ಸಂಪು ಕಾಲಂ : ’ನನ್ನ ಹೊಸವರ್ಷದ ರೆಸಲ್ಯೂಶನ್’!

ನವ ಸಂವತ್ಸರಕ್ಕೊಂದು ರೆಸೊಲ್ಯುಶನ್!

ಉತ್ತುಂಗಕ್ಕೇರುತ್ತಿರುವ ಮೂಢ ನಂಬಿಕೆಗಳ ಪರಮಾವಧಿ, ಕಾರ್ಪೋರೆಟ್ ನ ಒಣ ‘ಕೋಮಲ ಕಲೆ’ಗಳು, ದೈಹಿಕವಾಗಿಯೂ ಮಾನಸಿಕವಾಗಿಯೂ ಅತ್ಯಾಚಾರಕ್ಕೊಳಗಾಗುತ್ತಿರುವ ನಿಶ್ಶ್ಯಭ್ದ ಕಣ್ಣೀರುಗಳು, ರಾಜಕೀಯದ ಬಲೆಯಲ್ಲಿ ಬೇಯುತ್ತಿರುವ ರಾಮಾಯಣ-ಮಹಾಭಾರತಗಳು, ಬಡವರು ಕಡುಬಡವರಾಗುತ್ತಾ ಶ್ರೀಮಂತರು ಇಮ್ಮಡಿ ಶ್ರೀಮಂತರಾಗುವ ವಾಣಿಜ್ಯ ಯೋಜನೆಗಳು, ನಡು ನಡುವೆಯೇ ತಮ್ಮ ನೋವು ನಲಿವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ಹಂಚಿಹೋಗುವ ಸಾಮಾನ್ಯ ಜನರು. ಮಹಾನಗರವೆಂಬ ಮಹಾಸಾಗರದಲ್ಲಿ ಮಿನೋವ್ ಮತ್ಸ್ಯಗಳಂತೆ, ಕಂಡೂ ಕಾಣದಂತೆ, ಬೆಳೆದೂ ಬೆಳೆಯದಂತೆ, ಈ ರೀತಿ ಕಳೆದು ಬಿಟ್ಟ ನಮ್ಮ ಜೀವನಕ್ಕೆ, ಗೋಡೆಯ ಮೇಲಿನ ತಾಜಾ ಕ್ಯಾಲೆಂಡರ್ ನ ಬಣ್ಣಗಳು ಮಾನಸಿಕವಾಗಿ ಒಂದು ಬ್ರೇಕ್ ದೊರಕಿಸುತ್ತವೆ. ಮಗದೊಮ್ಮೆ ಹೊಸ ಬಾಗಿಲು ತೆರೆದು, ಅಟ್ಲೀಸ್ಟ್ ನಮ್ಮ ನಂತರದ ಪೀಳಿಗೆ ನಮ್ಮತ್ತ ಬೆರಳು ತೋರದಂತೆ, ನೈತಿಕವಾಗಿ ನಮ್ಮನ್ನು ನಾವು ತಿದ್ದುಕೊಳ್ಳಲು ಒಂದು ಸದವಕಾಶ ಮಾಡಿಕೊಟ್ಟಂತೆ ಕಾಣುತ್ತದೆ.
“ಮುಗ್ಧ ಜಾನಪದಗಳಲ್ಲಿ, ದಗ್ಧ ನಗರ ಗೊಂದಲದಲಿ, ಯಂತ್ರ ತಂತ್ರದಟ್ಟಹಾಸ, ಚಕ್ರಗತಿಯ ಪ್ರಗತಿಯಲ್ಲಿ; ಹಳಬರಲ್ಲಿ ಹೊಸಬರಲ್ಲಿ, ಹಿರಿಯರಲ್ಲಿ ಕಿರಿಯರಲ್ಲಿ, ಹೊಸ ಚೇತನದುತ್ಸಾಹದ ಚಿಲುಮೆ ಚಿಮ್ಮುವುವೆದೆಗಳಲ್ಲಿ, ನವೋದಯದ ಕಿರಣ ಲೀಲೆ ಶುಭೋದಯವ ತೆರೆದಿದೆ” – ಆ ಹೊಸ ಕ್ಯಾಲೆಂಡರಿನಿಂದ ನೇರ ಕೇಳುವ ಜಿ.ಎಸ್.ಎಸ್ ರವರ ಈ ಸುಂದರ ಸಾಲುಗಳು, ಇಂದಿನ ಕಂಗೆಟ್ಟ ಪರಿಸ್ಥಿತಿಯಲ್ಲಿ ನಮ್ಮಲ್ಲಿನ ನಿರಾಶಾವಾದ, ಅಸಹಾಯಕತೆಯ ವೇದನೆಗಳಿಗೆ ಒಂದು ಶಕ್ತಿ ಪೇಯವಾಗಿ ತೋರುತ್ತದೆ. ನನಗೆ ಕೆಲವೊಮ್ಮೆ ಅನಿಸುವುದುಂಟು, ಇದರಲ್ಲಿ ವಿಶೇಷ ಏನಪ್ಪಾ, ಗೋಡೆಯ ಕ್ಯಾಲೆಂಡರ್, ಪುಸ್ತಕದಲ್ಲಿ ಬರೆವ ದಿನಾಂಕ ಬಿಟ್ಟರೆ ಏನೂ ಬದಲಾಗಲ್ಲ, ಅದೇ ಬೆಳಗು, ಅದೇ ಕೊರಗು, ಅದೇ ಸಂಜೆ ಅಲ್ಲವೇ, ಎಂದು. ಆದರೆ ಇದರಲ್ಲಿ ಒಂದು ಸೂಕ್ಷ್ಮ ಅಡಗಿದೆ ಗೆಳೆಯರೇ! ಸುಳ್ಳನ್ನು ನೂರು ಬಾರಿ ಹೇಳಿಬಿಟ್ಟರೆ ನಿಜವಾಗಿ ಹೋಗುತ್ತದೆಯಂತೆ. ಹಾಗೆಯೇ ಸ್ವಲ್ಪ ಗಮನಿಸಿ ನೋಡಿ, ಎಲ್ಲರೂ “ಹ್ಯಾಪೀ ನ್ಯೂ ಇಯರ್”, “ಹ್ಯಾಪೀ….”, “ಹ್ಯಾಪೀ…” ಎಂದು ಹೇಳೀ ಹೇಳೀ, ಈ ಒಂದು ವಾರದಿಂದ ಎಲ್ಲರೂ ಸಾಕಷ್ಟು ಸಂತೋಷವಾಗಿಯೇ ಇದ್ದಾರೆ. ಈ ಮಾತು ವ್ಯಕ್ತಿಗತವಾಗಿ ಅಲ್ಲ ಸಾಮೂಹಿಕವಾಗಿ ಅನ್ವಯಿಸುವಂತಹದ್ದು ಎಂಬುದೂ ಹೌದು. ಇದರ ಹಿಂದೆ ಇರುವ ಮಂತ್ರ ಮಾತ್ರ, ಪ್ರತಿ ವ್ಯಕ್ತಿಯಲ್ಲೂ ತುಳುಕಾಡುವ ನಾಳೆಗಳ ಕನಸು, ನಿರೀಕ್ಷೆ, ಭರವಸೆಗಳು.
ಮೊನ್ನೆ ನಡೆದ ದೆಹಲಿಯ ಅತ್ಯಾಚಾರ ಪ್ರಕರಣಕ್ಕೆ ರಾಜಕೀಯ ರಂಗಿದ್ದರೂ, ಅದರಲ್ಲಿ ಕಂಡ ನಮ್ಮ ಸಾಮಾಜಿಕ ಕಳಕಳಿಯಂತೂ ಹೇಳಲಸದಳ! ಆ ದುರ್ಘಟನೆಯಿಂದ ಚೇತರಿಸಿಕೊಳ್ಳಬೇಕೋ ಬೇಡವೋ ಎಂದು ವಿಚಾರವಾಗುತ್ತಿದ್ದಂತೆಯೇ, “ಹ್ಯಾಪೀ ನ್ಯೂ ಇಯರ್” ನ ಸಮೂಹ ಸನ್ನಿ. ಇವೆಲ್ಲವೂ ಏನು ತೋರುತ್ತದೆ? ನಮ್ಮ ಮಾನಸಿಕ ತೊಳಲಾಟಗಳು, ಅವುಗಳಿಂದ ಹೊರಬರಲೇಬೇಕೆಂಬ ಕಾಳಜಿ, ಸೆಳೆತಗಳು ಹಾಗೂ ನಮ್ಮ ಸಮಾಜಮುಖೀ ಶಕ್ತಿ! ಮನುಷ್ಯ ಎಷ್ಟೇ ಸ್ವಾರ್ಥಿಯಾದರೂ ಆತ ಪರಾವಲಂಬಿ. ಇತರರು ಸುಖ ಸಂತೋಷದಿಂದ ಇದ್ದರೇನೆ, ತಾನೂ ಸುಖವಾಗಿರುತ್ತಾನೆ. ಇದು ಒಂದು ಸೋಶಿಯಲ್ ಥಿಯರಿ. ಇದರಿಂದ ಹುಟ್ಟಿದ ಆ ಸಾಮಾಜಿಕ ಶಕ್ತಿಯನ್ನು ನಾವೆಲ್ಲರೂ ಉಪಯೋಗಿಸಿಕೊಂಡರೆ, ಒಗ್ಗಟ್ಟಾಗಿ ನಿಂತರೆ ಯಾವ ರಾಜಕೀಯ ಕುತಂತ್ರಗಳೂ, ಕೆಟ್ಟ ಪ್ರಚೋದನೆಗಳೂ ನಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ. ಪೀಪಲ್ ಪವರ್ ಅನ್ನೋದು ಕೆಲವೊಮ್ಮೆ ನಿಜಕ್ಕೂ ಭಯಾನಕ ಎನಿಸುವಷ್ಟು ಕೆಲಸ ಮಾಡುತ್ತದೆ ಎಂಬುದಕ್ಕೆ ನಮ್ಮ ಇತಿಹಾಸವೇ ಸಾಕ್ಷಿ.
ಈ ಶಕ್ತಿಯ ಕಾವನ್ನು ನಾವು ಬಳಸಿಕೊಳ್ಳಬೇಕು. ನಮ್ಮ ಸಮಾಜ ಇನ್ನಾದರೂ ಸುಧಾರಿಸಬೇಕಾದರೆ ನಾವೆಲ್ಲರೂ ಸಾಮಾಜಿಕವಾಗಿ ಜಾಗೃತಗೊಳ್ಳಬೇಕು. ಆನಂದಮಯ ಈ ಜಗ ಹೃದಯ ಎಂಬ ಕವಿವಾಣಿಯನ್ನು ಪುನರ್ನವೀಕರಿಸಬೇಕು. ಅದ್ಯಾವುದೋ ಪರವಶತೆ ನಮ್ಮನ್ನು ಸಂಕುಚಿತಗೊಳಿಸುತ್ತಿದೆ, ನಮ್ಮನ್ನು ಸ್ವಾರ್ಥಪರರಾಗಿ ಮಾಡುತ್ತಿದೆ, ಪಕ್ಕದ ಮನೆಯ ಮಗು ಕಾಣೆಯಾಗಿದ್ದಾರೆ ನಮ್ಮ ಮನೆ ಮಗುವನ್ನು ಭ್ರದ್ರ ಬಿಗಿದು ಬಾಗಿಲು ಜಡಿದುಕೊಳ್ಳುತ್ತಿದ್ದೇವೆ. ಸಖರ ಬೆನ್ನಮೇಲೆ ಕಾಲಿಟ್ಟು ಬೆಣ್ಣೆ ಕದ್ದ ಕೃಷ್ಣನನ್ನು ನಾವೆಲ್ಲರೂ ಅರ್ಥಾತ್ ನಕಲು ಮಾಡಿ ಬಿಡುತ್ತಿದ್ದೇವೆ. ಇದರಿಂದ ಹೊರಬರುವ ಸಮಯ ಈಗ ಬಂದಂತೆ ತೋರುತ್ತಿದೆ.
ನನ್ನ ಸ್ನೇಹಿತನೊಬ್ಬ ‘ಪ್ರಳಯ’ ಎಂಬ 1012 ಡಿಸೆಂಬರಿನ ಬಿಸಿ ಮಾತನ್ನು ಬಹಳ ಇಂಟೆರೆಸ್ಟಿಂಗ್ ವ್ಯಾಖ್ಯಾನ ನೀಡಿದ್ದ. ಅದೇನೆಂದರೆ ಪ್ರಳಯ ಅಂದರೆ ಭೂ ಪ್ರಳಯವೇ ಆಗಬೇಕಿಲ್ಲ, ಅದನ್ನು ನಾವು ನಮ್ಮ ಋಣಾತ್ಮಕ, ಕೆಟ್ಟ ಶಕ್ತಿಗಳನ್ನು ಇಲ್ಲವಾಗಿಸುವಿಕೆ ಅಂತ ತೆಗೆದುಕೊಳ್ಳಬೇಕು, ಇದಕ್ಕೆ ಪ್ರಾರಂಭ ಸಾಕ್ಷಿ ದೆಹಲಿಯಲ್ಲಿ ನಡೆಯುತ್ತಿರುವ ಅನ್ಯಾಯದ ವಿರುಧ್ಧ ಪ್ರತಿಭಟನೆ ಎಂದು. ಇದನ್ನು ಕೇಳಿ ನಕ್ಕೆ. ಆದರೆ ಇದನ್ನು ಹೌದಾಗಿಸಬಹುದಲ್ಲವೇ ಎನಿಸಿತ್ತು. ಇದು ಖಂಡಿತ ಸಾಧ್ಯ. ಆದರೆ ವ್ಯಕ್ತಿ ವ್ಯಕ್ತಿಯಲ್ಲಿಯೂ ಸಾಮಾಜಿಕ ಮೌಲ್ಯಗಳು, ಜವಾಬ್ದಾರಿಗಳು ಹೆಚ್ಚಬೇಕು. ಪ್ರಜಾಪ್ರಭುತ್ವದ ನಿಜ ಅರ್ಥವನ್ನು ಸಾರ್ಥಕಗೊಳಿಸಬೇಕು.
ಇದಕ್ಕಿರುವ ಒಂದೇ ಉಪಾಯ, ಈ ಹೊಸ ವರ್ಷದ ಹೊಸ ಹುರುಪಿನಲ್ಲಿಯೇ ಎಲ್ಲರೂ ರೆಸಲ್ಯೂಶನ್ ಮಾಡಿಬಿಡೋಣ. ಇನ್ನು ಮುಂದೆ ಸ್ವಲ್ಪ ಸ್ವಾರ್ಥರಹಿತವಾಗಿ ಯೋಚಿಸೋಣ, ಸ್ವಾಮೀ ವಿವೇಕಾನಂದರ: “Unselfishness is more paying, only people have not the patience to practice it”, ಎಂಬ ಪ್ರಬಲ ಮಾತನ್ನು ಅರಿತು, ಈ ಮಾತನ್ನು ಸುಳ್ಳಾಗಿಸಿಬಿಡೋಣ. ನಾವೆಲ್ಲರೂ ಎಷ್ಟು ನಿರಾಶಾವಾದಿಗಳಾಗಿ ಬಿಟ್ಟಿದ್ದೇವೆ ಎಂದರೆ, ಇದನ್ನು ಬರೆಯುತ್ತಾ ಬರೆಯುತ್ತಿದ್ದಂತೆಯೇ, ನನಗೇ ಈ ಬರಹ ಒಂದು ಅತಿಶಯೋಕ್ತಿ, ತುಂಬಾ ‘ಓವರ್’ ಎನಿಸುವಷ್ಟು! ಇರಲಿ, ಒಂದಂತೂ ನಿಜ, ಪ್ರತಿ ಪ್ರಜೆಯಲ್ಲಿಯೂ ಸ್ವಲ್ಪ ನೀತಿ, ಮೌಲ್ಯಗಳು ಎಚ್ಚೆತ್ತರೆ, ಅದು ಅವರ ಮಕ್ಕಳಲ್ಲಿ ಅಚ್ಚು ಮೂಡಿಸಿದರೆ ಸಾಕು, ಮನೆ ಮನೆಯಿಂದಲೇ ಬೆಳಗುತ್ತದೆ ಜಾಗೃತಿಯ ಜ್ಯೋತಿ.

‍ಲೇಖಕರು G

January 4, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

  1. Nataraju S M

    ನಿಮ್ಮೊಳಗಿನ ಬರಹಗಾರ್ತಿ ಪಕ್ವವಾಗುತ್ತಿರುವುದು ಈ ಬರಹದಲ್ಲಿ ಎದ್ದು ಕಾಣುತ್ತಿದೆ. ಶುಭವಾಗಲಿ..

    ಪ್ರತಿಕ್ರಿಯೆ
  2. Paresh Saraf

    ಉತ್ತಮ ಸಾಮಾಜಿಕ ಕಳಕಳಿಯ ಲೇಖನ. ಚಿಕ್ಕದಾಗಿದ್ದರೂ ಮನಸ್ಸಿಗೆ ನಾಟುವಂಥಹ ನಿರೂಪಣೆ. ಅದೇ ನಿಮ್ಮ ವೈಶಿಷ್ಥ್ಯ. ಶುಭವಾಗಲಿ

    ಪ್ರತಿಕ್ರಿಯೆ
  3. Badarinath Palavalli

    ನಿಮ್ಮ ಆಣತಿಯಂತೆ ನಮ್ಮಲ್ಲೂ ಹೊಸ ವರ್ಷದ ನಿರ್ಧಾರಗಳು ಸಾರ್ವತ್ರಿಕ ಉಪಯುಕ್ತಗಳಾಗಲಿ ಎಂದು ಆಶಿಸುವೆ ಗೆಳತಿ.

    ಪ್ರತಿಕ್ರಿಯೆ
  4. vinaya

    ಚೆನ್ನಾಗಿದೆ ಬರಹ ಅಕ್ಕ .
    ಆದರೂ ಒಂದಿಷ್ಟು ಕಾಡುವ ಪ್ರಶ್ನೆಗಳು, ಪ್ರಶ್ನೆಗಳಾಗೆ ನಾಳೆಗೆ ಉಳಿದುಬಿಡುತ್ತವೆ.
    “ಇತರರು ಸುಖ ಸಂತೋಷದಿಂದ ಇದ್ದರೇನೆ, ತಾನೂ ಸುಖವಾಗಿರುತ್ತಾನೆ.” ಇಲ್ಲೊಂದು ಸ್ವಾರ್ಥವಿದೆ, ತನ್ನ ಸುಖ ಎಲ್ಲಕ್ಕಿಂತ ಮುಖ್ಯ ಅನ್ನೋ ಏಕಮುಖ ದುರಾಸೆ ಇದೆ.ಅದೆಷ್ಟೇ ಸಮಾಜಮುಖಿಯಾಗಿದ್ದರೂ ನಾನು ಎನ್ನುವ ಅಹಂ ಮನುಷ್ಯನನ್ನು ಎಂದು ಬಿಡುವುದಿಲ್ಲ. ನಾನು ಎನ್ನುವ ನಮ್ಮೊಳಗಿನ ನಮ್ಮನ್ನ ಆತ ಸದಾ ಗುರುತಿಸಕೊಳ್ಳಲಿಚ್ಚಿಸುತ್ತಾನೆ.

    ಪ್ರತಿಕ್ರಿಯೆ
  5. D.Ravivarma

    ಈ ಹೊಸ ವರ್ಷದ ಹೊಸ ಹುರುಪಿನಲ್ಲಿಯೇ ಎಲ್ಲರೂ ರೆಸಲ್ಯೂಶನ್ ಮಾಡಿಬಿಡೋಣ. ಇನ್ನು ಮುಂದೆ ಸ್ವಲ್ಪ ಸ್ವಾರ್ಥರಹಿತವಾಗಿ ಯೋಚಿಸೋಣ, ಸ್ವಾಮೀ ವಿವೇಕಾನಂದರ: “Unselfishness is more paying, only people have not the patience to practice it”, ಎಂಬ ಪ್ರಬಲ ಮಾತನ್ನು ಅರಿತು, ಈ ಮಾತನ್ನು ಸುಳ್ಳಾಗಿಸಿಬಿಡೋಣ. ನಾವೆಲ್ಲರೂ ಎಷ್ಟು ನಿರಾಶಾವಾದಿಗಳಾಗಿ ಬಿಟ್ಟಿದ್ದೇವೆ ಎಂದರೆ, ಇದನ್ನು ಬರೆಯುತ್ತಾ ಬರೆಯುತ್ತಿದ್ದಂತೆಯೇ, ನನಗೇ ಈ ಬರಹ ಒಂದು ಅತಿಶಯೋಕ್ತಿ, ತುಂಬಾ ‘ಓವರ್’ ಎನಿಸುವಷ್ಟು! ಇರಲಿ, ಒಂದಂತೂ ನಿಜ, ಪ್ರತಿ ಪ್ರಜೆಯಲ್ಲಿಯೂ ಸ್ವಲ್ಪ ನೀತಿ, ಮೌಲ್ಯಗಳು ಎಚ್ಚೆತ್ತರೆ, ಅದು ಅವರ ಮಕ್ಕಳಲ್ಲಿ ಅಚ್ಚು ಮೂಡಿಸಿದರೆ ಸಾಕು, ಮನೆ ಮನೆಯಿಂದಲೇ ಬೆಳಗುತ್ತದೆ ಜಾಗೃತಿಯ ಜ್ಯೋತಿ…..
    tumbaa arthapurna alochane….idu aatmaavalokana,aatmavimarsheinda aaguva badalaavane…aa nittinalli ondistu ghambiiravaagi alochisidaaga maatra idu saadya…
    nimma ii kriyaatmaka chintane.. ellara manamuttuvantaagi..allondu belakina kirana muduvantaagali…
    adu mundina nammallera baduku arthapurnavaagisali….
    Ravivarma..hosapete…

    ಪ್ರತಿಕ್ರಿಯೆ
  6. Jayalaxmi Patil

    ‘ ಅದ್ಯಾವುದೋ ಪರವಶತೆ ನಮ್ಮನ್ನು ಸಂಕುಚಿತಗೊಳಿಸುತ್ತಿದೆ, ನಮ್ಮನ್ನು ಸ್ವಾರ್ಥಪರರಾಗಿ ಮಾಡುತ್ತಿದೆ,’ ಇದೇ ನೋಡು ಎಲ್ಲ ಪ್ರಯತ್ನಗಳನ್ನೂ ವಿಫಲಗೊಳಿಸಲು ಕಾರಣವಾದುದು!!!

    ಪ್ರತಿಕ್ರಿಯೆ
  7. sunil rao

    article is comprehensive mixture of wholeness
    the resolutions may turn to pages, but its all about how we inculcate it in action.
    as usual nice writeup

    ಪ್ರತಿಕ್ರಿಯೆ
  8. ಆಸು ಹೆಗ್ಡೆ

    ನಿಜ, ತಮ್ಮ ಈ “ಮನುಷ್ಯ ಎಷ್ಟೇ ಸ್ವಾರ್ಥಿಯಾದರೂ ತಾನು ಪರಾವಲಂಬಿ” ಎನ್ನುವ ಮಾತು ನಿಜ.
    ಆದರೆ, ಈಗಿನ ಯಾಂತ್ರಿಕ ಜೀವನ ಶೈಲಿ ಹಾಗೂ ವಿಭಕ್ತ ಕುಟುಂಬ ಪದ್ಧತಿ ಮನುಜನನ್ನು ಸಂಕುಚಿತ ಮನೋಭಾವ ಹೊಂದಿದವನನ್ನಾಗಿ ಮಾಡುತ್ತಿದೆ. ಅತ ಸಾಮಾಜಿಕವಾಗಿ ಪರಾವಲಂಬಿ, ಹೌದು, ಆದರೆ ಅದೂ ತನ್ನ ಸ್ವಾರ್ಥಕ್ಕಾಗಿ ಅಷ್ಟೇ. ಸಮಾಜ ತನ್ನ ಮೇಲೆ ಅವಲಂಬಿತವಾಗಿದೆ ಅನ್ನುವ ಸತ್ಯವನ್ನು ಸುಲಭದಲ್ಲಿ ಜೀರ್ಣಿಸಿಕೊಳ್ಳಲಾರ. ಸಾಮಾಜಿಕ ಜವಾಬ್ದಾರಿಯ ಸಂದೇಶಗಳೆಲ್ಲಾ ಒಂದು ಚರವಾಣಿಯಿಂದ ಇನ್ನೊಂದು ಚರವಾಣಿಗೆ, ಒಂದು ಅಂತರ್ಜಾಲ ತಾಣದಿಂದ ಇನ್ನೊಂದು ಅಂತರ್ಜಾಲ ತಾಣಕ್ಕೆ ರವಾನೆಯಾಗುವ ಬರಿಯ ಸರಕಾಗಿ ಉಳಿದಿವೆ.
    ಒಟ್ಟಾರೆ ಉಗ್ರವಾದವನ್ನು ವಿರೋಧಿಸಬೇಕಾದಲ್ಲಿ, ಕೇವಲ ಒಂದು ಮತ ಅಥವಾ ಧರ್ಮವನ್ನು ವಿರೋಧಿಸುತ್ತಾರೆ. ರಾಕ್ಷಸೀ ಮನೋವೃತ್ತಿಯನ್ನು ವಿರೋಧಿಸಲು ಎತ್ತುವ ಸ್ವರವನ್ನು ಒಂದು ವರ್ಗದ ವಿರುದ್ಧ ಬಳಸುತ್ತಾರೆ.ಮಾನವೀಯತೆಯ ಕೊಲೆ ನಡೆವಾಗ ಪುರುಷರನ್ನು ಗುರಿಯಾಗಿಸುತ್ತಾರೆ. ಈ ರೀತಿಯ ಮನೋಭಾವ ಮುಂದುವರಿದರೆ, ಮುಂದಕ್ಕೆ ಇದೇ ಸಾಮಾಜಿಕ ಧ್ರುವೀಕರಣಕ್ಕೆ ಇಂಬುಕೊಟ್ಟಂತಾಗುತ್ತದೆ.
    ಸಮಾಜದ ಒಟ್ಟಾರೆ ಬದಲಾವಣೆ ಹಾಗೂ ಮಾನಸಿಕ ಪರಿವರ್ತನೆಯನ್ನು ಬಯಸುತ್ತೇವಾದರೆ, ನಾವೆಲ್ಲಾ, ಅಂದರೆ, ಈ ಪರಿವರ್ತನೆಯನ್ನು ಬಯಸುವ ಪ್ರತಿ ಮನುಜನೂ ಜಾತಿ, ಮತ, ಧರ್ಮ, ಲಿಂಗ ಭೇಧ ಮರೆತು ತನ್ನನ್ನು ತಾನು ತೊಡಗಿಸಿಕೊಳ್ಳಬೇಕು.

    ಪ್ರತಿಕ್ರಿಯೆ
  9. Asha Rao

    preethiya samyu,
    Nannu officinalli kullithu,akasmathagi browsing huchu hididhu,aneka websitegallanu veekshesuthidhaaa,by chance ninna nenapagi,ninna hesaru facebooknalli search kottaga,muudi bandha pagegalla muulaka neenu parichayavaagi(as a woman) ,bahalla khushiyayithu. I am telling this because,i know you as a small girl,but i never had a chance to know you as grown/educated/working woman,as i left the country.
    Ninna bhavanegallannu odhuthiruvaga,nannu teenage nenapaaguthadhe,ashte alla,nanna sodhara mavana jothe maaduthidha nenapaaguthadhe.
    Thanks for reminding my good old days.
    Ninna barahagallu heege muuduthiralli.
    ninna atheya magallu

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: