ಬಿ ವಿ ಭಾರತಿ ಮತ್ತು ಸುನಿಲ್ ರಾವ್ ಜುಗಲ್ ಬಂದಿ

ಅವಧಿಯಿಂದ ಇದೊಂದು ಹೊಸ ಪ್ರಯತ್ನ.  ಒಂದು ವಿಷಯಕ್ಕೆ ಎರಡು ಭಿನ್ನ ವ್ಯಕ್ತಿತ್ವದ, ಭಿನ್ನ ವಯೋಮಾನದ ವ್ಯಕ್ತಿಗಳು ಹೇಗೆ ಪ್ರತಿಕ್ರಯಿಸಬಹುದು ಎನ್ನುವ ಒಂದು ಪ್ರಯೋಗ! ಈ ಸಲದ ವಿಷಯ ’ಹುಡುಕಾಟ’.  ಈ ಜುಗಲ್ ಬಂದಿಯಲ್ಲಿ ಭಾಗವಹಿಸುವವರು ಬಿ ವಿ ಭಾರತಿ ಮತ್ತು ಸುನಿಲ್ ರಾವ್. ನಿಮ್ಮ ಸಲಹೆ, ಪ್ರತಿಕ್ರಿಯೆಗಳಿಗೆ ಸ್ವಾಗತ!

ಹುಡುಕಾಟ

 

 

 

 

ಭಾರತಿ :

ಮನುಷ್ಯ ಯಾಕೆ ಹುಡುಕಾಟಕ್ಕೆ ಹೊರಡುತ್ತಾನೆ ಇದ್ದಕ್ಕಿದ್ದ ಹಾಗೆ? ಇರುವುದೇ ಹೀಗೆ ಅಂತ ಸುಮ್ಮನೆ ಯಾಕೆ ಇದ್ದುಬಿಡೋದಿಲ್ಲ? ಮತ್ತೆ ಮತ್ತೆ ಅದು ಬೇಕು, ಇದು ಬೇಕು ಅನ್ನುವ ಸ್ಥಿತಿ ಯಾಕೆ ಬರುತ್ತದೆ? ಒಬ್ಬ ವಿಜ್ಞಾನಿ ಹುಡುಕಾಟಕ್ಕೆ ಹೊರಟರೆ ಒಂದು ಅವಿಷ್ಕಾರ … ಒಬ್ಬ ದಾರ್ಶನಿಕ ಹುಡುಕಾಟಕ್ಕೆ ಹೊರಟರೆ ಬದುಕಿನ ಬಗ್ಗೆ ಸಾಕ್ಷಾತ್ಕಾರ … ಆದರೆ ಒಬ್ಬ ಸಾಧಾರಣ ಮನುಷ್ಯ ಹುಡುಕಾಟಕ್ಕೆ ಬೀಳೋದು? ಯಾವುದಕ್ಕಾಗಿ?

ಗಂಡು ಹೊಸ ಕೆಲಸದ ಹುಡುಕಾಟ ಮಾಡ್ತಾನೆ. ಹೆಚ್ಚಿನ ಸಂಪಾದನೆಯ, ಕೀರ್ತಿಯ, ಯಶಸ್ಸಿನ ಹುಡುಕಾಟಕ್ಕೆ ಬೀಳುತ್ತಾನೆ. ಹೊಸ ಕೆಲಸ ನಾಲ್ಕು ದಿನ ಉತ್ಸಾಹ ತರುತ್ತದೆ. ಆಮೇಲೆ ಅದು ಕೂಡಾ ಹಳತಾಗುತ್ತದೆ ಎಲ್ಲದರ ಹಾಗೆ. ಹಾಗಂತ ಬೋರಾಯ್ತು ಅಂತ ಮತ್ತೊಂದು ಕೆಲಸ ಹುಡುಕೋದಿಕ್ಕೆ ಹೊರಡಲು ಆಗೋದಿಲ್ಲ. ಆಗ ಏಕತಾನತೆಯ ಜೇಡ ಬೇಸರದ ಬಲೆ ನೇಯಲು ತೊಡಗುತ್ತದೆ. ನಮ್ಮ ಬಲೆಯಲ್ಲಿ ನಾವೇ ಬಂಧಿಗಳು. ಯಶಸ್ಸು ಅನ್ನುವುದು ಕೂಡಾ ಅಷ್ಟೇ. ಯಾಕೋ ಅದಕ್ಕೆ ಮಾನದಂಡವೇ ಇಲ್ಲ. ಬಾವಿಯಲ್ಲಿದ್ದಾಗ ಕೊಳದಲ್ಲಿರುವವರದ್ದು ಯಶಸ್ಸು, ಕೊಳದಲ್ಲಿದ್ದಾಗ ನದಿಯಲ್ಲಿರುವವರದ್ದು ಯಶಸ್ಸು, ನದಿಯಲ್ಲಿದ್ದಾಗ ಸಾಗರದಲ್ಲಿರುವವರದ್ದು ಯಶಸ್ಸು. ಒಟ್ಟಿನಲ್ಲಿ ಕೊನೆಗೊಂದು ಸಲ ಸಾಗರ ಸೇರಿದೆವು ಅನ್ನೋ ಅಷ್ಟರಲ್ಲಿ ಈಜಿದ್ದು ಯಾಕೆ ಅಂತಲೇ ಮರೆತು ಹೋಗಲು ಶುರುವಾಗಿ ಬಿಡುತ್ತೆ. ಕೀರ್ತಿ ಕೂಡಾ ಅಷ್ಟೇ ಮೊದಮೊದಲಲ್ಲಿ ತುಂಬ ಅಮಲೇರಿಸುತ್ತದೆ ಕುಡಿತದ ಹಾಗೆ. ಮೊದಮೊದಲಲ್ಲಿ ಚೂರು ಕುಡಿದರೂ ಅಮಲೇರಿ ಬೀದಿ ಪಕ್ಕದ ಬಚ್ಚಲಲ್ಲಿ ಬೀಳುವವನು ಮುಂದೆ ಅಚ್ಚುಕಟ್ಟಾಗಿ ಕಂಠಮಟ್ಟ ಏರಿಸಿ ಹೆಜ್ಜೆ ಕೂಡಾ ಆ ಕಡೆ, ಈ ಕಡೆ ಹಾಕದೇ ಮನೆ ಸೇರುತ್ತಾನಲ್ಲ ಹಾಗೆ ಈ ಕೀರ್ತಿ ಕೂಡಾ. ಮೊದಲಲ್ಲಿ ಸಖತ್ ಅಮಲು … ಆಮೇಲೆ ಯಾಕೋ ಎಲ್ಲ ಬೋರಾಗಿಬಿಡುತ್ತದೆ. ಅದದೇ ಮಾತು, ಅದದೇ ನಗು, ಅದದೇ ಹೊಗಳಿಕೆ … ಯಾವುದು ನಿಜದ್ದು, ಯಾವುದು ತೋರಿಕೆಯದು ಅಂತ ಕೂಡಾ ಅರ್ಥವಾಗುತ್ತ ಹೋದ ಹಾಗೆ ಕೀರ್ತಿಯ ಅಮಲು ಜರ್ರಂತ ಇಳಿಯುತ್ತದೆ. ಆದರೆ ಹುಡುಕಾಟಕ್ಕೆ ಬಿದ್ದವರಿಗೆ ಆ ಚಟ ಅಂಟಿಬಿಟ್ಟಿರುತ್ತದೆ.

ಇನ್ನು ಹೆಣ್ಣಿನದ್ದು ಮತ್ತೊಂದು ರಾಮಾಯಣ … ಸದಾಕಾಲ ಮಾಯಾಮೃಗದ ಬೆನ್ನೇರಲು ಹೊರಡುತ್ತಾಳೆ. ಅವಳ ಹುಡುಕಾಟ ಹೊಸ ಹೊಸ ಸಂಬಂಧಕ್ಕೆ, ಹೊಸ ಸ್ನೇಹಗಳಿಗೆ, ಹೊಸ ಪ್ರೀತಿಗೆ. ಅವಳಿಗೆ ಸದಾ ಪರಿಪೂರ್ಣತೆಯ ಹುಚ್ಚು. ‘ಹಯವದನ’ ನಾಟಕವಿದೆಯಲ್ಲ ಆ ರೀತಿ. ವ್ಯಾಘ್ರದ ಕ್ರೌರ್ಯವನ್ನು ದ್ವೇಷಿಸುತ್ತಲೇ ಅದು ಕೊಡುವ ಆ prideನ ರಕ್ಷಾಕವಚವನ್ನು ಮೆಚ್ಚುತ್ತಾಳೆ. ಜಿಂಕೆಯ ಸೌಂದರ್ಯ ಮೆಚ್ಚುವುದರ ಜೊತೆ ಜೊತೆಗೇ ಅದರ ಚಾಂಚಲ್ಯವನ್ನು ದ್ವೇಷಿಸುತ್ತಾಳೆ. ಸೋದರಿಯಲ್ಲಿ ಸ್ನೇಹಿತೆಯನ್ನು, ಸ್ನೇಹಿತೆಯಲ್ಲಿ ಸೋದರಿಯ ಪ್ರೀತಿಯನ್ನು-support ಅನ್ನು, ಗಂಡನಲ್ಲಿ ಪ್ರಿಯತಮನ ಆರಾಧನೆಯನ್ನು, ಪ್ರಿಯತಮನಲ್ಲಿ ಗಂಡನ ಆಸರೆಯನ್ನು …! ಒಟ್ಟಿನಲ್ಲಿ ಹೆಣ್ಣು ಯಾಕೋ confused ಜೀವಿ. ಹೊಸ ಗೆಳೆತನ, ಪ್ರೀತಿ, ಸಂಬಂಧ ಎದುರಾದಾಗ ಕಣ್ಣ ಕೊನೆಯಲ್ಲಿ ಒಂದು ಅನುಮಾನದ ಕೊಂಕಿದ್ದರೂ ಅದನ್ನು ತೆರೆದ ತೋಳುಗಳಿಂದ ಅಪ್ಪುತ್ತಾಳೆ. ಅವರಲ್ಲಿ ಎಲ್ಲರೂ ಅವಳ ಮನೋಭಾವಕ್ಕೆ ತಕ್ಕ ಹಾಗೆ ಇರೋದಿಲ್ಲ. ಅಲ್ಲಿ ಜರಡಿಯಾಡ್ತಾ ಕೂತುಕೊಳ್ಳುತ್ತಾಳೆ. ಕೊನೆಗೊಂದು ಸಲ ಕಲ್ಲು ಬೇರೆಯಾಗುವಷ್ಟರಲ್ಲಿ ಯಾಕೋ ಜರಡಿ ಆಡಿ ಆಡಿ ಮನಸ್ಸೆಲ್ಲ ಸುಸ್ತು ಆವರಿಸಿರುತ್ತದೆ. ಆವರೆಗೆ ಇದ್ದಿದ್ದು ಎಲ್ಲ ಹೊಳಪು ಕಳೆದುಕೊಂಡು ಎದುರಾದದ್ದು ಹೊಳಪಿರುತ್ತೋ, ಬಿಡುತ್ತೋ ಆದರೆ ಹೊಳಪಿದೆ ಅಂತ ತನಗೆ ತಾನೇ ನಂಬಿಸಿಕೊಂಡು ಬೆರಗಾಗಿ ಬದುಕೋದಿಕ್ಕೆ ಶುರು ಮಾಡುತ್ತಾಳೆ. ಆಮೇಲೆ ಒಂದು ದಿನ ಬೆಳಕು ಬಿದ್ದಾಗ ಗೊತ್ತಾಗುತ್ತೆ ಆ ಹೊಳಪೆಲ್ಲ ಬರೀ ಭ್ರಾಂತಿಯಂತ … ಹಾಗಂತ ಗುಬುರು ಹಾಕಿ ಮಲಗುತ್ತಾಳೆ ಅಂದುಕೊಂಡರೆ ಅದು ಮೂರ್ಖತನ. ಮತ್ತೆ ಶುರು ಮಾಡುತ್ತಾಳೆ ಹುಡುಕಾಟ …

ಇಷ್ಟೆಲ್ಲ ಮಾಡಿ ಎಷ್ಟೆಲ್ಲ ಪಡೆದ ಮೇಲೂ ಮುಗಿಯದ ಹಳಹಳಿಕೆ. ಯಾವುದರಲ್ಲಿ ಏನಿರಬೇಕೋ ಅದಿದ್ದರೆ ಭಾಗ್ಯ ಅನುವಂಥ ಬದುಕು ಇದು. ಹಾಗಿರುವಾಗ ಅದರಲ್ಲಿ ಅದು – ಇದು – ಮತ್ತೊಂದು ಎಲ್ಲ ಸೇರಿ ಒಂದು ಆದರ್ಶದ ಸ್ಥಿತಿ ಬೇಕು ಅಂತ ಕೇಳಿಕೊಳ್ಳುತ್ತಾಳಲ್ಲ .. ಹಾಗೆ ಮಾಡಬಹುದಾಗಿದ್ದರೆ ನನ್ನನ್ನು, ನಿನ್ನನ್ನು, ಅವನನ್ನು, ಅವಳನ್ನು ಎಲ್ಲರನ್ನೂ ಯಾಕೆ ಸೃಷ್ಟಿಸಬೇಕು? ಸುಮ್ಮನೊಂದು ಸಕ್ಕರೆ ಅಚ್ಚಿನ ಹಾಗೆ ಅಚ್ಚು ಇಟ್ಟು ಮನುಷ್ಯರನ್ನು ಸೃಷ್ಟಿಸುತ್ತಾ ಹೋಗಿಬಿಡಬಹುದಿತ್ತು. ನಮ್ಮ ಹಳೆಯ ಕಾಲದ ಶಿಲ್ಪ ಕಲೆಗಳ ಕೆತ್ತನೆಯಿರುವ ದೇವಸ್ಥಾನದಲ್ಲಿ ಸುಮಾರು ಕಡೆ ನೀವೂ ಗಮನಿಸಿಯೇ ಇರುತ್ತೀರಿ .. ಅಲ್ಲಿ ಸಿಂಹದ ದೇಹ, ಕೋತಿಯ ಬಾಲ, ಕರಡಿಯ ಕೂದಲು, ಜಿಂಕೆಯ ಕಣ್ಣು, ಮೊಸಳೆಯ ಬಾಯಿ, ಆಮೆಯ ಚಿಪ್ಪು ಎಲ್ಲ ಸೇರಿಸಿ ಕೆತ್ತಿರುವ ಒಂದು ಶಿಲ್ಪ ಇರುತ್ತದೆ.

ಬದುಕು ಕಲ್ಲಾಗಿದ್ದರೆ ಹೇಗೆ ಬೇಕೆಂದರೆ ಹಾಗೆ ಕೆತ್ತಿಬಿಡಬಹುದಿತ್ತು – ಹಾಗಿಲ್ಲವಂತಲೇ ಈ ಹುಡುಕಾಟ, ತಡಕಾಟವೆಲ್ಲ …

ಸುನಿಲ್:

ಹುಡುಕಾಟ ಅಂದರೇನು? ಯಾವುದಕ್ಕಾಗಿ ಹುಡುಕಾಟ? ಗ್ರಹಿಸಲು, ಅನ್ನಿಸಲು, ಅನುಭವಿಸಲು, ಅಥವಾ ಅರ್ಥಮಾಡಿಕೊಳ್ಳಲು ಏನಾದರೂ ಇರಬೇಕು ಎಂಬುದು ಅದರ ಅರ್ಥವಾ? ಅಥವಾ ಅದಿಷ್ಟೂ ಮಾಡಲು ಹೊರಟಾಗ ಕೊನೆಯಲ್ಲಿ ಸಿಗುವ ಫಲಿತಾಂಶ ಮತ್ತು ಜ್ಞಾನೋದಯವಾ? ಅಥವಾ ಹುಡುಕಿ – ಹುಡುಕಿ ಕೊನೆಗೆ ಮನಸ್ಸು ಹೈರಾಣಾಗಿ ಕೂತು ಸುಮ್ಮನೆ ನಿಶಬ್ಧವಾಗಿಬಿಡುತ್ತದೆ ಆ ಸಮಯದಲ್ಲಿ ಏನಾಗಬಹುದು ಎಂಬುದು ಹುಡುಕಾಟಕ್ಕೆ ಉತ್ತರವಾ? ಆ ಸ್ತಬ್ಧತೆಯ ಸೃಜನಶೀಲತೆಯಾ? ಅಥವಾ ಹುಡುಕಾಟ ಅಂದರೆ ಮೇಲಿನದೆಲ್ಲವೂ ಹೌದಾ?

ಬದುಕಿನ ಕಿತಾಬು ಶುರುವಾದ ಮೊದಲಿನಿಂದಲೂ ಪ್ರತಿಯೊಬ್ಬರೂ ಪ್ರತಿಯೊಂದಕ್ಕೂ ಹುಡುಕಾಡುತ್ತಲೇ ಇರಬೇಕು ಎಂಬಂತೆ ಮ್ಯಾಂಡೇಟರಿ ವಿಚಾರ ಅದು. ಆದರೆ ನಮ್ಮಲ್ಲೇ manifest ಆಗಿರುವ ಪ್ರತಿಯೊಂದನ್ನು ನಾವು ಹೀಗೆ ಹುಡುಕಾಡುತ್ತಾ ಹೋಗುತ್ತೇವೆ ಅನ್ನೋ ಗೊಂದಲವಿದೆ, ಆದರೆ ಹುಡುಕಾಟ ಅನ್ನೋದು ಅಳತೆಗೆ ಮೀರಿದ ಪದಗಳಿಂದ ಅಳೆಯುವ೦ತದ್ದಲ್ಲ , ಅದಕ್ಕೊಂದು frame ಹಾಕಿ, ದಾರಿ ತೋರಿಸಿ “ಇದೇ ಹುಡುಕಾಟಕ್ಕೆ ದಾರಿ” ಎಂದೂ ಹೇಳಲಾಗುವುದಿಲ್ಲ. ಹುಡುಕಾಟ ಅನ್ನಿಸಿದಾಗ ಪ್ರತಿಬಾರಿಯೂ ಅದಕ್ಕೆ ಅಧ್ಯಾತ್ಮಿಕವಾಗಿಯೇ ಉತ್ತರ ಕಂಡುಕೊಳ್ಳಬೇಕು ಅನ್ನೋದು ನನ್ನ personal ಅನಿಸಿಕೆ, ಬಹುಶಃ ನಾನು ನೋಡುವ ದೃಷ್ಟಿಕೋನ ಅದಾಗಿರಬಹುದು. ಸಾಮಾನ್ಯವಾಗಿ ಎಲ್ಲರದ್ದೂ ಒಂದೊಂದು ಹುಡುಕಾಟವಿರಬಹುದು. ಪ್ರೀತಿಗಾಗಿ ಹುಡುಕಾಟ ಅಥವಾ ಇನ್ಯಾವುದೋ ಪರಿಯ ಸಹಜ ಸ್ನೇಹಕ್ಕಾಗಿ ಹುಡುಕಾಟ, ಎಲ್ಲವೂ ಇದ್ದೂ ಇನ್ನೇನೂ ಇಲ್ಲ, ಅದು ಬೇಕೇ ಬೇಕು ಎಂಬ ಆತುರ – ಹಾತೊರೆಯುವಿಕೆಗಳು ಇರಬಹುದು, ಅದು ಸಿಕ್ಕಾಗ ಆನಂದ ಸಿಗದೇ ಇದ್ದಾಗ ನಿರಾಶೆ ಕಾಡಬಹುದು, ಇನ್ನು ಕೆಲವರಿಗೆ ಸಿಕ್ಕರೂ ಸಿಗದಂತಹ ಭ್ರಮೆ ಅಥವಾ ಸಿಕ್ಕಿಲ್ಲದಿದ್ದರೂ ಸಿಕ್ಕಿದೆ ಎಂಬ ನಂಬಿಕೆ ಇತ್ಯಾದಿ. ಹೀಗೆ ಅದಕ್ಕೆ ವಿವಿಧ ತೆರೆಗಳು ….ಅಲ್ಲವಾ? ತುಂಬಾನೇ confuse ಮಾಡಿಸುವಂತದ್ದು ಹುಡುಕಾಟ…..

ಹತ್ತಿರದಲ್ಲೇನೋ ಇದೆ ಅದನ್ನು ಕಂಡುಕೊಂಡಾಗಲೇ ಇಡೀ ಬದುಕೇ ಬದಲಾಯಿಸಿ ಹೋಗುವುದು ಎಂಬ ಅನಿಸಿಕೆಯೂ ನಮಗಿದೆ, ವಿವಿಧ ಸ್ಥರಕ್ಕೆ ವಿವಿಧ ಹುಡುಕಾಟ ಹಾಗು ಗ್ರಹಿಕೆ ಇರಬಹುದು. ದಾರ್ಶನಿಕ, ವಿಜ್ಞಾನಿ ಸದಾಕಾಲ ಏನನ್ನೋ ಹುಡುಕುತ್ತಲೇ ಇರುತಾರೆ, ಗಮನಾರ್ಹವಾಗಿ ಬುದ್ಧಿವಂತರು ಇನ್ನೇನೋ ಹುಡುಕುತ್ತಿರುತ್ತಾರೆ. ಆದರೆ ಒಂದು ‘ಸತ್ಯ’ ಅಂದರೆ ಕೊನೆಗೊಮ್ಮೆ ಅವರು ಅಷ್ಟೂ ದಿನ ಕೂತು ಹುಡುಕಾಡಿದ್ದಕ್ಕೆ ಕಂಡುಕೊಳ್ಳಲಿರುವ ಅಥವಾ ಗ್ರಹಿಸಿದ್ದೆಲ್ಲವನ್ನು ಅಥವಾ ಸೃಷ್ಟಿಮಾಡಿದ್ದೆಲ್ಲವನ್ನು ಅಥವಾ ವ್ಯಕ್ತಪಡಿಸಿದ್ದೆಲ್ಲವನ್ನು ನಾವು ಹೊಕ್ಕು ನೋಡಿದಾಗ ಅಲ್ಲಿ ನಿಜವಾಗಿಯೂ “ದಿವ್ಯ”ವಾದ ಏನೂ ಇರೋದಿಲ್ಲ……..ಮತ್ತೆ ನೀವು, ನಾನು ಬಳಸಿದ “ದಿವ್ಯ” ಎಂದು ಗ್ರಹಿಸಿಕೊಂಡರೆ ಒಹ್!!ಪವಿತ್ರವಾದದ್ದು ಏನೋ ಇದೆಯಾ ಅದನ್ನು ಹುಡುಕಬೇಕಾ?? ಅಂತ ತಯರಾಗುವಿರಿ, ಅದು ಮಾಡಬೇಡಿ…ಮನಸ್ಸು ಬೇರೆ ಬೇರೆ ಆಯಾಮಗಳನಿಟ್ಟುಕೊಂಡು, ಕೇವಲ ಬುದ್ದಿ ಹೂಡುವ ಕಪಟತೆಗೆ ಪ್ರಭಾವಗೊಳ್ಳದೆ ಇರುವುದು ಒಂದು ಅಂಶ…ಅದನ್ನು ಹುಡುಕಾಟ ಅನ್ನಬಹುದಾ?? ಮತ್ತೆ ಮತ್ತೆ ಅದೇ ಪ್ರಶ್ನೆ ಅದೇ ಹುಡುಕಾಟದಲ್ಲಿ ಮಹತ್ತರವಾಗಿರೋದು ಹುಡುಕಬೇಕಾ? ಅಥವಾ ಇಲ್ಲವಾ? ಯಾವುದು ಶ್ರೇಷ್ಠ ಎಂಬಿತ್ಯಾದಿ ರೀತಿಯಲ್ಲಿ ಹುಡುಕಾಟವನ್ನು ವರ್ಣಿಸಲು ಸಾಧ್ಯವಿಲ್ಲ….

ಹುಡುಕಾಟದ ಸಮಯದಲ್ಲಿ ಮನಸ್ಸು ಸದಾ ಪ್ರತಿಪಾದಿಸುವ “ಹೆಚ್ಚಿನದ್ದೇನೂ ಹುಡುಕಬೇಕು” ಎಂಬುದು ಬದಿಗಿಟ್ಟು “ಏನಿದೆ”? ಎಂಬುದನ್ನು ಚಿಂತಿಸಲು ಶುರುಮಾಡಿದರೆ ಅದು ಒಳಿತು, ನನಗೆ ಅನ್ನಿಸೋದು ಹುಡುಕಾಟವಾದಾಗ ಮನಸ್ಸು ನಿಶಬ್ಧವಾಗಬೇಕು, ಹೀಗೆ ಸ್ತಬ್ಧ ವಾದ ಮನಸ್ಸು ಮಾತ್ರ ಏನ್ನನ್ನಾದರು ಹುಡುಕಲು ಸಾಧ್ಯ ಅದು ಖಂಡಿತ ವಾಸ್ತವವನ್ನೇ ಹುಡುಕುತ್ತದೆ. ನಮ್ಮಲ್ಲಿರುವ ಪೂರ್ವಾಗ್ರಹ, ಗ್ರಹಿಕೆ, ನಂಬಿಕೆ, ಆಲೋಚನೆ ಕ್ಷಣಕಾಲ ಸ್ತಭ್ಧವಾದರೂ ಹುಡುಕುವಿಕೆಯಲ್ಲಿ “ಏನಿದೆಯೋ” ಅದು ಸಿಗಬಹುದು. ಯಾವುದೇ perception ಗಳ influence ಆಗಿರಬಾರದು ಎಂಬುದಷ್ಟೇ ಇದರ ಅರ್ಥ. ಹಾಗೆ ಮನಸ್ಸು “ಸ್ತಬ್ಧ”ವಾದಾಗ ಅದಕ್ಕೆ ಅಂದರೆ ಹುಡುಕಾಟಕ್ಕೆ ಒಂದು END ಸಿಗಬಹುದು, ಇದೂ ಅಷ್ಟೇ ನನ್ನ ಸ್ವಂತ ಅಭಿಪ್ರಾಯ…ಬಹಳಷ್ಟು ಸಲ ನನಗೆ ಇದೇ ಸತ್ಯ ಅನ್ನಿಸುತ್ತದೆ.

ಕೊನೆಗೆ ಹೇಳೋದಿಷ್ಟು ಹುಡುಕಾಟ ಕೇವಲ ಆಂತರ್ಯದಲ್ಲಿ ಘರ್ಷಣೆಯನ್ನು ಹೂಡಬಾರದು, ಹುಡುಕುವಿಕೆಯಲ್ಲಿ clarity ಇರಬೇಕು, ಬಾಹ್ಯದಲ್ಲೂ ಅಷ್ಟೇ ಸಂಘರ್ಷಣೆಗಳಿಗೆ ವ್ಯವಹರಿಸಬಾರದು ನಾವು ಆಗ ಮುಕ್ತರಾಗುವೆವು, ಅದಕ್ಕೊಂದು ಶಿಸ್ತು ಬೇಕಾ? ಬೇಡವಾ? ಅದು ಅವರವರೇ ನಿರ್ಧರಿಸಿಕೊಳ್ಳಬೇಕು….ಹುಡುಕಾಟದ ಮಧ್ಯೆ ಮನಸ್ಸು ಎಂದಿಗೂ ರಾಡಿಯಾಗಕೂಡದು. ಹುಡುಕಾಟ ಎಂದಿದ್ದರೂ ವಿಚಾರ ಹೀನ ತೀರ್ಪಲ್ಲ, “ಏನಿದೆ” ಎಂಬುದು ಅರ್ಥಮಾಡಿಕೊಳ್ಳುವುದು ಇಲ್ಲಿ ಮುಖ್ಯ ವಿಚಾರವೇ ಹೊರತು “ಏನಿರಬೇಕು” ಎಂದು ಸೂತ್ರೀಕರಿಸುವುದಲ್ಲ, ಮತ್ತೆ ಆ ಸೂತ್ರವೂ ಒಂದು conflict ಗೆ ದಾರಿಮಾಡಿಕೊಡುತ್ತದೆ, ಜೀವನ ಹಾಗೂ ಮನಸ್ಸು ಎರಡೂ ಬರ್ಬಾದ್ ಆಗಿಹೋಗುತ್ತದೆ ಅಷ್ಟೇ, ಭ್ರಮೆ ಮತ್ತು ಬೂಟಾಟಿಕೆಗಳೆಡೆಗೆ ಒಯ್ಯುತ್ತದೆ…..ಹುಡುಕಾಟದ ಈ ವಿಚಾರ ಎಷ್ಟು ಗೊಂದಲವಲ್ಲವಾ? ಇಷ್ಟೆಲ್ಲಾ ಪೇಚಾಡಿಕೊಂಡಮೇಲೆ ಅನ್ಸತ್ತೆ…ಥೂ ದರಿದ್ರ ಯಾವನ್ರಿ ಇದ್ನೆಲ್ಲ ಮಾಡ್ತಾನೆ ಹಾಯಾಗಿರೋದು ಬಿಟ್ಟು…ಸುಡುಗಾಡು ಅಂತ…..ಕೊನೆಗೆ ನಿಮಗೆ ಹುಡುಕಾಟ ಎಂದರೇನು ಎಂದು ಕಂಡುಕೊಳ್ಳಲೇ ಬೇಕಾದರೆ ಅದಕ್ಕೆ ಉತ್ತರ ಕೆಳಗಿದೆ…

“ನೀವು ಒಬ್ಬ ಕುರುಡನನ್ನು ಅವನು ಏಕೆ ನೋಡಬಯಸುತ್ತಾನೆ ಎಂದು ಕೇಳುವಿರಿ, ಅವನ ಉತ್ತರ ಏನಿರಬಹುದು?”…………………

******

ಮುಂದಿನ ಜುಗಲ್ ಬಂದಿಯ ವಿಷಯ ’Commitment’ – ಸ್ನೇಹದಲ್ಲಿ, ಪ್ರೇಮದಲ್ಲಿ, ಸಂಬಂಧದಲ್ಲಿ

‍ಲೇಖಕರು G

November 10, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

15 ಪ್ರತಿಕ್ರಿಯೆಗಳು

  1. Manjunath Maravanthe

    ಆಗಷ್ಟೇ ಹುಟ್ಟಿದ ಕರು ತಾಯಿಯ ಮೊಲೆಯ ಹುಡುಕಾಟದಲ್ಲಿ ತಾಯಿಯ ಬೇರೇ ಬೇರೆ ಬಾಗದಲ್ಲಿ ಬಾಯಿಯಿಂದ ಚಪ್ಪರಿಸುತ್ತದೆ. ಆದರೇ ಹಾಲು ಬರದಿದ್ದಾಗ ಭ್ರಮೆಯಿಂದ ಹೊರಬಂದು ಮತ್ತೆ ಹುಡುಕಾಟ ಶುರು. ಅಂತಿಮವಾಗಿ ಮೊಲೆ ಸಿಕ್ಕಾಗ ತಲೆಯಿಂದ ಗುದ್ದಿ ಗುದ್ದಿ ಬಾಲ ಅಲ್ಲಾಡಿಸುತ್ತಾ ಹಾಲನ್ನು ಕುಡಿಯುತ್ತೆ.
    ನಾವೂ ಅಷ್ಟೇ ಹುಡುಕಾಟದ ಮದ್ಯದಲ್ಲೆ ಸಿಗುವ ಭ್ರಮೆಯಿಂದ ನಿರಾಶೆ ಆಗದೆ ಮೊದಲಿನಷ್ಟೇ ಆಸ್ತೆಯಿಂದ ಸಂತಸದಿಂದ ಗಮ್ಯದ ಹುಡುಕಾಟದಲ್ಲಿ ತೊಡಗಬೇಕು.
    ಅತ್ಯುಮ್ಮವಾದ ಜುಗಲ್ಬಂದಿ. ಒಂದಕ್ಕೊಂದು ಪೂರಕವಾಗಿ ವಿಬಿನ್ನತೆ ಮೆರೆದಿದೆ.

    ಪ್ರತಿಕ್ರಿಯೆ
  2. ಉಷಾಕಟ್ಟೆಮನೆ

    ಬರಹಗಳು ತುಂಬಾ ಚೆನ್ನಾಗಿವೆ.
    ಬಾರತಿ ಮತ್ತು ಸುನಿಲ್ ಇಬ್ಬರೂ ಸಾಮಾನ್ಯರ ಅಳತೆಗೆ ಸಿಗದವರು…

    ಪ್ರತಿಕ್ರಿಯೆ
  3. ಅಶೋಕ ಶೆಟ್ಟರ್

    “ಹುಡುಕಾಟ ಎಂದಿದ್ದರೂ ವಿಚಾರ ಹೀನ ತೀರ್ಪಲ್ಲ, “ಏನಿದೆ” ಎಂಬುದು ಅರ್ಥಮಾಡಿಕೊಳ್ಳುವುದು ಇಲ್ಲಿ ಮುಖ್ಯ ವಿಚಾರವೇ ಹೊರತು “ಏನಿರಬೇಕು” ಎಂದು ಸೂತ್ರೀಕರಿಸುವುದಲ್ಲ, ಮತ್ತೆ ಆ ಸೂತ್ರವೂ ಒಂದು conflict ಗೆ ದಾರಿಮಾಡಿಕೊಡುತ್ತದೆ, ಜೀವನ ಹಾಗೂ ಮನಸ್ಸು ಎರಡೂ ಬರ್ಬಾದ್ ಆಗಿಹೋಗುತ್ತದೆ ಅಷ್ಟೇ, ಭ್ರಮೆ ಮತ್ತು ಬೂಟಾಟಿಕೆಗಳೆಡೆಗೆ ಒಯ್ಯುತ್ತದೆ…..” I think Mr. Sunil Rao has articulated his thoughts wonderfully well in these lines. ಭಾರತಿಯವರೊಂದಿಗೆ ಒಡನಾಡುತ್ತ ಅವನು ಅವರಿಗಿಂತ ಬುದ್ಧಿವಂತನೂ ತಾತ್ವಿಕನೂ ಆಗಿದ್ದಾನೆ..!ಕ್ರೆಡಿಟ್ ಯಾರಿಗೆ ಹೋಗಬೇಕು?

    ಪ್ರತಿಕ್ರಿಯೆ
  4. ಅನುರಾಧಾ ನಡಹಳ್ಳಿ

    ಹುಡುಕಾಟ, ತೊಳಲಾಟ ಇಲ್ಲದ ಜೀವನ ಬರೀ ಬೋರಲ್ಲವಾ? ಒಮ್ಮೆಲೇ ಎಲ್ಲ ಕಂಡುಕೊಂಡು, ಅರ್ಥೈಸಿಕೊಂಡು ಸುಮ್ಮನಾಗಿಬಿಟ್ಟರೆ ಮತ್ತೆ ಜೀವನವೆಲ್ಲ ಏನು ಮಾಡೋದು? ಹುಡುಕಾಟದಲ್ಲಿ ಇರೋ ಮಜಾ ಹುಡುಕುತ್ತಿದ್ದದ್ದು ಸಿಕ್ಕುಬಿಟ್ಟ ಮೇಲೆ ಇರೋದಿಲ್ಲ – ಭಾರತಿಯವರ ವಿಚಾರ ಬಹಳಷ್ಟು ಜನರ ಬಗ್ಗೆ ಸತ್ಯವಾಗಿರುತ್ತೆ.

    ಪ್ರತಿಕ್ರಿಯೆ
  5. M.S.Prasad

    Obbarigobbaru Adbhutavaagi spandisiddeera, Pakkadalle Kootu Maataadikondu Baredantide. Olleya chintane mattu prayatna Bharati haagu Sunil 🙂

    ಪ್ರತಿಕ್ರಿಯೆ
  6. Raghunandan K

    “ಅವಧಿ”ಯ ಹೊಸ ಪ್ರಯತ್ನ ಇಷ್ಟವಾಯಿತು, ಹುಡುಕಾಟದ ಜುಗಲ್ ಬಂಧಿಯಲ್ಲಿ ಓದುಗನಿಗೆ ಏನನ್ನೋ ಹುಡುಕುವ ಆಟ, ತನ್ನೊಳಗಿನದ್ದಾ, ಬರಹದೊಳಗಿನದ್ದಾ…

    ಪ್ರತಿಕ್ರಿಯೆ
  7. Triveni

    ಭಾರತಿ ಮತ್ತು ಸುನೀಲ್, ನಿಮ್ಮಿಬ್ಬರ ವಿಚಾರಧಾರೆಯೂ ಇಷ್ಟವಾಯಿತು!

    ಪ್ರತಿಕ್ರಿಯೆ
  8. arathi ghatikaar

    ಎಲ್ಲವೂ ಇದ್ದೂ ಇನ್ನೇನೂ ಇಲ್ಲ, ಅದು ಬೇಕೇ ಬೇಕು ಎಂಬ ಆತುರ – ಹಾತೊರೆಯುವಿಕೆಗಳು ಇರಬಹುದು, ಅದು ಸಿಕ್ಕಾಗ ಆನಂದ ಸಿಗದೇ ಇದ್ದಾಗ ನಿರಾಶೆ ಕಾಡಬಹುದು, ಇನ್ನು ಕೆಲವರಿಗೆ ಸಿಕ್ಕರೂ ಸಿಗದಂತಹ ಭ್ರಮೆ ಅಥವಾ ಸಿಕ್ಕಿಲ್ಲದಿದ್ದರೂ ಸಿಕ್ಕಿದೆ ಎಂಬ ನಂಬಿಕೆ ಇತ್ಯಾದಿ. ಹೀಗೆ ಅದಕ್ಕೆ ವಿವಿಧ ತೆರೆಗಳು ….ಅಲ್ಲವಾ? ತುಂಬಾನೇ confuse ಮಾಡಿಸುವಂತದ್ದು ಹುಡುಕಾಟ…..
    sunil avara hudukaatadalli ii saalugalu nannannu bahala kaadidavu . innu bharathi vara hudukaata saagaradashte vishaala vaadaddu . alegala adachanegaliddarroo saagarashte prashanta. sooper jugalbandi . chandada vasthu vishaya.!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: