ಸೆಕೆಂಡ್ ಹ್ಯಾಂಡ್ ಪುಸ್ತಕದ ಹುಡುಕಾಟದಲ್ಲಿ…

ರಾಜೇಶ್ವರಿ ಹುಲ್ಲೇನಹಳ್ಳಿ

ಮಾರ್ಚಿ ಮಾಹೆ ಮುಗಿಯಿತೆಂದರೆ ಬಾಲ್ಯದ ಶಾಲಾ ದಿನಗಳ ಬೇಸಿಗೆ ರಜೆಯ ನೆನಪಿನ ಸುರುಳಿಗಳಲ್ಲಿ ಅದೆಷ್ಟೊಂದು ನಗೆ ಉಕ್ಕಿಸುವ ಬಾಯಿ ನೀರೂರಿಸುವ ಘಟನೆಗಳು ಕಣ್ಮುಂದೆ ಸುಳಿಯುವುದಿರಲಿ ಒಂದರ ಮೇಲೊಂದು ಮುಗಿ ಬೀಳುತ್ತವೆ. ಅಂತಹ ಕೆಲ ತುಣುಕುಗಳ ಅನುಭವ ತಮಗೂ ಇರಬಹುದೆಂದು ಭಾವಿಸಿ ನಿಮ್ಮ ಮುಂದೆ ನನ್ನ ಬಾಲ್ಯದ ಬೇಸಿಗೆ ರಜೆಯ ನೆನಪಿನ ಸುರುಳಿಯನ್ನು ತೆರೆದಿಡುತ್ತಿರುವೆ. ನೀವೂ ನಮ್ಮ ಕಾಲದವರೇ ಆಗಿದ್ದರೆ ತುಸು ಮೆಲುಕು ಹಾಕಿ! ಈಗಿನ ಕಾಲದವರಾದರೆ ನಿಮ್ಮ ಬಾಲ್ಯದಾಟಕ್ಕೂ ನಮ್ಮ ಬಾಲ್ಯದಾಟಕ್ಕೂ ಇರುವ ವೆತ್ಯಾಸವನ್ನು ತುಲನೆ ಮಾಡಿ ನೋಡಿ.     

ಅದೇನೇ ಇರಲಿ ನಮ್ಮ ಬಾಲ್ಯದಲ್ಲಿ ಮಾರ್ಚಿ 31ರೊಳಗೆ ಪರೀಕ್ಷೆಗಳೆಲ್ಲಾ ಮುಗಿದು ಬಿಡುತ್ತಿದ್ದವು. ಏಪ್ರಿಲ್ 10 ಕ್ಕೆ ನಮ್ಮ ಪಾಸು ಪೇಲು. ಅಂದ್ರೆ ರಿಸಲ್ಟು, ಈಗಿನಂತೆ ರಿಸಲ್ಟು ಗಿಸಲ್ಟು ಅಂದ್ರೆ ನಮ್ಗೆ ಗೊತ್ತಿರಲಿಲ್ಲ ಬಿಡಿ ಏನಿದ್ದರೂ ಪಾಸು ಫೇಲು ಅಷ್ಟೇ.! ಏಪ್ರಿಲ್ ಹತ್ತರ ಹಿಂದಿನ ದಿನವೇ ನಾಳೆ ಪಾಸು ಫೇಲು ಹೇಳ್ತಾರೆ ಕೇಳಕ್ಕೆ ಸ್ಕೂಲಿಗೆ ಹೋಗ್ಬೇಕು ಎಂದು ಮಕ್ಕಳಲ್ಲಿ ಕೆಲವರಿಗೆ ಏನೇನೋ ಆತಂಕ. ಇನ್ನು ಹಲವರಿಗೆ ಎಲ್ಲಿಲ್ಲದ ಖುಷಿ ಇರ್ತಿತ್ತು. ಯಾಕಂದ್ರೆ ಪಾಸು ಪೇಲು ತಿಳಿದ ನಂತರ ನಮ್ಮ ಹಳ್ಳಿಗಳಲ್ಲಿರುವ ನಮ್ಮ ಅಜ್ಜ-ಅಜ್ಜಿ, ದೊಡ್ಡಮ್ಮ, ಚಿಕ್ಕಮ್ಮ, ಸೋದರತ್ತೆ, ಸೋದರ ಮಾವಂದಿರಿರ ಮನೆಗೆ ಹೋಗಿ ರಜೆ ಕಳೆಯಲು ಹೋಗಬಹುದಲ್ಲಾ ಎಂದು!. ಅದು ಮುಗ್ಧ ಬಾಲ್ಯವಾಗಿತ್ತು.

ನಮ್ಮಕಾಲದಲ್ಲಿ ಪ್ರಾಥಮಿಕದಿಂದ ಹೈಸ್ಕೂಲಿನವರೆಗೆ. ರಾಂಕ್, ಡಿಸ್ಟಿಂಕ್ಷನ್, ಫಸ್ಟಕ್ಲಾಸ್, ಸೆಕೆಂಡ್ ಕ್ಲಾಸ್ ಹೀಗೆಲ್ಲ ಗೊತ್ತಿರಲಿಲ್ಲ. ಪಾಸು ಅಂದ್ರೆ ಪಾಸು ಪೇಲು ಅಂದ್ರೆ  ಪೇಲು ಅಷ್ಟೇ!. ಪೇಲಾದರು ಯಾರೂ ನೀರಿಗೆ ಬೀಳುತ್ತಿರಲಿಲ್ಲ ನೇಣು ಹಾಕಿಕೊಳ್ಳುತ್ತಿರಲಿಲ್ಲ ವಿಷಾನೂ ಕುಡಿತಿರಲಿಲ್ಲ ಆಗೆಲ್ಲ ಇವು ಗೊತ್ತಿರಲಿಲ್ಲ. ನಮ್ಮದು ಅಪ್ಪಟ ಸರ್ಕಾರಿ ಶಾಲೆ  ಹೈಸ್ಕೂಲಿನವರೆಗೆ. ಆಗ ಎಲ್ಲರೂ ಪಾಸು ಇಲ್ಲ ಪೇಲು ಎರಡೇ ಅದ್ದರಿಂದ ನಮ್ಮಲ್ಲಿ ಯಾವುದೇ ಬೇಧ ಭಾವ ಕೂಡ ಇರಲಿಲ್ಲ. ಅಂತೆಯೇ ಬುದ್ಧಿವಂತರಿಗೆ ಜಂಭ ಇಲ್ಲವೆ ಪೆದ್ದರಿಗೆ ಕೀಳರಿಮೆ ಕೂಡ  ಇಲ್ಲದೆ ಎಲ್ಲರೂ ಸಮಾನತೆಯಿಂದ ಆಡಿ ಕುಣಿಯುತ್ತಿದ್ದೆವು, ನಲಿಯುತ್ತಿದ್ದೆವು. ಅಪ್ಪಿ ತಪ್ಪಿ ಫೇಲಾದವರು ಕೂಡ ಒಂದೆರಡು ದಿನ ಸಪ್ಪಗಿದ್ದು ನಂತರ ಯಥಾ ಸ್ಥಿತಿಗೆ ಮರಳುತ್ತಿದ್ದರು.         

ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಶಾಲೆಗೆ ಹೋಗುತ್ತಿದ್ದ ಚಿಕ್ಕ ಗರಡಿ ದೊಡ್ಡ ಗರಡಿ  ಕಂಬದ ನರಸಿಂಹ ಸ್ವಾಮಿ ದೇವಸ್ಥಾನದ ಕರಂಪನಾಯಕನ ಹಟ್ಟಿ, ತೆಲುಗರ ಬೀದಿಯ ಎಲ್ಲ  ಮಕ್ಕಳೂ ಬೆಳಗ್ಗೆ ಬೇಗನೆ ಎದ್ದು ರೆಡಿಯಾಗಿ ದೇವರಿಗೆ ನಮಸ್ಕಾರ ಮಾಡಿ. ಅಲ್ಲೇ ಕೂಗಳತೆಯಲ್ಲಿದ್ದ ಸ್ಕೂಲಿಗೆ ಹೋಗುತ್ತಿದ್ದೆವು. ಪಾಸು ಪೇಲು ಕೇಳಿಕೊಂಡು ಮನೆಗೆ ಬರುತ್ತಿದ್ದೆವು. ಆಗೆಲ್ಲ ನೋಟೀಸ್ ಬೋರ್ಡಿಗೆ ಹಾಕುತ್ತಿರಲಿಲ್ಲ ಎಲ್ಲ ತರಗತಿಯ ಟೀಚರುಗಳು ಆಫೀಸ್ ರೂಮಿನಲ್ಲಿ ಕುಳಿತಿರುತ್ತಿದ್ದರು. 

ನಾವುಗಳು ನಮ್ಮ ತರಗತಿಯ ಟೀಚರ್ ಬಳಿ ಹೋದಾಗ ಅವರು ರಿಜಿಸ್ಟರ್ ತೆಗೆದು ಒಮ್ಮೆ ನೋಡಿ ಪಾಸಾಗಿದೀರ ಎಂದು ಹೇಳಿ ಮುಂದಿನ ಶಾಲೆಯ ಪ್ರಾರಂಭದ ದಿನವನ್ನು ತಿಳಿಸುತ್ತಿದ್ದರು. ಹೈಸ್ಕೂಲಿಗೆ ಸಂತಪಿಲೋಮಿನಾ ಶಾಲೆಗೆ ಸೇರಿದಾಗ ಮಾತ್ರ ನೋಟೀಸ್ ಬೋರ್ಡಿನಲ್ಲಿ  ಪಡೆದ ಸ್ಥಾನದೊಂದಿಗೆ ರಿಸಲ್ಟನ್ನು ಪ್ರಕಟಿಸುತ್ತಿದ್ದರು. ಖುಷಿಯಿಂದ ಬಂದು ಮನೆಯವರಿಗೆ ತಿಳಿಸಿ ಬೇರೆ ಬೇರೆ ಸ್ಕೂಲುಗಳಿಗೆ ಹೋಗುತ್ತಿದ್ದ ನಮ್ಮಬೀದಿಯ ಓರಗೆಯ ಎಲ್ಲ ಹೆಣ್ಣು ಗಂಡು ಮಕ್ಕಳು ಒಟ್ಟು ಸೇರಿ ಸಂಭ್ರಮಿಸುತ್ತಿದ್ದೆವು. ಸುಮಾರು ಎಪ್ಪತ್ತರ ದಶಕದಲ್ಲಿ ಪಾಸಾದವರನ್ನು ಸ್ವೀಟ್ ಕೇಳಿದರೆ ಅಂಗಡಿಯ ಪೆಪ್ಪರ್ಮೆಂಟ್ ಅದೂ ಕಿತ್ತಳೆ, ಮೋಸಂಬಿ ತೊಳೆಯಂಥ ಮತ್ತು ರುಚಿಯ ಹಾಗೂ ನಿಂಬೆ ಹುಳಿ ರುಚಿಯ, ಮತ್ತು ಶುಂಠಿ ಪೆಪ್ಪರ್ ಮೆಂಟನ್ನು ತಂದು ಹಂಚುವುದೇ ಬಹು ದೊಡ್ಡ ವಿಚಾರವಾಗಿತ್ತು. ಇನ್ನು ನಾನು ಏಳನೆಯ ತರಗತಿಯಲ್ಲಿ ಶೇಕಡಾ ಎಪ್ಪತ್ತಕ್ಕಿಂತ ಹೆಚ್ಚು ಅಂಕ ಗಳಿಸಿದಾಗ ಸ್ಕೂಲಿನ ಟೀಚರು ಹೆಡ್ ಮಾಸ್ಟರಿಗೆಲ್ಲ ಸ್ವೀಟ್ ಕೊಟ್ಡದ್ದು ನೆನಪು.

ಇನ್ನು ಪಾಸು ಪೇಲು ತಿಳಿದ ಮೇಲೆ ರಜೆಯಲ್ಲಿ ನಮ್ಮಗಳ ಬಾಲವಿಲ್ಲದ ಮಂಗನಾಟಕ್ಕೆ ಇನ್ನಷ್ಟು ಬಲ ಸಿಕ್ಕಂತಾಗಿ ಏನೆಲ್ಲಾ ಆಟಗಳನ್ನು ಆಡಲು ಆರಂಭಿಸುತ್ತಿದ್ದೆವು. ಇಲ್ಲವೆ ನಮ್ಮ ಹಳ್ಳಿಗಳಲ್ಲರುವ ಅಜ್ಜ ಅಜ್ಜಿ  ದೊಡ್ಡಮ್ಮ ಚಿಕ್ಕಮ್ಮ ಸೋದರತ್ತೆಯರ ಮನೆಗಳಿಗೆ ಹೋಗಲು ಮೊದಲೇ ನಿರ್ಧರಿಸಿ ತಯಾರಿ ಮಾಡಿಕೊಂಡಿದ್ದಂತೆ ಒಂದೆರಡು ದಿನಗಳು ಬಿಟ್ಟು ಹೊರಡುತ್ತಿದ್ದೆವು. ಒಂದೆರಡು ದಿನಗಳ ಗಡುವೆಂದರೆ ಅದು ಮೊದಲೇ ನಮ್ಮ ಮುಂದಿನ ತರಗತಿಯವರಲ್ಲಿ ಬುಕ್ ಮಾಡಿದ  ಹಳೆಯ (ಸೆಕೆಂಡ್ ಹ್ಯಾಂಡ್) ಪುಸ್ತಕಗಳನ್ನು ಕೊಂಡು ಅವುಗಳನ್ನು ಒಮ್ಮೆ ತಿರುವಿ ಅದರಲ್ಲಿದ್ದ ನವಿಲುಗರಿ ಇನ್ನಿತರ ಸ್ಟಾಂಪ್ ಗಳನ್ನು ಎತ್ತಿಟ್ಟು ಬೇಕಿದ್ದರೆ ಪುಸ್ತಕ ಕೊಟ್ಟವರಿಗೆ ಹಿಂದಿರುಗಿಸುವುದು. ಪುಸ್ತಕವನ್ನು ಜೋಪಾನವಾಗಿ ಬ್ಯಾಗಿನಲ್ಲಿಟ್ಟು ಭದ್ರ ಮಾಡಿ ಊರಿಗೆ ಹೊರಡುತ್ತಿದ್ದೆವು  ಇಲ್ಲವೆ ಇಲ್ಲೇ ಉಳಿಯುತ್ತಿದ್ದೆವು. 

ನಮ್ಮ ಕಾಲದಲ್ಲಿ ಈಗಿನಂತೆ ಯಾವ ಸಮ್ಮರ್ ಕ್ಯಾಂಪುಗಳಿರಲಿಲ್ಲ. ಮನೆಯ ಮುಂದಿನ ಜಗುಲಿ ಇಂಡೋರ್ ಗೇಮ್ಸ್ ಕ್ರಿಡಾಂಗಣ ನಮ್ಮ ಚೌಕಾಬಾರಾ ಅಳುಗುಳಿ ಮನೆ, ಪಿಲ್ಲಿಕಲ್ಲು ಕಳ್ಳ ಪೋಲೀಸು ಆಟಗಳಿಗೆ ಸೀಮಿತವಾದರೆ, ನಮ್ಮ ಬೀದಿಯ ಅಂಗಳ, ಗಲ್ಲಿಗಳೇ ನಮ್ಮ ಔಟ್ ಡೋರ್ ಗೇಮ್ಸ್ ಗಳಾದ ಕುಂಟಾಬಿಲ್ಲೆಯ  ಮೂರು ಮನೆ ಆಟ‌, ಏಳು ಮನೆ ಆಟ, ಐ ಸ್ಪೈಸ್, ಲಗೋರಿ, ಚಿನ್ನಿದಾಂಡು ಆಟಗಳ ತಾಣವಾಗಿತ್ತು. ತಿಂಡಿ ತಿಂದು ಹೋದರೆ  ಊಟಕ್ಕೆ ಬರೋದು ಮತ್ತೆ ಸಂಜೆಯವರೆಗೆ ಆಟ, ಬಸಿಲ ಬೇಗೆ ತಾಕುತ್ತಿರಲಿಲ್ಲ. ಯಾವ ಸನ್ ಸ್ಕ್ಥೀನ್ ಕ್ರೀಮ್ ಸಹ ಗೊತ್ತಿರಲಿಲ್ಲ. ತುಂಬಾ ಬಿಸಿಲಿದ್ದಾಗ ಮನೆಯ ಅಂಗಳ ಜಗಲಿಯಮೇಲೆ ಆಡುವ ಆಟಗಳು, ತಂಪಾದಾಗ ಬೀದಿಯಲ್ಲಿ ಆಡುವ ಆಟ. ಈ ನಡುವೆ ಎಲ್ಲರೂ ಸೇರಿ ಸತ್ತು ಬಿದ್ದಿದ್ದ ಒಂದು ಗುಬ್ಬಚ್ಚಿ ತಿಥಿಯನ್ನು ಕೂಡ ಮಾಡಿದ್ದ ಪ್ರಸಂಗವನ್ನು ಮರೆಯುವಂತೆಯೇ ಇಲ್ಲ.!.

ಪರೀಕ್ಷೆ ಮುಗಿದೊಡನೆಯೆ ನಮ್ಮ ಸೆಕೆಂಡ್ ಹ್ಯಾಂಡ್ ಪಠ್ಯ ಪುಸ್ತಕಗಳ ಹುಡುಕಾಟ ಆರಂಭವಾಗುತ್ತಿತ್ತು.  ಅಂದರೆ ಮುಂದಿನ ತರಗತಿಗಾಗಿ ಸೆಕೆಂಡ್ ಹ್ಯಾಂಡ್ ಪುಸ್ತಕಗಳ ಓನರುಗಳ ಹುಡುಕಾಟ ಮತ್ತು ಭೇಟಿ. ಹಾಗೇ ಮುಂಗಡ ಬುಕಿಂಗ್ ಕೆಲಸ ಕೂಡ ಆರಂಭವಾಗುತ್ತಿತ್ತು. ಎಲ್ಲರ ಕಣ್ಣು ನಮಗಿಂತ ಒಂದು ತರಗತಿ ಮುಂದಿದ್ದವರ ಕಡೆಗಿರುತ್ತಿತ್ತು. ತುಂಬಾ ಚನ್ನಾಗಿ ಓದುವವರು ಹಾಗೂ ಕೇವಲ ಜಸ್ಟ್ ಪಾಸಾಗುವವರ ಬಗ್ಗೆ ಹೆಚ್ಚು ಗಮನವಿರುತ್ತಿತ್ತು. ಏಕಂದ್ರೆ ತುಂಬಾ ಚನ್ನಾಗಿ ಓದುವ ಜಾಣರು ಪುಸ್ತಕದ ಬಗ್ಗೆ ಅಪಾರ ಪ್ರೀತಿಯಿಂದ ಪುಸ್ತಕವನ್ನು ಚನ್ನಾಗಿಟ್ಟುಕೊಂಡರೆ,  ಜಸ್ಟ್ ಪಾಸಾಗುವವರ ಪುಸ್ತಕಗಳು ಇನ್ನೂ ಚಂದವಾಗಿರುತ್ತಿದ್ದವು. ಮಧ್ಯಮದವರುಗಳ ಪುಸ್ತಕ ಅಷ್ಟಕ್ಕಷ್ಟೇ.

ನಮ್ಮ ಬೀದಿಯಲ್ಲಿ ನನಗಿಂತ ಒಂದು ತರಗತಿ ಮುಂದಿದ್ದ ಒಂದಿಬ್ರು ಹುಡುಗರುಗಳಿದ್ದರು. ಪಾಂಡು, ವೆಂಕಟೇಶ. ಹೀಗೆ ಅವರಲ್ಲಿ ಯಾರ ಪುಸ್ತಕ ಹೆಚ್ಚು ಚನ್ನಾಗಿದೆ ಎಂದು ಮೊದಲೇ ಒಮ್ಮೆ ನೋಡಿಕೊಂಡಿರುತ್ತಿದ್ದೆ ಎಲ್ಲರ ಪುಸ್ತಕಗಳನ್ನೂ ಒಮ್ಮೆ  ಪರಿಶೀಲಿಸಿಕೊಂಡು ಯಾರ ಬಳಿ ಯಾವ ಪುಸ್ತಕ ತುಂಬಾ ಚನ್ನಾಗಿರುತ್ತಿತ್ತು ಅಂತಹ ಪುಸ್ತಕವನ್ನು ಮೊದಲೇ ಅವರಮ್ಮಂದಿರ ಮೂಲಕ ಕೇಳಿಕೊಂಡಿರುತ್ತಿದ್ದೆವು. ಮುದ್ದಮ್ಮ ಮತ್ತು ರಾಷ್ಟ್ರ  ಪ್ರಶಸ್ತಿ ಪುರಸ್ಕೃತ ಅಪ್ಪಾಜಿ ಮೇಷ್ಟ್ರ ಮಗ ಪಾಂಡು ನನಗಿಂತ ಒಂದು ತರಗತಿ ಮುಂದಿದ್ದ. ಪಾಂಡು ಅಂದ್ರೆ ನಿಜವಾಗಿ ಪಾ….ಪ ಪಾಂಡುನೇ!ಮಾತು  ಕಡಿಮೆ ಹಾಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಕೂಡ ತುಸು ಕಡಿಮೆಯೇ. ಅಪ್ಪಾಜಣ್ಣ ಅವನಿಗೆ ಹೊಸ ಪುಸ್ತಕವನ್ನೇ ಕೊಡಿಸುತ್ತಿದ್ದರು. ಅವನು ಪುಸ್ತಕಗಳಿಗೆ ಹೆಚ್ಚು ತೊಂದರೆ ಕೊಡದೆ  ಬಳಸದೆ ಜೋಪಾನವಾಗಿಟ್ಟು ಕೊಂಡಿರುತ್ತಿದ್ದ. ಅವನ ಪುಸ್ತಕಗಳು ಹೆಚ್ಚು ಬಳಕೆಯಾಗದ ಕಾರಣ ಹೊಸದರಂತಿರುತ್ತಿದ್ದವು. ನಾನು ಹೆಚ್ಚಾಗಿ ಅವನ ಪುಸ್ತಕಗಳನ್ನೇ ಕೊಳ್ಳುತ್ತಿದ್ದೆ. ಲಾರಿ ಗಂಗಣ್ಣ ಕೆಂಪಕ್ಕನವರ ಮಗ. ವೆಂಕಟೇಶನ ಪುಸ್ತಕಗಳು ಅಷ್ಟಕ್ಕಷ್ಟೆ. ಅಪ್ಪಿ ತಪ್ಪಿ ವೆಂಕಟೇಶನ ಬಳಿ ಯಾವುದಾದರೂ ಪುಸ್ತಕ  ಚನ್ನಾಗಿದ್ದರೆ ಮಾತ್ರ ಅವನಿಂದ ಕೊಳ್ಳುತ್ತಿದ್ದೆ.

ಸೆಕೆಂಡ್ ಹ್ಯಾಂಡ್ ಪುಸ್ತಕಕ್ಕೆ ಪಕ್ಕಾ ಅರ್ಧ ಬೆಲೆ. ಪುಸ್ತಕ ಕೊಡಿಸಿದವರು ತಂದೆ ತಾಯಿಯಾದರೂ ಸೆಕೆಂಡ್ ಹ್ಯಾಂಡ್ ಪುಸ್ತಕದ ಮಾರಾಟ ಮತ್ತು ಹಣ ಪಡೆಯುವ ಹಕ್ಕು ಪುಸ್ತಕದ ಮಾಲೀಕರುಗಳಿಗೇ ಮೀಸಲು.! ಆಗೆಲ್ಲ ಟೆಕ್ಸ್ಟ್ ಬುಕ್ ಗಳ ಬೆಲೆ ಎರಡು ರೂಪಾಯಿ ಒಂದೂವರೆ, ಮೂರು ರೂಪಾಯಿ ಅತಿ ಹೆಚ್ಚೆಂದರೆ ನಾಲ್ಕು ರೂಪಾಯಿಗಳಿರಬಹುದಷ್ಟೆ. ಹೀಗೆ ಅದರಲ್ಲಿ ಅರ್ಧ ಬೆಲೆಗೆ ನಮ್ಮ ವ್ಯಾಪಾರ  ನೆಡೆಯುತ್ತಿತ್ತು. ತುಸು ಮುಖ ಪುಟ ಮಂಕಾಗಿದ್ದರೆ ಅಥವಾ ಹಾಳಾಗಿದ್ದರೆ ಇನ್ನು ಹತ್ತು ಪೈಸೆ ಚೌಕಾಸಿ. ಅಂತೂ ಪಾಂಡುವಿನಿಂದ ಅರ್ಧ ಬೆಲೆಗೆ ಕೊಂಡ ಸೆಕೆಂಡ್ ಹ್ಯಾಂಡ್    ಪುಸ್ತಕಗಳನ್ನು ಮತ್ತೆ ಅವನ ತಮ್ಮ ಮಂಜು ಮುಂದಿನ ವರ್ಷ ಅದೇ ಅರ್ಧ ಬೆಲೆಗೆ ನನ್ನಿಂದ ಕೊಳ್ಳುತ್ತಿದ್ದ!   

ಅವ ನನಗಿಂತ ಒಂದು ತರಗತಿ ಹಿಂದಿದ್ದ.  ವೆಂಕಟೇಶನಿಂದ ಕೊಂಡ ಪುಸ್ತಕವನ್ನು ನನಗಿಂತ ಒಂದು ತರಗತಿ ಹಿಂದಿದ್ದ ಅವನ ತಂಗಿ ಮಂಜುಳ ಅದೇ ಅರ್ಧ ಬೆಲೆಗೆ ಕೊಳ್ಳುತ್ತಿದ್ದಳು!. ಪುಸ್ತಕಗಳನ್ನು ತುಂಬಾ ಜೋಪಾನವಾಗಿಟ್ಟುಕೊಂಡು ಮತ್ತೆ ಮಾರಾಟ ಮಾಡಿದ ಕಾರಣ ಬಹುತೇಕ  ನನ್ನ ಪುಸ್ತಕದ ಓದು  ಪುಕ್ಕಟೆಯಾಗಿರುತ್ತಿತ್ತು. ಪುಸ್ತಕಗಳ ಬಗ್ಗೆ ನನಗೆ ಅಪಾರ ಪ್ರೀತಿ ಇತ್ತು. ಹಳತೋ ಹೊಸತೋ ಯಾವುದೇ ಪುಸ್ತಕಕ್ಕೂ ಹೊಸದಾಗಿ ರಟ್ಟು ಹಾಕಿ ಅದರ ಮೈದಡವುವುದೇ ಒಂದು ವಿಶೇಷ ಅನುಭೂತಿ. ಹೀಗೆ ಇಡೀ ವಠಾರದ ಬೀದಿಯ ಮಕ್ಕಳ ಪುಸ್ತಕಗಳು  ಒಬ್ಬರಿಂದೊಬ್ಬರಿಗೆ  ಸೆಕೆಂಡ್ ಹ್ಯಾಂಡ್ ಮಾರಾಟದಲ್ಲಿ ಎರಡು ಮೂರು ವರ್ಷಗಳಷ್ಟು ಆಯಸ್ಸನ್ನು ಪಡೆದಿರುತ್ತಿದ್ದವು.

ನಂತರ ಪುಸ್ತಕಗಳು ಕೈಯಿಂದ ಕೈಯಿಗೆ ದಾಟಿ ನಲುಗಿ ಆರೋಗ್ಯ ಆಯುಷ್ಯ ಎರಡನ್ನೂ ಕಳೆದುಕೊಂಡ ಸ್ಥಿತಿಯನ್ನು ತಲುಪಿದಾಗ ಯಾರ ಬಳಿಯಿರುತ್ತಿದ್ದವೋ ಅವರಿಂದ ಸಂಸ್ಕಾರಕ್ಕೊಳಪಡುತ್ತಿದ್ದವು.  ಒಂದೋ ತೀರ ಚಿಂದಿಯಾಗಿದ್ದರೆ  ಸಣ್ಣಗೆ ಹರಿದು ಗಂಜಿಯಲ್ಲಿ ಮೆಂತ್ಯದೊಂದಿಗೆ ನಾಲ್ಕಾರು ದಿನ ನೆನೆಸಿ  ರುಬ್ಬಿ  ಬಿದಿರಿನ ಮೊರಗಳನ್ನು ಸಾರಿಸಲು, ಹಾಗೇ ಕಾಗದದ ಕುಕ್ಕೆ ಮಾಡುತ್ತಿದ್ದರು. ಇಲ್ಲವೆ ನಾವು ಹೇ… ಪೇಪರಿಯಾ … ಹಳೇ  ಎಕ್ಸೈಜ್ಬುಕ್ಕು. ಹಳೇ..ಪೇಪರಿಯಾ… ಹಳೇ  ಕಬ್ಬಿಣ, ಖಾಲಿ ಬಾಟ್ಲೂ… ಎಂದು ಬೀದಿಯಲ್ಲಿ ಕೂಗಿಕೊಂಡು ಬರುವ ಹಳೇ ಪೇಪರಿನವರಿಗೆ ಮಾರಾಟ ಮಾಡಿ ಚಿಲ್ಲರೆ ಕಾಸನ್ನು ಗೋಲಕಕ್ಕೆ ಹಾಕಿಟ್ಟುಕೊಳ್ಳುತ್ತಿರುತ್ತಿದ್ದೆವು.

ಹೀಗಿರುವಾಗ ಒಮ್ಮೆ ನನಗಿಂತ ಮೂರು ವರ್ಷ ಕಿರಿಯ ತಂಗಿ ರತ್ನ ಮತ್ತು ನನಗಿಂತ ಐದು ವರುಷ ಚಿಕ್ಕವನಾದ ನನ್ನ ತಮ್ಮ ನಾಗರಾಜ ಇಬ್ಬರೂ ಸೇರಿ, ಇನ್ನೂ ರಿಸಲ್ಟ್ ಬರುವ ಮೊದಲೇ, ನೋಟ್ ಬುಕ್ಕಿನೊಂದಿಗೆ ಹಳೆ ಪುಸ್ತಕಗಳನ್ನೂ ಪಾಸ್ ಆಗೇ ಆಗ್ತೀವಿ ಅನ್ನೋ ನಂಬಿಕೆಯಿಂದ ಕಡ್ಲೆ ಮಿಠಾಯಿ ಅಜ್ಜಿಗೆ ಮಾರಿಬಿಟ್ಟಿದ್ದರು. ನಮ್ಮ ಬೀದಿಗೆ ಸರಿಯಾಗಿ ಬೇಸಿಗೆ ರಜೆಯಲ್ಲಿ ಒಂದು ಬಿದಿರಿನ ದೊಡ್ಡ ತಟ್ಟೆಯಲ್ಲಿ  ಒಂದಿಷ್ಟು ಕಡ್ಲೆ ಮಿಠಾಯಿ ಒಂದು ಅಲ್ಯೂಮಿನಿಯಂ ತಟ್ಟೆಗಳಿಂದ ಮಾಡಿದ ತಕ್ಕಡಿ ಇಟ್ಟುಕೊಂಡು ಒಬ್ಬ ಮುಸ್ಲಿಮ್ ಅಜ್ಜಿ ಹಳೇ ಪುಸ್ತಕ ಎಕ್ಸೈಜಿಗೆ ಕಡ್ಲೆ ಮಿಠಾಯಿ ಎಂದು ಕೂಗುತ್ತಾ ಬರುತ್ತಿದ್ದರು. ಇವರಿಬ್ಬರೂ ತಮ್ಮ ಪಠ್ಯ ಪುಸ್ತಕಗಳನ್ನು ಆ ಅಜ್ಜಿಗೆ ಕೊಟ್ಟು ಕಡ್ಲೆ ಮಿಠಾಯಿ ತಗೊಂಡು ಏನು ಖುಷಿಯಿಂದ ಸವಿಯುತ್ತಿರೋದಕ್ಕೂ ನಮ್ಮಣ್ಣ ಅಂದ್ರೆ ನಮ್ಮಪ್ಪ ಬರೋದಕ್ಕೂ ಸರಿಯಾಯ್ತು. ಅಷ್ಟರಲ್ಲಾಗಲೇ ಪುಸ್ತಕ ಮಾರಾಟವಾಗಿ ಕಡ್ಲೆ ಮಿಠಾಯಿ ಕೂಡ ಬಾಯಲ್ಲಿತ್ತು.

ಅಪ್ಪನಿಗೆ ಅದೆಲ್ಲಿತ್ತೋ ಸಿಟ್ಟು ಇಬ್ಬರನ್ನೂ ಒಮ್ಮೆ ಸೀರಿಯಸಸ್ಸಾಗಿ ನೋಡಿದಾಗ ಇಬ್ಬರೂ ಎದ್ದು ನಿಂತರು. ಏನಿದು ಎಂದೊಡನೆ ಇಬ್ಬರೂ ಹೆದರಿ ತಬ್ಬಿಬ್ಬಾದರು ಪುಸ್ತಕ ಕೊಟ್ಟು ಕಡ್ಲೆ ಮಿಠಾಯಿ ತಿಂದದ್ದಕ್ಕಿಂತ, ರಿಸಲ್ಟ್ ಬರುವ ಮೊದಲೇ ಪುಸ್ತಕ ಕೊಟ್ಟಿದ್ದು ಬೆಂಕಿಯಂತಹ ಕೋಪ ಬರಲು ಕಾರಣವಾಗಿತ್ತು. ಇಬ್ಬರಿಗೂ ಸರಿಯಾದ ಒದೆ ಬಿದ್ದವು. ಇವರ ಕೋಪ ನೋಡಿದ ಕಡ್ಲೆ ಮಿಠಾಯಿ ಅಜ್ಜಿ ಮೆಲ್ಲಗೆ ಜಾಗ ಖಾಲಿ ಮಾಡಿದ್ರು. ಇವರು ಏಟು ಬಿದ್ದು ಏಟಿಗೆ ಇಲ್ಲ ಇಲ್ಲ ಎಂದು ಅಳಲಾರಂಭಿಸಿದಾಗ ಒಳಗಿನಿಂದ ಬಂದ ದೊಡ್ಡಮ್ಮ ಅಡ್ಡ ನಿಂತು ಬಿಡಿಸಿಕೊಂಡು ಅಪ್ಪನನ್ನು ಒಡೆಯದಂತೆ ತಡೆದುಪಾಸಾಗ್ತರೆ ಬಿಡಿ ಏನೋ ಗೊತ್ತಿಲ್ದೆ ತಪ್ಪು ಮಾಡಿದಾವೆ. ಪಾಸಾಗೋ ನಂಬ್ಕೆಯಿಂದ ಕೊಟ್ಟಿರ್ತಾರೆ ಅದಕ್ಯಾಕೆ ಮಕ್ಳಿಗೆ ಬರೆ ಬರೋ ಹಂಗೆ ಒಡೀಬೇಕು? ಎಂದು ಮತ್ತೂ ಬೀಳುವ ಏಟಿನಿಂದ ತಪ್ಪಿಸಿದರು. ಅಂದು ಅವರು ಏಟು ತಿಂದ ಪ್ರಸಂಗವನ್ನು ಇಂದಿಗೂನೆನಪಿಸಿಕೊಳ್ಳುತ್ತೇವೆ.

ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ನಮ್ಮ ಏರಿಯಾದವರೇ ಆದ ಗಾಂಧಿ ಬಜಾರಿನಲ್ಲಿದ್ದ ಶಿವರಾಮಯ್ಯನವರ ಶಿವರಾಮಯ್ಯ ಅಂಡ್ ಸನ್ಸ್ ಪುದ್ತಕದಂಗಡಿಯಲ್ಲಿ ಹೊಸ ಪುಸ್ತಕಗಳನ್ನೇ ಕೊಡಿಸುತ್ತಿದ್ದರು. ಅವರು ನಮ್ಮ ಮನೆಯ ಹಾಲಿನ ಗ್ರಾಹಕರಾಗಿದ್ದರು ಆಧ್ದರಿಂದ  ನಮಗೆ ಪುಸ್ತಕಕ್ಕೆ ಹಾಕಲು ಕಾಕಿ ರಟ್ಟನ್ನು ಉಚಿತವಾಗಿ ಕೊಡುತ್ತಿದ್ದರು. ನಂತರ ಐದನೇ ತರಗತಿಯಿಂದ ಹತ್ತರವರೆಗೆ  ಸೆಕೆಂಡ್ ಹ್ಯಾಂಡ್ ಪುಸ್ತಕದ ಹುಡುಕಾಟವನ್ನು ನಾವೇ ಆರಂಭಿಸಿಕೊಳ್ಳುತ್ತಿದ್ದೆವು.

ಕೆಲವೊಮ್ಮೆ  ಸೆಕೆಂಡ್ ಹ್ಯಾಂಡ್ ಪುಸ್ತಕ ಕೊಂಡರೆ ಹಣವಿಲ್ಲದವರೆಂದೂ, ಬಡವರೆಂದು ಭಾವಿಸುತ್ತಾರೇನೋ ಎನಿಸುತ್ತಿತ್ತು ಆಗ. ಆದರೆ  ಈಗ ನೋಡಿ ಇಂಜಿನಿಯರಿಂಗ್, ಮೆಡಿಕಲ್ ಹಾಗೂ ಉನ್ನತ ವಿದ್ಯಾಭ್ಯಾಸ, ಸ್ಪರ್ಧಾತ್ಮಕ ಪರೀಕ್ಷೆಗೆ ಓದುವವರೆಲ್ಲಾ ಸೆಕೆಂಡ್ ಹ್ಯಾಂಡ್ ಪುಸ್ತಕವನ್ಬೇ ಕೊಳ್ಳುವುದನ್ನು ನೋಡಿ ಸಮಾಧಾನವೆನಿಸಿತು. ದೊಡ್ಡ ನಗರಗಳಲ್ಲಿ ಹಳೇ ಪುಸ್ತಕದ ಅಂಗಡಿಗಳು ಇವೆ ಎಂದು ತಿಳಿಯಿತು. ಬೆಂಗಳೂರಿನ ಅವಿನ್ಯೂ ರಸ್ತೆಯಲ್ಲಂತೂ ಈ ಹಳೇ ಪುಸ್ತಕದ ಸಾಲು ಸಾಲು ಅಂಗಡಿಗಳಿವೆ. ಹಾಸನದ ಎಂ.ಜಿ. ರಸ್ತೆಯಲ್ಲಿ ಕೂಡ ಕೆಲವು ಅಂಗಡಿಗಳಲ್ಲಿ ಇಂಜಿನಿಯರಿಂಗ್ ಮತ್ತು ಮೆಡಿಕಲ್ ನ ಹಳೆಯ ಪುಸ್ತಕಗಳು ದೊರೆಯುತ್ತಿವೆ. ಹಾಗೇ ಇಂಜಿನಿಯರಿಂಗ್ ಮೆಡಿಕಲ್ ಸ್ಡೂಡೆಂಟ್ಸ್ ಸಹ ನಮ್ಮಂತೇ ಹಳೇ ಪುಸ್ತಕ ಕೊಂಡು ಓದ್ತಿದಾರೆ ನಾವೊಬ್ಬರೇ ಅಲ್ಲ ಬಿಡಿ ಅನ್ನಿಸಿತು. ಪುಸ್ತಕ ಹಳೆಯದೋ ಹೊಸತೋ ಪುಸ್ತಕದಲ್ಲಿರುವುದನ್ನು ಮಸ್ತಕಕ್ಕೆ ಇಳಿಸಿಕೊಳ್ಳುವುದಷ್ಟೇ ಮುಖ್ಯವಲ್ಲವೇ.ನಮ್ಮಂತೆ ನೀವೂ ಕೂಡ ಸೆಕೆಂಡ್ ಹ್ಯಾಂಡ್ ಪುಸ್ತಕದ ಹುಡುಕಾಟ ಮಾಡಿದ್ದರೆ ನಿಮ್ಮ ಅನುಭವಗಳ ಪುಟಗಳನ್ನೊಮ್ಮೆ ಮೆಲುಕು ಹಾಕಿ!.

‍ಲೇಖಕರು Admin

June 15, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: