ಮುಗ್ಧ ಬಾಲಕಿಯ ಬೆರಗುಗಣ್ಣಿನಿಂದ..

ಸತ್ಯಬೋಧ ಜೋಶಿ

ಪುಸ್ತಕ : ಪುಟ್ಟ ಹೆಜ್ಜೆ ದೊಡ್ಡ ಕಣ್ಣು
ಲೇಖಕಿ : ಪ್ರಿಯಾ ಕೆರ್ವಾಶೆ
ಪ್ರಕಾಶಕ: ಸಪ್ನ

ಉತ್ತರ ಕರ್ನಾಟಕದವನಾದ ನನಗೆ  ಶತಮಾನಗಳಿಂದ ಕರಾವಳಿಯ ಸುತ್ತಣ ಪ್ರದೇಶಗಳಲ್ಲಿ ಆರಾಧಿಸಿಕೊಂಡು ಬರುತ್ತಿರುವ ಭೂತ, ದೈವಗಳ ಅಸ್ತಿತ್ವ, ಆಚರಣೆಯ ಕುರಿತು ಏನಾದರೂ ತುಸು ಪರಿಚಯವಾಯ್ತು ಅಂದರೆ ಅದು ಪ್ರೊ.ಎ. ವಿ ನಾವಡ, ಡಾ. ವಿವೇಕ್ ರೈ, ಚಿನ್ನಪ್ಪ ಗೌಡರಂತಹ ಸಂಶೋಧಕರ, ಪ್ರಾಧ್ಯಾಪಕರ ಪುಸ್ತಕಗಳ ಮೂಲಕವೇ, ಆನಂತರ ಇತ್ತೀಚೆಗೆ ಬಂದ ‘ಕಾಂತಾರ’ ಸಿನೆಮಾ ತನ್ನ ರಂಜನೀಯ ಚೌಕಟ್ಟಿನಡಿಯಲ್ಲಿ ಭೂತದ ಹುಟ್ಟು, ಮತ್ತು ಮಹಿಮೆಯನ್ನ ಮೈನವಿರೇಳಿಸುವ ರೀತಿಯಲ್ಲಿ ತೋರಿಸುವ ಮೂಲಕ ತುಳುನಾಡಿನ ಮಣ್ಣಿನ ಮಕ್ಕಳ ನಂಬಿಕೆಯನ್ನ  ಬಹು ಸಂಸ್ಕ್ರತಿಯ ಭಾರತವು ಬೆರಗುಗಣ್ಣಿನಿಂದ ನೋಡುವಂತಾಯಿತು.

ಹೀಗೆ ಒಂದೆಡೆಗೆ  ಹಲವು ದಶಕಗಳ ವಿದ್ವಾಂಸರ ಸಂಶೋಧನೆಗಳು ಇನ್ನೊಂದೆಡೆಗೆ ಜನಪ್ರಿಯ ಮಾಧ್ಯಮ ಸಿನೆಮಾದ  ಮೂಲಕ
ಇತರರಿಗೂ ಪರಿಚಿತವಾದ ಈ ತುಳುನಾಡ ಭೂತದ ಕೋಲ ನನಗೆ ಇತ್ತೀಚೆಗಷ್ಟೇ ಒಂದು ಮುಗ್ಧ ಬಾಲಕಿಯ ಬೆರಗುಗಣ್ಣಿನಿಂದ ನೋಡಲು ಸಿಕ್ಕಿದ್ದು “ಪುಟ್ಟ ಹೆಜ್ಜೆ ದೊಡ್ಡ ಕಣ್ಣು ” ಪುಸ್ತಕದ ಮೂಲಕ..

ಈ ಪುಸ್ತಕದಲ್ಲಿ ಒಂದೆಡೆಗೆ ಪ್ರಾಜ್ಞರ ಅನ್ವೇಷಣಾ ಶಿಸ್ತು, ಇನ್ನೊಂದೆಡೆಗೆ ಕಾಂತಾರದ ಬೆರಗು ಎರಡೂ ಮೇಳೈಸಿದ ಹೀಗೊಂದು ಮಗುವಿನ ಬಾಲ್ಯದ  ಸರಳ ಸುಂದರ ಕಥನವಿದೆ..

ಅಪ್ಪ ಭೂತ ಅಂದ್ರೆ ಎಂತ..?

ಅಜ್ಜಾ ನಾನೂ ಪಾತ್ರಿ ಆಗಬಹುದಾ!

ಭೂತಕ್ಕೆ ಅತ್ತೆ ಮಾಡಿದ ಸಾಂಬಾರು ಕೊಟ್ಟರೆ ಆಗೋದಿಲ್ವಾ!

ಕಾಗೆ ಮುಟ್ಟಿದರೆ ಅಮ್ಮ ಯಾಕೆ ಬರಬಾರದು?

ಕರ್ಣ ನಿನ್ನನ್ನ ಕಾಗೆ ಎಂದಾದರೂ ಮುಟ್ಟಿತ್ತಾ?

ಅಪ್ಪಾ ಆಕಾಶದ ತುದಿಗೆ ಹೋಗ್ಬೇಕು! ಆಕ್ತದಾ?

ಅಪ್ಪ! ಭೂತ ಅತ್ತೆಗೆ ಮಕ್ಕಳಾಗ್ತದೆ ಅಂತ ಬೊಂಡ ಕೊಟ್ಟಿತ್ತಲ್ವಾ? ಬೊಂಡ ಕುಡಿದರೆ ಮಕ್ಕಳಾಗತಾರ!

ಅಂತನ್ನುವ ಹತ್ತಾರು ಬೆರಗಿನ ಪ್ರಶ್ನೆಗಳ ಜೊತೆಗೆ ಈ ಪುಸ್ತಕದಲ್ಲಿ  ವರ್ಗ ಸಂಘರ್ಷವಿದೆ, ತಾರತಮ್ಯದ ಕುರಿತ ಧ್ವನಿಯಿದೆ, ಮುಟ್ಟು, ಮಡಿ ಮೈಲಿಗೆ, ಬಂಡಾಯವು ಇದೆ.. ಭೀತಿ,ಕೌತುಕ, ಬೆರಗಿನ ಜೊತೆ ಇಹದಷ್ಟೇ ದಿಟವೆನಿಸುವ ಅಲೌಕಿಕ ಅನುಭಾವದ ಮಿಂಚಿನ ಸಂಚಾರವು ಇದೆ. ಇವೆಲ್ಲವುದರ ಜೊತೆಗೆ  ಒಟ್ಟೂ ನಿರೂಪಣೆಯಲ್ಲಿ ಇನ್ನೂ ಕಾಪಿಟ್ಟು ಕೊಂಡ ಮುಗ್ಧತೆ ಇದೆ. ಅದೇ ನನಗೆ ಇನ್ನೂ ಬೆರಗಿನಲ್ಲಿ ಇರಿಸಿರೋದು! ಕಾರಣ ಪತ್ರಕರ್ತೆ, ನಟಿ,ಕಂಠದಾನ ಕಲಾವಿದೆಯಾದ ಪ್ರಿಯಾ ಕೆರ್ವಾಶೆ  ಸುದ್ದಿ ಮನೆಯ  ನಿತ್ಯದ ನೂರಾರು ವಿದ್ಯಮಾನಗಳ ಕಡು ಬಿಸಿಲಿನ ಸಂತೆಯಲ್ಲೇ ಕುಳಿತು ಈ ತಂಬೆಲರ ನುಡಿ ತರುವನ್ನ ನೆಟ್ಟಿದ್ದಾರೆ.

ಇಲ್ಲಿಯೇ ನನಗೊಂದು ಕಲಿಕೆ ಇರೋದು..ಕಾರಣ ನಾನು ಇತ್ತೀಚೆಗೆ ಓದಿದ ಹೆಚ್ಚು (ಎಲ್ಲವೂ ಅಲ್ಲ)  ಕಥೆಗಳಲ್ಲಿ ಶುಷ್ಕ ಪ್ರತಿಮೆಗಳ ಕೊರಡನ್ನು ಸೃಷ್ಟಿಸುವ ಭರದಲ್ಲಿ ಓದುಗನಿಗೊಂದು ಬಿಡುಗಡೆಯ ಏಕಾಂತವನ್ನೂ ಕೊಡಲಾಗದಷ್ಟು ವಸ್ತು ನಿರ್ವಹಣೆ ಕ್ಷಿಷ್ಟವಾಗುತ್ತಿರುವಾಗ ಸುದ್ದಿ ಕಣಜದಲ್ಲೇ ಕುಳಿತ ಪ್ರಿಯಾ ಅವರ ಈ ಕೃತಿ ತನ್ನ ಶುದ್ಧ ಸರಳ ಕಥನದ ಮೂಲಕ  ಓದುಗನನ್ನು ಗೌರವಿಸುತ್ತೆ. ಇದು ನನಗೂ ಹಾಗೂ ಬರೆಯಬೇಕೆನ್ನುವ  ಯಾರಿಗೆ ಆದರೂ ಖಂಡಿತ ಅನುಕರಣೀಯ.

ಈ ಪುಸ್ತಕದಲ್ಲಿ  ಕೇರಳದ ಗಡಿಯಿಂದ ಕೆರ್ವಾಶೆಯವರೆಗಿನ ಸಂಪ್ರದಾಯ, ಆಚರಣೆ, ಪರಿಸರ  ನನಗೆ ತುಸು ಹೊಸತೆನಿಸಿ ಮೊದಲ ಓದು  ತುಸು ನಿಧಾನಗತಿಯಲ್ಲಿ ಸಾಗಿದರೂ.. ಕ್ರಮೇಣ ಮತ್ತೊಮ್ಮೆ ಓದುತ್ತ ಹೋದಂತೆ, ಪೂಚಂತೆಯವರ ಕಥೆಯ ಹಾಗೆ ಇಲ್ಲಿಯ ಪಾತ್ರ, ಪರಿಸರಗಳು ನನ್ನದಾಗುತ್ತ ಹೋದವು. ಆದರೂ ಈ ಕುರಿತು ನಾನು ತುಸು ತಡವಾಗಿಯೇ ಬರೆಯುವುದರ ಹಿಂದೆ ಕೆಲಸದ ಒತ್ತಡಕ್ಕಿಂತ, ನಾನು ಏನೇ ಬರೆದರೂ  ಈ ಪುಸ್ತಕ ನನ್ನನ್ನ ಪ್ರಭಾವಿಸಿದ ಮಟ್ಟಿಗೆ ಬರೆಯಲಾರೆ ಅನ್ನುವುದೇ ಕಾರಣವಾಗಿತ್ತು. ಹಾಗಂತಲೇ ಈ ಪುಸ್ತಕವನ್ನ ಹತ್ತು ಬಾರಿಯಾದರೂ ಓದಿರಬಹುದು.. ಪ್ರತಿ ಬಾರಿ ಏನಾದರೂ ಟಿಪ್ಪಣಿ ಮಾಡಿಕೊಂಡು ಬರೆಯಬೇಕು ಅಂತಂದುಕೊಳ್ಳುವಾಗ ಮತ್ತದೇ ಕಥನದಲ್ಲಿನ ಮಗುವಿನ ಮುಗ್ಧ ಪ್ರಶ್ನೆಗಳು ಮತ್ತು ಆ ಮೂಲಕ ಘಟಿಸುವ ಮೋಡಿಗೆ  ಮನಸೋತು  ನಾನು ಏನೂ ಬರೆಯದಂತೆ  ಸುಮ್ಮನಾಗುತ್ತಿದ್ದೆ.

ಇನ್ನು ಈ ಪುಸ್ತಕ.. ಗುಡ್ಡಮ್ಮನ ಮನೆ, ಬೊಳ್ಳ, ಗುಳಿಗನ ಕಣ್ಣು, ಕಾಗೆ ಮುಟ್ಟಿದ ಅಮ್ಮ, ಸಂಕಪ್ಪ ಮತ್ತು ಗರ್ನಾಲು, ಕಳಂಜೆ ಮಲೆಯಲ್ಲಿ ಭೂತದ ಸೂಟೆ.. ಅಂತನ್ನುವ 18 ಕಥನಗಳ  ಅನುಭವ ಗುಚ್ಛವನ್ನು ಹೊಂದಿದ್ದು, ತೋಟ, ಕಾಡು, ತೋಡು ಸೂಡಿ, ನೇಮ, ಗಗ್ಗರ, ದೈವದ ಹಿನ್ನೆಲೆಯಲ್ಲಿ  ಒಬ್ಬ ಪುಟ್ಟ ಹುಡುಗಿ  ತನ್ನ ತಂದೆ, ತಾಯಿ, ಅಜ್ಜ ಅಜ್ಜಿ, ಚಿಕ್ಕಮ್ಮ… ಸಾಕು ನಾಯಿಗಳ ಜೊತೆಯ ಒಡನಾಟದ ಪ್ರಸಂಗಗಳನ್ನ ಬಿಚ್ಚಿಡುತ್ತದೆ. ಜೊತೆಗೆ ಇಲ್ಲಿಯ ಪ್ರಸಂಗಗಳಲ್ಲಿ ದೈವ ಮೂರು ಮುಕ್ಕಾಲು ಗಳಿಗೆ ಪಾತ್ರಿಯಲ್ಲಿ ಪರಕಾಯ ಪ್ರವೇಶಿಸುವದಷ್ಟೇ ಅಲ್ಲ ಸ್ವತಃ ಆ ಬಾಲಕಿಯ ಒಡನಾಟಕ್ಕೆ ಅದೃಶ್ಯವಾಗಿಯೇ ದಕ್ಕಿ ಹೋಗತ್ತೆ…!!

“ಭೂತ ಸ್ಥಾನದ ಜೋಕಾಲಿ ಕುಳಿತುಕೊಳ್ಳುವವರಿಲ್ಲದೆ ಸುಮ್ಮನೆ ನಿಂತಿತ್ತು.. ಹಿಂದಕ್ಕೆ ನೆಗೆದೆ ಯಾರೋ ಎಳೆದು ಜೋಕಾಲಿಯಲ್ಲಿ ಕೂರಿಸಿದಂತಾಯ್ತು…”

ಆದರೆ ಆ ಅನುಭವವನ್ನೂ  ಮರ ಹೂ ಬಿಡುವಷ್ಟೇ ಸಹಜವಾಗಿಸಿದ್ದಾರೆ ಪ್ರಿಯಾ ಕೆರ್ವಾಶೆ.

ಇನ್ನು ತುಂಬಾ ಬರೆಯಬೇಕು ಅಂತನ್ನಿಸಿದರೂ ಕೊನೆಯದಾಗಿ ಹೇಳ ಬಯಸೋದು ಇಷ್ಟೇ.. ಈ “ಪುಟ್ಟ ಹೆಜ್ಜೆ ದೊಡ್ಡ ಕಣ್ಣು..” ಪುಸ್ತಕದಲ್ಲಿನ ಅನುಭವ  ಕಥನಗಳಿಗೆ ದೃಶ್ಯ ಮಾಧ್ಯಮಗಳಲ್ಲಿ ಇನ್ನೂ ಸೊಗಸಾಗಿ ಕಳೆಗಟ್ಟಬಲ್ಲ ಮಾಂತ್ರಿಕ ಶಕ್ತಿ ಇದೆ.. ಕೊನೆಗೆ ಎಲ್ಲವೂ ಕಳೆದು ಅಕ್ಷರಗಳೇ ಉಳಿಯುವುದೇ ಸತ್ಯವಾದರೂ  ಈ ಕಥನಗಳು ಬಹು ಬೇಗ ದೊಡ್ಡ ಪರದೆಯ ಮೇಲೆ  ಬರುವ ಗಳಿಗೆ ಕೂಡಿ ಬರಲಿ.. ಇಂತಹ ಇನ್ನೂ ಹಲವಾರು ಅನುಭವ ಕಥನಗಳು ತಮ್ಮಿಂದ ಹೊಮ್ಮಲಿ ಅಂತ ಆಶಿಸುವೆ.

(ನಾನು ‘ಕಾಂತಾರ’ ಸಿನೆಮಾದ ಹೊರತಾಗಿಯೂ ಈ ಪುಸ್ತಕದ ಕುರಿತು ಬರೆಯಬಹುದಾಗಿದ್ದರೂ ದೈವದ ಹುಟ್ಟು, ಮಹಿಮೆಯ ಜೊತೆಗೆ ಆಚರಣೆಯ ಮೂಲಕ ಆಯಾ ದೈವದ ಪ್ರಸರಣವೂ ಆ ಸಂಪ್ರದಾಯದ ಉಳಿಯುವಿಕೆಯಲ್ಲಿ ಅಷ್ಟೇ ಮುಖ್ಯವಾದದ್ದು. ಆ ನಿಟ್ಟಿನಲ್ಲಿ ಕಾಂತಾರ ಒಂದು ಮಾಧ್ಯಮವಾಗಿ ನಮ್ಮ ನೆಲದ ಗಾಥೆಯನ್ನ ಭಾರತಾದ್ಯಂತ ಪಸರಿಸಿದ್ದು ನಿಜಕ್ಕೂ ಆದರಣೀಯ. ಆ ನಿಟ್ಟಿನಲ್ಲಿ ಅದರ ಉಲ್ಲೇಖ ಮಹತ್ವದ್ದು ಅಂತನ್ನಿಸಿತು)

‍ಲೇಖಕರು avadhi

May 7, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: