ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೋಲೊಪ್ಪದ ಮನಕೆ..

-ಸರೋಜಿನಿ ಪಡಸಲಗಿ
ಮನವೊಂದು ಮಗು!

ಅಗೊ ಮತ್ತದೆ ಸದ್ದು ನಗಾರಿ ಹಂಗೆ
ಒತ್ತೊತ್ತಿ ಹಿಡಿದಷ್ಟು ಎತ್ತೆತ್ತಿ ಕುಟ್ಟುತ್ತ
ಛಕ್ಕಂತ ಜಿಗಿಯುತ್ತ ಫಕ್ಕಂತ ಹಾರುತ್ತ
ಏನಾಗಿದೆ ಇದಕೆ ತಿಳೀದೆ ಅರಚಿದರೂ
ಮತ್ತೆ ಗುಡುಗಾಟ ಅಲುಗಾಟದೇರಾಟ

ಸೋತೊಮ್ಮೆ ಸೋಲೊಪ್ಪದ ಮನಕೆ
ಕೇಳಿ ಬಿಟ್ಟಾಗ ತಟ್ಟಿ ಬಿಚ್ಚಿ ಕಟ್ಟು ಎತ್ತಿಟ್ಟು
ಒಪ್ಪಾಗಿ ಚೌಕಾಗಿ ಮಾಟಾಗಿ ಕುಳಿತದು
ಕೇಳಿತು ಮುದ್ದಾಗಿ ತುಟಿ ಕೊಂಕಿಸುತ
ಒಂದೇ ಒಂದು ಕೇಳಲೆ ಮತ್ತೇನು ಬೇಡೆ

ಬುದ್ಧಿ ಜೋಕೆ ಹುಷಾರೆಂದರೆ ಅತ್ತ ನಕ್ಕು
ಮೆತ್ತಗೆ ನೇವರಿಸಿ ಕೆನ್ನೆ ಕೇಳದೇನು ಬೇಗ
ನೇರವಾಗಿ ಹೇಳು ಬೇಡ ಸುತ್ತು ಬಳಸೆಷ್ಟೂ
ಈಗೊ ಒಂದಾಸೆ ಎನಗೆ ಬಿಡದೆ ಕಾಡಿದೆ
ಕಣ್ತುಂಬ ರಾಶಿ ಕನಸು ಹಾಸಿ ಪಿಸುಗುಟ್ಟಿತು

ದಟ್ಟಡವಿಯ ಹಸಿರ ನಡುವೆ ಒಂಟಿಯಾಗಿ
ಒಂಟಿ ಮರದ ಕೆಳಗೆ ತೆರೆದ ಬಾನಡಿಯಲ್ಲಿ
ಕಾರ್ಮುಗಿಲ ನೆರಳೊ ಎನ್ನೆದೆ ಗೋಜಲೊ
ಎಲ್ಲ ಕಟ್ಟಿ ಸುಳಿವ ಸುಳಿಗಾಳಿಯಲಿ ತೇಲಿಸಿ
ಗಳಿಗೆ ಭಾರ ಇಳುಹಿ ನಿರಾಳವಾಗ ಬೇಕಿದೆ

ದೂರದಿಂದ ನನ್ನನೊಮ್ಮೆ ಬಗೆದು ನೋಡಿ
ನನ್ನೊಳಗನ ನಾನೆ ಹಿಂಜಿ ಒಮ್ಮೆ ಆಳಕ್ಕಿಳಿದು
ನಾನೇನು ಎಂದು ನೋಡಬೇಕಿದೆ ಹುಡುಕಿ
ನನ್ನೆದೆ ಗೂಡ ಸರಕು ಆಗಬೇಕಿದೆ ವಿಲೇವಾರಿ
ನಿಗೂಢದಾಟ ಅದು ನನ್ನದು ಕೇವಲ ನನ್ನದು

ಮನವೂ ಆಗುವುದಲ್ಲ ಚಿಂತಕ ಒಮ್ಮೊಮ್ಮೆ
ಕಣ್ಣು ಅಂಗಳಾಗಿ ಬುದ್ಧಿ ಪೆಚ್ಚಾಗಿ ತಬ್ಬಿ ಮನವ
ಬೇಡ ನನ್ನಂತಾಗುವುದು ನೀನು ಆಗಿರು ನೀನೇ
ಇದೀನಿ ನಾನಿಲ್ಲಿ! ನಸು ನಕ್ಕ ಮನ ಮಗ್ನ ತನ್ನಲಿ
ದಾರ್ಶನಿಕನಲ್ಲ ಅಲ್ಲ ಚಿಂತಕ! ಮನವೊಂದು ಮಗು!

‍ಲೇಖಕರು Admin

10 November, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading