’ಮುನ್ನೂರು’ ನುಡಿ : ಹೌದು, ವಿ ಎನ್ ಸುಬ್ಬರಾವ್ ಇನ್ನಿಲ್ಲ

 

– ಮಹಿಪಾಲ ರೆಡ್ದಿ ಮುನ್ನೂರು

ಹೌದು. ವಿ.ಎನ್.ಸುಬ್ಬಾರಾವ್ ಇನ್ನಿಲ್ಲ. ಹಾಗಂತ ನಂಬೋದಕ್ಕೆ ಆಗುತ್ತಿಲ್ಲ. ಆಳೆತ್ತರದ ಅಜಾನುಬಾಹು ವ್ಯಕ್ತಿ ಮತ್ತು ವ್ಯಕ್ತಿತ್ವ. ಯಾರ ಜೊತೆ ಮಾತಾಡಿದರೂ ತೂಕ ಇರುತ್ತಿತ್ತು. ಯಂಗ್ ಜರ್ನಲಿಸ್ಟ್ ಗಳ ಬಗ್ಗೆ ಅಪಾರ ಪ್ರೀತಿಯಿತ್ತು. ಅಂತಹ ಸುಬ್ಬಾರಾವ್ ಹೋಗಿಬಿಟ್ಟರು ಎಂಬ ಸುದ್ದಿ, ನನ್ನನ್ನು ಒಂದು ಕ್ಷಣ ಶೂನ್ಯದೆಡೆಗೆ ಕರೆದೊಯ್ದಿತ್ತು.

ಅವರ ಜೊತೆ, ಕನಿಷ್ಟ ಒಂದೂವರೆ ತಾಸು ಕಳೆದಿದ್ದ ಸಂದರ್ಭದ ಮೆಲುಕುಗಳ ಮೆರವಣಿಗೆ ಸರಾಗವಾಗಿ ಹರಿದಾಡಿದವು. ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿ ಮೊದಲ ಬಾರಿಗೆ ಕಲಬುಗರ್ಿಗೆ ಬಂದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿ ಮಾತನಾಡಿಸಿದ್ದೆ. ಆಗಲೂ ನಾನು ಬರೆಯುತ್ತಿದ್ದ ಅಂಕಣವೊಂದಕ್ಕೆ ಸಂದರ್ಶನ ಮಾಡಿದ್ದೆ. ಅವರಾಡಿದ ಮಾತುಗಳು, ವೃತ್ತಿ ಪ್ರೀತಿ, ಪತ್ರಿಕೋದ್ಯಮವನ್ನು ಅಪ್ಪಿಕೊಂಡ ರೀತಿ, ಅದಕ್ಕಾಗಿ ಕಷ್ಟಪಟ್ಟಿದ್ದು, ಹಠ ತೊಟ್ಟೂ ಪತ್ರಕರ್ತ ಆಗಿದ್ದು, ಎಂಜಿನಿಯರ್ ಆಗಬೇಕು ಎನ್ನುವ ಅಮ್ಮನ ಕನಸಿಗೆ ಕಲ್ಲು ಹಾಕಿದ್ದು, ಯಾವ ಪತ್ರಿಕೆಯಲ್ಲೂ ಹೆಚ್ಚು ವರ್ಷ ನೆಲೆ ನಿಲ್ಲದೆ ಅಡ್ಡಾಡಿದ್ದು, ಮೊದ ಮೊದಲು ಲೇಖನಗಳನ್ನು ಬರೆಯುತ್ತ ಬರೆಯುತ್ತ ಯಾವ ಪತ್ರಿಕಗಳಿಗೂ ಕಳಿಸದೇ ಕಿಸೆಯಲ್ಲಿಯೇ ಇಟ್ಟುಕೊಂಡಿದ್ದು, ಆಮೇಲೆ ಬರೆಯುವ ಹುಚ್ಚು ಹೆಚ್ಚಿದಾಗ, ಬರೆದ ಲೇಖನಗಳನ್ನು ಕಳಿಸಿದ ತಕ್ಷಣವೇ ಪ್ರಕಟಿಸಿದ್ದು, ಅದನ್ನೋಡಿ ಖುಷಿಗೊಂಡಿದ್ದು, ಆ ಪತ್ರಿಕೆ ಹಿಡಿದು ಎಲ್ಲಾ ಸ್ನೇಹಿತರಿಗೆ ತೋರಿಸಿದ್ದು.. ಎಲ್ಲವನ್ನೂ ಎಳೆ ಎಳೆಯಾಗಿ ಮಾತನಾಡಿದ್ದು ನನಗಿನ್ನೂ ನೆನಪಿದೆ.

ಪತ್ರಿಕೋದ್ಯಮದ ಇತಿಹಾಸದಲ್ಲಿ ವಿ.ಎನ್.ಸುಬ್ಬಾರಾವ್ ಅವರದು ವಿಶಿಷ್ಟ ಹೆಸರು. `ಮೌಲ್ಯಾಧಾರಿತ ಮಾಧ್ಯಮ’ವನ್ನು ಇಡೀ ಬದುಕಿನಾದ್ಯಂತ ಕಾಪಾಡಿಕೊಂಡು ಬಂದಿದ್ದ ಹಿರಿಯ ಜೀವಿ. ಪತ್ರಿಕಾ ಕ್ಷೇತ್ರದ ಬಗ್ಗೆ ಮಾತಾನಾಡುವಾಗ `ಮೌಲ್ಯಾಧಾರಿತ’ ಅನ್ನೋದು ಯಾಕೆ ಪ್ರಸ್ತಾಪ ಆಗಬೇಕು ಎಂಬ ಅನೇಕರ ಅನುಮಾನಗಳ ನಡುವೆ, ಸುಬ್ಬಾರಾವ್ ಹೀಗೂ ಬದುಕಬಹುದು ಎಂದು ತೋರಿಸಿಕೊಟ್ಟರು. ಯಾವುದೇ ಆಮಿಷಗಳಿಗೆ ಒಳಗಾಗದೇ, ದುಡ್ಡೇ ಎಲ್ಲವೂ ಅಲ್ಲ, ಅದರಾಚೆಗೂ ಇರುವ ವೃತ್ತಿ ಪ್ರೀತಿಗೆ ಮೌಲ್ಯ ತಂದುಕೊಟ್ಟರು.

ಮೊನ್ನೆ ಸುಬ್ಬಾರಾವ್ ನಿಧನದ ಮರುದಿನ ಬೆಳಿಗ್ಗೆ, ಕಾರ್ಯನಿರತ ಪತ್ರಕರ್ತರ ಸಂಘದವರು ಆಯೋಜಿಸಿದ್ದ ಸಂತಾಪ ಸೂಚಕ ಸಭೆಯಲ್ಲಿ ಹಿರಿಯ ಪತ್ರಕರ್ತರು ಮತ್ತು ಸುಬ್ಬಾರಾವ್ ಅವರ ಜೊತೆ ಕೆಲ ವರ್ಷ ಕೆಲಸ ಮಾಡಿರುವ ಶ್ರೀನಿವಾಸ ಸಿರನೂರಕರ್ ಅವರು ಮಾತನಾಡುವಾಗ, ಸುಬ್ಬಾರಾವ್ ಅವರ ಪತ್ರಿಕಾ ವೃತ್ತಿಯ ಪ್ರೀತಿ ಮತ್ತು ಅವರು ಬದುಕಿನುದ್ದಕ್ಕೂ ತಳೆದಿದ್ದ ಮೌಲ್ಯಾಧಾರಿತ ನಿಲುವು ಕುರಿತು ಅತ್ಯಂತ ಸೂಕ್ಷ್ಮವಾಗಿ ಬಿಚ್ಚಿಟ್ಟರು. ಬಿಚ್ಚಿಟ್ಟದ್ದು ಅಷ್ಟೇ ಅಲ್ಲ, ಸೂಕ್ಷ್ಮವಾಗಿ ಪತ್ರಿಕೋದ್ಯಮದ ದಾರಿ ಎತ್ತ ಸಾಗುತ್ತಿದೆ ಎಂಬುದರ ಕಾಳಜಿಯನ್ನು ಪ್ರಸ್ತಾಪ ಮಾಡಿದರು. ಮೌಲ್ಯಾಧಾರಿತ ಪತ್ರಿಕೋದ್ಯಮದ ವಿರಳರಲ್ಲಿ ವಿರಳರಾಗಿರುವ ಮತ್ತು ಕೊನೆಯ ಕೊಂಡಿ ಎನ್ನಬಹುದಾದ ಸುಬ್ಬಾರಾವ್ ಎಂದು ಸಿರನೂರಕರ್ ಮಾತನಾಡಿದರು.

ನಂತರ ನಾನು ಮಾತನಾಡಿದೆ. ಸುಬ್ಬಾರಾವ್ ಅವರ ಜೊತೆ ನಡೆಸಿದ ಸಂದರ್ಶನದ ಪೂರ್ಣ ಪಾಠವನ್ನು ಒಪ್ಪಿಸಿದೆ. ಒಂಚೂರು ಡಿಫರೆಂಟ್ ಆಗಿತ್ತು ಎಂಬುದು ಅನೇಕರ ಅಂಬೋಣ. ಆ ಪೂರ್ಣ ಪಾಠವನ್ನು ವಿ.ಎನ್.ಸುಬ್ಬಾರಾವ್ ಅವರ ಮಾತಿನಲ್ಲೇ ಕೇಳಿದರೆ ಹೇಗೆ? ಅವರ ಮಾತಿನ ಧಾಟಿಯಲ್ಲೇ ಲೇಖನ ಬರೆದಿದ್ದರಿಂದ ಅದನ್ನು ಯಥಾವತ್ತಾಗಿ ಓದಿದೆ. ಕೇಳಿಸಿಕೊಂಡ ಅನೇಕರಿಗೆ ಸುಬ್ಬಾರಾವ್ ಅವರ ಬಗ್ಗೆ ಇರುವ ಪ್ರೀತಿ ಇನ್ನಷ್ಟು ಹೆಚ್ಚಾಯಿತು.

ಈಗ, ಅಮೃತಸ್ವರದ ಅಂಕಣದ ಓದುಗರಿಗೂ ಆ ಪೂರ್ಣ ಪಾಠವನ್ನು ಒಪ್ಪಿಸುತ್ತಿದ್ದೇನೆ. ಸುಬ್ಬಾರಾವ್ ನಿಧನದ ಹಿನ್ನೆಲೆಯಲ್ಲಿ ಅವರನ್ನು ನೆನಪು ಮಾಡಿಕೊಳ್ಳೋದೆ ಈ ಲೇಖನದ ಉದ್ದೇಶ.

“….. ಮನೆ ಕಡೆಯಿಂದ ಬಹಳ ಬಡತನವಿತ್ತು. ಹೊಟ್ಟೆಗೆ ಇದ್ದರೆ ಬಟ್ಟೆಗಿಲ್ಲ, ಬಟ್ಟೆಗಿದ್ದರೆ ಹೊಟ್ಟೆಗಿಲ್ಲ ಎಂಬಂಥ ಪರಿಸ್ಥಿತಿ ಇತ್ತು. ಅದೇ ಹೊತ್ತಿಗೆ ತಂದೆ ಹೋಗಿಬಿಟ್ಟರು. ತಾಯಿ ಒಬ್ಬಳೆ. ಅವಳು ತುಂಬಾ ಕಷ್ಟಜಿವಿ. ನನಗಾಗಿ ಏನೆಲ್ಲಾ ಮಾಡಿದವಳು. ಏನೇನೋ ಕಷ್ಟಪಟ್ಟು ದುಡಿದಿದ್ದಾಳೆ. ನನ್ನನ್ನು ಬೆಳೆಸಿದ್ದಾಳೆ. ಎಂಜಿನಿಯರಿಂಗ್ ಓದಿಸಬೇಕು ಎಂಬ ಆಸೆಯಿಂದ ದುಡಿದು ಹಣ ಸಂಪಾದಿಸಿದ್ದಾಳೆ. ನನ್ನ ಓದಿಗೆ ಹಾಕಿದ್ದಾಳೆ. ಆದರೆ, ನನ್ನ ಓದಿಗೆ ಅಂತಾ ಕೊಟ್ಟ ದುಡ್ಡೆಲ್ಲವನ್ನೂ ತಿಂದು ಹಾಕಿ ಸೆಂಟ್ರಲ್ ಕಾಲೇಜಿಗೆ ಹೋದೆ.

ಯಾಕೆ ಗೊತ್ತಾ..? `ಪತ್ರಕರ್ತ’ ಆಗಬೇಕಿತ್ತು ಮತ್ತು ಹಾಗಂತ ಅನಿಸಿಕೊಳ್ಳಬೇಕು ಎಂದು ಅನಿಸಿತ್ತು. ಅದ್ಯಾಕೋ ಗೊತ್ತಿಲ್ಲ. ಪತ್ರಕರ್ತ ಆಗಬೇಕೆಂಬ ಹುಚ್ಚು ಅಭಿಲಾಷೆ ಇತ್ತು. ಹೀಗಾಗಿ ಸೆಂಟ್ರಲ್ ಕಾಲೇಜಿಗೆ ಸೇರಿಕೊಂಡೆ. ಇದನ್ನು ಕಂಡು ನನ್ನ ತಾಯಿ ವ್ಯಥೆಪಟ್ಟಳು. ಎಂಜಿನಿಯರಿಂಗ್ ಮಾಡಬೇಕೆಂಬ ಅವಳ ಕನಸಿಗೆ ಕಲ್ಲು ಹಾಕಿದ್ದೆ. ಏನೋ ಮಾಡಬೇಕೆಂದರೆ ಅದೇನೋ ಆಗ್ತಾನಂತಲ್ಲ ಎಂಬ ಆತಂಕ ಅವಳಲ್ಲಿತ್ತು. ಈವನ ನಿರ್ವಹಣೆ ತುಂಬಾ ಕಷ್ಟಕರವಾಯಿತು. ಇಂತಹ ಬಡತನದ ಬೇಗೆಯಲ್ಲಿ ಬೆಂದು ಬಸವಳಿದಿದ್ದಳು. ಇದರಿಂದ ಪಾರಾಗಬೇಕೆಂಬ ತುಡಿತವಿತ್ತು. ಹಠ ತೊಟ್ಟು ಪತ್ರಕರ್ತನಾದೆ. ಆಥರ್ಿಕ ಸಂಕಷ್ಟಗಳಿದ್ದವು. ಆದರೂ ಬಿಡಲಿಲ್ಲ. ಹೀಗಾಗಿ ಸುಮಾರು ಐವತ್ತು ವರ್ಷಗಳ ಹಿಂದೆ ಪತ್ರಿಕೋದ್ಯಮಕ್ಕೆ ಹಠದಿಂದಲೇ ಸೇರಿಕೊಂಡೆ. ಆಗಾಗ ಲೇಖನಗಳನ್ನು ಬರೆಯೋದು, ಜೇಬಲ್ಲಿಟ್ಟುಕೊಳ್ಳೋದು. ಅವುಗಳನ್ನು ಎಲ್ಲಿಯೂ ಕಳಿಸಲಿಲ್ಲ. ಹೀಗಾಗಿ ಒಂದು ರೀತಿಯ ಚಡಪಡಿಕೆ ಆರಂಭವಾಯಿತು. ಹದಿನೇಳು ವರ್ಷಕ್ಕೆ ಕಾಲಿಟ್ಟಾಗಲೇ `ಚಟಾಕಿ’ ಮಕ್ಕಳ ಮಾಸಿಕದಲ್ಲಿ ಬರೆಯಲು ಶುರು ಮಾಡಿದ್ದೆ. ಆದರೆ ಸಂಬಳವಿರಲಿಲ್ಲ. ಈ ಹಿನ್ನೆಲೆಯಲ್ಲಿ `ಛಾಯಾಲೋಕ’ ಎಂಬ ಪಾಕ್ಷಿಕಕ್ಕೆ ಸೇರಿಕೊಂಡೆ. ಆವಾಗ ನನಗೆ ಸರಿಸುಮಾರು ಇಪ್ಪತ್ತೊಂದು ವರ್ಷದ ಆಸುಪಾಸು. ತಿಂಗಳಾದ ನಂತರ ನನ್ನ ಕೈಗೆ ಸಿಕ್ಕ ಮೊದಲ ವೇತನವೆಂದರೆ, ಎರಡು ನೂರು ರೂ.ಮಾತ್ರ. ಕೆಲಸ ಮಾಡಿ ಪತ್ರಕರ್ತ ಅನ್ನಿಸಿಕೊಂಡು ಕೈಯಲ್ಲಿ ದುಡ್ಡು ಎಣಿಸುವಾಗ ತಂದೆ-ತಾಯಿ ನೆನಪಾಗಿದ್ದರು.

ಮುಂಬಯಿಯಿಂದ `ಸ್ಕ್ರೀನ್’ ಸಿನಿಪತ್ರಿಕೆಗೆ ಬೆಂಗಳೂರಿನಿಂದ ಸಿನಿಮಾ ವರದಿಗಳನ್ನು ಕಳಿಸಲಾರಂಭಿಸಿದೆ. ಎರಡು ವರ್ಷದ ನಂತರ ಆ ಪತ್ರಿಕೆಯವರು ಡೆಸ್ಕಿಗೆ ಕರೆದುಕೊಂಡರು. ಅಲ್ಲಿ ಎರಡು ವರ್ಷ ಕೆಲಸ ನಿರ್ವಹಿಸಿದ ನಂತರ, ಬೆಂಗಳೂರು ಕರೆಯತೊಡಗಿತು. ಹೀಗಾಗಿ, ಇಲ್ಲಿ ಡೆಕ್ಕನ್ ಹೆರಾಲ್ಡ್ನಲ್ಲಿ ಮ್ಯಾಗಜೀನ್ ಎಡಿಟರ್ ಆಗಿ ಸೇರಿಕೊಂಡೆ. ಮತ್ತೆ ಎಡರು ವರ್ಷ ಕಳೆಯಿತು. ಇಂಡಿಯನ್ ಎಕ್ಸ್ಪ್ರೆಸ್ನಲ್ಲಿ ಚಿತ್ತೂರ ಆವೃತ್ತಿಯಲ್ಲಿ ಬ್ಯೂರೋ ಆದೆ. ಸರಿಯಾಗಿ ಇಪ್ಪತ್ತೊಂದು ವರ್ಷವಾದ ನಂತರ ಅದನ್ನು ಬಿಟ್ಟು ಮುಂಬಯಿಯಿಂದ ಪ್ರಕಟವಾಗುತ್ತಿದ್ದ `ಮಿಡ್ ಡೇ’ ಪತ್ರಿಕೆಗೆ ಸ್ಥಾನಿಕ ಸಂಪಾದಕನಾದೆ. ಮೂರು ವರ್ಷ ನಿರಾತಂಕವಾಗಿದ್ದ ನನಗೆ, ಮತ್ತೆ ಎಕ್ಸ್ಪ್ರೆಸ್ ಗ್ರೂಪ್ನ ಗೋಯೆಂಕಾ ಅವರು ಕರೆದು, ಇಂಗ್ಲಿಷ್ ಪತ್ರಿಕೆ ಜತೆ ಜತೆಗೆ ಆಗತಾನೇ ಆರಂಭಿಸಿದ್ದ `ಕನ್ನಡ ಪ್ರಭ’ಕ್ಕೂ ಬರೆಯಲು ಹೇಳಿದರು. ರಾಮಕೃಷ್ಣ ಮೂತರ್ಿ ಮತ್ತು ಖಾದ್ರಿ ಶಾಮಣ್ಣ ಅವರ ನಡುವೆ ಒಂದಷ್ಟು ದಿನ `ಡಬಲ್ ರೋಲ್’ ಮಾಡಿದೆ. ನಾಲ್ಕು ವರ್ಷದ ತರುವಾಯ `ಈ ನಾಡು’ ಗ್ರೂಪ್ದಲ್ಲಿ, ಐದು ವರ್ಷ ಕೆಲಸ ಮಾಡಿ, ಬೆಂಗಳೂರಿಗೆ ಬಂದೆ. ಎಲ್ಲಾ ಪತ್ರಿಕೆಗಳಿಗೂ ಲೇಖನಗಳನ್ನು ಬರೆಯುವ ಮೂಲಕ ಫ್ರೀಲಾನ್ಸರ್ ಆಗಿ ಪರಿವರ್ತನೆಗೊಂಡೆ. ಶ್ಯಾಮರಾವ್ ಅವರ ನಂತರ `ಸಂಯುಕ್ತ ಕನರ್ಾಟಕ’ಕ್ಕೆ ಎರಡು ವರ್ಷ ಸಂಪಾದಕನಾದೆ. ಅಂಕಣಕಾರನಾದೆ. ಆಮೇಲೆ ಪತ್ರಿಕೆ ಬಿಟ್ಟು, ಕೇವಲ ಅಂಕಣಕಾರನಾಗಿ ಗುರುತಿಸಿಕೊಂಡೆ. ಒಂದಷ್ಟು ದಿನ ಗೆಳೆಯನ ಹೆಸರಿನಲ್ಲಿ ಸಿನಿಮಾ ಪತ್ರಿಕೆ `ಮೇನಕಾ’ ಮಾಡಿದೆ. ಹನ್ನೆರಡು ವರ್ಷ ಯಾವುದೇ ಆತಂಕವಿಲ್ಲದೇ, ನಡು ನಡುವೆ ಬೇರೆ ಬೇರೆ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದೆ. ಶ್ರಮಪಟ್ಟು ಮತ್ತು ಹಠ ತೊಟ್ಟು ಪತ್ರಕರ್ತ ಆದ ಮೇಲೆ ಒಂದು ಕಡೆ ನೆಲೆ ನಿಲ್ಲಬೇಕು ಅಂತ ವಯಸ್ಸು ಹೇಳುತ್ತಿತ್ತು. ಆದರೆ, ಮನಸು ಕೇಳಬೇಕಲ್ಲಾ? ಅದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಧರ್ಮಸಿಂಗ್ ಅವರು ಒತ್ತಾಯ ಮಾಡಿ ಕನರ್ಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಕೊಟ್ಟಿದ್ದಾರೆ. ಇದಕ್ಕೂ ಮುನ್ನ ಅನೇಕ ಮುಖ್ಯಮಂತ್ರಿಗಳು ಹೇಳಿದ್ದರೂ ಕೇಳಿರಲಿಲ್ಲ.

ನಂಬಿಕೆ ನನ್ನನ್ನು ಬೆಳೆಸಿದೆ. ದುಡ್ಡು ಮುಖ್ಯ ಅಲ್ಲ. ಗುರಿ ಮುಖ್ಯ. ಹೆಂಡತಿ ಕೂಡ ನನಗಾಗಿ ಕಷ್ಟಪಟ್ಟಿದ್ದಾಳೆ. ದೇವರು ಕಷ್ಟ ಕೊಟ್ಟಿದ್ದಾನೆ ಎಂಬ ಭಾವನೆ ನನ್ನಲ್ಲಿದೆ. ಅದಕ್ಕಿಂತಲೂ `ಹೆಸರು’ ಮತ್ತು `ಖ್ಯಾತಿ’ ಕೊಟ್ಟಿದ್ದಾನೆ ಎಂಬ ಸಮಾಧಾನವೂ ಇದೆ. ಡಿವಿಜಿ, ತೀತಾ ಶಮರ್ಾ ಅವರು ಬರೆದಂತಹ ದಿಟ್ಟತನದ ಬರಹಗಳು ಬರಬೇಕಾಗಿದೆ. ಆ ನಿಟ್ಟಿನಲ್ಲಿ ಯುವ ಪತ್ರಕರ್ತರನ್ನು ಬೆಳೆಸುವ ಯೋಚನೆಗಳಿವೆ. ಅವು ಕಾರ್ಯರೂಪಕ್ಕೆ ಬರಬೇಕು. ಯಂಗ್ ಜರ್ನಲಿಸ್ಟ್ಗಳು ಮನಸ್ಸು ಮಾಡಿ, ಮೌಲ್ಯಾಧಾರಿತ ಪತ್ರಿಕೋದ್ಯಮವನ್ನು ಬೆಳೆಸಬೇಕಾಗಿದೆ….”

ಹೀಗೆ ಏನೇನೋ ಕನಸುಗಳನ್ನು ಹೊತ್ತ ಸುಬ್ಬಾರಾವ್ ಮಾತಾಡುತ್ತಲೇ ಇದ್ದರು. ಅದನ್ನೆಲ್ಲಾ ಟಿಪ್ಪಣಿ ಮಾಡುತ್ತಿದ್ದೆ. ಅಷ್ಟೊತ್ತಿಗೆ ಮಧ್ಯಾಹ್ನ ಆಗಿತ್ತು. ಊಟ ಮಾಡೋಣ ಬನ್ನಿ ಅಂತ ಊಟಕ್ಕೆ ಕರೆದುಕೊಂಡು ಹೋದರು. ಹೆಗಲ ಮೇಲೆ ಕೈ ಹಾಕಿ ತೀರಾ ಹಿರಿಯಣ್ಣನಂತೆ, ಅಂಕಲ್ನಂತೆ ಮಾತಾಡಿದ್ದರು. ಪ್ರೀತಿಯಿಂದ ಪತ್ರಿಕೋದ್ಯಮದ ಮಾರ್ಗಗಳನ್ನು ಹೇಳುತ್ತ ಹೋದರು. ಅವೆಲ್ಲವುಗಳ ಮೆಲುಕು ಹಾಕುತ್ತಿರುವ ಈ ಸಂದರ್ಭದಲ್ಲಿ ಸುಬ್ಬಾರಾವ್ ಇಲ್ಲ ಅನ್ನೋವಾಗ ಶೂನ್ಯ ನಮ್ಮನ್ನೆಲ್ಲಾ ಆವರಿಸಿಕೊಂಡಿದೆ. ಕೇವಲ ಮಾತಾಡಿ, ಸಂತಾಸ ಸಭೆ ಮಾಡುವುದಕ್ಕಿಂತ, ಸುಬ್ಬಾರಾವ್ ಅಂದುಕೊಂಡಿದ್ದ ಮತ್ತು ಜೀವನದುದ್ದಕ್ಕೂ ಕಾಪಾಡಿಕೊಂಡು ಬಂದಿದ್ದ `ಮೌಲ್ಯಾಧಾರಿತ ಮಾಧ್ಯಮ’ವನ್ನು ಇಂದಿನವರು ಮೈಗೂಡಿಸಿಕೊಂಡು ನಡೆಯೋದೇ ಅವರಿಗೆ ಸಲ್ಲುವ ನಿಜವಾದ ಶ್ರದ್ಧಾಂಜಲಿ.

ಸುಬ್ಬಾರಾವ್ ಸರ್, ನೀವಿಲ್ಲದೇ ಮೌಲ್ಯಾಧಾರಿತ ಮಾಧ್ಯಮ ಕ್ಷೇತ್ರ ನೆನೆಸಿಕೊಳ್ಳೋದಾದರೂ ಹೇಗೆ? ಹಾಗಂತ ಯಾರಲ್ಲಿ ಹೇಳಿಕೊಳ್ಳಲಿ.

‍ಲೇಖಕರು G

November 10, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: