ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.
ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.
ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ.
ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.
ಹಿಂದೆ ಅವಧಿಯ ಕತೆ ಕಿಟಕಿ ಅಂಕಣದಿಂದ ಇದೀಗ ಮತ್ತೊಂದು ಹೊಸ ಅಂಕಣದೊಂದಿಗೆ ಬರುತ್ತಿದ್ದಾರೆ.
ಅಂಕಣ 2
ಅವ್ವ ಈಗಷ್ಟೇ ತೀರಿಹೋದರು. ಅವರದು ಸಾಯುವ ವಯಸ್ಸಲ್ಲ. ಅಸಲಿಗೆ ಸಾಯಲು ಒಂದು ವಯಸ್ಸು ಅಂತ ಯಾವುದೂ ಇರುವುದಿಲ್ಲ. ಜನ್ಮ ಕೊಟ್ಟ ಜೀವ ಅಂಗಾತ ಮಲಗಿ ಕಣ್ಣು ಮುಚ್ಚಿದೆ. Patient Monitor ನಲ್ಲಿ ಎಲ್ಲವೂ ಸೊನ್ನೆಗೆ ಇಳಿದಿವೆ. ಎಲ್ಲಿ ಹೆತ್ತವರ ಎಲ್ಲದೂ ಮುಗಿಯುತ್ತದೊ ಅಲ್ಲಿಂದ ಮಕ್ಕಳ ನಿಜ ಬದುಕು ಶುರುವಾಗುತ್ತದೆ.
ಅವನ ಕಣ್ಣುಗಳು ಮಂಜು ಮಂಜು. ದೇಹ ನಡುಗುತ್ತಿದೆ. ಒಂದು ತಿಂಗಳಿನಿಂದ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡ. ಹೋರಾಡಿದ. ಹಗಲು ರಾತ್ರಿ ಕಣ್ಣಲ್ಲಿ ದೀಪ ಹಚ್ಚಿಕೊಂಡು ಕಾದ. ಅವ್ವ ಸೋಲುತ್ತಾ ಹೋದಂತೆ ಇವನು ಕುಗ್ಗುತ್ತಾ ಹೋದ. ಅವ್ವನ ಹಿಡಿತ ಸಡಿಲವಾಯಿತು. ಪ್ರಾಣ ಪಕ್ಷಿ ಹಾರಿ ಹೋಯಿತು.
ಅವ್ವ ಸತ್ತ ದಿನ ಅವನು ಚೂರು ಸತ್ತ..
ಅವ್ವನ ದೇಹ ಬೆಚ್ಚಿ ಬೀಳುವಂತೆ ಅಳತೊಡಗಿದ. ಯಾರೊ ಹಿಂದಿನಿಂದ ಬೆನ್ನು ಸವರಿ ‘ನೀ ಹಿಂಗ ಅತ್ರೆ ಹ್ಯಾಂಗ..? ಮಣ್ಣು ಮಾಡಕ ಇನ್ನೂ ಎಷ್ಟೊಂದು ಕೆಲಸಗಳವಾ. ಏಳು ಏಳು..’ ಅಂದರು. ನರ್ಸ್ ನಿರ್ದಯಿಯಾಗಿ ‘ಬಿಲ್ ಕ್ಲಿಯರ್ ಮಾಡಿದ ಬಳಿಕ ಬಾಡಿ ಕೊಡ್ತೀವಿ. ಅರ್ಧ ಗಂಟೆ ಕಾಯಿರಿ. ಬಿಲ್ ಕೊಡ್ತೀವಿ’ ಅಂದಳು.
ಕಣ್ಣು ಒರೆಸಿಕೊಳ್ಳುತ್ತಾ ಜೇಬು ನೋಡಿಕೊಂಡ. ಹತ್ತಾರು ನೋಟುಗಳು. ಬೇಕಾಗುವಷ್ಟು ದುಡ್ಡಿಲ್ಲ. ಈಗ ಅದೆಷ್ಟು ಲಕ್ಷವೊ. ಯಾರನ್ನು ಕೇಳುವುದು? ಹಣ ಹೊಂದಿಸಬೇಕು. ಮೊಬೈಲ್ ತೆಗೆದ. ಯಾರಿಗೊ ಕರೆ ಮಾಡಿದ. ಹಣ ಕೇಳಿದ. ಅವ್ವ ತೀರಿ ಹೋದಳು ಅಂದ. ಕೊನೆಯ ಪದವು ಮುಗಿಯುವ ಮುನ್ನವೇ ಬಿಕ್ಕಳಿಸಿದ. ‘ನೀ ಹಿಂಗ ಅಳೂತ ಕೂತ್ರಾ ಹ್ಯಾಂಗ..’ ಆಗಲೇ ಯಾರೊ ಆಡಿ ಬಿಟ್ಟಿದ್ದ ಮಾತು ಮತ್ತೆ ಪ್ರತಿಧ್ವನಿಸಿತು.
ಈಗ ಬಂಧುಗಳಿಗೆ ಸಾವಿನ ಸುದ್ದಿ ಮುಟ್ಟಿಸಬೇಕು. ಊರ ಹೊಲದಲ್ಲಿ ಮಣ್ಣಿಗೆ ಅಣಿಗೊಳಿಸಬೇಕು. ಮನೆಯ ಮುಂದೆ ಬೆಂಕಿ. ಬಂದವರಿಗೆ ಮಂಡಕ್ಕಿ ಚಹಾ. ಆಮೇಲೆ ಮೂರು ದಿನದ ಶಾಸ್ತ್ರ, ಹನ್ನೊಂದನೇ ದಿನದ ತಿಥಿ.. ಎಲ್ಲಕ್ಕೂ ತಯಾರಿಗಳಾಗಬೇಕು. ದುಡ್ಡು ಹೊಂದಿಸಬೇಕು.
ಅವ್ವನ ಕೈತುತ್ತು ನೆನಪಾಗುತ್ತಿದೆ. ಬೆಳ್ – ಬೆಳಗ್ಗೆ ಬಡಿಯುತ್ತಿದ್ದ ರೊಟ್ಟಿ ಬಡಿತದ ಸದ್ದು ಕಾಡುತ್ತಿದೆ. ಯಾರದೊ ಮದುವೆಗೆ ಹೋದಾಗ ಮುಚ್ಚಿ ತಂದುಕೊಟ್ಟ ಬೂಂದಿ ನೆನಪಾಗುತ್ತಿದೆ. ಹರಿದ ಸೀರೆಯ ಅವ್ವ ತನಗೆ ತಂದ ಹೊಸ ಅಂಗಿ ನೆನಪಾಗುತ್ತಿದೆ. ದುಃಖ ಉಕ್ಕುತ್ತದೆ. ಅಳುವಂತಿಲ್ಲ. ಅಳಬಾರದು. ಗಂಡಸು ಅಳಬಾರದು!
ಇನ್ನೊಬ್ಬ ಮತ್ತೆ ಅಂದ. ‘ಗಂಡಸಾಗಿ ನೀನು ಅಳುತ್ತಾ ಕೂತರೆ ಹೇಗೆ?’ ಅವ್ವನ ನಿಷ್ಠಾವಂತ ಬದುಕಿಗೆ ತಾನಾದರೂ ಕೂತು ನಾಲ್ಕು ಹನಿ ಪ್ರಾಮಾಣಿಕ ಕಣ್ಣೀರು ಅರ್ಪಿಸಿ ಕಳುಹಿಸಬೇಕು ಅನ್ನುತ್ತಿದೆ ಮನಸು. ಒಳಗಿನಿಂದ ಕಡಲು ನುಗ್ಗುತ್ತಿದೆ.
ಆದರೆ..? ಯಾವಾಗ ಅಳಲಿ..?
ಎರಡು ಲಕ್ಷದ ಮೂವತ್ತು ಸಾವಿರ ಬಿಲ್. ಅಷ್ಟೊಂದು ಒಟ್ಟು ಮಾಡಲು ಇನ್ನೂ ಎರಡ್ಮೂರು ಗಂಟೆ ಬೇಕು. ಅಲ್ಲಿಯವರೆಗೂ ಅವ್ವ ಇಲ್ಲಿ ಅನಾಥ. ಕಣ್ಣ ನೀರು ಆರುತ್ತದೆ. ದುಃಖ ಚೂರು ಕಂದುತ್ತದೆ. ಮತ್ತೆ ಕರೆಗಳು. ಕೋರಿಕೆಗಳು. ದುಡ್ಡು ಸಿಗುವುದೊ, ಸಿಗಲಾರದೊ..
ಆದರೂ ಅಳಬೇಕು. ಎಲ್ಲಿ ಅಳುವುದು? ಹೇಗೆ ಅಳುವುದು?
ಇನ್ನೂ ಎಷ್ಟೊಂದು ಕೆಲಸಗಳಿವೆ. ಅಲ್ಲಿ ಯಾರೊ ಹೇಳುತ್ತಾರೆ.. ‘ನೀಟಾಗಿ ಎಲ್ಲಾ ಶಾಸ್ತ್ರ ಮಾಡಿ ಅವ್ವನ ಕಳುಹಿಸಿಕೊಡು ಅಂತ’ ಹೌದು. ಎಲ್ಲವನ್ನೂ ಮಾಡಬೇಕು. ಎಲ್ಲವನ್ನೂ ಮಾಡುತ್ತಾ ಮಾಡುತ್ತಾ ಎಲ್ಲಿ ಅಳಲಿ? ಅವ್ವನಿಗೆ ನಾಲ್ಕು ಹನಿ ಕಣ್ಣೀರನು ಹೇಗೆ ಅರ್ಪಿಸಲಿ? ಮತ್ತೆ ಮತ್ತೆ ತನಗೆ ತಾನೇ ಕೇಳಿಕೊಳ್ಳುತ್ತಾನೆ. ಮತ್ಯಾರೊ ಕರೆಯುತ್ತಾರೆ. ಇನ್ನೇನೊ ಹೇಳುತ್ತಾರೆ.
ಅವ್ವನ ಆತ್ಮದೊಂದಿಗೆ ನಾಲ್ಕು ಮಾತನ್ನಾದರೂ ಒಬ್ಬನೇ ಕೂತು ಆಡಬೇಕು ಅನಿಸಿದೆ. ಒಬ್ಬನೇ ಎಲ್ಲಿ ಕೂರುವುದು. ಅಷ್ಟೊಂದು ಅರಾಮು ಈಗೆಲ್ಲಿದೆ.. ಅಯ್ಯೋ ಇನ್ನೂ ಎಷ್ಟೊಂದು ಕೆಲಸಗಳಿವೆ.
ಎತ್ತಿ ಆಂಬುಲೆನ್ಸ್ ಗೆ ಅವ್ವನ ದೇಹ ಇಡುವಾಗ ಕರುಳು ಕಿತ್ತು ಬರುವಂತೆ ದುಃಖ.. ಮತ್ತೆ ಯಾರದೊ ದನಿ. ಬೇಗ ಬೇಗ. ತಡವಾದರೆ ಬಾಡಿ ದಪ್ಪ ಆಗೋಕೆ ಶುರುವಾಗುತ್ತೆ.. ಮಳೆ ಬೇರೆ.
ಆಂಬುಲೆನ್ಸ್ ನಲ್ಲಿ ಕೂತು ಅಳಬೇಕು ಅನಿಸಿದೆ. ಆದರೆ ಬಂಧುಗಳಿಗೆ ಪೋನಿನಲ್ಲಿ ಅವ್ವನ ಸಾವಿನ ಸುದ್ದಿ ಹೇಳಬೇಕು. ಅವ್ವ ಸತ್ತಳು ಅನ್ನುವಾಗ ದನಿ ನಡುಗುತ್ತದೆ. ಆದರೆ ಅವನು ನಡುಗುವಂತಿಲ್ಲ.
ಆಂಬುಲೆನ್ಸ್ ನ ಆ ಸಣ್ಣ ವಿರಾಮದ ನಡುವೆ ದುಃಖ ಉಕ್ಕುತ್ತದೆ. ಹಿಂದಿನಿಂದ ಯಾರೊ ಭುಜದ ಮೇಲೆ ಕೈ ಹಾಕಿ ಮತ್ತೆ ಹೇಳುತ್ತಾರೆ. ‘ಗಂಡಸಾಗಿ ನೀನು ಅಳುತ್ತಾ ಕೂತರೆ ಹೇಗೆ..?’
**
ಕೈ ತುಂಬಾ ಹಸಿರು ಬಳೆ. ಕೆನ್ನೆ ತುಂಬಾ ಅರಿಶಿಣ. ಚಪ್ಪರದಲ್ಲಿ ತೂಗುವ ಮಾವಿನ ಎಲೆ ತೋರಣ. ಮನೆಯಲ್ಲಿ ಜನವೊ ಜನ. ಸಂಭ್ರಮ. ಮನೆಗೊಂದು ಸಿಹಿ ಕಂಪು ಮೆತ್ತಿಕೊಂಡಿದೆ. ಮಗಳು ಸುಮ್-ಸುಮ್ಮನೆ ನಾಚುತ್ತಿದ್ದಾಳೆ. ಅವಳ ಗೆಳೆತಿಯರು ಕಿಲ ಕಿಲ ನಗುತ್ತಿದ್ದಾರೆ.
ಇಂದಿನ ಈ ದಿನ ಮುಗಿದು, ಮರು ದಿನವೇ ಬ್ರಾಹ್ಮೀ ಮುಹೂರ್ತದಲ್ಲಿ ಮಗಳ ಮದುವೆ.
ಚೆಂದದ ಹುಡುಗ, ಚೆಂದದ ಮನೆ. ಚೆಂದದ ದುಡಿಮೆಯೂ.. ಆಮೇಲೆ ಎಲ್ಲವೂ ಚೆಂದವೇ ತಾನೇ. ಅಪ್ಪ ಗಣಿತದ ಮೂಲಕ್ರಿಯೆಗಳನ್ನು ಹರಡಿಕೊಂಡು ತೀರ್ಮಾನಿಸಿದ್ದಾನೆ.
ಹೂವಿನ ಡೆಕೋರೇಷನ್ ನವರು ತಡವಾಗಿ ಬರ್ತಾರಂತೆ. ಅಪ್ಪನಿಗೆ ಆತಂಕ. ಚೌಲ್ಟ್ರಿ ಇನ್ನೂ ಕ್ಲೀನ್ ಆಗಿಲ್ಲ. ಅಡುಗೆಯವರು ತಂದ ತರಕಾರಿ ತಾಜಾ ಇಲ್ಲ. ನಂದಿನಿ ಬೆಣ್ಣೆ ಸಿಕ್ಕಿಲ್ಲ, ತಂದಿರೋದು ಯಾವುದೊ ಲೋಕಲ್ ಅಂತೆ… ಇಂತಹ ದೂರುಗಳ ಮಧ್ಯೆ ಆತ ಇಷ್ಟಿಷ್ಟೆ ಮಗಳ ಮದುವೆಯ ನಲಿವನ್ನು ಸವಿಯಲು ಹವಣಿಸುತ್ತಿದ್ದಾನೆ.
ಒಬ್ಬಳೇ ಮಗಳು. ಅವಳಿಗೂ ಇಷ್ಟವಾದ ಮದುವೆ. ತನಗೂ ಇಷ್ಟವಾದದ್ದೆ. ಕೂತು ಮಗಳ ಸಂಭ್ರಮ ಕಣ್ತುಂಬಿಕೊಳ್ಳಬೇಕು ಅನಿಸುತ್ತದೆ. ಅವಳು ಬಳೆ ತೊಡಿಸಿಕೊಳ್ಳುವಾಗ ತಾನೂ ಪಕ್ಕದಲ್ಲಿ ಕೂತು ‘ನೋವಾ ಮಗಳೇ’ ಅಂತ ಕೇಳಬೇಕು ಅನಿಸುತ್ತದೆ. ಮೆಹಂದಿ ಬಣ್ಣ ಅಗ್ದಿ ಚೆಂದವಾಗಿದೆ ಅಂತ ಹೇಳಬೇಕು ಅನಿಸುತ್ತದೆ.
ಹಾಗೆ ಒಳಗೆ ಸುಳಿದು ಬಂದಾಗಲೆಲ್ಲಾ ಜವಾಬ್ದಾರಿಗಳು ಬೆನ್ನ ಹಿಂದೆಯೇ ಬರುತ್ತವೆ.
ಹೆಂಡತಿ ‘ಒಳಗೆ ಏನ್ರಿ ಕೆಲಸ ಗಂಡಸರಿಗೆ.. ಆಚೆ ಎಷ್ಟೊಂದು ಕೆಲಸ ಇದೆ. ಓಲಗದವರಿಗೆ ಪೋನ್ ಮಾಡಿಲ್ಲವಂತೆ ಹೋಗಿ ಮಾಡೋಗ್ರಿ..’ ಅನ್ನುತ್ತಾಳೆ.
ನನಗೂ ಮಗಳನ್ನು ನೋಡುವ ಸಂಭ್ರಮ.. ಆದರೆ ಕೆಲಸಗಳಿವೆ. ಇದನ್ನು ನಾನಲ್ಲದೆ ಯಾರು ಮಾಡಬೇಕು? ಓಹ್ ಚಿಕ್ಕಪ್ಪನವರಿಗೆ ಕರೆ ಮಾಡೋದೇ ಮರೆತು ಹೋಗಿದೆ. ಅರೇ ಗಂಡಿನ ಕಡೆಯವರಿಗೆ ರೂಮು ಇನ್ನೂ ಬುಕ್ಕಾಗಿಲ್ಲ..
ಇನ್ಮೇಲೆ ಮಗಳು ಮನೆಯಲ್ಲಿ ಇರುವುದಿಲ್ಲ. ನಾಳೆಯಿಂದ ಅವಳ ಮನೆ ಬೇರೆಯದು. ಅವಳು ಮಗುವಾಗಿದ್ದಾಗ ಆಡಿದ ಆಟ. ಶಾಲೆಯಲ್ಲಿ ಚುರುಕಾಗಿ ಓದುತ್ತಿದ್ದ ಪಾಠ. ಯವ್ವನಕ್ಕೆ ಕಾಲಿಡುವ ಹೊತ್ತಿನಲ್ಲಿ ಚುರುಕಾಗಿದ್ದ ಅವಳ ನೋಟ.. ಎಲ್ಲವೂ ನೆನಪಾಗುತ್ತಿದೆ.
ಸ್ವಲ್ಪ ಹೊತ್ತು ಕೂತು ಅವುಗಳನ್ನು ಕಣ್ಣ ಮುಂದೆ ತಂದುಕೊಂಡು ಆನಂದಿಸಬೇಕು ಅನಿಸುತ್ತದೆ. ಮಗಳ ಸಂಭ್ರಮವನ್ನು ಕಣ್ಣು ತುಂಬಿಕೊಂಡು ತಾನೂ ಸಂಭ್ರಮಿಸಬೇಕು ಅನ್ನುವ ಆಸೆ. ಆದರೆ ಈ ಎಲ್ಲಾ ಕೆಲಸಗಳನ್ನು ಮಾಡುವುದು ಯಾರು?
ಆರತಕ್ಷತೆ. ಗಂಡನ ಪಕ್ಕ ಮಗಳು. ಆದರೆ ಇವನು ಎಲ್ಲೊ ಹೊರಗೆ. ಏನೊ ಕೆಲಸದಲ್ಲಿ. ಬಂದು ನೋಡಿ ಹೋಗಬೇಕು ಅನ್ನುವ ಆಸೆ. ಹೊಂಚು ಹಾಕುತ್ತಲೇ ಇದಾನೆ. ಕೈಗೂ ಕಾಲಿಗೂ ಕೆಲಸ. ಯಾವುದೊ ನೆವದಲ್ಲಿ ಬಿಡುವು ಮಾಡಿಕೊಂಡು ಐದು ನಿಮಿಷ ಇಲ್ಲಿ ಹಾಲ್ ಗೆ ಬಂದು ಮಗಳು ಅಳಿಯನನ್ನು ಕಣ್ಣು ತುಂಬಿಕೊಳ್ಳತೊಡಗುತ್ತಾನೆ. ಮತ್ತೆ ಯಾರದೊ ಕರೆ. ಏನೊ ಕೆಲಸ.
ಇಲ್ಲೇನು ಮಾಡ್ತಿದೀರಿ. ಅಲ್ಲಿ ಗಿಫ್ಟ್ ಕಡಿಮೆ ಬಂದಿವೆಯಂತೆ ಹೋಗ್ರಿ ಅಂತಾಳೆ.. ಹೆಂಡತಿ.
ಗಾಬರಿ ಬಿದ್ದು ಗಡಿಬಿಡಿಯಲ್ಲಿ ಹೊರಟು ಹೋಗುತ್ತಾನೆ.
ಎಷ್ಟೊ ಹೊತ್ತಿಗೆ, ಪೋಟೊಗ್ರಾಫರ್ ‘ಹುಡುಗಿಯ ತಂದೆ ಕರೀರಿ.. ಪೋಟೊ ತೆಗೆಯಬೇಕು’ ಅನ್ನುತ್ತಾನೆ. ‘ಎಲ್ಲಿ ಹುಡುಗಿ ತಂದೆ..?’ ಎಲ್ಲರೂ ಹುಡುಕಾಡುತ್ತಾರೆ.
ಅವನು ರಸ್ತೆಗೆ ಬಿದ್ದಿದ್ದಾನೆ. ಈ ಊಟದ ಪಂಕ್ತಿ ಮುಗಿಯುವುದರೊಳಗೆ ಕಡಿಮೆಯಾಗಿರುವ ಗಿಫ್ಟ್ ಗಳನ್ನು ತರಬೇಕು. ಅವುಗಳನ್ನು ಆರಿಸುತ್ತಾ ಒಂದು ಅಂಗಡಿಯ ಮುಂದೆ ನಿಂತಿದ್ದಾನೆ.
**
ಗಂಡಸರಿಗೆ ಯಾವುದೂ ಪೂರ್ತಿ ದಕ್ಕುವುದಿಲ್ಲ..
| ಮುಂದಿನ ಸಂಚಿಕೆಯಲ್ಲಿ ।






0 Comments