ಸೊಳ್ಳೆ ಬೆಡ್‌ ಶೀಟಿಗೆ ಖಂಡಿತಾ ಕಚ್ಚುವುದಿಲ್ಲ..!!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟ ಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಆತ ತನ್ನ ಅಂಗಡಿಯ ಕಪಾಟುಗಳಲ್ಲಿ ನೀಟಾಗಿ ಜೋಡಿಸಿದ್ದ ಒಂದೊಂದೇ ಬ್ಲ್ಯಾಂಕೆಟ್ಟುಗಳನ್ನು ಹೊರತೆಗೆದ. ʻನೋಡಿ ಮೇಡಂ, ನಿಮ್ಗೊಂದು ಸ್ಪೆಷಲ್‌ ಐಟಂ ತೋರಿಸ್ತೇನೆ, ಸ್ವಲ್ಪ ಅಮೂಲ್ಯವಾದದ್ದು. ಇದೊಂದು ಆಸ್ತಿಯೇ ಬಿಡಿ, ಇಲ್ಲಿ ಬರುವವರು ಯಾರೂ ಇದನ್ನು ಖರೀದಿಸದೆ ವಾಪಸ್ಸು ಹೋಗೋದೇ ಇಲ್ಲʼ ಎಂದು ಶುರು ಮಾಡಿದ.

ಬಾನೇ ತೂತಾಗಿ ಬೀಳುವ ಇಂಥ ಮಳೆಯನ್ನು ನಾನು ಮಲೆನಾಡಿನಲ್ಲೂ ನೋಡಿರಲಿಲ್ಲ. ರಸ್ತೆಯೇ ಕಾಣದೆ, ಸೀಟಿನ ತುದಿಯಲ್ಲಿ ಉಸಿರು ಬಿಗಿ ಹಿಡಿದು ಕೂತ ಡ್ರೈವ್‌ ಆಗಿತ್ತದು. ಹೇಳಿಕೇಳಿ ಉತ್ತರಾಖಂಡ. ಭೂಕುಸಿತವೆಂಬುದು ಇಲ್ಲಿನ ಮಳೆಗಾಲದ ನಿತ್ಯದ ಜಂಜಾಟ. ಅಂಥ ಸಮಯದಲ್ಲಿ ಹಿಂದು ಮುಂದು ಯೋಚಿಸದೆ, ಇನ್ನೂ ಮೂರು ತುಂಬದ ಮಗನನ್ನು ಕಟ್ಟಿಕೊಂಡು ಬಂದು ಬಿಟ್ಟಿದ್ದೆವು. ಆಗಲೇ ಊರಿನಿಂದ ಫೋನಿನಲ್ಲಿ ಉಗಿಸಿಕೊಂಡಾಗಿತ್ತು. 

ʻಉತ್ತರಾಖಂಡದಲ್ಲಿ ಮೇಘಸ್ಪೋಟ ಅಂತ ಟಿವಿಯಲ್ಲಿ ಬರ್ತಿದೆ, ನೀವು ಅಂಥಾ ಮಳೆಯಲ್ಲಿ ಅಲ್ಲಿಗೆ ಆ ಮಗುವನ್ನು ಕಟ್ಟಿಕೊಂಡು ಹೋಗಿದ್ದೀರಲ್ಲಾ… ಬುದ್ಧಿ ಇದೆಯಾʼ ಅಂತ. ತಪ್ಪು ಮಾಡಿಬಿಟ್ಟೆವಾ ಅಂತ ಒಳಗಿಂದ ಪುಕುಪುಕುವಾದರೂ, ʻನಾವು ಬಂದಿದ್ದು ನೈನಿತಾಲ್‌, ಮೇಘಸ್ಫೋಟವಾಗಿರುವುದು ಅಲ್ಮೋರಾ ಸುತ್ತಮುತ್ತ. ಇಲ್ಲಿ ಸ್ವಲ್ಪ ಮಳೆ ಇದೆ ಅಷ್ಟೆ, ಡೋಂಟ್‌ ವರೀʼ ಎಂದಿದ್ದೆವು. ಆದರೆ, ಮಳೆಯ ಆಟ ಭರ್ಜರಿಯಾಗಿಯೇ ಇತ್ತು.

ಅಂಥಾ ಮಳೆಯಲ್ಲಿ ಕಾರು ಸೈಡಿಗೆ ಹಾಕಿ ಅಲ್ಲೇ ಪಕ್ಕದ ಅಂಗಡಿಯಲ್ಲಿ ಬಿಸಿಬಿಸಿ ಚಹಾ ಕುಡಿದು ಮಳೆ ನಿಲ್ಲುವವರೆಗೆ ಪಕ್ಕದಲ್ಲಿದ್ದ ಅಂಗಡಿಯೊಳಕ್ಕೆ ನುಗ್ಗಿದ್ದೆವು.

ʻಉತ್ತರಾಖಂಡ… ಹ್ಯಾಂಡಿಕ್ರ್ಯಾಫ್ಟ್‌ ಕೋ ಆಪರೇಟಿವ್‌ ಸೊಸೈಟಿʼ ಅಂತೇನೋ ಬೋರ್ಡಿದ್ದ ಬಹಳ ಆಕರ್ಷಕ ಅಂಗಡಿಯಾಗಿತ್ತದು ಅಂತ ನೆನಪು. ಏನಿದೆ ನೋಡುವ ಅಂತ ಒಳಹೊಕ್ಕವರನ್ನ ಆತ ಗಬಕ್ಕನೆ ಹಿಡಿದುಬಿಟ್ಟಿದ್ದ. ಒಂದಾದ ಮೇಲೊಂದು ಅದ್ಭುತವಾಗಿ ವಿವರಣೆ ಸಾಗಿತ್ತು. ನನಗೂ ಕುತೂಹಲವೇ. 

ಫೋಟೋದಲ್ಲಿರುವುದು ನನ್ನ ಕಲ್ಪನೆಯ ಚಿಂಗು. ಆದರೆ ಇದು ಹಿಮಾಲಯ ತಪ್ಪಲಿನ ಹಳ್ಳಿಗಳಲ್ಲಿರುವ ಸಾಮಾನ್ಯ ಆಡು!

ಅದು ಇದು ತೋರಿಸಿ ಕೊನೆಗೆ, ʻಮೇಡಂ, ಇದೊಂದು ನೋಡಿ ಬಿಡಿ, ಇದು ಬಹಳ ಅಪರೂಪದ ಚಿಂಗು ಎಂಬ ಹಿಮಾಲಯದ ಪ್ರಾಣಿಯ ಕೂದಲಿನಿಂದ ಮಾಡಿದ್ದು. ದೆಹಲಿಯ ಚಳಿಗೆ ಇದೊಂದು ಇದ್ದರೆ ಸಾಕು ನೋಡಿ, ನಿಮಗೆ ಬೇರೇನೂ ಬೇಡ. ಲೈಟ್‌ ವೈಟ್‌, ಈಸೀಲೀ ವಾಷೆಬಲ್.‌ ಮೆಷಿನ್‌ ವಾಷ್ ಮಾಡಿ ಏನೂ ತೊಂದ್ರೆ ಇಲ್ಲ. ಇದು ಇಲ್ಲಿಯ ಸ್ಪೆಷಲ್‌ ಪೀಸು. ಎರಡು ವರ್ಷ ಗ್ಯಾರೆಂಟಿ ಕೊಡುವೆ, ಯಾವುದೇ ಸ್ಥಿತೀಲಿದ್ರೂ ವಾಪಸ್ಸು ಕೊಟ್ಟುಬಿಡಿ, ೭೫% ಹಣ ವಾಪಸ್‌ʼ ಎಂದ. 

ಅರೆ, ಇದೇನಿದು ಹಿಂಗೆಲ್ಲ ಅಂತ ನಾ ಯೋಚಿಸುವ ಮೊದಲೇ, ʻಇನ್ನೊಂದು ವಿಷಯ ಗೊತ್ತಾ ಮೇಡಂ, ಇದು ಯೂಸ್‌ ಮಾಡಿದಷ್ಟೂ ನಮ್ಮ ದೇಹದ ಉಷ್ಣತೆಯನ್ನೂ ಹೀರಿಕೊಂಡು ಇನ್ನೂ ಪಕ್ವವಾಗುತ್ತೆ. ಸೋ, ಹಳೆಯದಾದಷ್ಟೂ ಬೆಚ್ಚಗೆ ಜಾಸ್ತಿʼ ಎಂದುಬಿಟ್ಟ.

ಚಂದವೇನೋ ಇತ್ತು. ಆದರೆ ಮೂರು ನಾಮ ಗ್ಯಾರೆಂಟಿಯಾ ಅಂತ ತಲೆಯಲ್ಲಿ ಯೋಚನೆ ಬರುವಾಗಲೇ, ಅದನ್ನೂ ಓದಿಕೊಂಡವನಂತೆ, ʻಆ ಹತ್ರುಪಾಯಿಗೆರಡು ಬನ್ನಿ ಬನ್ನಿ ಎಂದು ಕೂಗಿ ಕೂಗಿ ಮಾರಾಟ ಮಾಡುವ ರಸ್ತೆಬದಿ ವ್ಯಾಪಾರಿಗಳಷ್ಟೇ ಸರಾಗವಾಗಿ, ʻಬರೀ ೬೦೦೦ ರೂಪಾಯಿ ಮೇಡಂʼ ಎಂದ.

ʻಅಷ್ಟೊಂದಾ!ʼ ಎಂದು ಕಣ್ಣರಳಿಸಲೂ ಪುರುಸೊತ್ತು ಕೊಡದೆ ಮತ್ತೆ ಮುಂದುವರಿಸಿ, ʻಇದು ಕೋಂಬೋ ಆಫರ್‌ ಮೇಡಂ. ನೀವು ಇದನ್ನು ತೆಗೊಂಡ್ರೆ, ಅದರ ಜೊತೆ, ಒಂದು ಕಾರ್ಪೆಟ್ಟು, ಎರಡು ಡೋರ್‌ ಮ್ಯಾಟು, ಎರಡು ಟವಲ್ಲು ಎಲ್ಲ ಫ್ರೀʼ ಎಂದು ಮುಗುಳ್ನಕ್ಕ.

ʻಬೇಡಪ್ಪಾ ಬೇಡ ನಿಮ್ಮ ಸಾವಾಸʼ ಅಂತ ಕೈಮುಗಿದು ಹೊರಬರಬೇಕು ಅಂದರೆ, ನಮ್ಮ ಹಿಂದೆಮುಂದೆ ಸುತ್ತಿ ಮತ್ತಿನ್ನೆರಡು ಐಟಮ್ಮು ತೋರಿಸಿದ. ʻನೀವು ಹಂಗಾರೆ ಇದು ನೋಡಿ ಮೇಡಂ. ಇದು ಬರೇ ೮೦೦ ರೂಪಾಯಿ. ನಿಮ್ಗೆ ಅಂತಾನೇ ಡಿಸ್ಕೌಂಟು ಮಾಡಿ ೬೫೦ ಮಾಡಿಕೊಡುತ್ತೇನೆʼ ಎಂದ. 

ʻಇವ್ರಿಗೆಲ್ಲ ಮೊದಲೇ ೬೫೦ ಅನ್ನಕ್ಕೆ ಏನು? ನಿಮ್ಗೆ ಅಂತಲೇ… ಅಂತ ಯಾಕಪ್ಪಾ ಶುರುಮಾಡಬೇಕು ಮಾತನ್ನ!ʼ ಅಂತ ನಾ ಮಹೇಶನೆಡೆಗೆ ತಿರುಗಿ ಹೇಳುವಾಗ, ನಮ್ಮ ಮುಖಾರವಿಂದದಲ್ಲಿ ಕಂಡ ಭಾವಗಳನ್ನು ಅಳೆದು ತೂಗಿ, ಎಲ್ಲಿ ಯಾರನ್ನ ಯಾವಾಗ ಹೆಂಗೆ ಹಿಡೀಬೇಕು ಎಂಬುದರಲ್ಲಿ ಪಿಎಚ್ ಡಿ ಮಾಡಿರುವವನಂತೆ, ದರಬರನೆ ಸಡಗರದಿಂದ ಒಂದಿಷ್ಟು ಬೆಡ್‌ ಶೀಟನ್ನು ಎಳೆದು ಹಾಕಿದ. 

ʻಏನ್‌ ಗೊತ್ತಾ ಮೇಡಂ, ಇದಿದ್ರೆ ಸಾಕು ನೋಡಿ, ನಿಮ್ಗೆ ಸೊಳ್ಳೇನೇ ಕಚ್ಚಲ್ಲ. ಇಲ್ಲಿ ನೋಡಿ ಎಂಥಾ ವೈಬ್ರೆಂಟು ಪ್ರಿಂಟು! ಬೆಡ್ರೂಂ ಸಕತ್ತಾಗಿ ಕಾಣುತ್ತೆʼ ಅಂದ. ನಾನು ಫುಲ್‌ ಶಾಕು! ಪುಣ್ಯಕ್ಕೆ ತಲೆತಿರುಗಿ ಬೀಳಲಿಲ್ಲ.

ʻಸೊಳ್ಳೆ ಕಚ್ಚದ ಬೆಡ್‌ ಶೀಟ್‌!ʼ ಆಹಾ… ಈ ಪ್ರಪಂಚದಲ್ಲಿ ಮನುಷ್ಯರು ಏನೆಲ್ಲ ಅನ್ವೇಷಣೆ ಮಾಡಿ ಬಿಡುತ್ತಾರಪ್ಪಾ ಅಂತ ನಗುತ್ತಾ, ʻಅದೆಂಗೆ ಇದರ ಹತ್ರ ಸೊಳ್ಳೆ ಬರಲ್ಲ?ʼ ಎಂದು ಕೇಳಿದೆ. ʻಇದು ನೋಡಿ ಮೇಡಂ, ಇಲ್ಲಿನ ಕಾಡುಗಳ ಒಂದು ಗಿಡದ ವಿಶೇಷ ಎಲೆಯ ರಸವನ್ನು ಈ ಬಟ್ಟೆಗೆ ಬಣ್ಣ ಹಾಕುವ ಸಂದರ್ಭ ಬಳಸ್ತಾರೆ. ಅದರ ವಾಸನೆಗೆ ಸೊಳ್ಳೆ ಬರಲ್ಲ. ಎಲ್ಲ ಫುಲ್ಲು ನ್ಯಾಚುರಲ್‌ ಕಲರ್‌ ನೋಡಿ ಮೇಡಂʼ ಎನ್ನುತ್ತಾ ನನ್ನ ಕಿವಿಯಲ್ಲಿ ದಾಸವಾಳ ಇಡಲು ಬಂದ. 

ಅದೆಲ್ಲ ಇರ್ಲಿ, ತೊಳೆದರೂ ಹೋಗದ ಆ ವಾಸನೆಯ ಜೊತೆ ಮಲಗಕ್ಕೆ ಸಾಧ್ಯ ತಾನೇ ಎಂದು ಬಟ್ಟೆಯನ್ನು ಮೂಸಿ ನೋಡಿದೆ. ಹೊಸ ಬಟ್ಟೆಯ ಪರಿಮಳವೇ ಇತ್ತು. ಆ ವಾಸನೆ ನಮಗೆ ಗೊತ್ತಾಗದಿದ್ದರೂ ಸೊಳ್ಳೆಗೆ ಗೊತ್ತಾಗುತ್ತದೆ ಬಿಡಿʼ ಎಂದ. ಇವತ್ತು ಹೆಂಗೂ ಇವನಿಂದ ಬಿಡುಗಡೆಯಿಲ್ಲ ಅಂತ ಪಕ್ಕಾಯಿತು. 

ʻಸರಿ ಪಾಪ. ಇದೊಂದು ಬೆಡ್‌ ಶೀಟು ತೆಗೊಳ್ಳೋಣ, ಸೊಳ್ಳೆ ಓಡಿಸದಿದ್ರೂ ಯೂಸ್‌ ಅಂತೂ ಆಗತ್ತೆ ಹೆಂಗಿದ್ರೂʼ ಅಂತ ನಮಗೆ ನಾವೇ ಸಮಾಧಾನ ಮಾಡಿಕೊಂಡು ಇದನ್ನ ಬಿಲ್‌ ಮಾಡಿ ಅಂತ ಹೇಳಿದೆ. ಬಿಲ್‌ ಮಾಡಿಸುವಾಗಲೂ, ʻಇದು ಹಾಟ್‌ ಕೇಕ್‌ ಮೇಡಂ, ನೀವು ತೆಗೊಂಡದ್ದು ಭಾರೀ ಚೆಂದದ ಪೀಸು ನೋಡಿ! ಸೊಳ್ಳೆ ಓಡದಿದ್ರೆ ಹೇಳಿ, ಇದನ್ನ ವಾಪಾಸ್‌ ಕೊಟ್ಬಿಡಿʼ ಅಂತಲೂ ಮಾತು ಸೇರಿಸಿ ಕಾರ್ಡನ್ನೂ ಕೊಟ್ಟ. ಆಯ್ತಪ್ಪ ಅನ್ನುತ್ತಾ ಹೊರಟೆವು.

ʻಅದೇನು ಹೇಳಿದ ಅವನು? ಯಾವ ಪ್ರಾಣಿ ಅದು?ʼ ನಾನು ಮಹೇಶನಿಗೆ ಕೇಳಿದೆ. ʻಚಿಂಗು ಅಂತೆ ಚಿಂಗುʼ ಅಂತ ನಕ್ಕ. ಮಜಾ ಇದ್ಯಲ್ಲಾ ಹೆಸರು ಅಂತ ತಮಾಷೆ ಮಾಡಿಕೊಂಡು ಬಂದು, ʻಪರವಾಗಿಲ್ಲ, ಈಗ ಹೊರಡಬಹುದುʼ ಎನ್ನುವಷ್ಟು ಬಿಟ್ಟಿದ್ದ ಮಳೆಯಲ್ಲಿ ಕಾರು ಹತ್ತಿದರೂ, ಈ ಕ್ಯೂಟಾದ ಹೆಸರು ಚಿಂಗು ಮಾತ್ರ ತಲೆಯಲ್ಲಿ ಹಾಗೇ ಸುತ್ತುತ್ತಿತ್ತು ನೈನಿತಾಲಿನ ಆ ಹೇರ್ ಪಿನ್ನು ಬೆಂಡುಗಳಂತೆ.

ಇದೆಲ್ಲ ಆಗಿ ಕೆಲ ತಿಂಗಳುಗಳೇ ಕಳೆದಿದ್ದವು. ನಾನೂ ಮರೆತೂ ಬಿಟ್ಟಿದ್ದೆ. ಒಂದು ದಿನ, ಪಕ್ಕದ ಮನೆಯ ರಾಜಸ್ಥಾನಿ ಗೆಳತಿ ಚಳಿಗಾಲದ ಐಟಮ್ಮುಗಳನ್ನೆಲ್ಲ ತೆಗೆದು ರಾಶಿ ಹಾಕಿದ್ದಳು. ಹತ್ತಿರ ಬರುತ್ತಿದ್ದ ಚಳಿಗಾಲಕ್ಕೆ ತಯಾರಿಯದು. ಹಾಗೇ ಮಾತನಾಡುತ್ತಾ, ಇದು ನೋಡು ಮನಾಲಿಯಿಂದ ತೆಗೊಂಡಿದ್ದು. ʻಇದು ಯೂಸ್‌ ಮಾಡಿದಷ್ಟೂ ಇದರ ಉಷ್ಣತೆ ಜಾಸ್ತಿಯಾಗುತ್ತೆ. ಸ್ವಲ್ಪ ಸಮಯ ಬಳಸಿ ವಾಪಸ್ಸೂ ಮಾಡಬಹುದುʼ ಎಂದು ಪುಸುಕ್ಕಂತ ಕಥೆ ಬಿಟ್ಟಳು.

‌ʻಅರೆರೆ, ಇದು ಸೇಮ್ ಆತ ಬಿಟ್ಟ ಕಥೆಯಲ್ಲಾʼ ಎಂದು ನನ್ನ ಕಿವಿ ಚುರುಕಾಯಿತು. ʻಯಾವ ಪ್ರಾಣಿ ಹೇಳದು?ʼ ಅಂದೆ. ಅದೇನೋ ಮರೆತೆ ಎಂದವಳು, ʻಗಂಡನಿಗೆ ಕೇಳಿ ಹೇಳುತ್ತೇನೆ ಇರು, ರೇಟು ಜಾಸ್ತಿಯಾದರೂ ಚೆನ್ನಾಗಿದೆʼ ಅಂದಳು. 

ʻಹುಂ, ಕೇಳಿರುವೆ ಈ ಬಗ್ಗೆ, ಹೆಸರು ನೆನಪಿಸು, ನಂಗೂ ಇದರ ಹೆಸರು ಬಾಯಿಗೇ ಬರ್ತಿಲ್ಲ…ʼ ಎನ್ನುತ್ತಾ ಬಾಗಿಲು ಮುಚ್ಚಿದೆ. ಅದೇ ದಿನ ಕಾಕತಾಳೀಯವೆಂಬಂತೆ ಮಹೇಶನೂ ಆಫೀಸಿನಿಂದ ಬಂದವನೇ, ʻಏ ಅದು ಗೊತ್ತಲ್ಲ ವರ್ಷದಿಂದ ವರ್ಷಕ್ಕೆ ಉಷ್ಣತೆ ಜಾಸ್ತಿಯಾಗುವ ಬ್ಲ್ಯಾಂಕೆಟ್ಟು! ಅದು ಫುಲ್ಲು ಫೇಕು ಕಣೇ. ನಾವೂ ಆಮೇಲೆ ಅಲ್ಲೇ ಮರೆತು ಬಿಟ್ವಿ ನೋಡು, ಅವಾಗ್ಲೇ ಗೂಗಲ್ಲು ಮಾಡಿದ್ರೆ ಗೊತ್ತಾಗಿರೋದು. ಇದೊಂದು ದೊಡ್ಡ ಸ್ಕ್ಯಾಮು ಗೊತ್ತಾʼ ಅಂದ. ಹೌದಾ.. ಏನದು ಕಥೆ, ಅಂತ ಕುತೂಹಲದಿಂದ ಮಾತಿಗೆ ಕುಳಿತೆ.

ಪರ್ವತನಾಡಿನ ಕಟ್ಟುಕಥೆ

ಈ ಹಿಮಾಲಯದ ತಪ್ಪಲಿನ ಚಳಿಯೂರುಗಳೇ ಹಾಗೆ. ಒಂದು ಸೆಳೆತ. ಅಲ್ಲಿಯ ಜನರ ವೇಷಭೂಷಣ, ಜೀವನ ಕ್ರಮ, ಅಲ್ಲಿ ಸಿಗುವ ಏನೇನೋ ವಸ್ತುಗಳು, ಆಹಾರಾಭ್ಯಾಸ, ಸಣ್ಣ ಅಂಗಡಿಯ ಹೊಗೆಯೇಳುವ ನೊರೆ ನೊರೆ ಚಹಾ… ಎಲ್ಲವೂ ಕೊಡುವ ಅನೂಹ್ಯ ಆನಂದ ಬೇರೆ ಯಾವುದರಲ್ಲೂ ಸಿಕ್ಕದು. ಅಲ್ಲಿನ ಜನರ ಮುಗ್ಧತೆ ಎಷ್ಟು ರಮ್ಯವೋ, ದೂರದೂರುಗಳಿಂದ ಬರುವ ಪ್ರವಾಸಿಗರನ್ನು ಸೆಳೆದು ಹೊಟ್ಟೆ ಹೊರೆದುಕೊಳ್ಳುವ ಉದ್ಯೋಗವೂ ಹೀಗೆ ಮೋಸದ ರೂಪ ತಾಳುವುದೂ ಅಷ್ಟೇ ಸತ್ಯ. ಈ ಚಿಂಗುವಿನ ಕಥೆಯೂ ಅಂಥದ್ದೇ ಒಂದು ಮೋಸದ ಕಥೆ.

ವಾಸ್ತವದಲ್ಲಿ ಚಿಂಗು ಅನ್ನೋ ಪ್ರಾಣಿ ಇದೆಯಾ? ಅಂತ ಹುಡುಕಿಕೊಂಡು ಹೋದರೆ ಭರ್ಜರಿ ಕಲ್ಪಿತ ಕಥೆಗಳು ಸಿಕ್ಕುತ್ತವೆ. ಪರ್ವತ ಕಣಿವೆಗಳ ವ್ಯಾಪಾರಿಗಳೇ ಕಟ್ಟಿದ ಕಲ್ಪಿತ ಕಥೆಯ ಹೀರೋವೇ ಈ ಚಿಂಗು. ಮನಾಲಿ, ಶಿಮ್ಲಾ, ಕುಫ್ರಿ, ನೈನಿತಾಲ್‌ ಹೀಗೆ ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ ಮತ್ತಿತರ ಯಾವುದೇ ಪಕ್ಕಾ ಕಮರ್ಷಿಯಲ್‌ ಗಿರಿಧಾಮಗಳಿಗೆ ನೀವು ಹೋದಿರೆಂದರೆ ಈ ಅನುಭವ ಪಕ್ಕಾ. ಯಾವ ಸಿನಿಮಾದ ಕಥೆಗೂ ಕಡಿಮೆಯಿಲ್ಲದಂತೆ ಇವರು ನಿಮ್ಮನ್ನು ಕರೆಕರೆದು ಅಂಗಡಿಯಲ್ಲೇ ಕೂರಿಸಿ ಕಥೆ ಹೇಳುತ್ತಾರೆಂದರೆ ನಿಮ್ಮ ಕಣ್ಣೆದುರು ಚಿಂಗುವೇ ಪ್ರತ್ಯಕ್ಷವಾಗಿಬಿಡಬೇಕು. 

ಬೇರೆಯವರನ್ನು ನಂಬಿಸಿ ನಂಬಿಸಿ, ಸ್ವತಃ ತಾವೇ ಈ ಚಿಂಗುವನ್ನು ನಂಬಿದ ಹಾಗೆ ಬದಲಾದವರು ಈ ವ್ಯಾಪಾರಿಗಳು. ಆದರೆ, ಒಮ್ಮೆ ಈ ಚಿಂಗುವಿನ ಬಗ್ಗೆ ಗೂಗಲಿಸಿದರೆ ಸಾಕು ಚಿಂಗುವಿನ ಹೆಸರಿನಲ್ಲಿ ಮುಗ್ಧ ಪ್ರವಾಸಿಗರನ್ನು ಕೊಳ್ಳೆ ಹೊಡೆವ ವ್ಯಾಪಾರಿಗಳ ದಂಧೆಯ ಕರಾಳ ದರ್ಶನ ನಮಗಾಗುತ್ತದೆ.

ನಂಬಿಕೆ ಬರಲು ಕಾರಣವೂ ಇದೆ. ಅದು ಈ ಅಂಗಡಿಗಳ ಹೆಸರುಗಳು! ಮೇಲ್ನೋಟಕ್ಕೆ ಸರ್ಕಾರಿ, ಸಹಕಾರಿ ಹೆಸರುಗಳಂತೆ ಕಾಣುವ ಈ ಅಂಗಡಿಗಳಿಗೂ ಸರ್ಕಾರಕ್ಕೂ ಸಂಬಂಧವೇ ಇರುವುದಿಲ್ಲ. ಆದರೆ ಇವುಗಳ ಅರಿವಿಲ್ಲದೆ, ಅಥೆಂಟಿಕ್‌ ವಸ್ತುವೇ ಆಗಿರಬೇಕೆಂದು ಪ್ರವಾಸಿಗರು ಸುಲಭದಲ್ಲಿ ಮೋಸ ಹೋಗಿ ಬಿಡುತ್ತಾರೆ. ಎಷ್ಟೆಂದರೆ, ೧೦-೨೦ ಸಾವಿರ ರೂಪಾಯಿಗೆಲ್ಲ ಇಂತಹ ವಸ್ತುಗಳ ಭರ್ಜರಿ ಶಾಪಿಂಗ್‌ ಮಾಡಿಕೊಂಡು ಹೋದ ಮೇಲೆ ಮೂರು ನಾಮ ಹಾಕಿಸಿಕೊಂಡದ್ದು ಗೊತ್ತಾಗುತ್ತದೆ.

ವಿಷಯವೆಂದರೆ, ಸಾಮಾನ್ಯ ಬ್ಲ್ಯಾಂಕೆಟ್ಟೂ ಕೂಡಾ ಚಿಂಗುವಿನ ಆಕರ್ಷಕ ಕಥಾನಕದಿಂದ ಐದಾರು ಪಟ್ಟು ಹೆಚ್ಚು ಬೆಲೆಗೆ ಸುಲಭದಲ್ಲಿ ಮಾರಾಟವಾಗಿ ಬಿಡುತ್ತದೆ. ಮನಾಲಿ, ಶಿಮ್ಲಾಗಳಲ್ಲಂತೂ ಈ ಚಿಂಗು ಎಷ್ಟು ಪ್ರಸಿದ್ಧಿ ಪಡೆದಿತ್ತೆಂದರೆ, ಇದರ ವಿರುದ್ಧ ವ್ಯಾಪಕ ಹೋರಾಟವೇ ನಡೆಯಿತು.

ಚಿಂಗು ಇಲ್ಲಿ ಕೇವಲ ಒಂದು ಉದಾಹರಣೆ, ಈಗೆಲ್ಲಾ ಕಾನೂನಿನ ಭಯದಲ್ಲಿ ಈ ಚಿಂಗುವಿನ ಸದ್ದಡಗಿರುವ ಸುದ್ದಿಯಿದ್ದರೂ, ಇದೇ ಚಿಂಗು, ಸ್ಪರು ಆಗಿ ಬದಲಾದ ಮತ್ತೊಂದು ಕಥೆಯೂ ಇದೆ. ನಾಳೆ ಈ ಸ್ಪರು ಇನ್ನೊಂದಾಗಿ ಬದಲಾಗಿ ಬಿಡುತ್ತದೆ. ಒಟ್ಟಿನಲ್ಲಿ ಪ್ರವಾಸೋದ್ಯಮ ಇರುವವರೆಗೆ ಇಂತಹ ವ್ಯಾಪಾರೀ ಬುದ್ಧಿಗಳೂ ಜೀವಂತವೇ. ಆದರೆ ದುರಂತವೆಂದರೆ, ಇಂತಹ ಕಥೆಗಳಿಂದ ನಿಜವಾಗಿ ಬೆಲೆ ಕೊಡಬಹುದಾದ ಪರ್ವತ ನಾಡಿನ ಎಷ್ಟೋ ವಸ್ತುಗಳು, ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕದೆ ಸೊರಗಬೇಕಾಗುತ್ತದೆ.

ಕೊನೇ ಪಾಯಿಂಟು!

ಅಂದಹಾಗೆ ಸೊಳ್ಳೆ ಕಚ್ಚದ ಬೆಡ್ ಶೀಟು ಇನ್ನೂ ಇದೆ. ಒಳ್ಳೆ ಕ್ವಾಲಿಟಿ, ನೋ ಡೌಟು. ಅವನೂ ಹೇಳಿದ್ದು ನಿಜವೇ. ಸೊಳ್ಳೆ ಬೆಡ್‌ ಶೀಟಿಗೆ ಖಂಡಿತಾ ಕಚ್ಚುವುದಿಲ್ಲ. ನಮಗೆ ಕಚ್ಚುತ್ತದೆ ಅಷ್ಟೇ!

‍ಲೇಖಕರು ರಾಧಿಕ ವಿಟ್ಲ

August 23, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: