ಪೊರೆ – ಪ್ರಜ್ಞಾ ಮತ್ತೀಹಳ್ಳಿ ಕಥೆ

ಮಣ್ಣ ಕಣ್ಣಿನ ಬೃಂದಾವನ 

ಪ್ರಜ್ಞಾ ಮತ್ತೀಹಳ್ಳಿ

ನಡುರಾತ್ರಿಯ ನೀರವ ಮೌನವನ್ನು ಹೊದ್ದು ಮಲಗಿರುವ ಕಣಿವೆಯಲ್ಲಿ ಆಗೊಮ್ಮೆ ಈಗೊಮ್ಮೆ ಕಾಡು ಹಕ್ಕಿಗಳು ಕೂಗಿ ಜೀರುಂಡೆಗಳಿಗೆ ಪ್ರತಿಕ್ರಿಯಿಸುತ್ತಿದ್ದವು. ಅಡಿಕೆ ಮರಗಳ ಸಂದುಗಳಲ್ಲಿ ಕತ್ತಲೆಯ ಓಡಿಸುವ ನಕ್ಷತ್ರಗಳ ಮಬ್ಬು ಬೆಳಕು ಮೆಣಸಿನ ಬಳ್ಳಿಯನ್ನು ತುಸುವೇ ಹೊಳೆಸಿ ಸುಮ್ಮನಾಗುತ್ತಿತ್ತು. ಚಂದ್ರ ರಜೆ ಪಡೆದ ಅಮಾವಾಸ್ಸೆಯ ಆಗಸ ಎಂದಿಗಿಂತ ಕಪ್ಪಾಗಿ ಗವ್ವೆನ್ನುತ್ತಿತ್ತು. ಜೋರಾಗಿ ಹೊಡೆದು ಕೊಳ್ಳತೊಡಗಿದ ಫೋನಿನ ಶಬ್ದಕ್ಕೆ ಗಾಢ ನಿದ್ರೆಯಲ್ಲಿರುವ ಯಾರೂ ಬೇಗ ಏಳಲೇ ಇಲ್ಲ. ಅಲ್ಲೇ ನಡುವಳದಲ್ಲಿ ಮಲಗಿದ್ದ ಅಮ್ಮೊಮ್ಮನಿಗೆ ಎಚ್ಚರವಾದರೂ ಅವರ ವಾತಪೀಡಿತ ಬೆನ್ನು ಏಳಗೊಡಲಿಲ್ಲ. ಇಷ್ಟಕ್ಕೂ ತಾನು ಫೋನು ಹಿಡಿದುಕೊಂಡು ಮಾತಾಡಲೂ ತಿಳಿದವಳಲ್ಲವೆಂದುಕೊಂಡು ಅವಳು ಹಾಗೂ ಹೀಗೂ ನರಳುತ್ತ ಎದ್ದು ಕುಳಿತಳು. ಮೆತ್ತಿಯ ಮೇಲೆ ಕೋಣೆಯಲ್ಲಿ ಮಲಗಿದ ದಂಪತಿಗಳಿಗೆ ಒಟ್ಟಿಗೆ ಎಚ್ಚರವಾದರೂ ಧೃತಿಯೇ ದಢ ದಢ ಕೆಳಗಿಳಿದು ಬಂದು ಫೋನೆತ್ತಿದಳು. ಕಾಲಸಪ್ಪಳ ಕೇಳಿ ಅಮ್ಮೊಮ್ಮ ”ತಂಗಿ ಬಂದ್ಯನೆ, ಇಷ್ಟು ರಾತ್ರಿಯಪ್ಪಗ ಯಾರ ಫೋನೆ ಮಾರಾಯ್ತಿ, ಯಾರಿಗೆ ಎಂತಾತನ ಎಂದೆಲ್ಲ ತನ್ನೊಳಗೇ ಮಾತಾಡಿಕೊಳ್ಳತೊಡಗಿದಳು. ”ಹಲೋ ಯಾರು?” ಎಂದು ಕೇಳಿದ ಧೃತಿ ಆ ಕಡೆಯ ಮಾತು ಕೇಳಿದ್ದೇ ನಿರ್ವಣ್ಣಳಾದಳು. ”ನಾನು ಅನಲಾ, ನೋಡಿ ಇಷ್ಟು ರಾತ್ರಿಯಾದರೂ ನಮಗಿಲ್ಲಿ ಮಲ್ಗೋಕೆ ಸಾಧ್ಯವಾಗ್ತಾ ಇಲ್ಲ. ಇದೆಲ್ಲ ನಿಮ್ಮಿಂದ ನೀವು ನಮ್ಮ ಬದುಕಿನ ಶಾಂತಿ , ನೆಮ್ಮದಿಯನ್ನೆಲ್ಲ ಕಿತ್ಕೊಂಬಿಟ್ರಿ ನಿಮ್ಮಿಂದಾಗಿ ನಾವೀಗ ಸದಾ ಕಿತ್ತಾಡ್ತಾ ಇರ್ತೀವಿ ಈಗಷ್ಟೇ ಒಂದು ದೊಡ್ಡ ರಂಪ ನಡಿತು. ನಾನಂತೂ ಹುಚ್ಚಿಯಂತೆ ಆಗಿದ್ದೀನಿ. ನನ್ನ ಗಂಡನ್ನ ಚನ್ನಾಗಿ ಹೊಡೆದಿದೀನಿ ಹೀಗೆ ಮುಂದುವರೆದರೆ ಅವ್ರ್ರ ಕೊಲೆ ಮಾಡಿ ಬಿಡ್ತೀನಿ ಗಡಗಡ ನಡುಗುತ್ತಿದ್ದ ಧ್ರತಿ ತೊದಲತೊಡಗಿದಳು ”ಹಲೋ ಇಲ್ಕೇಳಿ ಯಾಕೆ ಏನೇನೋ ಅನ್ಕೋತಿರಿ” ಆದರೆ ಅನಲಾ ಅವಳಿಗೆ ಮಾತಾಡಲು ಅವಕಾಶವನ್ನೇ ಕೊಡಲಿಲ್ಲ ”ನಾನು ಹೇಳೋದು ಕೇಳಿ ಎಂದು ಆರ್ಭಟಿಸಿದವಳೇ ಓತಪ್ರೋತವಾಗಿ ತನ್ನ ಗಂಡನ್ನು ಬೈಯತೊಡಗಿದಳು ನಿದ್ದೆಗಣ್ಣಲ್ಲೇ ಕೆಳಗಿಳಿದು ಬಂದ ಪ್ರದ್ಯುಮ್ನ ನಡುವಳದ ಲೈಟು ಹಚ್ಚಿದ. ಫೋನು ಹಿಡಿದುಕೊಂಡು ಬೆಪ್ಪಳಂತೆ ನಡುಗುತ್ತ ನಿಂತ ಹೆಂಡತಿಯನ್ನು ನೋಡಿ ಯಾರೆಂದು ಕೈ ಸನ್ನೆಯಲ್ಲೇ ಪ್ರಶ್ನಿಸಿದ ಅಷ್ಟರಲ್ಲಿ ಆ ಕಡೆ ಅಮಲಾ ಫೋನು ಇಟ್ಟಿದ್ದಳು. ಹೆಂಡತಿಯ ಸ್ಥಿತಿ ನೋಡಿ ಮಾತಾಡಿದವರು ಯಾರೆಂದು ಊಹಿಸಿದ ಪ್ರದ್ಯುಮ್ನ ಬಚ್ಚಲಿಗೆ ಹೋಗಿ ಬಂದ ”ಯಾರ ಫೋನ ತಮ್ಮಾ ಎಂದು ಕೇಳಿದ ಅಮ್ಮೊಮ್ಮನಿಗೆ ‘ಯಾವುದೋ ರಾಂಗ್ ನಂಬರು ನೀ ಮಲಕ್ಯ್ಸಾ ಎಂದು ಲೈಟು ಆರಿಸಿ ಮೇಲೆ ಹೋದ . ನೀರು ಕುಡಿದು ಬಚ್ಚಲಿಗೆ ಹೋಗಿ ಬಂದ ಧೃತಿ ಕೆಳದನಿಯಲ್ಲಿ ಅನಲಾ ಹೇಳಿದ್ದನ್ನು ಹೇಳಿದಳು. ”ಅಮವಾಸ್ಸೆ ಬಂದ ಕೂಡಲೆ ಹುಚ್ಚು ಏರ್ತನ. ನನ್ನ ಕೈಲಿ ಕೊಡಕಾಗಿತ್ತು. ಸಮಾ ಹುಚ್ಚು ಬಿಡ್ಸಿ ಕೊಡ್ತಿದ್ದಿ ಎಂದು ಪ್ರದ್ಯುಮ್ನ ಸಿಟ್ಟು ತೋರಿಸಿದ. ಹೋಗ್ಲಿ ಬಿಡು ಎಂದು ಧೃತಿ ಮಲಗಿಕೊಂಡಳಾದರೂ ನಿದ್ರೆ ಸುಳಿಯಲಿಲ್ಲ ”ಗಂಡಂಗೆ ಇವತ್ತೂ ಹೊಡ್ದೆ ಅಂತು ಎಂತಾ ತಗಂಡು ಹೊಡ್ದ ಏನ ಕತೆನ ಮೊದ್ಲೆ ದುರ್ಗಿಯಂತ ಹಿಂಗ್ಸು ಆ ಮಿಲಿಂದನೋ ಹೆಣ್ಣಪ್ಪಿ ಪ್ರಾಣಗೀಣ ತೆಗಿತಾ ಎಂತನ ಪ್ರದ್ಯುಮ್ನನ ಮಾತಿಗೆ ಉತ್ತರಿಸಲಿಲ್ಲವಾದರೂ ಒಂದು ಕ್ಷಣ ಭಯವೇ ಆಯಿತು . ಹೌದಲ್ಲ ಆ ಘನಘೋರಿ ಏನೇನು ತಗೊಂಡು ಹೊಡೆದಿದ್ದಾಳೋ ಏನೋ. ಬಡಪಾಯಿ ಸುಮ್ಮನೆ ಏಟು ತಿನ್ನುತ್ತಾನೆ. ಹಿಂದೊಮ್ಮೆ ಒಲೆ ಮೇಲಿನ ಕಾವಲಿಎತ್ತಿ ಹೊಡೆದು ಬೆರಳು ಮುರಿದಿದ್ದಳು ಎನ್ನುತ್ತಿದ್ದನಲ್ಲ. ಛೀ ! ಎಂಥ ಪರಿಸ್ಥತಿ ಬಂತಲ್ಲ ದೇವರೇ! ಎಂದು ಕೊಂಡಳು.

ಮಿಲಿಂದ ದೇಸಾಯಿ ಬಿಜಾಪುರ ಜಿಲ್ಲೆಯ ಹಳ್ಳಿಯವನು ಚಿಕ್ಕ ವಯಸ್ಸಿನಲ್ಲೇ ಸಿನಿಮಾದ ಹುಚ್ಚು ಹಿಡಿಸಿಕೊಂಡು ಬೆಂಗಳೂರಿಗೆ ಹೋದವನು. ಅಂತೂ ಇಂತೂ ಸಣ್ಣಪುಟ್ಟ ಕೆಲಸ ಮಾಡುತ್ತ ಗಾಂಧಿ ನಗರಿಯಲ್ಲಿ ಬದುಕಿ ಉಳಿದು ನಾಗತಿಹಳ್ಳಿ, ಸುನೀಲ ಕುಮಾರ ಇವರಿಗೆಲ್ಲ ಸಹಾಯಕನಾಗಿ ದುಡಿದವನು. ಈ ತನ್ಮಧ್ಯೆ ಮರಾಠಿ ಮೂಲದ ಅನಲಾ ಆಪ್ಟಕರಳ ಪರಿಚಯವಾಗಿತ್ತು. ಥಟ್ಟನೆ ನೋಡಿದರೆ ಗಂಡಸಿನಂತೆ ಕಾಣುವ ಅಮಲಾ ಸ್ವಭಾವದಲ್ಲೂ ತುಂಬಾ ಗಡಸು. ಅದೇನೋ ಯಾವುದೋ ಗಳಿಗೆಯಲ್ಲಿ ಅವಳ ನೇರ ಸ್ವಭಾವ, ದಿಟ್ಟ ನಡುವಳಿಕೆ ಮಿಲಿಂದನಿಗೆ ಹಿಡಿಸಿತು. ಸಿನಿಮಾ ಜನರ ನಡುವೆ ಇದ್ದೂ ಶುದ್ಧ ಭೋಳೆ ಶಂಕರನಂತಿರುವ ಮಿಲಿಂದನ ಸಾಧು ಸಂತ ಸ್ವಭಾವ ಕಂಡು ಇಂತಹ ನಿರುಪದ್ರವಿಗಳನ್ನು ಬಿಟ್ಟರಿನ್ನುಂಟೆ ಎಂದು ಅಮಲಾ ಮದುವೆ ಮಾಡಿಕೊಂಡಿದ್ದಳು. ಮಿಲಿಂದನ ಸಂಪ್ರದಾಯಸ್ಥ ತಂದೆ ತಾಯಿಗಳಿಗೆ ಈ ಅಂತರಜಾತಿಯ ವಿವಾಹ ಅಪಾರ ನೋವು ಕೊಟ್ಟಿತ್ತಾದರೂ ಮಗನ ಸಂತೋಷಕ್ಕೆ ಅಡ್ಡಿ ಬರದೇ ತಮ್ಮ ನೋವು ನುಂಗಿಕೊಂಡಿದ್ದರು. ಮೊದಮೊದಲು ದಂಪತಿಗಳು ಹಕ್ಕಿಗಳಂತೆ ಹಾರಾಡಿಕೊಂಡು ಖುಷಿಖುಷಿಯಾಗೇ ಇದ್ದರು. ಅಂತರ ಮತೀಯ ದಂಪತಿಗಳ ಮಗಳಾದ ಅನಲಾ ಪೂರ್ತಿ ಆಧುನಿಕ ಮನೋಭಾವದಳು. ದೇವರು- ಪೂಜೆ – ಸಂಪ್ರದಾಯ ಎಲ್ಲವನ್ನೂ ಸಾರಾಸಗಟಾಗಿ ತಿರಸ್ಕರಿಸುತ್ತಲೇ ಬೆಳೆದವಳು. ಕಿರುತರೆಯ ಟೆಕ್ನಿಕಲ್ ವಿಭಾಗಗಳಲ್ಲಿ ನೌಕರಿ ಮಾಡಿಕೊಂಡಿದ್ದಳು. ನಸುಕಿನಲ್ಲೆದ್ದು ವಾಕಿಂಗ್ ಹೋಗುವ ಮಿಲಿಂದ ತಾನೇ ತಿಂಡಿ ಅಡಿಗೆ ಮಾಡುತ್ತಿದ್ದ.ಸಂಪ್ರದಾಯಸ್ಥ ಮನೆಯಲ್ಲಿ ಬೆಳೆದವನಾದ್ದರಿಂದ ತಾಯಿ ಹೊರಗೆ ಕೂತಾಗಲೆಲ್ಲ ಅಡುಗೆ ಕಸ ಮಸುರೆ ಮಾಡುವುದರಲ್ಲಿ ಪಳಗಿದ್ದ. ಪಾತ್ರೆ ಬಟ್ಟೆ ಮನೆಒರೆಸುವ ಎಲ್ಲ ಕೆಲಸ ಮಾಡಿ ಸಂದರ್ಭಬಂದರೆ ಹೆಂಡತಿಯ ಕಾಲೊತ್ತಿ ಮುಚ್ಚಟೆ ಮಾಡುವ ಮಿಲಿಂದನನ್ನು ನೋಡಿ ಅನಲಾಳ ಗೆಳತಿಯರಿಗೆಲ್ಲ ಹೊಟ್ಟೆಕಿಚ್ಚ್ಚು. ಪೂರ್ವ ಪೃಥ್ವಿ ಎಂಬ ಮಕ್ಕಳಾದ ಮೇಲಂತೂ ಅಮಲಾ ಕೆಲಸ ಬಿಟ್ಟು ಮನೆಯಲ್ಲೇ ಉಳಿದಳು. ಹಾಗೆಂದು ಮನೆಗೆಲಸವೆಂದರೆ ಅವಳಿಗೆ ಅಸಡ್ಡೆ. ಮಕ್ಕಳ ಲಾಲನೆ – ಪಾಲನೆ – ಓದು- ಅಭ್ಯಾಸ ಅಷ್ಟೇ ಅವಳ ಪ್ರಪಂಚ. ಸಾಮಾನು ತಂದು ಅಡುಗೆ ಮಾಡುವದೇನಿದ್ದರೂ ಮಿಲಿಂದನದೇ ಜವಾಬ್ದಾರಿ . ಅನಲಾಳ ಗೆಳತಿಯರು ಏನೇ ನೀನು ನೋಡೋಕೂ ಚೆನ್ನಾಗಿಲಾ ಕೆಲ್ಸಕೂಡ ಮಾಡೊಲ್ಲ ಆದ್ರ್ರೂ ಮಿಲಿಂದ ನಿನ್ನನ್ನ ಇಷ್ಟ ಪಡ್ತಾನೆ ಅಂತಿಯಾ? ಸಿನಿಮಾದವವ್ರು ಕಣೆ ಎಂತೆಂತಹ ಹಿರೋಯಿನ್ ಜೊತೆ ಕೆಲ್ಸ ಮಾಡ್ತಾರೆ. ಹೊರಗಡೆ ಹೋದಾಗ ಹೇಗೆ ಇರ್ತ್ತಾರೋ ಎನೋ” ಅಂತೆಲ್ಲ ತಮ್ಮ ಸಂಶಯ ತೋರಿಸಿ ಅವಳ ತಲೆ ಕೆಡಿಸಿದ್ದರು. ಅಲ್ಲಿಂದೀಚೆಗೆ ಅನಲಾಳ ವಿಚಾರಣೆ ಟೀಕೆ ಟಿಪ್ಪಣಿ ಅಡ್ಡಿ ಆತಂಕಗಳೆಲ್ಲ ಶುರು ಆಗಿದ್ದವು. ಮಿಲಿಂದನಿಗೆ ಮನೆಯೇ ನರಕವಾದಂತಾಗಿ ಬಿಟ್ಟಿತು. ಕಿರುತೆರೆಯ ವಾಹಿನಿಯೊಂದಕ್ಕೆ ಪ್ರತಿಷ್ಠಿತ  ನಿರ್ಮಾಣ ಸಂಸ್ಥೆ ಧಾರವಾಹಿ ನಿರ್ದೇಶನದ ಕೆಲಸ ವಹಿಸಿದಾಗ ಆ ನಿಮಿತ್ತ ಲೊಕೇಶನ್ ಹುಡುಕುತ್ತ ಯಲ್ಲಾಪುರ ತಾಲೂಕಿನ ಕಾಡೊಳಗಿನ ಇವರ ಹಳ್ಳಿಗೆ ಬಂದಿದ್ದ. ಅವನ ಸಹಾಯಕ ಚಿದಂಬರನ ಹಳ್ಳಿಯದು ನವಿಲುಗಾರು. ಚಿದಂಬರನೆಂದರೆ ಪ್ರದ್ಯುಮ್ನನ ದಾಯಾದಿ ದೊಡ್ಡಜ್ಜನ ಮೊಮ್ಮಗನೇ ಆದ್ದರಿಂದ ಆ ಧಾರಾವಾಹಿ ಚಿತ್ರೀಕರಣದಲ್ಲಿ ಎಲ್ಲರೂ ಆಸಕಿಯಿಂದ ಪಾಲ್ಗೊಂಡಿದ್ದರು. ದಟ್ಟ ಕಾಡು ಕಣಿವೆ, ಅಡಿಕೆತೋಟ. ಭತ್ತದಗದ್ದೆ, ಗೇರು ಬೇಣಗಳು, ಮಂಜಿನ ಶಾಲು ಹೊದ್ದಸಂಜೆಗಳು, ನವಿಲು ಹಿಂಡು ಗದ್ದೆಗಿಳಿವ ಮುಂಜಾನೆಗಳು ಇವನ್ನೆಲ್ಲ ನೋಡಿ ಮರುಳಾದ ಮಿಲಿಂದನಿಗೆ ಸ್ವರ್ಗಕ್ಕೆ ಬಂದಂತಾಗಿತ್ತು, ಮೊದಮೊದಲು ಯಲ್ಲಾಪುರದ ಹೋಟೆಲ್ನಲ್ಲಿ ರೂಮು ಮಾಡಿಕೊಂಡು ಬೆಳಿಗ್ಗೆ ನವಿಲುಗಾರಿಗೆ ಬರುತ್ತಿದ್ದ ಚಿತ್ರೀಕರಣ ತಂಡ ಒಂದೆರಡು ದಿನಗಳ ನಂತರ ಹಳ್ಳಿಯಲ್ಲೇ ಬೇರೆ ಬೇರೆ ಮನೆಗಳಲ್ಲಿ ಅತಿಥಿಗಳಾಗಿ ಸೇರಿಕೊಂಡು ಬಿಟ್ಟರು. ಹೇಳಿಕೇಳಿ ಆತಿಥ್ಯಕ್ಕೆ ಹೆಸರಾದ ಮಲೆನಾಡ ಹಳ್ಳಿ ಮನೆಗಳು. ನೆಂಟರು ಬಂದರೆ ಅವರಿಗೆ ಖುಷಿಯೇ ಖುಷಿ. ಓದಲು ಬರೆಯಲು ಪ್ರಶಸ್ತ ಸ್ಥಳವಿದೆ ಎನ್ನುವ ಕಾರಣಕ್ಕೆ ಮಿಲಿಂದ ಪ್ರದ್ಯುಮ್ನನ ಮನೆ ಸೇರಿಕೊಂಡ. ಬೊಚ್ಚು ಬಾಯಲ್ಲಿಯೇ ಹಳೆಯ ಸಂಪ್ರದಾಯದ ಹಾಡು ಹೇಳುವ ಅಮ್ಮೊಮ್ಮನಿಗೆ ಒಂದು ಪಾತ್ರ ಕೊಟ್ಟಿದ್ದ. ಸರಸರ ಅಡಿಕೆ ಮರಹತ್ತಿ ಕೊನೆ ಕೊಯ್ಯುವ ಜಟ್ಟ ತೆಂಗಿನಗರಿಯ ಮಡ್ಲು ಹೆಣೆಯುವ ಮಂಜಿ, ಸೊಂಟಕ್ಕೆ ಕತ್ತಿ ಸಿಗಿಸಿಕೊಂಡು ಹಾಳೆ ಟೊಪ್ಪಿ ಹಾಕಿಕೊಂಡು ಬರಿ ಮೈಲಿ ತಿರುಗಾಡುವ ತಿಮ್ಮ ಇವರೆಲ್ಲರನ್ನು ಶೂಟು ಮಾಡಿಕೊಂಡಾಗ ಅವರೆಲ್ಲ ರೋಮಾಂಚಿತರಾಗಿ ಆರಂಭದಲ್ಲಿ ಅಂದುಕೊಂಡಿದ್ದಕ್ಕಿಂತಲೂ ಸುಂದರವಾಗಿ ಧಾರಾವಾಹಿ ರೂಪುಗೊಳ್ಳತೊಡಗಿತು. ಸಣ್ಣದೊಂದು ಪಾತ್ರಕ್ಕಾಗಿ ಧೃತಿಯನ್ನು ಸೇರಿಸಿಕೊಂಡವನು ಅವಳ ಪ್ರಬುದ್ದ ಅಭಿನಯ, ಭಾಷಾಶುದ್ಧಿ ಇವುಗಳಿಂದ ಪ್ರಭಾವಿತನಾಗಿ ಆ ಪಾತ್ರವನ್ನು ದೊಡ್ಡದಾಗಿ ವಿಸ್ತರಿಸಿದ. ಬಿಡುವಿದ್ದಾಗ ಅಡಿಗೆ ಮನೆಗೆ ನುಗ್ಗಿ ತಾನೇ ತನ್ನ ಊರಿನ ಅಡಿಗೆ ಶುರು ಮಾಡುತ್ತಿದ್ದ. ಇದರಿಂದ ಖುಶಿಯಾದ ಅಮ್ಮೊಮ್ಮ ಹಾಗೂ ಧೃತಿ ಅವನಿಂದ ಬಗೆಬಗೆಯ ಅಡುಗೆ ಮಾಡಿಸಿಕೊಂಡು ಧನ್ಯರಾದರು. ಅವನ ಬಳಿ ಇದ್ದ ಅಮೇರಿಕಾದ ಬೆನ್ಗೇ ಆಯಿಂಟಮೆಂಟನ್ನು ಅಮ್ಮೊಮ್ಮನ ಕಾಲಿಗೆ ಹಚ್ಚಿ ತಿಕ್ಕಿ ಕೊಟ್ಟಾಗಲಂತೂ ಅವರ ಕಣ್ಣಲ್ಲಿ ನೀರೇ ಬಂತು. ”ಪಾಪ ಬಡಪಾಯಿ ಮಾಣಿ, ಯಾವ ಊರಂವ ಆದ್ರೆಂತಾತು. ಮನೆ ಮಗನಾಂಗೇ ಇದ್ದ” ಎಂದು ವಾತ್ಸಲ್ಯ ಉಕ್ಕಿಸಿದಳು ಕ್ರಿಕೆಟ್ ಯಕ್ಷಗಾನಗಳಿಗೆ ಕಂಪನಿ ಕೊಡುತ್ತ ಪ್ರದ್ಯುಮ್ನನೂ ಒಳ್ಳೆಯ ಗೆಳೆಯನೇ ಆಗಿದ್ದ . ಧೃತಿಗೆ ಬಾಲ್ಯದಿಂದಲೂ ಸಾಹಿತ್ಯ, ಓದು, ಬರವಣಿಗೆಗಳ ಅಭಿರುಚಿ ಇತ್ತು. ಕಾಲೇಜು ಕಲಿಯುವಾಗ ಕೆಲವು ನಾಟಕಗಳಲ್ಲೂ ಅಭಿನಯಿಸಿದ್ದಳು. ಈಗ ಮಿಲಿಂದನೊಡನೆ ಶೇಕ್ಸಪಿಯರನ ನಾಟಕ, ಕಾದಂಬರಿಗಳನ್ನು ಚಿತ್ರೀಕರ್ರಿಸುವ ತೊಂದರೆ ಎಂದೆಲ್ಲ ಹರಟಲು ಒಳ್ಳೆಯ ಅವಕಾಶ ಆದಂತಾಗಿತ್ತು. ಪ್ರದ್ಯುಮ್ನ ಬೇರೆ ಊರಿಗೆ ಹೋದಾಗಲೂ ಧೃತಿ-ಮಿಲಿಂದ ತೋಟ ಬೇಣ ಎಂದು ವಾಕಿಂಗ್ ಹೋಗುತ್ತಿದ್ದರು.ಆದರೆ ಅದು ಪ್ರದ್ಯುಮ್ನ-ಅಮ್ಮೊಮ್ಮ ಎಲ್ಲರ ಅರಿವಿನಲ್ಲೇ ಜರುಗುವ ಸಂಗತಿಯಾದ ಕಾರಣ ಯಾರಿಗೂ ಏನೂ ಅನ್ನಿಸುತ್ತಿರಲಿಲ, ಅನಲ ಹೀಗೆ ತಿಂಗಳುಗಟ್ಟಲೇ ಅವರೆಲ್ಲ ಒಂದು ಆತ್ಮೀಯ ಲೋಕದಲ್ಲಿ ವಿಹರಿಸುವಾಗಲೇ ಬೆಂಗಳೂರಿಂದ ಮಿಲಿಂದನಿಗೆ ಬುಲಾವ್ ಬಂದಿತು. ಹೋದಾಗ ಅನಲಾಳ ವಿಚಾರಣೆಯಲ್ಲಿ ಕೆಲವು ಪೆದ್ದು ಪೆದ್ದು ಉತ್ತರ ಕೊಟ್ಟು ಮಿಲಿಂದ ಸಿಕ್ಕಿಹಾಕಿಕೊಂಡ. ತಮ್ಮ ಮನೆಯಲ್ಲಿ ಉಳಿಸಿಕೊಂಡು ಆತಿಥ್ಯ ನೀಡುವುದರ ಹಿಂದೆ ಯಾವುದೇ ಸ್ವಾರ್ಥವಿಲ್ಲ ಎಂಬ ಸಂಗತಿ ಅನಲಾಗೆ ಹೇಗೆ ಮಾಡಿದರೂ ಒಪ್ಪಿತವಾಗಲಿಲ್ಲ. ಅವಳು ಹುಟ್ಟಿ-ಬೆಳೆದ ಪರಿಸರದಲ್ಲಿ ಕೊಡುವುದು ಕೇವಲ ಪಡೆಯುವುದಕ್ಕಾಗಿ ಮಾತ್ರ. ಹೆಣ್ಣು-ಗಂಡು ಒಡನಾಡಿದರೆ ಅಲ್ಲಿ ಇರುವುದು ಒಂದೇ ಒಂದು ಭಾವ-ಅದು ದೇಹಕ್ಕೆ ಸಂಬಂಧಿಸಿದ್ದು ಎನ್ನುವುದೇ ಅವಳ ನಂಬಿಕೆ. ಅವಳಿಗೆ ವಾಸ್ತವವನ್ನು ಅರ್ಥ ಮಾಡಿಸಿದರಾಯಿತೆಂದು ಮಿಲಿಂದ ಅವಳನ್ನು ನವಿಲುಗಾರಿಗೆ ಕರೆತಂದ. ಆದರೆ ಇದರಿಂದ ಅವಳ ಅನುಮಾನ ಇನ್ನಿಷ್ಟು ಹೆಚ್ಚೇ ಆಯಿತು. ಅಲ್ಲಿಯ ವಾತಾವರಣದಲ್ಲಿ ಅವಳಿಗೆ ಏಕಾಂತಕ್ಕೆ ಅವಕಾಶ ಗೋಚರಿಸಿತು. ದುರ್ದಾನ ತೆಗೆದುಕೊಂಡವಳ ಹಾಗೆ ಏನೂ ಮಾತಾಡದೇ ಗಂಡನನ್ನು ದರದರ ಎಳೆದುಕೊಂಡೇ ಕಾರು ಹತ್ತಿದವಳು ಬೆಂಗಳೂರು ಸೇರಿದೊಡನೆ ದೊಡ್ಡ ಗಲಾಟೆಗೆ ಶುರುವಿಟ್ಟುಕೊಂಡಳು. ಅವಳಿಗೆ ಕಣ್ಣು ಮುಚ್ಚಿದರೂ ತೆಗೆದರೂ ಧೃತಿಯ ಸುಂದರ ರೂಪ, ಅಭಿನಯಗಳೇ ಕಾಣತೋಡಗಿದವು. ಅವಳನ್ನು ನಂಬಿಸಿ, ಒಪ್ಪಿಸುವ ಚಾಕಚಕ್ಯತೆಯೂ ಇಲ್ಲದ ಮಿಲಿಂದ ಹೆದರಿ ಬೆಪ್ಪಾಗಿ ಬಾಯಿ ಮುಚ್ಚಿಕೊಂಡಿದ್ದರಿಂದ ಅವಳಿಗೆ ತನಗನ್ನಿಸಿದ್ದೆ ಸತ್ಯ ಎಂಬಂತಾಗಿ ಹೋಗಿತ್ತು. ಆ ಧಾರವಾಹಿಯಲ್ಲಿ ಧೃತಿಯ ಪಾತ್ರವನ್ನು ಬೆಳಸಿದ್ದರಿಂದಾಗಿ ನಾಯಕಿ ಪಾತ್ರ ಮಾಡುವ ಕೆಲವರಿಗೆ ಹೊಟ್ಟೆಕಿಚ್ಚಾಗಿತ್ತು. ಅವರು ಪ್ರೊಫೆಷನಲ್ ನಟಿಯರಾಗಿದ್ದು ಅನಲಾಳ ಪರಿಚಯವಿದ್ದವರಾಗಿದ್ದರು. ಅನಲಾಳ ಅನುಮಾನಗಳಿಗೆ ಅವರೆಲ್ಲ ತಮ್ಮ ಕೈಲಾದಷ್ಟು ತುಪ್ಪ ಸುರಿದು ಕೃತಾರ್ಥರಾಗಿದ್ದರು. ಅನಲಾ ನೌಕರಿ ಮಾಡುವ ಚಾನೆಲ್ನ ಅಧಿಕಾರಿಗಳ ಎದುರಿಗೆಲ್ಲ ಅತ್ತುಕರೆದು ಫೋನು ಮಾಡಿಸಿ ಆ ಧಾರಾವಾಹಿಯ ಪ್ರಸಾರವನ್ನೇ ನಿಲ್ಲಿಸಲು ಯಶ್ವಸಿಯಾದಳು.ಗಂಡನಿಗೆ ಸ್ಧಳೀಯವಾಗಿ ಮಾಡುವ ಕೆಲಸದಲ್ಲಷ್ಟೇ ಪಾಲ್ಗೊಳ್ಳಲು ಅನುಮತಿಸುವುದಾಗಿಯೂ ಬೇರೆ ಊರುಗಳಲ್ಲಿ ವಾಸ್ತವ್ಯಕ್ಕೆ ತಾನು ಒಪ್ಪುವುದಿಲ್ಲವೆಂದೂ ತಾಕೀತು ಮಾಡಿದ್ದಳು. ಸಿನಿಮಾದ ಗಂಡಸರು ಅನೈತಿಕರೆಂದು ಜನಸಾಮಾನ್ಯರಲ್ಲಿ ನಂಬಿಕೆಯಿರುವ ಕಾರಣದಿಂದ ಅನಲಾಳ ಮಾತನ್ನು ಬಹಳಷ್ಟು ಜನ ನಂಬಿದರು. ಮಿಲಿಂದನ ಪ್ರತಿಭೆಯ ಕುರಿತು ಅಸೂಯೆ ಪಡುವವರಿಗಂತೂ ಇದು ಸುಗ್ರಾಸ ಭೋಜನವೇ ಆಗಿತ್ತು.

ಈ ಎಲ್ಲಾ ವಿದ್ಯಮಾನಗಳಿಂದ ತೀವ್ರ ಅವಮಾನಕ್ಕೆ ಒಳಗಾದವರೆಂದರೆ ಧೃತಿ ಹಾಗೂ ಪ್ರದ್ಯುಮ್ನ. ಈ ಧಾರವಾಹಿಯ ಅರ್ಧ ಚಿತ್ರೀಕರಣವಾಗುತ್ತಿದ್ದಾಗಲೇ ಪ್ರಸಿದ್ದ ಬ್ಯಾನರಿನ ಚಿತ್ರವೊಂದರ ಸಹಾಯಕನಾಗಿ ಕರೆ ಬಂದ ಕಾರಣಕ್ಕೆ ಚಿದಂಬರನೂ ಹೊರಟು ಹೋಗಿದ್ದ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಮುಗ್ಧ ಸತ್ಕಾರ-ಸೌಜನ್ಯಗಳಿಂದ ಕಲಾವಿದನೊಬ್ಬನನ್ನು ಆದರಿಸುವುದು ಇಷ್ಟು ದೊಡ್ಡ ತಪ್ಪೆ? ಇಡೀ ಕುಟುಂಬದೊಂದಿಗೆ ಒಡನಾಡುವ ಮನುಷ್ಯ ಪುರುಷನಾಗಿರುವ ಮಾತ್ರಕ್ಕೆ ಸ್ತ್ರೀಯರು ದೂರವಿಡಬೇಕೆ? ಇಷ್ಟಕ್ಕೂ ಸ್ತ್ರೀ-ಪುರುಷ ಒಡನಾಟಗಳಲ್ಲಿ ಸ್ನೇಹದಂತಹ ಸಹಜ-ಶುದ್ಧ ಬಾಂಧವ್ಯಗಳು ಸಾಧ್ಯವೇ ಇಲ್ಲವೊ ನಗರಗಳಲ್ಲಿ ವಾಸಿಸುವ ಅದರಲ್ಲೂ ಸುಶಿಕ್ಷಿತ ಸಮಾಜದಲ್ಲಿ ಬೆರೆತಿರುವ ಅನಲಾಗೆ ಇದೆಲ್ಲಾ ಏಕೆ ಅರ್ಥವಾಗುತ್ತಿಲ್ಲ ಎಂಬ ಜಿಜ್ಞಾಸೆಗೆ ಒಳಗಾದ-ಪತಿ-ಪತ್ನಿಯರು ಬಹಳಷ್ಟು ಸಲ ಫೋನು ಮಾಡಿ ಅನಲಾಳಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು. ಆದರೆ ಇದರಿಂದ ಅವಳ ಸಿಟ್ಟು ಅಸಹನೆ ಹೆಚ್ಚಾಯಿತು. ಮಕ್ಕಳು ಎದುರಿಗಿದ್ದಾರೆ ಎಂಬುದನ್ನೂ ಗಮನಿಸದೇ ಗಂಡನಿಗೆ ಹೊಡೆಯ ತೊಡಗಿದಳು. ಅವಳು ಮೆನೊಪಾಸ್ನ ಸಂಕೀರ್ಣ ತಿರುವಿನಲ್ಲಿರುವುದರಿಂದ ಹೀಗಾಡುತ್ತಿರಬಹುದೆಂದೂ ಗುಮಾನಿಯಿತ್ತಾದ ಕಾರಣ ಮಿಲಿಂದ ಸಹನೆ ವಹಿಸಲೇಬೆಕಾಗಿತು. ಯವುಯಾವುದೇ ಸಂಧರ್ಭಗಳಲ್ಲಿ ಇದ್ದಕಿದ್ದಂತೆ ನವಿಲುಗಾರಿನ ನೆನಪಾದದ್ದೇ ಅನಲಾ ವ್ಯಗ್ರಳಾಗುತ್ತಿದ್ದರು. ಥಟ್ಟನೆ ಫೋನು ಮಾಡಿ ಧೃತಿಯನ್ನು ಬೈಯುತ್ತಿದ್ದಳು. ಅವಳು ಕೋರ್ಟು ಕೇಸು,ಡೈವೂರ್ಸ,ಮಹಿಳಾವಿಮೋಚನಾ ಸಂಘಗಳ ಕುರಿತಾಗಿಯೂ ಪ್ರಸ್ತಾಪಿಸುತ್ತಿದ್ದರಿಂದಾಗಿ ಧೃತಿ ಕುಗ್ಗಿಹೋಗಿದ್ದಳು. ದಟ್ಟಕಾಡಿನ ನಡುವೆ ಒಂಟಿ ಮನೆಯಲ್ಲಿ ಸದ್ದಿಲ್ಲದೇ ಬದುಕುವ ಅವಳಿಗೆ ಮಾಧ್ಯಮಗಳಲ್ಲ್ಲಿ ತನ್ನನ್ನು ಮನೆಮುರಕಿಯತೆ, ಅನೈತಿಕ ಸಂಬಂಧ ಹೊಂದಿದ ಖಳನಾಯಕಿಯಂತೆ ಚಿತ್ರಸುವುದನ್ನು ನೆನೆಸಿಕೊಂಡರೆ ಪ್ರಾಣ ಹೋದಂತಾಗುತ್ತಿತ್ತು. ಪ್ರದ್ಯುಮ್ನ ಮಾತ್ರ ಸ್ಧಿಮಿತಿ ಕಳೆದುಕೊಂಡಿರಲಿಲ್ಲ. ಧೃತಿಗೆ ಧೈರ್ಯ ಹೇಳುತ್ತಲೇ ಇದ್ದ.

ಹಳೆಯದನ್ನೆಲ್ಲ ಮೆಲುಕು ಹಾಕುತ್ತ ಮಲಗಿದ್ದ ದೃತಿ ಬೆಳಗಿನ ಹಕ್ಕಿಗಳ ಕಲರವ ಕೇಳಿ ಮೇಲೆದ್ದಳು. ತಲೆ ಭಾರವಾಗಿ ಕಣ್ಣು ಬಿಡುವುದೇ ಕಷ್ಟವಾಗಿತ್ತು. ಮೈಕೈಯೆಲ್ಲ ಯಾರೋ ಗಾಣಕ್ಕೆ ಹಾಕಿ ಹಿಂಡಿದಂತೆ ನೋಯುತ್ತಿತ್ತು. ತಾನು ಏಳದಿದ್ದರೆ ಅಮ್ಮೊಮ್ಮನೇ ಎಲ್ಲ ಕೆಲಸಕ್ಕೂ ನಿಂತುಬಿಡುತ್ತಾಳೆಂಬ ಕಾರಣಕ್ಕಾಗಿ ಸರಸರ ಹಿತ್ತಲಿಗೆ ನಡೆದಳು. ಕನ್ನ ಬಚ್ಚಲೊಲೆಗೆ ಉರಿ ಹಾಕುತ್ತ ಕುಳಿತಿದ್ದ. ಮಂಜಿ ರಾತ್ರಿಯೂಟದ ಪಾತ್ರೆ ತಿಕ್ಕುತ್ತ ಇದ್ದಳು.ಧೃತಿಯ ಮುಖ ಕಂಡಿದ್ದೇ ಅಮ್ಮಾ ದನ-ಕರ ಕೂಗ್ತಾ ಐಧವೆ. ಕೊಟ್ಟಿಗೆ ಬನ್ರಾ ಎಂದು ಕನ್ನ ಮೇಲೆದ್ದ. ಧೃತಿಯ ಹಿಂದೆಯೇ ಬಂದಿದ್ದ ಪ್ರದ್ಯುಮ್ನ ನೀ ಒಳ್ಬದಿ ಮಾಡ್ಕ್ಯಳೆ,ಕೊಟ್ಟಿಗೆ ನಾನು ಹೋಗ್ತಿ. ಎನ್ನುತ್ತ ಬಚ್ಚಲು ಹೊಕ್ಕ. ಅದಾಗಲೇ ಮಜ್ಜಿಗೆ ಕಡೆಯುತ್ತ ಕೂತ ಅಮ್ಮೊಮ್ಮ ಹಾಡುತ್ತಿದ್ದಳು ಶ್ರೀ ರಂಗನಾಯಕ ರಾಜೀವ ಲೋಚನ ರಮಣನೆ ಬೆಳಗಾಯಿತೇಳೆನ್ನುತ್ತ. ಫೋನು ರಿಂಗಾಗತೊಡಗಿತು. ಯಾಕೋ ರಾತ್ರಿಯ ನೆನಪಾದ ಧ್ರತಿ ಹೆದರಿ ಫೋನು ತೆಗೆದುಕೊಳ್ಳಲು ಹಿಂಜರಿದಳು. ಕೊಟ್ಟಿಗೆ ಕಡೆ ಹೊರಟಿದ್ದ ಪ್ರದ್ಯುಮ್ನನೇ ತಿರುಗಿ ಬಂದು ಪೋನೆತ್ತಿದ. ಧ್ರತಿಯ ಚಿಕ್ಕಪ್ಪನ ಮಗ ಬೆಂಗಳೂರಲ್ಲಿ ಇಂಜಿನಿಯರ್ ಆಗಿರುವ ಧನಂಜಯ. ಅವನ ಮಗನ ಮೊದಲ ವರ್ಷದ ಹುಟ್ಟಿದ ಹಬ್ಬ. ಬೆಂಗಳೂರಲ್ಲೇ ಛತ್ರ ಹಿಡಿದು ಅದ್ದೂರಿಯಾಗಿ ಮಾಡಬೇಕೆಂದುಕೊಂಡಿದ್ದೇನೆ. ತಪ್ಪದೇ ಬನ್ನಿ ಎಂದು ಕರೆಯಲು ಮಾಡಿದ್ದ. ತನಗೆ ಕೊನೆ ಕೊಯ್ಲು. ಧ್ರತಿ ಬರುತ್ತಾಳೆ ಎನ್ನುತ್ತ ಪ್ರದ್ಯುಮ್ನ ಧ್ರತಿಗೆ ಫೋನು ಕೊಟ್ಟ. ಅವನೊಂದಿಗೆ ಮಾತಾಡಿ ಫೋನಿಟ್ಟ ಧ್ರತಿಗೆ ಒಂಚೂರು ಉಮೇದಿ ಇರಲಿಲ್ಲ. ಯಾಕೋ ಬೆಂಗಳೂರೆಂದರೆ ಮಿಲಿಂದ-ಅನಲಾ ನೆನಪಾಗಿ ನಡುಕ ಬಂದಂತಾಗುತ್ತಿತ್ತು. ಪ್ರದ್ಯುಮ್ನ ಜೋರಾಗೇ ಗದರಿಸಿದ. ಅರೆ ಅವರೇನು ಆ ಊರು ಗುತ್ತಿಗೆ ತಗಂಡಿದ್ವನು? ನಮ್ಮ ಕೆಲಸಕ್ಕೆ ನಾವು ಹೋದ್ರೆ ಅವರಿಗೇನು ಸಂಬಂಧ? ನೀ ಹೆದರಡ. ಸುತ್ತ ಮುತ್ತಲಿನ ನಾಕೈದು ಬಂಧುಗಳು ಹೊರಟಿದ್ದರು. ಎಲ್ಲರಿಗೂ ಯೆಲ್ಲಾಪುರದಿಂದ ಹೊರಡುವ ಬಸ್ಸಿಗೆ ಒಟ್ಟಿಗೆ ರಿಸರ್ವೇಶಷನ್ ಮಾಡಿಸಿದ್ದೂ ಆಯಿತು. ಧ್ರತಿಗೆ ಮಾತ್ರ ಒಂದು ರೀತಿಯ ತಳಮಳ. ಹುಟ್ಟಿದಾಗಿನಿಂದ ದೊಡ್ಡಕೆ ಮಾತೂ ಆಡದ ಸಂಭಾವಿತ ಅಪ್ಪ-ಅಮ್ಮನಿಗೆ ಒಬ್ಬಳೇ ಮಗಳಾಗಿ ಬೆಳೆದವಳು. ಶಾಲೆಯಲ್ಲಾಗಲೀ ಮನೆಯಲ್ಲಾಗಲೀ ಜೋರಾಗಿ ಗದರಿಸಿಕೊಂಡವಳೂ ಅಲ್ಲ. ಈಗ ಮಾಡದಿರುವ ತಪ್ಪಿಗಾಗಿ ಬೈಸಿಕೊಳ್ಳುವುದೆಂದರೆ ಎಂಥಾ ಹಿಂಸೆಯಪ್ಪ. ಇದ್ದುದಕ್ಕೆ ಸಾಕ್ಷಿ ತರಬಹುದು. ಇಲ್ಲದ್ದಕ್ಕೆ ಸಾಕ್ಷಿ ತರುವುದು ಎಲ್ಲಿಂದ? ಜಗತ್ತಿಗೆ ಇಂಥ ವಿಷಯದಲ್ಲಿ ಯಾವತ್ತೂ ಆಸಕ್ತಿ ಬಹಳ. ಯಾರದ್ದಾದರೂ ಹೆಂಡತಿ ನನ್ನ ಗಂಡನಿಗೆ ಮತ್ಯಾರದ್ದೋ ಜೊತೆ ಸಂಬಂಧ ಇದೆ ಎಂದು ಬಿಟ್ಟರೆ ಮುಗಿಯಿತು. ನಂಬಿಬಿಡುತ್ತಾರೆ. ಅವಳ ಕುರಿತು ಗಂಡು ಹೆಣ್ಣುಗಳಾದಿಯಾಗಿ ಎಲ್ಲರ ಕರುಣೆಯ ಮಹಾಪೂರ ಹರಿದು ಬರುತ್ತದೆ. ಆ ಮೂರನೆಯ ಹೆಣ್ಣನ್ನು ಖಳನಾಯಕಿಯಾಗಿ ಕಾಣುತ್ತಾರೆ.ಮಾಧ್ಯಮದವರಂತೂ ಬಿಸಿಬಿಸಿ ಬೆಣ್ಣೆದೋಸೆ ಸಿಕ್ಕಿದ ಹಾಗೆ ವಾರಗಟ್ಟಲೆ ಚಪ್ಪರಿಸುತ್ತಾರೆ. ಅನಲಾ ಮೊದಲೇ ಟಿವಿಯವರಿಗೆ ಹತ್ತಿರದವಳು. ಜನ ಅವಳನ್ನು ನಂಬುತ್ತಾರೆ ಹೊರತೂ ತನ್ನನ್ನಲ್ಲ. ಯೋಚಿಸಿ ಯೋಚಿಸಿ ಅವಳ ತಲೆ ಕೆಡತೊಡಗಿತು. ತೀರಾ ಅಣ್ಣನ ಮಗನ ಕಾರ್ಯ ಹೋಗದಿರುವುದೂ ಸಾಧ್ಯವಿಲ್ಲದೇ ಅಂತೂ ಹೊರಟಳು.

ಬೆಳಿಗ್ಗೆ ಬೆಂಗಳೂರು ತಲುಪಿದೊಡನೆ ಧನಂಜಯನ ಮನೆಗೆ ಹತ್ತಿರ ಅಂತ ನವರಂಗ್ ಸ್ಟಾಪಿಗೆ ಇಳಿದುಕೊಂಡರು. ಆಟೋ ಮಾಡಿಕೊಂಡು ಮನೆ ಸೇರಿದ್ದೇ ಸಡಗರ ಶುರುವಾಗಿ ಬಿಟ್ಟಿತು. ಆ ಪುಟ್ಟ ಅಪಾರ್ಟಮೆಂಟಿನ ಇಕ್ಕಟ್ಟಿನ ಮನೆಯಲ್ಲಿ ಅಷ್ಟೆಲ್ಲ ಜನ ನೆರೆದಿದ್ದು ಇದೇ ಮೊದಲು. ಸಾಗರದಿಂದ ಬಂದ ಧನಂಜಯನ ಹೆಂಡತಿ ಚಿತ್ರಭಾನು ಕಡೆಯ ನೆಂಟರು ಅದಾಗಲೇ ಪಾಪುವನ್ನು ಎರೆದು ಅಲಂಕರಿಸಿದ್ದರು. ಮದ್ಯಾಹ್ನದ ಊಟಕ್ಕೆ ಛತ್ರಕ್ಕೆ ಹೋಗುವುದು ಅಂತಾಗಿತ್ತು. ಮದ್ಯಾಹ್ನ ಬರೀ ಊರಿಂದ ಬಂದ ನೆಂಟರಷ್ಟೇ. ಸಂಜೆ ಆರತಿಯ ಶಾಸ್ತ್ರ ಹಾಗೂ ವೈಭವದ ಊಟಕ್ಕೆ ಬೆಂಗಳೂರಲ್ಲೇ ಇರುವ ನೆಂಟರು ಸ್ನೇಹಿತರು ಬರುವರಿದ್ದರು. ಹೆಂಗಸರೆಲ್ಲ ತಮ್ಮ ತಮ್ಮ ಬ್ಯಾಗು ತೆಗೆದು ಜರಿಸೀರೆ ಹೊರಗೆ ತೆಗೆದು ಭಯಂಕರವಾದ ಜಿಜ್ಞಾಸೆಯಲ್ಲಿ ತೊಡಗಿದ್ದರು. ಹಳ್ಳಿಯಿಂದ ಬಂದ ಬಂದ ಅವರಿಗೆಲ್ಲ ಸಂಜೆ ಬರುವ ಪೇಟೆ ಹೆಂಗಸರ ಎದುರು ತಮ್ಮ ಸೀರೆ ಹೇಗೆ ಕಾಣುತ್ತದೆ ಎಂಬ ಆತಂಕ. ಒಬ್ಬರಿಗೊಬ್ಬರು ಯಾವುದು ಉಡಲೆ? ಈ ಬಣ್ಣ ಎಸಿತನೆ? ಯಂಗೆ ಈ ಕಲರ್ ಒಪ್ಪತಿಲ್ಯನ ಅಲ್ದನೆ? ಹೀಗೆಲ್ಲ ಚರ್ಚಿಸಿ ಪರಸ್ಪರರ ಸೀರೆಗಳ ಅವಲೋಕನ,ಪರಿಶೀಲನೆ,ವಿಮರ್ಶೆ ಎಲ್ಲಾ ಮುಗಿಸಿ ತಯಾರಾಗಬೇಕಾದರೆ ಬಡಪಾಯಿ ಗಂಡಸರು ನೂರು ಸಲ ಹೊತ್ತಾತು ಹೊಂಡರೆ ಎಂದು ಗದರಿಸಿ ಕಡೆಗೆ ಹಿರಿಯನಾದ ಸಂಕದಮನೆ ಅಜ್ಜ ದೊಡ್ಡ ಆವಾಜಲ್ಲಿ ಕೂಗಬೇಕಾಯಿತು. ಬೈಸಿಕೊಂಡ ಹೆಂಗಸರೆಲ್ಲ ತಮ್ಮತಮ್ಮಲ್ಲೇ ಇಳಿದನಿಯಲ್ಲಿ ಬೈದುಕೊಂಡರು ಈ ಗಂಡಸ್ರಿಗೆ ಎಂತೇ ಕುಂಡೆ ಮೇಲೊಂದು ಪ್ಯಾಂಟು ಏರಿಸಿಕ್ಯಂಡ ಹೊಂಟ. ಕವಳದ ಕಲೆ ಬಿದ್ದ ಅಂಗಿ ಹೇಳೂ ನೋಡತ್ವಿಲ್ಲೆ ಅಂತೂ ಛತ್ರ ಸೇರಿ ಊಟ ಮಾಡಿ ಎಲೆ ಅಡಿಕೆ ಹಾಕಿಕೊಂಡು ದೊಡ್ಡ ಹಾಲಲ್ಲಿ ಹಾಕಿದ ಕಂಬಳಿ ಮೇಲೆ ಕೂತು ಪಟ್ಟಾಂಗ ಹೊಡೆದಿದ್ದೇ ಹೊಡೆದಿದ್ದು. ಹಳೆ ಕಾಲದ ಮಳೆಗಾಲದ ಮದುವೆಗಳು ಕತ್ತಲೆ ತುಂಬಿದ ಮನೆಗಳಲ್ಲಿ ಗಡಿಬಿಡಿಯಲ್ಲಿ ಆಗುತ್ತಿದ್ದ ಅದ್ವಾನಗಳು ಎಲ್ಲವನ್ನು ಅಜ್ಜ-ಅಜ್ಜಿಯರು ಒಬ್ಬೊಬ್ಬರಾಗಿ ನೆನೆಪಿಸಿಕೊಂಡು ಹೇಳುತ್ತಿದ್ದರೆ ಧ್ರತಿ ಹಾಗೂ ಅವಳ ವಯೋಮಾನದವರಿಗೆ ಮಜವೋ ಮಜ. ಹೋ ಅಂತ ನಕ್ಕಿದ್ದೇ ನಕ್ಕಿದ್ದು. ಅಲ್ಲೇ ಜಮಖಾನೆ ಮೇಲೆ ಮಲಗಿದ ಪಾಪುನ ಕಡೆ ಲಕ್ಷವೇ ಇಲ್ಲದಷ್ಟು ಹರಟೆಯ ಅಮಲು ಏರಿತ್ತು. ಅಪರೂಪಕ್ಕೆ ಜನ ಸಿಕ್ಕರೆ ಹೀಂಗೆ ಸೈ ಎಂದು ಶರಾ ಬರೆದು ಸಂಜೆಯ ತಯಾರಿಗೆ ಶುರುವಿಡಲು ಖಡಕ್ ಚಾ ಬರಬೇಕಾಯಿತು.

ಅಲ್ಲೇ ಛತ್ರದ ರೂಮು ಸೇರಿಕೊಂಡು ಹೆಂಗಸರು ಸೀರೆ ಹೆರಳು ಮೇಕಪ್ಪು ಅಂತ ತಯಾರಾದರೆ ಗಂಡಸರು ಡೆಕೊರೇಶನ್ ಮಾಡುತ್ತಿರುವವರ ಕೈ ಚಳಕ ನೋಡುತ್ತಿದ್ದರು. ಸಂಜೆ ಒಬ್ಬೊಬ್ಬರೇ ಬರಲಾರಂಭಿಸಿದರು. ಪಾಪುಗೆ ಬಂಗಾರ ಬಣ್ಣದ ಕಸೂತಿ ಮಾಡಿದ ಕೆಂಪು ಕುರ್ತಾ ಪೈಜಾಮು ತೊಡಿಸಿದ್ದರು. ಅವನಿಗೆ ಬಟ್ಟೆ ಹಾಕಿದ ಚಿತ್ರಭಾನು ಥಟ್ಟನೆ ಅವನ ಹೊಸ ಡೈಪರ್ ಪ್ಯಾಕು ಮನೆಯಲ್ಲೇ ಬಿಟ್ಟು ಬಂದಿದ್ದು ನೆನಪಿಸಿಕೊಂಡಳು. ಈ ಬ್ಯಾಗಿನಲ್ಲಿದ್ದ ಹಳೆಯ ಪ್ಯಾಕಿನಲ್ಲಿ ಉಳಿದಿದ್ದ ಒಂದನ್ನು ಈಗ ಹಾಕಿದಳು. ಅಲ್ಲೇ ಇದ್ದ ಧ್ರತಿ ತಾನು ಹೋಗಿ ಹತ್ತಿರವಿರುವ ಯಾವುದಾದರೂ ಮೆಡಿಕಲ್ ಶಾಪಿಂದ ತರುತ್ತೇನೆ ಎನ್ನುತ್ತ ಹೊರಬಂದಳು. ಆ ಛತ್ರದಿಂದ ಸುಮಾರು ದೂರ ಬಂದರೂ ಒಳ್ಳೆಯ ಅಂಗಡಿಗಳು ಕಾಣಲಿಲ್ಲ. ಅಲ್ಲೇ ಎಡಕ್ಕೆ ಹೊರಳಿದ ಕ್ರಾಸಿನಲ್ಲಿ ಒಂದು ಕಾಂಪ್ಲೆಕ್ಸು ಕಂಡಂತಾಗಿ ತಿರುಗಿದಳು. ಆ ಕಾಂಪ್ಲೆಕ್ಸನಲ್ಲಿ ಮೆಡಿಕಲ್ ಶಾಪು ಇತ್ತು ಮೆಟ್ಟಿಲು ಹತ್ತಿ ಹೋಗಿ ಖರೀದಿ ಮಾಡಿ ಕೆಳಗಿಳಿಯುತ್ತಿರುವಾಗ ಥಟ್ಟನೆ ಎದುರು ಬಂದ ಮಿಲಿಂದನನ್ನು ಕಂಡು ಅವಕ್ಕಾಗಿ ಬಿಟ್ಟಳು. ಅಲ್ಲಿ ಅವಳನ್ನು ನೋಡಿ ಮಿಲಿಂದನೂ ಚಕಿತನಾದ. ಅರೆ ನೀವಿಲ್ಲಿ ಅಂದ. ಇಲ್ಲೊಂದು ಫಂಕ್ಷನ್ ಇತ್ತು. ಬೆಳಿಗ್ಗೆ ಬಂದೆ ಅಂದಳು. ನಾವು ಕಾರಲ್ಲಿ ಮನೆಗೆ ಹೋಗ್ತಾ ಇದ್ವಿ. ಅನಲಾಗೆ ಬಿ.ಪಿ ವೇರಿಯೇಷನ್ ಆಗಿ ತಲೆ ನೋಯ್ತಾ ಇತ್ತು. ಗುಳಿಗೆ ತರೋಕೆ ಬಂದೆ. ಅವಳು ಕಾರಲ್ಲೇ ಕೂತಿದ್ದಾಳೆ ಎಂದ. ಅವಳ ಹೆಸರು ಕೇಳಿ ಒಂಥರಾ ಅನ್ನಿಸಿ ಧ್ರತಿ ಬರ್ತೀನಿ ಅನ್ನುತ್ತ ಬಲಕ್ಕೆ ತಿರುಗಿದಳು ಅಷ್ಟೆ. ಚಾಕೊಬಾರ ಹಿಡಿದು ಕಾಂಪ್ಲೆಕ್ಸಿಂದ ಓಡುತ್ತ ಕೆಳಗೆ ಇಳಿದು ಬರುತ್ತಿದ್ದ ಸಣ್ಣ ಹುಡುಗನೋರ್ವ ಡಿಕ್ಕಿ ಹೊಡೆದ. ಧ್ರತಿಯ ಬಾದಾಮಿ ರೇಶಿಮೆ ಸೀರೆಯ ಮೇಲೆ ಕಂದುಬಣ್ಣದ ಐಸುಕ್ರೀಂ ತುಂಡೊಂದು ಮೆತ್ತಿಕೊಂಡು ಬಿಟ್ಟಿತು. ತನ್ನ ಐಸುಕ್ರೀಂ ನಷ್ಟಕ್ಕೆ ಪೆಚ್ಚಾದ ಹುಡುಗ ಅಲ್ಲಿಂದ ಓಡಿಬಿಟ್ಟ. ಅನಿರೀಕ್ಷಿತ ಘಟನೆಯಿಂದ ತಬ್ಬಿಬ್ಬಾದ ಧ್ರತಿ ನೀರಿಗಾಗಿ ಕಣ್ಣಾಡಿಸಿದಳು. ನಾಕು ಹೆಜ್ಜೆ ಮುಂದೆ ಸಣ್ಣದೊಂದು ತಗಡು ಶೆಡ್ಡಿನ ಟೀ ಅಂಗಡಿ ಕಂಡಿತು. ಮಿಲಿಂದನೇ ಮುಂದೆ ಹೋಗಿ ನೀರು ಕೇಳಿ ಇಸಿದುಕೊಂಡ. ಪ್ಲಾಸ್ಟಿಕ್ ಜಗ್ಗಿನೊಳಗಿನ ನೀರನ್ನು ಧ್ರತಿಯ ಕೈಗೆ ಬಗ್ಗಿಸಿದ. ಒಂದು ಕೈಲಿ ಡೈಪರ್ ಪ್ಲಾಸ್ಟಿಕ್ ಹಿಡಿದಿದ್ದ ಧ್ರತಿ ಮತ್ತೊಂದು ಕೈಲಿ ಸೀರೆಯನ್ನು ಸ್ವಚ್ಛ ಮಾಡಿಕೊಳ್ಳುತ್ತ ತಲೆ ತಗ್ಗಿಸಿಕೊಂಡಿದ್ದಳು. ಕೊಂಚ ಇರಿಸು ಮುರಿಸಿನ ಭಾವದಲ್ಲಿ ಅನ್ಯ ಮನಸ್ಕಳಾಗಿದ್ದ ಅವಳಿಗೆ ಅಲ್ಲಿಗೆ ತನ್ನ ಗಂಡನನ್ನು ಹುಡುಕುತ್ತ ಅನಲಾ ಬಂದಿದ್ದಾಗಲೀ ಗಂಡನೊಟ್ಟಿಗೆ ಧ್ರತಿಯನ್ನು ಕಂಡು ಪಿತ್ಥ ಕೆರಳಿ ಥರಥರ ನಡುಗುತ್ತ ನಿಂತಿದ್ದಾಗಲೀ ಗಮನಕ್ಕೇ ಬಂದಿರಲಿಲ್ಲ. ಜನ್ಮಜನ್ಮಾಂತರದ ಆಕ್ರೋಷವನ್ನೆಲ್ಲ ರಟ್ಟೆಗೆಳೆದುಕೊಂಡು ಅನಲಾ ರಪ್ಪನೆ ಧ್ರತಿಯ ಕೆನ್ನೆಗೆ ರಾಚಿದಳು. ಹೆಂಡತಿಯ ಹಟಾತ್ ಪ್ರವೇಶದಿಂದ ಕಂಗಾಲಾದ ಮಿಲಿಂದ ಅನಲಾ ಏನಿದು ಬಿಡು ಎಂದು ಅವಳ ಕೈ ಹಿಡಿದೆಳೆಯಲು ಬಂದ. ಅದಾಗಲೇ ಆವೇಶದ ತುಟ್ಟ ತುದಿಗೇರಿದ್ದ ಅನಲಾ ಕಣ್ಣರಳಿಸಿ ಕೈ ಚಾಚಿ ಗೆಟೌಟ ಎಂದು ಹೂಂಕರಿಸಿದಳು. ಧ್ರತಿಯ ಕಡೆ ತಿರುಗಿ ಏನೇ ತ್ರಿಪುರ ಸುಂದರಿ ನನ್ನ ಗಂಡನಿಗೆ ಅದೇನು ಮಾಯ ಮಾಡಿದೀಯಾ ಯಾವಾಗ ನೋಡಿದರೂ ನಿಮ್ಮ ಊರು- ನಿಮ್ಮ ಮನೆ-ಜನ ಎಲ್ಲ ಹೊಗೊಳೋದೇ ಹೊಗೊಳೋದು. ಅವನ ಮನಸು-ಕನಸು ಎಲ್ಲ ಆಕ್ರಮಿಸಿಕೊಂಡಿದಿಯಾ. ನಾಚ್ಕೆ ಆಗೊಲ್ಲಾ ನಿಂಗೆ ಹೀಗೆ ಬೇರೆಯವ್ರ ಬದುಕಲ್ಲಿ ಆಟ ಆಡೊದಕ್ಕೆ. ಹೇಗೋ ಸಾವರಿಸಿಕೊಂಡ ಧ್ರತಿ ಏದುಸಿರು ಬಿಡುತ್ತಾ ಹೇಳಿದಳು. ನೋಡಿ ನೀವು ತಪ್ಪು ತಿಳಿದುಕೊಂಡಿದ್ದೀರಾ. ನಾನು ಇಲ್ಲಿ ಇವ್ರನ್ನು ನೋಡಿದ್ದು ಆಕಸ್ಮಿಕ. ಮಿಲಿಂದ ಹೆಂಡತಿಯ ಕೈ ಹಿಡಿದು ಗೋಗರೆಯುತ್ತ ಬಾರೆ ಹೋಗೋಣ ಎನ್ನುತ್ತಿದ್ದ. ಗಂಡನನ್ನು ನೋಡಿ ಮತ್ತಷ್ಟು ಸಿಟ್ಟೇರಿದ ಅನಲಾ ತನ್ನೆಲ್ಲ ಶಕ್ತಿ ಹಾಕಿ ಅವನನ್ನು ಧಡಾರನೆ ನೂಕಿ ಬಿಟ್ಟಳು. ಧ್ರತಿಯ ಕಡೆ ತಿರುಗಿ ನಿನ್ನನ್ನು ಸಾಯಿಸಿದರೆ ಮಾತ್ರ ಈ ಸಮಸ್ಯೆಗೆ ಪರಿಹಾರ ಸಿಗೋದು ಎಂದವಳೇ ಗಬಕ್ಕನೆ ಕುತ್ತಿಗೆಗೆ ಕೈ ಹಾಕಿದಳು. ಇಂಥದೊಂದು ಸನ್ನಿವೇಶವನ್ನು ನೋಡಿಯೂ ಗೊತ್ತಿಲ್ಲದ ಧ್ರತಿ ಪ್ರತಿಭಟನೆಯ ಪ್ರಯತ್ನವನ್ನೂ ಮಾಡದೇ ನಿಷ್ಕ್ರಿಯಳಾಗಿಬಿಟ್ಟಿದ್ದಳು. ಅನಲಾ ಧ್ರತಿಯನ್ನು ಹಿಂದೆ ತಳ್ಳಿ ಮರದ ಬೆಂಚಿನ ಮೇಲೆ ಒರಗಿಸಿದ್ದಳು. ತನ್ನ ಮುಖದ ಮೇಲೆ ಬಾಗಿದ ಅನಲಾಳ ಕಣ್ಣಿನ ಕ್ರೌರ್ಯ ಬೆರಳಿನ ಆವೇಶ ನೋಡಿದ ಧ್ರತಿಗೆ ತಾನು ಸಾಯುವುದು ನಿಕ್ಕಿ ಅನ್ನಿಸಿತು. ಆದರೂ ಅವಳ ಕಣ್ಣೊಳಗೆ ಕಣ್ಣಿಟ್ಟು ನಾನು ಸತ್ತರೆ ನಿಮ್ಮ ಗಂಡ ನಿಮಗೆ ಸಿಕ್ತಾರಾ ಅಂತ ಕೇಳಿದಳು. ಥಟ್ಟನೆ ಅನಲಾಳ ಹಿಡಿತ ಸಡಿಲವಾಯಿತು. ಅವಳ ಕಣ್ಣ ಗುಡ್ಡೆಯಲ್ಲೊಂದು ನೀರ ಚಕ್ರತೀರ್ಥ ಗಿರಿಗಿರಿ ತಿರುಗತೊಡಗಿತು. ಹತಾಶೆಯ ಧ್ವನಿಯಲ್ಲಿ ಕಿರುಚಿದಳು. ಇಲ್ಲಾ ಇಲ್ಲಾ ಅವನು ಈ ಜನ್ಮದಲ್ಲಿ ವಾಪಸ್ ಬರದೇ ಇರುವಷ್ಟು ಮುಂದೆ ಹೋಗಿದ್ದಾನೆ. ನಿನ್ನ ಕೊಂದು ನಾನು ಆತ್ಮಹತ್ಯೆ ಮಾಡಿಕೋತೇನೆ ಎಂದಳು. ಮೊದಲಿನ ಆವೇಶ ಕೊಂಚ ತಗ್ಗಿತ್ತು. ವಿಷವಿಳಿದಮೇಲೂ ಹೆಡೆ ಹೊಡೆಯುವ ಹಾವಂತೆ ಪೂತ್ಕರಿಸಿದಳು ಪೋಲಿಸ್ ಸ್ಟೇಷನ್ನಿಗೆ ಹೋಗಿ ಕಂಪ್ಲೇಂಟು ಕೊಡ್ತೇನೆ. ಈ ಊರಿಂದ ಇವತ್ತು ನೀನು ವಾಪಸು ಹೇಗೆ ಹೋಗ್ತೀಯೋ ನೋಡೋಣ. ಧ್ರತಿಯ ಕುತ್ತಿಗೆಯ ಕೆಳಗಿನ ಸೆರಗಿಗೆ ಕೈ ಹಾಕಿ ಎಳೆದಳು. ಪಿನ್ನು ಕಿತ್ತು ಹೋಗಿ ಸೆರಗು ಕಳಚಿಕೊಂಡಿತು. ಪುಣ್ಯಕ್ಕೆ ಟೀ ಅಂಗಡಿಯಲ್ಲಿ ಗಿರಾಕಿಗಳಿರಲಿಲ್ಲ. ಸಾವರಿಸಿಕೊಂಡು ಎದ್ದು ಬಂದ ಮಿಲಿಂದ ಹೆಂಡತಿಯನ್ನು ರಮಿಸಲು ಯತ್ನಿಸಿದ. ಅವನಿಂದ ತಪ್ಪಿಸಿಕೊಂಡ ಅನಲಾ ಓಡಿ ಹೋಗಿ ಕಾರು ಹತ್ತಿಕೊಂಡು ಎಲ್ಲಿಗೋ ಹೋಗಿಬಿಟ್ಟಳು. ಅವಳು ಹುಚ್ಚಿ ತರಹ ಏನು ಬೇಕಾದ್ರೂ ಮಾಡುತ್ತಾಳೆ. ನೀವು ಇಲ್ಲಿಂದ ಎಲ್ಲಿಗಾದ್ರೂ ಹೋಗಿ ತಪ್ಪಿಸಿಕೊಳ್ಳಿ. ಇಲ್ಲಿ ಹತ್ರದಲ್ಲಿ ಇರಬೇಡಿ. ಎಂದು ಅವಸರವಸರವಾಗಿ ಹೇಳಿದ ಮಿಲಿಂದ ಆಟೋ ಒಂದನ್ನು ನಿಲ್ಲಿಸಿ ಕಾರನ್ನು ಹಿಂಬಾಲಿಸುವಂತೆ ಹೇಳಿ ಹೊರಟ. ಧ್ರತಿಗೆ ಜಡಿಮಳೆಯ ಹೊಳೆಯಲ್ಲಿ ಕಾಲು ಜಾರಿ ಬಿದ್ದು ಎತ್ತೆತ್ತಲೋ ಕೊಚ್ಚಿಕೊಂಡು ಹೋಗುತ್ತಿರುವಂತೆ ಅನ್ನಿಸುತ್ತಾ ಇತ್ತು. ಎಲ್ಲಿದ್ದೇನೆ, ಏನು ಮಾಡುತ್ತಿದ್ದೇನೆ, ನಿದ್ರೆಯೊ ಎಚ್ಚರವೋ ಒಂದೂ ತಿಳಿಯದಂತಾಗಿತ್ತು. ಟೀ ಅಂಗಡಿಯವ ಅಮ್ಮಾ ನೀರು ಬೇಕಾ ಎಂದು ಕೇಳಿದ. ಅಡ್ಡಡ್ಡ ತಲೆಯಾಡಿಸಿದಳು. ಅಷ್ಟರಲ್ಲಿ ಮೊಬೈಲ ರಿಂಗಾಯಿತು. ಪ್ರದ್ಯುಮ್ನನ ಫೋನು. ವಿಷಯ ತಿಳಿದ ಅವನು ನೀನು ತಕ್ಷಣ ಹೊರಡು. ಧನಂಜಯನಿಗೆ ನಾನೇ ಫೋನು ಮಾಡಿ ಅಮ್ಮೊಮ್ಮನ ಅನಾರೋಗ್ಯದ ನೆಪ ಹೇಳುತ್ತೇನೆ. ಜೊತೆಗೆ ಹೋದವರು ಬ್ಯಾಗು ತರುತ್ತಾರೆ ಅಂದ. ಎದುರಿಗೆ ಬಂದ ರಿಕ್ಷಾಕ್ಕೆ ಕೈ ಮಾಡಿಹತ್ತಿದ ಧ್ರತಿ ಅದೇ ಸ್ಥಿತಿಯಲ್ಲಿ ಬಸ್ಸು ಹಿಡಿದು ಊರಿಗೆ ಬಂದಳು. ಸ್ಲೀಪರ್ ಅಲ್ಲದ ಸಾದಾ ಬಸ್ಸು. ಹೇಗಿದ್ದರೂ ನಿದ್ದೆಯಂತೂ ಹತ್ತಿರ ಸುಳಿಯುವ ಸಾಧ್ಯತೆ ಇರಲಿಲ್ಲ. ಕೆನ್ನೆ ಕುತ್ತಿಗೆಗಳು ಚುರುಚುರು ಉರಿಯುತ್ತಿದ್ದವು. ಕಣ್ಣು ಮುಚ್ಚಿದಾಗೊಮ್ಮೆ ಚೂರಿಯ ಅಲುಗಿನಂತಹ ಅನಲಾಳ ಕಣ್ಣು ಎದುರಿಗೆ ಬಂದಂತಾಗಿ ಬೆಚ್ಚಿ ಬೀಳುತ್ತಿದ್ದಳು. ಹಾಗೂ ಹೀಗೂ ಮನೆ ಸೇರುವಷ್ಟರಲ್ಲಿ ಜ್ವರ ಬಂದಿತ್ತು. ಅಮ್ಮೊಮ್ಮ ಕಟಕರೋಹಿಣ ಕಷಾಯ ಮಾಡಿ ಕೊಟ್ಟಳು. ಕುಡಿದು ಎರಡೇ ನಿಮಿಷಕ್ಕೆ ಗೊಳ್ಳನೆ ವಾಂತಿ ನುಗ್ಗಿ ಬಂತು. ಹಿತ್ಲಾಕಡೆ ಮೋರಿಯೆದರು ಕಾರಿಕೊಳ್ಳುವಾಗ ಬರೀ ನೀರು ನೀರು ವಾಂತಿ ನೋಡಿದ್ದೇ ನೆನಪಾಯಿತು ತಾನು ನಿನ್ನೆ ಮದ್ಯಾಹ್ನ ಊಟ ಮಾಡಿದ ಮೇಲೆ ಏನೂ ತಿಂದೇ ಇಲ್ಲ ಅಂತ. ಮನೆ ಗುಡಿಸಲು ಬಂದ ಮಂಜಿ ಇವಳ ಪ್ಲ್ಯಾಸ್ಟಿಕ್ ಬ್ಯಾಗ ನೋಡಿ ಇದೆಂತದ್ರಿ ಅಮ್ಮಾ ಎಂದು ಕೇಳಿದಳು. ಪಾಪೂಗೆ ಕೊಂಡ ಡೈಪರ್ ಹಾಗೇ ಉಳಿದಿತ್ತು. ಪಾಪೂನ ನೆನಪಾದೊಡನೆ ಮನಸು ಮೃದುವಾಯ್ತು. ಅಂದು ಬೆಳಿಗ್ಗೆ ರಾಶಿ ರಾಶಿ ನೆಂಟರನ್ನು ನೋಡಿದ್ದೇ ಗೊಂದಲಗೊಂಡ ಪಾಪೂ ತನ್ನ ಅಮ್ಮನನ್ನು ಇವರೆಲ್ಲ ಊರಿಗೆ ಕರೆದೊಯ್ದರೆ ಅಂತ ಹೆದರಿಕೊಂಡು ಚಿತ್ರಭಾನುವಿನ ಸೊಂಟ ಬಿಟ್ಟು ಇಳಿದಿರಲೇ ಇಲ್ಲ. ಯಾಕೋ ಪಾಪುವಿನ ಮುಖದ ಹಿಂದೇ ಅನಲಾಳ ಮುಖ ತೇಲಿ ಬಂತು. ಪ್ರತಿ ಸಲದ ಹಾಗೆ ಹೆದರಿಕೆ ಆಗಲಿಲ್ಲ. ಹೆದರಿ ಅಳುವ ಪಾಪುನ ಹಾಗೆ ಕಂಡಳು. ಒಳಬಂದ ಪ್ರದ್ಯುಮ್ನ ತಾನು ಬೆಂಗಳೂರಿಗೆ ಹೋಗಿ ಅನಲಾಳನ್ನು ಚೆನ್ನಾಗಿ ದಬಾಯಿಸಿ ಬರುತ್ತೇನೆ ಎಂದ. ಧ್ರತಿ ಬೇಡವೇ ಬೇಡ ಎಂದಳು.

ಅದಾಗಿ ಐದನೇ ದಿನ ಮದ್ಯಾಹ್ನದ ಅಡಿಗೆ ಮುಗಿಸಿ ಧೃತಿ ಊಟಕ್ಕೆ ಬಾಳೆ ಹಾಕುವ ತಯಾರಿಯಲ್ಲಿದ್ದಳು.ಕಬ್ಬಿನಾಲೆಮನೆ ಶುರುವಾಗಿದ್ದರಿಂದ ರಾತ್ರಿ ಗಾಣವಾಡಿಸಲು ಕಬ್ಬು ಕಡಿಸಿ ರಾಶಿ ಹಾಕಿಸಿದ ಪ್ರದ್ಯುಮ್ನ ಗದ್ದೆಯಿಂದ ಬೆವರುತ್ತ ಬಂದು ಸ್ನಾನಕ್ಕಿಳಿದಿದ್ದ. ಕಬ್ಬಿನ ಹಾಲಿನ ತೊಡದೇವು ಅಪರೂಪವೆಂದು ಬೆಳಗಿಂದಲೇ ಹಿತ್ಲಾಕಡೆ ಕೂಡೊಲೆಯ ಮೇಲೆ ಗಡಿಗೆ ಕಂವುಚಿಕೊಂಡು ಕೂತ ಅಮ್ಮೊಮ್ಮ ಅದೇ ಆಗ ಅಂದಿಗಿಷ್ಟೇ ಸಾಕಪ್ಪ ಎಂದು ಬೆಂಕಿ ಹೊರಗೆಳೆದು ನೀರು ಹಾಕಿ ಆರಿಸಿ ಬೆನ್ನು ಹೋತೆ ಎನ್ನುತ್ತ ಚಿಟ್ಟೆಯ ಕಂಬಕ್ಕೊರಗಿ ಕೂತು ಕಾಲು ನೀಡಿಕೊಂಡಿದ್ದಳು. ಮೋಟಾರು ಸೈಕಲ್ಲಿನ ಶಬ್ದವಾಗತೊಡಗಿತು. ತಮ್ಮ ಅಂಗಳದಲ್ಲೇ ನಿಂತಂತೆ ಕೇಳಿದಾಗ ಧೃತಿ ಜಗಲಿಗೆ ಬಂದಳು. ಬಾಡಿಗೆ ಬೈಕಿನ ಹಿಂದಿನ ಸೀಟಿನಿಂದ ಕೆಳಗಿಳಿಯುತ್ತಿದ್ದ ಮಿಲಿಂದನನ್ನು ಕಂಡವಳೇ ಯಮದರ್ಶನವಾದಂತೆ ಮರಗಟ್ಟಿ ನಿಂತುಬಿಟ್ಟಳು. ಹೇಗಿದ್ದೀರಿ? ಚೆನ್ನಾಗಿದ್ದೀರಾ? ಎಲ್ರೂ ಎಲ್ಲಿದ್ದಾರೆ? ಎನ್ನುತ್ತ ಚಪ್ಪಲಿ ಕಳಚಿದ ಮಿಲಿಂದ ಹಳೆ ಸಲುಗೆಯಿಂದ ಸೀದಾ ಒಳಗೇ ಬಂದ. ಯಾರೆ ತಂಗಿ ಬಂದವು? ಎಂಬ ಅಮ್ಮೊಮ್ಮನ ಧ್ವನಿ ಹಿತ್ತಿಲ ಚಿಟ್ಟೆಯಿಂದ ಕೇಳಿದೇ ತಡ ಮಿಲಿಂದ ಸೀದಾ ಅಲ್ಲಿಗೇ ನಡೆದ. ಬವಳಿ ಬಂದಂತಾದ ಧೃತಿ ಗಡಗಡ ನಡುಗುತ್ತ ಅಡಿಗೆ ಮನೆಯೊಳಗೆ ಕುಸಿದು ಕೂತಳು. ದೇವರೆ ಇವನು ಮತ್ಯಾಕೆ ಬಂದ? ಈಗಾಗಿದ್ದೇ ಸಾಲದೆ? ಏನಿಲ್ಲದೆ ಎಂತೆಲ್ಲದೇ ಇವನ ಹೆಂಡತಿ ತಮ್ಮನ್ನು ಹುರಿದು ಮುಕ್ಕುತ್ತಿದ್ದಾಳೆ. ಇನ್ನು ಇವ ಇಲ್ಲಿ ಬಂದಿದ್ದು ತಿಳಿದರೆ ತನ್ನ ಕೊಲೆ ಮಾಡಿಬಿಡುತ್ತಾಳೆ. ಮೈ ಒರೆಸಿಕೊಳ್ಳುತ್ತ ಬಂದ ಪ್ರದ್ಯುಮ್ನನಿಗೂ ವಿಪರೀತ ಆಶ್ಚರ್ಯ ನಾನು ಸ್ನೇಹಿತರ ಮದುವೆಗೆ ಶಿರಸಿಗೆ ಬಂದಿದ್ದೆ.ನಿಮ್ಮೆಲ್ಲರ ಜೊತೆ ಒಂಚೂರು ಮಾತಾಡೋದಿತ್ತು. ಅದಕ್ಕೆ ಬಾಡಿಗೆ ಬೈಕು ಮಾಡಿಕೊಂಡು ಇಲ್ಲಿಗೆ ಬಂದಿದ್ದೇನೆ. ಇವತ್ತೇ ವಾಪಸ್ ಹೋಗ್ಬೇಕು. ಎಲ್ರೂ ಒಂದ್ಸಲ ಇಲ್ಲೇ ನಡುವಳಕ್ಕೆ ಬನ್ನಿ ಎನ್ನುತ್ತ ಅಮ್ಮೊಮ್ಮನ ಕೈ ಹಿಡಿದು ಒಳಗೆ ಬಂದ .ಪ್ರದ್ಯುಮ್ನ ಬಂದು ಕರೆದಾಗ ಹೊರಬಂದ ಧೃತಿಗೆ ತಡೆದುಕೊಳ್ಳಲಾರದೇ ಅಳು ನುಗ್ಗಿ ಬರತೊಡಗಿತು. ಪ್ರದ್ಯುಮ್ನ ಆವೇಶ ಬಂದವನಂತೆ ಭುಸುಗುಟ್ಟುತ್ತ ಕೇಳಿದ ನಿಮ್ಗೆ ನಾವು ಆರಾಮಾಗಿರೋದು ಇಷ್ಟ ಇಲ್ವಾ? ನಿಮ್ಗೆ ನಾವೇನು ಅನ್ಯಾಯ ಮಾಡಿದೀವಿ?ನಮ್ಮ ಪಾಡಿಗೆ ನಾವು ತಣ್ಣಗೆ ಜೀವನ ಮಾಡ್ಕೊಂಡಿದ್ವಿ ನಿಮ್ಗೆ ಉಪಕಾರ ಮಾಡೋಕೆ ಹೋಗಿ ನಮ್ಮ ಮೇಲೆ ಕೆಸರು ಎರಚಿಕೊಂಡಂತಾಗಿದೆ. ಅವನ ಮಾತಿಗೆ ಪ್ರ ಮಿಲಿಂದ ‘ಸರ್. ನೀವು ಹೇಳೋದು ನ್ಯಾಯವಾಗಿದೆ. ನಿಮ್ಮ ಜಾಗದಲ್ಲಿ ಯಾರೇ ಇದ್ರೂ ನಮ್ಮನ್ನು ಕ್ಷಮಿಸೊಲ್ಲ. ನನ್ನ ಹೆಂಡ್ತಿ ನಡೆದುಕೊಂಡ ರೀತಿಗೆ ನೀವೆಲ್ಲ ತುಂಬ ನೋವು ತಿನ್ನೋ ಹಾಗಾಯ್ತು. ನಾನು ಕ್ಷಮೆ ಕೇಳೋಕೆ ಬಂದಿದೀನಿ. ನನಗಂತೂ ನಿಮ್ಮ ಮನೆ ಅಂದ್ರೆ ನಂದೇ ಮನೆ ಅಂತ ಅನ್ನಿಸುತ್ತೆ. ಈ ಹಳ್ಳಿ, ಪ್ರಕೃತಿ,ನಿಮ್ಮೆಲ್ಲರ ಸ್ವಭಾವ, ಪ್ರೀತಿ ನಂಗೆ ಜೀವನ್ಮಖಿ ಜಗತ್ತು ತೋರಿಸ್ತು. ಇವೆಲ್ಲ ನನ್ನ ಮನಸ್ನಲ್ಲಿ ತನ್ನದೇ ಆದ ಜಾಗ ಪಡೆದುಕೊಂಡಿವೆ. ಮನೆಯಲ್ಲೊಂದು ದೇವರ ಕೋಣೆ ಇರುತ್ತಲ್ಲ ಹಾಗೆ. ದಯವಿಟ್ಟು ನನಗೆ ಅದನ್ನ ಹಾಗೇ ಇಟ್ಕೊಳೊಕೆ ಅವಕಾಶ ಮಾಡಿಕೊಡಿ. ಸದ್ಯಕ್ಕೆ ತಾಳ್ಮೆ ತಂದುಕೊಂಡು ನಾನು ಸುಮ್ಮನೆ ಇದೀನಿ. ಒಡೆದ ದಾಂಪತ್ಯದ ಕುಡಿಯಾಗಿರುವ ಅನಲಾಗೆ ಕಾರ್ಯ ಕಾರಣಗಳಿಲ್ಲದ ಆತ್ಮೀಯತೆ ನಂಬಿಕೆಗೆ ನಿಲುಕುತ್ತಿಲ್ಲ. ಆದ್ರೆ ಇವತ್ತಲ್ಲ ನಾಳೆ ಅವಳಿಗೆ ಸತ್ಯದ ಅರಿವಾಗುತ್ತೆ. ಪ್ರೀತಿಯ ಈ ಸ್ವರೂಪವನ್ನು ಆಕೆಗೆ ಅರ್ಥ ಮಾಡಿಸಲಿಕ್ಕೆ ಪ್ರಯತ್ನಿಸ್ತೀನಿ. ಎಲ್ಲವೂ ಸರಿ ಹೋದ್ರೆ ಮತ್ತೆ ಭೆಟ್ಟಿಯಾಗ್ತೀನಿ. ದಯವಿಟ್ಟು ನನ್ನನ್ನು ಮೊದಲಿನಂತೆ ಆತ್ಮೀಯವಾಗಿ ಸ್ವೀಕರಿಸಿ. ಎಂದು ಅಮ್ಮೊಮ್ಮನಿಗೆ ನಮಸ್ಕಾರ ಮಾಡಿದ. ಋಣಾನುಬಂಧೇನ ಪತಿ ಪತ್ನಿ ಸುತಾಲಯ:ಋಣ ಇಲ್ಲದೇ ಯಾವ್ದೂ ಸೇರೋದಿಲ್ಲ ಋಣ ಮುಗಿದ ಮೇಲೆ ಉಳಿಯೋದೂ ಇಲ್ಲ. ನಿನಗೆ ಯಾವಾಗ ಬೇಕಾದ್ರೂ ಬಾರಪ್ಪ. ಇದು ನಿಂದೇ ಮನೆ. ಕಾಲಾಯಾ ತಸ್ಮೆ ನಮಃ ಎಲ್ಲಾ ಒಳ್ಳೆದಾಗ್ತದೆ ಎಂದು ಅಮ್ಮೊಮ್ಮ ಅವನ ತಲೆ ನೇವರಿಸಿದಳು. ಪ್ರದ್ಯುಮ್ನನ ಕೈ ಕುಲುಕಿ ನಾನಿನ್ನು ಹೊರಡ್ಬೇಕು. ನನ್ನ ಸ್ನೇಹಿತರು ಊಟಕ್ಕಾಗಿ ಕಾಯ್ತಾ ಇರ್ತಾರೆ ಎನ್ನುತ್ತ ಮಿಲಿಂದ ಬೈಕು ಹತ್ತಿದ.

 

‍ಲೇಖಕರು G

November 10, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: