ಸೂರ್ಯ ಕೀರ್ತಿ ಕವಿತೆ- ಪ್ರೇಮ ದೈವಿಕ ಪರಿಮಳ…

ಸೂರ್ಯ ಕೀರ್ತಿ

೧. ದೈವಿಕ ಪ್ರೀತಿಯ ಪರಿಮಳ

ಎಲ್ಲ ನಿಮಿ೯ಸಿ ಕೊಟ್ಟಿರುವೆ
ದೇವಾ,
ಇಲ್ಲಿ ಎಲ್ಲವನ್ನೂ ಸೃಷ್ಟಿಸಿ
ಕೊಟ್ಟಿರುವೆ ದೇವಾ;
ದೈವಿಕ ಪ್ರೀತಿಯ ಪರಿಮಳವ ಬಿಟ್ಟು !

ಅಲ್ಲಿ ಮುಳ್ಳು
ಇಲ್ಲಿ ಹೂ!
ಅಲ್ಲೆಲ್ಲೋ ಹಾವು
ಮತ್ತೆ ವಿಷ!

ಸುಗಂಧದ ಜೊತೆ
ದುಗ೯ಂಧ.
ಶಾಂತಿಯ ಜೊತೆ
ಕ್ರೌಯ೯.

ಹಗೆತನದ ಜೊತೆ
ನಾಶದ ಸಂಚನ್ನು
ಏಕೆ ಕೊಟ್ಟಿರುವೆ ದೇವಾ ?
ನಿಲ್ಲಿಸು , ನಿಲ್ಲಿಸಿ ಬಿಡು
ಕಾದಾಡುವ ಪರಿಯ
ಇನ್ನು ಹಚ್ಚಿಸು
ಪ್ರೀತಿ ಜ್ವಾಲೆಯ!

೨. ಪ್ರೇಮ ದೈವಿಕ ಕಾವ್ಯ

೧.

ಶರಣಾಗಿದ್ದೇನೆ ದೇವಾ,
ನಿನ್ನ ಪ್ರೀತಿಯ ದೈವಿಕತೆಗೆ.
ಶರಣಾಗಿದ್ದೇನೆ ದೇವಾ,
ನಿನ್ನ ಪ್ರೇಮದ ಕಾಣಿಕೆಗೆ!

ಹೂ ಬಿಟ್ಟ ಗಿಡವಾಗಿದ್ದೇನೆ
ನಿನ್ನ ಪಾದವ ಸೇರಲು.
ಗಂಧದ ಮರವಾಗಿದ್ದೇನೆ
ನಿನ್ನ ಪರಿಮಳವ ಹೆಚ್ಚಿಸಲು!

ದೇವಾ,
ಪ್ರೇಮದ ಪರಿಮಳವ
ಹಚ್ಚು ನನಗೆ , ಜಗತ್ತಿಗೆ
ನಿನ್ನ ಪರಿಮಳವ ಪಸರಿಸಿ
ಬರುತ್ತೇನೆ!
ದೇವಾ, ನಿನ್ನ ಪ್ರೀತಿಯ ಕತೆಯ
ಹೇಳು , ಲೋಕಕ್ಕೆ ಡಂಗುರ
ಹಾಕಿಸಿ ಬರುತ್ತೇನೆ!

ಪ್ರೇಮದ ನೀರು ಆಗಿದ್ದೇನೆ
ದೇವಾ,
ಅವರು ಕುಡಿದಷ್ಟು ದಾಹ ಆಗಲು.
ಧೂಪದ ಹೊಗೆಯೇ ಆಗಿದ್ದೇನೆ
ದೇವಾ,
ಮುಟ್ಟಿದಷ್ಟು ಕಿಚ್ಚಾಗಲು!

ಸಂದೇಶವ ನೀಡು
ದೇವಾ,
ಮನುಷ್ಯ ಲೋಕಕ್ಕೆ ಚೆಲ್ಲಿ ಬಿಡುತ್ತೇನೆ;
ದೇವಾ ನಿದ್ರೆಯಲ್ಲಿ ಮಲಗಿದ್ದಾನೆ
ಎಂದು
ಒಂದು ಬೀಜವ ನೀಡು
ದೇವಾ,
ಈ ಪರಿಮಳದ ಜಗತ್ತಿಗೆ
ಮರವನ್ನೇ ನೆಟ್ಟು ಬರುತ್ತೇನೆ!

೨.

ದೇವಾ,
ಈ ದೈವಿಕ ಪ್ರೇಮದ
ಜಗತ್ತಿನಲ್ಲಿ ನೀನು ಪ್ರೇಮಿಯಾಗು
ಒಮ್ಮೆ,
ಪ್ರೀತಿ ಸತ್ತ ನಾಡಲ್ಲಿ!
ಸುಟ್ಟ ಎಲೆಗಳ ಸ್ಪಶಿ೯ಸಿ
ಮಂತ್ರ ಮಹರ್ಷಿಯಾಗು ದೇವಾ
ಈ ಸತ್ತ ಹೃದಯಗಳಲ್ಲಿ!

೩.

ದೇವಾ,
ಒಮ್ಮೆ ಈ ಪ್ರೇಮದ ದೈವಿಕ
ಜಗತ್ತಿಗೆ ಸಾರು ಪ್ರೇಮದ ಬೀಜಗಳ;
ಬೆಳೆಯಲಿ ಪ್ರೀತಿಯ ಮರಗಳು
ಬಿಡಲಿ ಕೊಂಬೆ ಕೊಂಬೆಗಳಲ್ಲಿ
ದೈವಿಕ ಹೂ ಗಳು!

ಹೇಳು ದೇವಾ,
ಒಮ್ಮೆ
ಬರುವೆಯಾ ಈ ಪ್ರೀತಿ ಸುಟ್ಟ ಜಗತ್ತಿಗೆ?

೪ .

ಕುಡಿದ ರಾತ್ರಿಗಳ ಖಾಲಿಯಾಗಿವೆ
ದೇವಾ, ಮತ್ತೆ ಹುಣ್ಣಿಮೆಗಳ ಕರೆಯಬೇಡ
ದೇವಾ!
ಅದೆಷ್ಟೋ ಕಡು ರಾತ್ರಿಗಳು ಒಂಟಿಯಾಗಿ
ನರಳಿವೆ!

ಇಲ್ಲಿ ದುಂಬಿಗಳು ಅತ್ತು ಅತ್ತು
ಮಳೆಯಾಗಿ ವಿರಹದ ಜಿನಿ ಮಳೆಯಾಗಿ
ಬಿದ್ದಿವೆ,
ರಾಜ ಹಂಸ ಪ್ರೇಯಸಿಯ ಕಳೆದುಕೊಂಡು
ಊರ ಊರ ಸುತ್ತು ಅಳುತಿದೆ
ಕೇಳಿಸಿಕೋ, ಅಧೋ ದೂರದ
ಪರ್ವತಗಳಲ್ಲಿ!

ಮಂಗಟ್ಟೆ ಪಕ್ಷಿಗಳು ಕೂಗುತ್ತವೆ
ಪ್ರೇಮದ ಸಿಹಿ ನೀರಿಗಾಗಿ, ಕೊಕ್ಕಿನಲ್ಲಿ
ಸವಿಯುವ ಪ್ರೇಮದ ದೈವಿಕ ತೀರ್ಥಕ್ಕಾಗಿ.
ಕೇಳಿಸಿಕೋ,
ಅದೆಷ್ಟೋ ಗಂಡು ಮಂಗಟ್ಟೆಗಳು
ಸತ್ತ ಕಾರಣಕ್ಕಾಗಿ, ಹೆಣ್ಣು ಪಕ್ಷಿಗಳು
ಮೊಟ್ಟೆ ಸಮೇತ ಸಾಯುತ್ತಿವೆ!

ವಿರಹದ ವೇದನೆಯಲ್ಲಿ
ಕೂಗುತ್ತಿವೆ, ಮರದಿಂದ ಮರಕ್ಕೆ
ಹಾರುತ್ತಿವೆ!
ದೇವಾ ,
ನೋಡು ದೈವಿಕ ನೋಟದ
ಚಿತ್ರದಿಂದ ಒಮ್ಮೆ!
ಪ್ರೇಮದ ಸೊಲ್ಲು ಜೇನಾಗುವ
ಜಿಹ್ವೆ ರುಚಿ ಇಡಿಯುವರೆಗು!

೫.

ಒಮ್ಮೆ ಉಣಿಸು ದೇವಾ,
ಪ್ರೇಮದ ದೈವಿಕ ಮಧುವನ್ನು.
ಒಮ್ಮೆ ಪ್ರೇಮದ ಪರಿಮಳವ
ಸುರಿಸು ದೇವಾ, ಕೊಳೆ
ನಿರ್ಮಲವಾಗುವಂತೆ. 

ದೇವಾ, ಈ ಪ್ರೇಮದ ದೈವಿಕತೆಯ
ಪರಿಮಳವ ಸೂಸು,
ವಿರಹದ ಬೇಗೆ ತಣಿಯುವಂತೆ!.

೩. ಎಲ್ಲಿರುವೆ ದೇವಾ ನೀನು ?

ದೇವಾ,
ಅತ್ತಿಯ ಹಣ್ಣುಗಳ ಕೊಟ್ಟು
ಹೂಗಳ ಬಚ್ಚಿಟ್ಟು ಕೊಂಡೆ,
ಆಲದ ಹಣ್ಣುಗಳ ಕೊಟ್ಟು
ಹೂಗಳ ಸೃಷ್ಟಿಯ ಸಪ್ತತೆಯಲ್ಲಿ
ಹುದುಗಿಸಿಕೊಂಡೆ!

ಸಂಪಿಗೆಯ ಹೂಗಳ ಕೊಟ್ಟು
ವಿರಹದ ಬೆಂಕಿಯ ಕೊಟ್ಟೆ;
ಮಲ್ಲಿಗೆಯ ಮೊಗ್ಗುಗಳ ಕೊಟ್ಟು
ಪರಿಮಳವ ಒಡಲೊಳಗೆ ತುಂಬಿಕೊಂಡೆ!

ಕಡಲಲ್ಲಿ ನೀರು ತುಂಬಿಸಿ
ಬೆಂಕಿಯ ಕೆಂಡಗಳ ತಬ್ಬಿಕೊಂಡೆ,
ಜಿಂಕೆಯ ಬಿಟ್ಟು ಹುಲಿಯ
ಬೇಟೆಗೆ ಬಿಟ್ಟಿರುವೆಯಲ್ಲ ದೇವಾ?

ರಾತ್ರಿಗೆ ಬೆಳಕ ಚೆಲ್ಲಿ
ಬೆಳಕಿಗೆ ರಾತ್ರಿಯ ಧಾವಂತವ ಕಟ್ಟಿ
ಸೂಜಿಯಲ್ಲಿ ಗಾಳಿಪಟವ
ಹಾರಾಡಿಸುವ ನಿನ್ನ ಪ್ರೇಮದ ಚೆಲುವೇನು ದೇವಾ?

ದೈನ್ಯದಿಂದ ಬೇಡಬೇಕೆಂದು
ಬಂದಾಗ ಬಂಧಿಸಿ,
ಬಣ್ಣದ ಎಲೆಗಳಲ್ಲಿ ಜೀವಗಳ
ಸೃಷ್ಟಿಸಿ ಎಲ್ಲಿರುವೆ ದೇವಾ ನೀನು ?

೪.
ದೇವಾ,
ನಾನು ನಿನ್ನ ಸಾನಿಧ್ಯವ ಬಯಸುತ್ತೇನೆ,
ಯಾವ ನರಕ, ಸ್ವರ್ಗಗಳ ಬಯಕೆ ಬೇಡ,
ತೋರಿಸುವುದಾದರೆ ನಿನ್ನ
ಸಾನಿಧ್ಯದ ಪ್ರಿತಿಯೊಲುಮೆಯ
ಚಿಲುಮೆಯ ತೋರಿಸು;
ಬಾ ಒಮ್ಮೆ ಅಪ್ಪಿಕೊಂಡು
ಪ್ರೀತಿಯ ಪರಿಮಳವ ಸೂಸು!

ದೇವಾ,
ನನಗೆ ಈ ಪ್ರಾಪಂಚಿಕ ಕರ್ಮಗಳು ಬೇಡ
ಹುಟ್ಟು, ಸಾವು , ಗೆಲವು, ಸೋಲುಗಳ
ದಾಟಿಸಿ, ಆನಂದದ ಸಮುದ್ರದ ದಡಕ್ಕೆ
ಸೇರಿಸು;
ಕರೆದುಕೋ, ಕೈ ಬೀಸಿ ಒಮ್ಮೆ
ಬ್ರಹ್ಮಾನಂದದ ರುಚಿಯ ಹತ್ತಿಸು!

ದೇವಾ,
ಈ ರೋಗ, ಮುಪ್ಪು , ಯೌವ್ವನದ ದೈಹಿಕ
ಸುಖಗಳ ಕಿತ್ತಿ ಕೋ;
ಕೊಡುವುದಾದರೆ ಕೊಡು
ನಿನ್ನ ದಿವ್ಯ ಸಾನಿಧ್ಯದ ಆನಂದವನ್ನು!

ದೇವಾ,
ನೀರೆಲ್ಲ ನಿನ್ನದೆ
ಈ ಗಾಳಿಯೂ ನಿನ್ನದೆ
ಆ ಬೆಂಕಿಯು ನಿನ್ನದೆ
ಈ ಆಕಾಶ, ಭೂಮಿಯೂ ನಿನ್ನದೆ;
ಆದರೆ
ನಾನು ನಿನ್ನವನು ಎಂದು ಮರೆಯಬೇಡ ದೇವಾ!.

೫. ನನ್ನ ಕವಿತೆಗಳು!

ಪ್ರೇಮವಿಲ್ಲದವರ ಎದೆಗಳಲ್ಲಿ
ದೈವಿಕ ಪ್ರೀತಿಯ ಪರಿಮಳವ ಸೂಸುತ್ತವೆ
ನನ್ನ ಕವಿತೆಗಳು!
ದ್ವೇಷವಿರುವ ಎದೆಗಳಲ್ಲಿ
ಪ್ರೇಮದ ಕಾರುಣ್ಯವನ್ನೇ ಅರ್ಚನೆ
ಮಾಡುತ್ತವೆ ನನ್ನ ಕವಿತೆಗಳು!

ವಿರಹದ ಪ್ರೇಮಿಗಳಿಗೆ
ಸಾಂತ್ವನವ ನೀಡುತ್ತವೆ;
ಪ್ರಣಯದ ಹಕ್ಕಿಗಳಿಗೆ
ಪ್ರೇಮದ ಗುರುತನ್ನು
ನೀಡುತ್ತವೆ ನನ್ನ ಕವಿತೆಗಳು!

ಕಡಲಿನ ಹಾಗೆ ತಬ್ಬುತ್ತವೆ
ಮೇಘ ರಾಜನ ಮಳೆ
ಮಾತುಗಳ ತರುತ್ತವೆ;
ಮುತ್ತುಗದ ಹೂಗಳ
ವಿರಹದ ಬೆಂಕಿಯನ್ನೆ
ಆರಿಸುವ ಪ್ರೇಮದ ಹನಿಗಳ
ಸುರಿಸುತ್ತವೆ ನನ್ನ ಕವಿತೆಗಳು!

ಕಿತ್ತಾಡುವವರ ಎದೆಯಲ್ಲಿ
ದೈವದ ಪ್ರೀತಿಯ ತಂದು
ಸಂತೈಸುತ್ತವೆ ನನ್ನ ಕವಿತೆಗಳು!
ಗಡಿ ದಾಟಿ, ಭೂಮಿ, ಆಕಾಶವ
ಮೀರಿ ನನ್ನ ಕವಿತೆಗಳು
ಪ್ರೇಮದ ದೈವಿಕತೆಯನ್ನು
ಸಾರುತ್ತವೆ!

೬. ತಪ್ಪಿದ್ದರೆ ಕ್ಷಮಿಸು!

ದೇವಾ,
ಕ್ಷಮಿಸು ತಪ್ಪಿದ್ದರೆ;
ಒಂಟಿತನದ ಕಡಲಿಗೆ ಬಲಿ ಮಾಡಬೇಡ
ಕ್ಷಮಿಸು ದೇವಾ
ತಪ್ಪಿದ್ದರೆ;
ದ್ವೇಷದ ಕಿಡಿ ಹಚ್ಚಿ ನಾಶ ಮಾಡಬೇಡ!

ದೇವಾ,
ನೀನು ದೇವನಾದರೆ
ಪ್ರೀತಿಯ ರುಚಿ ಉಣ್ಣಿಸು;
ಬೇಡ , ಬೇಡ ಈ ದ್ವೇಷದ
ಜ್ವಾಲೆ.
ಆರಿಸಿಬಿಡು ಬೆಂಕಿಯ
ಅರಳಲಿ ಪ್ರೀತಿಯ ಹೂ
ಬೀಸಲಿ ಪ್ರೀತಿಯ ಪರಿಮಳ!

ಕ್ಷಮಿಸು, ಇನ್ನೂ ಕ್ಷಮಿಸು
ಪ್ರೀತಿಯ ಆಮಂತ್ರಣ ಕೊಡು
ಎಲ್ಲರೂ ಪ್ರೀತಿಸುವುದನ್ನು
ಕಲಿಯಲಿ, ಕಲಿಸು ತಂದೆ!

೭. ಕವಿತೆಗಳಿಗೆ ಕಿವಿಯಾಗುತ್ತೇನೆ

ಅಲ್ಲೆಲ್ಲೋ ಸಂತ ಬರೆದ
ಕವಿತೆಗಳಿಗೆ ಕಿವಿಯಾಗುತ್ತೇನೆ
ಇಲ್ಲೋಲ್ಲೊ ಓದುವ ಪ್ರೇಮ ಕವಿಗೆ
ತಲೆ ತೂಗುತ್ತೇನೆ!

ನದಿಗಳು ಹಾಡುವ
ಕವಿತೆಗಳಿಗೆ ಕದ್ದು ಕೇಳುತ್ತೇನೆ
ಹಕ್ಕಿಗಳು ಕಿರುಚುವ
ಕವಿತೆಗಳಿಗೆ ರೋಮಾಂಚನದಿ
ಮೈ ಮರೆತು ಕಿವಿಯಾಗುತ್ತೇನೆ!

ಸರೋವರದ ಮಾತುಗಳಿಗೆ
ಅಲೆಗಳಾಗಿ ಕೇಳಿಸಿಕೊಳ್ಳುತ್ತೇನೆ
ಸೂಯ೯ನ ಉರಿವ ನುಡಿಗಳಿಗೆ
ಚಂದ್ರನಾಗಿ ತಣ್ಣಗೆ ಸ್ಪರ್ಶ ನೀಡುತ್ತೇನೆ!

ಬೆಂಕಿಯ ಕಿಡಿಗಳಿಗೆ
ಶಾಂತಿಯ ಹಿಡಿ ಹಾಕಿ
ದ್ವೇಷದ ಜ್ವಾಲೆಗೆ
ನಿನ್ನ ಪರಿಮಳವ
ಹಚ್ಚಿ;
ಕೇಳಿಕೊಳ್ಳುತ್ತೇನೆ
ನೀನು ಸೃಷ್ಟಿಸಿದ
ಈ ಸಾಮ್ರಾಜ್ಯದೊಳಗೆ.

೮. ದೇವಾ ನೀನು, ದೇವಿ ನೀನು

ಎಲ್ಲವೂ ನೀನೇ
ಎಲ್ಲರೊಳಗೆ ನೀನು
ಇರುವುದೇ ಆದರೆ
ಪ್ರೀತಿಯ ಹುಟ್ಟಿಸು
ಮತ್ತೇನು ಹುಟ್ಟಿಸದೆ.

ದೇವಾ, ದೇವಿಯೂ ನೀನು
ಪ್ರೀತಿಯ ಪರಿಮಳವ ಸ್ಪರ್ಶಿಸಿ
ದುಂಬಿಯಾಗಿ ಸಾರಿಸು
ಪ್ರೀತಿಯ ಹೃದಯ ಮಾತುಗಳನ್ನು;
ಚಿಟ್ಟೆಗಳಾಗಿ ಸ್ಪರ್ಶಿಸಿ
ವಿಷದ ನಳಿಕೆಯಲ್ಲೂ
ಪ್ರೀತಿಯ ರಸ ಸುರಿಸು.

ಕಡಲಾಗು, ಹರಿಯುವ
ನೀರಾಗು;
ಲೋಕದ ಪರಿಮಳದ
ದೈವಿಕ ಗುರುವಾಗು
ದೇವ.

‍ಲೇಖಕರು avadhi

January 17, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: