ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೆರಗ ಮರೆಯಲಿ ನನ್ನ ಬಚ್ಚಿಟ್ಟುಕೋ ಅಮ್ಮಾ…

ಭಯವೆನಗೆ… ತುಂಬ ಭಯ…

ಗೋಪಾಲ ವಾಜಪೇಯಿ


ಭಯವೆನಗೆ… ತುಂಬ ಭಯ…
ಸೆರಗ ಮರೆಯಲಿ ನನ್ನ ಬಚ್ಚಿಟ್ಟುಕೋ ಅಮ್ಮಾ…
.
ನೆನಪಿದೆಯೇ ನಿನಗೆ ಆ ಗಾಜಿನ ಗೊಂಬೆ ?…
ಚಿಕ್ಕಂದಿನಲ್ಲಿ ನನಗೆ ಚಿಕ್ಕಮ್ಮ ಕೊಡಿಸಿದ್ದು ?…
ಬೆಕ್ಕು ಕೆಡವಿದ್ದಕ್ಕೆ ನೂರು ಚೂರಾದದ್ದು?…
ಮತ್ತೆಂದೂ ಜೋಡಿಸಲಾಗದೆ ತಿಪ್ಪೆಗೆಸೆದದ್ದು?…
‘ಮ್ಯಾಂವ್’ ಎಂಬ ದನಿಗೂ ಎದೆ ಡವವು ಹೆಚ್ಚುವುದು…
ಭಯವೆನಗೆ… ತುಂಬ ಭಯ…
ಸೆರಗ ಮರೆಯಲಿ ನನ್ನ ಬಚ್ಚಿಟ್ಟುಕೋ ಅಮ್ಮಾ…
.
ಬೀದಿಯಲಿ ಧುತ್ತನೆದುರಾಗುವ ಕಾಮಿಗಳ ಭಯ…
ಬೊಗಳದೆಯೇ ಬಾಲವಲ್ಲಾಡಿಸುವ ನಾಯ ಭಯ…
ಪಕ್ಕದಲಿ ಹಸುವು ಬಂದರೂ ಭಯವಮ್ಮ…
ಮುಖವಾಡದ ಸಖರ ಭಯ…
ಭಯವೆನಗೆ… ತುಂಬ ಭಯ…
ಸೆರಗ ಮರೆಯಲಿ ನನ್ನ ಬಚ್ಚಿಟ್ಟುಕೋ ಅಮ್ಮಾ…
.
ಶಾಲೆ ಮುಟ್ಟುವವರೆಗೂ ಕೆಟ್ಟ ಕಣ್ಣುಗಳ ಭಯ
ಶಾಲೆ ಮುಟ್ಟಿದರೆ ಮೈ ಮುಟ್ಟೋ ಮಾಸ್ತರನ ಭಯ…
ಮನೆಗೆ ಬರುತಿರುವಾಗ ಬೆನ್ನತ್ತುವವರ ಭಯ…
ಹೂವ ಕೊಟ್ಟರೂ ಭಯ, ಹಣ್ಣ ಕೊಟ್ಟರು ಭಯ…
ಭಯವೆನಗೆ… ತುಂಬ ಭಯ…
ಸೆರಗ ಮರೆಯಲಿ ನನ್ನ ಬಚ್ಚಿಟ್ಟುಕೋ ಅಮ್ಮಾ…
.
ಸೂರ್ಯ ಕಿರಣದ ಸ್ಪರ್ಶ ಸುಡುವ ಜ್ವಾಲೆಯ ಹಾಗೆ…
ನೀರ ಸಿಂಚನವೂ ಎಸಿಡ್ ಎರಚಿದಂತೆನಿಸುತಿದೆ…
ಗಾಳಿಯಲು ತೇಲಿಬರುತಿಹುದೇನೋ ವಿಷಾನಿಲ…
ಅವರಿವರು ನಕ್ಕರು ಕೂಡ ಭಯವೆನಗೆ…
ಸೆರಗ ಮರೆಯಲಿ ನನ್ನ ಬಚ್ಚಿಟ್ಟುಕೋ ಅಮ್ಮಾ…
ಭಯವೆನಗೆ… ತುಂಬ ಭಯ…
.
ಮುಚ್ಚಿಬಿಡು ಕಿಟಕಿಯನು ನೆರೆಯಾತ ನೋಡುವನು…
ಬೆಚ್ಚಿ ಬೀಳಿಸುವಂತೆ ಬೆಸೂರ ಹಾಡುವನು…
ಎದುರು ಮನೆ ಅಂಕಲ್ಲು ಬಿಡುತಾನೆ ಬರಿ ಹಲ್ಲು…
ಆ ಆಂಟಿಗೋ ಕೆಲಸವೇ ಇಲ್ಲ ಬರಿ ಗುಲ್ಲು…
ಭಯವೆನಗೆ… ತುಂಬ ಭಯ…
ಸೆರಗ ಮರೆಯಲಿ ನನ್ನ ಬಚ್ಚಿಟ್ಟುಕೋ ಅಮ್ಮಾ…
.
ತಟ್ಟು ತಲೆ, ತಟ್ಟು ತಲೆ ತಟ್ಟುತಲೇ ಇರು ನೀನು
ಹಾಗೆ ನಿದ್ರಿಸಿ, ಒಳ್ಳೆ ಕನಸೊಂದ ಕಾಣುವೆನು…

‍ಲೇಖಕರು G

4 January, 2013

9 Comments

  1. Paresh Saraf

    ಈ ಸಮಾಜದ ವಿಕೃತ ಕಣ್ಣುಗಳ ಅನಾವರಣ, ಅಮ್ಮನ ಜೊತೆ ಇರುವಾಗ ಮನ ನಿರಾಳ. ಕವಿತೆ ಸರಳ ಮತ್ತು ಸಹಜ

  2. Jayalaxmi Patil

    ಬೆಳಿಗ್ಗೆ ಎದ್ದು ಹಲ್ಲುಜ್ಜೋವಷ್ಟೇ ಅನಿವಾರ್ಯವೆಂಬಂತೆ, ಹೆಣ್ಣು ಅಪ್ರಯತ್ನವಾಗಿ ಈ ಎಲ್ಲ ಭಯದ ನೆರಳಲ್ಲಿ ಬದುಕುತ್ತಾ, ಆ ಅಸಹ್ಯ ನೋಟ, ಮಾತು, ಸ್ಪರ್ಶಗಳಿಂದ ತನ್ನನ್ನು ಬಚಾವು ಮಾಡಿಕೊಳ್ಳುತ್ತಾ ಸೆರಗ ಮರೆಯಲ್ಲಿ ಬಚ್ಚಿಟ್ಟುಕೊಳ್ಳುವುದನ್ನು ಅನಿವಾರ್ಯ ಮಾಡಿದ ವ್ಯವಸ್ಥೆಯೇ ಇಗೋ ನಿನಗೊಂದು ಧಿಕ್ಕಾರ!!!
    ಹೌದೂ ಧಿಕ್ಕಾರವನ್ನು ಪ್ರತಿನಿಧಿಸುವುದು ಹೇಗೆ?! ಏನು ಮಾಡುವುದರ ಮೂಲಕ?!!!

  3. Jayalaxmi Patil

    ಹೆಣ್ಣಿನ ‘ಅನಿವಾರ್ಯ’ ಭಯವನ್ನು ಚೆನ್ನಾಗಿ ಬಿಂಬಿಸಿದ್ದೀರಿ ವಾಜಪೇಯಿ ಸರ್.

  4. chalam

    ನೀರ ಸಿಂಚನವೂ ಎಸಿಡ್ ಎರಚಿದಂತೆನಿಸುತಿದೆ………ಎಷ್ಟು ಭಯದ ನಡುವೆ ಬದುಕಬೇಕಿದೆ…ಸರಳವೆನಿಸಿದರೂ ಸರಳವಲ್ಲದ ಮನಮುಟ್ಟುವ ಕವನ.ಧನ್ಯವಾದಗಳು ಸಾರ್

  5. samyuktha

    sir!!! neevu kavana bareyutteeri anta gottirale illa! tumba chennagide!

  6. ramya

    ಬಹಳ ಚೆನ್ನಾಗಿದೆ . ಹೆಣ್ಣಿಗೆ ಪ್ರತಿ ಕ್ಷಣ ಎದುರಾಗುವ ಆತಂಕ, ಸುತ್ತಲಿರುವ ದುಷ್ಟ ಜೀವಿಗಳ ಕೈಗೆ ಸಿಗದೆ, ಅಮ್ಮನ ಜೊತೆಯಿದ್ದಾಗ ಇರುವ ಸುರಕ್ಷಿತ ಭಾವಕ್ಕೆ ಹಂಬಲಿಸುವ ಚಿತ್ರಣ ಚೆನ್ನಾಗಿ ಮೂಡಿಬಂದಿದೆ ಸರ್.

  7. umesh desai

    guruji, excellent i can read it as if my Daughter reciting it..lovely.

  8. Shama Nandibetta

    “ಸೆರಗ ಮರೆಯಲಿ ನನ್ನ ಬಚ್ಚಿಟ್ಟುಕೋ ಅಮ್ಮಾ…” ನನ್ನ ಮಗಳ ದನಿಯೂ ಹೌದಿದು ಅನಿಸಿದರೆ ಹಾಗೆ ಮಾಡಿದ ವ್ಯವಸ್ಥೆಗೆ ಧಿಕ್ಕಾರ…
    ಸುರಕ್ಷಿತ ಭಾವಕ್ಕೆ ಹಂಬಲಿಸುವ ಚಿತ್ರಿಕೆ ಅದ್ಭುತ… ಶರಣು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading