿದೆ. ಅದೇ ತೆಳ್ಳನೆ ಬೆಳ್ಳನೆಯ ಹುಡುಗಿ! ನಾನು ತಬ್ಬಿಬ್ಬಾಗಿ ಅವಳನ್ನೇ ಮಿಕಿ ಮಿಕಿ ನೋಡುತ್ತಾ ನಿಂತೆ.

‘ನಾನು ಕಾಮಾಕ್ಷಿ ಅಂತ… ನಾವಿಬ್ರೂ ನಾಮದ ಚಿಲುಮೆ ಕಡೆಯವರು. ಟಿಸಿಹೆಚ್‌ ಓದಕೆ ಬಂದಿದೀವಿ… ಒಳಗೆ ಬರಬಹುದೇನ್ರಿ’ ಎಂದಳು. ನನಗೆ ಮೈ ಬೆವರುತ್ತಿರುವಂತೆನಿಸಿತು. ಮಿತ್ರನ ನೆನಪಾಯಿತು. ಇವಳನ್ನು ಒಳಗೆ ಬಿಟ್ಟುಕೊಂಡರೆ ಅವನು ದೂರ್ವಾಸ ರೂಪ ತಾಳುತ್ತಾನೆ…

ತಡ ಬಡಾಯಿಸುತ್ತಲೇ ಬಿಚ್ಚುತ್ತಿದ್ದ ಅಂಗಿಯ ಗುಂಡಿಯನ್ನು ಮತ್ತೆ ಹಾಕಿಕೊಂಡು ಬಂದು ಟ್ರಂಕ್‌ ಮೇಲಿರಿಸಿದ್ದ ನೋಟ್‌ ಬುಕ್‌ ಕೈಗೆ ತೆಗೆದುಕೊಂಡೆ.

‘ಇಲ್ಲ ಇಲ್ಲ ಈಗ ಕೊನೇ ಪಿರಿಯಡ್‌ ಕ್ಲಾಸ್‌ ಇದೆ’ ಎಂದು ತೊದಲುತ್ತಲೇ ರೂಮಿನಿಂದ ಹೊರಬಂದೆ. ಚಿಲಕ ಹಾಕಿ ಬೀಗ ಜಡಿದು ಬಿರಬಿರನೆ ಹೊರ ನಡೆದೆ.
‘ಬದುಕಿದೆಯಾ ಬಡ ಜೀವವೇ’ ಎಂಬಂತೆ ಅವಸರದಿಂದ ರಸ್ತೆಯ ಕಡೆ ನಡೆಯುತ್ತಿದ್ದ ನನ್ನ ಬೆನ್ನ ಹಿಂದೆ ಆಕೆ ಕಿಸಕ್ಕನೆ ನಕ್ಕಂತಾಯಿತು.
ನಾನು ಮುಖ್ಯರಸ್ತೆಯವರೆಗೂ ಹೋಗಿ ಅಡ್ಡಾಡಿ ಬರುವ ವೇಳೆಗೆ ಮಿತ್ರ ಬಂದಿದ್ದ.
‘ಅದೇನೋ ಇಷ್ಟು ಲೇಟಾಗಿ ಬರ್ತಿದಿಯಾ… ಇವತ್ತು ಮೂರ್‌ ಗಂಟೆಗೆ ಲಾಸ್ಟ್‌ ಪೀರಿಯಡ್‌ ಅಲ್ವಾ ನಿನಗೆ’ ಎಂದ. ಎಲ್ಲಾ ವಿಷಯ ಹೇಳಬೇಕೆನಿಸಿತು. ‘ಆದರೆ ಅವನೇನಾದರೂ ಅವರ ಬಳಿ ಹೋಗಿ ಗಲಾಟೆ ಮಾಡಿದರೆ’ ಎಂದು ಯೋಚಿಸಿ ಸುಮ್ಮನಾದೆ.
ಮತ್ತೊಂದೆರಡು ದಿನ ಕಳೆದಿತ್ತು. ಕಾಲೇಜು ಮುಗಿಸಿ ಬಂದವನು ನೋಟ್ಸ್‌ ಮಾಡಲು ಕುಳಿತಿದ್ದೆ. ಮಿತ್ರ ಇನ್ನೂ ಬಂದಿರಲಿಲ್ಲ. ಬಾಗಿಲು ಓರೆ ಮಾಡಿದ್ದೆ.

ಬಾಗಿಲು ನೂಕಿದ ಸದ್ದಾಯಿತು. ಕತ್ತೆತ್ತಿ ನೋಡಿದೆ ಕಾಮಾಕ್ಷಿ! ಎದೆಗೆ ಒಂದು ನೋಟ್‌ ಬುಕ್‌ ಒತ್ತಿ ಹಿಡಿದಿದ್ದ ಆಕೆ ರೂಮೊಳಗೇ ಕಾಲಿಟ್ಟಿದ್ದಾಳೆ. ನಗೆಯರಳಿಸಿ ನಿಂತಿದ್ದ ಅವಳೆದುರಿಗೆ ಲುಂಗಿ ಬನೀನಿನಲ್ಲಿದ್ದ ನಾನು. ಎದ್ದು ಕೈಕಟ್ಟಿ ವಿದೇಯ ವಿದ್ಯಾರ್ಥಿಯಂತೆ ಉಗುಳು ನುಂಗುತ್ತಾ ನಿಂತುಕೊಂಡೆ.
‘ನನಗೆ ಸ್ವಲ್ಪ ಗಣಿತ ಹೇಳಿ ಕೊಡಬೇಕು ನೀವು’ ಎಂದು ನೋಟ್‌ ಬುಕ್‌ ಮುಂದೆ ಹಿಡಿದಳು.
‘ಈಗ ಹೋಗಿ.. ನನ್ನ ರೂಮ್‌ ಮೇಟ್‌ ಬಂದರೆ ಕಷ್ಟ’ ಎಂದೆ. ಧ್ವನಿ ಅದುರುತ್ತಿತ್ತು.

‘’ಹುಡುಗಿ ಎದುರಿಗೆ ನಿಂತು ಮಾತಾಡಕೆ ಅದೇಕೆ ಅಷ್ಟು ನಡುಗುತ್ತೀರಿ.. ನಿಮ್ಮ ಫ್ರೆಂಡ್‌ ಬಿಡಿ, ಯಾವಾಗಲೂ ಶಾಪ ಕೊಡೋ ಮುನಿ ತರ ಮುಖ ಗಂಟು ಹಾಕಿಕೊಂಡೇ ಇರ್ತಾರೆ…. ಎಂದಳು. ಅವಳೇನೂ ಅಲ್ಲಿಂದ ಹೋಗುವಂತೆ ಕಾಣಲಿಲ್ಲ…

ಬಾಗಿಲ ಬಳಿ ಯಾರೋ ಸುಳಿದಂತಾಯಿತು. ಬಂದಿದ್ದವನು ವೆಂಕಟರಮಣ!
‘ನಿನಗೆಷ್ಟೋ ಹೇಳದು. ಈ ಹುಡುಗಿಯರ ಸಹವಾಸ ಎಲ್ಲಾ ಬೇಡ ಅಂತಾ..’ ಬಾಗಿಲ ಬಳಿ ನಿಂತೇ ಗುಡುಗಿದ. ಇಕ್ಕಟ್ಟಿನ ಸ್ಥಿತಿಯಲ್ಲಿದ್ದ ನಾನು ಉಸಿರಾಡದೇ ನಿಂತಿದ್ದೆ.

‘ಇಲ್ಲಾರಿ ನಾನೇ ಬಂದಿದ್ದು..’ ಅವಳು ನನ್ನನ್ನು ಪಾರು ಮಾಡುವವರಂತೆ ಹೇಳಿದಳು.
‘ಇಲ್ಲೇನು ಕೆಲ್ಸ ನಿನಗೆ.. ಹುಡುಗರ ರೂಮಲ್ಲಿ’ ಅವನದು ಅದೇ ಗುಡುಗು.

‘ಗಣಿತ ಹೇಳಿಸ್ಕೊಳ್ಳಕೆ ಅಂತಾ..’ ಎಂದು ಅವಳು ರಾಗ ಎಳೆಯುತ್ತಿದ್ದಂತೆಯೇ ವೆಂಕಟರಮಣ ‘ಏನ್‌ ಗಣಿತ ಹೇಳಿಸ್ಗಳದು ನೀನು ಅವನ ಹತ್ರ! ಲೆಕ್ಕ ತಲೆಗೆ ಹತ್ತದಲೆ ಅವ್ನೇ ಎಸೆಸೆಲ್ಸಿ ಪರೀಕ್ಷೆಲಿ ಪೇಲಾಗಿದ್ದ!.. ಹುಂ ನಡಿ ನಡಿ ಇಲ್ಲಿಂದ .ಇನ್ನೊಂದ್‌ ಸಲ ಇಲ್ಲಿ ಕಾಲಿಟ್ರೆ ನೋಡು… ಎನ್ನುತ್ತಾ ಗದರಿಕೊಂಡೊಡನೆಯೇ ಕಾಮಾಕ್ಷಿ ಅಲ್ಲಿಂದ ಕಾಲ್ಕಿತ್ತಿದ್ದಳು.

ವೆಂಕಟರಮಣ ಅಷ್ಟಕ್ಕೆ ನಿಲ್ಲಿಸಲಿಲ್ಲ. ಸಂಜೆ ಓನರ್‌ ಬಂದ ಒಡನೆಯೇ ‘ನೋಡಿ ನಾವು ಓದಕೆ ಅಂತಾ ಅಷ್ಟು ದೂರ ಮಲೆನಾಡಿನಿಂದ ಬಂದಿದೀವಿ.. ಹುಡುಗೀರ ಜತೆ ಓಡಾಡಕಲ್ಲ.. ಅವರಿಗೆ ಸ್ವಲ್ಪ ಶಿಸ್ತಾಗಿ ಹಿಡಿತದಲ್ಲಿ ಇರಕೆ ಹೇಳಿ.. ಇಲ್ಲಾಂದ್ರೆ ನಾವೇ ರೂಮು ಖಾಲಿ ಮಾಡಿಕೊಂಡು ಹೋಗ್ತೀವಿ’ ಎಂದು ಧಮಕಿ ಹಾಕಿದ.
‘ಇಂತಾ ಶಿಸ್ತಿನ ಹುಡುಗರು ರೂಮು ಖಾಲಿ ಮಾಡಿದ್ರೆ ಮನೆಯೊಳಗೆ ಇರುವ ರೂಮಿಗೆ ಹೊಸದಾಗಿ ಯಾರನ್ನು ಬಾಡಿಗೆಗೆ ತರೋದು’ ಎಂದು ಅಂಜಿದ ಓನರ್‌, ಆಗಲೇ ಹುಡುಗಿಯರ ರೂಮಿಗೆ ಹೋಗಿ ಬುದ್ಧಿವಾದ ಹೇಳಿ ಬಂದಿದ್ದ.

ಅಂತೂ ಲಲನೆಯರಿಂದ ಪಾರಾದೆವು !ಒಳಗಿರುವಾಗ ಯಾವಾಗಲೂ ಬೋಲ್ಟ್‌ ಹಾಕಿಕೊಂಡೇ ಇರೋಣ ಎನ್ನುತ್ತಾ ಮಿತ್ರ ಚಿಲಕ ಹಾಕ ತೊಡಗಿದ.

|ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

September 28, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: