ವೈದೇಹಿ ಮೇಡಂ ಹೇಳಿದ್ರು ‘ಇದೆಲ್ಲಾ ನಾನು ಬರೆದಿದ್ದಲ್ಲಾ ಕಣೇ…’

ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ.

ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು.

ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ ಚಿತ್ರ ನಿರ್ದೇಶಕಿಯೂ ಆದರು.

ಒಂದು ಸುಂದರ ಕಾವ್ಯದಂತಿರುವ ‘ಅಮ್ಮಚ್ಚಿ ಎಂಬ ನೆನಪು’ ತೆರೆಯ ಮೇಲೆ ಅರಳಿದ ಕಥೆ ನಿಮ್ಮ ಮುಂದೆ..

“ನನ್ನ ಬರವಣಿಗೆಗಳೆಲ್ಲಾ ನಾನು ಬರೆದಿದ್ದಲ್ಲಾ ಕಣೇ ಅದು ನನ್ಮೂಲಕ ಬರೆಸಿದ್ದು” ಅಂತಾ ಪ್ರೀತಿಯಿಂದ ವೈದೇಹಿ ಮೇಡಂ ಹೇಳುತ್ತಿದ್ದರೆ, ಯವುದೋ ಮಾಂತ್ರಿಕ ಲೋಕವೊಂದು ಮನಸ್ಸಿನಲ್ಲಿ ತೆರೆದುಕೊಳ್ಳುತ್ತಿತ್ತು.

ಎಷ್ಟೋ ಸಮಯ ನನಗೂ ಹೀಗೇ ಅನಿಸಿದ್ದುಂಟು, ‘ಗಾಂಧಿ ಬಂದ’ ನಾಟಕವಾಗಿ, ಇಡೀ ರಂಗಭೂಮಿ ನಾಟಕವನ್ನು ಕೊಂಡಾಡುತ್ತಿರುವಾಗ ನಾಟಕ ಒಮ್ಮೆಲೇ ನನಗೇ ಅಪರಿಚಿತವಾಗಿ ತೋರುತ್ತಿತ್ತು. ಇದನ್ನು ನಾನೇ ರೂಪಾಂತರಿಸಿದ್ದಾ? ನಾನೇ ನಿರ್ದೇಶಿಸಿದ್ದಾ? ಅಂತೆಲ್ಲಾ ಬೆರಗು ಮೂಡುತ್ತಿತ್ತು.

ಹಾಗೇ ಫ್ಲ್ಯಾಷ್ ಬ್ಯಾಕ್ ಹೋದಾಗ, ಅಚಾನಕ್ಕಾಗಿ ವೇಣು ಮನೆಗೆ ಹೋದದ್ದು, ಅವರು ‘ಗಾಂಧಿ ಬಂದ’ ಓದಲು ಕೊಟ್ಟಿದ್ದು, ಅದನ್ನು ಒಂದೇ ವೇಗದಲ್ಲಿ ಓದಿ ಮುಗಿಸಿದ್ದು, ‘ರಂಗ ನಿರಂತರ’ ತಂಡದ ದೊಡ್ಡ ನಾಟಕೋತ್ಸವದಲ್ಲಿ ನಿರ್ದೇಶನ ಮಾಡಲು ರಮೇಶಣ್ಣ (ಅ.ನ.ರಮೇಶ್) ಮತ್ತು, ಕೃಷ್ಣ ರಾಯಚೂರು ಹುರಿದುಂಬಿಸಿದ್ದು, ನನ್ನ ಗಂಡ ಪ್ರಕಾಶ್ ಶೆಟ್ಟಿ ಹಾಗೂ ಇಡೀ ತಂಡ ಜೊತೆಗೆ ನಿಂತದ್ದು, ಕಾದಂಬರಿ ಬರೆದ ನಾಗವೇಣಿ ಮೇಡಂ ಒಪ್ಪಿಕೊಂಡದ್ದು, ನಮ್ಮವರೇ ಎಂದುಕೊಂಡವರಿಂದ ಬಂದ ಅನೇಕ ಅಡೆತಡೆಗಳ ನಡುವೆ ಒಂದು ತಿಂಗಳು ರಿಹರ್ಸಲ್ ಆದದ್ದು…

ಮೊದಲ ಪ್ರದರ್ಶನದಲ್ಲಿ ವೇದಿಕೆಯ ಮೇಲೆ ಕಂಗೀಲು, ಕಂಬಳ, ಭೂತಕೋಲಗಳ ಮೆರೆತ, 70ಕ್ಕೂ ಹೆಚ್ಚು ಕಲಾವಿದರ ಸಂಭ್ರಮ, ದೇಶವೆಲ್ಲಾ ಸುತ್ತಿದ್ದು, ಚಪ್ಪಾಳೆಗಳ ಮಳೆ ಸುರಿದದ್ದು, ವರ್ಷವೆರಡರಲ್ಲಿ ‘ಗಾಂಧಿ ಬಂದ’ 50ನೇ ಪ್ರದರ್ಶನದತ್ತ ಸಾಗಿದ್ದು. ಸಾಗುತ್ತಾ… ಸಾಗುತ್ತಲೇ ಒಮ್ಮೆ ನಿಂತು ಹಿಂದಿರುಗಿ ನೋಡಿದಾಗ ಇವೆಲ್ಲಾ ನಡೆದದ್ದು ಹೌದಾ?

358 ಪುಟಗಳ ಕಾದಂಬರಿ ಒಂದೂವರೆ ಗಂಟೆಗೆ ಇಳಿದದ್ದು ಹೇಗೆ? ಎಲ್ಲಾ ಒಂದು ಪವಾಡವೆ? ಇದೆಲ್ಲವನ್ನೂ ಆಗುಮಾಡಿದ ಮಾಂತ್ರಿಕ ಶಕ್ತಿ ಯಾವುದು? ಎಚ್ಚರಗೊಂಡಾಗ, ದಕ್ಕಿದ ಉತ್ತರ… ಆಸ್ತಿಕರಿಗೆ ದೈವ ಶಕ್ತಿ, ನಾಸ್ತಿಕರಿಗೆ ಪರಿಶ್ರಮ.

ನಿಜವೆಂದರೆ, ಮಾಡುವ ಕೆಲಸದಲ್ಲಿರುವ ಪ್ರಾಮಾಣಿಕತೆ, ಶ್ರದ್ದೆಯೇ ಆ ಮಾಂತ್ರಿಕ ಶಕ್ತಿ. ಅದನ್ನೇ ವೈದೇಹಿ ಮೇಡಂ ಹೇಳಿದ್ದು, ‘ನನ್ಮೂಲಕ’ ಅಂತ. ಹೌದು ಯಾವುದೇ ಒಂದು ಒಳ್ಳೆಯ ಕೆಲಸ ನಾವು ಮಾಡುವುದಲ್ಲ ಅದು ಆಗಿ ಬಿಡುತ್ತದೆ.

ಹಾಗೇ ಆಗಿ ಬಿಟ್ಟವುಗಳ ಸಾಲಿಗೆ ಸೇರಿದ್ದು ‘ಅಕ್ಕು’ ನಾಟಕ ಮತ್ತು ‘ಅಮ್ಮಚ್ಚಿ’ ಸಿನೆಮಾ… ಈ ಆಗಿ ಬಿಟ್ಟ ಘಳಿಗೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಖುಷಿ ನನ್ನದು ಇದನ್ನು ಆಗು ಮಾಡುತ್ತಿರುವ ಶಕ್ತಿಗಳು ಅವಧಿ, ಮೋಹನ್ ಸರ್ ಮತ್ತು ನೀವು…

“ಮೊದಲ ಸಲ”

ಯಾವುದೇ ಒಂದು ಪ್ರಯತ್ನವಿರಲಿ ‘ಮೊದಲ ಬಾರಿಗೆ…’ ಅಂದಾಗ ಪುಟ್ಟ ಮಕ್ಕಳ ಪದ್ಯ ವಾಚನದ ಹಾಗೆ. ಹಿಂದೆ ಮುಂದೆಗಳ ಹಂಗಿಲ್ಲದೆ, ನೋಡುತ್ತಿರುವವರು ಯಾರು? ಹೊಗಳುವರೋ? ತೆಗಳುವರೋ? ಆಕಳಿಸುವರೋ? ಅಭಿನಂದಿಸುವರೋ? ಎಂಬ ಯಾವ ಆಲೋಚನೆಗಳೂ ನುಸುಳದೆ ಅನಿಸಿದ್ದನ್ನು, ಅನುಭವಿಸಿದ್ದನ್ನು, ನಿಷ್ಠೆಯಿಂದ ಪ್ರದರ್ಶಿಸಿರುತ್ತೇವೆ.

ಹಾಗೆ ಆದದ್ದು “ಗಾಂಧಿ ಬಂದ” ನಾಟಕ… ಆದರೆ, ಮೊದಲ ಕೃತಿಗೇ ಅಪಾರವಾದ ಮೆಚ್ಚುಗೆ, ಮನ್ನಣೆಗಳು ಬಂದಾಗ, ಎರಡನೆಯ ಕೃತಿಗೆ ನೋಡುಗರ ಕುತೂಹಲ ಹೆಚ್ಚಾಗಿ ಜವಾಬ್ದಾರಿಯನ್ನು ಇಮ್ಮಡಿಗೊಳಿಸಿರುತ್ತದೆ. ಆ ಸಂಜೆ ಆದದ್ದು ಹಾಗೇ…

ನಮ್ಮ ತಂಡದ ಎರಡನೆಯ ನಾಟಕ ಪ್ರಕಾಶ್ ಶೆಟ್ಟಿ ನಿರ್ದೇಶನದ “ಅನಭಿಜ್ಞ ಶಾಕುಂತಲ”ದ ಮೊದಲ ಪ್ರದರ್ಶನದ ಯಶಸ್ಸಿನಲ್ಲಿ ಬೀಗುತ್ತಾ ವೇದಿಕೆಯಲ್ಲಿದ್ದಾಗ, ಸೀದಾ ಬಂದು ಕೈ ಕುಲುಕಿದ ಸುರೇಶ್ ಆನಗಳ್ಳಿಯವರು ‘ಗಾಂಧಿ ಬಂದ’ ಸೆಂಚುರಿ, ‘ಶಾಕುಂತಲ’ ಡಬಲ್ ಸೆಂಚುರಿ, ಮುಂದೆ ಯಾವುದು? ಅಂತ ಪ್ರೀತಿಯಿಂದಲೇ ಹೇಳಿದರು.

ಆನಗಳ್ಳಿ ಸರ್ ಅಂತ ನಿರ್ದೇಶಕರಿಂದ ಇಂತಹ ಪ್ರಶಂಸೆಯಾ? ನಂಬಲಾಗದ ಕ್ಷಣವದು, ಖುಷಿಯ ಉತ್ತುಂಗದಲ್ಲಿದ್ದರೂ ಆನಗಳ್ಳಿ ಸರ್, ಆ ಮಾತುಗಳ ಜೊತಗೆ ಬಹು ದೊಡ್ಡ ಹುಳವೊಂದನ್ನ ತಲೆಯೊಳಗೆ ಬಿಟ್ಟು ಹೋಗಿದ್ದಾರೆ ಎಂಬ ಅರಿವಾಗಿದ್ದು ತಡವಾಗಿ.

ಮುಂದಿನ ನಾಟಕ ಯಾವುದು ಅಂತಾ ಯೋಚಿಸುವಾಗೆಲ್ಲಾ ಡಬಲ್, ತ್ರಿಬಲ್ ಸೆಂಚುರಿಗಳು ನಾಟಕದೊಟ್ಟಿಗೇ ತಲೆಗೆ ಬಂದು ಬಿಡುತ್ತಿದ್ದವು… ಈ ಆಲೋಚನೆಗಳ ತಿಕ್ಕಾಟದಲ್ಲಿ ಹುಟ್ಟಿ ಬಂದ ‘ಅಕ್ಕು’ ‘ಅಮ್ಮಚ್ಚಿ’ ಯಾಗಿ ಬೆಳೆದದ್ದು…  ಮುಂದಿನ ಸಂಚಿಕೆಗಳಲ್ಲಿ…

‍ಲೇಖಕರು ಚಂಪಾ ಶೆಟ್ಟಿ

August 23, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಗೀತಾ ಎನ್ ಸ್ವಾಮಿ

    ಚಂಪಾ ಮೇಡಂ ತುಂಬಾ ಚೆನ್ನಾಗಿ ನಿಮ್ಮ ಪರಿಶ್ರಮದ ಹಂತಗಳನ್ನು ವಿವರಿಸಿದ್ದೀರಿ… ಇಂಥದ್ದನ್ನು ಇಲ್ಲಿ ಹೇಳಲ್ಪಡಲು ಕಾರಣವಾದ ಮೋಹನ್ ಸರ್ ಗೆ ಧನ್ಯವಾದಗಳು….ಅವರ ಪ್ರೇರಣೆಯೇ ನನಗೂ ಕೂಡ ಒಂದಿಷ್ಟು ಬರೆಯಲು ಸಾಧ್ಯವಾಗ್ತಾ ಇದೆ…
    ಮೋಹನ್ ಸರ್ ನಿಮ್ಮ ಉತ್ತೇಜನ ಹಾಗೂ ಅವಕಾಶಕ್ಕೆ ಧನ್ಯವಾದಗಳು…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: